ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಸಿ ಜಿನ್ ಪಿಂಗ್ ಮತ್ತೊಬ್ಬ ಮಾವೊ ಆಗುವರೇ?

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಚೀನಾದಲ್ಲಿ ಹೆಚ್ಚು ಜನಪ್ರಿಯವಾಗಿರುವ WeChat ಎಂಬ ಚಾಟಿಂಗ್ ಆ್ಯಪ್‌ನಲ್ಲಿ ಕಳೆದ ವಾರ ಚೀನಾದ ಕೊನೆಯ ಚಕ್ರವರ್ತಿ ಪು ಯೀ ‘Is my Qing dynasty returning?’ ಎಂದು ಕೇಳುವ ಚಿತ್ರ ಹರಿದಾಡತೊಡಗಿತು. ಈ ಚಿತ್ರದಲ್ಲಿನ ಮೊನಚು, ಕುಹಕ, ಕೊಂಕು ಸಹಿಸದ ಸರ್ಕಾರ ಕೊನೆಗೆ ಆ ಚಿತ್ರವನ್ನು ಅಂತರ್ಜಾಲದಿಂದ ಅಳಿಸಿ ಹಾಕಲು ಮುಂದಾಯಿತು. ಚಾಟಿಂಗ್ ಆ್ಯಪ್‌ನಲ್ಲಿ ಇಂತಹ ಯಾವುದೇ ಚಿತ್ರವನ್ನಾಗಲೀ, ಸಂದೇಶವನ್ನಾಗಲೀ ಹರಿಬಿಡದಂತೆ ನಿರ್ಬಂಧ ಹೇರಿತು.

ಅಸಲಿಗೆ ಈ ಚಿತ್ರ ಕ್ಸಿ ಜಿನ್ ಪಿಂಗ್ ಅಧಿಕಾರ ದಾಹವನ್ನು ಮತ್ತು ಚೀನಾ ಕಮ್ಯುನಿಸ್ಟ್‌ ಪಕ್ಷದ (CPC) ಇತ್ತೀಚಿನ ಕ್ರಮವನ್ನು ಅಣಕಿಸುತ್ತಿತ್ತು ಎಂಬುದು ನಿರ್ಬಂಧಕ್ಕೆ ಕಾರಣ.

ಹಾಗಾದರೆ ಚೀನಾದಲ್ಲಿ ಆಗುತ್ತಿರುವ ಬೆಳವಣಿಗೆ ಏನು? ನಿಮಗೆ ನೆನಪಿರಬಹುದು. 2017ರ ಅಕ್ಟೋಬರ್‌ನಲ್ಲಿ ಕಮ್ಯುನಿಸ್ಟ್‌ ಪಾರ್ಟಿ ಆಫ್ ಚೀನಾದ 19ನೆಯ ರಾಷ್ಟ್ರೀಯ ಅಧಿವೇಶನ ನಡೆಯಿತು. ಆ ಬಳಿಕ ಕ್ಸಿ ಜಿನ್ ಪಿಂಗ್, ಮಾವೊ ನಂತರ ಚೀನಾದ ಪ್ರಭಾವಶಾಲಿ ನಾಯಕನಾಗಿ ಹೊರಹೊಮ್ಮಿದರು. ಅವರ ಹೆಸರು ಮಾವೊ ಮತ್ತು ಡೆಂಗ್ ಕ್ಸಿಯೋಪಿಂಗ್ ಜೊತೆ ಪಕ್ಷದ ಸಂವಿಧಾನದಲ್ಲಿ ಸೇರಿಕೊಂಡಿತು. ಮೊನ್ನೆ ಫೆಬ್ರುವರಿ 25ರಂದು ಕಮ್ಯುನಿಸ್ಟ್‌ ಪಕ್ಷವು ಕ್ಸಿ ಅವರನ್ನು ಇನ್ನಷ್ಟು ಎತ್ತರಕ್ಕೇರಿಸುವ ಹೊಸದೊಂದು ಪ್ರಸ್ತಾವವನ್ನು ಮುಂದೊಡ್ಡಿತು.

ರಾಷ್ಟ್ರದ ಅಧ್ಯಕ್ಷ ಪದವಿಗೆ ಇರುವ ಎರಡು ಅವಧಿಯ ನಿರ್ಬಂಧವನ್ನು ತೆಗೆದುಹಾಕುವುದಾಗಿ ಹೇಳಿತು. ಒಂದೊಮ್ಮೆ ಈ ಪ್ರಸ್ತಾವ ಚೀನಾದ ಸಂಸತ್ತಿನಲ್ಲಿ ಅನುಮೋದನೆಗೊಂಡರೆ 64 ವರ್ಷದ ಜಿನ್ ಪಿಂಗ್, ತಾವು ಇಚ್ಛಿಸಿದರೆ ಜೀವಿತಾವಧಿಯ ಉದ್ದಕ್ಕೂ ಚೀನಾದ ಅಧ್ಯಕ್ಷರಾಗಿ ಅಧಿಕಾರ ನಿರ್ವಹಿಸಬಹುದು. ಯಾವುದೇ ಕಾನೂನಾತ್ಮಕ ಅಡ್ಡಿಯಿಲ್ಲದೇ ಚಕ್ರವರ್ತಿಯಂತೆ ಅಧಿಕಾರ ಗದ್ದುಗೆಯಲ್ಲಿ ಕೂರಬಹುದು. ಈ ವಿಷಯ ಇದೀಗ ಚೀನಾದ ಒಳಗೆ ಮತ್ತು ಜಾಗತಿಕ ಚಾವಡಿಯಲ್ಲಿ ಚರ್ಚೆಯ ವಿಷಯವಾಗಿದೆ. ಆತಂಕ, ಸಂಶಯದ ಪ್ರಶ್ನೆಗಳನ್ನು ಮುಂದೊಡ್ಡಿದೆ.

ಹಾಗೆ ನೋಡಿದರೆ, ಚೀನಾ ಪ್ರಜಾಪ್ರಭುತ್ವ ಮಾದರಿ ಆಡಳಿತ ಹೊಂದಿಲ್ಲ. ಏಕಪಕ್ಷದ ಸರ್ವಾಧಿಕಾರ ಆಡಳಿತ ವ್ಯವಸ್ಥೆ ಚೀನಾದಲ್ಲಿದೆ. ‘ನೂತನ ಪ್ರಜಾಪ್ರಭುತ್ವ’ ಎಂಬ ಮಾವೊ ಕಲ್ಪನೆಯಡಿ ಮೊದಲಿಗೆ ಒಂದು ವ್ಯವಸ್ಥೆ ಮೈದಳೆಯಿತಾದರೂ ನಂತರ ಅವರೇ ಅದನ್ನು ಮರು ವ್ಯಾಖ್ಯಾನಿಸಿ ‘ಪೀಪಲ್ಸ್ ಡೆಮಾಕ್ರಾಟಿಕ್ ಡಿಕ್ಟೇಟರ್ಶಿಪ್’ ಎಂದು ಕರೆದರು. ಹೀಗೆ ಹೊಸದೊಂದು ಆಡಳಿತಾತ್ಮಕ ಕಲ್ಪನೆಯಡಿ ಕಾರ್ಯನಿರ್ವಹಿಸುತ್ತಾ ಬಂದ ಚೀನಾ ಅಂದಿನಿಂದ ಇದುವರೆಗೂ ಸಾಕಷ್ಟು ಏಳುಬೀಳು ಕಂಡಿದೆ. ಕ್ರಾಂತಿ, ಕಲಹಗಳಿಗೆ ಸಾಕ್ಷಿಯಾಗಿದೆ.

1949ರಲ್ಲಿ ಕಮ್ಯುನಿಸ್ಟ್‌ ಪಕ್ಷ ಅಧಿಕಾರ ವಹಿಸಿಕೊಂಡ ನಂತರ ಚೀನಾದಲ್ಲಿ ಆಗಿರುವ ದೊಡ್ಡ ರಾಜಕೀಯ ಪಲ್ಲಟಗಳನ್ನು ಬಹುಶಃ ಮೂರು ವಿಭಾಗದಲ್ಲಿ ಗುರುತಿಸಬಹುದು. ಮೊದಲ 30 ವರ್ಷ ಮಾವೊ ಚಿಂತನೆಗಳು ಚೀನಾದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗೆ ಕಾಯಕಲ್ಪ ಒದಗಿಸಿದವು. ನಂತರದ 30 ವರ್ಷ ಡೆಂಗ್ ಕ್ಸಿಯೋ ಪಿಂಗ್ ಅವರ ಸುಧಾರಣಾ ಚಿಂತನೆಗಳ ಮೇಲೆ ಚೀನಾ ಮುನ್ನಡೆಯಿತು, ಅಗಾಧವಾಗಿ ಬೆಳೆಯಿತು. ಇದೀಗ ಕ್ಸಿ ಅವಧಿಯಲ್ಲಿ ಮೂರನೇ ಸುತ್ತಿನ ರೂಪಾಂತರಕ್ಕೆ ತೆರೆದುಕೊಳ್ಳುತ್ತಿದೆ.

1949ರಲ್ಲಿ ಬೀಜಿಂಗ್‌ನಲ್ಲಿರುವ ಟಿಯಾನಾನ್ಮೆನ್ ಚೌಕದ ‘ಸ್ವರ್ಗ ಶಾಂತಿ ದ್ವಾರದ’ (Gate of Heaven Peace) ಬಳಿ ನಿಂತು ಮಾವೊ ತ್ಸೆ ತುಂಗ ‘ಚೀನಾದ ಜನ ಎದ್ದು ನಿಂತಿದ್ದಾರೆ’ ಎಂದು ಘೋಷಿಸಿದ್ದರು. ಇದೇ ಆಧುನಿಕ ಚೀನಾದ ಘೋಷವಾಕ್ಯ ಆಯಿತು. ನಂತರ ಚೀನಾದ ಸರ್ವೋತ್ಕೃಷ್ಟ ನಾಯಕರಾಗಿ ಮಾವೊ ಹೊರಹೊಮ್ಮಿದರು.

1966 ರಿಂದ 76ರ ವರೆಗೆ ನಡೆದ ಸಾಂಸ್ಕೃತಿಕ ಕ್ರಾಂತಿ, ಕಮ್ಯುನಿಸ್ಟ್‌ ಸಿದ್ಧಾಂತವನ್ನು ದೇಶದ ಉದ್ದಗಲಕ್ಕೂ ಹರಡಿ, ಮತ್ತಿತರ ಸಿದ್ಧಾಂತಗಳಿಗೆ ಎಡೆ ಸಿಗದಂತೆ ನೋಡಿಕೊಂಡಿತು. ಕೊನೆಗೆ ಹಿಂಸೆಯ ಮಾರ್ಗ ಹಿಡಿದು ಕಮ್ಯುನಿಸಂ ಒಪ್ಪದವರನ್ನು ದೇಶದ ಹೊರಕ್ಕೆ ನೂಕಲಾಯಿತು. ಈ ಕ್ರಾಂತಿಯು ಚೀನಾದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ಋಣಾತ್ಮಕ ಪ್ರಭಾವ ಬೀರಿತು. ನೆತ್ತರ ಕೋಡಿಗೆ ಸಾಕ್ಷಿಯಾಯಿತು.

ಚೀನಾದ ಮೇಲೆ ಮಾವೊ ಹಿಡಿತ ಎಷ್ಟರಮಟ್ಟಿಗಿತ್ತು ಎಂದರೆ, ಮಾವೊ ಆಡಿದ್ದೇ ಸಂಹಿತೆ, ನಡೆದದ್ದೇ ಸದಾಚಾರ ಎಂಬಂತಾಯಿತು. ಆ ಕಾಲಘಟ್ಟದಲ್ಲಿ ಪ್ರತಿ ಪ್ರಜೆಯೂ ಮಾವೊ ಘೋಷಣೆಗಳಿರುವ ಕೆಂಪು ಪುಸ್ತಕವನ್ನು (Little Red Book) ಹಿಡಿದುಕೊಂಡೇ ತಿರುಗಾಡಬೇಕಾದ ಪರಿಸ್ಥಿತಿ ಇತ್ತು. ಆರ್ಥಿಕವಾಗಿ ಮುಗ್ಗರಿಸಿದ್ದು, ಛಲದಿಂದ ಮುಂದೆ ಜಿಗಿದದ್ದು (ಗ್ರೇಟ್ ಲೀಪ್ ಫಾರ್ವರ್ಡ್), ಕೈಗಾರಿಕೆಗಳನ್ನು ಕಟ್ಟಿದ್ದು, ಅನತಿಕಾಲದಲ್ಲೇ ದೊಡ್ಡ ಅರ್ಥವ್ಯವಸ್ಥೆಯಾಗುವ ವಾಂಛೆಯಿಂದ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕತ್ತರಿ ಹಾಕಿ ಮದುವೆ, ಸಂತಾನ ಎಲ್ಲಕ್ಕೂ ತಕರಾರು ತೆಗೆದದ್ದು, ಹೀಗೆ ಒಳಿತು ಕೆಡಕುಗಳ ಮಿಶ್ರಣ ಮಾವೊರ ಚೀನಾದಲ್ಲಿ ನಡೆಯಿತು.

ಮಾವೊ ನಂತರದ ಅವಧಿಯಲ್ಲಿ ಆರ್ಥಿಕ ಸುಧಾರಣಾ ಪರ್ವಕ್ಕೆ ನಾಂದಿ ಹಾಡಿದವರು ಡೆಂಗ್ ಕ್ಸಿಯೋಪಿಂಗ್. ಹಾಗಂತ ಅವರು ಸರ್ಕಾರದ ಮುಖ್ಯಸ್ಥರ ಸ್ಧಾನದಲ್ಲಿ ಕೂರಲಿಲ್ಲ. ಹಿಂಬದಿ ನಿಂತೇ ಎಲ್ಲವನ್ನೂ ನಿರ್ದೇಶಿಸಿದರು. ಚೀನಾವನ್ನು ಸರ್ವಾಧಿಕಾರದಿಂದ ಸಾಮೂಹಿಕ ನಾಯಕತ್ವ ಎಂಬ ಪ್ರಬುದ್ಧತೆಯತ್ತ ಕೊಂಡೊಯ್ಯುವ, ಸ್ಟಾಲಿನ್ ನಂತರದ ಸೋವಿಯತ್ ಮಾದರಿ ಅಥವಾ ಪೂರ್ವ ಯುರೋಪಿಯನ್ ಆಡಳಿತ ವ್ಯವಸ್ಥೆಯನ್ನುಜಾರಿಗೆ ತರುವ ಗುರಿ ಡೆಂಗ್ ಅವರಿಗಿತ್ತು.

‘ಪಕ್ಷದ ಉನ್ನತಿಗೂ ದೇಶದ ಪ್ರಗತಿಗೂ ಏಕ ವ್ಯಕ್ತಿ ಕೇಂದ್ರಿತ ಅಧಿಕಾರ ಮಾರಕ’ ಎಂಬುದು ಡೆಂಗ್ ನಿಲುವಾಗಿತ್ತು. ಮಾವೊ ಜಿಡಾಂಗ್ ಪ್ರಭಾವದಿಂದ ವ್ಯವಸ್ಥೆಯನ್ನು ಹೊರತಂದು ಆಡಳಿತಕ್ಕೊಂದು ಸಾಂಸ್ಥಿಕ ರೂಪ ಕೊಡಲು ಡೆಂಗ್ ಮುಂದಾದರು. ಮುಖ್ಯವಾಗಿ 1982ರಲ್ಲಿ ದೇಶದ ಸಂವಿಧಾನಕ್ಕೆ ತಿದ್ದುಪಡಿ ತಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿಯನ್ನು 2 ವರ್ಷಗಳಿಗೆ ಸೀಮಿತಗೊಳಿಸಲಾಯಿತು. ಇದು ಸರ್ವಾಧಿಕಾರಿ ಆಡಳಿತ ವ್ಯವಸ್ಥೆಯಿರುವ ಇತರ ದೇಶಗಳಿಗಿಂತ ಚೀನಾವನ್ನು ಭಿನ್ನಸಾಲಿನಲ್ಲಿ ನಿಲ್ಲಿಸಿತು.

ಸಾಮಾನ್ಯವಾಗಿ ಸರ್ವಾಧಿಕಾರ ಇರುವ ದೇಶಗಳಲ್ಲಿ ನಾಯಕ ಸಂಪೂರ್ಣ ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ವರುಷಗಳು ಉರುಳಿದ ಹಾಗೆ ದೌರ್ಜನ್ಯ, ಭ್ರಷ್ಟಾಚಾರ ಪ್ರಕರಣಗಳು ಏರುತ್ತವೆ. ಉತ್ತರದಾಯಿತ್ವ ಇಲ್ಲವಾಗುತ್ತದೆ. ಈ ಬೆಳವಣಿಗೆಗಳು ಚೀನಾದಲ್ಲಿ ಸಾಧ್ಯವಾಗದಂತಹ ವ್ಯವಸ್ಥೆಯನ್ನು ಡೆಂಗ್ ರೂಪಿಸಿದರು. ಕಮ್ಯುನಿಸ್ಟ್‌ ಪಕ್ಷದೊಳಗೆ ಪ್ರತಿಭೆಗೆ ಮನ್ನಣೆ ನೀಡುವ, ಕಾರ್ಯಕ್ಷಮತೆಗೆ ಒತ್ತುಕೊಟ್ಟು ಜವಾಬ್ದಾರಿಗಳನ್ನು ನೀಡುವ ಪದ್ಧತಿ ಜಾರಿಗೆ ಬಂತು. ಆರ್ಥಿಕತೆಯ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ಹಮ್ಮಿಕೊಂಡದ್ದರಿಂದ ಚೀನಾ ಚೇತರಿಸಿಕೊಳ್ಳುವಂತಾಯಿತು.

ಈ ಎಲ್ಲ ಪ್ರಯತ್ನ, ಪ್ರಯೋಜನಗಳನ್ನು ಬೆನ್ನಿಗೆ ಕಟ್ಟಿಕೊಂಡು ಬಂದ ಕ್ಸಿ ಜಿನ್‌ ಪಿಂಗ್ ತನ್ನ ಪೂರ್ವಿಕರಿಗಿಂತ ಒಂದು ಹೆಜ್ಜೆ ಮುಂದಿಡುವ ಪ್ರಯತ್ನ ಮಾಡಿದರು. ‘ಚೀನಾ ಕನಸು’ ಎಂಬ ಹೊಸ ಕಲ್ಪನೆಯನ್ನು ಜನರ ಮುಂದಿಟ್ಟರು. ತಮ್ಮ ಭಾಷಣಗಳಲ್ಲಿ ಅದನ್ನೇ ಪುನರುಚ್ಚರಿಸಿದರು. ಜಿನ್ ಪಿಂಗ್ ಅವಧಿಯಲ್ಲಿ ‘ರಾಷ್ಟ್ರೀಯವಾದ’ ಹೆಚ್ಚು ಪ್ರಖರಗೊಂಡಿತು. ಅವರು ಚೀನಾದಲ್ಲಿ ಮಾಡಿದ ಯಾವ ಭಾಷಣವನ್ನು ಆಲಿಸಿದರೂ ರಾಷ್ಟ್ರೀಯವಾದದ ಪಸೆ ಕಾಣುತ್ತದೆ. ಮಾವೊ ಮತ್ತು ಕಾರ್ಲ್ ಮಾರ್ಕ್ಸ್ ಸಿದ್ಧಾಂತದಿಂದ ಹೆಚ್ಚೇನೂ ಎರವಲು ಪಡೆಯದ, ಬದಲಾದ ಕಾಲಕ್ಕೆ ತಕ್ಕಂತೆ, ಚೀನಾದ ಪರಂಪರೆಯನ್ನೂ ಬಿಡದಂತೆ, ಕನ್ಫ್ಯೂಷಿಯಸ್ ತತ್ವಗಳನ್ನು ಉಲ್ಲೇಖಿಸುತ್ತಾ ಮಾತನಾಡಬಲ್ಲ ಕಲೆ ಕ್ಸಿ ಅವರಿಗಿದೆ. ‘ಚೀನಾ ಕನಸು’ ಎಂಬ ಕಲ್ಪನೆಯ ಭಾಗವಾಗಿ ಅವರು ಮುಂದಿಟ್ಟಿರುವ ಗುರಿ, 2049ರ ವೇಳೆಗೆ ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗುವುದು, ಅರ್ಥಾತ್ ಅಮೆರಿಕ, ಸೋವಿಯತ್ ಮತ್ತು ಐರೋಪ್ಯ ರಾಷ್ಟ್ರಗಳನ್ನು ಹಿಂದಿಕ್ಕುವುದು.

ಉಳಿದಂತೆ, ಕ್ಸಿ ತಮ್ಮ ಮೊದಲ ಅವಧಿಯಲ್ಲಿ ಪಕ್ಷದ ಒಳಗೆ ಇದ್ದ ಭ್ರಷ್ಟಾಚಾರವನ್ನು ನಿಗ್ರಹಿಸುವ ಪ್ರಯತ್ನ ಮಾಡಿದರು. ನ್ಯಾಯಾಂಗ ವ್ಯವಸ್ಥೆಗೆ ಅಚ್ಚುಕಟ್ಟು ತಂದರು. ಅಭಿವೃದ್ಧಿಯ ವೇಗ ಕಾಯ್ದುಕೊಳ್ಳುವ ಜೊತೆಗೆ ಮಾಲಿನ್ಯ ನಿಯಂತ್ರಣದ ಕಡೆಗೂ ಗಮನ ಹರಿಸಿದರು. ಈ ಪ್ರಯತ್ನಗಳು ದೇಶದ ಒಳಗೆ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು. ಕ್ಸಿ ಅವಧಿಯಲ್ಲಿ ಚೀನಾ ಜಾಗತಿಕ ಮಹತ್ವಾಕಾಂಕ್ಷೆಗೆ ಕಾವು ಕೊಟ್ಟಿತು. ಈಗಾಗಲೇ ಚೀನಾ ಎರಡನೇ ಆರ್ಥಿಕ ಶಕ್ತಿಯಾಗಿ ಬೆಳೆದು ನಿಂತಿದೆ, ವಿಶ್ವಸಂಸ್ಥೆಯ ಖಜಾನೆ ತುಂಬುತ್ತಿರುವ ಮೂರನೇ ದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರ
ವಾಗಿದೆ, ಭದ್ರತಾ ಮಂಡಳಿಯಲ್ಲಿ ಪ್ರಾಬಲ್ಯ ಕಾಯ್ದುಕೊಂಡಿದೆ ಎಂದರೆ ಅದರಲ್ಲಿ ಕ್ಸಿ ಅವರ ದೊಡ್ಡ ಪಾಲು ಇದೆ.

ಮಾವೊ ರೀತಿಯಲ್ಲಿ ಕಮ್ಯುನಿಸ್ಟ್‌ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಪುಟ್ಟ ಕೆಂಪು ಪುಸ್ತಕವನ್ನು ಕ್ಸಿ ಬರೆಯದಿದ್ದರೂ ಚೀನಾದ ಆಡಳಿತ ಧ್ಯೇಯ, ಇಡಬೇಕಾದ ಹೆಜ್ಜೆಗಳ ಕುರಿತು ಕ್ಸಿ ಮಾಡಿರುವ ಭಾಷಣಗಳನ್ನು ಸಂಕಲನ ರೂಪದಲ್ಲಿ ತರಲಾಗಿದೆ. ಅದನ್ನು ಶಾಲೆಯಲ್ಲಿ ಮಕ್ಕಳಿಗೆ ಬೋಧಿಸಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ರಾಷ್ಟ್ರದ ದಿಕ್ಕು ಬದಲಿಸಿದ ಮಾವೊ, ಡೆಂಗ್ ಅವರ ಸಾಲಿನಲ್ಲೇ ಕ್ಸಿ ಅವರನ್ನು ಗುರುತಿಸಲಾಗುತ್ತಿದೆ.

ಹಾಗಂತ ಕ್ಸಿ ಬಗ್ಗೆ ತಕರಾರು ಇಲ್ಲವೆಂದಲ್ಲ. ಕ್ಸಿ ಏನೆಲ್ಲಾ ಮಾಡಲು ಸಾಧ್ಯವಾಗಿಲ್ಲ ಎಂಬ ದೊಡ್ಡ ಪಟ್ಟಿಯೇ ಇದೆ. ಏರುತ್ತಿರುವ ಸಾಲ ಪ್ರಮಾಣಕ್ಕೆ ಅಂಕುಶ ಹಾಕಲಿಲ್ಲ. ಜನಪ್ರಿಯತೆಯ ಮೋಹಕ್ಕೆ ಬಿದ್ದಿರುವ ಕ್ಸಿ ದೇಶ ಹಿತದ ದೃಷ್ಟಿಯಿಂದ ಕಠಿಣ ಕ್ರಮಗಳನ್ನು ಕೈಗೊಂಡಿಲ್ಲ. ಮಹತ್ವಾಕಾಂಕ್ಷೆಯ ಆರ್ಥಿಕ ಸುಧಾರಣಾ ಯೋಜನೆಗಳನ್ನು ರೂಪಿಸಿದರಾದರೂ ಅದರ ಅನುಷ್ಠಾನ ಇನ್ನೂ ಸಾಧ್ಯವಾಗಿಲ್ಲ. ಹೀಗೆ ಸಾಕಷ್ಟು ಇಲ್ಲ, ಆಗಿಲ್ಲಗಳನ್ನು ಹೆನ್ರಿ ಎಂ ಪಾಲ್ಸನ್ ‘ಡೀಲಿಂಗ್ ವಿಥ್ ಚೈನಾ’ ಕೃತಿಯಲ್ಲಿ ಕೊಡುತ್ತಾರೆ. ಕ್ಸಿ ನಿಲುವು ಒಪ್ಪದ ಚೀನಾದ ರಾಜಕೀಯ ತಜ್ಞರ ಆರೋಪವೂ ಇದೇ ಆಗಿದೆ. ಆದರೆ ಇದೀಗ ಅನಿರ್ದಿಷ್ಟಾವಧಿ ಅಧಿಕಾರ ಬೆಂಬಲಿಸುವ ದೊಡ್ಡ ಗುಂಪು ಇದೇ ವಾದವನ್ನು ತಿರುಗಿಸಿ ಬಳಸುತ್ತಿದೆ.

ಕ್ಸಿ ಅವರಿಗೆ ಸಂಪೂರ್ಣ ಅಧಿಕಾರ ದೊರೆತರೆ ಈ ಎಲ್ಲದರ ಬಗ್ಗೆ ಕಠಿಣ ನಿಲುವು ತಳೆಯಬಹುದು. ಕ್ರಾಂತಿಕಾರಕ ಹೆಜ್ಜೆಯಿಡಬಹುದು ಎನ್ನುತ್ತಾ ಕಮ್ಯುನಿಸ್ಟ್‌ ಪಕ್ಷದ ಪ್ರಸ್ತಾವವನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ. ಹಾಗಾದರೆ, ಕ್ಸಿ ಅವರಿಗೆ ಅನಿರ್ದಿಷ್ಟಾವಧಿ ಅಧಿಕಾರ ದೊರೆತರೆ ಏನೆಲ್ಲಾ ಆಗಬಹುದು? ಒಬ್ಬ ವ್ಯಕ್ತಿಯ ಕೈಗೆ ಸಂಪೂರ್ಣ ಅಧಿಕಾರ ಹೋದರೆ ಏನಾದೀತು ಎಂಬುದಕ್ಕೆ ಸ್ಟಾಲಿನ್ ಮತ್ತು ಮಾವೊ ಉದಾಹರಣೆಗಳಿವೆ. ಒಂದೊಮ್ಮೆ ಅದೇ ಮಾರ್ಗದಲ್ಲಿ ಕ್ಸಿ ನಡೆದರೆ, ‘ಪ್ರಜಾಪ್ರಭುತ್ವ ಮಾದರಿ ಆಡಳಿತ ಬೇಕು’ ಎಂದು ಕೇಳಿಬರುತ್ತಿರುವ ಕ್ಷೀಣ ದನಿಯೂ ಚೀನಾದಲ್ಲಿ ಉಡುಗಿ ಹೋಗಬಹುದು. ಪಶ್ಚಿಮ ಮತ್ತು ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ನೆರೆಯ ರಾಷ್ಟ್ರಗಳೊಂದಿಗೆ ಚೀನಾದ ವ್ಯಾಜ್ಯವಿದೆ.

ಚೀನಾದ ಮಿಲಿಟರಿ ಈ ವ್ಯಾಜ್ಯವನ್ನು ಬಲ ಪ್ರಯೋಗದ ಮೂಲಕ ಕೊನೆಗಾಣಿಸಲು ಉತ್ಸಾಹ ತೋರಬಹುದು. ಕಂಕುಳ ಕೂಸಿನಂತಿರುವ ಥೈವಾನ್ ಸುತ್ತಾ ಚೀನಾದ ಬಾಹುಗಳು ಬಿಗಿಯಾಗಬಹುದು. ದೇಶದೊಳಗೆ ಆರ್ಥಿಕ ಕ್ರಾಂತಿಗೆ ಮುಂದಾಗಿ, ಬೆಳವಣಿಗೆಯ ವೇಗ ಹೆಚ್ಚಿಸುವ ಕ್ರಮಗಳನ್ನು ಕ್ಸಿ ಕೈಗೊಳ್ಳಬಹುದು. ಸಾಮರಿಕವಾಗಿ ಮತ್ತಷ್ಟು ಶಕ್ತಿ ಪಡೆದು ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲಿ ತನ್ನ ಹಿಡಿತ ಸಾಧಿಸಿ, ಅಮೆರಿಕಕ್ಕೆ ಯಾವುದೇ ಪಾತ್ರ ಇರದಂತೆ ನೋಡಿಕೊಳ್ಳಬಹುದು.

ಚೀನಾ ಮತ್ತು ಅಮೆರಿಕದ ನಡುವೆ ಹೊಸದೊಂದು ‘ಶೀತಲ ಸಮರ’ ಆರಂಭವಾಗಬಹುದು. ಮುಖ್ಯವಾಗಿ ನಮ್ಮ ಮತ್ತು ಚೀನಾದ ನಡುವೆ ಹಲವು ಬಿಕ್ಕಟ್ಟುಗಳಿವೆ. ಯಾರೇ ಅಧಿಕಾರದಲ್ಲಿದ್ದರೂ ಕಳೆದ ಮೂರು ದಶಕಗಳ ಅವಧಿಯಲ್ಲಿ ಚೀನಾ ಸರ್ಕಾರ ಭಾರತದೊಂದಿಗೆ ವರ್ತಿಸುವ ರೀತಿಯಲ್ಲಿ ಹೆಚ್ಚು ಬದಲಾವಣೆಗಳಾಗಿಲ್ಲ. ಹಾಗಂತ ಮುಂದೆ ಆಗಬಾರದೆಂದಿಲ್ಲ. ಹಾಗಾಗಿ ಭಾರತವೂ ಕೊಂಚ ಉಸಿರು ಬಿಗಿಹಿಡಿಯಬೇಕಾದ ಸಂದರ್ಭ ಎದುರಾಗಬಹುದು.

‘ಮ್ಯಾಜಿಸ್ಟ್ರೇಟ್ ಆಫ್ ದಿ ಹಿಸ್ಟರಿ’ ಎಂದು ಕರೆಸಿಕೊಳ್ಳುತ್ತಿದ್ದ ಲಾರ್ಡ್ ಆಕ್ಟನ್ 1887ರಲ್ಲಿ ಒಂದು ಮಾತು ಹೇಳಿದ್ದ: ‘ಅಧಿಕಾರ ಭ್ರಷ್ಟರನ್ನಾಗಿಸುತ್ತದೆ. ಸಂಪೂರ್ಣ ಅಧಿಕಾರ, ಸಂಪೂರ್ಣ ಭ್ರಷ್ಟರನ್ನಾಗಿಸುತ್ತದೆ’. ಚೀನಾ ಕಮ್ಯುನಿಸ್ಟ್‌ ಪಕ್ಷ, ಕ್ಸಿ ಜಿನ್ ಪಿಂಗ್ ಅವರನ್ನು ಎತ್ತರದ ಸ್ಥಾನದಲ್ಲಂತೂ ಇಟ್ಟಿದೆ. ಕಡುಕಪ್ಪು ಕೂದಲಿನ, ಕ್ರೌರ್ಯದ ಸುಳಿವು ಸಿಗದಂತೆ ಒಪ್ಪ ಮಾಡಿರುವ ಮುಖಕ್ಕೆ, ಕಿರುನಗೆ ಅಂಟಿಸಿದಂತಿರುವ ಕ್ಸಿ ಜಿನ್‌ ಪಿಂಗ್ ಆ ಎತ್ತರದಲ್ಲಿ ಕುಳಿತು ಸಂಯಮದಿಂದ ಆಳುತ್ತಾರೋ, ನಿರಂಕುಶ ಪ್ರಭುವಾಗಿ ಕ್ರಾಂತಿ ಕಲಹಗಳಿಗೆ ನೆತ್ತರಿನ ಮುನ್ನುಡಿ ಬರೆಯುತ್ತಾರೋ ಈಗಲೇ ಊಹಿಸಲಂತೂ ಅಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT