ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ ಬಿಟ್ಟು ಬೇರೆ ಯಾದಿ ತಯಾರಿಸಿ ಮೋದಿ

Last Updated 16 ಜನವರಿ 2017, 19:30 IST
ಅಕ್ಷರ ಗಾತ್ರ

ಭೂಮಂಡಲದಲ್ಲಿ ಎಲ್ಲೋ ಅಂಗೈಯಗಲ ಜಾಗದ ಆಡಳಿತ ನಡೆಸುತ್ತಿದ್ದರೂ ಇಡೀ ಜಗತ್ತಿಗೆ ತಾನೇ ಚಕ್ರವರ್ತಿ ಎಂದು ಭಾವಿಸುವ ಎಷ್ಟೋ ಜನ ರಾಜರನ್ನು ಇತಿಹಾಸ ಕಂಡಿದೆ. ಈ ಭ್ರಮಾಧೀನ ಚಕ್ರವರ್ತಿಗಳು ಸರ್ವಾಧಿಕಾರಿಗಳೇ ಆಗಿರುತ್ತಾರೆ ಎನ್ನುವುದನ್ನು ಹೇಳಬೇಕಿಲ್ಲ.

ಇವತ್ತಿನ ಕಾಲದಲ್ಲೂ ‘ದೇಶದ ಎಲ್ಲಾ ಗಂಡುಮಕ್ಕಳೂ ನಾನು ಮಾಡಿಸಿರುವ ಹಾಗೇ ತಲೆಗೂದಲನ್ನು ಕ್ರಾಪ್ ಮಾಡಿಸಿಕೊಳ್ಳಬೇಕು’ ಎಂದು ಕಠಿಣ ಫರ್ಮಾನು ಹೊರಡಿಸುವ ಒಬ್ಬ ಐಲುದೊರೆಯನ್ನು ಕಂಡಿದ್ದೇವೆ. ಅನೇಕ ದೇಶಗಳ ಪ್ರಧಾನಿಗಳು ಮತ್ತು ಅಧ್ಯಕ್ಷರ ಆಡಳಿತಾತ್ಮಕ ಕ್ರಮಗಳಿಗಿಂತ ಈ ‘ಸ್ವಂತ ನಾನೇಶ್ವರ’ ಭ್ರಮೆಯ ತೆವಲುಗಳೇ ಹೆಚ್ಚಾಗಿ ಚರ್ಚೆಗೆ ಬರುವುದನ್ನು ಎಲ್ಲಕಡೆ ಗಮನಿಸಬಹುದು. ಯಾರು ಒಪ್ಪಲಿ ಬಿಡಲಿ, ನಮ್ಮ ದೇಶದಲ್ಲೂ ಈ ಕುರಿತ ಚರ್ಚೆ ಮತ್ತೊಮ್ಮೆ ಆರಂಭವಾಗಿದೆ.

ಚರಕದ ಮುಂದೆ ಖಾದಿ ನೂಲುತ್ತ ಕುಳಿತ ನರೇಂದ್ರ ಮೋದಿಯವರ ಚಿತ್ರ ಹೊತ್ತ ಕ್ಯಾಲೆಂಡರ್ ಇದಕ್ಕೆ ಸಿಕ್ಕ ಹೊಚ್ಚ ಹೊಸ ಸಂಗತಿ. ಅವರನ್ನು ಬಲ್ಲವರಿಗೆ ಇದು ಅಚ್ಚರಿ ತರುವುದಿಲ್ಲ. ಕಳೆದ ವರ್ಷದ ನವೆಂಬರ್ 8ರಂದು ಐನೂರು, ಸಾವಿರ ರೂಪಾಯಿ ನೋಟುಗಳ ಅಮಾನ್ಯೀಕರಣದ ಸಂದರ್ಭ, ಆರ್ಥಿಕತೆಯನ್ನು ಮೀರಿದ ಕೆಲವು ರಾಜಕೀಯ, ಸಾಮಾಜಿಕ ಮತ್ತು ವೈಯಕ್ತಿಕ ವಿಷಯಗಳ ಚರ್ಚೆಗೆ ದಾರಿ ಮಾಡಿತು ಎನ್ನುವುದನ್ನು ಗಮನಿಸಬೇಕು.

ಅಮಾನ್ಯೀಕರಣ ಘೋಷಣೆಯಾದ ಆ ಸಂಜೆ, ‘ಬನ್ನಿ, ಸಾಹೇಬರು ಏನೋ ಹೇಳುತ್ತಾರೆ, ಅದನ್ನು ಟಿ.ವಿಯಲ್ಲಿ ಕೇಳಿಸಿಕೊಳ್ಳಿ’ ಎಂದು ಕೇಂದ್ರ ಮಂತ್ರಿ ಮಂಡಲದ ಸಚಿವರನ್ನೆಲ್ಲಾ ಒಂದು ಸಣ್ಣ ಸಭಾಂಗಣದಲ್ಲಿ ಕುರಿಮಂದೆಯಂತೆ ಸೇರಿಸಿ, ನರೇಂದ್ರ ಮೋದಿ ಅವರ ಟಿ.ವಿ ಭಾಷಣವನ್ನು ಕೇಳಿಸಲಾಯಿತಂತೆ! ದೇಶದ ಹಣಕಾಸು ಪರಿಸ್ಥಿತಿ ಊರ್ಜಿತ ಮಾಡಲೆಂದೇ ರಿಸರ್ವ್ ಬ್ಯಾಂಕ್ ಸಿಂಹಾಸನದಲ್ಲಿ ಕೂತ ಪ್ರಭೃತಿಗಳೂ ಆ ಸಚಿವರ ಹಾಗೆ, ನಮ್ಮ ನಿಮ್ಮ ಹಾಗೆ, ದಿಢೀರನೆ ಟಿ.ವಿ ಹಾಕಿ ಪ್ರಪಂಚದ ಮಿಲೇನಿಯಂ ಉಪನ್ಯಾಸವನ್ನು ಕೇಳಿಸಿಕೊಳ್ಳಬೇಕಾಯಿತು.

ಇದು ಬರೀ ನೋಟು ಅಮಾನ್ಯೀಕರಣದ ಘೋಷಣೆ ಮಾತ್ರವಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯ ಎಲ್ಲ ಮಜಲುಗಳನ್ನು ಅಮಾನ್ಯ ಮಾಡುವ ಘೋಷಣೆಯೂ ಆಯಿತು. ಪ್ರಧಾನಮಂತ್ರಿಯ ಸರ್ವಾಧಿಕಾರದ ವ್ಯಾಕರಣ ಎಂಥದ್ದು ಎನ್ನುವುದು ದೇಶವಿದೇಶಗಳಿಗೆ ಗೊತ್ತಾಯಿತು. ‘ರಹಸ್ಯ ಕಾಪಾಡಲು ಹೀಗೆ ಮಾಡಲಾಯಿತು’ ಎಂದು ಎಷ್ಟು ಮುಲಾಮು ಹಚ್ಚಿದರೂ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಗೆ ಅದು ಮಾಡಿದ ಗಾಯ ಮಾಯುವುದಿಲ್ಲ.

ಹಿಂದೆ ಇಂದಿರಾ ಗಾಂಧಿ ಅವರೊಳಗೆ ಮಿತಿಮೀರಿದ ಸರ್ವಾಧಿಕಾರಿ ಮನೋಭಾವ, ‘ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ’ ಎಂದ ಅವರ ಬಂಟನ ಬಾಯಲ್ಲಿ ಹೊರಬಂದಿತ್ತು. ತಾನು ಜನತೆಯಿಂದ ಮತ ಪಡೆದ ‘ಚುನಾಯಿತ ಚಕ್ರವರ್ತಿನಿ’ ಎಂದು ಭಾವಿಸಿದ್ದ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿದಂತೆ, ನರೇಂದ್ರ ಮೋದಿ ಅವರು ಈಗ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿದರು.

ಮೋದಿ ಅವರು ಸಂಸತ್ತು, ಆಡಳಿತ ವ್ಯವಸ್ಥೆ, ಆರ್‌ಬಿಐ ಎಲ್ಲವನ್ನೂ ಕಡೆಗಣಿಸಿ ಸರ್ವಾಧಿಕಾರವುಳ್ಳ ಶಕ್ತಿಕೇಂದ್ರ ಎಂಬಂತೆ ಕೈಗೊಂಡ ಸರ್ಜಿಕಲ್ ದಾಳಿ, ನೋಟು ಅಮಾನ್ಯೀಕರಣ ಮುಂತಾದ ನಿರ್ಧಾರಗಳು ‘ವಿಕೇಂದ್ರೀಕೃತ ತುರ್ತು ಪರಿಸ್ಥಿತಿ’ ಜಾರಿಯನ್ನೇ ಹೇಳುತ್ತಿವೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

‘ಇಂದಿರಾ ಗಾಂಧಿ ಏನು ಮಾಡಬೇಕಾದರೂ ಕಾನೂನಿನ ಚೌಕಟ್ಟಿನೊಳಗೇ ಮಾಡುತ್ತಿದ್ದರು. ಆದರೆ ಕಾನೂನೆಂದರೆ ಏನು ಮಹಾ, ನಾನೇ ಕಾನೂನು ಎಂದು ಮೋದಿ ಭಾವಿಸಿದ್ದಾರೆ. ಅಷ್ಟೇ ಅಲ್ಲ, ತಮಗೇನು ಬೇಕೋ ಅದನ್ನು ಸರ್ಕಾರದ ಆಚೆ ಮಾಡುತ್ತಿಲ್ಲ, ಕಾನೂನುಗಳಿಗೆ ಉಸಿರುಗಟ್ಟಿಸಿ ಸರ್ಕಾರದ ಒಳಗೇ ಮಾಡುತ್ತಿದ್ದಾರೆ’ ಎಂದು ಅರುಣ್ ಶೌರಿ ಹೇಳುವುದು, ಬಯಸಿದ ಸ್ಥಾನಮಾನ ಸಿಗದ ಹತಾಶೆಯಿಂದ ಮಾತ್ರ ಅಲ್ಲ! ಈ ದೃಷ್ಟಿಕೋನದಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಗುತ್ತಿರುವ ಕೆಲವೊಂದು ಬೆಳವಣಿಗೆಗಳು ವ್ಯಾಪಕ ಸಾರ್ವಜನಿಕ ಚರ್ಚೆಗೆ ಅರ್ಹವಾಗಿವೆ.

ಸರ್ವೋಚ್ಚ ನ್ಯಾಯಾಲಯ ಬಿಟ್ಟರೆ ಚುನಾವಣಾ ಆಯೋಗ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇವೆರಡೂ ಸ್ವಾಯತ್ತ ಸಂಸ್ಥೆಗಳಾಗಿ ಇದ್ದವು. ಈಗ ರಿಸರ್ವ್ ಬ್ಯಾಂಕ್ ವ್ಯವಸ್ಥೆಯ ವಿನಾಶ ಕುರಿತು ಅದರ ಸಿಬ್ಬಂದಿಯೇ ಸಾರ್ವಜನಿಕವಾಗಿ ಕಣ್ಣೀರು ಹಾಕುತ್ತಿದ್ದಾರಲ್ಲ? ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ಏನು ಕಾದಿದೆಯೋ ಗೊತ್ತಿಲ್ಲ. ಸೇನಾ ಮುಖ್ಯಸ್ಥರ ಆಯ್ಕೆಯಲ್ಲೂ ಸೇವಾ ಹಿರಿತನ, ಅನುಭವ ಬದಿಗೆ ಸರಿದು ಅದೊಂದು ಪ್ರಧಾನ ಮಂತ್ರಿಗಳ ರಾಜಕೀಯ ಆಯ್ಕೆಯಂತೆಯೇ ಆಗಿಬಿಟ್ಟಿತು.

ಅವರು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮಾಡಿದ ಮೊದಲ ಕೆಲಸವೆಂದರೆ, ಪ್ರಮುಖ ನೇಮಕಗಳಿಗಾಗಿ ಇರುವ ಕೇಂದ್ರ ‘ಸಂಪುಟ ನೇಮಕಾತಿ ಸಮಿತಿ’ಗಳ ಪ್ರಾಬಲ್ಯವನ್ನು ಕರಗಿಸಿ, ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಂಡದ್ದು. ಚುನಾವಣೆಯಲ್ಲಿ ಮೋದಿ ಮೋಡಿಯಿಂದ ಚಕಿತಗೊಂಡಿದ್ದ ದೇಶಕ್ಕೆ ಇದರಿಂದಾಗುವ ಅನಾಹುತ ತಿಳಿಯಲೇ ಇಲ್ಲ. ಸೇನಾ ಮುಖ್ಯಸ್ಥರ ಹೊಸ ಆಯ್ಕೆ ಪ್ರಕಟವಾದ ಮೇಲೆ ಅದರತ್ತ ಕೆಲವರ ಗಮನ ಹರಿಯಿತು. 

ಪ್ರಮುಖವಾದ ಏನಾದರೂ ಘೋಷಣೆ ಆದ ಮೇಲೆ ಪ್ರಧಾನ ಮಂತ್ರಿಗಳು ಅದರ ಬಗ್ಗೆ ಮೌನ ವಹಿಸುವುದೂ ಅಗತ್ಯವಿರುವ ವಿವರಣೆ ಕೊಡದಿರುವುದೂ ಅವರ ಒಂದು ಬಹಳ ದೊಡ್ಡ ತಂತ್ರವಾಗಿದೆ. ಅಮಿತ್ ಷಾ, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಮುಂತಾದವರು ಕೇಂದ್ರ ಸಚಿವರಿಗಿಂತ ಹೆಚ್ಚಾಗಿ ‘ಮೋದಿ ಬೆಂಗಾವಲು ಪಡೆ’ಯ ಯೋಧರಂತೆ ಕೆಲಸ ಮಾಡುತ್ತ ಅವರ ಪ್ರತಿಯೊಂದು ಕ್ರಮವನ್ನೂ ಸಮರ್ಥಿಸಿಕೊಳ್ಳುತ್ತಾರೆ. ಅಂಕಿಅಂಶಗಳ ವಾಸ್ತವಗಳಿಲ್ಲದ ಇವರ ಜೋರು ಮಾತುಗಳನ್ನು ಜನ ನಂಬುವುದು ಕಷ್ಟ.

ಇನ್ನು ಕೇಂದ್ರ ಮಂತ್ರಿಮಂಡಲದ ಮಿಕ್ಕ ಸಚಿವರೆಲ್ಲ ದೆಹಲಿಯಲ್ಲಿ ಇದ್ದಾರಷ್ಟೆ. ಭಾರತೀಯ ಜನತಾ ಪಕ್ಷದ ಹಿರಿಯರೆಲ್ಲ ಚಿಂತನೆಯಿಂದ ನಿವೃತ್ತಿ ಪಡೆದಿದ್ದಾರೆ. ಆದರೆ ಪಕ್ಷದ ಕಿರಿಯರೆಲ್ಲ ಮೋದಿ ಅವರನ್ನು ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸುತ್ತಿದ್ದಾರೆ. ಇವೆರಡರಿಂದ ಯಾರಿಗೆ ಹೆಚ್ಚು ಅಪಾಯ ಎನ್ನುವುದು ಸ್ಪಷ್ಟವಾಗುತ್ತಿದೆ.

ಬಹಳ ದೊಡ್ಡ ವಿಚಾರಗಳ ಬಗ್ಗೆ ಪ್ರಮುಖ ನಿರ್ಧಾರಗಳನ್ನು ಪ್ರಧಾನ ಮಂತ್ರಿಗಳೇ ಸಂಸತ್ತಿನಾಚೆ, ಮುಂಗಡಪತ್ರದಾಚೆ ಘೋಷಿಸಿಬಿಡುತ್ತಾರೆ. ಅಷ್ಟರ ಮಟ್ಟಿಗೆ ಅವರದು ಪ್ರಶ್ನಾತೀತ ಅಧಿಕಾರ. ಆದರೆ ಪಕ್ಷದ ಕೆಲವು ಕಾವಿಧಾರಿ ಕೂಗುಮಾರಿಗಳಿಗೆ ಅವರ ಈ ಕಠಿಣ ನಿಯಮ ಅನ್ವಯಿಸುವುದಿಲ್ಲ. ಸಾಕ್ಷಿ ಮಹಾರಾಜ್, ಉಮಾಭಾರತಿ, ಆದಿತ್ಯನಾಥ್, ಸಚ್ಚಿದಾನಂದ, ನಿರಂಜನ ಜ್ಯೋತಿ ಮುಂತಾದವರ ಮೂಲಕ ದೇಶಕ್ಕೆ ಪಕ್ಷವು ಕೊಡಲು ಉದ್ದೇಶಿಸಿರುವ ಪ್ರಮುಖ ಸಾಮಾಜಿಕ- ಸಾಂಸ್ಕೃತಿಕ ನೀತಿಗಳನ್ನು ಪರಿಚಯಿಸುವ ಹುನ್ನಾರವೇ ಇದಾಗಿರಬಹುದು ಎಂಬ ಶಂಕೆ ಈಗೀಗ ಬಲವಾಗುತ್ತಿದೆ.

ದೇಶದ ಅತ್ಯಂತ ಶಕ್ತಿಶಾಲಿ ರಾಜಕಾರಣಿಯಾದ ನರೇಂದ್ರ ಮೋದಿ ಅವರಿಗೆ ಈ ಕಿರಾತಕ- ಕಿರಾತಕಿಯರ ಪಡೆಯನ್ನು ನಿಯಂತ್ರಿಸುವ ಶಕ್ತಿ ಇಲ್ಲವೇ? ಅಂಥವರ ಆಚಾರವಿಲ್ಲದ ನಾಲಿಗೆಯ ನೀಚ ಬುದ್ಧಿಯನ್ನು ಸರಿಪಡಿಸುವ ಅಧಿಕಾರ ಇಲ್ಲವೇ? ಅವರುಗಳೆಲ್ಲ ಏನಾದರೂ ಅಬದ್ಧಗಳನ್ನು ಮಾತನಾಡುವುದು, ದೇಶದಲ್ಲಿ ಅದಕ್ಕೆ ವಿಭಿನ್ನ ಪ್ರತಿಕ್ರಿಯೆ ಏಳುವುದು, ಎಷ್ಟೋ ದಿನಗಳ ನಂತರ ‘ಅವರ ಈ ಹೇಳಿಕೆ ವೈಯಕ್ತಿಕ, ಇದು ಅವರ ಸ್ವಂತ ನಿಲುವು. ಪಕ್ಷದ ಸಿದ್ಧಾಂತಕ್ಕೂ ಇದಕ್ಕೂ ಸಂಬಂಧವಿಲ್ಲ.

ಪಕ್ಷ ಇದರಿಂದ ಅಂತರ ಕಾಯ್ದುಕೊಳ್ಳುತ್ತದೆ’ ಎಂಬ ಸವಕಲು ಪ್ರಕಟಣೆ ಕೊಡುವುದು- ಇದರ ಅಂತರಾಳ ಯಾರಿಗೆ ಅರ್ಥವಾಗುವುದಿಲ್ಲ? ಸಾರ್ವಜನಿಕ ಚರ್ಚೆ, ಸಂಕಥನಗಳಿಗೆ ಅರ್ಹವಾದ ಮಹತ್ವದ ವಿಷಯಗಳನ್ನು ಮೂಲೆಗೆ ತಳ್ಳುವ ತಂತ್ರವಲ್ಲದೆ ಅದಕ್ಕೂ ಹೆಚ್ಚಿನ ಅನಾಹುತವನ್ನು ಇದು ಮಾಡುತ್ತಿದೆ. ಮತ್ತು ಈ ಕುತಂತ್ರದ ಮಾದರಿ ಮರಳಿ, ಮರಳಿ ಬರುತ್ತಿದೆ ಎನ್ನುವುದನ್ನೂ ಅನೇಕರು ಗುರುತಿಸಿದ್ದಾರೆ.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್‌ನಲ್ಲಿ ಗಾಂಧೀಜಿ ಚಿತ್ರದ ಬದಲು ಚರಕದ ಹಿಂದೆ ಕೂತು ಮೋದಿಯವರೇ ನೇಯುತ್ತಿರುವ ಚಿತ್ರ ಕಾಣಿಸಿಕೊಂಡಿರುವುದು ಅದರಾಚೆ ಬೇರೆ ಏನನ್ನೋ ನೇಯುತ್ತಿದೆಯಲ್ಲವೇ? ಆ ಕುರಿತು ಕಾಂಗ್ರೆಸ್ ಪಕ್ಷ ಬಿಡಿ, ಎಂಥವರೂ ವಿರೋಧ ವ್ಯಕ್ತಪಡಿಸುವುದು ಸಹಜ. ವಿರೋಧ ವ್ಯಕ್ತವಾದೊಡನೆ ಸಚಿವ ಅನಿಲ್ ವಿಜ್ ಎಂಬಾತನ ಬಾಯಲ್ಲಿ ಸತ್ಯ ಹೊರಬಿತ್ತು.

‘ಗಾಂಧಿಗೆ ಮಾರುಕಟ್ಟೆ ಮೌಲ್ಯ ಇಲ್ಲ, ಮೋದಿಗಾದರೆ ಇದೆ. ಖಾದಿ ಉದ್ಧಾರವಾಗಬೇಕಾದರೆ, ಮೋದಿ ಇರಲೇಬೇಕು’ ಎಂದೆಲ್ಲ ಸಚಿವರು ಬಾಯಿಗೆ ಬಂದಂತೆ ಗಳಹಿದ್ದೂ ಆಯಿತು, ಅದಕ್ಕೆ ವಿಷಾದ ವ್ಯಕ್ತಪಡಿಸಿದ್ದೂ ಆಯಿತು. ಗಾಂಧೀಜಿ ಲಂಗೋಟಿ ತೊಟ್ಟುಕೊಂಡೇ ಲಂಡನ್‌ಗೂ ಹೋಗಿಬಂದರು; ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬಂದಾಗ, ಮೋದಿ ಹತ್ತು ಲಕ್ಷ ರೂಪಾಯಿ ವೆಚ್ಚದ ಸೂಟು ಧರಿಸಿದ್ದರು.

ಅದು ಅವರ ಹೆಸರನ್ನೇ ಚಿನ್ನದ ದಾರದಲ್ಲಿ ನೇಯ್ದಿದ್ದ ‘ನಾಮ್ ಕ ವಸ್ತ್ರ’ ಬೇರೆ! ಈಗ ವೇಷಭೂಷಣದಲ್ಲಿ ನರೇಂದ್ರ ಮೋದಿ ಅವರಿಗಿರುವ ಒಳ್ಳೆಯ ಅಭಿರುಚಿಯನ್ನು ಮಹಿಳೆಯರೂ ಮೆಚ್ಚುತ್ತಾರೆ. ಅವರ ದಿರಿಸು ಎಂದಿನಿಂದ ದೇಶಕ್ಕೆ ಪರಿಚಿತವಾಗಿದ್ದರೂ ಈಗ ರಾಜಕಾರಣಿ ಸಂಕುಲ ಪಕ್ಷಾತೀತವಾಗಿ ಅದನ್ನು ಹೊಸದಾಗಿ ಅನುಕರಿಸುತ್ತಿದೆ.

ಹಾಗಿದ್ದೂ ಖಾದಿ ಕ್ಷೇತ್ರದಲ್ಲಿ ಲಂಗೋಟಿ ಹಾಕಿಕೊಂಡು ಕೂತ ಗಾಂಧಿಯ ಗಾದಿ ಮೇಲೇಕೆ ಮೋದಿ ಕಣ್ಣು! ಸರ್ದಾರ್ ಪಟೇಲ್ ಅವರ ‘ಉಕ್ಕಿನ ಮನುಷ್ಯ’ ಬಿರುದಿಗೆ ಮೊದಲು ಕಂಟಕ. ಈಗ ಗಾಂಧಿಯವರ ‘ಖಾದಿ ನೇಯುವ ಚರಕ’ಕ್ಕೆ ಸಂಕಟ. ಮುಂದಿನ ಸರದಿ ಯಾರದು ಎಂಬುದನ್ನು ಇವರೆಲ್ಲರ ಗುಜರಾತ್ ರಾಜ್ಯವೇ ಹೇಳಬೇಕು.

ಯಥಾಪ್ರಕಾರ ಪ್ರಧಾನಮಂತ್ರಿಗಳ ಸಚಿವಾಲಯ ‘ಇದು ಖಾದಿ ಆಯೋಗದ ತೀರ್ಮಾನ, ಇದರ ಬಗ್ಗೆ ಮಾತನಾಡುವುದು ಅನಗತ್ಯ’ ಎಂದಿತು. ಆದರೆ ದೇಶ ಮಾತನಾಡುತ್ತಿದೆ. ದೇಶದಲ್ಲಿ ಖಾದಿ ಉದ್ಧಾರಕ್ಕಾಗಿ ಎಷ್ಟೊಂದು ಹಣ ಖರ್ಚಾಗುತ್ತಿದೆ, ಅದರಲ್ಲಿ ನಿಜವಾಗಿ ಎಷ್ಟು ಅದರ ಪಾಲಿಗೆ ಸಿಗುತ್ತದೆ, ಎಷ್ಟು ಭ್ರಷ್ಟಾಚಾರಿಗಳ ಪಾಲಾಗುತ್ತದೆ,  ಶುದ್ಧ ಹತ್ತಿ ನೂಲಿಗೆ ನೈಸರ್ಗಿಕ ಬಣ್ಣಗಳನ್ನು ಹಾಕಿ ನೇಯಬೇಕಾಗಿದ್ದ ಖಾದಿ ಎಷ್ಟು ತಯಾರಾಗುತ್ತದೆ, ಯಂತ್ರಗಳ ಸಹಾಯದಿಂದ, ಕೃತಕ ನೂಲು ಸೇರಿಸಿ ಖಾದಿ ಹೆಸರಿನಲ್ಲಿ ಎಷ್ಟು ಬಟ್ಟೆ ಮಾರುಕಟ್ಟೆಗೆ ಬರುತ್ತದೆ ಮುಂತಾದ ಖಾದಿ ಪುರಾಣದ ವಿವರಗಳೆಲ್ಲ ಯಾರಿಗೂ ರಹಸ್ಯವಾಗಿ ಉಳಿದಿಲ್ಲ.

ಖಾದಿ ಈಗ ದೇಶಭಕ್ತಿಯ ಸಂಕೇತವಾಗಿ ಉಳಿದಿಲ್ಲ, ಆದರೆ ಗಾಂಧೀಜಿ ಅದರ ಸಂಕೇತವಾಗಿ ಇನ್ನೂ ಉಳಿದಿದ್ದಾರೆ. ಇದು ವಿಪರ್ಯಾಸ ಎನ್ನಬಹುದಾದರೂ ಚರಕದ ಹಿಂದೆ ಏನೇನೋ ಮೌಲ್ಯಗಳನ್ನು ಸಂಕೇತಿಸುತ್ತಾ ಕುಳಿತಿರುವ ಅವರನ್ನು ಪಕ್ಕಕ್ಕೆ ಸರಿಸಲು ಯಾರಿಂದಲೂ ಸಾಧ್ಯವಿಲ್ಲ.

ಪಾಶ್ಚಾತ್ಯ ಜಗತ್ತಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಗಾಂಧಿ, ದೇಶಕ್ಕೆ ಮರಳಿದ ಮೇಲೆ ಸೂಟುಬೂಟಿನಿಂದ ಲಂಗೋಟಿಗೆ ಬದಲಾದದ್ದು ಮತ್ತು ಸೂಟುಬೂಟುಹ್ಯಾಟುಗಳ ಜನರಿಗೆ ಸವಾಲು ಹಾಕಿದ್ದು ಜಗತ್ತಿನ ಇತಿಹಾಸದಲ್ಲಿ ಒಂದು ಗಮನಾರ್ಹ ಅಧ್ಯಾಯ. ಎಷ್ಟೋ ವಿಚಾರಗಳಲ್ಲಿ ಗಾಂಧಿ ಅವರ ಜೊತೆ ತೀವ್ರ ಭಿನ್ನಾಭಿಪ್ರಾಯ ಹೊಂದಿದ್ದ ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ವೇಷಭೂಷಣಗಳ ಹೋಲಿಕೆಯಲ್ಲೂ ಅದರ ಮಹತ್ವ ಕಡಿಮೆಯಾಗಲಿಲ್ಲ. 

ಗಾಂಧೀಜಿ ಖಾದಿ ಉದ್ಧಾರ ಮಾಡಲು ಸಮಯ ಕೊಟ್ಟಿದ್ದೇಕೆ ಎಂಬ ಪ್ರಶ್ನೆ ಅಂದೂ ಇತ್ತು. ಗ್ರಾಮೋದ್ಧಾರ, ಸ್ವಂತ ಉದ್ಯಮ ಎಲ್ಲದಕ್ಕೂ ಖಾದಿ ಸಂಕೇತವಾಗಿ ಉಳಿದಿತ್ತು.ವಿದೇಶಗಳಿಂದ ನೇರ ಬಂಡವಾಳ ಬರಮಾಡಿಕೊಳ್ಳಲು ಕಾತುರವಾಗಿರುವ ಈ ಕಾಲದಲ್ಲಿ ಖಾದಿಯ ಮಹತ್ವವೂ ಕಡಿಮೆಯಾಗಿದೆ. ಖಾದಿ ಆಯೋಗ ಗಾಂಧಿ ಯವರನ್ನು ತೆಗೆದು ಮೋದಿ ಅವರನ್ನು ಚರಕದ ಹಿಂದೆ ಕೂಡಿಸಿದ್ದೂ ಅಮೆಜಾನ್ ಎಂಬ ಲೂಟಿಕೋರ ಮಾರಾಟ ಸಂಸ್ಥೆ ಅವರ ಚಿತ್ರ ಇರುವ ಹಗುರ ಚಪ್ಪಲಿಗಳನ್ನು ಮಾರಾಟಕ್ಕೆ ಬಿಟ್ಟಿದ್ದೂ ಏಕಕಾಲದಲ್ಲಿ ಆಯಿತಲ್ಲ! ಕಾಂಗ್ರೆಸ್ ಪಕ್ಷ ಇದಕ್ಕೆ ಮಾತ್ರ ಬಾಯಿ ಮುಚ್ಚಿಕೊಂಡು ಸುಮ್ಮನಿದೆಯಲ್ಲ!

ಯಾರ ಪ್ರೇರಣೆಯಿಂದ ಇದು ಆಯಿತೋ ಅದು ಬೇರೆ ವಿಷಯ. ಗಾಂಧಿಯವರನ್ನು ಖಾದಿ ಗಾದಿಯಿಂದ ಸರಿಸುವುದಕ್ಕಿಂತ ಮುಖ್ಯವಾಗಿ ಮೋದಿ ಅವರು ತುರ್ತು ಕೆಲಸಗಳ ಯಾದಿ ತಯಾರಿಸಿ ದೇಶದ ಮುಂದಿಡಲಿ. ಚರಕ ತಿರುಗಿಸುವುದಕ್ಕಿಂತ ನಿಂತುಹೋದಂತಿರುವ ಆರ್ಥಿಕತೆಯ ಚಕ್ರ ತಿರುಗಿಸುವುದು ಮೋದಿ ಯಾದಿಯಲ್ಲಿ ಮೊದಲ ಆದ್ಯತೆ ಪಡೆಯಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT