ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಎಂಬ ಆಟಕ್ಕೆ ರಾಷ್ಟ್ರೀಯತೆ ಬೆರೆತಾಗ

Last Updated 18 ಜೂನ್ 2017, 19:30 IST
ಅಕ್ಷರ ಗಾತ್ರ

ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್ ತಂಡಗಳ ನಡುವೆ ನಡೆಯುವ ಪಂದ್ಯವನ್ನು ಈ ದೇಶಗಳ ಜನ ಖುಷಿಯಿಂದ ವೀಕ್ಷಿಸುತ್ತಾರಾ? ಇಲ್ಲ, ಹಾಗಾಗುತ್ತಿಲ್ಲ ಎಂಬ ಭಾವನೆ ನನ್ನಲ್ಲಿ ಈಗ ಗಟ್ಟಿಯಾಗಿದೆ. ಹಿಂದೆ ಇದು ಖುಷಿಯ ಅನುಭವ ಆಗಿರುತ್ತಿತ್ತೇನೋ. ಆದರೆ ಕಳೆದ 25 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಕೆಲವು ಘಟನೆಗಳ ಕಾರಣದಿಂದಾಗಿ ಎರಡೂ ದೇಶಗಳ ನಡುವಣ ದ್ವೇಷದ ತೀವ್ರತೆ ಹೆಚ್ಚಾಗಿದೆ. ದ್ವೇಷದ ಬಿಸಿ ಆರಲು ಮಾಧ್ಯಮಗಳು ಬಿಟ್ಟಿಲ್ಲ.

ಕ್ರಿಕೆಟ್ ಪಂದ್ಯಗಳು, ಫುಟ್‌ಬಾಲ್‌ ಪಂದ್ಯಗಳಂತೆ ಅಲ್ಲ. ಇವು ಇಡೀ ದಿನ ಅಥವಾ ಐದು ದಿನಗಳವರೆಗೆ ನಡೆಯುತ್ತವೆ. ಆ ಮೂಲಕ, ವಿಜಯದ ಅಥವಾ ಅಹಿತದ ಭಾವನೆಗಳು ನಮ್ಮ ಮನಸ್ಸಿನಲ್ಲಿ ಬಹಳ ಹೊತ್ತು ಇರುವಂತೆ ಮಾಡುತ್ತವೆ. ಹಾಗಾಗಿ, ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಟೆಸ್ಟ್ ಪಂದ್ಯ ಆಡುವುದನ್ನು ಬಹುತೇಕ ಕೈಬಿಟ್ಟಿರುವುದು ಒಂದು ಒಳ್ಳೆಯ ವಿಚಾರ. ಅಹಿತದ ಭಾವನೆಗಳು ಟಿ-20 ಪಂದ್ಯಗಳಿಗೆ, ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಿಗೆ ಸೀಮಿತವಾಗಿವೆ. ಈ ಪಂದ್ಯಗಳು ನಡೆಯುವುದು ಕೂಡ ಎರಡೂ ದೇಶಗಳಿಗೆ ಹೊರತಾದ ಸ್ಥಳಗಳಲ್ಲಿ.

ಉಪಖಂಡದ ತಂಡಗಳ ನಡುವಣ ಕ್ರಿಕೆಟ್ ಪಂದ್ಯಗಳನ್ನು ರಾಷ್ಟ್ರೀಯವಾದದ ಹಿನ್ನೆಲೆಯಲ್ಲಿ ವೀಕ್ಷಿಸುವುದು ಮೊದಲ ಸಮಸ್ಯೆ. ಎದುರಾಳಿ ತಂಡದ ಆಟಗಾರರು ಬೌಂಡರಿ ಬಾರಿಸಿದಾಗ ಅಥವಾ ವಿಕೆಟ್ ಪಡೆದಾಗ ಇಡೀ ಕ್ರೀಡಾಂಗಣದಲ್ಲಿ ಮೌನ ಆವರಿಸುತ್ತದೆ. ಎಲ್ಲ ತಂಡಗಳ ವಿರುದ್ಧದ ಪಂದ್ಯದಲ್ಲೂ ಇಂಥ ಸನ್ನಿವೇಶಗಳನ್ನು ಕಾಣಬಹುದು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯುವ ವೇಳೆ ‘ಶತ್ರು’ ತಂಡದ ವಿರುದ್ಧ ವೀಕ್ಷಕರಲ್ಲಿ ಉಂಟಾಗುವ ಮುನಿಸು ಹೆಚ್ಚು ತೀವ್ರವಾಗಿರುತ್ತದೆ.

ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ನೋಡುವುದರಲ್ಲಿ ಒಂದಿಷ್ಟು ಖುಷಿ ಇರುತ್ತದೆ. ಸ್ನೇಹಮಯ ಸ್ಪರ್ಧೆ, ಒಳ್ಳೆಯ ಉದ್ದೇಶದಿಂದ ಒಬ್ಬರನ್ನೊಬ್ಬರು ಕಿಚಾಯಿಸುವುದು ಇವುಗಳಲ್ಲಿ ಸೇರಿವೆ. ಆದರೆ ಉಪಖಂಡದ ತಂಡಗಳ ನಡುವೆ ನಡೆಯುವ ಪಂದ್ಯದಲ್ಲಿ ಇವ್ಯಾವವೂ ಇರುವುದಿಲ್ಲ. ಗಡಿಯಲ್ಲಿ ಸೈನಿಕರು ಎದುರಾಗಿ ನಿಂತು ಅವಿರತವಾಗಿ ಗುಂಡು ಹಾರಿಸುತ್ತ ಇರುತ್ತಾರೆ. ಇದರಿಂದ ಯಾವ ಬದಲಾವಣೆಯಾಗಲಿ, ಪ್ರಯೋಜನವಾಗಲಿ ಆಗುವುದಿಲ್ಲ. ಕ್ರಿಕೆಟ್ ಪಂದ್ಯದ ವೇಳೆ ಸೈನಿಕರ ಬದಲು ನಾಗರಿಕರು (ಕೆಲವೊಮ್ಮೆ ಈ ನಾಗರಿಕರು ಕೂಡ ತಮ್ಮ ದೇಶದ ತಂಡದವರು ತೊಡುವ ಸಮವಸ್ತ್ರ ತೊಟ್ಟಿರುತ್ತಾರೆ) ಪರಸ್ಪರರ ವಿರುದ್ಧ ನಿಂದನಾತ್ಮಕ ಪದಗಳನ್ನು ಪ್ರಯೋಗಿಸುತ್ತ ಇರುತ್ತಾರೆ.

ಕ್ರೀಡೆಯ ಜೊತೆ ಗುಜರಾತಿಗಳು ಇನ್ನೂ ಒಂದನ್ನು ಸೇರಿಸುತ್ತಾರೆ. ಅದು ಬೆಟ್ಟಿಂಗ್. ಅಲ್ಲಿ ಕೂಡ ರಾಷ್ಟ್ರೀಯತೆಯ ಪ್ರಭಾವ ಇದೆ. ನಾನು ಹಿಂದೊಂದು ಕಾಲದಲ್ಲಿ ಸಕ್ರಿಯ ಪಂಟರ್ ಆಗಿದ್ದೆ (ಈಗ ಅಲ್ಲ). ನಮ್ಮ ಸಂಬಂಧಿ ಸಂದೀಪ್ ಘೋಷ್ ಒಂದು ದಿನ ನಮ್ಮಲ್ಲಿಗೆ ಬರುವವರಿದ್ದರು. ಅಂದು ಭಾರತ ಮತ್ತು ಶ್ರೀಲಂಕಾ ನಡುವೆ ಪಂದ್ಯ ಇತ್ತು. ಘೋಷ್‌ಗೆ ಶ್ರೀಲಂಕಾ ಪರ ಬೆಟ್ಟಿಂಗ್ ಮಾಡಬೇಕು ಎಂದು ಅನಿಸಿತು. ನಾನು ನನ್ನ ಪರಿಚಯದ ಬುಕ್ಕಿಗೆ ಕರೆ ಮಾಡಿ, ಬೆಟ್ ಮಾಡುವಂತೆ ತಿಳಿಸಿದೆ. ಇದಾದ ನಂತರ, ಭಾರತದ ವಿರುದ್ಧವಾಗಿ ಎಷ್ಟು ಜನ ಬೆಟ್ ಮಾಡಿರಬಹುದು ಎಂದು ನಾವು ಆಲೋಚಿಸಿದೆವು. ಬಹಳಷ್ಟು ಜನ ಗುಜರಾತಿಗಳು ಭಾರತದ ವಿರುದ್ಧ ಬೆಟ್ ಮಾಡಿರುತ್ತಾರೆ ಎಂಬುದು ನನ್ನ ಊಹೆ ಆಗಿತ್ತು. ಏಕೆಂದರೆ ಗುಜರಾತಿಗಳು ತಮ್ಮ ಹಣಕಾಸು ವಹಿವಾಟು ಹಾಗೂ ಭಾವನೆಗಳನ್ನು ಪ್ರತ್ಯೇಕಿಸಿಯೇ ಇಡುತ್ತಾರೆ.

ನಾನು ನನ್ನ ಪರಿಚಯದ ಬುಕ್ಕಿಗೆ ಪುನಃ ಕರೆ ಮಾಡಿದೆ. ಇದುವರೆಗೆ ಆಗಿರುವ ಅಂದಾಜು 50 ಬೆಟ್‌ಗಳ ಪೈಕಿ ಘೋಷ್‌ ಅವರದ್ದು ಮೊದಲನೆಯದು ಎಂದು ಆತ ಹೇಳಿದ. ಇದರ ಅರ್ಥ; ದೊಡ್ಡ ಪ್ರಮಾಣದಲ್ಲಿ ಬೆಟ್ಟಿಂಗ್‌ನಲ್ಲಿ ಪಾಲ್ಗೊಳ್ಳುವ ಗುಜರಾತಿಗಳು ಕೂಡ ರಾಷ್ಟ್ರೀಯತೆಯ ಪರ ನಿಂತಿದ್ದರು, ತಮ್ಮ ಹಣವನ್ನು ಭಾರತದ ಪರ ಬೆಟ್ಟಿಂಗ್‌ಗೆ ಚೆಲ್ಲಿದ್ದರು. ಆ ಪಂದ್ಯವನ್ನು ಶ್ರೀಲಂಕಾ ಗೆದ್ದುಕೊಂಡಿತು. ಆದರೆ ಪಾಕಿಸ್ತಾನದ ವಿರುದ್ಧದ ಪಂದ್ಯಗಳಲ್ಲಿ ಬೆಟ್ಟಿಂಗ್‌ ಎಂಬುದು ಬೆಟ್ಟಿಂಗ್‌ ರೀತಿಯಲ್ಲಿ ಇರುವುದಿಲ್ಲ. ಅದು ಯುದ್ಧದಂತಹ ಸ್ವರೂಪವನ್ನು ಪಡೆದಿರುತ್ತದೆ.

ನಾಲ್ಕು ದಶಕಗಳಿಗಿಂತ ಈಚೆಗಿನ ಸಂದರ್ಭವೊಂದು ನನಗೆ ನೆನಪಿದೆ. ಆಗ ಪಂದ್ಯ ವೀಕ್ಷಿಸುವುದು ಖುಷಿಯ ವಿಚಾರವಾಗಿತ್ತು. ಆಗ ಮಿಯಾಂದಾದ್ ಮತ್ತು ಇಮ್ರಾನ್ ಕ್ರಿಕೆಟ್ ಜೀವನದ ಉತ್ತುಂಗದಲ್ಲಿದ್ದರು. ಕಪಿಲ್ ದೇವ್ ಅವರು ಗಾವಸ್ಕರ್ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡವನ್ನು ಆಗಷ್ಟೇ ಸೇರಿದ್ದರು. ಕ್ರಿಕೆಟ್ ವೀಕ್ಷಣೆಯೇ ವಿಲಕ್ಷಣವೆನಿಸುವ ಭಾವನೆ ಮೊದಲು ಆರಂಭವಾಗಿದ್ದರಲ್ಲಿ 1983ರ ಅಕ್ಟೋಬರ್‌ನಲ್ಲಿ ಶ್ರೀನಗರದಲ್ಲಿ ನಡೆದ ಭಾರತ - ವೆಸ್ಟ್‌ ಇಂಡೀಸ್ ನಡುವಣ ಪಂದ್ಯವೂ ಸೇರಿದೆ. ಅಲ್ಲಿ ಸೇರಿದ್ದ ಪ್ರೇಕ್ಷಕರು ಭಾರತದ ವಿರುದ್ಧ ಇದ್ದರು. ಅಲ್ಲದೆ, ತಮಗೆ ಅಲ್ಲಿ ದೊರೆತ ಬೆಂಬಲ ನೋಡಿ ವೆಸ್ಟ್‌ ಇಂಡೀಸ್‌ನ ಆಟಗಾರರು ಮೂಕವಿಸ್ಮಿತರಾಗಿದ್ದರು. ಆ ಪಂದ್ಯದ ಅನುಭವವನ್ನು ಗಾವಸ್ಕರ್ ಅವರು ತಮ್ಮ 'Runs' N Ruins' ಪುಸ್ತಕದಲ್ಲಿ ವಿವರಿಸಿದ್ದಾರೆ. ಇಮ್ರಾನ್‌ ಖಾನ್‌ ಅವರ ಪೋಸ್ಟರ್‌ಗಳನ್ನು ಹಿಡಿದಿದ್ದ ವೀಕ್ಷಕರು ಅಲ್ಲಿದ್ದ ಬಗ್ಗೆ ಗಾವಸ್ಕರ್ ಬರೆದಿದ್ದಾರೆ. ಕಾಶ್ಮೀರದಲ್ಲಿನ ಪರಿಸ್ಥಿತಿ ಸಹಜವಾಗಿಲ್ಲ ಎಂಬುದು ನಾನೂ ಸೇರಿದಂತೆ ಹಲವು ಭಾರತೀಯರಿಗೆ ಮೊದಲ ಬಾರಿಗೆ ಗೊತ್ತಾಗಿದ್ದು ಆಗಲೇ.

ಅಲ್ಲಿ ವ್ಯಕ್ತವಾಗಿದ್ದು ಭಾರತ ವಿರೋಧಿ ಭಾವನೆ ಎಂಬುದು ಗಾವಸ್ಕರ್ ಅನುಭವವನ್ನು ನಾನು ವ್ಯಾಖ್ಯಾನಿಸಿದ ರೀತಿ. ಅದೊಂದು ರೀತಿಯಲ್ಲಿ ಕೆಣಕುವ ಕ್ರಿಯೆ ಆಗಿತ್ತು. ಆದರೆ ಗಾವಸ್ಕರ್ ಅದನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸಿದರು. ಗಾವಸ್ಕರ್‌ ಮೊದಲು ತಮ್ಮತ್ತ, ನಂತರ ನೆಲದತ್ತ, ಅದಾದ ನಂತರ ಇಮ್ರಾನ್‌ ಪೋಸ್ಟರ್‌ನತ್ತ ಹಾಗೂ ಕೊನೆಯಲ್ಲಿ ಆಕಾಶದತ್ತ ಕೈ ತೋರಿಸಿದರು. ಹೀಗೆ ಮಾಡಿದಾಗ ವೀಕ್ಷಕರಿಂದ ಭಾರೀ ಕರತಾಡನ ವ್ಯಕ್ತವಾಯಿತು ಎಂದು ಗಾವಸ್ಕರ್ ಬರೆದಿದ್ದಾರೆ.

ಶೋಯೆಬ್ ಅಖ್ತರ್, ಮೊಹಮ್ಮದ್ ಸಮಿ ಮುಂತಾದವರಿಂದ ನಡೆದ ಬೌಲಿಂಗ್ ಆಕ್ರಮಣ ಎದುರಿಸಿ ವೀರೇಂದ್ರ ಸೆಹ್ವಾಗ್ ಅವರು 2004ರ ಮಾರ್ಚ್‌ನಲ್ಲಿ ತ್ರಿಶತಕ ಬಾರಿಸಿದಾಗ ಮುಲ್ತಾನ್‌ ಕ್ರೀಡಾಂಗಣದಲ್ಲಿ ನಾನೂ ಇದ್ದೆ. ನಾನು ಆಗ ಪಾಕಿಸ್ತಾನಿ ಸ್ನೇಹಿತನೊಬ್ಬನ ಜೊತೆ ಇದ್ದೆ. ಅಲ್ಲಿ ಕೆಲವರು ನಮ್ಮನ್ನು ಭಾರತೀಯರು ಎಂದು ಗುರುತಿಸಿ, ಹಸ್ತಾಕ್ಷರ ಕೇಳಿದರು.

ಇದು ನಡೆದಿದ್ದು ಅಟಲ್ ಬಿಹಾರಿ ವಾಜಪೇಯಿ ಹಾಗೂ ಪರ್ವೇಜ್ ಮುಷರಫ್ ಅವರು ಮುಂದಡಿ ಇಟ್ಟು ಆಯೋಜಿಸಿದ್ದ ಸ್ನೇಹ ಸರಣಿಯ ವೇಳೆ. ಕಾರ್ಗಿಲ್‌ನಲ್ಲಿ ದೊಡ್ಡ ಕದನ ನಡೆಸಿದ್ದು ಇದೇ ನಾಯಕರು (ಕಾರ್ಗಿಲ್ ಯುದ್ಧದ ವೇಳೆ ಎರಡೂ ಕಡೆ ತಲಾ ಐದುನೂರು ಜನ ಸತ್ತಿದ್ದರು). ಆಗ ವಾಜಪೇಯಿ ಭಾರತದ ಪ್ರಧಾನಿಯಾಗಿದ್ದರು, ಮುಷರಫ್ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥರಾಗಿದ್ದರು. ಇಬ್ಬರೂ ಪರಸ್ಪರರ ವಿರುದ್ಧ ಅಣ್ವಸ್ತ್ರಗಳನ್ನು ಸಜ್ಜುಗೊಳಿಸಿದ್ದರು. ಅದೂ ಅಲ್ಲದೆ, ಆ ಹೊತ್ತಿನಲ್ಲಿ ಕಾಶ್ಮೀರವು ಅತ್ಯಂತ ತೀವ್ರ ಪ್ರಮಾಣದ ಹಿಂಸಾಚಾರವನ್ನು ಕಂಡಿತ್ತು ಎಂಬುದನ್ನು ಮರೆಯಬಾರದು.

2001ರಲ್ಲಿ ಕಾಶ್ಮೀರದಲ್ಲಿ 2016ಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಜನರ ಸಾವು ಸಂಭವಿಸಿತ್ತು (2001ರಲ್ಲಿ 4507 ಜನ ಹಾಗೂ 2016ರಲ್ಲಿ 267 ಜನ ಸತ್ತಿದ್ದಾರೆ). ಹಾಗಾಗಿ, ಕಾಶ್ಮೀರದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ ಎಂದು ನಾವು ಭಾವಿಸುವುದು ಅಲ್ಲಿನ ವಾಸ್ತವ ಗಮನಿಸಿ ಅಲ್ಲ. ಬದಲಿಗೆ, ಮಾಧ್ಯಮಗಳು ಮತ್ತು ರಾಜಕೀಯದ ಪರಿಣಾಮವಾಗಿ ನಾವು ಹೀಗೆ ಭಾವಿಸಿದ್ದೇವೆ. ವಾಸ್ತವದಲ್ಲಿ ಕಡಿಮೆ ಹಿಂಸಾಚಾರ ಇರುವ, ಆದರೆ ಜನರ ಮನಸ್ಸಿನಲ್ಲಿ ಹಿಂದಿಗಿಂತಲೂ ಹೆಚ್ಚು ಹಿಂಸಾಚಾರ ನಡೆಯುತ್ತಿರುವ ಈ ಹೊತ್ತಿನಲ್ಲಿ ಇಂಥದ್ದೊಂದು ಸರಣಿಯನ್ನು ಕಲ್ಪಿಸಿಕೊಳ್ಳುವುದೇ ಒಂದು ವಿಸ್ಮಯ!

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT