ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನನ್ ಎಸ್ 200 ಶಕ್ತಿಶಾಲಿ ಪುಟಾಣಿ ಕ್ಯಾಮೆರಾ

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಲವು ನಮೂನೆ ಕ್ಯಾಮೆರಾಗಳ ಬಗ್ಗೆ ಈ ಅಂಕಣದಲ್ಲಿ ಹಲವು ಸಲ ಬರೆದಾಗಿದೆ. ಪ್ರಮುಖವಾಗಿ ಎರಡು ಬಗೆ. ಏಮ್ -ಆಂಡ್ -ಶೂಟ್ ಮತ್ತು ಎಸ್‌ಎಲ್‌ಆರ್. ಸಾಮಾನ್ಯವಾಗಿ ಎಸ್‌ಎಲ್‌ಆರ್ ಕ್ಯಾಮೆರಾ ಎಂದರೆ ವೃತ್ತಿನಿರತರು ಬಳಸುವುದು. ಏಮ್ -ಆಂಡ್- ಶೂಟ್ ಹವ್ಯಾಸಿಗಳಿಗಾಗಿ ಎನ್ನಬಹುದು. ಎಸ್‌ಎಲ್‌ಆರ್ ಕ್ಯಾಮೆರಾಗಳು ದೊಡ್ಡದಾಗಿರುತ್ತವೆ.

ಚಿಕ್ಕ ಏಮ್ -ಆಂಡ್- ಶೂಟ್ ಕ್ಯಾಮೆರಾಗಳಲ್ಲಿ ತುಂಬ ಆಯ್ಕೆಗಳು ಇರುವುದಿಲ್ಲ. ಕ್ಯಾಮೆರಾ ತನಗಿಷ್ಟಬಂದಂತೆ ಆಯ್ಕೆಗಳನ್ನು ಮಾಡಿಕೊಂಡು ಫೋಟೊ ತೆಗೆಯುತ್ತದೆ. ಆದರೂ ಕೆಲವು ಇಂತಹ ಕ್ಯಾಮೆರಾಗಳಲ್ಲಿ ಎಸ್‌ಎಲ್‌ಆರ್ ಕ್ಯಾಮೆರಾಗಳಂತೆ ಷಟರ್ ವೇಗ, ಅಪೆರ್ಚರ್, ಐಎಸ್‌ಓ, ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಅಂತಹ ಒಂದು ಪುಟಾಣಿ ಕ್ಯಾಮೆರಾ ನಮ್ಮ ಈ ವಾರದ ಅತಿಥಿ. ಅದುವೇ ಕ್ಯಾನನ್ ಪವರ್‌ಶಾಟ್ ಎಸ್ ೨೦೦
(Canon PowerShot S200).

ಗುಣವೈಶಿಷ್ಟ್ಯಗಳು
ಏಮ್- ಆಂಡ್ -ಶೂಟ್ ನಮೂನೆ, 5x ಆಪ್ಟಿಕಲ್ ಝೂಮ್, ೩೫ ಮಿ.ಮೀ. ಕ್ಯಾಮೆರಾಕ್ಕೆ ಹೋಲಿಸುವುದಾದರೆ ೨೪ ಮಿ.ಮೀ. ಯಿಂದ ೧೨೦ ಮಿ.ಮೀ. ಫೋಕಲ್ ಲೆಂತ್, ೧೦ ಮೆಗಾಪಿಕ್ಸೆಲ್ ರೆಸೊಲೂಶನ್, ಅರ್ಧ ಹೈಡೆಫಿನಿಶನ್ ವಿಡಿಯೊ ರೆಕಾರ್ಡಿಂಗ್ ಸೌಲಭ್ಯ, ೭೫ ಮಿ.ಮೀ. ಎಲ್‌ಸಿಡಿ ಪರದೆ, ಸಿಸಿಡಿ ತಂತ್ರಜ್ಞಾನ, F/2 ರಿಂದ F/5.7, ೧೫ ಸೆಕೆಂಡಿನಿಂದ 1/2000 ಸೆಕೆಂಡು ಷಟರ್ ವೇಗ, ೮೦ ರಿಂದ ೬೪೦೦ ಐಎಸ್‌ಓ ಆಯ್ಕೆ, ಹೆಚ್ಚಿಗೆ ಮೆಮೊರಿಗೋಸ್ಕರ ಎಸ್‌ಡಿ ಕಾರ್ಡ್ ಹಾಕುವ ಸೌಲಭ್ಯ, ಗಣಕಕ್ಕೆ ಯುಎಸ್‌ಬಿ ಮೂಲಕ ಜೋಡಣೆ, ವಿಡಿಯೊಗಾಗಿ ಚಿಕ್ಕ ಎಚ್‌ಡಿಎಂಐ ಕಿಂಡಿ, ಷಟರ್ ಪ್ರಯಾರಿಟಿ, ಅಪೆರ್ಚರ್ ಪ್ರಯಾರಿಟಿ, ಸಂಪೂರ್ಣ ಮ್ಯಾನ್ಯುವಲ್, ಸಂಪೂರ್ಣ ಆಟೊಮ್ಯಾಟಿಕ್, ವೈಫೈ, 99.8 x 59.0 x 26.3 ಮಿ.ಮೀ. ಗಾತ್ರ, 181 ಗ್ರಾಂ ತೂಕ, ಇತ್ಯಾದಿ. ಮೇಲ್ನೋಟಕ್ಕೆ ಕಾಣಿಸುವುದೇನೆಂದರೆ ಒಂದು ಮಟ್ಟಿನ ಉತ್ತಮ ಕ್ಯಾಮೆರಾದ ಗುಣವೈಶಿಷ್ಟ್ಯಗಳೆಲ್ಲ ಇದರಲ್ಲಿವೆ. ಇದರ ಮಾರುಕಟ್ಟೆ ಬೆಲೆ ಸುಮಾರು ೧೮,೫೦೦ ರೂ.

ಈ ನಮೂನೆಯ ಚಿಕ್ಕ ಕ್ಯಾಮೆರಾಗಳಲ್ಲಿ ಸಾಮಾನ್ಯವಾಗಿ ಹಲವು ನಮೂನೆಯ ದೃಶ್ಯಗಳ ಆಯ್ಕೆ ಇರುತ್ತದೆ. ಆದರೆ ಇದರಲ್ಲಿ ಅಷ್ಟು ಆಯ್ಕೆಗಳಿಲ್ಲ. ಪೋರ್ಟ್ರೇಟ್ ಮಾತ್ರ ಚೆನ್ನಾಗಿದೆ. ಫೋಟೊ ತೆಗೆಯುವಾಗ ಕಣ್ಣು ಮುಚ್ಚಿದರೆ ಇದು ಎಚ್ಚರಿಸುತ್ತದೆ. ದೃಶ್ಯದಲ್ಲಿರುವ ವ್ಯಕ್ತಿಗಳ ಮುಖಗಳನ್ನು ಗುರುತಿಸಿ ಅಲ್ಲಿಗೆ ಸರಿಯಾಗಿ ಫೋಕಸ್ ಮಾಡುವುದು, ಮುಖದ ಮೇಲೆ ಇರುವ ಬೆಳಕಿಗೆ ಸರಿಯಾಗಿ ಎಲ್ಲ ಆಯ್ಕೆಗಳನ್ನು ಮಾಡಿಕೊಳ್ಳುವುದು ಎಲ್ಲ ಮಾಡುತ್ತದೆ.

ಸಂಪೂರ್ಣ ಆಟೊಮ್ಯಾಟಿಕ್ ಆಯ್ಕೆಯಲ್ಲೂ ಫೋಟೊಗಳು ಚೆನ್ನಾಗಿಯೇ ಬರುತ್ತವೆ. ಆದುದರಿಂದ ಇದು ಹವ್ಯಾಸಿಗಳಿಗೆ ಉತ್ತಮ ಕ್ಯಾಮೆರಾ. ಇದರ ನಿಜವಾದ ಹೆಚ್ಚುಗಾರಿಕೆ ಇರುವುದು ಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿರುವಂತೆ ವಿವಿಧ ಪರಿಣತ ಆಯ್ಕೆಗಳು. ಅವುಗಳು ಷಟರ್ ವೇಗ, ಅಪೆರ್ಚರ್, ಐಎಸ್‌ಓ, ಇತ್ಯಾದಿ. ಷಟ್ಟರ್ ಪ್ರಯಾರಿಟಿ, ಅಪೆರ್ಚರ್ ಪ್ರಯಾರಿಟಿ, ಸಂಪೂರ್ಣ ಮ್ಯಾನ್ಯುವಲ್, ಇತ್ಯಾದಿ ಆಯ್ಕೆಗಳಿವೆ. ಇದರಲ್ಲಿ ವೈಫೈ ಸೌಲಭ್ಯ ಇದೆ. ನಿಮ್ಮಲ್ಲಿ ಸ್ಮಾರ್ಟ್‌ಫೋನ್ ಇದ್ದರೆ ಅದಕ್ಕೆಂದೇ ವಿಶೇಷ ಕ್ಯಾನನ್ ಆಪ್ ಉಚಿತವಾಗಿ ದೊರೆಯುತ್ತದೆ.

ಅದರ ಮೂಲಕ ಕ್ಯಾಮೆರಾವನ್ನು ಸ್ಮಾರ್ಟ್‌ಫೋನಿಗೆ ಜೋಡಿಸಿ ಫೋಟೊಗಳನ್ನು ಕ್ಯಾಮೆರಾದಿಂದ ಸ್ಮಾರ್ಟ್‌ಫೋನಿಗೆ ವರ್ಗಾಯಿಸಬಹುದು. ನಂತರ

ಫೋನಿನಿಂದ ಇ –ಮೇಲ್ ಮೂಲಕ ಕಳುಹಿಸುವುದು, ಫೇಸ್‌ಬುಕ್‌ಗೆ ಸೇರಿಸುವುದು. ಟ್ವೀಟ್ ಮಾಡುವುದು, ಇತ್ಯಾದಿ ಮಾಡಬಹುದು. ವಿಡಿಯೊ ಚೆನ್ನಾಗಿ ಬರುತ್ತದೆ. ಆದರೆ ಪೂರ್ತಿ ಹೈಡೆಫಿನಿಶನ್ ಇಲ್ಲ (1280 x 720 (24fps)). ಸುಮಾರು ೨೫ ನಿಮಿಷದ ವಿಡಿಯೊ ಮಾಡಬಹುದು (೪ ಜಿಬಿ ಮೆಮೊರಿ ಕಾರ್ಡ್‌ನಲ್ಲಿ).

ಇದರಲ್ಲಿ ಇರುವುದು ರೀಚಾರ್ಜೆಬಲ್ ಬ್ಯಾಟರಿ. ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ಕೇವಲ ೨೦೦ ಫೋಟೊ ತೆಗೆಯಬಹುದಷ್ಟೆ. ಮಾಮೂಲಿ ಬ್ಯಾಟರಿ ಹಾಕುವ ಸೌಲಭ್ಯ ಇಲ್ಲ. ಚಿತ್ರಗಳು ಉತ್ತಮವಾಗಿ ಮೂಡಿಬರುತ್ತವೆ. ಕ್ಯಾಮೆರಾದ ಮೇಲೆ ಸಂಪೂರ್ಣ ಹತೋಟಿ ಬೇಕು ಎಂದರೆ ಎಸ್‌ಎಲ್‌ಆರ್‌ನ ಸೌಕರ್ಯ­ಗಳೂ ಬೇಕು. ಜೊತೆಗೆ ಕ್ಯಾಮೆರಾ ಚಿಕ್ಕದಾಗಿರಬೇಕು ಎನ್ನುವವರಿಗೆ ಇದು ಸೂಕ್ತ ಕ್ಯಾಮೆರಾ. ಒಂದು ಪ್ರಮುಖ ಕೊರತೆ ಎಂದರೆ ಜಿಪಿಎಸ್ ಇಲ್ಲದಿರುವುದು. ಬೆಲೆ ತುಸು ಹೆಚ್ಚೇ ಎನ್ನಬಹುದು.

ವಾರದ ಆಪ್ (app)
ಟ್ರಾಫ್‌ಲೈನ್ ಅಥವಾ ಟ್ರಾಫಿಕ್ ಲೈನ್ (Traffline)
ಆಂಡ್ರೋಯಿಡ್‌ನಲ್ಲಿ ಕೆಲಸ ಮಾಡುವ ಒಂದು ಉತ್ತಮ ಕಿರುತಂತ್ರಾಂಶ (app). ಇದು ಭಾರತಕ್ಕೋಸ್ಕರ ತಯಾರಾದುದು. ನೀವು ಇರುವ ಸ್ಥಳ ಅಥವಾ ನಿಮಗೆ ಬೇಕಾದ ಸ್ಥಳವನ್ನು ನಮೂದಿಸಿದರೆ ಅದು ಆ ಜಾಗದ ಸುತ್ತಮುತ್ತ ರಸ್ತೆಗಳಲ್ಲಿನ ವಾಹನ ದಟ್ಟಣೆ ಬಗ್ಗೆ ಮಾಹಿತಿ ನೀಡುತ್ತದೆ. ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಹೋಗಬೇಕು ಎಂದು ನಮೂದಿಸಿದರೆ ಹೋಗಬೇಕಾದ ರಸ್ತೆಗಳಲ್ಲಿನ ವಾಹನದಟ್ಟಣೆಯ ಮಾಹಿತಿ ನೀಡುತ್ತದೆ. ಎಲ್ಲೆಲ್ಲಿ ರಸ್ತೆ ಅಗೆದಿದ್ದಾರೆ, ಎಲ್ಲಿ ಚಳವಳಿಯಿಂದಾಗಿ ರಸ್ತೆ ತಡೆ ಇದೆ, ಇತ್ಯಾದಿ ಮಾಹಿತಿಗಳನ್ನು ಘಟನೆಗಳು ಆಗುತ್ತಿದ್ದಂತೆ ಆಗಿಂದಾಗ್ಗೆ ಇದು ನೀಡುತ್ತದೆ. ನೀವು ಸಂಗ್ರಹಿಸಿದ ಮಾಹಿತಿಯನ್ನು ಟ್ವಿಟ್ಟರ್, ಫೇಸ್‌ಬುಕ್ ಅಥವಾ ಇನ್ಯಾವುದೇ ವಿಧಾನದ ಮೂಲಕ ಇತರರೊಂದಿಗೆ ಹಂಚಿಕೊಳ್ಳುವ ಸವಲತ್ತೂ ಇದೆ.

ಗ್ಯಾಜೆಟ್ ಸುದ್ದಿ

ಮೈಕೈಯಲ್ಲೆಲ್ಲ ಗ್ಯಾಜೆಟ್‌ಗಳು
ಮನೆಮನೆಗಳಲ್ಲಿ, ಎಲ್ಲರ ಕೈಗಳಲ್ಲಿ ಗ್ಯಾಜೆಟ್‌ಗಳು ತುಂಬಿ ತುಳುಕಿಯಾಯಿತು. ಮುಂದೇನು? ಸಹಜವಾಗಿಯೇ ಮುಂದಿನ ಹೆಜ್ಜೆ ಮೈಕೈಯಲ್ಲೆಲ್ಲಾ ಗ್ಯಾಜೆಟ್‌ಗಳು. ಅಂದರೆ ಧರಿಸಬಹುದಾದ ತಂತ್ರಜ್ಞಾನ. ಸ್ಯಾಮ್‌ಸಂಗ್‌ನವರು ಈಗಾಗಲೆ ಗೇರ್ ಎಂಬ ಸಾಧನ ತಯಾರಿಸಿದ್ದಾರೆ. ಇದೊಂದು ಧರಿಸಬಹುದಾದ ಕೈಗಡಿಯಾರದ ರೀತಿ ಇದೆ. ಇದೇ ಮಾದರಿಯ ಗ್ಯಾಜೆಟ್‌ಗಳನ್ನು ಇನ್ನೂ ಹಲವಾರು ಕಂಪೆನಿಗಳು ತಯಾರಿಸಿದ್ದಾರೆ. ಗೂಗ್ಲ್‌ನವರು ಗೂಗ್ಲ್ ಗ್ಲಾಸ್ ಎಂಬ ‘ಬುದ್ಧಿವಂತ’ ಕನ್ನಡಕ ತಯಾರಿಸಿದ್ದಾರೆ.

ಧರಿಸಬಹುದಾದ ಆರೋಗ್ಯ ವರದಿಗಾರ ಗ್ಯಾಜೆಟ್‌ಗಳೂ ಲಭ್ಯವಿವೆ. ಅವುಗಳು ನಿಮ್ಮ ಹೃದಯಬಡಿತ, ರಕ್ತದೊತ್ತಡ, ಇತ್ಯಾದಿಗಳನ್ನು ವರದಿ ಮಾಡುತ್ತಲೇ ಇರುತ್ತವೆ. ೨೦೧೪ರಲ್ಲಿ ಇಂತಹ ಧರಿಸಬಹುದಾದ ಗ್ಯಾಜೆಟ್‌ಗಳು ಸುದ್ದಿ ಮಾಡಲಿವೆ. ಅವುಗಳಲ್ಲಿ ಎಷ್ಟು ಕೇವಲ ಸುದ್ದಿಯಾಗಿ ಉಳಿಯಲಿವೆ, ಯಾವುವು ಮಾರುಕಟ್ಟೆಯಲ್ಲಿ ನಿಲ್ಲಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಗ್ಯಾಜೆಟ್ ತರ್ಲೆ
ಮಾತನಾಡುವ ಟಾಯಿಲೆಟ್ ಪೇಪರ್ ಹಿಡಿಕೆ
ಶೌಚದ ಕೆಲಸದ ನಂತರ ಟಾಯಿಲೆಟ್ ಪೇಪರ್ ಬಳಸುವವರಿಗೆ ಇಲ್ಲೊಂದು ವಿಚಿತ್ರ ಗ್ಯಾಜೆಟ್ ಲಭ್ಯವಿದೆ. ಪೇಪರ್ ಎಳೆದಂತೆಲ್ಲ ಮಧ್ಯದ ತಿರುಗಚ್ಚು ತಿರುಗುವಾಗ ಒಂದು ಸಂದೇಶವನ್ನು ಇದು ಉಲಿಯುತ್ತದೆ. ಈ ಸಂದೇಶ ಯಾವುದಿರಬೇಕು ಎಂದು ನೀವೇ ನಿರ್ಧರಿಸಬಹುದು ಅಥವಾ ನಿಮಗಿಷ್ಟವಾದ ಸಂದೇಶವನ್ನು ರೆಕಾರ್ಡ್ ಮಾಡಿ ಇಡಬಹುದು.

ಶೌಚಾಯಲದಲ್ಲಿ ತುಂಬ ಹೊತ್ತು ಪತ್ರಿಕೆ ಅಥವಾ ಪುಸ್ತಕ ಓದುತ್ತ ಕುಳಿತುಕೊಳ್ಳುವ ಗಂಡನಿಗೆ ‘ಬೇಗ ಎದ್ದು ಬನ್ನಿ’ ಎಂಬ ಸಂದೇಶವನ್ನು ಹೆಂಡತಿ ರೆಕಾರ್ಡ್ ಮಾಡಿ ಇಡಬಹುದು! ಅಂದಹಾಗೆ ಈ ಗ್ಯಾಜೆಟ್ ಭಾರತದಲ್ಲಿ ಲಭ್ಯವಿಲ್ಲ. ಹೇಗೂ ನಾವು ಭಾರತದಲ್ಲಿ ಟಾಯಿಲೆಟ್ ಪೇಪರ್ ಬಳಸುವುದಿಲ್ಲ, ನೀರು ಬಳಸುವುದು ತಾನೆ ಎನ್ನಬೇಡಿ ಮತ್ತೆ.

ಗ್ಯಾಜೆಟ್ ಸಲಹೆ
ಉಮೇಶ ಭಟ್ ಅವರ ಪ್ರಶ್ನೆ:
ಕನ್ನಡದಲ್ಲಿರುವ ವರ್ಡ್‌ ಡಾಕ್ಯು­ಮೆಂಟ್‌­ಗಳನ್ನು ತೆರೆಯಬಲ್ಲ ಆಂಡ್ರೋ­ಯಿಡ್ ಆಪ್ ಯಾವುದಾದರೂ ಇದೆಯೇ?
ಉ:
ಮೈಕ್ರೋಸಾಫ್ಟ್‌ ವರ್ಡ್‌ ಡಾಕ್ಯುಮೆಂಟ್‌ಗಳನ್ನು ತೆರೆಯಬಲ್ಲ ಯಾವ ಆಪ್ ಬೇಕಾದರೂ ಬಳಸಬಹುದು. ಉದಾ –ಕಿಂಗ್‌ಸಾಫ್ಟ್‌ ಆಫೀಸ್. ಇಲ್ಲಿ ನಿಮಗೆ ಅಗತ್ಯವಿರುವುದು – ಕನ್ನಡದ ಬೆಂಬಲ ಇರುವ ಆಂಡ್ರೋಯಿಡ್ ಆವೃತ್ತಿ (೪.೧ ಅಥವಾ ನಂತರದ್ದು) ಮತ್ತು ಕನ್ನಡ ಪಠ್ಯವನ್ನು ಸರಿಯಾಗಿ ತೋರಿಸಬಲ್ಲ (ರೆಂಡರಿಂಗ್ ಇರುವ) ಫೋನ್ (ಹೆಚ್ಚಿನ ಸ್ಯಾಮ್‌ಸಂಗ್ ಫೋನ್‌ಗಳು). ನೀವು ತೆರೆಯಲಿರುವ ವರ್ಡ್ ಡಾಕ್ಯುಮೆಂಟ್‌ನಲ್ಲಿ ಕನ್ನಡ ಪಠ್ಯವು ಯುನಿಕೋಡ್‌ನಲ್ಲಿ ಇದ್ದರೆ ಮಾತ್ರ ಇದೆಲ್ಲ ಸಾಧ್ಯ. ಅದು ನುಡಿ, ಬರಹ, ಇತ್ಯಾದಿ ಯುನಿಕೋಡ್ ಅಲ್ಲದ ಫಾಂಟ್‌ನಲ್ಲಿದ್ದರೆ ಅದನ್ನು ತೆರೆಯಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT