ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈರಾನ ಸುತ್ತ ಹಿಂದೂ- ಮುಸ್ಲಿಂ ಹುತ್ತ

Last Updated 5 ಫೆಬ್ರುವರಿ 2017, 19:44 IST
ಅಕ್ಷರ ಗಾತ್ರ

ಚುನಾವಣೆಗಳನ್ನು ಗೆಲ್ಲಲು ಹಿಂದೂ-ಮುಸ್ಲಿಂ ಗಲಭೆಗಳಿಗೆ ತಿದಿ ಒತ್ತುವ ತಂತ್ರಕ್ಕೆ ರಾಜಕೀಯ ಶಕ್ತಿಗಳು ಶರಣಾಗುವ ಪರಿ ಹೊಸದೇನೂ ಅಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಉತ್ತರಪ್ರದೇಶದಲ್ಲಿ ಈ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿ ಮುಗಿಸಿತ್ತು ಬಿಜೆಪಿ. ಪಶ್ಚಿಮ ಉತ್ತರಪ್ರದೇಶದ ಸಂದೇಶ, ರಾಜ್ಯದ ಇತರೆ ಭಾಗಗಳ ಮತದಾನವನ್ನೂ ಪ್ರಭಾವಿಸಿತ್ತು. 2019ರಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯಬೇಕಿದ್ದರೆ ಉತ್ತರಪ್ರದೇಶದ ಹಾಲಿ ವಿಧಾನಸಭಾ ಚುನಾವಣೆಗಳನ್ನು ಬಿಜೆಪಿ ಗೆಲ್ಲುವುದು ನಿರ್ಣಾಯಕ.

ಇಂತಹ ಮಹತ್ವದ ಪಶ್ಚಿಮ ಉತ್ತರಪ್ರದೇಶದ ಕೈರಾನ, ದಿಲ್ಲಿಯಿಂದ ನೂರು ಕಿ.ಮೀ. ದೂರದಲ್ಲಿರುವ ಊರು. ಇಲ್ಲಿನ ಮುಸಲ್ಮಾನ ಜನಸಂಖ್ಯೆ ಶೇ 81ಕ್ಕೂ ಹೆಚ್ಚು. ಹಿಂದೂಗಳು ಇಲ್ಲಿ ಅಲ್ಪಸಂಖ್ಯಾತರು. ಕಳೆದ ಕೆಲ ತಿಂಗಳುಗಳಿಂದ ಕೋಮುವಾದಿ ವಿವಾದದ ಸುಳಿಗೆ ಸಿಕ್ಕು ಹೆಸರು ಕೆಟ್ಟಿರುವ ಊರಿದು. ಮುಸ್ಲಿಮರ ಭಯದಿಂದ 346 ಹಿಂದೂ ಕುಟುಂಬಗಳು ಈ ಊರನ್ನು ತೊರೆದಿವೆ ಎಂಬುದು ಬಿಜೆಪಿಯ ಆರೋಪ. ಮುಸ್ಲಿಂ ಉಗ್ರವಾದಿಗಳಿಂದ ಬಚಾವಾಗಲು ಹಿಂದೂ ಪಂಡಿತ ಕುಟುಂಬಗಳು 1990ರ ದಶಕಗಳಲ್ಲಿ ಕಾಶ್ಮೀರ ಕಣಿವೆಯನ್ನು ತೊರೆದ ಸ್ಥಿತಿಗೆ ಕೈರಾನ ‘ವಲಸೆ’ಯನ್ನು ಹೋಲಿಸಿದೆ. ಹಿಂದೂ ವಲಸೆ ತಡೆಯುವ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದೆ.

ತಿಂಗಳುಗಳ ಹಿಂದೆ ಈ ಆರೋಪವನ್ನು ಮೇಲೆ ಚಿಮ್ಮಿಸಿದ್ದವರು ಬಿಜೆಪಿಯ ಸ್ಥಳೀಯ ಸಂಸದ ಹುಕುಂದೇವ್ ಸಿಂಗ್. 2013ರ ಕೋಮು ಗಲಭೆಗಳ ಪ್ರಮುಖ ಆರೋಪಿಗಳಲ್ಲೊಬ್ಬರು. ಊರು ತೊರೆದ 346 ಮಂದಿ ಹಿಂದೂಗಳ ಪಟ್ಟಿಯನ್ನು ಮುಂದೆ ಮಾಡಿ ಭಾರೀ ಪ್ರಚಾರ ಪಡೆದಿದ್ದರು. ಇತ್ತೀಚೆಗೆ ತಿಪ್ಪರಲಾಗ ಹಾಕಿದ್ದಾರೆ. ತಮ್ಮ ಆರೋಪವನ್ನು ತಾವೇ ಅಲ್ಲಗಳೆದಿದ್ದಾರೆ. ಸಮಸ್ಯೆ ಕಾನೂನು- ವ್ಯವಸ್ಥೆಯದೇ ವಿನಾ ಹಿಂದೂ-ಮುಸ್ಲಿಂ ಕೋಮುವಾದದ್ದಲ್ಲ ಎಂದಿದ್ದಾರೆ. ಹಿಂದೂಗಳು ಮಾತ್ರವಲ್ಲ, ಮುಸಲ್ಮಾನರೂ ವಲಸೆ ಹೋಗಿರುವುದು ಹೌದೆಂದೂ, ಈ ಪಟ್ಟಿಯನ್ನು ತಮ್ಮ ಬೆಂಬಲಿಗರ ತಂಡ ತಯಾರು ಮಾಡಿದ್ದು, ತಪ್ಪುತಡೆಗಳಿದ್ದಾವು ಎಂದೂ ಒಪ್ಪಿಕೊಂಡಿದ್ದಾರೆ. ಆದರೆ ಪ್ರದೇಶ ಬಿಜೆಪಿ ನಾಯಕತ್ವಕ್ಕೆ ಹುಕುಂ ಮಾತಿನಲ್ಲಿ ನಂಬಿಕೆ ಇದ್ದಂತಿಲ್ಲ. ಯೋಗಿ ಆದಿತ್ಯನಾಥ್ ಮತ್ತು ಸಂಗೀತ್ ಸೋಮ್ ಮುಂತಾದವರ ಬೆಂಕಿ ಉಗುಳುವ ಭಾಷಣಗಳು ನಿಂತಿಲ್ಲ.

ನೂರು ವರ್ಷಗಳ ಹಿಂದಿನ ಮಾತು. ಇದೇ ಕೈರಾನವನ್ನು ತೊರೆದು ಕರ್ನಾಟಕ- ಮಹಾರಾಷ್ಟ್ರಕ್ಕೆ ವಲಸೆ ಬಂದರೊಬ್ಬರು ಮುಸ್ಲಿಂ ಮಹನೀಯರು. ಅವರು ಹಿಂದೂಸ್ತಾನಿ ಸಂಗೀತದ ಮಹಾನ್ ಸಾಧಕರಲ್ಲಿ ಒಬ್ಬರಾದ ಉಸ್ತಾದ್ ಅಬ್ದುಲ್ ಕರೀಂ ಖಾನ್. ಚಿಸ್ತಿ ಸೂಫಿ ಮನೆತನಕ್ಕೆ ಸೇರಿದವರು. ಅವರು ದೊಡ್ಡ ಪ್ರಮಾಣದಲ್ಲಿ ಪೊರೆದು ಪಸರಿಸಿದ ಕಿರಾನಾ ಘರಾಣಾ ಹುಟ್ಟಿದ್ದು ಇದೇ ಕೈರಾನದಲ್ಲಿ. ಕೈರಾನ ಘರಾಣವೇ ಕಾಲಕ್ರಮದಲ್ಲಿ ಕಿರಾನಾ  ಘರಾಣಾ ಆಯಿತು. ವಾಗ್ಗೇಯಕಾರ ತ್ಯಾಗರಾಜರ ‘ರಾಮಾ ನೀ ಸಮಾನಮೆವರು...’ ತೆಲುಗು ಕೀರ್ತನೆಯನ್ನು ಹಾಡಿ ಮೈಸೂರು ಆಸ್ಥಾನದಲ್ಲಿ ಸ್ಥಾನ ಪಡೆಯುತ್ತಾರೆ. ಹಿಂದೂಸ್ತಾನಿ- ಕರ್ನಾಟಕ ಸಂಗೀತ ಶೈಲಿಗಳ ನಡುವೆ ಸೇತುವೆ ಕಟ್ಟಿದರು. ಸವಾಯಿ ಗಂಧರ್ವರಂತಹ ಮೇರು ಪ್ರತಿಭೆಗಳಿಗೆ ಗುರುವಾಗಿ ಪೊರೆದರು. ದಕ್ಷಿಣ ಭಾರತದಲ್ಲಿ ಹಿಂದೂಸ್ತಾನಿ ಸಂಗೀತವನ್ನು ಜನಪ್ರಿಯಗೊಳಿಸಿದರು.

ಹಿಂದಿ ಭಾಷೆಯ ಘರ್ ಶಬ್ದದಿಂದ ಬಂದದ್ದು ಘರಾಣಾ. ಸಂಗೀತ ಸಿದ್ಧಾಂತವೊಂದು ಹುಟ್ಟಿದ ಸೀಮೆಯನ್ನು ಸೂಚಿಸುವ ಶಬ್ದವಿದು. ಆಗ್ರಾ, ಗ್ವಾಲಿಯರ್, ಇಂದೋರ್, ಜೈಪುರ ಹಾಗೂ ಪಟಿಯಾಲ ಘರಾಣಾಗಳು ಇದೇ ಬಗೆಯಲ್ಲಿ ಭಿನ್ನ ಗಾಯನ ಶೈಲಿಗಳನ್ನು ಸಾರುತ್ತವೆ. ಸವಾಯಿ ಗಂಧರ್ವ, ಬಾಲಕೃಷ್ಣ ಬುವಾ ಕಪಿಲೇಶ್ವರಿ, ಕೇಸರಬಾಯಿ ಕೇರ್ಕರ್, ವಿಶ್ವನಾಥಬುವಾ, ರೋಷನಾರಾ ಬೇಗಂ, ಸುರೇಶಬಾಬು ಮಾನೆ, ಬೇಗಂ ಅಖ್ತರ್, ಹೀರಾಬಾಯಿ ಬಡೋದೇಕರ್,  ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು, ಫಿರೋಜ್ ದಸ್ತೂರ್, ಭೀಮಸೇನ ಜೋಶಿ, ಹಫೀಜುಲ್ಲಾ ಖಾನ್, ಮಹಮ್ಮದ್ ರಫಿ, ಸರಸ್ವತಿ ರಾಣೆ, ಪ್ರಭಾ ಅತ್ರೆ, ಕೃಷ್ಣಾ ಹಾನಗಲ್, ಮಾಧವ ಗುಡಿ, ರಶೀದ್ ಖಾನ್, ಜಯತೀರ್ಥ ಮೇವುಂಡಿ, ಅಮ್ಜದ್ ಅಲಿ ಖಾನ್ ಕಿರಾನಾ ಘರಾಣಕ್ಕೆ ಸೇರಿದ ಪ್ರತಿಭೆಗಳು.

ಧಾರವಾಡ ಮತ್ತು ಕುಂದಗೋಳಕ್ಕೆ ಹಲವು ಸಲ ಭೇಟಿ ನೀಡಿದ್ದರು ಕರೀಂ ಖಾನ್. ಇಂತಹ ಒಂದು ಭೇಟಿಯಲ್ಲಿ ಅವರನ್ನು ಕುಂದಗೋಳದ ತಮ್ಮ ವಾಡೆಗೆ ಕರೆದೊಯ್ದು ಕಚೇರಿ ಏರ್ಪಡಿಸಿದ್ದವರು ಆ ಸೀಮೆಯ ಸಂಗೀತ ಪೋಷಕ ನಾನಾಸಾಹೇಬ ನಾಡಗೀರ. ಸವಾಯಿ ಗಂಧರ್ವ ಅವರನ್ನು ಖಾನ್ ಅವರ ತಾಲೀಮಿಗೆ ನಾಡಗೀರರೇ ಒಪ್ಪಿಸಿದರು. ಗಂಧರ್ವರ ಜಾಗದಲ್ಲಿ ಪಂಚಾಕ್ಷರಿ ಗವಾಯಿಯವರು ಕರೀಂ ಖಾನರ ಶಿಷ್ಯವೃತ್ತಿ ಸ್ವೀಕರಿಸಬೇಕಿತ್ತು. ಆದರೆ ಗವಾಯಿಗಳು ಆ ಹೊತ್ತಿಗಾಗಲೇ ಗ್ವಾಲಿಯರ್ ಘರಾಣೆಗೆ ಸೇರಿದ್ದರು. ಹಿಂದೂಸ್ತಾನಿ ಸಂಗೀತದ ಈ ಮಹಾನ್ ಪ್ರತಿಭೆಗೆ ಕರ್ನಾಟಕ ಸಂಗೀತ ಮಾಧುರ್ಯದ ರುಚಿ ಹತ್ತಿಸಿದವರು ಅಂಬಾಬಾಯಿ ಹಾನಗಲ್. ಗಂಗೂಬಾಯಿ ಹಾನಗಲ್ ಅವರ ಹೆತ್ತತಾಯಿ ಅಂಬಾಬಾಯಿ ಹಾನಗಲ್ ಖುದ್ದು ಉತ್ತಮ ಕರ್ನಾಟಕ ಸಂಗೀತಗಾರ್ತಿಯಾಗಿದ್ದವರು.

ಅದಾಗಲೇ ಧಾರವಾಡದಲ್ಲಿ ಹಿಂದೂಸ್ತಾನಿ ಸಂಗೀತದ ಬೀಜ ಬಿತ್ತಿದ್ದ ಭಾಸ್ಕರ್ ಬುವಾ ಬಕರೆ ಅವರ ಪ್ರಭಾವ ತಿಳಿದು ಖಾನ್ ಅವರು ಪುಣೆಯಿಂದ ಧಾರವಾಡಕ್ಕೆ ಬಂದಿಳಿದಿದ್ದರು.  ಶುಕ್ರವಾರಪೇಟೆಯಲ್ಲಿ ವಾಸವಾಗಿದ್ದ ಅಂಬಾಬಾಯಿ ಅವರ ಕರ್ನಾಟಕಿ ಗಾಯನವನ್ನು ಬಕರೆ ಶಿಷ್ಯರು ಖಾನ್ ಸಾಹೇಬರ ಗಮನಕ್ಕೆ ತಂದರಂತೆ. ಇನ್ನೇನು ಅಂದು ಅಂಬಾಬಾಯಿ ಅವರ ಗಾಯನ ಕೇಳಬೇಕು ಎನ್ನುವಷ್ಟರಲ್ಲಿ ನಾಡಗೀರ ನಾನಾಸಾಹೇಬರು ಇವರನ್ನು ಕುಂದಗೋಳದ ತಮ್ಮ ವಾಡೆಗೆ ಕರೆದೊಯ್ಯುತ್ತಾರೆ.

ಎಂಟು ವರ್ಷಗಳ ಬಳಿಕ ನಾಡಗೀರ ನಾನಾಸಾಹೇಬರ ಆಹ್ವಾನದ ಮೇರೆಗೆ ಮತ್ತೆ ಕುಂದಗೋಳಕ್ಕೆ ಬರುತ್ತಾರೆ ಕರೀಂ ಖಾನ್. ಆಗ ಅಂಬಾಬಾಯಿಯನ್ನು ಕುಂದಗೋಳಕ್ಕೆ ಕರೆಸಿಕೊಂಡು ಅವರಿಂದ ಕರ್ನಾಟಕಿ ಗಾಯನ ಆಲಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮುಂದೆ ಮುಂಬೈನಲ್ಲಿ ಕೆಲವರಿಂದ ಈ ಪ್ರಕಾರವನ್ನು ಕಲಿತು ಕಚೇರಿಯನ್ನೂ ನಡೆಸಿಕೊಡುತ್ತಾರೆ. ಹಿಂದೂಸ್ತಾನಿ ಸಂಗೀತದ ಬೇರನ್ನು ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಗಟ್ಟಿಗೊಳಿಸಿ ಮೇರು ಪ್ರತಿಭಾ ಪರಂಪರೆಯನ್ನು ಸೃಷ್ಟಿಸಿದ ಪ್ರತ್ಯಕ್ಷ ಮತ್ತು ಪರೋಕ್ಷ ಕೀರ್ತಿ ಕರೀಂ ಖಾನ್ ಅವರಿಗೆ ಸಲ್ಲಬೇಕು ಎಂದು ಗಂಗೂಬಾಯಿ ಹಾನಗಲ್ ಕುರಿತ ಮರ್ಮಸ್ಪರ್ಶಿ ಕೃತಿ ‘ಜಗಕೆ ಜೋಗುಳ ಹಾಡಿದ ತಾಯಿ’ಯ ಲೇಖಕ ಮಲ್ಲಿಕಾರ್ಜುನ ಸಿದ್ದಣ್ಣವರ ನೆನೆಯುತ್ತಾರೆ.

ಧಾರವಾಡ-ಹುಬ್ಬಳ್ಳಿ-  ಕುಂದಗೋಳ ಸೀಮೆಯ ಸಂಗೀತ ಕ್ಷೇತ್ರದಲ್ಲಿ ಖಾನರ ಹೆಜ್ಜೆಗುರುತುಗಳನ್ನು ನೆನೆಯುವ ಪ್ರಯತ್ನಗಳು ಕಾಣಬರುವುದಿಲ್ಲ. ಅವರು ಸಮಾಧಿಯಾದ ಪುಣೆಯಲ್ಲಿ ಖಾನ್ ಹೆಸರಿನ ಉರೂಸ್ ನಡೆಯುತ್ತದೆ. ಈ ಉರೂಸಿನ ಅಂಗವಾಗಿ ಸಂಗೀತೋತ್ಸವ ನಡೆಯುತ್ತದಂತೆ. 1937ರಲ್ಲಿ ಮದರಾಸಿನ ಯಶಸ್ವೀ ಕಚೇರಿಯ ನಂತರ ಶ್ರೀ ಅರಬಿಂದೋ ಕರೆಯ ಮೇರೆಗೆ ಪುದುಚೇರಿಗೆ ತೆರಳುವ ಮಾರ್ಗದಲ್ಲಿ ಹೃದಯಾಘಾತದಿಂದ ನಿಧನರಾದಾಗ ಖಾನ್ ವಯಸ್ಸು 65.

ಇತ್ತ ಕೈರಾನ ವಿವಾದಕ್ಕೆ ಸಂಬಂಧಿಸಿದಂತೆ ಶಾಮ್ಲಿ ಜಿಲ್ಲಾಡಳಿತ ತನಿಖೆ ನಡೆಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಪ್ರಕಾರ, ವಲಸಿಗರ ಪಟ್ಟಿಯಲ್ಲಿನ 67 ಮಂದಿ ಹತ್ತು ವರ್ಷದ ಹಿಂದೆಯೇ ಊರು ಬಿಟ್ಟಿದ್ದಾರೆ. 179 ಮಂದಿ ನಾಲ್ಕರಿಂದ ಐದು ವರ್ಷದ ಹಿಂದೆ, 73 ಮಂದಿ ಮೂರು ವರ್ಷದ ಹಿಂದೆ ಕೈ ತುಂಬ ಕೆಲಸ ಬಯಸಿ ಗುಳೇ ಹೋದರು. 16 ಮಂದಿ ಸತ್ತಿದ್ದಾರೆ.  ಭಯದಿಂದ ಊರು ತೊರೆದಿರುವ ಕುಟುಂಬಗಳು ಮೂರು ಮಾತ್ರ. ಬಾಗಿಲಿಂದ ಬಾಗಿಲಿಗೆ ತೆರಳಿ ತನಿಖೆ ನಡೆಸಿ ಸಂಗ್ರಹಿಸಿರುವ ಈ ಮಾಹಿತಿ ಹುಕುಂಸಿಂಗ್ ಪಟ್ಟಿಯ ಖೊಟ್ಟಿತನವನ್ನು ಹೊರಗೆಳೆದಿದೆ. ಜೊತೆ ಜೊತೆಗೆ ಸಮಾಜವಾದಿ ಪಾರ್ಟಿ ಸರ್ಕಾರದಡಿಯಲ್ಲಿ ಕಾನೂನು ಮತ್ತು ಸುರಕ್ಷೆಯ ವ್ಯವಸ್ಥೆಯ ಕುಸಿತವನ್ನೂ ಬಯಲು ಮಾಡಿದೆ.

ಮುಲಾಯಂ ಸಿಂಗ್ ಪಾರ್ಟಿ ಗೂಂಡಾ ರಾಜ್ಯಕ್ಕೆ ಕುಮ್ಮಕ್ಕು ನೀಡುತ್ತದೆಂಬ ಆಪಾದನೆಯನ್ನು ಪರೋಕ್ಷವಾಗಿ ಎತ್ತಿ ಹಿಡಿದಿದೆ. ಕ್ರಿಮಿನಲ್ ಗ್ಯಾಂಗುಗಳು ಈ ಸೀಮೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ. ಇವುಗಳ ಪೈಕಿ ಮುಖೀಮ್ ಕಾಲಾ ಮತ್ತು ಫುರ್ಕಾನ್ ಗ್ಯಾಂಗುಗಳು ಕೊಲೆ, ಸುಲಿಗೆ, ಬೆದರಿಕೆಗೆ ಕುಖ್ಯಾತ. ಜೈಲಿಗೆ ಹಾಕಿದರೂ ಅಲ್ಲಿಂದಲೇ ಪಾತಕಗಳನ್ನು ಮಾಡಿಸುವಷ್ಟು ಬಲಾಢ್ಯರು ಇವರು. ಸುಲಿಗೆಯ ಹಣ ಕೊಡಲೊಪ್ಪದ ವ್ಯಾಪಾರಿಗಳು ಹೆಣವಾಗುತ್ತಾರೆ. ಹಣಕ್ಕೆ ಹಿಂದೂ ಹಣ ಅಥವಾ ಮುಸ್ಲಿಂ ಹಣ ಎಂಬ ರಂಗು ರೂಪ ಹೇಗೆ ಇರುವುದಿಲ್ಲವೋ ಹಾಗೆಯೇ ಇವರ ಸುಲಿಗೆ ಬೆದರಿಕೆಗಳಿಗೆ ಹಿಂದೂ- ಮುಸ್ಲಿಂ ಭೇದ ಭಾವ ಇಲ್ಲ. ಸಮಸ್ಯೆ ಪಾತಕಿಗಳದೇ ವಿನಾ ಮುಸ್ಲಿಮರದಲ್ಲ.

ಶೇ 81ರಷ್ಟು ಮುಸ್ಲಿಂ ಬಾಹುಳ್ಯ ಕ್ಷೇತ್ರವಾದರೂ ಕೈರಾನ ಸತತ ನಾಲ್ಕು ಬಾರಿ ಹುಕುಂದೇವ್ ಸಿಂಗ್ ಅವರನ್ನೇ ತನ್ನ ಶಾಸಕನನ್ನಾಗಿ ಗೆಲ್ಲಿಸಿತ್ತು. ಸಿಂಗ್ ಲೋಕಸಭೆಗೆ ಸ್ಪರ್ಧಿಸಿದ ನಂತರ ನಡೆದ 2014ರ ಉಪಚುನಾವಣೆಯಲ್ಲಿ ಆರಿಸಿ ಬಂದವರು ಮುನಾವರ್ ಹಸನ್. 2014ರ ಕುಖ್ಯಾತ ಮುಜಫ್ಫರನಗರ ಕೋಮು ಗಲಭೆಗಳ ನಡುವೆಯೂ ಕೈರಾನ ತಣ್ಣಗಿತ್ತು. ಈ ಊರಿನ ಜಾಟ್ ಕುಟುಂಬಗಳ ಕೂದಲೂ ಕೊಂಕಲಿಲ್ಲ. 1947ರಿಂದ ಒಂದೇ ಒಂದು ಕೋಮು ಗಲಭೆಯನ್ನೂ ಈ ಊರು ಕಂಡಿಲ್ಲ. ಪಾತಕಿ ಮುಖೀಮ್ ಕಾಲಾ ಮೇಲೆ ಮೂವರು ಹಿಂದೂಗಳ ಕೊಲೆ ಆಪಾದನೆ ಜೊತೆಗೆ ಹನ್ನೊಂದು ಮಂದಿ ಮುಸಲ್ಮಾನರನ್ನು ಕೊಂದ ಕೇಸುಗಳೂ ದಾಖಲಾಗಿವೆ. 115 ಮುಸಲ್ಮಾನ ಕುಟುಂಬಗಳು ಕೈರಾನ ತೊರೆದಿರುವ ಸಂಗತಿ ಬಿಜೆಪಿ ಪಟ್ಟಿಯಲ್ಲಿ ಇಲ್ಲ.

ಊರು ತೊರೆದ ಹಿಂದೂಗಳ ಪೈಕಿ 34 ಮಂದಿ ಗೂಡಂಗಡಿ ಇಟ್ಟಿದ್ದರು. 55 ಮಂದಿ ಕೂಲಿ ಕಾರ್ಮಿಕರು, 13 ಮಂದಿ ರೈತರು, ಐದು ಮಂದಿ ವಕೀಲರು, ಇಬ್ಬರು ಶಾಲಾ ಶಿಕ್ಷಕರು, ಮೂವರು ಗುಮಾಸ್ತರು. ಮುಸ್ಲಿಂ ಪಾತಕಿಗಳ ಸುಲಿಗೆಗೆ ಗುರಿಯಾಗುವಷ್ಟು ಹಣ ಇವರ ಪೈಕಿ ಯಾರಲ್ಲೂ ಇರಲಿಲ್ಲ. ಉದ್ಯೋಗಾವಕಾಶ, ಉತ್ತಮ ಶಿಕ್ಷಣ ಸೌಲಭ್ಯ, ಚಿಕಿತ್ಸಾ ಸೌಲಭ್ಯಗಳು ಕೈರಾನದಲ್ಲಿ ಇಲ್ಲ.  ಉದ್ಯೋಗಕ್ಕಾಗಿ ಕೈರಾನದಿಂದ 20- 30 ಕಿ.ಮೀ. ದೂರದಲ್ಲಿರುವ ಪಾಣಿಪತ್ ಮತ್ತು ಶಾಮ್ಲಿಗೆ ನಿತ್ಯ ಹೋಗಿ ಬರುವ ಕೈರಾನ ಜನರ ಸಂಖ್ಯೆ ಸುಮಾರು 10 ಸಾವಿರ. ಉತ್ತಮ ವ್ಯಾಪಾರ ದಂಧೆಯ ವಾತಾವರಣ ಹುಡುಕಿ ದಿಲ್ಲಿ, ಶಾಮ್ಲಿ, ಉತ್ತರಾಖಂಡಕ್ಕೆ ವಲಸೆ ಹೋಗಿರುವ ಕುಟುಂಬಗಳ ಹೆಸರುಗಳೂ ಬಿಜೆಪಿ ಪಟ್ಟಿಯಲ್ಲಿ ಸೇರಿವೆ.

ಇಂತಹ ಕುಟುಂಬಗಳ ಸಮೀಪ ಬಂಧುಗಳು ಕೈರಾನದಲ್ಲಿ ಈಗಲೂ ಇದ್ದಾರೆ. ಈ ಕುಟುಂಬಗಳು ಊರು ತೊರೆಯಲು ಪ್ರಾಣಬೆದರಿಕೆ ಕಾರಣ ಅಲ್ಲ ಎಂದೂ ಅವರು ಸಾಕ್ಷ್ಯ ನುಡಿದಿದ್ದಾರೆ. ಸುಲಿಗೆಯ ಮೊತ್ತ ತೆತ್ತು ಊರಲ್ಲಿ ಉಳಿದವರೂ ಉಂಟು. ಭಯದಿಂದ ಊರು ಬಿಟ್ಟ ಕುಟುಂಬಗಳ ಸಂಖ್ಯೆ ಬೆರಳೆಣಿಕೆಯಷ್ಟು.

ನೂರು ವರ್ಷಗಳ ಹಿಂದೆ ಅವಕಾಶಗಳ ಅರಸಿ ಮಹಾನ್ ಸಂಗೀತಗಾರ  ಅಬ್ದುಲ್ ಕರೀಂ ಖಾನರು ಆರಂಭಿಸಿದ ವಲಸೆ ಕೈರಾನದಲ್ಲಿ ಇನ್ನೂ ನಿಂತಿಲ್ಲ. ಆದರೆ ಮಾನವೀಯ ಸಮಸ್ಯೆಯ ಈ ವಲಸೆಯ ಸುತ್ತ ಸ್ವಾರ್ಥಸಾಧಕ ರಾಜಕೀಯ ಶಕ್ತಿಗಳು ಹಿಂದೂ-ಮುಸ್ಲಿಂ ಹುತ್ತ ಕಟ್ಟತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT