ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋತಿಯ ಕಥೆ ನಿಜವೇ ಆಯಿತು!

Last Updated 6 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕಥೆ ನಿಜವೇ ಆಯಿತು. ನೀರಿನಲ್ಲಿ ಮುಳುಗುತ್ತಿದ್ದ ಕೋತಿ ಮೊದಲು ತನ್ನ ಮಗುವನ್ನು ಕಂಕುಳಲ್ಲಿ, ಆಮೇಲೆ ಹೆಗಲ ಮೇಲೆ ನಂತರ ತಲೆಯ ಮೇಲೆ ಇಟ್ಟುಕೊಂಡಿತ್ತು. ತಾನೇ ಯಾವಾಗ ಮುಳುಗಬಹುದು ಎಂದು ಅದಕ್ಕೆ ಅನಿಸಿತೋ ತಕ್ಷಣ ಮಗುವನ್ನು ಕೆಳಗೆ ಕೂಡ್ರಿಸಿ ಅದರ ಮೇಲೆ ಕುಳಿತುಬಿಟ್ಟಿತು.

ಇದೆಲ್ಲ ಕ್ರೂರ. ಆದರೆ, ಕಥೆಯಲ್ಲಿ ಆಗುವುದು ಜೀವನದಲ್ಲಿ ಆಗುವುದಿಲ್ಲವೇ? ಜೀವನ ಇನ್ನೂ ಕ್ರೂರ. ಕರ್ನಾಟಕ ಜನತಾ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಜತೆಗಾರರು ಇದನ್ನೇ ಮಾಡಿದ್ದಾರೆ. ಹೀಗೆಯೇ ಆಗಬಹುದು ಎಂದು ಊಹಿಸಿ ಇದೇ ಕಥೆಯನ್ನು ಉದಾಹರಿಸಿ ನಾನು ಅಂಕಣ ಬರೆದಿದ್ದೆ. (ನಾಲ್ಕನೇ ಆಯಾಮ - ನವೆಂಬರ್ 4, 2012).

ಅವರೆಲ್ಲ ಕೊನೆ ಗಳಿಗೆಯವರೆಗೆ ಯಡಿಯೂರಪ್ಪ ಜತೆಗೇ ಇದ್ದರು; ಅಥವಾ ಜತೆಗೇ ಇದ್ದಂತೆ ನಟಿಸುತ್ತಿದ್ದರು. ಇರುವವರೆಗೆ ಯಡಿಯೂರಪ್ಪ ಬಲದಿಂದ ಸಿಗುವ ಅಧಿಕಾರವನ್ನು ಅನುಭವಿಸಿದರು. ಪಕ್ಷವನ್ನು ಬ್ಲ್ಯಾಕ್‌ಮೇಲ್ ಮಾಡಿದರು. ಕೊನೆಯಲ್ಲಿ, ಕಬ್ಬನ್ನು ಜಗಿದು ತಿಂದು ರಸವನ್ನೆಲ್ಲ ಹೀರಿದ ಮೇಲೆ ಸಿಪ್ಪೆಯನ್ನು ಉಗುಳಿ ಹೊರಟು ಹೋದರು. ಅವರು ಮಾಡಿದ್ದು ತಪ್ಪೇ? ತಪ್ಪು ಎಂದು ಹೇಳುವುದು ಕಷ್ಟ. ವ್ಯಕ್ತಿ ನಿಷ್ಠೆ ಮತ್ತು ಪಕ್ಷ ನಿಷ್ಠೆ ನಡುವೆ ತೂಗುಯ್ಯಾಲೆ ಆಡುತ್ತಿದ್ದ ಅವರು ಪಕ್ಷ ನಿಷ್ಠೆಯನ್ನು ಆರಿಸಿಕೊಂಡಿದ್ದಾರೆ.

ಅವರಿಗೆಲ್ಲ ಪಕ್ಷ ನಿಷ್ಠೆ ಎಂಬುದು ಇತ್ತೇ ಎಂಬುದು ಮೂಲಭೂತ ಪ್ರಶ್ನೆ. ಏಕೆಂದರೆ ಅವರು ಮೂಲ ಬಿಜೆಪಿಗೆ ಸೇರಿದವರಲ್ಲ. ಅದರ ಸಿದ್ಧಾಂತಕ್ಕೆ ಬದ್ಧರಾದವರಲ್ಲ. ಹೊರಗಿನಿಂದ ವಲಸೆ ಬಂದವರು. ವಲಸೆ ಬಂದುದು ಸಿದ್ಧಾಂತವನ್ನು ಒಪ್ಪಿಕೊಂಡು ಅಲ್ಲ.

ಅಧಿಕಾರಕ್ಕಾಗಿ ಬಂದರು. ಅವರನ್ನು ಕರೆದುಕೊಂಡು ಬಂದವರು ಆ ಭರವಸೆಯನ್ನು ಕೊಟ್ಟೇ ಕರೆದುಕೊಂಡು ಬಂದಿದ್ದರು. ಈಗ ಅಧಿಕಾರ ಅನುಭವಿಸಿ ಆಗಿತ್ತು. ಇನ್ನೂ ಇಲ್ಲಿಯೇ ಇರಬೇಕೇ? ಮನಸ್ಸಿನಲ್ಲಿ ದ್ವಂದ್ವ. ಅಧಿಕಾರ ಎಲ್ಲಿ ಇರಬಹುದು ಎಂದು ಅವರಿಗೆ ಅನಿಸತೊಡಗಿತ್ತು. ಟಿಕೆಟ್ ಸಿಗುವ ಭರವಸೆ ಇದ್ದರೆ ಅವರು ಅಲ್ಲಿಗೇ ಹೋಗಿ ಬಿಡುತ್ತಿದ್ದರು. ಆದರೆ, ಅವರು ತಟ್ಟಿದ, ಅಧಿಕಾರಕ್ಕೆ ಬರಬಹುದಾದ ಬೇರೆ ಪಕ್ಷದ, ಬಾಗಿಲು ಬಂದ್ ಆಗಿದ್ದರಿಂದ ಸದ್ಯಕ್ಕೆ ಬಿಜೆಪಿಯ ಪಕ್ಷ ನಿಷ್ಠೆಯನ್ನು ಉಳಿಸಿಕೊಂಡಿದ್ದಾರೆ.

ಇಲ್ಲವಾದರೆ ಅಲ್ಲೂ ಇಲ್ಲ ಎಂದು ಆಗಿಬಿಡುತ್ತಿದ್ದರು. ರಾಜಕೀಯದಲ್ಲಿ ಗೆಲುವು ಮುಖ್ಯ. ಗೆಲುವಿಗೆ ವ್ಯಕ್ತಿಗಿಂತ ಪಕ್ಷ ಮುಖ್ಯ.
ಇವರ ಪಕ್ಷನಿಷ್ಠೆ ಎಂಥದು ಎಂದು ಬಿಜೆಪಿಯ ಅಗ್ರ ನಾಯಕರಿಗೆ ಗೊತ್ತಿಲ್ಲ ಎಂದೇನೂ ಅಲ್ಲ. ಅವರೇ ಆಮಿಷವೊಡ್ಡಿ ಕರೆದುಕೊಂಡು ಬಂದವರಲ್ಲವೇ? ಐದು ವರ್ಷ ಅಧಿಕಾರ ಮಾಡಿದ ಆ ಪಕ್ಷಕ್ಕೆ ಈಗ ಎಲ್ಲ 224 ಕ್ಷೇತ್ರಗಳಲ್ಲಿ ಹೂಡಲು ಅಭ್ಯರ್ಥಿಗಳು ಸಿಗುತ್ತಿಲ್ಲ.

ಎಂಥ ದೈನೇಸಿ ಸ್ಥಿತಿ? ಬೇರೆ ಪಕ್ಷದಿಂದ ಬಂದ ಇವರನ್ನೆಲ್ಲ ಉಳಿಸಿಕೊಂಡರೆ ಕನಿಷ್ಠ ಅಷ್ಟು ಸೀಟುಗಳಲ್ಲಿಯಾದರೂ ಪ್ರಬಲ ಸ್ಪರ್ಧೆ ಹೂಡಲು ಸಾಧ್ಯ. ಹೇಗೂ ಈ ಸಾರಿ ಅಧಿಕಾರಕ್ಕೆ ಬರುವುದಿಲ್ಲ. ಆದರೆ ಎರಡನೇ ಸ್ಥಾನದಲ್ಲಿ ಇರಲೇಬೇಕು. ಅದು ಮುಂದಿನ ಸಾರಿ ಅಧಿಕಾರಕ್ಕೆ ಬರಲು ಏಣಿ. ತೀರಾ ಮೂರನೇ ಸ್ಥಾನಕ್ಕೆ ಹೋಗಿಬಿಟ್ಟರೆ ಮೂರು ಕಾಸಿಗೆ ಮಾನ ಹರಾಜು ಎಂದು ಬಿಜೆಪಿ ಅಂದುಕೊಂಡಿದೆ. ನಾಯಿ ಹಸಿದಿತ್ತು. ಅನ್ನ ಹಳಸಿತ್ತು ಎನ್ನುವಂಥ ಸಂದರ್ಭ ಇದು!

ಬಿಜೆಪಿಯಲ್ಲಿ ವ್ಯಕ್ತಿ ನಿಷ್ಠೆಯ ಪ್ರವರನ್ನು ಹುಟ್ಟಿ ಹಾಕಿದ ಯಡಿಯೂರಪ್ಪನವರು ಬಿಕ್ಕಟ್ಟು ಸೃಷ್ಟಿಸಿದ್ದಾಗ ಬಿಜೆಪಿಯಲ್ಲಿ ವೈಚಾರಿಕ ಮತ್ತು ವ್ಯಾವಹಾರಿಕ ಸಂಘರ್ಷ ನಡೆದಿದೆ ಎಂಬ ಬಣ್ಣ ಕಟ್ಟಲಾಗಿತ್ತು. ಯಡಿಯೂರಪ್ಪ ಜತೆಗೆ ವಲಸೆ ಬಂದವರೆಲ್ಲ ಹೊರಟು ಹೋಗಿ ವೈಚಾರಿಕ ಬಿಜೆಪಿ ಉಳಿಯುತ್ತದೆ ಎಂದೂ ಕನಸು ಕಾಣಲಾಗಿತ್ತು. ಆದರೆ, ವೈಚಾರಿಕ ಬಿಜೆಪಿಯನ್ನು ಇಟ್ಟುಕೊಂಡರೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆಯೇ ತಿಳಿದಿದ್ದ ಯಡಿಯೂರಪ್ಪ ವ್ಯಾವಹಾರಿಕ ಬಿಜೆಪಿಯನ್ನು ಹುಟ್ಟು ಹಾಕಿದ್ದರು.

ಈಗ ಯಡಿಯೂರಪ್ಪ ಪಕ್ಷ ಬಿಟ್ಟು ಹೋದ ಮೇಲೆಯೂ ವೈಚಾರಿಕ ಬಿಜೆಪಿಗೆ ವ್ಯಾವಹಾರಿಕ ಬಿಜೆಪಿಯ ನಂಟು ಕಡಿದುಕೊಳ್ಳಲು ಸಾಧ್ಯವಾಗಿಲ್ಲ. ಒಂದು ಸಾರಿ ಬಿಜೆಪಿಯು ಎಲ್ಲ 224 ಜನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಅದರಲ್ಲಿ ವ್ಯಾವಹಾರಿಕ ಬಿಜೆಪಿಯ ಮೇಲುಗೈ ಆದರೆ ಅಚ್ಚರಿಯೇನೂ ಇಲ್ಲ. ಒಮ್ಮೆ ಅಧಿಕಾರ ಅನುಭವಿಸಿದ ಮೇಲೆ ಅದರ ಆಸೆ ತೊರೆಯುವುದು ಬಹಳ ಕಷ್ಟ. ಸಾಧನ ಎಂಥದಾದರೂ ಇರಲಿ, ಗುರಿ ಮುಖ್ಯ ಎನ್ನುವ ಕಾಲ ಇದು!

ಇದು ಬರೀ ಬಿಜೆಪಿಗೆ ಆದ ನಷ್ಟವಲ್ಲ. ಬಿಜೆಪಿಯಿಂದ ಹೊರಗೆ ಹೋಗಿರುವ ಯಡಿಯೂರಪ್ಪ ಅವರಿಗೂ ಆಗಿರುವ ನಷ್ಟ. ಹಾಗೆ ನೋಡಿದರೆ ಅವರಿಗೇ ಹೆಚ್ಚಿನ ನಷ್ಟ. ಅವರ ಜತೆಗೆ ಬಿಜೆಪಿಯಿಂದ ಎಷ್ಟು ಮಂದಿ ಶಾಸಕರು, ಸಚಿವರು ಬರುತ್ತಾರೆ ಎಂಬುದರ ಮೇಲೆಯೇ ಅವರ ಬಲವೂ ನಿಂತಿತ್ತು. ಈ ಸಂಖ್ಯೆ ಹೆಚ್ಚಿದಷ್ಟೂ ಯಡಿಯೂರಪ್ಪ ಅವರ ಶಕ್ತಿ ತೋರಿಕೆಗಾದರೂ ಹೆಚ್ಚುತ್ತಿತ್ತು.

ಬಿಜೆಪಿಗೆ ಅಷ್ಟರ ಮಟ್ಟಿಗೆ ಕಷ್ಟ ಆಗುತ್ತಿತ್ತು. ಅಧಿಕಾರ ನಡೆಸಿರುವ ಒಂದು ಪಕ್ಷಕ್ಕೇ 224 ಅಭ್ಯರ್ಥಿಗಳು ಸಿಗದೇ ಇದ್ದರೆ ಈಗಷ್ಟೇ ಪಕ್ಷ ಕಟ್ಟಿರುವ ಯಡಿಯೂರಪ್ಪ ಅವರಿಗೆ ಎಲ್ಲ ಕಡೆ ಕಣಕ್ಕೆ ಇಳಿಸಲು ಅಭ್ಯರ್ಥಿಗಳು ಸಿಕ್ಕು ಬಿಡುತ್ತಾರೆಯೇ? ಯಡಿಯೂರಪ್ಪ ಅವರ ಕನಸೇನೂ ಸಣ್ಣದಲ್ಲ. ಅವರಿಗೆ ರಾಜ್ಯದಲ್ಲಿ ಸರ್ಕಾರವನ್ನೇ ಮಾಡಬೇಕಾಗಿದೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಮತ್ತೆ ತಾವೇ ಕೂಡ್ರಬೇಕಾಗಿದೆ. ಯಡಿಯೂರಪ್ಪ ಅವರು ಹಾಗೆಯೇ ಯೋಚನೆ ಮಾಡಲಿ. ಆದರೆ, ಅವರ ಆಪ್ತರ ಪ್ರಕಾರ ಯಡಿಯೂರಪ್ಪ ಇಲ್ಲದೇ ಮುಂದಿನ ಸರ್ಕಾರ ರಚನೆಯಾಗಬಾರದು. ಈಗ ಅದಾದರೂ ಸಾಧ್ಯವಾಗುತ್ತದೆಯೇ?

ಬಳ್ಳಾರಿಯಲ್ಲಿ ಬಿಜೆಪಿಗೇ ಅಭ್ಯರ್ಥಿಗಳು ಇಲ್ಲ. ಇನ್ನು ಕೆ.ಜೆ.ಪಿಗೆ ಸಿಗುತ್ತಾರೆಯೇ? ಯಡಿಯೂರಪ್ಪ ಅಂದುಕೊಂಡುದು ಬೇರೆಯೇ ಇತ್ತು. ಯಾವ ಮುಖ್ಯಮಂತ್ರಿ ರಾಜೀನಾಮೆ ಕೊಡುವಾಗ ಎಪ್ಪತ್ತು ಮಂದಿ ಶಾಸಕರು ಅವನ ಜತೆಗೆ ರಾಜಭವನಕ್ಕೆ ಮೆರವಣಿಗೆ ಹೋಗಿದ್ದರು ಎಂದೇ ಅವರು ಮತ್ತೆ ಮತ್ತೆ ಕೇಳುತ್ತಿದ್ದರು. ನಮ್ಮ ಜತೆಗೆ ಇರುವವರು ನಮ್ಮ ಜತೆಗೇ ಇರುವುದಿಲ್ಲ ಎಂದು ಯಡಿಯೂರಪ್ಪ ಅವರಿಗೆ ತಿಳಿಯಬೇಕಾದರೆ ವಿಧಾನಸಭೆಗೆ ಚುನಾವಣೆಯೇ ಬರಬೇಕಾಯಿತು!

ಎಪ್ಪತ್ತು ಮಂದಿ ಶಾಸಕರು ತಮ್ಮ ಜತೆಗೆ ಬರುತ್ತಾರೆ. ಅವರೆಲ್ಲ ಗೆಲ್ಲುವ ಅಭ್ಯರ್ಥಿಗಳು. ಅವರನ್ನೆಲ್ಲ ತಮ್ಮ ಪಕ್ಷದಿಂದ ಕಣಕ್ಕೆ ಇಳಿಸಿ, ಗೆಲ್ಲಿಸಿ ತಮಗೆ ದ್ರೋಹ ಮಾಡಿದವರಿಗೆ ಪಾಠ ಕಲಿಸಬಹುದು ಎಂದು ಯಡಿಯೂರಪ್ಪ ಲೆಕ್ಕ ಹಾಕಿದ್ದರು. ರಾಜಕೀಯದಲ್ಲಿ ತಾವು ಹಾಕಿದ ಲೆಕ್ಕ ಯಾವಾಗಲೂ ತಪ್ಪಾಗಿಲ್ಲ ಎನ್ನುತ್ತಾರೆ ಯಡಿಯೂರಪ್ಪ. ಯಾರೇ ಆಗಲಿ ಯಾವಾಗಲೂ ಸರಿಯಾಗಿಯೇ ಲೆಕ್ಕ ಹಾಕಲು ಸಾಧ್ಯವಿಲ್ಲ. ಈಗ ಏನಾಯಿತು? ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತ ಇದ್ದರೆ ಗೋದಿಯ ಲೆಕ್ಕ ಯಾರು ಕೊಡುತ್ತಾರೆ?
ಯಡಿಯೂರಪ್ಪ ಅವರಿಗೆ ವಿಶ್ವಾಸಘಾತ ಆಯಿತೇ? ಆಗಿರಬಹುದು. ಆದರೆ, ಅವರು ಹಾಗೆ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ.

ಏಕೆಂದರೆ ಅವರ ಮಗ ಬಿ.ವೈ.ರಾಘವೇಂದ್ರ ಇನ್ನೂ ಬಿಜೆಪಿಯಲ್ಲಿಯೇ ಇದ್ದಾರೆ. ಮಗ ಸುರಕ್ಷಿತವಾಗಿ ಬಿಜೆಪಿಯಲ್ಲಿ ಇರಲಿ. ಪ್ರಭಾಕರ ಕೋರೆ, ಉಮೇಶ ಕತ್ತಿ, ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಅವರೆಲ್ಲ ತಮ್ಮ ಜತೆಗೆ ಬರಲಿ ಎಂದು ಯಡಿಯೂರಪ್ಪ ಬಯಸುವುದು ಅಪ್ರಾಮಾಣಿಕತೆ ಆಗುತ್ತದೆ. ಕೋರೆಯವರು ರಾಜ್ಯಸಭೆ ಸೀಟನ್ನು, ಕತ್ತಿಯವರು ತಮ್ಮ ಸೋದರನ ಸಂಸದ ಸ್ಥಾನವನ್ನು ಏಕೆ ತ್ಯಾಗ ಮಾಡುತ್ತಾರೆ?
 

ಕತ್ತಿ, ಬೊಮ್ಮಾಯಿ, ಸೋಮಣ್ಣ ಅವರಿಗೆ ಯಡಿಯೂರಪ್ಪ ಜತೆಗೆ ಹೋಗುವುದು ಅಪಾಯಕಾರಿ ಎನಿಸುತ್ತ ಇರಬಹುದು. ಯಡಿಯೂರಪ್ಪ ಅವರ ಬಗಲ ಬಂಟನಂತೆಯೇ ಇದ್ದ ಮುರುಗೇಶ ನಿರಾಣಿಯವರಿಗೇ ಹಾಗೆ ಅನಿಸುತ್ತ ಇರಬಹುದಾದರೆ ಕತ್ತಿ, ಬೊಮ್ಮಾಯಿ, ಸೋಮಣ್ಣ ಅವರಿಗೆ ಏಕೆ ಅನಿಸಬಾರದು? ಅಪಾಯ ಎನಿಸುವ ಕಡೆ ಯಾರಾದರೂ ಏಕೆ ಹೋಗುತ್ತಾರೆ?

ರಾಘವೇಂದ್ರ ವಯಸ್ಕರು. ಅವರು ತಮಗೆ ಬೇಕಾದ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರು ಎಂದು ಹೇಳಬಹುದು. ಆದರೆ, ಅದು ನಿಜವೇ? ರಾಘವೇಂದ್ರ ಕೆ.ಜೆ.ಪಿ ಜತೆಗೆ ಯಾವ ಸಂಬಂಧವನ್ನೂ ಇಟ್ಟುಕೊಂಡಿಲ್ಲವೇ? ಕೆ.ಜೆ.ಪಿ ಮಾತ್ರವಲ್ಲ ಬಿಜೆಪಿ ಕೂಡ ಇಂಥ ದ್ವಂದ್ವಗಳನ್ನು ಉದ್ದಕ್ಕೂ ಅನುಭವಿಸಿಕೊಂಡು ಬಂದಿದೆ. ಬಳ್ಳಾರಿಯಲ್ಲಿ ಈಗಲೂ ಶ್ರೀರಾಮುಲು ಅವರ ತಂಗಿ ಜೆ.ಶಾಂತಾ ಬಿಜೆಪಿಯಲ್ಲಿಯೇ ಇದ್ದಾರೆ.

ಶ್ರೀರಾಮುಲು ಅವರ ರಕ್ತ ಸಂಬಂಧಿ ರಾಯಚೂರು ಸಂಸದ ಸಣ್ಣ ಫಕೀರಪ್ಪ ಅವರೂ ಅಷ್ಟೇ. ಅವರು ದೆಹಲಿಯಲ್ಲಿ ಬಿಜೆಪಿ ಸಂಸದರು. ಬಳ್ಳಾರಿಗೆ ಬಂದರೆ ಬಿಎಸ್‌ಆರ್ ಕಾಂಗ್ರೆಸ್ ಧುರೀಣರು. ಅದೆಲ್ಲ ಏಕೆ? ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಕೂಡ ಈಗಲೂ ಬಿಜೆಪಿಯಲ್ಲಿಯೇ ಇದ್ದಾರೆ. ನಿಜವೇ? ಇವರೆಲ್ಲ ಬಿಜೆಪಿಯಲ್ಲಿಯೇ ಇದ್ದಾರೆಯೇ? ಅಧಿಕಾರ ಉಳಿಸಿಕೊಳ್ಳಲು ಪಕ್ಷವಾಗಿ ಬಿಜೆಪಿ ಮಾಡಿಕೊಂಡ ರಾಜಿ ಒಂದೇ ಎರಡೇ? ನಾಯಕರಾಗಿ ಬಿಜೆಪಿಯಲ್ಲಿ ಇದ್ದವರು ಮಾಡಿಕೊಂಡ ರಾಜಿ ಒಂದೇ ಎರಡೇ?

ರಾಜಕೀಯ ಎಂದರೆ ಹೀಗೆಯೇ ಇರುತ್ತದೆ. ಎಲ್ಲರೂ ತಾವು ಮುಳುಗುವುದಿಲ್ಲ ಎನ್ನುವವರೆಗೆ ಇನ್ನೊಬ್ಬರನ್ನು ರಕ್ಷಿಸಲು ಹೋಗುತ್ತಾರೆ. ತಾವೇ ಮುಳುಗುತ್ತೇವೆ ಎನಿಸಿದಾಗ...? ಮತ್ತೆ ಮತ್ತೆ ಕೋತಿಯ ಕಥೆ ಏಕೆ ಹೇಳುವುದು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT