ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನ್ ಸಾಹೇಬರ ದೇಶಭಕ್ತಿ ಅನುಕರಣೀಯ

Last Updated 16 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ದೇಶಭಕ್ತಿಯ ಹೊಸ ಹೊಸ ವ್ಯಾಖ್ಯೆಗಳು ಚಾಲ್ತಿಗೆ ಬರತೊಡಗಿವೆ. ದೇಶಭಕ್ತಿಯೆಂದರೆ ಹಿಂದೂ ದೇಶಭಕ್ತಿಯೆಂದೂ ಮುಸಲ್ಮಾನರು ಅಥವಾ ಇತರೆ ಅಲ್ಪಸಂಖ್ಯಾತರ ದೇಶಭಕ್ತಿಯು ಅನುಮಾನಾಸ್ಪದವೆಂದೂ ಹಿಂದೂ ರಾಷ್ಟ್ರವಾದಿಗಳು ತಿಳಿದರೆ, ಮುಸಲ್ಮಾನ, ಕ್ರೈಸ್ತ ಇತ್ಯಾದಿ ರಾಷ್ಟ್ರವಾದಿಗಳು ತಮ್ಮ ತಮ್ಮ ಅಲ್ಪಸಂಖ್ಯಾತರ ಬಗ್ಗೆ ಹೀಗೆಯೇ ಅನುಮಾನಪಡತೊಡಗಿದ್ದಾರೆ. ಕೋಮುವಾದ ಅಥವಾ ಪ್ರತ್ಯೇಕತಾವಾದವು ಕೇವಲ ಭಾರತೀಯರು ಅಥವಾ ಪಾಕಿಸ್ತಾನೀಯರ ಸ್ವತ್ತಾಗಿ ಇಂದು ಉಳಿದಿಲ್ಲ.

ವಿಶ್ವವ್ಯಾಪಿಯಾದ ಪೆಡಂಭೂತವಾಗಿ ಬೆಳೆದುನಿಂತಿದೆ. ಅದೇನೇ ಇರಲಿ ಹಿಂದೂ ರಾಷ್ಟ್ರವಾದ ಅಥವಾ ಹಿಂದುತ್ವ ಭಾರತೀಯ ಮಾದರಿಯ ಪೆಡಂಭೂತವಾಗಿದೆ.
ಪ್ರತ್ಯೇಕತಾವಾದಿಗಳಿಗೆ ತಮಾಷೆ ಸಹಿಸುವುದಿಲ್ಲ. ತಮಾಷೆ ಮಾಡಿದವರನ್ನು ದೇಶದ್ರೋಹಿಗಳೆಂದು ಕರೆದು ಜೈಲಿಗಟ್ಟುವುದು ಅವರ ರೀತಿ. ಆದರೂ ಪ್ರತ್ಯೇಕತಾವಾದ ಒಂದು ತಮಾಷೆಯೇ ಸರಿ. ಮೂಲತಃ, ಅದು ಎಡಬಿಡಂಗಿ ತನವಾಗಿದೆ.

ಇತ್ತ ವಿಶ್ವ ಮಾರುಕಟ್ಟೆಯೂ ಇರಲಿ, ಅತ್ತ ಸ್ಥಳೀಯ- ಸಾಂಸ್ಕೃತಿಕ ಶುದ್ಧತೆಯೂ ಇರಲಿ ಎಂಬ ಎಡಬಿಡಂಗಿತನ! ಸ್ಮಾರ್ಟಾದ ಸಿಟಿಗಳು ಹಾಗೂ ಅವುಗಳು ನಿರ್ಮಿಸುತ್ತಿರುವ ಸ್ಮಾರ್ಟಾದ ಸಾಂಸ್ಕೃತಿಕ ಪರಿಸರ, ಕ್ಷಣಕ್ಕೊಂದು ಹೊಸ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಹೊಸ ಸಮಸ್ಯೆಯನ್ನು ಎದುರಿಸಲಾಗದ ನಾವು ಹಳೆಯ ಜಗಳಗಳನ್ನು ಕೆದಕಿ ಕೋಪ ತೀರಿಸಿಕೊಳ್ಳುತ್ತಿದ್ದೇವೆ. ಕಜ್ಜಿ ತುರಿಕೆಯಿದ್ದಂತೆ ಪ್ರತ್ಯೇಕತಾವಾದ.

ಆತಂಕಪಡುವುದು ಸಾಂಸ್ಕೃತಿಕ ಸಮಸ್ಯೆಗಳಿಗೆ ಪರಿಹಾರವಲ್ಲ ಅಥವಾ ಸಾಂಸ್ಕೃತಿಕವೆಂದು ಕಾಣುವ ಸಮಸ್ಯೆಗಳು ಕೇವಲ ಸಾಂಸ್ಕೃತಿಕವೂ ಅಲ್ಲ. ರೋಗ ಯಂತ್ರ ನಾಗರಿಕತೆಯಲ್ಲಿದೆ. ಕ್ರೈಸ್ತರು ಹೇಗೆ ಡ್ರ್ಯಾಕುಲ ಎಂಬ ಸೈತಾನನನ್ನು ಶಿಲುಬೆ ಎಂಬ ಸರಳ ಅಸ್ತ್ರ ಬಳಸಿ ಎದುರಿಸಿದರೊ ಹಾಗೆಯೇ ನಾವು ಸಹ  ಯಂತ್ರ ನಾಗರಿಕತೆಯೆಂಬ ಸೈತಾನನನ್ನು ಸರಳ ಬದುಕು ಎಂಬ ಅಸ್ತ್ರ ಬಳಸಿ ಮಣಿಸಬೇಕು.

ಶ್ರಮಜೀವನದಲ್ಲಿ ಭಾರತದ ಭವ್ಯ ಸಂಸ್ಕೃತಿಯ ಹುಡುಕಬೇಕು. ಯಂತ್ರ ನಾಗರಿಕತೆಯೊಳಗೆ ಈಗಾಗಲೇ ಸೇರಿಹೋಗಿರುವ ‘ಸುಸಂಸ್ಕೃತ’ ಅಗ್ರಹಾರಗಳು ಪರಂಪರೆ ಹೇಗಾದಾವು? ಹಿಂದುತ್ವವಾದಿಗಳು ಈ ಸರಳ ಸತ್ಯವನ್ನು ಗ್ರಹಿಸಲಾರದೆ ಸೋಲತೊಡಗಿದ್ದಾರೆ. ಇರಲಿ, ಕೋಮುವಾದವು ಭಾರತದಲ್ಲಿ ಜನಪ್ರಿಯವಾಗಲಿಕ್ಕೆ ಇರುವ ಚಾರಿತ್ರಿಕ ಕಾರಣವೆಂದರೆ, 1947ರಲ್ಲಿ ನಡೆದ ಕೋಮು ಆಧಾರಿತ ದೇಶ ವಿಭಜನೆ. ಆದರೆ ಕೋಮುವಾದ 1947ರಲ್ಲಿ ಹುಟ್ಟಲಿಲ್ಲ, ದೇಶ ವಿಭಜನೆಯಲ್ಲಿ ಕೊನೆಗೊಂಡಿತು ಅಷ್ಟೆ.

ಕೋಮುವಾದ ಕೇವಲ ಮುಸಲ್ಮಾನರ ಬಳುವಳಿಯೆಂಬ ತಪ್ಪುಗ್ರಹಿಕೆ ನಮ್ಮಲ್ಲಿದೆ. ದೇಶ ವಿಭಜನೆಗೆಂದು ಹಟ ಹಿಡಿದದ್ದು ಮುಸಲ್ಮಾನ ಜನಾಂಗದೊಳಗಿನ ಒಂದು ಗುಂಪು ಎಂಬುದು ನಿಜವಾದರೂ, ಭಾರತದ ಒಡಲೊಳಗೆ ಎರಡು ರಾಷ್ಟ್ರೀಯತೆಗಳನ್ನು ಮೊದಲು ಗುರುತಿಸಿದವರು ಹಿಂದೂಗಳೇ ಸರಿ. ಸಾವರ್ಕರ್, ಲಾಲಾ ಲಜಪತರಾಯ್, ಲಾಲಾ ಹರದಯಾಲ್, ಪಂಡಿತ ಮದನ ಮೋಹನ ಮಾಲವೀಯ, ಮೂಂಜೆ ಇತ್ಯಾದಿ ಹಿಂದೂ ನಾಯಕರು 1905ರಿಂದಲೇ ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ಪ್ರತಿಪಾದಿಸುತ್ತ ಬಂದಿದ್ದರು.

ಹಿಂದೂ ರಾಷ್ಟ್ರ ರಚನೆಯ ಮೂಲಕ ಭಾರತವನ್ನು, ಒಂದೇ ಏಟಿಗೆ ಬ್ರಿಟಿಷರು ಹಾಗೂ ಮುಸಲ್ಮಾನರ ಅವಳಿ ಅನಿಷ್ಟದಿಂದ ಪಾರುಮಾಡಬೇಕು ಎಂದು ಅವರು ಚಿಂತಿಸಿದರು. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ದೇಶದ ಮುಸಲ್ಮಾನ ಬಾಹುಳ್ಯವುಳ್ಳ ಪ್ರದೇಶಗಳನ್ನು ಆಕ್ರಮಿಸಿಕೊಂಡು ಅಲ್ಲೆಲ್ಲ ಶುದ್ಧೀಕರಣ (ಮತಾಂತರ) ಪ್ರಕ್ರಿಯೆಯನ್ನು  ಬಲವಂತದಿಂದಲಾದರೂ ಸರಿ, ಜಾರಿಗೊಳಿಸಬೇಕು ಎಂದು ತಯಾರಿ ನಡೆಸಿದ್ದರು.

ಅದೇ ಸರಿಸುಮಾರಿಗೆ ದೂರದ ಈಜಿಪ್ಟಿನಲ್ಲಿ ಮೊದಲ ಬಾರಿಗೆ ಮುಸಲ್ಮಾನಿಯತ್ತನ್ನು ಪ್ರತಿಪಾದಿಸಲಾಯಿತು. ಪ್ರತಿಪಾದನೆ ಹೀಗಿತ್ತು: ಇಸ್ಲಾಂ ಕೇವಲ ಒಂದು ಧರ್ಮವಲ್ಲ, ಅದೊಂದು ಸಮಗ್ರ ಜೀವನಶೈಲಿ. ಭಾಷೆ, ಸಂಸ್ಕೃತಿ, ವೈಯಕ್ತಿಕ ಕಾನೂನು ಹಾಗೂ ರಾಜಕಾರಣಗಳನ್ನು ಮುಸಲ್ಮಾನನೊಬ್ಬನು ಇತರರೊಂದಿಗೆ ಹಂಚಿಕೊಂಡು ಬಾಳುವುದು ಅಸಾಧ್ಯ, ಮುಸಲ್ಮಾನರು ಪ್ರತ್ಯೇಕ ರಾಷ್ಟ್ರವಾಗುವುದು ಅನಿವಾರ್ಯ ಎಂದು ಅಲ್ಲಿ ಪ್ರತಿಪಾದಿಸಲಾಯಿತು. ಇಕ್ವಾನ್- ಅಲ್- ಮುಸ್ಲಿಮೀನ್ ಎಂಬ ಈಜಿಪ್ಟಿನ ಸಂಘಟನೆಯ ಈ ಪ್ರತಿಪಾದನೆ ಭಾರತದ ನೆಲವನ್ನು ತಲುಪಲಿಕ್ಕೆ ತಡವಾಗಲಿಲ್ಲ.

ಹಿಂದೂ ಮುಸಲ್ಮಾನರು ಅಲ್ಲಿಯವರೆಗೆ ಭಾರತದ ಸ್ವಾತಂತ್ರ್ಯ ಚಳವಳಿಯ ಅವಿಭಾಜ್ಯ ಅಂಗವಾಗಿದ್ದರು. 1857ರ ಸಿಪಾಯಿದಂಗೆಯಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಒಟ್ಟಾಗಿ ಹೋರಾಡಿದ್ದರು. ಖಿಲಾಫತ್ ಚಳವಳಿಯ ಸಂದರ್ಭದಲ್ಲಿ ಸಹಿತ ಒಟ್ಟಾಗಿ ಹೋರಾಡಿದ್ದರು. ಪ್ರತ್ಯೇಕ ರಾಷ್ಟ್ರೀಯತೆಗಳ ವೈಚಾರಿಕ ಒತ್ತಾಸೆ ಹಾಗೂ ಪ್ರತ್ಯೇಕತೆಗೆ ಬ್ರಿಟಿಷರು ನೀಡಿದ ಕುಮ್ಮಕ್ಕಿನ ಫಲವಾಗಿ ಅವರು ಕ್ರಮೇಣ ಬೇರೆಯಾದರು.

ಈಗ, 1946- 47ರ ಆಸುಪಾಸಿಗೆ ಬರೋಣವಂತೆ. ಸ್ವಾತಂತ್ರ್ಯ ಸಂಗ್ರಾಮ ಫಲ ಕೊಡುವುದರಲ್ಲಿತ್ತು. ಬಡಜನತೆ, ಶೋಷಣಾರಹಿತವಾದ ಹೊಸ ಬಾಳೊಂದರ ನಿರೀಕ್ಷೆಯಲ್ಲಿದ್ದರು. ಗಾಂಧಿ ಅವರ ಅಪಾರ ಜನಪ್ರಿಯತೆಯಿಂದಾಗಿ ಈವರೆಗೆ ಹಿಂದಕ್ಕೆ ಒತ್ತಲಾಗಿದ್ದ ಕೋಮುವಾದ ಈಗ ಮೈಕೊಡವಿಕೊಂಡು ಮೇಲೆದ್ದಿತು. ಸ್ವಾತಂತ್ರ್ಯದ ಫಲವನ್ನು ಎರಡು ಹೋಳಾಗಿಸಿದರೆ, ತಮ್ಮ ತಮ್ಮ ಕೋಮುಗಳಿಗೆ ಹೋಳು ಹಂಚಿಕೆ ಮಾಡುವ ನಾಯಕತ್ವ ಸಿಗಬಲ್ಲದು ಎಂದು ಬಗೆದರು ಕೋಮುವಾದಿಗಳು.

ವಿಭಜನೆಯ ಕೆಲಸವನ್ನು ಮೊದಲು ಮಾಡಿದವರು ಮುಸಲ್ಮಾನ ಕೋಮುವಾದಿಗಳೇ ಸರಿ. ಹಿಂದೂ ಕೋಮುವಾದಿಗಳು ಪ್ರತಿಕ್ರಿಯೆ ನೀಡಿದರು. ಮಚ್ಚು ಕೊಡಲಿ ಕುಡುಗೋಲುಗಳು ಆಡಿದವು. ಭಾರತ ಹತ್ತಿ ಉರಿಯಿತು. ಹಿಂದೂ ಮುಸಲ್ಮಾನರಿಬ್ಬರೂ ತಾವು ಬಹುಸಂಖಾತ್ಯರಾಗಿದ್ದಲ್ಲಿ ನಡೆಸಿದ ವಿಭಜನೆಯ ಮಾರಣಹೋಮವು ಲಕ್ಷಾಂತರ ಮುಗ್ಧ ಭಾರತೀಯರ ಬಲಿ ತೆಗೆದುಕೊಂಡಿತು.

ಮತೀಯ ಗಲಭೆಗಳ ವಿಸ್ತಾರ ವಿನಾಶ ಹಾಗೂ ಉದ್ವೇಗಗಳನ್ನು ಕಂಡು, ಸ್ವಾತಂತ್ರ್ಯ ಚಳವಳಿಯ ನಾಯಕತ್ವ ವಹಿಸಿದ್ದ ಕಾಂಗ್ರೆಸ್ ಪಕ್ಷವು ನಡುಗಿಹೋಯಿತು. ಗಾಂಧೀಜಿ ಬುದ್ಧಿವಾದವನ್ನು ಕಡೆಗಣಿಸಿ ಅವರು ದೇಶ ವಿಭಜನೆಗೆ ಒಪ್ಪಿಗೆ ಸೂಚಿಸಿದರು.

ದೇಶ ವಿಭಜನೆಯ ನಿರ್ಣಯವನ್ನು ವಿರೋಧಿಸಿದರು ಖಾನ್ ಸಾಹೇಬ್ ಯಾನೆ ಖಾನ್ ಅಬ್ದುಲ್ ಗಫಾರ್ ಖಾನರು. ಖಾನ್ ಸಾಹೇಬರು ಫಕ್ತೂನಿ ಪಠಾಣರ ನಿಸ್ಸಂದಿಗ್ಧ ನಾಯಕ. ಅವರು, ಮತ್ತವರ ಅನುಯಾಯಿ ಪಠಾಣರು, ದಿನಕ್ಕೆ ಐದು ಬಾರಿ ನಮಾಜ್ ಮಾಡುವ ನಿಷ್ಠಾವಂತ ಮುಸಲ್ಮಾನರು.

ಮುಸ್ಲಿಂ ಲೀಗಿನ ಹಂಚಿಕೆಯ ಪ್ರಕಾರ ಅವರೆಲ್ಲ ಮುಸಲ್ಮಾನ ದೇಶವೊಂದನ್ನು ಸೇರಬೇಕಾಗಿತ್ತು. ಆದರೂ ಖಾನ್ ಸಾಹೇಬರು ವಿಭಜನೆಯನ್ನು ವಿರೋಧಿಸಿದರು. ಖಾನ್ ಸಾಹೇಬರ ಅಖಂಡಭಾರತ ಭಕ್ತಿ ಮುಸ್ಲಿಂ ಲೀಗಿಗೆ ಪಥ್ಯವಾಗಲಿಲ್ಲ. ಅವರು ಮುಸಲ್ಮಾನ ವಿರೋಧಿಗಳೆಂದೂ ದೇಶದ್ರೋಹಿಗಳೆಂದೂ ಜಿನ್ನಾ ಬಣ್ಣಿಸಿದರು. ತಮಾಷೆಯ ಸಂಗತಿಯೆಂದರೆ, ಜಿನ್ನಾ ಹಾಗೂ ಸಾವರ್ಕರ್ ಇಬ್ಬರೂ ನಿರೀಶ್ವರವಾದಿಗಳಾಗಿದ್ದರು.

ನಾವಿಂದು ಅದೇ ಕೆಲಸವನ್ನು ಮಾಡುತ್ತಿದ್ದೇವೆ. ಹಿಂದೂ ರಾಷ್ಟ್ರವೆಂಬ ಸೀಮಿತ ರಾಜಕೀಯ ಪರಿಕಲ್ಪನೆಯನ್ನು ಮುಂದೊತ್ತಿ, ಅದನ್ನು ಒಪ್ಪದ ಎಲ್ಲ ಹಿಂದೂಗಳೂ ದೇಶದ್ರೋಹಿಗಳೆಂದು ಜರೆಯುತ್ತಿದ್ದೇವೆ. ಹಿಂದೂ ರಾಜಕಾರಣಿಗಳು, ಸಂತರು, ವಿಚಾರವಾದಿಗಳು, ವಿದ್ಯಾರ್ಥಿಗಳು ಎಲ್ಲರೂ ದೇಶದ್ರೋಹಿಗಳ ಪಟ್ಟಿಯೊಳಗೆ ಸೇರ್ಪಡೆಯಾಗುತ್ತಿದ್ದಾರೆ. ದೇಶಭಕ್ತಿಯೆಂಬುದು ಮತ್ತೊಮ್ಮೆ ಪುಂಡು ಹುಡುಗರ ಪುಂಡಾಟಿಕೆಗೆ ದಕ್ಕುವ ಬೀದಿಬದಿಯ ಕಲ್ಲುಗಳಾಗಿ ಮಾರ್ಪಡುತ್ತಿದೆ.

ಅಲ್ಪಸಂಖ್ಯಾತ ಭಾರತೀಯರ ಪರವಾಗಿ ಸಹಾನುಭೂತಿ ವ್ಯಕ್ತಪಡಿಸುವುದು, ದಲಿತರ ದೌರ್ಜನ್ಯ ಖಂಡಿಸುವುದು, ಪಕ್ಕದ ದೇಶದ ಪ್ರಜೆಗಳ ಬಗ್ಗೆ ಒಳ್ಳೆಯ ಮಾತನಾಡುವುದು, ಸಮಾನತೆ, ಅಂತರ್‌ಧರ್ಮೀಯ ವಿವಾಹ, ಮೂಢನಂಬಿಕೆಯ ವಿರೋಧ, ಅಷ್ಟೇ ಏಕೆ, ಹುಡುಗ ಹುಡುಗಿಯರು ಒಟ್ಟಾಗಿ ಕುಳಿತು ಪಾರ್ಕಿನಲ್ಲಿ ಹರಟುವುದು,  ನಗುವುದು ಕೂಡ ಈ ದಿನಗಳಲ್ಲಿ ದೇಶದ್ರೋಹವಾಗಿ ಕಾಣಿಸತೊಡಗಿದೆ.

ಪ್ರತ್ಯೇಕತಾವಾದವು ದೇಶವನ್ನೇ ಆಗಲಿ ಧರ್ಮವನ್ನೇ ಆಗಲಿ ಬೆಳೆಸುವುದಿಲ್ಲ, ಪ್ರತ್ಯೇಕಿಸುತ್ತದೆ. ಕೋಮುವಾದ, ಜಾತಿವಾದ, ವರ್ಗವಾದ ಇತ್ಯಾದಿ ಎಲ್ಲ ವಾದಗಳ ಸಾಂಸ್ಕೃತಿಕ ಲಕ್ಷಣ ಒಂದೇ ಆಗಿದೆ: ಸ್ವಗೋತ್ರ ಪ್ರೇಮ. ಸ್ವಗೋತ್ರ ಪ್ರೇಮ ಪ್ರಾಣಿಮೂಲದಿಂದ ಬಂದ ಒಂದು ಪ್ರವೃತ್ತಿ. ಪ್ರಾಣಿಗಳಲ್ಲಿ ಸಹಜವಾದದ್ದು, ಆದರೆ ಸಭ್ಯತೆಯೊಳಗೆ ಅಸಭ್ಯವಾದದ್ದು. ಗಿಡಮರ ಪ್ರಾಣಿ ಪಕ್ಷಿಗಳ ಬದುಕಿನಲ್ಲಿ ಚಲನಶೀಲತೆ ಇರುವುದಿಲ್ಲ. ಸಭ್ಯತೆಯಲ್ಲಿ ಚಲನಶೀಲತೆ ಇರುತ್ತದೆ, ಸಂಕರ ಅನಿವಾರ್ಯವಾಗಿರುತ್ತದೆ.

ಹಾಗೆಂದ ಮಾತ್ರಕ್ಕೆ ಮನುಷ್ಯ ಸಂಸ್ಕೃತಿ ವಿಹೀನವಾಗಬೇಕೆಂದೇನಿಲ್ಲ. ಖಾನ್ ಸಾಹೇಬರು ಸಂಸ್ಕೃತಿ ವಿಹೀನರಾಗಿರಲಿಲ್ಲ. ಸಂಸ್ಕೃತಿ ಹಾಗೂ ಸಾಂಸ್ಕೃತಿಕ ರಾಜಕಾರಣ, ಧರ್ಮ ಹಾಗೂ ಧಾರ್ಮಿಕ ರಾಜಕಾರಣಗಳ ನಡುವಿನ ವ್ಯತ್ಯಾಸ ತಿಳಿಯುವುದಿಲ್ಲ ಕೋಮುವಾದಿಗಳಿಗೆ. ಒಬ್ಬ ವ್ಯಕ್ತಿ ಅಥವಾ ಒಂದು ದೇಶ ಅಥವಾ ಒಂದು ಧರ್ಮ. ಇತ್ತ ಅಪಾಚೆ ಇಂಡಿಯನ್ನನೂ ಆಗಿ, ಅತ್ತ ಪಿಳ್ಳೆಜುಟ್ಟಿನ ಪುರೋಹಿತನೂ ಆಗಿ ಬದುಕಲಿಕ್ಕೆ ಬರುವುದಿಲ್ಲ. ಹಾಗಂತ ಆಧುನಿಕತೆಯ ತಿರಸ್ಕಾರವೂ ಸಾಧುವಲ್ಲ.

ಶ್ರಮದ ಪರಂಪರೆ ಮಾತ್ರ ಪರಂಪರೆಯಾಗಬಲ್ಲದು. ಸಭ್ಯತೆ ಹುಟ್ಟುವುದೂ ಶ್ರಮದಿಂದಲೇ ಮರಳಬೇಕಾದ್ದೂ ಶ್ರಮಕ್ಕೆಯೇ. ಅಪಾಚೆ ಇಂಡಿಯನ್ ಹಾಗೂ ಪಿಳ್ಳೆಜುಟ್ಟಿನ ಪುರೋಹಿತ ಇಬ್ಬರೂ ಸುಲಭಜೀವಿಗಳು. ಶ್ರಮ ಸಂಸ್ಕೃತಿಯ ವಿನಾಶವನ್ನು ಮೂಕ ಪ್ರೇಕ್ಷಕರಂತೆ ನೋಡುತ್ತ ನಿಂತಿರುವವರು. ಅವರು ಹಿಂದುತ್ವ, ಮುಸ್ಲಿಮತ್ವ ಯಾವುದನ್ನೂ ಉಳಿಸಲಾರರು.

ಖಾನ್ ಸಾಹೇಬರು ಜಮೀನುದಾರ ಮನೆತನದಿಂದ ಬಂದವರು, ಆಸ್ತಿವಂತರು. ಆದರೆ ಎಲ್ಲ ತ್ಯಜಿಸಿ ಸರಳವಾಗಿ ಬದುಕಿದವರು. ಲಕ್ಷಾಂತರ ಪಠಾಣ ಯುವಕರನ್ನು ಖುದಾಯಿ ಖಿದ್ಮತ್‌ದಾರರು ಅರ್ಥಾತ್ ಈಶ ಸೇವಕರು ಎಂಬ ಹೆಸರಿನ ಅಹಿಂಸಾವಾದಿ ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ರೂಪಿಸಿದವರು. ಖಾನ್ ಸಾಹೇಬರು, ಜೈಲಿನಲ್ಲಿದ್ದಾಗ ಗೀತೆಯನ್ನು ತಾವು ಓದಿ ಖುರಾನನ್ನು ಇತರರಿಗೆ ತಿಳಿಹೇಳುತ್ತಿದ್ದರಂತೆ, ತನ್ನದಲ್ಲದ್ದನ್ನು ಪ್ರೀತಿಸುತ್ತಿದ್ದರಂತೆ, ಪ್ರೀತಿಯಿಂದಲೇ ವೈರುಧ್ಯಗಳನ್ನು ಕರಗಿಸುತ್ತಿದ್ದರಂತೆ. ನಾವಿಂದು ಸೈನ್ಯ, ಬಂದೂಕು, ರಕ್ತಪಾತ ಹಾಗೂ ಹಿಂಸೆಗಳನ್ನು ದೇಶಭಕ್ತಿಯ ಲಾಂಛನಗಳನ್ನಾಗಿ ಮಾಡಿಕೊಂಡು ಬಡಿದಾಡುತ್ತಿದ್ದೇವೆ.

ಖಾನ್ ಸಾಹೇಬರನ್ನು ದೇಶದ್ರೋಹಿಯೆಂದು ಬಣ್ಣಿಸಿದ್ದ ಮುಸ್ಲಿಂ ಲೀಗ್ ಸ್ವಗೋತ್ರ ರಾಜಕಾರಣ ಮಾಡಿತು. ಇಸ್ಲಾಮಿನ ಶಾಂತಿ ಆಶಯವನ್ನು ಕಡೆಗಣಿಸಿ ಆತಂಕವಾದವನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟಿತು. ನಾವು, ಜಿನ್ನಾ ಸಾಹೇಬರ ಅನುಕರಣೆ ಮಾಡುವುದು ಬೇಡ, ಖಾನ್ ಸಾಹೇಬರ ಅನುಕರಣೆ ಮಾಡೋಣ.

ಅಡಿ ಟಿಪ್ಪಣಿ: ಪ್ರತ್ಯೇಕತಾವಾದವು ಹಿಂದೂ ಮುಸಲ್ಮಾನರ ನಡುವಿನ ಕೋಮುವಾದವಾಗಿ ಮಾತ್ರವೇ ಕಾಣಿಸಿಕೊಳ್ಳಬೇಕೆಂದಿಲ್ಲ. ಅಂದರೆ, ಭಾರತೀಯ ಸಂದರ್ಭದಲ್ಲಿ, ಅದು ಬಿಜೆಪಿ ಹಾಗೂ ಜಾತ್ಯತೀತವಾದಿಗಳ ನಡುವಿನ ಜಗಳ ಮಾತ್ರವೇ ಆಗಿ ಕಾಣಿಸಿಕೊಳ್ಳಬೇಕಿಲ್ಲ. ಕಾವೇರಿ ನದಿ ನೀರಿನ ಹಂಚಿಕೆಯ ಹಾಲಿ ವಿವಾದವನ್ನೇ ತೆಗೆದುಕೊಳ್ಳಿ. ನಾವದನ್ನು, ನಮ್ಮಗಳ ತತ್‌ಕ್ಷಣದ ಲಾಭಕ್ಕಾಗಿ, ತಮಿಳರು ಹಾಗೂ ಕನ್ನಡಿಗರ ನಡುವಣ ಪ್ರತ್ಯೇಕತಾವಾದಿ ಹೋರಾಟವನ್ನಾಗಿಸುತ್ತಿರುವ ರೀತಿ ಗಾಬರಿ ಹುಟ್ಟಿಸುತ್ತಿದೆ.

ಯಾವುದೇ ಆಶಯವಿರಲಿ, ಅತಿಯಾದ ಅವಸರ, ಅತಿಯಾದ ಬಲವಂತ ಹೇರಿದಾಗ, ಒಳ್ಳೆಯ ಆಶಯಗಳೇ ಪ್ರತ್ಯೇಕತಾವಾದಕ್ಕೆ  ಎಡೆಗೊಡುತ್ತವೆ. ಮೊನ್ನೆ ಮಂಡ್ಯದಲ್ಲಿ ನಡೆದ ಒಂದು ಸಣ್ಣ ಘಟನೆ ನಮ್ಮೆಲ್ಲರ ಕಣ್ಣು ತೆರೆಸಬೇಕಿತ್ತು. ಹಿರಿಯ ಗಾಂಧೀವಾದಿ ಮಾದೇಗೌಡರು, ಕಾವೇರಿ ನದಿ ನೀರಿನ ಹಂಚಿಕೆಯ ವಿವಾದದ ಸಂದರ್ಭದಲ್ಲಿ, ಕರ್ನಾಟಕದ ರೈತರ ಪರವಾಗಿ ಅಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು.

ಅವಸರ ಪ್ರವೃತ್ತಿಗೆ ಬಲಿಯಾದ ಕೆಲವು ಕನ್ನಡಿಗರು ಮಾದೇಗೌಡರಿಗೆ ಬಳೆ ತೊಡಿಸಿ ಅವಮಾನಿಸಲಿಕ್ಕೆ ಮುಂದಾಗಿದ್ದರು.  ಮಾದೇಗೌಡರನ್ನು ಬಳೆ ತೊಡಿಸಿ ಅವಮಾನಿಸುವ ಪ್ರಯತ್ನ ಎರಡು ಕಾರಣಗಳಿಗಾಗಿ ಅಕ್ಷಮ್ಯ. ಮೊದಲನೆಯದಾಗಿ, ಅಹಿಂಸಾತ್ಮಕ ಚಳವಳಿಯ ತಿರಸ್ಕಾರ ಇದಾದರೆ, ಎರಡನೆಯದಾಗಿ ಮಹಿಳೆಯ ಅವಹೇಳನವೂ ಆಗಿದೆ ಇದು.

ಗಂಡಸುತನ ಮಾತ್ರವೇ ಚಳವಳಿಯ ಲಕ್ಷಣ ಎಂದು ಯಾವ ಗಂಡಸು ನಿರ್ಧರಿಸಿದನೋ ಭಗವಂತನೇ ಬಲ್ಲ. ಬೆಂಕಿ ಹಚ್ಚುವುದು, ಹಲ್ಲೆ ನಡೆಸುವುದು, ಹಿಂಸೆ ಮಾಡುವುದು, ಸಮಸ್ಯೆಯನ್ನು ಪರಿಹರಿಸುವ ಬದಲು ಇನ್ನಷ್ಟು ಬಿಗಡಾಯಿಸುತ್ತದೆ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT