ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರತೆಯಲ್ಲೇ ಕಾಡುತ್ತಿದೆ ಐದು ವರ್ಷ

Last Updated 21 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಕಳೆದ ವಾರ ಚೆನ್ನೈಗೆ ಹೋಗಿದ್ದಾಗ ಟಿ. ನಗರದಲ್ಲಿರುವ ಎಂ.ಜಿ.ಆರ್ ಮನೆಗೆ ಹೋಗಿದ್ದೆ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಸೂಪರ್‌ಸ್ಟಾರ್ ಆಗಿದ್ದು, ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿಯಾಗಿದ್ದ ಎಂ.ಜಿ.ರಾಮಚಂದ್ರನ್ ಯಾರಿಗೆ ಗೊತ್ತಿಲ್ಲ? ಅವರು ನಟರಾಗಿ ಖ್ಯಾತಿಯ ತುತ್ತತುದಿಯಲ್ಲಿರುವಾಗ ಅವರು ವಾಸವಿದ್ದ ಟಿ.ನಗರದ ಮನೆಯನ್ನು ಈಗ ‘ಎಂ.ಜಿ.ಆರ್ ಟ್ರಸ್ಟ್’ ಆಗಿ ಪರಿವರ್ತಿಸಲಾಗಿದೆ.
 
ಎಂ.ಜಿ.ಆರ್ ಅವರು ಇದ್ದ ಈ ಮನೆಯನ್ನು ಅವರ ನೆನಪಿಗಾಗಿ ಹೇಗಿತ್ತೋ ಹಾಗೆ ಅವರ ಅಭಿಮಾನಿಗಳಿಗಾಗಿ, ಮುಂದಿನ ದಿನಗಳಲ್ಲಿ ಎಂ.ಜಿ.ಆರ್ ಅವರ ನೆನಪನ್ನು ಉಳಿಸಲಿಕ್ಕಾಗಿ ತೆರೆಯಲಾಗಿದೆ.
 
ಎಂ.ಜಿ.ಆರ್ ಅವರಿದ್ದಾಗ ಅವರ ಮನೆಯ ಮುಂದೆ ಸುಳಿದಾಡುವುದೂ ಅಭಿಮಾನಿಗಳಿಗೆ ಕಷ್ಟದ ಕೆಲಸವಾಗಿತ್ತೇನೋ. ಅವರ ಮನೆಯ ಮೆಟ್ಟಿಲು ತುಳಿಯಲೂ ಹರಸಾಹಸ ಪಡಬೇಕಾಗಿತ್ತು.ಆದರೆ ಈಗ ಎಂ.ಜಿ.ಆರ್ ಮನೆಗೆ ಯಾರು ಬೇಕಾದರೂ, ಯಾವ ಸಮಯದಲ್ಲಾದರೂ ಹೋಗಬಹುದು. ಪ್ರವೇಶ ಉಚಿತ.

ಎಂ.ಜಿ.ಆರ್ ಮ್ಯೂಸಿಯಂನಲ್ಲಿ ಅವರು ಅಭಿನಯಿಸಿದ ಎಲ್ಲ ಚಿತ್ರಗಳ ಫೋಟೊಗಳನ್ನು ಜೋಡಿಸಿಡಲಾಗಿದೆ. ಅವರ ದಿರಿಸುಗಳನ್ನು ಜೋಡಿಸಿಲಾಗಿದೆ. ಅವರಿಗೆ ಬಂದಿದ್ದ ಎಲ್ಲ ಪುರಸ್ಕಾರಗಳನ್ನೂ ಕಾಪಿಡಲಾಗಿದೆ. ಅವರು ಬಳಸುತ್ತಿದ್ದ ಕಾರು ಸೇರಿದಂತೆ ಪೆನ್ನು, ವಾಚು ಹೀಗೆ ಎಲ್ಲ ವಸ್ತುಗಳನ್ನೂ ಅಲ್ಲಲ್ಲೇ ಇಡಲಾಗಿದೆ.ಎಂ.ಜಿ.ಆರ್ ಅವರನ್ನು ಮುಂದಿನ ಪೀಳಿಗೆಗೂ ಜೀವಂತವಾಗಿಡುವ ಎಲ್ಲ ಪ್ರಯತ್ನಗಳು ಅಲ್ಲಿ ಆಗುತ್ತಿವೆ.

ಎಂ.ಜಿ.ಆರ್ ಮನೆಯನ್ನು ನೋಡುತ್ತಿದ್ದಂತೆ ನನಗೆ ನೆನಪಾಗಿದ್ದು ನಮ್ಮ ರಾಜ್‌ಕುಮಾರ್.ರಾಜ್‌ಕುಮಾರ್ ಕಣ್ಮರೆಯಾಗಿ ಐದುವರ್ಷಗಳೇ ಆದವು. ಏಪ್ರಿಲ್ 24 ಬಂದಕೂಡಲೇ ನಾವು ಮತ್ತೆ ರಾಜಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತೇವೆ. ಎಂ.ಜಿ.ಆರ್ ತಮಿಳುನಾಡಿನಲ್ಲಿ ಮಿಂಚುತ್ತಿದ್ದಾಗ, ಕರ್ನಾಟಕದ ಚಿತ್ರರಂಗದಲ್ಲಿ ರಾಜಕುಮಾರ್ ವರನಟನಾಗಿ ಮಿಂಚುತ್ತಿದ್ದರು.

ಅಲ್ಲಿ ಶಿವಾಜಿಗಣೇಶನ್, ಎಂ.ಜಿ.ಆರ್, ಆಂಧ್ರದಲ್ಲಿ ನಾಗೇಶ್ವರರಾವ್, ಎನ್.ಟಿ.ಆರ್ ಚಿತ್ರರಂಗವನ್ನು ಕಟ್ಟುತ್ತಿದ್ದಾಗ, ಕನ್ನಡ ಚಿತ್ರರಂಗವನ್ನು ಏಕಾಂಗಿಯಾಗಿ ರಾಜಕುಮಾರ್ ಕಟ್ಟುತ್ತಿದ್ದರು. 60ನೇ ದಶಕದಿಂದ ಸತತ ಐವತ್ತು ವರ್ಷಗಳ ಕಾಲ ಚಿತ್ರರಂಗವನ್ನು ಸುಭದ್ರವಾಗಿ ನಿಲ್ಲಿಸಿದ ರಾಜ್‌ಕುಮಾರ್ ಅವರ ನೆನಪನ್ನು ಚಿರಸ್ಥಾಯಿಗೊಳಿಸುವ ಕೆಲಸವಿನ್ನೂ ಆಗಿಲ್ಲ ಎನ್ನುವುದೇ ನನ್ನ ಚಿಂತನೆಯಾಗಿತ್ತು.

ರಾಜ್‌ಕುಮಾರ್ ಹಾಗೂ ಎಂ.ಜಿ.ಆರ್ ಪರಸ್ಪರ ಒಳ್ಳೆಯ ಸ್ನೇಹಿತರೇ ಆಗಿದ್ದರು. ಕನ್ನಡದ ಒಳ್ಳೆಯ ಚಿತ್ರಗಳನ್ನು ಎಂ.ಜಿ.ಆರ್ ನೋಡುತ್ತಿದ್ದರು. ಬಿ.ಆರ್.ಪಂತುಲು ಇವರಿಬ್ಬರ ನಡುವೆ ಸ್ನೇಹಸೇತುವಾಗಿದ್ದರು. ಪಂತುಲು ಅವರು ತಮಿಳಿನಿಂದ ಕನ್ನಡಕ್ಕೂ, ಕನ್ನಡದಿಂದ ತಮಿಳಿಗೂ ಚಿತ್ರಗಳನ್ನು ನಿರ್ಮಿಸುವುದರಲ್ಲಿ ಹೆಸರಾದವರು.

ತಮಿಳಿನಲ್ಲಿ ಎಂ.ಜಿ.ಆರ್ ಮತ್ತು ಶಿವಾಜಿಗಣೇಶನ್ ಅವರ ನಾಯಕತ್ವದ ಸಿನಿಮಾಗಳನ್ನು ಪಂತುಲು ನಿರ್ಮಿಸಿದ್ದಾರೆ. ರಾಜಕುಮಾರ್ ಅಭಿನಯಿಸಿದ ‘ಎಮ್ಮೆತಮ್ಮಣ್ಣ’ ಚಿತ್ರವನ್ನು ಎಂ.ಜಿ.ಆರ್.ಗೆ ತೋರಿಸಿದಾಗ, ಎಂ.ಜಿ.ಆರ್ ಖುಷಿಯಾದರಂತೆ. ತಮಿಳಿನಲ್ಲಿ ಈ ಚಿತ್ರ ‘ಮಾಟ್ಟುಕ್ಕಾರ ವೇಲನ್’ ಆಗಿ ಅತೀ ಯಶಸ್ಸಿನ ಚಿತ್ರವಾಯಿತು.
 
ರಾಜ್ ಅಭಿನಯದ ‘ಗಂಡೊಂದು ಹೆಣ್ಣಾರು’ ಚಿತ್ರವನ್ನು ‘ರಾಮನ್ ತೇಡಿಯ ಸೀತೈ’ ಎನ್ನುವ ಹೆಸರಿನಲ್ಲಿ ಎಂ.ಜಿ.ಆರ್ ನಾಯಕತ್ವದಲ್ಲಿ ನಿರ್ಮಿಸಲಾಯಿತು. ತಮಿಳುನಟರು ಕನ್ನಡದಿಂದ ರೀಮೇಕ್ ಚಿತ್ರ ಮಾಡುವುದಾದರೆ ಅದು ರಾಜ್‌ಕುಮಾರ್ ಅಭಿನಯದ ಚಿತ್ರವೇ ಆಗಿರಬೇಕು ಎಂದು ಬಯಸುತ್ತಿದ್ದರು.
 
ಕನ್ನಡದಲ್ಲಿ ದಾಖಲೆ ಯಶಸ್ಸು ಪಡೆದ ‘ಶಂಕರ್‌ಗುರು’ ಚಿತ್ರವನ್ನು ಶಿವಾಜಿಗಣೇಶನ್ ಅವರೇ ಮೆಚ್ಚಿಕೊಂಡು ತಮಿಳು ಆವೃತ್ತಿಯಲ್ಲಿ ಅಭಿನಯಿಸಿದರು. ರಾಜ್‌ಕುಮಾರ್ ಅವರು ಅಭಿನಯಿಸಿದ ಬಾಂಡ್ ಚಿತ್ರಗಳೆಲ್ಲಾ ತಮಿಳಿಗೆ ಡಬ್ ಆಗಿವೆ. ಈ ರೀತಿ ದಕ್ಷಿಣಭಾರತದ ಎಲ್ಲ ನಾಯಕರು ರಾಜ್‌ಕುಮಾರ್ ಅವರ ಚಿತ್ರಗಳ ಬಗ್ಗೆ ಕುತೂಹಲ ತಳೆದಿದ್ದದ್ದೂ ಕೂಡ ಸಾಂಸ್ಕೃತಿಕವಾಗಿ ಗಮನಿಸಬೇಕಾದ ಸಂಗತಿ.

ಕನ್ನಡ ಚಿತ್ರರಂಗಕ್ಕೆ ರಾಜಕುಮಾರ್ ಅವರ ಕೊಡುಗೆಯನ್ನು ದಾಖಲಿಸಬೇಕಾದ ಕೆಲಸಗಳು ಇನ್ನೂ ಆಗಬೇಕಿವೆ. ರಾಜಕುಮಾರ್ ಸ್ಮಾರಕವನ್ನು ನಿರ್ಮಿಸುವ ಕೆಲಸ ಇನ್ನೂ ಆರು ತಿಂಗಳಾಗುತ್ತದೆ ಎಂಬ ಭರವಸೆ ಸಿಕ್ಕಿದೆ. ರಾಜಕುಮಾರ್ ಅವರ ಸಮಾಧಿ ಸ್ಥಳಕ್ಕೆ ಜನ ಬಂದು ಹೋಗುತ್ತಾರೆ. ಅವರ ಹುಟ್ಟಿದ ದಿನ, ಸ್ಮರಣೆಯ ದಿನ ಎಲ್ಲ ದಿನಗಳಂದು ಜನ ಬಂದು ಹೋಗುತ್ತಾರೆ.
 
ಟ್ರಸ್ಟ್ ವತಿಯಿಂದ ಆಗಬೇಕಾದ ಕೆಲಸಗಳು ನೀಲಿನಕ್ಷೆಯಲ್ಲೇ ಇವೆ. ಸಮಾಧಿಯ ಸುತ್ತ ರಾಜ್ ಅಧ್ಯಯನ ಕೇಂದ್ರ, ಸಂಗ್ರಹಾಲಯ, ಚಿತ್ರಮಂದಿರ ಮುಂತಾದ ಯೋಜನೆಗಳಿದ್ದು, ಆ ಕೆಲಸಗಳು ಸಂಪೂರ್ಣವಾಗಲು ಇನ್ನು ಹಲವು ವರ್ಷಗಳೇ ಬೇಕಾಗಬಹುದು. ಸ್ಮಾರಕ ನಿರ್ಮಾಣ ಕೆಲಸಗಳಲ್ಲಿ ನಾವು ಸದಾ ಹಿಂದು. ಸರ್ಕಾರ ಹತ್ತುಕೋಟಿ ರೂಪಾಯಿ ಇದಕ್ಕಾಗಿ ವಿನಿಯೋಗಿಸುತ್ತಿದ್ದರೂ ಕೆಲಸ ಅಷ್ಟು ಚುರುಕಾಗಿ ನಡೆಯುತ್ತಿಲ್ಲ.
 
ಕಂಠೀರವ ಸ್ಟುಡಿಯೋದಲ್ಲಿ ಇಂತಹ ಸ್ಮಾರಕ ನಿರ್ಮಾಣಕ್ಕಾಗಿ ನೀಡಿರುವ ಜಾಗವೂ ಕೂಡ ಕಡಿಮೆ ಏನಲ್ಲ. ಸಾಕಷ್ಟು ಸ್ಥಳ, ಹಣ ಎಲ್ಲವೂ ಇದ್ದೂ ಕೆಲಸ ಕುಂಠಿತಗೊಳ್ಳಲು ಕಾರಣವೇನು ಎಂಬುದೇ ಅರ್ಥವಾಗುವುದಿಲ್ಲ. ಒಬ್ಬ ಖ್ಯಾತನಟನ ಸ್ಮಾರಕ ನಿರ್ಮಾಣಕ್ಕೆ ಐದು ವರ್ಷ ಬೇಕೇ?

ರಾಜ್‌ಕುಮಾರ್ ಅವರು ನಿಧನರಾದ ಕೆಲವೇ ದಿನಗಳಲ್ಲಿ ಸರ್ಕಾರವು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಡಾ.ರಾಜ್‌ಕುಮಾರ್ ಅಧ್ಯಯನ ಪೀಠವೊಂದನ್ನು ಸ್ಥಾಪಿಸಿತು. ಅದಕ್ಕಾಗಿ 15 ಲಕ್ಷ ರೂಪಾಯಿ ಮೂಲನಿಧಿಯನ್ನು ನೀಡಿತು. ಆರಂಭದಲ್ಲಿ ಇದ್ದ ಉತ್ಸಾಹ ಮುಂದಿನ ದಿನದಲ್ಲಿ ಉಳಿಯಲಿಲ್ಲ.
 
ಮೊದಲ ಎರಡು ವರ್ಷ ಡಾ.ಗೋವಿಂದರಾಜು ಅವರು ಪೀಠದ ಸಂಚಾಲಕರಾಗಿದ್ದರು. ಸಾಕಷ್ಟು ರಾಜ್ ಕೃತಿಗಳ ಸಂಗ್ರಹ ಕಾರ್ಯ ಈ ಪೀಠದಿಂದ ನಡೆದಿದೆ. ಈಗ ಕತೆಗಾರ ಡಾ.ಮೊಗಳ್ಳಿ ಗಣೇಶ್ ಅವರು ಪೀಠದ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಯಾವುದೇ ವಿಶ್ವವಿದ್ಯಾಲಯವಾದರೂ ಹಣಕಾಸಿನ ಅಡಚಣೆ ಇದ್ದರೆ ಯಾವುದೇ ಕೆಲಸಕಾರ್ಯ ಮಾಡಲಾಗುವುದಿಲ್ಲ.
 
15 ಲಕ್ಷ ರೂಪಾಯಿ ಮೂಲನಿಧಿಯನ್ನಿಟ್ಟುಕೊಂಡು ಯಾವುದಾದರೂ ಅಧ್ಯಯನ ಮಾಡಲು ಸಾಧ್ಯವೇ? ಮಠಗಳಿಗೆ, ದೇವಸ್ಥಾನಗಳಿಗೆ ಕೋಟಿಕೋಟಿ ರೂಪಾಯಿಗಳನ್ನು ಬಾಚಿ ಬಾಚಿ ಕೊಡುವ ಸರ್ಕಾರ, ರಾಜ್‌ಕುಮಾರ್ ಅಧ್ಯಯನ ಪೀಠಕ್ಕೆ ಹಣ ಕೊಡುವ ವಿಷಯದಲ್ಲಿ ಜಿಪುಣತನ ಪ್ರದರ್ಶಿಸುತ್ತಿದೆ. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ರಾಜ್‌ಕುಮಾರ್ ಅವರ ಹೆಸರಿನ ಮೂಲಕ ಚಿತ್ರೋದ್ಯಮದ ಶೈಕ್ಷಣಿಕ ಅಧ್ಯಯನ ನಡೆಸುವ ಪ್ರಯತ್ನ ಆಗಬೇಕು.

ರಾಜ್‌ಕುಮಾರ್ ಅವರ ಹಳೆಯ ಚಿತ್ರಗಳನ್ನು ಈಗಲೂ ಟೀವಿ ಚಾನಲ್‌ಗಳಲ್ಲಿ ನೋಡುವವರು, ‘ಆಗ ಎಂತಹ ಚಿತ್ರಗಳು ಬರುತ್ತಿದ್ದವು, ಈಗ ಬರುವ ಚಿತ್ರಗಳನ್ನು ನೋಡಕ್ಕಾಗಲ್ಲಪ್ಪ’ ಎನ್ನುತ್ತಾರೆ. ರಾಜ್‌ಕುಮಾರ್ ಅವರ ಕಾಲದ ಚಿತ್ರರಂಗದ ಸ್ಥಿತಿಗತಿ, ರಾಜ್‌ಕುಮಾರ್ ನಂತರದ ಚಲನಚಿತ್ರೋದ್ಯಮದ  ಸ್ಥಿತಿಗತಿ ಬಗ್ಗೆಯೇ ಒಂದು ಅಧ್ಯಯನ ಆಗಬೇಕಾಗಿದೆ.
 
ರಾಜ್‌ಕುಮಾರ್ ಅವರ ಬಗ್ಗೆ ಈಗ ಬರುತ್ತಿರುವ ಎಲ್ಲ ಪುಸ್ತಕಗಳು ರಾಜ್‌ಕುಮಾರ್ ಅವರ ಭವ್ಯ ವ್ಯಕ್ತಿತ್ವವನ್ನು ಆರಾಧಿಸುವ ಮನೋಭಾವವನ್ನೇ ಹೊಂದಿವೆ. ಚಿತ್ರೋದ್ಯಮವನ್ನು ಅವರು ಕಟ್ಟಿಕೊಟ್ಟ ಕತೆ, ಕುಸಿಯುತ್ತಿದ್ದ ಕನ್ನಡ ಚಿತ್ರರಂಗವನ್ನು ಅವರು ತಮ್ಮದೇ ಹೆಗಲ ಮೇಲೆ ಹೊತ್ತು, ಜನ ಚಿತ್ರಮಂದಿರಕ್ಕೆ ಬರುವಂತೆ ಮಾಡಿದ್ದು ಇವೆಲ್ಲಾ ಇತಿಹಾಸವನ್ನೂ ಅವಲೋಕಿಸಬೇಕು.

 ಪರಭಾಷಾ ಹಿಡಿತದಲ್ಲಿದ್ದ ಚಿತ್ರರಂಗದ ಸ್ವಾಮ್ಯವನ್ನು ತಪ್ಪಿಸಿ, ಅವನ್ನು ಮತ್ತೆ ಕನ್ನಡದ ವಶಕ್ಕೆ ತಂದುಕೊಟ್ಟದ್ದು, ಡಬ್ಬಿಂಗ್ ವಿರುದ್ಧ ಹೋರಾಡಿ ಅದು ಕಾಲಿಡದಂತೆ ನೋಡಿಕೊಂಡದ್ದು, ಬೇರೆ ಭಾಷಾ ಚಿತ್ರಗಳಲ್ಲಿ ಅಭಿನಯಿಸಲಾರೆ ಎಂದು ಶಪಥಮಾಡಿ ಕನ್ನಡ ನೆಲದಲ್ಲೇ ಚಿತ್ರರಂಗವನ್ನು ಬೆಳೆಸಿದ್ದು, ನಿರ್ಮಾಪಕ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರದಂತೆ ನೋಡಿಕೊಳ್ಳುತ್ತಿದ್ದುದು ಇವೆಲ್ಲವೂ ಕನ್ನಡ ಚಿತ್ರರಂಗದ ಒಳಿತಿಗಾಗಿ ಮೂಡಿದ ಸೂತ್ರಗಳು.
 
ಕತೆ ಆಯ್ಕೆಯಲ್ಲೂ ಅಷ್ಟೇ, ಭಾಷೆಯ ಬಳಕೆಯಲ್ಲೂ ಅಷ್ಟೇ, ರಾಜ್‌ಕುಮಾರ್ ಅವರದು ಸಂಸ್ಕೃತಿಯ ಆಯ್ಕೆ. ಪ್ರೇಕ್ಷಕರೂ ಅದೇ ಶಿಸ್ತನ್ನು ಈಗಲೂ ಬಯಸುತ್ತಾರೆ. ಪುನೀತ್ ರಾಜ್‌ಕುಮಾರ್ ಅವರ ಚಿತ್ರವೊಂದಕ್ಕೆ ‘ಪೋಲಿ’ ಎಂದು ಹೆಸರಿಟ್ಟಾಗ ತೀವ್ರ ಆಕ್ಷೇಪ ಬಂದದ್ದು ಈ ಹಿನ್ನೆಲೆಯಿಂದಲೇ. ಈ ಆಕ್ಷೇಪಗಳಿಗೆ ಬೆಲೆಕೊಟ್ಟು, ಚಿತ್ರದ ಹೆಸರನ್ನು ‘ರಾಜ್’ ಎಂದು ಬದಲಿಸಿದ್ದು ಹಳೆಯ ಕತೆ.
 
ಆದರೆ ಚಿತ್ರರಂಗದ ಈ ರೀತಿಯ ಎಲ್ಲ ನಡೆಗಳಲ್ಲಿ ರಾಜ್‌ಕುಮಾರ್ ಅವರ ‘ಪ್ರಭಾವ’ ಎದ್ದು ಕಾಣುತ್ತಿರುತ್ತದೆ. ಡಬ್ಬಿಂಗ್ ಚಳವಳಿ ಬಂದಾಗ, ಚಿತ್ರಮಂದಿರದ ಸಮಸ್ಯೆ ಬಂದಾಗ, ಪರಭಾಷಾ ಚಿತ್ರಗಳ ಹಾವಳಿ ಜಾಸ್ತಿಯಾದಾಗ, ನಟ, ನಟಿಯರ ದೂರು, ಜಗಳ ಮುಂತಾದ ಘಟನೆಗಳಾದಾಗ ಕನ್ನಡ ಚಿತ್ರರಂಗಕ್ಕೆ ಒಬ್ಬ ನಾಯಕನಿಲ್ಲ, ರಾಜ್‌ಕುಮಾರ್ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಎಲ್ಲರೂ ಸಾಮಾನ್ಯವಾಗಿ ಹೇಳುತ್ತಿರುತ್ತಾರೆ.ಚಿತ್ರರಂಗದಲ್ಲಿ ಅಂತಹ ಕೊರತೆ ಐದು ವರ್ಷಗಳಿಂದ  ಕಾಡುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT