ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟು-ಪಡೆವ ಮೇಷ್ಟರನ್ನು ಕುರಿತು

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

``ಕಾಲೇಜಿನಲ್ಲಿದ್ದಾಗ, ಇತರ ಕಾಲೇಜು ವಿದ್ಯಾರ್ಥಿಗಳಂತೆ ನಾನೂ ಮುಂದೆ ವಾಸ ಮಾಡಲಿಕ್ಕೆ ಗಾಳಿಗೋಪುರಗಳನ್ನು ಕಟ್ಟುತ್ತಿದ್ದೆ. ಆ ಪ್ರಾಸಾದಗಳಲ್ಲಿ ನಾನು, ರಾಜಾಜಿಯವರು ವಾಸಮಾಡುವುದು; ನಮ್ಮ ಗುರುಗಳು-ಅಂದರೆ ಟೇಟ್ ಸಾಹೇಬರು-ಆಗಿದ್ದಾಗ್ಗೆ ನಮ್ಮನ್ನು ನೋಡಿ, ಮೆಚ್ಚಿ, ಆಶೀರ್ವದಿಸಿ, ನಮ್ಮ ಆತಿಥ್ಯವನ್ನು ಸ್ವೀಕರಿಸುವುದು” - ಇದು, ಲೇಖಕರಾದ ನವರತ್ನ ರಾಮರಾಯರು ಕಟ್ಟಿಕೊಂಡಿದ್ದ ಕನಸೊಂದರ ವರ್ಣನೆ.

ಪ್ರಾಯದಲ್ಲಿರುವಾಗ ಭಾವೀ ಜೀವನದ ಕನಸುಗಳನ್ನು ಕಟ್ಟುವುದು ಸರಿಯೇ. ಆ ಸುಂದರ ಕನಸಿನ ಚಿತ್ರಗಳಲ್ಲಿ ತಮ್ಮ ಮಡದಿ ಮಕ್ಕಳು ಆಪ್ತಗೆಳೆಯರು ಭಾಗಿಯಾಗುವುದನ್ನು ಕಲ್ಪಿಸಿಕೊಳ್ಳುವುದೂ ಸಹಜವೇ.
 
ಆದರೆ ತಮ್ಮ ಬಾಳನ್ನು ತಮ್ಮ ಮೇಷ್ಟರುಗಳು ಬಂದು ನೋಡಿ ಮೆಚ್ಚಬೇಕೆಂದು ಬಯಸುವುದು ಮಾತ್ರ, ಕೊಂಚ ವಿಪರೀತದ ಅಥವಾ ಅಪರೂಪದ ಕಲ್ಪನೆ.

ಸಾಮಾನ್ಯವಾಗಿ, ಜನ ತಮ್ಮ ಖಾಸಗಿಯಾದ ಸಂಭ್ರಮದ ಆಪ್ತ ಕ್ಷಣಗಳಲ್ಲಿ ಮೇಷ್ಟರುಗಳನ್ನು ಗೌರವಪೂರ್ವಕವಾಗಿ ದೂರ ಇಡುವುದೇ ಹೆಚ್ಚು. ಅವರಿದ್ದ ಕಡೆ ಒಂದು ಬಗೆಯ ಬಿಗಿವು ಏರ್ಪಟ್ಟು, ಸಲಿಗೆ ಕೇಕೆ ತಮಾಷೆ ಸ್ವಚ್ಛಂದತೆ ಕಡಿಮೆಯಾಗಬಹುದು ಎಂಬ ಗುಮಾನಿಯೇ ಇದಕ್ಕೆ ಕಾರಣ. ಆದರೆ ರಾಮರಾಯರ ಬಯಕೆಯೇ ವಿಶಿಷ್ಟವಾಗಿದೆ.
 
ಬ್ರಿಟಿಷರ ಹುಕೂಮತ್ತಿದ್ದಾಗ, ಮೈಸೂರು ಸಂಸ್ಥಾನದಲ್ಲಿ ದೊಡ್ಡ ಅಧಿಕಾರಿಯಾಗಿದ್ದ, ಬ್ರಿಟಿಷರನ್ನು `ನನ್ನ ಹುಟ್ಟುಹಗೆಗಳು~ ಎಂದು ಭಾವಿಸಿದ್ದ ರಾಮರಾಯರು, ಯೂರೋಪು ಮೂಲದ ಒಬ್ಬ ಗುರುವಿಗೆ ತಮ್ಮ ಬಾಳಿನಲ್ಲಿ ಯಾಕಿಷ್ಟು ಮಹತ್ವದ ಸ್ಥಾನವನ್ನು ಕಲ್ಪಿಸುತ್ತಿದ್ದಾರೆ?

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಪ್ರೊ.ಟೇಟ್, ಮಾಸ್ತಿಯವರಿಗೂ ರಾಜಾಜಿಯವರಿಗೂ ಪಾಠಮಾಡಿದವರು. ಮಾಸ್ತಿಯವರು ಟೇಟರನ್ನು ಬಹಳ ಗೌರವದಿಂದ ನೆನೆಸಿಕೊಳ್ಳುವುದುಂಟು. ಆದರೆ ರಾಮರಾಯರ ನೆನಕೆಯಲ್ಲಿರುವುದು ಬರಿಯ ಗೌರವವಲ್ಲ, ತಾಯನ್ನು ಕಂಡ ಕೂಸಿನಲ್ಲಿ ಹುಟ್ಟುವ ಆರ್ತವಾದ ಆರ್ದ್ರವಾದ ಪ್ರೀತಿ.

ಈ ಬಗೆಯ ಪ್ರೀತಿಯನ್ನು ಶಿಷ್ಯನಿಂದ ಪಡೆಯಬೇಕಾದರೆ, ಪ್ರೊ.ಟೇಟ್ ಕೇವಲ ಒಳ್ಳೆಯ ಪಾಠ ಮಾಡಿದ ಮೇಷ್ಟರಾಗುವುದು ಸಾಧ್ಯವಿಲ್ಲ. ಇಟ್ಟ ಪಠ್ಯಕ್ರಮವನ್ನು ಬೋಧಿಸುವ ಆಚೆ, ಮತ್ತಿನ್ನೇನೊ ತಮ್ಮ ಶಿಷ್ಯರಿಗೆ ಕೊಟ್ಟಿರಬೇಕು ಅಥವಾ ಶಿಷ್ಯರಿಂದ ಪಡೆದಿರಬೇಕು. ಇಂತಹ ಗುರುಶಿಷ್ಯ ಸಂಬಂಧ, ತರಗತಿಯಾಚೆ ಪಠ್ಯದಾಚೆ ಬೆಳೆಯುವ ಮನುಷ್ಯ ಸಂಬಂಧಗಳಿಂದ ಸಾಧ್ಯವಾದುದು.
 
ಈ ಬಗೆಯ ಪ್ರೀತಿಯನ್ನು ಕೊಡುವುದು-ಪಡೆಯುವುದು ಕೆಲವೇ ಗುರು ಶಿಷ್ಯರಿಗೆ ಸಾಧ್ಯವೆಂದು ತೋರುತ್ತದೆ. ಮಹಾರಾಜಾ ಕಾಲೇಜಿನ ರಾಲೊ ಎಂಬ ಯೂರೋಪಿಯನ್ ಪ್ರಾಧ್ಯಾಪಕರನ್ನು ಕುರಿತು ಎ.ಎನ್. ಮೂರ್ತಿರಾಯರು ಕೂಡ ಇಂತಹುದೇ ಪ್ರೀತಿಯಲ್ಲಿ ನೆನೆಯುವುದುಂಟು.

ಸಿನಿಮಾ ನಟ ಪ್ರಕಾಶ್ ರೈ ತಮ್ಮನ್ನು ರೂಪಿಸಿದ ಸಿನಿಮಾ ನಿರ್ದೇಶಕರಾದ ಕೆ.ಬಾಲಚಂದರ್ ಬಗ್ಗೆ ಇಂತಹುದೇ ಉತ್ಕಟವಾದ ಪ್ರೀತಿಯಲ್ಲಿ ಬರೆದ ಬರಹವೊಂದು ಇಲ್ಲಿ ನೆನಪಾಗುತ್ತಿದೆ.

ಗುರು, ಟೀಚರ್, ಉಸ್ತಾದ್, ಮಾಸ್ತರ್, ಮೇಷ್ಟರು, ಶಿಕ್ಷಕ-ಇವೆಲ್ಲ ಒಂದೇ ಜಗತ್ತಿಗೆ ಸೇರಿದ ಪದಗಳಂತೆ ತೋರುತ್ತವೆ. ಆದರೆ ಇವಕ್ಕೆ ಶಬ್ದಮೂಲದಲ್ಲಿ ಬೇರೆಬೇರೆ ಅರ್ಥಗಳಿವೆ.

ಸಂಸ್ಕೃತದಲ್ಲಿ `ಗುರು~ ಎಂದರೆ ಭಾರವಾದದ್ದು, ದೊಡ್ಡದು, ಕಠಿಣವಾದುದು, ಲಘುವಲ್ಲದ್ದು, ಘನವಾದದ್ದು. ಈ ಶಬ್ದದಲ್ಲಿ ಕಲಿಸುವ ಕ್ರಿಯೆಗಿಂತ, ತನ್ನದರ ಮಹತ್ವ ಸಾರುವಿಕೆಯೆ ಜಾಸ್ತಿಯಿದ್ದಂತಿದೆ. ಆದರೆ ಇಂಗ್ಲಿಷಿನ ಟೀಚರ್‌ನಲ್ಲಿ ಕಲಿಸುವ (ಟೀಚ್) ಪ್ರಸ್ತಾಪವಿದೆ.

`ಶಿಕ್ಷಕ~ ಎಂಬಲ್ಲಿ ಕಲಿಸುವ ಮತ್ತು ದಂಡಿಸುವ ಎರಡೂ ಅರ್ಥಗಳಿವೆ. (ಕೆಲವು ಶಿಕ್ಷಕರು ಮೊದಲನೆಯದಕ್ಕಿಂತ ಎರಡನೆಯ ಕ್ರಿಯೆಯಲ್ಲೇ ಹೆಚ್ಚು ಪ್ರಸಿದ್ದರು!) ಅಧ್ಯಾಪಕರು ಎಂಬಲ್ಲಿ ಉಪನ್ಯಾಸ, ಪ್ರವಚನದ ಅರ್ಥವಿದ್ದರೆ, ಫಾರಸಿಯ `ಉಸ್ತಾದ್~ ಎಂಬುದಕ್ಕೆ ಆಧಾರಸ್ಥಂಭ ಎಂಬ ಅರ್ಥಛಾಯೆಯಿದೆ. (ಜನಪದ ಕವಿಪರಂಪರೆಯಲ್ಲಿದು ವಸ್ತಾದಿಯಾಗಿ, ಗುರು ಮತ್ತು ಗೆಳೆಯ ಎಂಬರ್ಥಗಳನ್ನು ಪಡೆಯುತ್ತದೆ.) `ಮಾಸ್ಟರ್~ ಎಂದರೆ, ಕೆಲವು ಸಂಗತಿಗಳನ್ನು ತನ್ನ ಅಧೀನದಲ್ಲಿ ಇರಿಸಿಕೊಂಡ ಒಡೆಯ, ಯಜಮಾನ, ಜ್ಞಾನದ ಮೇಲೆ ಪ್ರಭುತ್ವವುಳ್ಳವನು ಎಂದರ್ಥಗಳಿವೆ.

ಗುರುವಿನ ಆಶ್ರಯದಲ್ಲೇ ಜತೆಗಿದ್ದು ವಿದ್ಯೆ ಕಲಿಯುವ ಸಂಗೀತ, ಯೋಗ, ಅನುಭಾವದ ಕ್ಷೇತ್ರಗಳಲ್ಲಿ ಈ ಪದಬಳಕೆ ಹೆಚ್ಚು. ಆದರೆ ಮಾಸ್ಟರನ ಕನ್ನಡ ರೂಪವಾಗಿರುವ `ಮೇಷ್ಟ್ರು~ನಲ್ಲಿ ಈ ಅಧಿಕಾರಸ್ಥ ದನಿಯಿಲ್ಲ. ಬದಲಿಗೆ ಇಲ್ಲಿ ಅಧಿಕಾರವಿಲ್ಲದ ಆಪ್ತತೆಯಿದೆ. ಈ ವಿಭಿನ್ನ ಪದಗಳು ಬೇರೆಬೇರೆ ಸಮಾಜಗಳು ಗುರುವನ್ನು ಕಲ್ಪಿಸಿಕೊಂಡಿರುವ ಪರಿಯ ಸಂಕೇತಗಳಂತಿವೆ. 

 ನಮ್ಮ ಸಮಾಜದಲ್ಲಿ ಗುರುವಿನ ಅನೇಕ ಮಾದರಿಗಳಿವೆ. ಅವನ್ನು ಅಧಿಕಾರಿ, ದೈವ, ತಾಯಿ, ದಾರ್ಶನಿಕ ಹಾಗೂ ಸ್ನೇಹಿತ ಮಾದರಿ ಎಂದು ಸರಳವಾಗಿ ವಿಂಗಡಿಸಿ ನೋಡಬಹುದು.

ಅಧಿಕಾರಿ ಮಾದರಿಯಲ್ಲಿ, ಗುರುಗಳು ಪರಮ ಜ್ಞಾನಿಗಳೆಂದೂ ಅಜ್ಞಾನಿಗಳಾದ ಶಿಷ್ಯರಿಗೆ ಜ್ಞಾನವನ್ನು ಧಾರೆಯೆರೆದು ಉದ್ಧರಿಸುವರೆಂದೂ ನಂಬಿಕೆಯಿರುತ್ತದೆ. ಇಲ್ಲಿ ಗುರುಗಳು ಶ್ರೇಷ್ಠರಾಗಿ ಉಚ್ಚಸ್ತರದಲ್ಲಿ ಉಳಿದು, ಶಿಷ್ಯರು ಕೆಳಸ್ತರದಲ್ಲೇ ಉಳಿಯುವರು. ಇಲ್ಲಿ ಗುರುಗಳು ಕರುಣೆ ತುಂಬಿದ ಯಜಮಾನರಾದರೆ, ಶಿಷ್ಯರು ವಿಧೇಯತೆ ಕೀಳರಿಮೆ ತುಂಬಿದ ಅರ್ಥಿಗಳು.

ವಿದ್ಯಾರ್ಥಿ (ಅರ್ಥಿ=ಬೇಡುವವನು, ಭಿಕ್ಷಾರ್ಥಿ ತರಹ) ಎಂಬ ಪದದಲ್ಲೇ ತಗ್ಗಿಬಗ್ಗಿರುವ ಸೂಚನೆಯಿದೆ. ಶಿಷ್ಯರು ಗುಲಾಮರಾಗದ ತನಕ ಮುಕ್ತಿಯನ್ನು ದಯಪಾಲಿಸದ ಗುರುಗಳಿವರು. ಕಲಿಕೆ ಏಕಮುಖಿಯಾಗಿರುವ ಈ ಮಾದರಿಯಲ್ಲಿ ಗುರುಗಳು ಶಿಷ್ಯರಿಗೆ ಕೊಡುವುದು ಸಾಧ್ಯವೇ ಹೊರತು, ಪಡೆಯುವುದು ಸಾಧ್ಯವಿಲ್ಲ. ಕೆರೆಗೆ ಕೆಳಗಿನ ಗದ್ದೆಗಳಿಗೆ ನೀರುಣಿಸುವುದು ಗೊತ್ತೇ ವಿನಾ, ಪಡೆಯುವುದಲ್ಲ. ಆದರೆ ಇಂತಹ ಗುರುಗಳು ಬಹಳ ಬೇಗ ದಣಿಯುತ್ತಾರೆ ಇಲ್ಲವೇ ಜಡವಾಗುತ್ತಾರೆ.

ಗಂಟೆಯ ಒಂದೂ ನಿಮಿಷ ಬಿಡದೆ ಪಾಠ `ಹೇಳುವ~, ಬೇರೆಯವರ ಪಿರಿಯಡ್ಡನ್ನೂ ಆಕ್ರಮಿಸಿಕೊಳ್ಳುವ ಉಮೇದಿನ ಗುರುಗಳ ಸದುದ್ದೇಶ ಮತ್ತು ಬದ್ಧತೆಯ ಬಗ್ಗೆ ಅನುಮಾನವಿಲ್ಲ. ಆದರೆ ಅವರಿಗೆ ಹೇಳುವ ಬಾಯಿಯೇ ಮುಂದಾಗಿ ಕೇಳಿಸಿಕೊಳ್ಳುವ ಕಿವಿ ಇಲ್ಲವಾಗಿರುತ್ತದೆ ಇನ್ನೊಂದು ವಾಸ್ತವ. ಅದರಲ್ಲೂ ಭಿನ್ನಅರ್ಥ ಹುಟ್ಟುವ ಸಾಧ್ಯತೆಯಿರುವ ಸಾಹಿತ್ಯಕ ಚರ್ಚೆಗಳಲ್ಲಿ, ಭಿನ್ನಮತ ಸಾಮಾನ್ಯವಾಗಿರುವ ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ, ತತ್ವಶಾಸ್ತ್ರದ ತರಗತಿಗಳಲ್ಲಿ, ಆಲಿಸುವಿಕೆಯಿಲ್ಲದ ಅಧ್ಯಾಪಕರು, ಎಷ್ಟೇ ವಿದ್ವಾಂಸರಾದರೂ ಸರ್ವಾಧಿಕಾರಿ ಆಗಿಬಿಡುತ್ತಾರೆ.

ಕೊನೇಪಕ್ಷ ಉನ್ನತ ಹಂತದ ತರಗತಿಗಳಲ್ಲಾದರೂ ಕೇಳಿಸಿಕೊಳ್ಳುವಿಕೆ ಇರದಿದ್ದರೆ, ಅವರು ತರಗತಿಗಳಿಂದ ಏನು ತಾನೇ ಕಲಿಯಬಲ್ಲರು? ಆದರೆ ತಮ್ಮದು ಪಾಠ `ಕಲಿಸುವ~ ಕಾಯಕ ಮಾತ್ರವಲ್ಲ, ಕಲಿಯುವುದು ಸಹ ಎನ್ನುವುದು ಅವರಿಗೆ ಹೊಳೆಯುವುದಿಲ್ಲ; ಪ್ರಶ್ನೆ ಮಾಡುತ್ತಲೇ ಅರಿವನ್ನು ಗಳಿಸುವ ಶಿಷ್ಯರ ಹಕ್ಕು ಮತ್ತು ಅವಕಾಶಗಳನ್ನು ನಾಶಮಾಡುತ್ತಿದ್ದೇವೆ ಎಂಬುದೂ ತೋರುವುದಿಲ್ಲ.

ಶಿಷ್ಯರ ಪ್ರಶ್ನೆಗಳಿಂದ ಯೋಚಿಸಲು ಮತ್ತು ಕಲಿಯಲು ಅವಕಾಶ ಕಳೆದುಕೊಳ್ಳುವ ಗುರುಗಳು ತಾವು ಮಾತ್ರ ಪತನಗೊಳ್ಳುವುದಿಲ್ಲ. ಪ್ರಶ್ನಿಸಲಾಗದ, ಬಾಯಿಕಳೆದ ಶಿಷ್ಯರನ್ನು ಸೃಷ್ಟಿಸಿ ಅವರನ್ನೂ ಪತನಕ್ಕೀಡು ಮಾಡುವರು. ಇಂತಹ ಶಿಷ್ಯರು ಒಂದೊ ಗುರುಕೊಟ್ಟ ಕುದುರೆಯನ್ನೇರಿ ಸವಾರಿ ಮಾಡುತ್ತ, ಅವರು ಹಾಕಿಕೊಟ್ಟ ನಕಾಶೆಯಲ್ಲಿರುವ ಹಾದಿಯಲ್ಲಷ್ಟೆ ಪ್ರಯಾಣ ಮಾಡುವವರಾಗುತ್ತಾರೆ.
 
ಒಂದೊಮ್ಮೆ ಹೇರಿಕೆಯಲ್ಲಿ ಏಕಮುಖಿಯಾಗಿ ಕಲಿತ ಶಿಷ್ಯರಿಗೆ ಜ್ಞಾನೋದಯವಾದಲ್ಲಿ, ಅವರು ಸ್ವತಂತ್ರ ಚಿಂತನೆಯ ಅವಕಾಶ ಕಸಿದ ಗುರುವಿನ ಕಡುವಿರೋಧಿಗಳಾಗುವ ಸಂಭವವುಂಟು. 

ಕೆಲವು ದೈವಿಕ ಪ್ರಭಾವಳಿಯ ಗುರುಗಳಿದ್ದಾರೆ. `ಗುರುದೇವೋ ಭವ~, `ಗುರವೇ ನಮಃ~ ಎಂಬ ಮಂತ್ರವಾಕ್ಯಗಳಿಗೆ ಅನುಸಾರ ಗೌರವ ಪಡೆಯುವವರು ಇವರು.

ಸಂಗೀತ ಲೋಕದಲ್ಲಿ ಇಂತಹ ದೈವಿಕ ಗುರುಗಳು ಬಹಳ. ಭಕ್ತರಾದ ಶಿಷ್ಯರಿಂದ ಪೂಜೆಗೊಳ್ಳುವ ಗುರುಗಳಿಲ್ಲಿ ಹರಸುವ ವರಕೊಡುವ ಸರ್ವಶಕ್ತರು. ಕರುಣೆಯೂ ತಾಯಿಯ ಮಮತೆಯೂ ದಂಡಿಸುವ ಅಧಿಕಾರಿ ಗುಣವೂ ಇಲ್ಲಿ ಕೊಂಚ ಇರುತ್ತದೆ.

ಆದರೆ ಗೆಳೆತನದ ಸಲುಗೆ ಬಹಳ ಇರುವುದಿಲ್ಲ. ಕೆಲವೊಮ್ಮೆ ಹೀಗೆ ದೈವೀಕರಣ ಪಡೆದ ಗುರುಗಳು ಜಾತಿಮತಾತೀತವಾಗಿ ತಮ್ಮ ಜ್ಞಾನವನ್ನು ಹಂಚಿಕೊಂಡಿರುವ ಸಂಭವವೂ ಕಡಿಮೆ. ಕರ್ಣನಿಗೆ ಕಲಿಸಿಯೂ ಶಾಪವಿತ್ತ ಪರುಶುರಾಮನ ನೆನಪಾಗುತ್ತದೆ. 

ಇನ್ನು ವಿದ್ಯೆಯ ಜತೆ ತಾಯ ಪ್ರೀತಿಯನ್ನು ಕೊಡಬಲ್ಲ ಗುರು ಮಾದರಿ. ಟೇಟರ ಸಂಬಂಧದಲ್ಲಿ ಇದನ್ನು ಕಂಡೆವು; ಇದನ್ನು ಪ್ರೊ.ವೆಂಕಣ್ಣಯ್ಯ ಮತ್ತು ಕುವೆಂಪು ಸಂಬಂಧದಲ್ಲಿಯೂ ಕಾಣಬಹುದು. ತಾವು ಬರೆಯುತ್ತಿದ್ದ ಮಹಾಕಾವ್ಯವನ್ನು ಕೇಳಿಸಿಕೊಳ್ಳಲು ದೂರದಿಂದ ನಡೆದು ಬರುತ್ತಿದ್ದ ವೆಂಕಣ್ಣಯ್ಯನವರನ್ನು ಕುವೆಂಪು ತಮ್ಮ ಮಹಾಕಾವ್ಯದಲ್ಲಿ ನೆನೆಸಿಕೊಂಡಿರುವ ಬಗೆ, ಜಗತ್ತಿನಲ್ಲಿ ಗುರುವಿಗೆ ಸಂದಿರುವ ಅತ್ಯಂತ ದೊಡ್ಡ ಪ್ರೀತಿಗೌರವದ ನೆನಕೆಗಳಲ್ಲಿ ಒಂದಿರಬಹುದು.

ದಾರ್ಶನಿಕ ಗುರುಗಳಲ್ಲಿ ಅಧಿಕಾರವೂ ದಂಡನೆಯೂ ತುಸುಮಟ್ಟಿಗೆ ತಾಯ ಪ್ರೀತಿಯೂ ಇರುತ್ತದೆ. ಮುಖ್ಯವಾಗಿ ಶಿಷ್ಯರಲ್ಲಿ ಹುದುಗಿದ ಚೈತನ್ಯ ಬಿಂದುಗಳನ್ನು ಗುರುತಿಸಿ ಅವನ್ನು ಜಾಗೃತಗೊಳಿಸುವ ವಿಧಾನ ಇಲ್ಲಿನದು. ಇವರು, ಬಸವಣ್ಣ ಹೇಳುವಂತೆ, ಒಂದು ಕೈಯಲಿ ಹಾಲುಬಟ್ಟಲು ಇನ್ನೊಂದು ಕೈಯಲ್ಲಿ ಓಜುಗಟ್ಟಿಗೆ ಹಿಡಿದು ಬಡಿದು ಕುಡಿಸುವವರು.

ಝೆನ್ ನಾಥ, ಸೂಫಿ ಪಂಥಗಳಲ್ಲಿ ಇಂತಹ ಗುರುಗಳನ್ನು ನೋಡುತ್ತೇವೆ. ಇಲ್ಲಿ ಏಕಮುಖಿಯಾದ ಬೋಧನೆ ಅಥವಾ ಪ್ರವಚನಗಳಿರುವುದಿಲ್ಲ. ಇಲ್ಲಿ ವಿದ್ಯೆಯು ಪಥಿಕನಾದ ಮಗನಿಗೆ ತಾಯಿ ಕಟ್ಟಿಕೊಟ್ಟ ಬುತ್ತಿಯ ಗಂಟಲ್ಲ; ಹೋದೆಡೆ ತನ್ನ ಆಹಾರವನ್ನು ತಾನೇ ಹುಟ್ಟಿಸಿಕೊಳ್ಳುವ ಕುಶಲತೆಯ ಕಲಿಕೆ.

ಈ ಮಾದರಿಯಲ್ಲಿ ಶಿಷ್ಯರು ತಮ್ಮನ್ನು ಮೀರಿಹೋಗಬೇಕೆಂದು ಗುರುಗಳು ಆಶಿಸುತ್ತಾರೆ. ಗುರುತೋರಿದ ಹಾದಿಯಲ್ಲಿ ಪಯಣ ಆರಂಭಿಸಿದರೂ, ನಡೆಯುತ್ತಲೇ ಸ್ವಂತ ದಾರಿಯನ್ನು ಕಂಡುಕೊಳ್ಳುವ, ಗುರುವನ್ನು ಮಿಕ್ಕಿಮೀರಿ ಹೋಗಬಲ್ಲ ಶಿಷ್ಯರು ಹುಟ್ಟುವುದು ಈ ಮಾರ್ಗದಲ್ಲೇ. ತನ್ನ ಗುರು ಪ್ಲೇಟೊವಿನೊಂದಿಗೆ ಗಾಢ ತಾತ್ವಿಕ ಭಿನ್ನಮತ ತೋರುತ್ತಲೇ ಬೆಳೆದು, ಹೊಸ ಪ್ರಮೇಯಗಳನ್ನು ಮಂಡಿಸಿ, ಗುರುವನ್ನೂ ಬೆಳೆಸಿದ ಅರಿಸ್ಟಾಟಲ್ ಇದಕ್ಕೆ ಒಳ್ಳೆಯ ನಿದರ್ಶನ.

ಇನ್ನೂ ಕೆಲವು ಗುರುಗಳಿದ್ದಾರೆ. ಅವರಿಗೆ ಶಿಷ್ಯರ ಜತೆ ಗೆಳೆತನವೂ ಇಷ್ಟ. ಇದಕ್ಕಾಗಿ ಅವರು ತಮ್ಮ ಸ್ಥಾನಮಾನವನ್ನು ಬಿಟ್ಟು ಕೆಳಗಿಳಿಯಬಲ್ಲರು. ಮೂರ್ತಿರಾಯರು ತಮ್ಮ ಗುರುಗಳಾದ ಪ್ರೊ.ರಾಧಾಕೃಷ್ಣನ್ ಬಗ್ಗೆ ಹೇಳುವುದನ್ನಿಲ್ಲಿ ಉಲ್ಲೇಖಿಸಿಬಹುದು: ``ಪಾಠ ಆರಂಭವಾಗುವುದಕ್ಕೆ ಮೊದಲು ಸುಮಾರು 15 ನಿಮಿಷ, ವಿದ್ಯಾರ್ಥಿಗಳನ್ನು ಮಾತಾಡಿಸಿ ಅವರನ್ನು ಕೀಟಲೆ ಮಾಡಿ ನಗಿಸುವುದಕ್ಕೆ ಮೀಸಲು. ಆಗ ಗುರುಶಿಷ್ಯರು ಒಬ್ಬರನ್ನೊಬ್ಬರು ಯಾವ ಪ್ರಶ್ನೆಯನ್ನಾದರೂ ಕೇಳಬಹುದು.

ಕಾಫಿ ಒಳ್ಳೆಯದೊ ಟೀ ಒಳ್ಳೆಯದೊ? ತೃಪ್ತಿ ಒಳ್ಳೆಯದೊ ಮಹತ್ವಾಕಾಂಕ್ಷೆ ಒಳ್ಳೆಯದೊ? ಬಂಧನವಿಲ್ಲದ ಸ್ವಾತಂತ್ರ್ಯವುಂಟೆ? ಗುರುಗಳು ಇಂಗ್ಲೆಂಡಿಗೆ ಹೋಗಲಿಲ್ಲವೇಕೆ? ಅವರಂತೆ ಎಲ್ಲರೂ ನಿಲುವಂಗಿ ಹಾಕಿಕೊಂಡರೆ ಚೆನ್ನಾಗಿರುತ್ತದೆಯೇ? ಇಂಥ ನೂರು ಪ್ರಶ್ನೆಗಳು ಚರ್ಚೆಗೆ ಬರುತ್ತಿದ್ದವು.

ಈ ಚರ್ಚೆ ಮುಗಿದ ಮೇಲೆ ಪಾಠ ಆರಂಭವಾಗುವುದು. ಡೆಕಾರ್ಟನ `ಕೊಜಿಟೊ ಎರ್ಗೊ ಸುಮ್~ , ಲೈಬ್ನಿಟ್ಸನ ಮೋನಡಾಲಜಿ, ದೈವಮತ್ತನಾದ ಸ್ಪನೋಸಾ, ಕ್ಯಾಂಟನ `ಕ್ಯಾಟಗಾರಿಕಲ್ ಇಂಪರೆಟಿವ್~ ಯಾವ ವಿಷಯ ಉಪನ್ಯಾಸ ಮಾಡಲಿ ಅದೊಂದು ಅಮೃತಧಾರೆ”. ಲಂಕೇಶ್ ಅವರೂ ವಿದ್ಯಾರ್ಥಿಗಳ ಜತೆ ಗೆಳೆತನದ ಸಂಬಂಧ ಇರಿಸಿಕೊಂಡಿದ್ದ ಮೇಷ್ಟರುಗಳಲ್ಲಿ ಒಬ್ಬರೆಂದು ತಿಳಿದುಬರುತ್ತದೆ.

ಅವರು ತಮ್ಮ ಇಬ್ಬರು ಶಿಷ್ಯರಾದ ಕಿ.ರಂ. ನಾಗರಾಜ ಹಾಗೂ ಟಿ.ಎನ್.ಸೀತಾರಾಂ ಅವರಿಗೆ ಕೃತಿಯೊಂದನ್ನು ಅರ್ಪಿಸಿರುವ ರೀತಿಯಲ್ಲೂ ಇದರ ಝಲಕನ್ನು ನೋಡಬಹುದು.

ತಮ್ಮ ವಿದ್ವತ್ತು ಮತ್ತು ವ್ಯಕ್ತಿತ್ವದ ಸಹಜ ಗಾಂಭೀರ್ಯದಿಂದ ಶಿಷ್ಯರೊಂದಿಗೆ ದೂರ ಕಾಯ್ದುಕೊಳ್ಳುತ್ತಿದ್ದ ಬಿಎಂಶ್ರೀ, ತೀನಂಶ್ರೀ, ಕುವೆಂಪು ಅವರ ರೀತಿಗೆ ಹೋಲಿಸಿದರೆ, ಡಿ.ಎಲ್. ನರಸಿಂಹಾಚಾರ್ ಅವರದು ಶಿಷ್ಯರ ಜತೆಗೆ ಸ್ನೇಹಪರ ಸಲಿಗೆಯ ಸಂಬಂಧವೆಂದು ಅವರ ಶಿಷ್ಯರ ಬರಹಗಳಿಂದ ಗೊತ್ತಾಗುತ್ತದೆ.

ಆದರೆ ಸಮಸ್ಯಾತ್ಮಕವಾಗಿರುವ ಇನ್ನೊಂದು `ಗುರು~ ಪರಂಪರೆಯೂ ನಮ್ಮ ಆಸುಪಾಸಿನಲ್ಲಿದೆ. ಈ ಮಾದರಿಯ ಗುರುಗಳು ತಮ್ಮ ಅವಿದ್ಯೆಯಿಂದ ಶಿಷ್ಯರ ಕಣ್ಣನ್ನು ಮುಚ್ಚಿಸಬಲ್ಲರು. ವಿದ್ವತ್‌ಹೀನರಾಗಿ, ಹಗರಣಗಳಲ್ಲಿ ಸಿಲುಕಿ, ಹಣಗಳಿಕೆಯಲ್ಲಿ ನಿರತರಾಗಿರುವ ಅಧ್ಯಾಪಕರನ್ನು ಕುರಿತು ಬರುತ್ತಿರುವ ವರದಿಗಳು ಏನು ತಾನೇ ಹೇಳುತ್ತಿವೆ? ಇವರಲ್ಲಿ ಕೆಲವು ಗುರುಗಳು ತಾವು ಕೊಟ್ಟ ವಿದ್ಯೆಗೆ ಶಿಷ್ಯರು ಹೆಬ್ಬೆರಳ ಬೆಲೆ ತೆರುವಂತೆಯೂ ಮಾಡಬಲ್ಲರು.

ಇದಕ್ಕೆ ಲಗತ್ತಾಗಿ ಇನ್ನೂ ಕೆಲವು ಉಪಮಾದರಿಗಳಿವೆ. ಅವೆಂದರೆ, ಸರ್ವಾಲಂಕಾರ ಭೂತರಾಗಿ ಟಿವಿಗಳಲ್ಲಿ ಕುಳಿತು, ಜ್ಯೋತಿಷ್ಯ, ವಾಸ್ತು, ಪುನರ್ಜನ್ಮ, ಆರೋಗ್ಯ ಇತ್ಯಾದಿ ಹೆಸರಲ್ಲಿ ಅವೈಚಾರಿಕತೆ ಬಿತ್ತುತ್ತಿರುವ `ಗುರೂಜಿ~ಗಳು; ಭ್ರಷ್ಟ ಅಧಿಕಾರಸ್ಥರಿಗೆ ನೈತಿಕ ಬೆಂಬಲ ಕೊಡುತ್ತಿರುವ `ಧಾರ್ಮಿಕ~ ಗುರುಗಳು. ಈಗ `ಗುರು~ ಎಂಬ ಶಬ್ದವು ಇಂಗ್ಲೀಷ್ ನಿಘಂಟನ್ನೂ ಸೇರಿದ್ದು, ಹೊಸ ಪರ್ಥಪ್ರವರ್ತಕರು ಎಂಬರ್ಥವನ್ನು ಪಡೆದಿದೆ.

ಅಭಿಷೇಕ್ ಬಚ್ಚನ್ ನಾಯಕನಾಗಿ ನಟಿಸಿರುವ `ಗುರು~ ಸಿನಿಮಾ ಗಮನಿಸಿ. ಆತ ಎಲ್ಲ ಕಾನೂನುಗಳನ್ನು ತನ್ನ ಜಾಣ್ಮೆ -ತಂತ್ರಗಾರಿಕೆಯಿಂದ ಮುರಿದು ಉದಿಸುವ ಒಬ್ಬ ಯಶಸ್ವೀ ಉದ್ಯಮಿ. ಅವನನ್ನು ಗುರುವೆಂದು ಕರೆದು ಸಿನಿಮಾ ವೈಭವೀಕರಿಸುತ್ತದೆ. ಮಧ್ಯಮವರ್ಗದ ವ್ಯಾಪಕ ಸಮ್ಮತಿ ಪಡೆದಿರುವ ಮಾರುಕಟ್ಟೆ ಎಕಾನಮಿ ಹುಟ್ಟಿಸಿರುವ ಹೊಸ ಸಾಂಸ್ಕೃತಿಕ ನಾಯಕರು ಇವರು. ಇವರೀಗ ಸರ್ಕಾರಕ್ಕೂ ಗುರುಗಳಾಗಿ ಅಭಿವೃದ್ಧಿಯ ಪಾಠಗಳನ್ನು ಕಲಿಸುತ್ತಿದ್ದಾರೆ.

ತರಗತಿಯಾಚೆ ನಮಗೆ ವಿವೇಕವನ್ನೂ ಚಿಂತನಶಕ್ತಿಯನ್ನೂ ನೀಡುವ ಎಲ್ಲವನ್ನೂ `ಗುರು~ ಎಂದು ಪರಿಭಾವಿಸಿದರೆ, ಲೋಕದ ತುಂಬೆಲ್ಲ ಅವರು ಬಹುರೂಪಿಗಳಾಗಿ ನೆಲೆಸಿರುವುದು ಕಾಣತೊಡಗುತ್ತದೆ. ಹಾದಿಬೀದಿಯ ಹುಲ್ಲಿನ ಗರಿತಂದು ತನ್ನ ಗೂಡುಕಟ್ಟುವ ಹಕ್ಕಿ, ಹೂವಿಂದ ರಸ ತಿರಿದು ತರುವ ಜೇನ್ನೊಣ, ತನ್ನ ಭಾರಕ್ಕೆ ಮೀರಿದ ಕಾಳನ್ನು ಹೊರುವ ಇರುವೆ, ತನ್ನ ಮರಿಗಳಿಗೆ ಉಣಿಸಿ ಕಾಪಿಡುವ ತಾಯಿಕೋಳಿ-ಕಲಿಯಲಪೇಕ್ಷಿಸುವವರಿಗೆ ಎಷ್ಟೊಂದು ಗುರುಗಳಿದ್ದಾರೆ?

ಬಸವಣ್ಣನಿಗೆ ಒಂದಗುಳ ಕಂಡರೂ ತನ್ನ ಬಳಗವನ್ನು ಕೂಗಿ ಕರೆವ ಕಾಗೆಯಿಂದಲೂ ಕಲಿಯುವ ವಿನಯವಿತ್ತು. ಜಗತ್ತಿನ ಎಲ್ಲ ಚಳವಳಿಗಾರರು ಬೀದಿಯಿಂದ ಪಾಠಗಳನ್ನು ಕಲಿತಿದ್ದಾರೆ ಮತ್ತು ತಮಗೆ ಪಾಠ ಕಲಿಸಿದ ಬೀದಿಗಳನ್ನು ಮರಳಿ ಬೆಳೆಸಿದ್ದಾರೆ.

ಕುವೆಂಪು ಕಾದಂಬರಿಯಲ್ಲಿ ನಾಯಿಗುತ್ತಿ, ಸಗಣಿಯನ್ನು ಉಂಡೆ ಮಾಡಿ ಉರುಳಿಸಿಕೊಂಡು ಹೋಗುವ ಹುಳುವಿನಿಂದ ತನ್ನ ಪ್ರೇಮಸಾಹಸಕ್ಕೆ ಪ್ರೇರಣೆ ಪಡೆಯುವ ಪ್ರಸಂಗವಿದೆ. ತಾಯಿತಂದೆಗಳಾದವರು ಮಕ್ಕಳಿಗೆ, ಹಿರಿಯರಾದವರು ಕಿರಿಯರಿಗೆ, ಕಲಿಸುವುದು ತಮ್ಮ ಜವಾಬ್ದಾರಿ ಎಂದು ತಿಳಿದಿದ್ದಾರೆ. ಆದರೆ ಮಕ್ಕಳಿಂದಲೂ ಕಲಿಯುವುದಿದೆ ಎಂದು ಬಹಳ ಜನ ತಿಳಿದಿಲ್ಲ. ಖ್ಯಾತ ಲೇಖಕ ದಾರ್ಶನಿಕ ಖಲೀಲ್ ಗಿಬ್ರಾನ್, ಮಕ್ಕಳಿಂದ ಕಲಿಯಿರಿ ಎಂದು ಕರೆಗೊಡುತ್ತಾನೆ.

ಗುಡಿಸಲಿನ ಮಕ್ಕಳೂ ಬಂಗಲೆಯ ಮಕ್ಕಳೂ- ತಂತಮ್ಮ ಮನೆಯ ಹಿರಿಯರಿಗೆ ಗೊತ್ತಾಗದಂತೆ- ಬೀದಿಯಲ್ಲಿ ಒಂದಾಗಿ ಆಡುತ್ತಿರುತ್ತಾರೆ. ಅವರಿಗೆ ಸಮಾಜವಾದದ ಪಾಠ ಹೇಳಿಕೊಟ್ಟವರು ಯಾರು?

ಕರ್ನಾಟಕದಲ್ಲಿ  ಕೆಲವು ಪರೋಕ್ಷ ಗುರುಗಳಿದ್ದಾರೆ. ನಂಜುಂಡಸ್ವಾಮಿಯವರ ತರಗತಿಗಳಲ್ಲಿ ಕೂತು ಪಾಠ ಕೇಳದವರೂ ಅವರನ್ನು `ಪ್ರೊಫೆಸರ್~ ಎಂದೇ ಕರೆಯುತ್ತಿದ್ದರು. ಅವರು ನಾಡಿನ ಸಾವಿರಾರು ರೈತರಿಗೆ ಚಳವಳಿಯ ಪಾಠ ಕಲಿಸಿದವರು. `ಮೇಷ್ಟ್ರು~ ಎಂದೇ ಖ್ಯಾತರಾಗಿದ್ದ ಲಂಕೇಶ್ (ಕುವೆಂಪು ಅವರಂತೆಯೇ ತರಗತಿಗಳಲ್ಲಿ ಅಷ್ಟೇನು ಪರಿಣಾಮಕಾರಿ ಆಗಿರಲಿಲ್ಲವಂತೆ,) ತಮ್ಮ ಬರಹಗಳಿಂದ, ಪತ್ರಿಕೆಯ ಮೂಲಕ ಎಷ್ಟೊಂದು ಓದುಗರಿಗೆ ಪರೋಕ್ಷ ಕಲಿಸಿದರು ಮತ್ತು ಕಲಿತರು?
 
ತಿರುಗಾಟವನ್ನು ತಿಳಿವು ಗಳಿಸುವ ವಿಧಾನಗಳಲ್ಲಿ ಒಂದೆಂದು ನಂಬಿರುವ ನನ್ನಂತಹವರಿಗೆ, ತರಗತಿಯಲ್ಲಿ ಕಲಿಸಿದ ಮೇಷ್ಟರುಗಳು ಮಾತ್ರವಲ್ಲ, ನಾಡಿನ ಊರು-ಬೀದಿಗಳಲ್ಲಿ ಭೇಟಿಯಾದ ಜನರೆಲ್ಲ ನೆನಪಾಗುತ್ತಾರೆ.

ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಬೇಕಾದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುವ ವ್ಯವಸ್ಥೆ ಏರ್ಪಟ್ಟಿದ್ದು, ಅದೀಗ ಹೊಸಗುರುವಿನ ಜಾಗವನ್ನು ಆಕ್ರಮಿಸುತ್ತಿದೆ. ಇದು ಪುಸ್ತಕಗಳ ಸ್ಥಾನವನ್ನು ಪಲ್ಲಟಗೊಳಿಸುವಷ್ಟು ಪ್ರಭಾವಶಾಲಿಯಾಗಿದೆ.

ಆದರೂ ಮಾಹಿತಿಯನ್ನು ವಿಶ್ಲೇಷಿಸಿ ತಿಳಿವನ್ನಾಗಿಸಿ ನಮ್ಮ ಬದುಕಿಗೆ ಲಗತ್ತಿಸಿ ಕೊಡುವುದಕ್ಕೆ, ನಮ್ಮಂತೆ ಜೀವವುಳ್ಳ ಮನುಷ್ಯರೂಪಿಯಾದ ಮಾಧ್ಯಮವೊಂದು ನಮಗೆ ಬೇಕು. ಕಾರಣ, ಮನುಷ್ಯರು ತಿಳಿವಿಗೆ ಪ್ರೀತಿ, ಸಿಟ್ಟು, ಜಗಳ, ಅನುಭವ, ಚಿಂತನೆ ಬೆರೆಸಬಲ್ಲರು. ತಿಳಿವಿಗೆ ಮನುಷ್ಯಾನುಭವದ ಆಯಾಮ ಕೊಟ್ಟ ದೊಡ್ಡ ಗುರುವೆಂದರೆ ಬುದ್ಧ. 

ಸರ್ವೇಪಲ್ಲಿ ರಾಧಾಕೃಷ್ಣನ್ ಹೆಸರಲ್ಲಿ ಶಿಕ್ಷಕರ ದಿನ ಆಚರಿಸಲಾಗುತ್ತಿದೆ. ಅವರ ನೆಪದಲ್ಲಿ ಇದು ಸಮಸ್ತ ಶಿಕ್ಷಕರನ್ನು ಸ್ಮರಿಸುವ ದಿನ ಎಂದಷ್ಟೇ ಭಾವಿಸಿದರೂ, ಪಾಠ ಮಾಡುವುದನ್ನು ಬಿಟ್ಟು ಆಳ್ವಿಕೆ ಮಾಡಲು ಹೋದವರ ಹೆಸರಲ್ಲಿ ಶಿಕ್ಷಕರ ದಿನಾಚರಣೆ ಇರುವುದು, ಒಂದು ವೈರುಧ್ಯದಂತೆಯೇ ತೋರುತ್ತದೆ.

ಇವರಿಗೆ ಹೋಲಿಸಿದರೆ ರವೀಂದ್ರನಾಥ ಟಾಗೋರರು ನಿಜವಾದ ಗುರು. ಅವರು ಯಾವುದೇ ವಿ.ವಿ.ಯಿಂದ ನೇಮಕಗೊಂಡ ಅಧಿಕೃತ ಪ್ರಾಧ್ಯಾಪಕರಾಗಿರಲಿಲ್ಲ.

ಆದರೂ ಅವರಿಗೆ ಗುರುದೇವ ಎನ್ನಲಾಗುತ್ತಿತ್ತು. ಶಾಂತಿನಿಕೇತನದಲ್ಲಿ ವಿದ್ಯಾಲಯ ಕಟ್ಟಿ, ಅಲ್ಲಿ ಸಾವಿರಾರು ಜನರಿಗೆ ಕಲಿಯಲು ಅವಕಾಶ ಕಲ್ಪಿಸಿದ ಅವರು ದೈವೀಕರಣಗೊಳ್ಳಲಿಲ್ಲ. ಸ್ವತಃ ಸಿರಿವಂತ ಕುಟುಂಬದಲ್ಲಿ ಹುಟ್ಟಿದ ರಾಜಕುಮಾರನಾದ ಅವರು, ಹೊಸ ಅನುಭವಕ್ಕೂ - ಅರಿವಿಗೂ ತೊಡಕಿನಂತಿರುವ ಕೋಲ್ಕತ್ತೆಯ ಬಂಗಲೆಯನ್ನು ಬಿಟ್ಟು, ಹಳ್ಳಿಗಾಡುಗಳಲ್ಲಿ ವಾಸಮಾಡಿ, ಜನರಿಂದ ಬಂಗಾಳಿ ಭಾಷೆಯ ಬನಿಯನ್ನೂ ಬಾವುಲರಿಂದ ಸಂಗೀತದ ರಾಗಗಳನ್ನೂ ಅನುಭಾವದ ಸೆಳಕುಗಳನ್ನೂ ಪಡೆದುಕೊಂಡರು.

ಬಹುಶಃ ಜಗತ್ತಿನ ಅತ್ಯುತ್ತಮ ಮೇಷ್ಟರುಗಳೆಲ್ಲ ಕೇವಲ ಕಲಿಸಿದವರಲ್ಲ; ಕಲಿಯುತ್ತಲೇ ಇದ್ದವರು. ಕೇವಲ ಕೊಟ್ಟವರಲ್ಲ; ಪಡೆಯುತ್ತಲೂ ಇದ್ದವರು. ಇಲ್ಲಿ ಎರಡು ಪ್ರಸಂಗಗಳು ನೆನಪಾಗುತ್ತಿವೆ: 1. ರಾಮರಾಯರು ಅಮಲ್ದಾರರಾಗಿ ನೇಮಕಗೊಂಡೊಡನೆ ಟೇಟರನ್ನು ಕಂಡು ಹಾರೈಕೆ ಪಡೆಯಲು ಧಾವಿಸುವುದು. 2. ರಾಮರಾಯರು ಇಂಗ್ಲೆಂಡಿಗೆ ಹೋದಾಗ, ಸ್ವತಃ ಟೇಟರು ನಿಲ್ದಾಣಕ್ಕೆ ಬಂದು, ಪ್ರಿಯ ಶಿಷ್ಯನ ಕೈಯಲ್ಲಿದ್ದ ಲಗೇಜನ್ನು ತಾವೇ ಎತ್ತಿಕೊಂಡು ಹೋಗುವುದು. ಬಹುಶಃ ನಿಜವಾದ ಗುರು ಶಿಷ್ಯರಿಗೆ ಜಾತಿ ಮತ ದೇಶ ಕಾಲಗಳ ಹಂಗಿಲ್ಲ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT