ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲಿಫೋರ್ನಿಯಾ ಮತ್ತು ಜಲ ಬಳಕೆ ತತ್ವ

Last Updated 22 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾವೇರಿ ನದಿ ನೀರಿನ ವಿವಾದವು ಪ್ರಪಂಚದ ಇನ್ನೊಂದು ಮೂಲೆಯ ಕ್ಯಾಲಿಫೋರ್ನಿಯಾದಲ್ಲಿ ನೀರಿನ ಬಳಕೆಯ ಸುತ್ತಮುತ್ತ ಪ್ರಾರಂಭವಾಗಿರುವ ಹೊಸ ಚರ್ಚೆಯನ್ನು ನೆನಪಿಸುತ್ತಿದೆ. ಕಳೆದ 16 ವರ್ಷಗಳಲ್ಲಿ 12 ವರ್ಷಗಳ ಕಾಲ ಬರಗಾಲವನ್ನೇ ಅನುಭವಿಸಿರುವ ಈ ರಾಜ್ಯದ ಸರ್ಕಾರವು, ನೀರಿಗೆ ಅತೀವ ಕೊರತೆಯುಂಟಾಗುವ ಸಂದರ್ಭಗಳಲ್ಲಿ, ಕೃಷಿ ಮತ್ತು ನೀರಿನ ಬಳಕೆಗೆ ಸಂಬಂಧಿಸಿದಂತೆ ಅನುಷ್ಠಾನಗೊಳಿಸುತ್ತಿರುವ ಅಭೂತಪೂರ್ವ ಮತ್ತು ಕಡ್ಡಾಯ ನಿಯಮಗಳು ಇಡೀ ಜಗತ್ತಿನ ಗಮನವನ್ನು ಸೆಳೆದಿವೆ.

ಉದಾಹರಣೆಗೆ 2015ರಲ್ಲಿ ಖಾಸಗಿ ನಿವಾಸಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆಲಂಕಾರಿಕ ಗಿಡಗಳು ಮತ್ತು ಹುಲ್ಲು ಬೆಳೆಸಲು ನೀರನ್ನು ಬಳಸುವ ಬಗ್ಗೆ ತೀವ್ರ ಮಿತಿಗಳನ್ನು ಹಾಕಲಾಯಿತು. ಅಲ್ಲದೆ ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ನೀರು ಬೇಕೆ ಎಂದು ಕೇಳಿ, ಅಗತ್ಯವಿದ್ದರೆ ಮಾತ್ರ ನೀಡುವಂತೆ ಸೂಚನೆ ನೀಡಲಾಯಿತು. ಸರ್ಕಾರದಿಂದಲೇ ಹೀಗೆ ನೀರಿನ ಬಳಕೆಯ ಬಗ್ಗೆ ಸ್ಪಷ್ಟ ನಿರ್ದೇಶನಗಳು ಬಂದದ್ದು ಇದೇ ಮೊದಲು.

ಭೌಗೋಳಿಕ ಮತ್ತು ಹವಾಮಾನ ವೈವಿಧ್ಯ ಹಾಗೂ ವೈಪರೀತ್ಯಗಳು ಕಂಡುಬರುವ ಈ ರಾಜ್ಯದಲ್ಲಿ ಹಿಮಾಚ್ಛಾದಿತ ಪರ್ವತಶ್ರೇಣಿಗಳೂ ಇವೆ. ಜೊತೆಗೆ ವಿಶಾಲ ಮರುಭೂಮಿಗಳು, ಫಲವತ್ತಾದ ಬಯಲು ಪ್ರದೇಶಗಳು ಮತ್ತು ಉದ್ದವಾದ ಕರಾವಳಿ ತೀರಗಳೆಲ್ಲವೂ ಇವೆ. ಈ ಎಲ್ಲ ಪ್ರದೇಶಗಳೊಳಗೆಯೂ ವಿಶಿಷ್ಟವಾದ ಸ್ಥಳೀಯ ಹವಾಮಾನಗಳಿರುವುದು ಕ್ಯಾಲಿಫೋರ್ನಿಯಾದ ಮತ್ತೊಂದು ವೈಶಿಷ್ಟ್ಯ. ಹಾಗಾಗಿ ತಾಪಮಾನ ಹಾಗೂ ಹವಾಮಾನಗಳು ಪ್ರತಿ ಪ್ರದೇಶದಲ್ಲಿಯೂ ವಿಭಿನ್ನವಾಗಿರುತ್ತವೆ.

ಇಡೀ ರಾಜ್ಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣವನ್ನು ನಿರ್ಧರಿಸುವುದು ಅಟ್ಲಾಂಟಿಕ್ ಮತ್ತು ಪೆಸಿಫಿಕ್ ಸಮುದ್ರದ ಮಾರುತಗಳು. ಅವುಗಳಲ್ಲಿನ ಎಲ್‌ನಿನೊ ಮಾರುತಗಳು ಕ್ಯಾಲಿಫೋರ್ನಿಯಾಗೆ ಮಳೆ ಮತ್ತು ಹಿಮಗಳೆರಡನ್ನೂ ತರುತ್ತವೆ. ಕ್ಯಾಲಿಫೋರ್ನಿಯಾದ ಪೂರ್ವದ ಗಡಿಯಲ್ಲಿರುವ ಸಿಯರ್ರ ನೆವಾಡ ಪರ್ವತಶ್ರೇಣಿಯಲ್ಲಿ ಹಿಮ ಬಿದ್ದು, ಶೇಖರಣೆಯಾಗುತ್ತದೆ. ಅಲ್ಲಿ ಬಳಸಲಾಗುವ ನೀರಿನ ಪ್ರಮಾಣದ ಶೇ 30ರಷ್ಟು ನೀರು ಬೇಸಿಗೆಯಲ್ಲಿ ಕರಗುವ ಹಿಮದ ಮೂಲಕ ದೊರಕುತ್ತದೆ. ಆದರೆ ಕಳೆದ ದಶಕ ದಲ್ಲಿ ಮಳೆ ಮತ್ತು ಹಿಮಗಳೆರಡೂ ಕಡಿಮೆಯಾಗಿವೆ.

ಕ್ಯಾಲಿಫೋರ್ನಿಯಾಗೆ ಬರಗಾಲ ಹೊಸದೇನಲ್ಲ. 60ರಿಂದ 100 ವರ್ಷಗಳಷ್ಟು ಕಾಲವಿರುತ್ತಿದ್ದ ಸುದೀರ್ಘ ಬರಗಾಲಗಳನ್ನು ಅನುಭವಿಸಿರುವ ಈ ಪ್ರದೇಶದಲ್ಲಿಯೂ ಇಂದಿನ ಸ್ಥಿತಿ ಅಭೂತಪೂರ್ವವಾದುದು. ಮಣ್ಣಿನ ತೇವಾಂಶವನ್ನು ಮಾಪನವಾಗಿಟ್ಟುಕೊಳ್ಳುವುದಾದರೆ 1200 ವರ್ಷಗಳಲ್ಲಿ ಇಂತಹ ಭೀಕರ ಬರಗಾಲ ಸಂಭವಿಸಿರಲಿಲ್ಲ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಮುಂಬರುವ ದಶಕಗಳಲ್ಲಿ ಪರಿಸ್ಥಿತಿಯು ಸುಧಾರಿಸಬಹುದು ಎಂಬ ಭರವಸೆ ಯಾರಲ್ಲೂ ಇಲ್ಲ.

ಒಂದೆಡೆ ಪ್ರಾಕೃತಿಕ ಬದಲಾವಣೆಗಳ ಪರಿಣಾಮವಾಗಿ ಮಳೆ ಮತ್ತು ಹಿಮದ ಪ್ರಮಾಣ ಕಡಿಮೆಯಾಗಿದ್ದರೆ ಮತ್ತೊಂದೆಡೆ ಮಾನವ ಚಟುವಟಿಕೆಗಳ ಕಾರಣದಿಂದ ಜಾಗತಿಕ ತಾಪಮಾನ ಹೆಚ್ಚಾಗಿ, ಅದರಿಂದ ಹವಾಮಾನ ವೈಪರೀತ್ಯಗಳಾಗುತ್ತಿವೆ. ಕಳೆದ 150  ವರ್ಷಗಳಲ್ಲಿ ಅಪೂರ್ವ ಸಮೃದ್ಧಿಯನ್ನು ಅನುಭವಿಸಿರುವ ಕ್ಯಾಲಿಫೋರ್ನಿಯಾದಲ್ಲಿ ನೀರಿನ ಅಭಾವ ಮತ್ತು ಬರಗಾಲ ಮುಂದುವರೆದರೆ ಯಾವ ಬಗೆಯ ಬದುಕು ಸಾಧ್ಯವಾಗಬಹುದು ಎಂಬ ಪ್ರಶ್ನೆ ಎಲ್ಲರ ಮನಸ್ಸಿನಲ್ಲಿದೆ.

ಯಾವುದೇ ಮಾನದಂಡದಿಂದ ನೋಡಿದರೂ ಕ್ಯಾಲಿಫೋರ್ನಿಯಾ ಒಂದು ಅಸಾಮಾನ್ಯ ರಾಜ್ಯ. ವಿಸ್ತೀರ್ಣದಲ್ಲಿ ಅಮೆರಿಕದ ಮೂರನೆಯ ಅತಿ ದೊಡ್ಡ ರಾಜ್ಯವಾದ ಕ್ಯಾಲಿಫೋರ್ನಿಯಾ ಅಮೆರಿಕದಲ್ಲಿಯೇ ಅತಿಹೆಚ್ಚು ಜನಸಂಖ್ಯೆ (3.8 ಕೋಟಿ) ಹೊಂದಿರುವ ರಾಜ್ಯ. ಮಿಗಿಲಾಗಿ ಅಲ್ಲಿನ ಅರ್ಥವ್ಯವಸ್ಥೆ, ಡಾಲರ್ ಲೆಕ್ಕದಲ್ಲಾಗಲಿ ಅಥವಾ ಪದಾರ್ಥಗಳನ್ನು ಕೊಳ್ಳುವ ಶಕ್ತಿಯ ಆಧಾರದ (ಪರ್ಚೇಸಿಂಗ್ ಪವರ್) ಮೇಲಾಗಲಿ, ಪ್ರಪಂಚದ ಮೊದಲ ಹತ್ತು ಅರ್ಥವ್ಯವಸ್ಥೆಗಳಲ್ಲಿ ಒಂದಾಗಿದೆ.

ಅಲ್ಲದೆ ಹತ್ತಾರು ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ದೊಡ್ಡದು. ಜಿ.ಡಿ.ಪಿ.ಯನ್ನು ಡಾಲರ್‌ಗಳಲ್ಲಿ ಅಳೆಯುವುದಾದರೆ ಕ್ಯಾಲಿಫೋರ್ನಿಯಾದ ಅರ್ಥ್ಯವ್ಯವಸ್ಥೆಯು ಇಂದು ಸಹ ಭಾರತ, ರಷ್ಯಾ ಮತ್ತು ಇಟಲಿಗಳಿಗಿಂತ ದೊಡ್ಡದು. ಅಮೆರಿಕದ ಜಿಡಿಪಿಯ ಶೇ 13ರಷ್ಟು ಕ್ಯಾಲಿಫೋರ್ನಿಯಾದಿಂದಲೇ ಬರುತ್ತದೆ.

ಆದರೆ ಕ್ಯಾಲಿಫೋರ್ನಿಯಾದ ಪ್ರಾಮುಖ್ಯತೆ ಇರುವುದು ಕೇವಲ ಅದರ ಆರ್ಥಿಕತೆಯ ಕಾರಣದಿಂದಲ್ಲ. ಹೊಸ ತಂತ್ರಜ್ಞಾನಗಳ/ಉದ್ದಿಮೆಗಳ ಅನ್ವೇಷಣೆ, ಪ್ರಗತಿಪರ ಸಾಮಾಜಿಕ ಮೌಲ್ಯಗಳನ್ನು (ಅದರಲ್ಲೂ ಸಹಿಷ್ಣುತೆಯ) ಒಪ್ಪಿಕೊಳ್ಳುವುದು ಮತ್ತು ಪ್ರಯೋಗಶೀಲತೆಗಳು ಐತಿಹಾಸಿಕವಾಗಿ ಅಲ್ಲಿನ ಸಂಸ್ಕೃತಿಯ ಅಂಗವಾಗಿರುವುದರಿಂದ. ಹಾಗಾಗಿ ಅಮೆರಿಕದಲ್ಲಿನ ಒಂದು ಜಾಣ್ಣುಡಿಯೆಂದರೆ ಇಂದು ಕ್ಯಾಲಿಫೋರ್ನಿಯಾದಲ್ಲಿರುವುದು ನಾಳೆ ಎಲ್ಲೆಡೆ ಇರುತ್ತದೆ. ಇದು ಕ್ಯಾಲಿಫೋರ್ನಿಯಾವು ತನ್ನ ಬಗ್ಗೆ ಕಟ್ಟಿಕೊಂಡಿರುವ ಕಥನವೆನ್ನುವುದೂ ಸತ್ಯವೆ. ಆದರಿದು ಪೂರ್ತ ಕಗ್ಗವೂ ಅಲ್ಲ. 1847ರವರೆಗೆ ಮೆಕ್ಸಿಕೊದ ಭಾಗವಾಗಿದ್ದ ಕ್ಯಾಲಿಫೋರ್ನಿಯಾ ಅಮೆರಿಕ ಮತ್ತು ಮೆಕ್ಸಿಕೊಗಳ ನಡುವಿನ 1846- 48ರವರೆಗಿನ ಯುದ್ಧದ ನಂತರ ಅಮೆರಿಕಕ್ಕೆ ಸೇರಿತು.

1850ರ ದಶಕದಲ್ಲಿ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಚಿನ್ನ ದೊರೆಯುತ್ತದೆ ಎಂದು ತಿಳಿದ ನಂತರ ಲಕ್ಷಾಂತರ ಅಮೆರಿಕನ್ನರು ಮತ್ತು ಯುರೋಪಿಯನ್ನರು ಕ್ಷಿಪ್ರವಾಗಿ ವಲಸೆ ಬಂದರು. ಆರಂಭದ ಚಿನ್ನದ ನುಗ್ಗುವಲಸೆಯ (ಗೋಲ್ಡ್‌ರಶ್) ನಂತರದ ದಶಕಗಳಲ್ಲಿ ರೈಲು ಮಾರ್ಗಗಳು ನಿರ್ಮಾಣವಾದಂತೆ ವಲಸೆಯೂ ಮುಂದುವರೆಯಿತು. ಆಗ ವಲಸಿಗರನ್ನು ಆಕರ್ಷಿಸಿದ್ದು ಕ್ಯಾಲಿಫೋರ್ನಿಯಾದ ಫಲವತ್ತಾದ ಭೂಮಿ ಮತ್ತು ಹಿತಕರವಾದ ಮೆಡಿಟರೇನಿಯನ್ ಹವಾಮಾನ.

ಅಲ್ಲಿದ್ದ ಮೂಲನಿವಾಸಿಗಳನ್ನು ಮತ್ತು ಮೆಕ್ಸಿಕನ್ನರನ್ನು ಕಗ್ಗೊಲೆ ಮಾಡಿದ ಹೊಸ ವಲಸಿಗರು ಮುಂದಿನ ನೂರೈವತ್ತು ವರ್ಷಗಳಲ್ಲಿ ಕೃಷಿಯನ್ನು ಉದ್ದಿಮೆಯ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಕೈಗೊಂಡರು. ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಗರ ಮನರಂಜನಾ ಉದ್ದಿಮೆಯ ಕೇಂದ್ರವಾದರೆ, ರಾಜ್ಯದಾದ್ಯಂತ ಸಾಮಾನುಗಳ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಪ್ರಾರಂಭವಾಯಿತು.

1960ರ ದಶಕದಲ್ಲಿ ಉತ್ತರ ಕ್ಯಾಲಿಫೋರ್ನಿಯಾವು ಕಂಪ್ಯೂಟರ್ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿತು. ಈ ಎಲ್ಲ ಉದ್ದಿಮೆಗಳು ಬೆಳೆದಂತೆ ಪ್ರಪಂಚದೆಲ್ಲೆಡೆಯಿಂದ, ಬಹುಮುಖ್ಯವಾಗಿ ಏಷ್ಯಾದ ದೇಶಗಳಿಂದ ವಲಸಿಗರು ಕ್ಯಾಲಿಫೋರ್ನಿಯಾಕ್ಕೆ ಬಂದರು. ಈ ವಲಸೆಯ ವೈವಿಧ್ಯ ಮತ್ತು ಪ್ರಮಾಣ ಅಮೆರಿಕದ ಬೇರೆಲ್ಲೂ ಕಾಣದು ಎಂದರೆ ಉತ್ಪ್ರೇಕ್ಷೆಯಲ್ಲ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಕ್ಯಾಲಿಫೋರ್ನಿಯಾವು ನಾನು ಮೇಲೆ ಗುರುತಿಸಿದ ಹಾಗೆ ಬೆಳೆದ ರೀತಿ ಅಲ್ಲಿನ ನೀರಿನ ಸರಬರಾಜು ಮತ್ತು ಬಳಕೆಯ ಇತಿಹಾಸದೊಂದಿಗೆ ತಳಕು ಹಾಕಿಕೊಂಡಿದೆ. ಈ ವಿಶಾಲ ರಾಜ್ಯದ ಬಹುಭಾಗಗಳು ಐತಿಹಾಸಿಕವಾಗಿ ಬರಪೀಡಿತವಾಗಿದ್ದು, ನೀರಿನ ಕೊರತೆಯಿತ್ತು. ಇಂತಹ ಪ್ರದೇಶಗಳಿಗೆ ನೂರಾರು ಮೈಲಿ ದೂರದಿಂದ ನೀರು ತರಲು ಸಂಕೀರ್ಣವಾದ, ಖಾಸಗಿ ಮಾಲೀಕತ್ವವಿದ್ದ ಭ್ರಷ್ಟ ವ್ಯವಸ್ಥೆಗಳು ರಾಜ್ಯದಾದ್ಯಂತ ಹುಟ್ಟಿಕೊಂಡವು. ಉದಾಹರಣೆಗೆ ದಕ್ಷಿಣ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನಗರಕ್ಕೆ ನೀರು ತರಲು ಆರು ಜಲಾಶಯಗಳು ಮತ್ತು 674 ಕಿ.ಮೀ ಉದ್ದದ ಕಾಲುವೆ ವ್ಯವಸ್ಥೆಯಿರುವ ಲಾಸ್ ಏಂಜಲೀಸ್ ಆಕ್ವಡಕ್ಟನ್ನು 20ನೆಯ ಶತಮಾನದ ಪ್ರಾರಂಭದಲ್ಲಿ ನಿರ್ಮಿಸಲಾಯಿತು.

ಇದಾದ ನಂತರವೇ ನೀರಿನ ಯಾವುದೇ ತಾಣದಿಂದ ದೂರದಲ್ಲಿ, ಮರುಭೂಮಿಯ ಬಳಿಯಿರುವ ಈ ನಗರವು ಬಹುಕ್ಷಿಪ್ರವಾಗಿ ಬೆಳೆಯಲು ಸಾಧ್ಯವಾಗಿದ್ದು. ಆದರೆ ಈ ಕಾಲುವೆ ವ್ಯವಸ್ಥೆ ನಿರ್ಮಿಸುವಾಗ ಲಾಸ್ ಏಂಜಲೀಸ್‌ನ ನಿರ್ಮಾತೃಗಳು ಮೋಸದ ಒಪ್ಪಂದಗಳು ಮತ್ತು ಅಪಪ್ರಚಾರದ ಮೂಲಕ ಕೃಷಿಗೆ ಮೀಸಲಾಗಿದ್ದ ನೀರನ್ನು ಪಡೆದುಕೊಂಡರು. ವಿಪರ್ಯಾಸವೆಂದರೆ ರಾಜ್ಯದ ಬಹುಭಾಗದಲ್ಲಿ ಕೃಷಿಗೂ ನೀರಿನ ಸರಬರಾಜಿನ ವ್ಯವಸ್ಥೆಯಾಗಿರುವುದು ಮೋಸದ, ಸುಳ್ಳಿನ ಒಪ್ಪಂದಗಳ ಮೂಲಕವೆ.

ಉದಾಹರಣೆಗೆ ಕ್ಯಾಲಿಫೋರ್ನಿಯಾದ ಮಧ್ಯಭಾಗದಲ್ಲಿರುವ ಸೆಂಟ್ರಲ್ ವ್ಯಾಲಿಗೆ ನೀರನ್ನು ಉತ್ತರದ ಸ್ಯಾನ್ ಜೋಕೆನ್ ನದಿಯಿಂದ ಪಡೆಯಲು ಕಾಲುವೆಗಳು ಮತ್ತು ಜಲಾಶಯಗಳ ಜಾಲವೊಂದನ್ನು ರೂಪಿಸಲಾಯಿತು. ಈ ನೀರಾವರಿ ವ್ಯವಸ್ಥೆಯ ಲಾಭ ಪಡೆದ ಸಣ್ಣ (ನೂರಾರು ಎಕರೆ ಹೊಂದಿರುವ) ಹಿಡುವಳಿದಾರರು ಮತ್ತು (ಹತ್ತಾರು ಸಾವಿರ ಎಕರೆ ಹೊಂದಿರುವ) ದೊಡ್ಡ ಹಿಡುವಳಿದಾರರು ಕೃಷಿಯನ್ನು ಕೈಗಾರಿಕೆಯಂತೆ ನಡೆಸಲಾರಂಭಿಸಿದರು. ಇದರ ಪರಿಣಾಮವಾಗಿ ಕ್ಯಾಲಿಫೋರ್ನಿಯಾದಲ್ಲಿಯೇ ಅಮೆರಿಕದಲ್ಲಿ ಬೆಳೆಯಲಾಗುವ ಅರ್ಧದಷ್ಟು ಹಣ್ಣು ಮತ್ತು ತರಕಾರಿಗಳನ್ನು ಬೆಳೆಯಲಾಗುತ್ತದೆ.

ಕ್ಯಾಲಿಫೋರ್ನಿಯಾ ಬೆಳೆದಂತೆ ಮತ್ತು ಜನಸಂಖ್ಯೆ ಹೆಚ್ಚಾದಂತೆ ನೀರಿನ ಅಭಾವ ಹೆಚ್ಚಾಗಿದೆ. ಬರಗಾಲದ ಅವಧಿ ವಿಸ್ತೃತವಾದಂತೆ ಬಿಕ್ಕಟ್ಟು ಹೆಚ್ಚತೊಡಗಿದೆ. ಇಲ್ಲಿ ಎರಡು ಮುಖ್ಯ ಸಮಸ್ಯೆಗಳು ನಮಗೆ ಸ್ಪಷ್ಟವಾಗಿ ಗೋಚರವಾಗುವುದು. ಸುಮಾರು 1750 ಟಿ.ಎಂ.ಸಿ. ಅಡಿ ನೀರನ್ನು ಕೃಷಿ, ಗೃಹಬಳಕೆ ಮತ್ತು ಉದ್ದಿಮೆಗಳಿಗೆ ಹಂಚುವ ಜವಾಬ್ದಾರಿ ಹೊಂದಿರುವ ರಾಜ್ಯದ ನೀರು ಸರಬರಾಜು ವ್ಯವಸ್ಥೆ ಇಂದಿನ ಅಗತ್ಯಗಳನ್ನು ನಿಷ್ಪಕ್ಷಪಾತವಾಗಿ ಅಂದಾಜು ಮಾಡುವ ಶಕ್ತಿಯನ್ನು ಪಡೆದಿಲ್ಲ.

ಇದಕ್ಕೆ ಬಹುಮುಖ್ಯ ಕಾರಣವೆಂದರೆ ನೀರನ್ನು ಆಸ್ತಿಯ ರೂಪದಲ್ಲಿ ಪರಿಗಣಿಸಿ, ಮೊದಲ ಬಳಕೆದಾರರ್‍ಯಾರೊ ಅವರಿಗೆ ನೀರಿನ ಬಳಕೆಯ ಹಕ್ಕನ್ನು ನೀಡಿರುವುದು. ಹಾಗಾಗಿ ನಾಲ್ಕೈದು ತಲೆಮಾರುಗಳ ಹಿಂದಿನ ನೀರಿನ ಬಳಕೆಯನ್ನು ಆಧರಿಸಿ ಹತ್ತಾರು ಸಾವಿರಾರು ರೈತರಿಗೆ ಮತ್ತು ಹಲವು ನಗರಗಳಿಗೆ ನೀರಿನ ಹಕ್ಕನ್ನು ಕೊಡಲಾಗಿದೆ. ರೈತರು ತಮ್ಮ ಹಕ್ಕಿನ ನೀರನ್ನು ಮಾರಿಕೊಳ್ಳುತ್ತಿದ್ದಾರೆ ಇಲ್ಲವೆ ಪೋಲು ಮಾಡುತ್ತಿದ್ದಾರೆ. ನೀರಿನ ಬಳಕೆ ಸುಸ್ಥಿರ ರೀತಿಯಲ್ಲಿ ಆಗುತ್ತಿಲ್ಲ. ನೀರಿನ ಹಕ್ಕುಗಳನ್ನು ಹೊಂದಿರುವವರ ಲಾಬಿಗಳು ಈಗಿರುವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಬಿಡುತ್ತಿಲ್ಲ.

ಹಕ್ಕುಗಳೊಂದೆಡೆ ಇರಲಿ. ನೀರಿನ ಲಭ್ಯತೆಯೇ ಕಡಿಮೆಯಾಗುತ್ತಿರುವ ವಾಸ್ತವವು ಕ್ಯಾಲಿಫೋರ್ನಿಯಾವನ್ನು ಇಂದು ಕಾಡುತ್ತಿದೆ. ಬಿಕ್ಕಟ್ಟಿನಲ್ಲಿರುವ ಕ್ಯಾಲಿಫೋರ್ನಿಯಾದ ಕೃಷಿ ಕ್ಷೇತ್ರದಲ್ಲಿ ನೀರಾವರಿ ಆಧಾರಿತ ಕೃಷಿ ಮುಂದಿನ ದಶಕಗಳಲ್ಲಿ ಬಹುಶಃ ಸಾಧ್ಯವಾಗದು. ಪಶುಪಾಲನೆ ಮತ್ತು ಕೃಷಿ ಆಧಾರಿತ ಉದ್ದಿಮೆಗಳು ನೀರು ಲಭ್ಯವಿರುವ ಇತರ ರಾಜ್ಯಗಳೆಡೆ ಚಲಿಸುತ್ತಿವೆ. ಅಂತರ್ಜಲದ ಬಳಕೆ ಸ್ವೇಚ್ಛಾನುಸಾರವಾಗಿ ನಡೆದಿದ್ದು, ಕ್ಯಾಲಿಫೋರ್ನಿಯಾದ ಸೆಂಟ್ರಲ್ ವ್ಯಾಲಿ ಮುಂದಿನೆರಡು ದಶಕಗಳಲ್ಲಿ ಬರಡುಭೂಮಿಯಾಗುವ ನಿರೀಕ್ಷೆಯಿದೆ. ಗೃಹೋಪಯೋಗಕ್ಕೆ ಮತ್ತು ಉದ್ದಿಮೆಗಳಿಗೆ ನೀರು ಸರಬರಾಜಿನಲ್ಲಿ ಗಮನಾರ್ಹ ಕಡಿತ ಈಗಾಗಲೆ ಶುರುವಾಗಿದೆ. ಕ್ಯಾಲಿಫೋರ್ನಿಯಾ ಮತ್ತೊಮ್ಮೆ ನಮ್ಮೆಲ್ಲರ ಭವಿಷ್ಯದ ವಾಸ್ತವವನ್ನು ನಿರೀಕ್ಷಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT