ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಆಡಳಿತ: ಪಥ್ಯವಾಗದ ನಿದರ್ಶನ

Last Updated 5 ಜನವರಿ 2017, 19:30 IST
ಅಕ್ಷರ ಗಾತ್ರ
ಭಾರತೀಯ ಕ್ರಿಕೆಟ್ ಆಡಳಿತ ವ್ಯವಸ್ಥೆ ದೊಡ್ಡ ಬಿಕ್ಕಟ್ಟೊಂದರಲ್ಲಿ ತನ್ನನ್ನು ಕಂಡುಕೊಂಡಿದೆ. ಜನವರಿ 2ನೆಯ ತಾರೀಖಿನಂದು ಸರ್ವೋಚ್ಚ ನ್ಯಾಯಾಲಯವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಕಾರ್ಯದರ್ಶಿ ಅಜಯ್ ಶಿರ್ಕೆ ಇಬ್ಬರನ್ನೂ ಅವರ ಅಧಿಕಾರ ಸ್ಥಾನಗಳಿಂದ ತೆಗೆದುಹಾಕಿದೆ.
 
ಇವರ ಸ್ಥಳದಲ್ಲಿ ಮಂಡಳಿಯ ಹಿರಿಯ ಉಪಾಧ್ಯಕ್ಷರು ಮತ್ತು ಜಂಟಿ ಕಾರ್ಯದರ್ಶಿ ಸದ್ಯಕ್ಕೆ ಕಾರ್ಯ ನಿರ್ವಹಿಸಲಿ ಎಂದು ನ್ಯಾಯಾಲಯವು ಹೇಳಿತು. ಆದರೆ ನ್ಯಾಯಾಲಯವು ಅನುಷ್ಠಾನಗೊಳಿಸುತ್ತಿರುವ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಈಗಿರುವ ಯಾವ ಪದಾಧಿಕಾರಿಯೂ ಅಧಿಕಾರದಲ್ಲಿ ಉಳಿಯುವಂತಿಲ್ಲ. ಅಷ್ಟೇ ಅಲ್ಲ.
 
ಕಳೆದ ಆರು ತಿಂಗಳುಗಳಿಂದ ಕ್ರಿಕೆಟ್ ಆಡಳಿತವನ್ನು ಸರಿಪಡಿಸಲು ನ್ಯಾಯಮೂರ್ತಿ ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಂತೆ ನ್ಯಾಯಾಲಯವು ನೀಡಿದ್ದ ನಿರ್ದೇಶನಗಳನ್ನು ಉಲ್ಲಂಘಿಸಿದ ಹಾಗೂ ನ್ಯಾಯಾಲಯಕ್ಕೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವ ಗಂಭೀರ ಆರೋಪಗಳನ್ನು ಅನುರಾಗ್ ಠಾಕೂರ್ ಎದುರಿಸುತ್ತಿದ್ದಾರೆ. ಅವರು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಾಗಿ ಕಾಣುತ್ತಿಲ್ಲ.
 
ರಾಜ್ಯಗಳಲ್ಲಿಯೂ ಕ್ರಿಕೆಟ್ ಆಡಳಿತದ ಚುಕ್ಕಾಣಿ ಹಿಡಿದು, ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ತಮ್ಮ ಜಹಗೀರನ್ನಾಗಿ ಮಾಡಿಕೊಂಡಿದ್ದವರು ಒಬ್ಬೊಬ್ಬರಾಗಿ ರಾಜೀನಾಮೆ ನೀಡತೊಡಗಿದ್ದಾರೆ. ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ನಿರಂಜನ್ ಷಾ ನಾಲ್ಕು ದಶಕಗಳಿಂದ ಅಧಿಕಾರದಲ್ಲಿದ್ದರು. ರಾಜಸ್ತಾನದಲ್ಲಿ ರುಂಗ್ಟ ಕುಟುಂಬ, ಪಂಜಾಬಿನಲ್ಲಿ ಐ.ಎಸ್.ಬಿಂದ್ರಾ ಮತ್ತು ಎಂ.ಪಿ.ಪಾಂಡೋವ್, ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಿಧನರಾದ ಜಗಮೋಹನ ದಾಲ್ಮಿಯಾ, ತಮಿಳುನಾಡಿನಲ್ಲಿ ಎನ್.ಶ್ರೀನಿವಾಸನ್, ಕರ್ನಾಟಕದಲ್ಲಿ ಬ್ರಿಜೇಶ್ ಪಟೇಲ್, ಹಿಮಾಚಲದಲ್ಲಿ ಅನುರಾಗ್ ಠಾಕೂರ್ ಹಾಗೂ ವಿದರ್ಭದಲ್ಲಿ ಶಶಾಂಕ್ ಮನೋಹರ್ ಹೀಗೆ ಪ್ರತಿ ರಾಜ್ಯದಲ್ಲಿಯೂ ಇದ್ದ ಶಕ್ತಿಕೇಂದ್ರಗಳು ಕ್ರಿಕೆಟ್ ಆಡಳಿತವನ್ನು ದಶಕಗಳ ಕಾಲ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದವು.
 
ಇವರ ಆಡಳಿತದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಯಿತು, ಕ್ರಿಕೆಟ್ ಲೀಗ್‌ಗಳು ಹಾಗೂ ಕಿರಿಯರ ಕ್ರಿಕೆಟ್ ತರಬೇತಿ ಚೆನ್ನಾಗಿ ನಡೆಯಿತು ಎಂಬುದು ಸತ್ಯವೇ ಇರಬಹುದು. ಆದರೆ ಕ್ರಿಕೆಟ್‍ ಆಡಳಿತ ವ್ಯವಸ್ಥೆ ಒಂದು ಆಲಿಗಾರ್ಕಿಯಾಗಿ (ಸ್ವಲ್ಪಜನಾಧಿಪತ್ಯ) ರೂಪುಗೊಂಡಿತು. ಎಲ್ಲಿಯೂ ಪಾರದರ್ಶಕತೆಯಿರಲಿಲ್ಲ. ಯಾವುದೇ ಲಂಗುಲಗಾಮಿಲ್ಲದೆ ಹಣ ಖರ್ಚು ಮಾಡಲಾಗುತ್ತಿತ್ತು. ಹಿತಾಸಕ್ತಿ ಸಂಘರ್ಷ ಮತ್ತು ಭ್ರಷ್ಟತೆಯ ಆರೋಪಗಳು ಎಲ್ಲೆಲ್ಲೂ ಕೇಳಿಬರುತ್ತಿದ್ದವು. 
 
ಈ ವಾರ ನಮ್ಮ ಗಮನ ಸೆಳೆಯುವ ಹಲವಾರು ವಿದ್ಯಮಾನಗಳು ನಡೆದಿವೆ. ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ನಾಚಿಕೆಗೇಡಿನ ಘಟನೆಗಳು ಮತ್ತು ನಂತರದಲ್ಲಿ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಇನ್ನೂ ಮಾಸಿಲ್ಲ. ಅಲ್ಲದೆ ಸ್ವತಃ ಸರ್ವೋಚ್ಚ ನ್ಯಾಯಾಲಯವೇ ಚುನಾವಣಾ ಪ್ರಚಾರ ಪ್ರಕ್ರಿಯೆಗಳಲ್ಲಿ ಧರ್ಮ-ಜಾತಿಗಳ ಆಧಾರದ ಮೇಲೆ ಜನರನ್ನು ಪ್ರಚೋದಿಸುವಂತಿಲ್ಲ ಎಂಬ ಹೆಗ್ಗುರುತಾಗುವ ಮಹತ್ವದ ತೀರ್ಪೊಂದನ್ನು ನೀಡಿದೆ.  ನಮ್ಮ ಪ್ರತಿನಿಧಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪ್ರಭಾವಿಸಬಲ್ಲ ಈ ಬಹುಮುಖ್ಯ ತೀರ್ಪಿನ ಬಗ್ಗೆ ಗಂಭೀರವಾದ ಚರ್ಚೆ ನಡೆಯಬೇಕಿದೆ. 
 
ಇಂತಹ ವಿವಾದ- ವಿದ್ಯಮಾನಗಳ ನಡುವೆ ಕ್ರಿಕೆಟ್ ಆಡಳಿತದ ಬಿಕ್ಕಟ್ಟು ನಮ್ಮ ಗಮನ ಸೆಳೆಯಲು ನಿರ್ದಿಷ್ಟ ಕಾರಣವಿದೆ. ಭಾರತದ ಸರ್ವೋಚ್ಚ ನ್ಯಾಯಾಲಯವು ಕ್ರಿಕೆಟ್ ಆಡಳಿತದ ಸಂದರ್ಭದಲ್ಲಿ ಹೊಸದೊಂದು ಪ್ರಯೋಗವನ್ನು ಮಾಡತೊಡಗಿದೆ. ಅದೇನೆಂದರೆ ಇದುವರೆಗೆ ನಿರಂಕುಶ ಅಧಿಕಾರವನ್ನು ಅನುಭವಿಸುತ್ತಿದ್ದ ಪಟ್ಟಭದ್ರರಿಗೆ ನ್ಯಾಯಾಲಯವು ಕೇವಲ ಅಧಿಕಾರದಿಂದ ಕೆಳಗಿಳಿಯುವಂತೆ  ಹೇಳುತ್ತಿಲ್ಲ. ಅವರು ಯಾರೇ ಆಗಿದ್ದರೂ ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿ ಇಂದಾಗಲಿ, ಭವಿಷ್ಯದಲ್ಲಾಗಲಿ ಅಧಿಕಾರವನ್ನು ಅನುಭವಿಸುವಂತಿಲ್ಲ ಎಂದು ಆಜ್ಞೆ ಮಾಡಿದೆ.
 
ಹೀಗೆ ಅಧಿಕಾರದ ಸ್ಥಾನಗಳನ್ನು ಪಡೆಯಲು ಅರ್ಹತೆಯ ಮಾನದಂಡಗಳನ್ನು ಹಾಕಿ, ಅವುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುತ್ತಿರುವುದು ಭಾರತದ ಸಾರ್ವಜನಿಕ ಜೀವನದಲ್ಲಿ ಒಂದು ಅಪರೂಪದ ವಿದ್ಯಮಾನವೇ. 70 ವರ್ಷಕ್ಕಿಂತ ವಯಸ್ಸಾದವರು ಇಲ್ಲವೆ ಮಂತ್ರಿ ಪದವಿಯಂತಹ ರಾಜಕೀಯ ಅಧಿಕಾರವನ್ನು ಹೊಂದಿರುವವರು ಅಥವಾ ಹಿರಿಯ ಅಧಿಕಾರಿಗಳು ಕ್ರಿಕೆಟ್ ಆಡಳಿತವನ್ನು ಪ್ರವೇಶಿಸುವಂತಿಲ್ಲ ಎಂದು ನ್ಯಾಯಾಲಯವು ಹೇಳುತ್ತಿದೆ.
 
ಜೊತೆಗೆ ರಾಜ್ಯದಲ್ಲಾಗಲಿ ಅಥವಾ ರಾಷ್ಟ್ರಮಟ್ಟದಲ್ಲಾಗಲಿ, ಒಂಬತ್ತು ವರ್ಷಗಳಿಗಿಂತ ಹೆಚ್ಚು ಕಾಲ ಕ್ರಿಕೆಟ್ ಆಡಳಿತ ವ್ಯವಸ್ಥೆಯಲ್ಲಿ ಪದಾಧಿಕಾರಿಗಳಾಗುವಂತಿಲ್ಲ ಎಂಬ ನಿಯಮವನ್ನೂ ರೂಪಿಸಿದೆ. ಮೂರು ವರ್ಷ ಅಧಿಕಾರವನ್ನು ಚಲಾಯಿಸಿದವರು ಒಂದು ಅವಧಿಗೆ ಯಾವ ಪದವಿಯನ್ನೂ ಹೊಂದಬಾರದು ಎಂದೂ ನ್ಯಾಯಾಲಯವು ಸೂಚಿಸಿದೆ. ಹೀಗೆ ಅಧಿಕಾರದ ಸ್ಥಾನಗಳು ಕೆಲವರ ಮುಷ್ಟಿಯಲ್ಲಿಯೇ ಉಳಿಯುವುದನ್ನು ತಪ್ಪಿಸಲು, ಹಿತಾಸಕ್ತಿ ಸಂಘರ್ಷವನ್ನು ತಪ್ಪಿಸಲು ಸರ್ವೋಚ್ಚ ನ್ಯಾಯಾಲಯವು ಎಚ್ಚರ ವಹಿಸಿದೆ. 
 
ಇದು ನಿಜವಾಗಿಯೂ ಕುತೂಹಲಕರವಾದ ಮತ್ತು ಭವಿಷ್ಯದಲ್ಲಿ ಭಾರತೀಯ ಪ್ರಜಾಪ್ರಭುತ್ವಕ್ಕೂ ಬಹುಮುಖ್ಯವಾಗಬಹುದಾದ ಬೆಳವಣಿಗೆ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳಿಂದ ತಪ್ಪಿಸಿಕೊಳ್ಳಲು, ತಮ್ಮ ಅಧಿಕಾರ ಸ್ಥಾನಗಳನ್ನು ಉಳಿಸಿಕೊಳ್ಳಲು ಠಾಕೂರ್ ಮತ್ತಿತರರು ಹಲವಾರು ಪ್ರಯತ್ನಗಳನ್ನು ಮಾಡಿದರು. ಬಿಸಿಸಿಐ ತಮಿಳುನಾಡಿನ ಸಹಕಾರ ಸಂಸ್ಥೆಗಳ ನಿಯಮಗಳಡಿಯಲ್ಲಿ ನೋಂದಾಯಿತವಾಗಿರುವ ಸಂಸ್ಥೆ.
 
ಹಾಗಾಗಿ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳು ಮತ್ತು ಲೋಧಾ ಸಮಿತಿಯ ಶಿಫಾರಸುಗಳು ತಮಗೆ ಅನ್ವಯವಾಗುವುದಿಲ್ಲ ಎನ್ನುವ ವಾದವನ್ನೂ ಅವರು ಮುಂದಿಟ್ಟರು. ಅಲ್ಲದೆ ರಾಜ್ಯ ಸಂಸ್ಥೆಗಳ ಪದಾಧಿಕಾರಿಗಳು ಲೋಧಾ ಸಮಿತಿಯ ಶಿಫಾರಸುಗಳನ್ನು ಅನುಸರಿಸಲು ಸಿದ್ದರಿಲ್ಲ, ಹಾಗಾಗಿ ತಾನು ಅಸಹಾಯಕ ಎಂದೂ ಠಾಕೂರ್ ನ್ಯಾಯಾಲಯಕ್ಕೆ ಹೇಳಿದರು. ಇವುಗಳ ನಡುವೆ ಬಿಸಿಸಿಐ ಒಂದು ಸ್ವಾಯತ್ತ ಸಂಸ್ಥೆ, ಅದರ ಆಂತರಿಕ ವ್ಯವಹಾರಗಳಲ್ಲಿ ನ್ಯಾಯಾಲಯವಾಗಲಿ ಅಥವಾ ಸರ್ಕಾರವಾಗಲಿ ತಲೆಹಾಕಬಾರದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯಿಂದ ಹೇಳಿಸಲು ಸಹ ಅವರು ಪ್ರಯತ್ನಿಸಿದರು. 
 
ಹೀಗೆ ನಮಗಿಂದು ಕಾಣಿಸುವ ವಾಸ್ತವ ಇದು: ಅಧಿಕಾರವನ್ನು ಹೇಗಾದರೂ ಉಳಿಸಿಕೊಳ್ಳಲು ಯೋಜನೆಯ ನಂತರ ಯೋಜನೆಗಳನ್ನು ರೂಪಿಸುತ್ತಿರುವ ಕ್ರಿಕೆಟ್ ಆಡಳಿತಗಾರರು ಮತ್ತು ತನ್ನ ನಿರ್ದೇಶನಗಳನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತ, ತನಗೆ ಸಂವಿಧಾನಬದ್ಧವಾಗಿರುವ ಅಧಿಕಾರವನ್ನು ಪ್ರಶ್ನಿಸುವವರನ್ನು ಅಚ್ಚರಿಯಿಂದ ನೋಡುತ್ತಿರುವ ಸರ್ವೋಚ್ಚ ನ್ಯಾಯಾಲಯ. 
 
ಇದೆಲ್ಲದರ ನಡುವೆ ವಾರಕ್ಕೊಂದು ಹೊಸ ವಿವಾದ ಸೃಷ್ಟಿಯಾಗುತ್ತಿರುವಾಗ, ಸರ್ವೋಚ್ಚ ನ್ಯಾಯಾಲಯವು ಕ್ರಿಕೆಟ್ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಲು ಕೈಹಾಕಿದ್ದಾದರೂ ಏಕೆ ಎಂಬುದು ನಮ್ಮೆಲ್ಲರಿಗೂ ಮರೆತೇಹೋಗಿದ್ದರೆ ಆಶ್ಚರ್ಯವೇನಲ್ಲ. ಒಂದೆಡೆ ಐಪಿಎಲ್‌ನಲ್ಲಿ ಕೇಳಿಬರುತ್ತಿದ್ದ ಮ್ಯಾಚ್‍ ಫಿಕ್ಸಿಂಗ್ ಆರೋಪಗಳನ್ನು ತನಿಖೆ ಮಾಡಲು ನ್ಯಾಯಮೂರ್ತಿ ಲೋಧಾ ನೇತೃತ್ವದ,  ಸರ್ವೋಚ್ಚ ನ್ಯಾಯಾಲಯದ ಮೂವರು ನಿವೃತ್ತ ನ್ಯಾಯಮೂರ್ತಿಗಳ ಸಮಿತಿಯನ್ನು ನೇಮಿಸಲಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ಮಾಲೀಕರೇ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಬಗೆಯ ಗುರುತರ ಆರೋಪಗಳು ತನಿಖೆಯನ್ನು ಪ್ರಾರಂಭಿಸಲು ಕಾರಣವಾದರೆ, ಒಳಹೊಕ್ಕಷ್ಟೂ ಕೊಳಕು ಎದ್ದುಕಾಣತೊಡಗಿತು. 
 
ಉದಾಹರಣೆಗೆ, ಬಿಸಿಸಿಐನಿಂದ ನೂರಾರು ಕೋಟಿ ಅನುದಾನ ಪಡೆಯುವ ಬಹುತೇಕ ರಾಜ್ಯ ಸಂಸ್ಥೆಗಳು ಯಾವುದೇ ಸಾಮಾನ್ಯ ನಿಯಮವನ್ನೂ ಪಾಲಿಸದೆ ಹಣ ವ್ಯಯ ಮಾಡಿವೆ. ಸೇವಾ ಶುಲ್ಕ ಕಟ್ಟಿಲ್ಲ ಮತ್ತು ಆಯವ್ಯಯ ಲೆಕ್ಕಪತ್ರಗಳಿಲ್ಲ. ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ನಿರ್ವಹಣಾ ಸಮಿತಿಯ ಸದಸ್ಯರಿಗೆ ಮತ್ತು ಅವರ ಹೆಂಡತಿಯರಿಗೆ ಚಿನ್ನವನ್ನು ನೀಡಲಾಗಿದೆ. ಅಲ್ಲದೆ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಗೋವಾ, ಅಸ್ಸಾಂ, ಒಡಿಶಾ ಕ್ರಿಕೆಟ್ ಸಂಸ್ಥೆಗಳ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ ಮಾತ್ರವಲ್ಲ, ಪುರಾವೆಯೂ ದೊರಕಿದೆ. 
 
ಆರೋಪಿಗಳ ಪಟ್ಟಿಯಲ್ಲಿ ಶಿವಲಾಲ್ ಯಾದವ್‌ರಂತಹ ಮಾಜಿ ಕ್ರಿಕೆಟಿಗರೂ ಇದ್ದಾರೆ. ರಾಜ್ಯ ಸಂಸ್ಥೆಗಳಲ್ಲಿ ಚುನಾಯಿತ ಪದವಿಯನ್ನು ಹೊಂದಿರುವಾಗಲೇ, ಐಪಿಎಲ್ ತಂಡಗಳಲ್ಲಿ ಅಥವಾ ಬಿಸಿಸಿಐನಿಂದಲೇ ಸಂಬಳ ದೊರಕುವ ಕೆಲಸಗಳನ್ನೂ ನಿರ್ವಹಿಸುತ್ತಿರುವ ನಿದರ್ಶನಗಳು ಹಲವು ಇವೆ. ಇಲ್ಲಿ ಹಿತಾಸಕ್ತಿ ಸಂಘರ್ಷವಾಗುತ್ತದೆ ಎನ್ನುವುದನ್ನು ಇವರಾರು ಒಪ್ಪುವುದೂ ಇಲ್ಲ.
 
ಜೊತೆಗೆ ದೇಶದಾದ್ಯಂತ ಕ್ರಿಕೆಟ್ ಆಡಳಿತಕ್ಕೆ ಸಂಬಂಧಿಸಿದಂತೆ ಅನ್ವಯವಾಗುವ ಸಾಮಾನ್ಯ ನಿಯಮಗಳಿಲ್ಲ. ಗಮನಿಸಿ. ಪ್ರತಿ ರಾಜ್ಯದಲ್ಲಿಯೂ ವಿಭಿನ್ನ ಚುನಾವಣೆಯ ವ್ಯವಸ್ಥೆಯಿದೆ. ಮತದಾರನಾಗಲು ನಿಯಮಗಳು ಭಿನ್ನವಾಗಿವೆ. ಕೆಲವು ರಾಜ್ಯಗಳಲ್ಲಿ ಒಂದು ಸಂಸ್ಥೆಯಿದ್ದರೆ ಮತ್ತೆ ಕೆಲವೆಡೆ ಮೂರು ಸಂಸ್ಥೆಗಳಿವೆ. ಉದಾಹರಣೆಗೆ, ಕರ್ನಾಟಕಕ್ಕೆ ಒಂದೇ ಸಂಸ್ಥೆಯಿದ್ದರೆ ಮಹಾರಾಷ್ಟ್ರದಲ್ಲಿ ಮೂರು (ಮಹಾರಾಷ್ಟ್ರ, ಮುಂಬೈ ಮತ್ತು ವಿದರ್ಭ) ಹಾಗೂ ಗುಜರಾತಿನಲ್ಲಿಯೂ ಮೂರು (ಸೌರಾಷ್ಟ್ರ, ಬರೋಡ ಮತ್ತು ಗುಜರಾತ್) ಸಂಸ್ಥೆಗಳಿವೆ.
 
ಈ ರಾಜ್ಯಗಳಿಗೆ ಬಿಸಿಸಿಐನ ಚುನಾವಣೆಗಳಲ್ಲಿ ಮೂರು ಮತಗಳು ದೊರೆಯುತ್ತವಲ್ಲದೆ, ರಣಜಿ ಪಂದ್ಯಾವಳಿಗಳಲ್ಲಿಯೂ ಮೂರು ತಂಡಗಳನ್ನು ಆಡಿಸುವ ಅವಕಾಶ ದೊರಕುತ್ತದೆ. ಬಿಸಿಸಿಐನಿಂದ ದೊರಕುವ ಅನುದಾನವೂ ಮಿಕ್ಕ ರಾಜ್ಯಗಳಿಗಿಂತ ಮೂರು ಪಟ್ಟಾಗುತ್ತದೆ. ಐತಿಹಾಸಿಕ ಕಾರಣಗಳಿಂದ ಗುಜರಾತ್ ಮತ್ತು ಮಹಾರಾಷ್ಟ್ರಗಳಿಗೆ ಮೂರು ತಂಡಗಳು ದೊರಕಿರಬಹುದು. ಆದರೆ ಇದಾವುದೂ ವ್ಯವಸ್ಥೆಯೊಳಗಿನವರಿಗೆ ವಿಚಿತ್ರವೆನಿಸುವುದಿಲ್ಲ. ಆದರೆ ಹೊರಗಿನಿಂದ ನೋಡುವವರಿಗೆ ಅಸಹಜವಾದ, ಅಸಮಾನವಾದ ವ್ಯವಸ್ಥೆಯೊಂದು ಕಾಣುತ್ತದೆ. 
 
ನ್ಯಾಯಮೂರ್ತಿ ಲೋಧಾರನ್ನು, ದೇಶದ ಬಹುತೇಕ ಕ್ರಿಕೆಟ್ ಪ್ರಿಯರನ್ನು ಮೇಲಿನ ವಿಚಾರಗಳು ಕಾಡುತ್ತವೆ. ಹಾಗಾಗಿಯೇ ನ್ಯಾಯಮೂರ್ತಿ ಲೋಧಾ ಒಂದು ರಾಜ್ಯಕ್ಕೆ, ಅದರೊಳಗೆ ಎಷ್ಟೇ ಸಂಸ್ಥೆಗಳಿದ್ದರೂ, ಒಂದೇ ಮತ ಎನ್ನುವ ನಿಯಮವನ್ನು ಪ್ರತಿಪಾದಿಸಿದರು. ಯಾವುದೇ ವ್ಯವಸ್ಥೆಯನ್ನೇ ಬದಲಿಸಬಲ್ಲ ಇಂತಹ ನಿರ್ದೇಶನವು ಕ್ರಿಕೆಟ್ ಪಟ್ಟಭದ್ರರಿಗೆ ಪಥ್ಯವಾಗುತ್ತಿಲ್ಲ. ಈ ಸಂಘರ್ಷವು ಎಂದು, ಹೇಗೆ ಮುಗಿಯಬಹುದು, ಸರ್ವೋಚ್ಚ ನ್ಯಾಯಾಲಯವು ತಾನು ಒದಗಿಸಿರುವ ನಿಯಮಗಳ ಚೌಕಟ್ಟಿನೊಳಗೆ ಮಾತ್ರ ಅಧಿಕಾರವನ್ನು ಗಳಿಸಲು ಮತ್ತು ಚಲಾಯಿಸಲು ಸಾಧ್ಯ ಎಂದು ಆಗ್ರಹಿಸುವುದರಲ್ಲಿ, ಅನುಷ್ಠಾನ ಮಾಡುವುದರಲ್ಲಿ ಯಶಸ್ವಿಯಾಗುತ್ತದೆಯೇ ಎನ್ನುವುದು ಕಾನೂನಿನ ಪ್ರಭುತ್ವದಲ್ಲಿ (ರೂಲ್ ಆಫ್‌ ಲಾ) ನಂಬಿಕೆಯಿರುವ ಎಲ್ಲರಿಗೂ ಆಸಕ್ತಿಯಿರುವ ವಿಚಾರ. ಈ ಸಂಘರ್ಷವು ಕ್ರಿಕೆಟ್ ಆಡಳಿತ ಕ್ಷೇತ್ರದಲ್ಲಿ ನಡೆಯುತ್ತಿದೆ ಎನ್ನುವುದು ನೆಪಮಾತ್ರ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT