ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆಗಳಲ್ಲಿ ಕಪ್ಪು ಚುಕ್ಕೆಗಳು ಇನ್ನೂ ಅಳಿಸಿಲ್ಲ

Last Updated 22 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಒಲಿಂಪಿಕ್ ಕ್ರೀಡೆಗಳೆಂದರೆ ವಿಶ್ವದ ಜನರೆಲ್ಲ ಒಂದೆಡೆ ಸೇರುವ ಏಕೈಕ ಸ್ಥಳ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಇದಕ್ಕೆ ಅರ್ಥವೂ ಇದೆ. ಇಲ್ಲಿ ಭಾಗವಹಿಸುವ ಕ್ರೀಡಾಪಟುಗಳು ತಮ್ಮ ಜಾತಿ, ಧರ್ಮ, ಭಾಷೆ ಮರೆತು ಸೋದರಭಾವದೊಂದಿಗೆ, ಕ್ರೀಡಾ ಮನೋಭಾವದೊಂದಿಗೆ ಪದಕಗಳಿಗಾಗಿ ಸೆಣಸುತ್ತಾರೆ. ಕ್ರೀಡಾ ಗ್ರಾಮದಲ್ಲಿ ಇರುವಷ್ಟು ದಿನ ಸಂತೋಷದಿಂದ ನಲಿದಾಡುತ್ತಾರೆ.

ಇಡೀ ಜಗತ್ತು ಇಂದು ಜಾತಿ, ಮತ, ಧರ್ಮ ಮತ್ತು ಭಾಷಾಂಧ ವಿಷ ವರ್ತುಲದಲ್ಲಿ ಹೊಡೆದಾಡುತ್ತಿರುವಾಗ ಒಲಿಂಪಿಕ್ ಕ್ರೀಡೆಗಳ ಸಮಯದಲ್ಲಾದರೂ ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳು ಸ್ನೇಹಭಾವದಿಂದ ಇರುವ ವಿಚಾರ ಖುಷಿ ಕೊಡುವಂಥದ್ದೇ. ಆದರೆ ಒಲಿಂಪಿಕ್ ಕ್ರೀಡೆಗಳು ಯಾವಾಗಲೂ ವಿಶ್ವ ರಾಜಕೀಯಕ್ಕೆ ಕನ್ನಡಿ ಹಿಡಿದಿವೆ.

ಪ್ರಬಲ ರಾಷ್ಟ್ರಗಳು ತಮ್ಮ ಕ್ರೀಡಾಪಟುಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿವೆ. ಬಿಳಿಯರ ವರ್ಣಭೇದ ನೀತಿಯ ವಿರುದ್ಧ ಕಪ್ಪು ಜನರು ಪ್ರತಿಭಟಿಸಿದ್ದಾರೆ. ಯಶಸ್ವಿಯೂ ಆಗಿದ್ದಾರೆ, ಶಿಕ್ಷೆಯನ್ನೂ ಅನುಭವಿಸಿದ್ದಾರೆ. ಆದರೆ ಒಲಿಂಪಿಕ್ ಕ್ರೀಡೆಗಳಿಂದ ತಾತ್ಕಾಲಿಕವಾಗಿಯಾದರೂ ರಾಜಕೀಯ ಮತ್ತು ಜನಾಂಗೀಯ ದ್ವೇಷಗಳಿಗೆ ವಿರಾಮ ಸಿಕ್ಕಿರುವುದು ಸುಳ್ಳಲ್ಲ.

ಲಂಡನ್‌ನಲ್ಲಿ ಈ ವರ್ಷ ನಡೆಯಲಿರುವ 30ನೇ ಒಲಿಂಪಿಕ್ ಕ್ರೀಡೆಗಳಿಗೆ ದಿನಗಣನೆ ಆರಂಭವಾಗಿದೆ. ಬರುವ ಜುಲೈ 27 ರಿಂದ ನಡೆಯಲಿರುವ ಕ್ರೀಡೆಗಳಿಗೆ ಎಲ್ಲ ತಯಾರಿಗಳೂ ಮುಗಿದು ಲಂಡನ್ ಸಜ್ಜಾಗಿ ನಿಂತಿದೆ ಎಂದು ವರದಿಗಳು ಹೇಳಿವೆ. ಈ ಕ್ರೀಡೆಗಳ ಪ್ರಮುಖ ಪ್ರಾಯೋಜಕ ಸಂಸ್ಥೆಯಾಗಿರುವ ಡೌವ್ ಕೆಮಿಕಲ್ಸ್ ವಿರುದ್ಧ ಭಾರತ ಪ್ರತಿಭಟಿಸಿದೆ.

ಭೋಪಾಲ್ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಸಂಸ್ಥೆಯನ್ನು ಖರೀದಿಸಿರುವ ಡೌವ್ ಕೆಮಿಕಲ್ಸ್, ನೊಂದವರಿಗೆ ಸೂಕ್ತ ಪರಿಹಾರ ಕೊಟ್ಟಿಲ್ಲ. ಭಾರತೀಯರನ್ನು ಗುಲಾಮರಂತೆ ನೋಡುವ ಮನೋಭಾವ ಇನ್ನೂ ಹೋಗದಿರುವುದೇ ಪರಿಹಾರ ನಿರಾಕರಿಸಲು ಕಾರಣ ಎಂಬ ಅನುಮಾನ ಮೂಡುತ್ತದೆ.

ಇಂಥ ಅಮಾನವೀಯ ಸಂಸ್ಥೆ, ಕ್ರೀಡೆಗಳ ಮೂಲಕ ಸೋದರಭಾವವನ್ನು ಬಿತ್ತುವ ಒಲಿಂಪಿಕ್ಸ್‌ಗೆ ಪ್ರಾಯೋಜಕತ್ವ ವಹಿಸಿಕೊಳ್ಳಬಾರದು ಎಂಬುದು ಭಾರತದ ನಿಲುವು.

ಆದರೆ ಭಾರತದ ಹೋರಾಟಕ್ಕೆ ಉಳಿದವರ ಬೆಂಬಲ ಸಿಗುವ ನಿರೀಕ್ಷೆ ಇಲ್ಲ. ಭಾರತ ಸಾಂಕೇತಿಕವಾಗಿ ಪ್ರತಿಭಟಿಸುವುದರ ಜೊತೆ, ನಮ್ಮ ಕ್ರೀಡಾಪಟುಗಳು ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಗೆ ಉತ್ತರ ಕೊಡಬೇಕು.

ಮೂರು ದಶಕಗಳಿಗೂ ಹೆಚ್ಚು ಕಾಲ ಕ್ರೀಡಾಂಗಣಗಳನ್ನು ಸುತ್ತಿರುವ ನಾನು, ಈ ಕ್ಷೇತ್ರದಲ್ಲಾದರೂ ಜಾತಿ ಮತ್ತು ಮತಾಂಧ ಭಾವನೆಗಳು ಇರುವುದಿಲ್ಲ ಎಂದು ನಂಬಿದ್ದ ಕಾಲವೊಂದಿತ್ತು. ರಾಷ್ಟ್ರದ ವಿವಿಧ ಕ್ರೀಡಾ ಮಂಡಳಿಗಳ ಅಧಿಕಾರ ಕುರ್ಚಿ ಹಿಡಿದು ಕುಳಿತಿದ್ದ ಮೇಲ್ವರ್ಗದ ಜನ, ರಾಷ್ಟ್ರಕ್ಕೆ ಪದಕ ಗೆದ್ದುಕೊಡುವ ಕೆಳವರ್ಗದ ಕ್ರೀಡಾಪಟುಗಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂಬುದು ಹಿರೊಷಿಮಾ ಏಷ್ಯನ್ ಕ್ರೀಡೆಗಳ ಸಮಯದಲ್ಲಿ ಕಂಡುಬಂದಿತ್ತು. ದೂರದ ಓಟಗಾರ ಬಹಾದ್ದೂರಪ್ರಸಾದ್, `ಪ್ರಜಾವಾಣಿ~ಗೆ ನೀಡಿದ್ದ ವಿಶೇಷ ಸಂದರ್ಶನದಲ್ಲಿ ಅತ್ತುಬಿಟ್ಟಿದ್ದರು.

“ನಾನೊಬ್ಬ ಮೋಚಿ (ಸಮಗಾರ). ನನ್ನ ತರಬೇತುದಾರರೆಲ್ಲ ಉಚ್ಚ ಜಾತಿಯವರು. ನಾನು ಅವರಿಗೆ ಬೇಕಾಗಿರುವುದು ಪದಕ ಗೆಲ್ಲಲು ಮಾತ್ರ. ಅವರ‌್ಯಾರೂ ನನ್ನ ಜೊತೆ ಊಟ ಮಾಡುವುದಿಲ್ಲ. ನನ್ನನ್ನು ಅಸ್ಪ್ರಶ್ಯನಂತೆಯೇ ನೋಡುತ್ತಾರೆ. ನನಗೆ ಬಹಳ ಬೇಸರವಾಗಿದೆ. ಆದರೆ ನಾನೇನೂ ಮಾಡಲು ಆಗುತ್ತಿಲ್ಲ. ಪದಕವೊಂದೇ ನನಗೆ ಆಸರೆ.

ನನ್ನಂತೆಯೇ ಇನ್ನೂ ಕೆಲವು ದಲಿತ ಕ್ರೀಡಾಪಟುಗಳು ನೋವು ಅನುಭವಿಸಿದ್ದಾರೆ” ಎಂದು ಅವರು ಹೇಳಿದ್ದರು. “ಪತ್ರಿಕೆಗಳಲ್ಲಿ ಬರೆದರೆ ಏನಾಗುತ್ತದೆ? ಅವರಿಗೆ ನಮ್ಮ ಮೇಲಿನ ಸಿಟ್ಟು ಇನ್ನಷ್ಟು ಹೆಚ್ಚುತ್ತದೆ. ಸಾರ್ವಜನಿಕವಾಗಿ ತೋರಿಕೆಗೆ ಅವರು ನಮ್ಮನ್ನು ಅಪ್ಪಿಕೊಳ್ಳಬಹುದು. ಆದರೆ ಮಾನಸಿಕವಾಗಿ ಅವರೆಂದೂ ನಮ್ಮನ್ನು ಒಪ್ಪಿಕೊಳ್ಳುವುದಿಲ್ಲ.

ನಾನು ಓಡುವ ಟ್ರ್ಯಾಕ್ ಮೇಲೆ ಜಾತಿಯ ಹೆಸರು ಬರೆದಿದೆಯೇ? ಆಟಗಾರರು ಆಡುವ ಚೆಂಡಿನ ಮೇಲೆ ಜಾತಿಯ ಹೆಸರು ಬರೆದಿದೆಯೇ? ನಾನು ಓಡುವಾಗ ಭಾರತೀಯ, ಊಟಕ್ಕೆ ಕುಳಿತುಕೊಳ್ಳುವಾಗ ಮಾತ್ರ ಮೋಚಿಯೇ? ಕ್ರೀಡೆಯೇ ಬದುಕು ಮತ್ತು ಭವಿಷ್ಯ ಎಂದು ಭಾವಿಸಿರುವ ನನಗೆ ಬೇರೆ ಯಾವ ದಾರಿಯೂ ಉಳಿದಿಲ್ಲ” ಎಂದು ಬಿಕ್ಕಳಿಸಿದಾಗ ಮಹಮ್ಮದ್ ಅಲಿ ಉರ್ಫ್ ಕ್ಯಾಸಿಯಸ್ ಮಾರ್ಸೆಲಸ್ ಕ್ಲೇ ಅವರ ಒಲಿಂಪಿಕ್ ಕಥೆ ನೆನಪಾಗಿತ್ತು.

ಕ್ರೀಡಾಪಟುಗಳು ತಮ್ಮ ಆರಂಭಿಕ ದಿನಗಳಲ್ಲಿ, ಅಂದರೆ ಶಾಲಾ-ಕಾಲೇಜು ಹಂತದಲ್ಲಿ ಇಂಥ ಸಮಸ್ಯೆ ಎದುರಿಸಿದರೂ, ರಾಷ್ಟ್ರವನ್ನು ಪ್ರತಿನಿಧಿಸುವ ಮಟ್ಟಕ್ಕೆ ಏರಿದಾಗ ಈ ಕೊಳಕು ವ್ಯವಸ್ಥೆ ಇರುವುದಿಲ್ಲ ಎಂದು ಭಾವಿಸಿದ್ದೆ. ಆದರೆ ಬುಡದಿಂದ ಮೇಲಿನ ವರೆಗೂ ವ್ಯವಸ್ಥೆ ಹಾಗೆಯೇ ಇದೆ ಎಂಬುದು ಗೊತ್ತಾದಾಗ ಮನಸ್ಸಿಗೆ ಕಸಿವಿಸಿಯಾಗಿತ್ತು.

ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭವಾದಾಗ ಎಷ್ಟೋ ಕಡೆ ಅಡುಗೆ ಮಾಡುವವರ ವಿರುದ್ಧ ತಿರಸ್ಕಾರದ ಮಾತುಗಳು ಕೇಳಿಬಂದಿದ್ದವು. ಹಾಗೆಯೇ ಹಲವು ಮಂದಿ ಕ್ರೀಡಾ ತರಬೇತುದಾರರು ಮಕ್ಕಳ ಆಟದ ವಿಷಯದಲ್ಲೂ ತಾರತಮ್ಯ ತೋರುತ್ತಾರೆ ಎಂಬ ದೂರುಗಳೂ ಕೇಳಿಬಂದಿವೆ.

ಆದರೆ ಯಾರೂ ಗಟ್ಟಿಯಾಗಿ ಪ್ರತಿಭಟಿಸುವುದಿಲ್ಲ. ಭವಿಷ್ಯಕ್ಕೆ ಪೆಟ್ಟು ಬೀಳುವುದೆಂಬ ಹೆದರಿಕೆ ಕ್ರೀಡಾಪಟುಗಳಲ್ಲಿದೆ. ಮಹಮ್ಮದ್ ಅಲಿಯಂತೆ ಬಿಳಿಯ ಗೂಂಡಾಗಳನ್ನು ಚಚ್ಚಿ ಹಾಕುವ ಧೈರ್ಯ ಎಲ್ಲರಿಗೂ ಇರುವುದಿಲ್ಲ!

ಬಹಾದ್ದೂರಪ್ರಸಾದ್ ಪದಕ ಗೆದ್ದಾಗ ಮಾತ್ರ ಹೇಗೆ `ಭಾರತೀಯ~ನಾಗುತ್ತಾನೋ ಹಾಗೆಯೇ ಕ್ಯಾಸಿಯಸ್ ಮಾರ್ಸೆಲಸ್ ಕ್ಲೇ, 1960 ರ ರೋಮ್ ಒಲಿಂಪಿಕ್ಸ್‌ನ ಲೈಟ್ ಹೆವಿವೇಟ್ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಾಗ, `ನಾನೊಬ್ಬ ಅಮೆರಿಕನ್. ಅಮೆರಿಕಕ್ಕಾಗಿ ಚಿನ್ನದ ಪದಕ ಗೆದ್ದೆ. ಎಲ್ಲ ಬಿಳಿಯರೂ ನನ್ನನ್ನು ಈ ಅಂಶದಿಂದಲೇ ಗೌರವಿಸುತ್ತಾರೆ~ ಎಂದು ಭಾವಿಸಿದ್ದ. ರೋಮ್‌ನಲ್ಲಿ ರಷ್ಯದ ಪತ್ರಕರ್ತನೊಬ್ಬ ಛೇಡಿಸುವ ರೀತಿಯಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದ.

“ನೀನೊಬ್ಬ ನೀಗ್ರೊ ಆಗಿ, ಅಮೆರಿಕದ ಕೆಲವು ರೆಸ್ಟುರಾಗಳಲ್ಲಿ ನೀಗ್ರೊಗಳಿಗೆ ಪ್ರವೇಶ ಇಲ್ಲದಿರುವ ಬಗ್ಗೆ ನಿನಗೆ ಏನನಿಸುತ್ತದೆ?” ಎಂಬ ಪ್ರಶ್ನೆಗೆ, “ಏ ರಷ್ಯನ್, ಈ ಸಮಸ್ಯೆ ಬಗೆಹರಿಸಲು ಅರ್ಹ ವ್ಯಕ್ತಿಗಳು ಅಮೆರಿಕದಲ್ಲಿದ್ದಾರೆ. ನಾನು ಎಲ್ಲಿ ಬೇಕಾದರೂ ಏನು ಬೇಕಾದರೂ ತಿನ್ನಬಹುದು. ವಿಶ್ವದಲ್ಲೇ ಅಮೆರಿಕ ಶ್ರೇಷ್ಠ ರಾಷ್ಟ್ರ” ಎಂದು ಜಂಬದಿಂದ ಉತ್ತರಿಸಿದ್ದ. ಆದರೆ ಚಿನ್ನದ ಪದಕ ಗೆದ್ದು ಅಮೆರಿಕಕ್ಕೆ ಮರಳಿದ ಕ್ಯಾಸಿಯಸ್ ಕ್ಲೇಗೆ, ತಾನು ಹಾಗೆ ಮಾತನಾಡಬಾರದಿತ್ತು ಎಂದು ಕಸಿವಿಸಿಯಾಗುವ ಅನುಭವ ಎದುರಾಯಿತು.

ಒಮ್ಮೆ ಕ್ಲೇ ಮತ್ತು ಆತನ ಸ್ನೇಹಿತ `ಬಿಳಿಯರಿಗಾಗಿ ಮಾತ್ರ~ ಎಂದು ಬೋರ್ಡ್ ಹಾಕಿದ್ದ ಹೊಟೆಲ್ ಒಂದರಲ್ಲಿ ತಿಂಡಿ ಕೇಳಿದಾಗ ಅದರ ಮಾಲಿಕ, `ಇಲ್ಲಿ ನೀಗ್ರೊಗಳಿಗೆ ಊಟ ಕೊಡುವುದಿಲ್ಲ~ ಎಂದು ದಬಾಯಿಸಿ ಹೊರಹಾಕಿದ್ದ. ಅಲ್ಲೇ ಇದ್ದ ಕೆಲವು ಬಿಳಿಯ ಗೂಂಡಾಗಳು ಅವಹೇಳನಕಾರಿಯಾಗಿ ಮಾತನಾಡಿದ್ದರು.

ಕೊನೆಗೆ ಹೊಡೆದಾಟವಾಗಿ ಕ್ಲೇ ಗೂಂಡಾಗಳ ಮುಖದಿಂದ ರಕ್ತ ಸುರಿಯುವಂತೆ ಹೊಡೆದುಹಾಕಿದ್ದ. ಬೇಸರದಿಂದ ಚಿನ್ನದ ಪದಕವನ್ನು ನದಿಯಲ್ಲಿ ಎಸೆದಿದ್ದ. (ಕ್ಯಾಸಿಯಸ್ ಕ್ಲೇ ನಂತರ ತಮ್ಮ ಹೆಸರನ್ನು ಮಹಮ್ಮದ್ ಅಲಿ ಎಂದು ಬದಲಿಸಿಕೊಂಡರು. ಅವರು ಬರೆದಿರುವ `ದಿ ಗ್ರೇಟೆಸ್ಟ್~ ಪುಸ್ತಕದಲ್ಲಿ ಆ ಘಟನೆಯನ್ನು ಅವರು ವಿವರಿಸಿದ್ದಾರೆ. ಅಮೆರಿಕದ ಬಿಳಿಯರಿಗೆ ತಾವು ಮಾಡಿದ ತಪ್ಪು ಕೊನೆಗೂ ಅರಿವಾಗಿ, ಎಷ್ಟೋ ವರ್ಷಗಳ ನಂತರ ಹೊಸದೊಂದು ಚಿನ್ನದ ಪದಕವನ್ನು ಮಹಮ್ಮದ್ ಅಲಿ ಅವರಿಗೆ ಕೊಡಲಾಯಿತು.)

ದಕ್ಷಿಣ ಆಫ್ರಿಕದಲ್ಲಿ ಹಲವು ಮಂದಿ ಕಪ್ಪು ವರ್ಣೀಯ ಕ್ರೀಡಾಪಟುಗಳು ವರ್ಣಭೇದ ನೀತಿಯಿಂದಾಗಿ ಉತ್ತಮ ಭವಿಷ್ಯವನ್ನೇ ಕಾಣಲಿಲ್ಲ. ಆದರೆ ನೆಲ್ಸನ್ ಮಂಡೇಲಾ ಕ್ರೀಡೆಯ ಮೂಲಕವೇ ಬಿಳಿಯರು ಮತ್ತು ಕರಿಯರನ್ನು ಒಂದುಗೂಡಿಸಲು ಯತ್ನಿಸಿದರು.

ಈಗ ದಕ್ಷಿಣ ಆಫ್ರಿಕದ ಕ್ರೀಡೆಯಲ್ಲಿ ಅಧಿಕೃತವಾಗಿ ವರ್ಣಭೇದ ನೀತಿ ಇಲ್ಲ. ಆದರೆ ಬಿಳಿಯರು ಒಳಗೊಳಗೇ ತಾವೇ ಶ್ರೇಷ್ಠರು ಎಂದು ಮೆರೆಯುತ್ತಲೇ ಇದ್ದಾರೆ. ಭಾರತದ ಕ್ರಿಕೆಟ್‌ನಲ್ಲಿ ಈಗಲೂ ಬಿಳಿ ಚರ್ಮಕ್ಕೇ ಹೆಚ್ಚಿನ ಮರ್ಯಾದೆ ಇದೆ.

ಕಳೆದ ವರ್ಷ ನಡೆದ ವಿಶ್ವ ಕಪ್ ಕ್ರಿಕೆಟ್ ಸಮಯದಲ್ಲಿ ಬಿಳಿಯ ಪತ್ರಕರ್ತರಿಗೆ ವಿಶೇಷ ಮರ್ಯಾದೆ ಇತ್ತು. ಬಿಳಿಯರಿಗೆ ಸಲಾಮು ಹೊಡೆಯುವುದನ್ನು ಕ್ರಿಕೆಟ್ ಮಂಡಳಿ ಅಧಿಕಾರಿಗಳು ಇನ್ನೂ ಬಿಟ್ಟಿಲ್ಲ. ಜನರಿಗೂ ಬಿಳಿಯರನ್ನು ಕಂಡರೆ ಅದೇನೋ ವಿಶೇಷ.

ಬೇರೆ ಕ್ರೀಡೆಗಳಲ್ಲಿ ಇದು ಕಂಡುಬರುವುದಿಲ್ಲವಾದರೂ ಬೇರೆ ರೀತಿಯ ತಾರತಮ್ಯಗಳು ಇನ್ನೂ ಇವೆ. ಒಲಿಂಪಿಕ್ ಕ್ರೀಡೆಗಳ ಪದಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಗಳಿಸಿದ ದಿನ ಅಥವಾ ಕನಿಷ್ಠ ಹತ್ತಾದರೂ ಚಿನ್ನದ ಪದಕ ಗೆದ್ದ ದಿನ ವ್ಯವಸ್ಥೆಯಲ್ಲಿ ಬದಲಾವಣೆ ಕಂಡುಬರಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT