ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಪುಕ್ಕ

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಕಥೆಯನ್ನು ಆತ್ಮೀಯರಾದ  ಸಂಧ್ಯಾ ಪೈ ಅವರು ಬರೆದದ್ದು. ನನಗೆ ಬಹಳ ಪ್ರಿಯವಾದದ್ದು. ಅವನೊಬ್ಬ ಸಾಮಾನ್ಯ. ಆದರೆ, ಅಲ್ಲಲ್ಲಿ ಒಂದಷ್ಟು ಓದಿಕೊಂಡಿದ್ದ. ಸಿಕ್ಕವರ ಮುಂದೆ ಆತ್ಮ, ಪರಮಾತ್ಮ ಎಂದೆಲ್ಲ ಮಾತನಾಡುತ್ತಿದ್ದ. ತಪ್ಪು ತಪ್ಪು ಶ್ಲೋಕಗಳನ್ನು ಹೇಳಿ ತಾನು ಜ್ಞಾನಿ ಎಂಬ ಭ್ರಮೆಯನ್ನು ಸೃಷ್ಟಿ ಮಾಡುತ್ತಿದ್ದ.

ಜನ ಇವನ ಮಾತಿಗೆ ಮೆಚ್ಚಿಯೋ, ಕನಿಕರ­ದಿಂದ ನೋಡಿದ್ದರಿಂದಲೋ ಇವನ ಪರಿವಾರದ ಜೀವನ ನಡೆಯುತ್ತಿತ್ತು. ಅವನು ಮಾತಿಗೊಮ್ಮೆ ಭಗವಂತ ಎನ್ನುತ್ತ ತನ್ನನ್ನು ತಾನೇ ತ್ಯಾಗಿ ಸಂತ ಎಂದು ಭಾವಿಸತೊಡಗಿದ್ದ. ಒಂದು ದಿನ ಮನೆಗೆ ಬಂದಾಗ ಭಾರಿ ಪರಿಮಳ ತೂರಿ ಬಂತು. ಹೆಂಡತಿ ಕೋಳಿಸಾರು ಮಾಡಿದ್ದಾಳೆ. ‘ಕೋಳಿ ಎಲ್ಲಿಂದ ಬಂತು’ ಎಂದು ಕೇಳಿದ. ಆಕೆ, ‘ಯಾರದೋ ಗೊತ್ತಿಲ್ಲ.

ಮನೆಯ ಹತ್ತಿರ ಸುತ್ತಾಡುತ್ತಿತ್ತು. ಅದನ್ನು ಹಿಡಿದು­ಕೊಂಡು ಸುತ್ತಲಿನ ಹತ್ತು ಮನೆಗಳಲ್ಲಿ ಕೇಳಿಕೊಂಡು ಬಂದೆ. ಅದು ತಮ್ಮದಲ್ಲ ಎಂದರು. ಆಯ್ತು, ನೀವೇ ಹೇಳುತ್ತೀ­ರಲ್ಲ, ಭಗವಂತ ನಮ್ಮ ಇಚ್ಛೆಗಳನ್ನು ಪೂರೈಸುತ್ತಾನೆಂದು? ಹಾಗೆಯೇ ದೇವರು ಕರುಣೆಯಿಂದ ಕಳುಹಿಸಿರ­ಬೇಕು ಎಂದುಕೊಂಡೆ. ಅದೂ ಅಲ್ಲದೇ ಕೋಳಿಸಾರು ತಿನ್ನದೇ ಅದೆಷ್ಟು ದಿನವಾಗಿತ್ತಲ್ಲ?’ ಎಂದಳು. ಈತ ‘ಭಗವಂತ, ಇದು ಪಾಪ.

ಮತ್ತೊಬ್ಬರ ಕೋಳಿಯನ್ನು ನಾನು ತಿನ್ನುವುದು ಪಾಪ, ಆದ್ದರಿಂದ ಕೋಳಿ ಮಾಂಸವನ್ನು ನಾನು ತಿನ್ನಲಾರೆ. ಆದರೆ ಅದಕ್ಕೆ ಬಳಸಿದ ಮಸಾಲೆ ನಮ್ಮದೇ ಆದ್ದರಿಂದ ನನಗೆ ರಸವನ್ನು ಮಾತ್ರ ಬಡಿಸು. ಅದನ್ನೇ ಅನ್ನಕ್ಕೆ ಕಲಿಸಿಕೊಂಡು ತಿಂದುಬಿಡುತ್ತೇನೆ’ ಎಂದು ಕುಳಿತ. ಹೆಂಡತಿ ದೊಡ್ಡ ಸೌಟಿನಿಂದ ಬಡಿಸುವಾಗ ಎಲೆಯಲ್ಲಿ ನಾಲ್ಕು ಮಾಂಸದ ತುಂಡುಗಳು ಬಿದ್ದವು. ‘ಭಗವಂತಾ, ಇದೇ ನಿನ್ನ ಇಚ್ಛೆಯೇ? ಹಾಗಿದ್ದರೆ ನೀನೇ ಕೃಪೆಯಿಂದ ಕೊಟ್ಟ ಮಾಂಸವನ್ನು ತಿಂದೇ ಬಿಡುತ್ತೇನೆ’ ಎಂದು ಚೆನ್ನಾಗಿ ತಿಂದು ತೇಗಿದ.

ಮರುದಿನ ಎದ್ದಾಗ ಬೆನ್ನು ಕೆರೆಯುತ್ತಿತ್ತು. ಅದು ತಡೆಯಲಾರದ ಕೆರೆತ. ಹೆಂಡತಿ ಇವನ ಬೆನ್ನು ನೋಡಿ ಹೌಹಾರಿದಳು. ಬೆನ್ನಿನ ತುಂಬೆಲ್ಲ ಕೋಳಿಯ ಪುಕ್ಕಗಳು! ಭಗವಂತಾ ನನ್ನಂತಹ ಸಂತನಿಗೆ ಇದೇನು ಪರೀಕ್ಷೆ ತಂದೆಯಪ್ಪ ಎಂದುಕೊಳ್ಳುತ್ತ ಊರ ಹೊರಗಿದ್ದ ಸಂತರ ಬಳಿಗೆ ಹೋದ. ತನ್ನ ಸಮಸ್ಯೆ ಹೇಳಿಕೊಂಡ. ನಿಮ್ಮದಲ್ಲದ ಕೋಳಿಯನ್ನು ತಿಂದದ್ದಕ್ಕೆ ಹೀಗಾಗಿದೆ. ನೀವು ಮಾಡಿದ್ದು ಕೀಳು ಕೆಲಸ. ಇದಕ್ಕೆ ಒಂದೇ ಉಪಾಯ. ಇದಕ್ಕಿಂತ ಹೆಚ್ಚು ಕೀಳು ಕೆಲಸಮಾಡಿದವರ ಮನೆಯಲ್ಲಿ ಊಟಮಾಡಿದರೆ ಈ ಪುಕ್ಕಗಳು ಉದುರಿ­ಹೋಗುತ್ತವೆ ಎಂದರು ಸಂತರು.

ಇವನು ಊರಿನಲ್ಲಿ ಯಾರು ಯಾರು ಕೀಳು ಜನ ಎಂದು ಭ್ರಮಿಸಿದ್ದರೋ ಅವರೆಲ್ಲರ ಮನೆಗೆ ಹೋಗಿ ಊಟ ಮಾಡಿದ. ಪುಕ್ಕಗಳು ಉದುರುವ ಬದಲು ಮತ್ತಷ್ಟು ಬೆಳೆದವು. ಚಿಂತೆ ಹೆಚ್ಚಾಯಿತು. ಅತ್ಯಂತ ಕೀಳು ಕೆಲಸ ಮಾಡುವವರು ಯಾರು ಎಂದು ದುರ್ಬೀನು ಇಟ್ಟು ನೋಡಿ ಪ್ರಯತ್ನಿಸಿದ. ಊಹೂಂ, ಪುಕ್ಕಗಳು ಇನ್ನಷ್ಟು ಚಿಗುರಿದವು. ಒಂದು ದಿನ ತಮ್ಮ ಊರಿನಲ್ಲೆ ಇದ್ದ ಮಂತ್ರಿಗಳೊಬ್ಬರ ಮನೆಯಲ್ಲಿ ಭಾರಿ ಭೋಜನ. ಈತನೂ ಹೋಗಿ ಹೊಟ್ಟೆ ಬಿರಿಯ ತಿಂದು ಬಂದ.

ಮರುದಿನ ಬೆನ್ನಿನ ಕೆರೆತವೇ ಇಲ್ಲ! ಹೆಂಡತಿ ನೋಡುತ್ತಾಳೆ, ಒಂದು ಪುಕ್ಕವೂ ಇಲ್ಲ. ಎಲ್ಲ ಉದುರಿ ಹೋಗಿವೆ! ವಿವರಣೆ ಅಗತ್ಯವಿಲ್ಲ. ಕಥೆ ನೀಡುವ ಸಂದೇಶ ಬಲವಾದದ್ದು. ಕೀಳು ಕೆಲಸವೆಂದರೆ ನಾವು ಮಾಡುವ ವೃತ್ತಿಯಲ್ಲ, ಪ್ರತಿಯೊಂದು ವೃತ್ತಿಗೂ ಅದರದೇ ಆದ ಘನತೆ ಇದೆ. ಯಾವುದೂ ಕೀಳಲ್ಲ.

ಆದರೆ, ನಮ್ಮದಲ್ಲದ ವಸ್ತುವನ್ನು ದೋಚುವುದು ಭ್ರಷ್ಟತೆ. ಅದರಷ್ಟು ಕೀಳು ಕೆಲಸ ಮತ್ತೊಂದಿಲ್ಲ. ಆ ಕೆಲಸ ಮಾಡಿದವರಿಗೆ ಈ ಕೋಳಿಯ ಪುಕ್ಕಗಳು ಕಾಡದೇ ಬಿಡುವುದಿಲ್ಲ. ದೈಹಿಕವಾಗಿ ಅವು ಕಾಣಲಿಕ್ಕಿಲ್ಲ, ಆದರೆ, ಮನದಲ್ಲಿ ತೂರಾಡಿ ಕೋಲಾಹಲ ಮಾಡದೇ, ಮನಸ್ಸಿನ ಶಾಂತಿ ಕೆಡಿಸದೇ ಬಿಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT