ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಳಿಮರಿಗಳ ಅಪೇಕ್ಷೆ

Last Updated 25 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
ಒಂದು ತೋಟದಲ್ಲಿ ಒಂದು ಹುಂಜ ಮತ್ತು ಕೋಳಿ ಸಂಸಾರ ಮಾಡಿಕೊಂಡು ಬದುಕಿದ್ದವು.  ಅವುಗಳಿಗೆ ಐದು ಪುಟ್ಟಪುಟ್ಟ ಕೋಳಿ ಮರಿಗಳು. ಒಂದು ಬೆಳಿಗ್ಗೆ ಐದೂ ಮರಿಗಳು ಎದ್ದು ಆಕಳಿಸಿದವು.  ಅವುಗಳಿಗೆ ಎದ್ದೊಡನೆ ಹಸಿವು ಪ್ರಾರಂಭ.  ಅವು ಮುಖ-ಮುಖ ನೋಡಿಕೊಂಡವು.  ಮೊದಲನೇ ಕೋಳಿ ಮರಿ ಹೇಳಿತು,  ನನಗೆ ತುಂಬಾ ಹಸಿವು.  ಈಗ ನನ್ನ ಮುಂದೆ ಒಂದು ದೊಡ್ಡ ದಪ್ಪನಾದ ಹುಳ ಬಂದು ಬಿದ್ದರೆ ಎಷ್ಟು ಚೆಂದ ಅಲ್ವಾ.  ನಾಲ್ಕಾರು ಅಂಥ ಹುಳಗಳು ಸಿಕ್ಕರೆ ಸಾಕು ಬೆಳಗಿನ ಚಿಂತೆ ಕಳೆದುಹೋಗುತ್ತ್ತದೆ.  ಹೀಗೆ ಹೇಳಿ ದಪ್ಪ ಹುಳದ ಕನಸು ಕಾಣುತ್ತ, ಕಣ್ಣು ಮುಚ್ಚಿ ಕುಳಿತಿತು. ಎರಡನೇ ಮರಿ ಕೋಳಿ ಹೇಳಿತು,  ನಾನೂ ಕಂಗಾಲಾಗಿದ್ದೇನೆ.  ದೊಡ್ಡ, ದಪ್ಪ ಹುಳು ಎಲ್ಲಿ ಸಿಕ್ಕೀತು.  ಅದು ಬೇಡ, ನನಗೆ ಒಂದು ಚಿಕ್ಕ ಪುಟ್ಟ ಸತ್ತ ಹುಳು ಸಿಕ್ಕರೂ ಸಾಕು ಹೇಗಾದರೂ ಬೆಳಗಿನ ತಿಂಡಿಯನ್ನು ಹುಡುಕುವ ಕಷ್ಟ ತಪ್ಪುತ್ತದೆ. ಹೀಗೆಂದು ಅದೂ ಕಣ್ಣುಮುಚ್ಚಿ ಹುಳಗಳ ಯೋಚನೆ ಮಾಡುತ್ತ ಕುಳಿತಿತು. ಮೂರನೇ ಮರಿ ಕೋಳಿ ಈ ಮಾತುಗಳನ್ನು ಕೇಳಿ ಚೀವ್, ಚೀವ್ ಎಂದು ಕೂಗಿತು.  ಯಾರಾದರೂ ಇದನ್ನು ಕೇಳಿಸಿಕೊಂಡು ತನ್ನೆಡೆಗೆ ನೋಡಲಿ ಎಂಬುದು ಅದರ ಅಪೇಕ್ಷೆ.  ನನಗೇನು ಹಸಿವೆ ಕಡಿಮೆಯಾಗಿದೆಯೇ. ನನಗೆ ಹುಳುಗಳು ದೊರಕುವ ಆಸೆ ಇಲ್ಲ.  ಆದರೆ ದಿನಾಲು ರೈತ ಕೋಳಿಗಳಿಗೆ ಹಾಕಲು ತಿಂಡಿ ತರುತ್ತಾನಲ್ಲ, ಅದನ್ನೇ ಬೇಗನೇ ತಂದರೆ ಸಾಕು.  ಹೀಗೆ ಹೇಳಿ ಕೋಳಿ ಮರಿ ಕತ್ತೆತ್ತಿ ರೈತನ ಮನೆಯ ಕಡೆಗೆ ನೋಡುತ್ತ ಕುಳಿತಿತು. ನಾಲ್ಕನೇ ಮರಿ ಹೇಳಿತು,  ನಿಮ್ಮ ಮಾತುಗಳನ್ನು ಕೇಳಿ ನನಗೆ ಹಸಿವೆ ಇನ್ನೂ  ಹೆಚ್ಚಾಯಿತು.  ನನಗೆ ನೀವು ಹೇಳಿದ ಎಲ್ಲವೂ ಬೇಕು.  ಆದರೆ ಅವು ದೊರಕುವುದು ಹೇಗೆ. ಇವು ಯಾವವೂ ಸಿಗದೇ ಹೋದರೂ ರೈತನ ಹೆಂಡತಿ ನಿನ್ನೆ ಊಟಮಾಡಿದ ಮೇಲೆ ಉಳಿದ ಆಹಾರವನ್ನು ಹೊರಗೆ ಚೆಲ್ಲುತ್ತಾಳಲ್ಲ. ಅದನ್ನೇ ಬೇಗ ಮಾಡಿದರೂ ಸಾಕು, ಹೊಟ್ಟೆ ತುಂಬುತ್ತದೆ.  ನಂತರ ಎರಡು ಹೆಜ್ಜೆ ಮುಂದೆ ಹೋಗಿ ರೈತನ ಮನೆಯ ಹಿತ್ತಲನ್ನು ಆಸೆಯಿಂದ ನೋಡುತ್ತ ನಿಂತಿತು.
 
ಐದನೇ ಕೋಳಿ ಮರಿ ಈ ಮಾತುಗಳನ್ನು ಕೇಳುತ್ತ ಹೇಳಿತು,  ನಿಮ್ಮ ಮಾತುಗಳನ್ನು ಕೇಳುತ್ತ ಹಸಿವೆ ಹೆಚ್ಚಾಗಿ ಮೂರ್ಛೆ ಬಂದು ಬೀಳುವಂತಾಗುತ್ತಿದೆ.  ನನಗೆ ತಕ್ಷಣ ತಿಂಡಿ ಬೇಕು.  ನೀವು ಹೇಳಿದ ಯಾವವೂ ದೊರಕದಿದ್ದರೂ ಅಡ್ಡಿ ಇಲ್ಲ, ನೆಲದ ಮೇಲೆ ಬಿದ್ದ ಕೆಲವು ಕಾಳುಗಳು ಸಿಕ್ಕರೂ ಸಾಕು. ರೈತ ಕೆಲವೊಮ್ಮೆ ಮನೆಯ ಮುಂದೆ ಕಾಳುಗಳನ್ನು ಬಿಸಿಲಿಗೆ ಹಾಕುತ್ತಾನಲ್ಲ.  ಅವಾದರೂ ದೊರೆತರೆ ಸಾಕು.  ಹೀಗೆಂದು ಹೇಳಿ ರೈತನ ಮನೆಯ ಕಡೆಗೆ ನೋಡುತ್ತ ನಿಂತಿತು. ಈ ಮಾತುಗಳನ್ನು ತಂದೆ ಹುಂಜ ಕೇಳಿಸಿಕೊಂಡಿತು. ಅದು ಐದೂ ಮರಿಗಳು ಇದ್ದಲ್ಲಿಗೆ ಬಂದು ಹೇಳಿತು,  ಮರಿಗಳೇ ನಿಮ್ಮ ಮಾತುಗಳು ಕೇಳಿಸಿದವು. ನಾನು ಮತ್ತು ನಿಮ್ಮ ಅಮ್ಮ ಹಸಿವೆಯಾದಾಗ ಏನು ಮಾಡುತ್ತೇವೆ ನೋಡಿದ್ದೀರಾ. ಇಬ್ಬರೂ ತಲೆ ತಗ್ಗಿಸಿ ತೋಟದಲ್ಲೆಲ್ಲ ನಡೆನಡೆದು ಹುಳುಗಳನ್ನು, ಕಾಳುಗಳನ್ನು ಹುಡುಕಾಡಿ ತಿನ್ನುತ್ತೇವೆ.  ಇದುವರೆಗೂ ನಿಮಗೆ ತಂದು ತಂದು ಕೊಡುತ್ತಿದ್ದೆವು. ಇನ್ನು ಮೇಲೆ ನೀವೇ ಆಹಾರ ಹುಡುಕಿಕೊಳ್ಳಬೇಕು. ಯಾರೂ ನಿಮ್ಮ ಮುಂದೆ ತಂದು ಹಾಕಲಾರರು.  ನಡೆಯಿರಿ ನಮ್ಮ ಹಿಂದೆ. ಮರಿಗಳು ತಲೆ ತಗ್ಗಿಸಿ ತಂದೆ ತಾಯಿಯರ ಹಿಂದೆ ನಡೆದವು. ಒಂದು ಸುಭಾಷಿತ ಹೇಳುತ್ತದೆ,  `ಮೃಗರಾಜನಾದ ಸಿಂಹ ಕೂಡ ತಾನೇ ಬೇಟೆಯಾಡಬೇಕು, ಪ್ರಾಣಿಗಳು ಅದರ ಬಾಯಿಯಲ್ಲಿ ತಾವಾಗಿಯೇ ಬಂದು ಬೀಳುವುದಿಲ್ಲ'. ನಮಗಾಗಿ ಯಾವಾಗಲೂ ಜನ ಸಹಾಯ ಮಾಡುತ್ತಲೇ ಇರುತ್ತಾರೆ ಅಥವಾ ಇರಬೇಕು ಎಂದು ಅಪೇಕ್ಷಿಸುವುದು ತಪ್ಪು. ನಮ್ಮ ಪರಿಶ್ರಮವಿಲ್ಲದೇ ಯಾವುದೂ ದಕ್ಕುವುದಿಲ್ಲ.  ಮತ್ತೊಬ್ಬರಿಂದ ನಮ್ಮ ಅಪೇಕ್ಷೆಗಳು ಹೆಚ್ಚಾದಷ್ಟು ನಿರಾಸೆ ಕೂಡ ಹೆಚ್ಚುತ್ತ ಹೋಗುತ್ತದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT