ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿಯನ್ನು ಸಾಲವಾಗಿ ಕೊಟ್ರೆ ಬಡ್ಡಿ ಯಾವ್ ಥರಾ ಬರುತ್ತೆ?

Last Updated 6 ಏಪ್ರಿಲ್ 2016, 19:32 IST
ಅಕ್ಷರ ಗಾತ್ರ

ಇಂದುಮತಿ ಅಂತೂ ತನ್ನ ಹಣೆಬರಹ ಹುಡುಕಿಕೊಂಡು ಸಮುದ್ರೋಲ್ಲಂಘನ ಮಾಡಿದಳು. ರಶ್ಮಿ ಹಣೆಬರಹ ಹುಡುಕುತ್ತಾ ಅದೇ ದಾರಿ ಹಿಡಿಯುವುದರಲ್ಲಿದ್ದಳು. ವಿಜಿಗೆ ಮಾತ್ರ ಬೆಂಗಳೂರಿನಲ್ಲೇ ಇರುವ ಅದೃಷ್ಟ ಒದಗಿ ಬಂದಿತ್ತು.

ಮೈಸೂರಿನಲ್ಲಿ ಇಲ್ಲದ ‘ಬೇರಿನ’ ಕೊರೆ ಬೆಂಗಳೂರಿನಲ್ಲಿ ಯಾಕೋ ಬಹುವಾಗಿ ಕಾಣತೊಡಗಿತು. ಹಾಸ್ಟೆಲಿನಲ್ಲಿ ಇದ್ದಳೆಂತಲೋ ಅಥವಾ ಸ್ನೇಹಿತೆಯರು ದೊರಕಿದ್ದರೆಂತಲೋ, ಮೈಸೂರಿನ ಅನುಭವ ಬಹಳ ಸುರಕ್ಷೆ ಭಾವವನ್ನು ಕೊಟ್ಟಿತ್ತು. ಓದುವ ಸಮಯದಲ್ಲಿ ತಮ್ಮ ಅನ್ನ ತಾನು ದುಡಿದುಕೊಳ್ಳುವ ಪರಿಸ್ಥಿತಿ ಬಹಳ ಕಡಿಮೆ ಜನಕ್ಕೆ ಬರುತ್ತದಾದ್ದರಿಂದ ‘ಸ್ಟೂಡೆಂಟ್ ಲೈಫ್‌ ಈಸ್ ಗೋಲ್ಡನ್ ಲೈಫ್’ ಇಂಥದ್ದೆಲ್ಲಾ ಭಾವುಕ ಮಾತುಗಳಿಗೆ ಮರುಳಾಗುವುದು ಬಹಳ ಸುಲಭ.

ಇಂದಿರಾನಗರದಲ್ಲಿ ಯಾವುದೋ ಒಂದು ಪೀಜಿ ಅಂದರೆ ಪೇಯಿಂಗ್ ಗೆಸ್ಟ್ ಅಕಾಮಡೇಷನ್. ಕೊಡವರ ಹೆಣ್ಣುಮಗಳು ನಡೆಸುತ್ತಿದ್ದ ಜಾಗ. ತಿಂಡಿ, ರಾತ್ರಿ ಊಟ ಇಷ್ಟು ಮಾತ್ರ ಸಿಗುತ್ತಿತ್ತು. ಎಣಿಸಿ ಎಣಿಸಿ ಚಪಾತಿ ಮಾಡುತ್ತಿದ್ದುದರಿಂದ ಯಾರಾದರೂ ಹೆಚ್ಚು ಚಪಾತಿ ತಿಂದರೆ ಉಳಿದವರಿಗೆ ಇರುತ್ತಿರಲಿಲ್ಲ. ಅನ್ನದ ಅಗುಳಂತೂ ಮುಳ್ಳು ಮುಳ್ಳಾಗಿ ವಿಚಿತ್ರವಾಗಿರುತ್ತಿತ್ತು. ಇದೇ ಕಾರಣಕ್ಕೆ ಪೀಜಿ ಓನರ್ರಿಗೂ ಅಲ್ಲಿನ ಹುಡುಗಿಯರಿಗೂ ಜಗಳವಾಗುತ್ತಿತ್ತು.

ಹಾಸ್ಟೆಲಿಗೂ ಪೀಜಿಗೂ ಕ್ಯಾರೆಕ್ಟರಿನಲ್ಲಿ ಅಂಥಾ ವ್ಯತ್ಯಾಸವೇನಿಲ್ಲದಿದ್ದರೂ ಹಾಸ್ಟೆಲಿಗಿಂತ ಇಲ್ಲಿ ಸ್ಪರ್ಧೆ, ಕಚ್ಚಾಟ, ಬೇಜವಾಬ್ದಾರಿ ನಡವಳಿಕೆ ಬಹಳ ಹೆಚ್ಚಾಗಿಯೇ ಇತ್ತು. ಮುಖ್ಯ ವ್ಯತ್ಯಾಸವೆಂದರೆ ಹಾಸ್ಟೆಲಿನಲ್ಲಿ ಎಲ್ಲರ ಹಿತ ಕಾಯುವಂಥ ಅಧಿಕಾರ ಹೊಂದಿದ ವಾರ್ಡನ್ ಇರುತ್ತಾರೆ. ಆದರೆ ಪೀಜಿಯಲ್ಲಿ ದುಡ್ಡೇ ಸರ್ವಾಧಿಕಾರಿ. ಅದರ ಮುಂದೆ ಎಲ್ಲರೂ ಪಾತ್ರೆ ಹಿಡಿದ ಭಿಕ್ಷುಕರೇ!

ಬೀದಿಗೆ ಮೂರು ಪೀಜಿ ಅಕಾಮಡೇಷನ್ ಆಗ ಇರಲಿಲ್ಲ. ಇದ್ದ ಪೀಜಿಗಳು ಬೆರಳೆಣಿಕೆಯಷ್ಟು ಮಾತ್ರ. ಒಂದನ್ನು ಬಿಟ್ಟು ಇನ್ನೊಂದಕ್ಕೆ ಹೋಗುವ ಮುನ್ನ ಎಲ್ಲಿದ್ದೆ, ಯಾಕೆ ಬಿಟ್ಟು ಬಂದೆ, ಅಲ್ಲಿ ಹಣದ ಬಾಕಿ ಏನಾದರೂ ಇದೆಯಾ ಈ ಥರದ ಪ್ರಶ್ನೆಗಳು ಸರ್ವೇ ಸಾಮಾನ್ಯವಾಗಿದ್ದವು. ಅಕಸ್ಮಾತ್ ಪೀಜಿ ಓನರ್ರಿಗೆ ಕ್ಯಾಂಡಿಡೇಟು ಹಿಡಿಸಲಿಲ್ಲವೆಂದರೆ ತಕ್ಷಣ ಬಿಟ್ಟು ಹೊರಡಿ ಅಂತ ಹೇಳಿಬಿಡುತ್ತಿದ್ದರು.

ಯಾವ ನೋಟೀಸೂ ಪೀಟೀಸೂ, ಹೊತ್ತು ಗೊತ್ತಿನ ಪರಿವೆ ಏನೂ ಇಲ್ಲ. ಆಗ ಹುಡುಗಿಯರೂ ಬಹಳ ಮಜವಾಗಿದ್ದರು. ಕೆಲವರು ಓದಲಿಕ್ಕಂತ ಬಂದು ಪೀಜಿ ಸೇರಿದರೆ ಇನ್ನು ಕೆಲವರು ಉದ್ಯೋಗಸ್ಥರಾಗಿದ್ದರು ಮತ್ತು ಕೆಲವರು ಸಂಬಂಧಿಗಳ ಮನೆಯಲ್ಲಿ ಇರಲೊಪ್ಪದೆ ಪೀಜಿಗೆ ಬಂದು ಸೇರುತ್ತಿದ್ದರು.

ಬಹಳ ದೊಡ್ಡ ಸಂಬಳದ ಯುಗ ಇನ್ನೂ ಹೊಸ್ತಿಲಲ್ಲಿತ್ತು. ಐದು ಸಾವಿರ ಸಂಬಳ ಬರುತ್ತಿದ್ದವರು ಬಹಳ ಅನುಕೂಲಸ್ಥರು. ಹತ್ತು ಸಾವಿರದ ಮೇಲೆ ಸಂಬಳ ಇದ್ದರೆ ವಾರಕ್ಕೊಮ್ಮೆ ಕೆಫೆ ಕಾಫೀ ಡೇಯಲ್ಲಿ ಸುಮ್ಮನೆ ಧಿಮಾಕು ಮಾಡುತ್ತಾ ಸ್ನೇಹಿತರನ್ನು ಭೇಟಿ ಮಾಡಿ ‘ಕೂಲ್’ ಅನ್ನಿಸಿಕೊಳ್ಳುತ್ತಿದ್ದರು.

ಆರ್ಥಿಕ ಸ್ಥಿತ್ಯಂತರ ಶುರುವಾಗಿದ್ದ ಕಾಲ ಅದು. ಇಂದಿನ ಹಾಗೆ ಅನವಶ್ಯಕ ಖರ್ಚೇ ಅನಿವಾರ್ಯ ಅನ್ನಿಸಿಕೊಳ್ಳುತ್ತಿರಲಿಲ್ಲ. ಕೆಫೆ ಕಾಫೀ ಡೇಯಲ್ಲಿ ಇರುವ ಪೇಯಗಳ ಹೆಸರನ್ನು ಉಚ್ಛರಿಸಲು ಕನ್ನಡದ ಈ ಬೆಂದಕಾಳೂರು ನಿದ್ದೆಯಿಂದ ಎದ್ದ ಮಗು ಮಾತಾಡಿದ ಹಾಗೆ ಮಾತಾಡಲು ಕಲಿಯುತ್ತಿತ್ತು.

ಎದ್ದರೆ ಬಿದ್ದರೆ ಕಿವಿಗೆ ಬೀಳುವ ಕನ್ನಡವನ್ನೇ ಕಲಿಯದೆ ದೂರ ದೇಶದ ಯಾವುದೋ ಇಟಾಲಿಯನ್ನು, ಫ್ರೆಂಚು. ಜರ್ಮನ್ನುಗಳ ಉಚ್ಛಾರಗಳನ್ನು ಸ್ವಲ್ಪವೂ ಅತ್ತಿತ್ತ ಆಗದಂತೆ ನಾಲಿಗೆಗೆ ತರಬೇತಿ ಕೊಟ್ಟು ಹೊರಳಿಸುತ್ತಿದ್ದ ದೊಡ್ಡ ಜನಕ್ಕೆಈ ಕೆಫೆಗಳ ಆಗಮನ ಒಂಥರಾ ಕಿರೀಟಪ್ರಾಯವಾಯ್ತು.

ದೇವೇಗೌಡ ಎನ್ನುವ ಹೆಸರನ್ನು ಹೇಳಲು ತಿಪ್ಪರಲಾಗ ಹಾಕಿದರೂ ಕಲಿಯದೆ ‘ದ್ಯೇವೆ ಗೋಡಾ’ ಎಂದು ಮುಕ್ಕುತ್ತಾ ಹೇಳುವ ಜನಕ್ಕೆ ‘ಕೆಫೆ ಲಾತೆ’ ಎನ್ನುವ ಹೆಸರನ್ನು ಸುರಳೀತವಾಗಿ ಉಲಿಯುತ್ತಾ ತಮ್ಮ ವ್ಯಕ್ತಿತ್ವಕ್ಕೇ ಒಂದು ಅಗೋಚರ ಹೊಳಪು ಬಂದದ್ದನ್ನು ಮನಗಾಣುತ ಎದೆ ಸೆಟೆಸಿ ನಿಲ್ಲುತ್ತಿದ್ದರು. ಆದರೆ ಊರಲ್ಲದ ಊರಿನ ದಿಕ್ಕಿಲ್ಲದ ಹುಡುಗಿಯರು ಈ ಜಾಗತೀಕರಣದ ಚಕ್ರವ್ಯೂಹದ ಒಳಗೆ ಬರುವುದಾದರೂ ಹೇಗೆ?

ಕೆಫೆ ಕಾಫೀ ಡೇ ತಂಪು ತಂಪು ಹವಾ, ಸೈಬರ್ ಯುಗಕ್ಕೆ ಹಸಿರು ಬಾವುಟ ಬೀಸಿ ಕರೆದ ಹಾಗೆ ಒಳಗೆ ಬಿಮ್ಮನೆ ಕೂತಿದ್ದ ದೊಡ್ಡ ತಲೆ ಡೊಳ್ಳು ಹೊಟ್ಟೆಯ ಕಂಪ್ಯೂಟರುಗಳು. ಇಂಟರ್ನೆಟ್ಟಿನ ನಿಗೂಢ ಜಗತ್ತಿನಲ್ಲಿ ಮೂಡುವ ಹಾಟ್ ಮೇಲು, ಇತ್ತ ಸಾದೃಶ್ಯವಾಗಿ ಬೋಸಿ ತುಂಬಾ ತುಂಬಿರುವ ಕಾಫೀ, ಅದರ ಮೇಲೆ ಮಿಷಿನ್ನಿಂದ ನೊರೆನೊರೆ ಬರಿಸಿ ಮತ್ತೆ ಅದರಲ್ಲೊಂದು ಚಿತ್ತಾಕರ್ಷಕ ಚಿತ್ರ; ಹೃದಯವೋ, ಹೂವೋ, ನಗು ಮುಖವೋ ಇನ್ನೇನೋ ಒಂದನ್ನು ಕಾಫಿಯ ಮೇಲೆ ಮೂಡಿಸಿ ಶುಭ್ರ ಬಟ್ಟೆ ತೊಟ್ಟು ಪಟಪಟನೆ ಇಂಗ್ಲೀಷು ಮಾತಾಡುವ ‘ವೇಟರು’ ತಂದು ಕೊಟ್ಟು ನಸುನಗುತ್ತಿದ್ದ.

ಒಮ್ಮೆ ಲೋಟ ನೋಡಿ ಆ ಕಡು ಸುವಾಸನೆ ಭರಿತ ಅರ್ಧ ಲೀಟರ್ ಕಾಫೀ ತುಂಬಿದ ಲೋಟಕ್ಕೆ ಬಾಯಿ ಹಚ್ಚುವಾಗ ಚಿತ್ರ ಮೂಡಿಸಿದ ಕಲಾವಿದನಿಗೆ ಅಪಚಾರವಾದೀತೇನೋ ಎಂಬ ಅಳುಕು ಬೇರೆ. ಒಂಥರಾ ಇಕ್ಕಟ್ಟಾದ ಬೀದಿಯಲ್ಲಿ ರಂಗೋಲಿಯ ಮೇಲೆ ಕಾಲು ಇಡಲೇಬೇಕಾಗಿ ಬಂದಾಗ ಮನಸ್ಸಿನಲ್ಲೇ ಕಳವಳ ಆಗುತ್ತದಲ್ಲ ಹಾಗೆ.

ಇತ್ತ ಕುಡಿಯುತ್ತಿದ್ದ ಕಾಫಿ ಹೆಸರನ್ನೂ ಹೇಳಲು ತಡವರಿಸುವ ನಾಲಿಗೆ. ಕೆಫೆ ಲಾತೆ ಎಂಬ ನಾಮಾಂಕಿತವನ್ನು ತಾನು ಮರೆತು ‘ಕೆಫೆ ಲಟ್ಟೆ’ ಎಂದು ಉಚ್ಛರಿಸಿ ತನ್ನ ಗಮಾರತನವನ್ನು ಜಗಜ್ಜಾಹೀರು ಮಾಡಿಕೊಂಡಿರಬಹುದು ಎನ್ನುವ ಅನುಮಾನ ಬೇರೆ. ಆದರೆ ಯಾರ ಉಚ್ಛಾರ ತೆಗೆದುಕೊಂಡು ವೇಟರಿನಿಗೇನು ಆಗಬೇಕಿತ್ತು? ಅವನು ನಗುತ್ತಿದ್ದುದು ಉಳಿದ ಕಡೆ ಮೂರು ನಾಲ್ಕು ರೂಪಾಯಿಗೆ ಸಿಗುತ್ತಿದ್ದ ದಟ್ಟ ರುಚಿಯುಳ್ಳ ಕಾಫಿ ಕುಡಿಯುವುದು ಬಿಟ್ಟು ಒಳಗೆ ಬಂದು ಐವತ್ತು ರೂಪಾಯಿನ ಕಾಫೀ ಬೇಡುತ್ತಿದ್ದಾರಲ್ಲಾ ಈ ಬಕರಾಗಳು ಎನ್ನುವ ಸೋಜಿಗಕ್ಕೆ.

ವಿಜಿಗೆ ಹೀಗೆ ಕಾಫಿ ಕುಡಿಯುವುದನ್ನು ಯಾರೂ ಹೇಳಿಕೊಡಬೇಕಿರಲಿಲ್ಲ. ಯಾಕೆಂದರೆ ತಿಂಗಳಿಗೆ ಐದು ಸಾವಿರ ದುಡಿಯಲು ಬೆನ್ನು ಮುರಿದುಕೊಂಡು ಆತ್ಮ ವಿಶ್ವಾಸ, ಗೌರವ ಕಳೆದುಕೊಂಡು ಸಿಟ್ಟು-ಸೆಡವು ಎಲ್ಲವನ್ನೂ ನುಂಗಿಕೊಂಡು ಬದುಕುತ್ತಿದ್ದವಳಿಗೆ ವಾರಕ್ಕೊಮ್ಮೆ ಕುಡಿಯುವ ಈ ಕಾಫಿಯೇ ಅಮೃತವಿದ್ದಂತೆ. ಬಿಲ್ಲಿನ ಜೊತೆ ‘ಹಾಯ್ ಮ್ಯಾಮ್’ ಎನ್ನುವ ವೇಟರನಿಗೆ ಹತ್ತು ರೂಪಾಯಿ ಟಿಪ್ಸ್ ಇಡುವಾಗ ತನ್ನ ಅವಮಾನಗಳೆಲ್ಲ ಕರಗಿ ಹೋಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಮೇಲ್ ಸ್ತರಕ್ಕೆ ಸೇರಿದೆ ಎನ್ನುವ ಪೊಳ್ಳು ಆತ್ಮವಿಶ್ವಾಸ ಮೂಡುತ್ತಿತ್ತು.


ಒಂದೊಮ್ಮೆ ವಿಜಿಯೂ, ಪೀಜಿಯಲ್ಲಿದ್ದ ಮೈಸೂರಿನ ಹುಡುಗಿ ಸೂಸಿ ಅಲಿಯಾಸ್ ಸೂಸನ್ ಅಲ್ಲಿಗೆ ಕಾಫಿ ಕುಡಿಯಲು ಹೋದರು. ಸೂಸನ್ ಸ್ವಲ್ಪ ‘ಸೇವಿಂಗ್ಸ್ ಇಟ್ಕೋಬೇಕು’ ಮನೋಭಾವದ ಹುಡುಗಿ. ‘ಏನೇ, ಇಷ್ಟ್ ದುಬಾರಿ ಕಾಫೀ ಕುಡೀತೀಯಾ?’ ಎಂದಳು.

ವಿಜಿಗೆ ‘ಸೇವಿಂಗ್ಸ್’ ಬಗ್ಗೆ ತಲೆ ಬುಡ ಅರ್ಥವಾಗಲಿಲ್ಲ. ‘ಅಯ್ಯೋ ಏನ್ ಬಿಡೇ! ಇರೋದೊಂದೇ ಲೈಫು. ವಾರಾ ಒಂದು ಕಾಫೀ ಕುಡಿದ್ರೆ ಖುಷಿ ಆಗುತ್ತೆ. ಅಲ್ಲದೆ ದುಡ್ಡು ಕೂಡಿಟ್ಟು ಆಗೋದೇನಿದೆ ಹೇಳು?’ ಎಂದು ಉಡಾಫೆಯ ಮಾತಾಡಿದಳು.

ತಕ್ಷಣವೇ ಸೂಸನ್ ಕಾರ್ಯಪ್ರವೃತ್ತಳಾಗಿ ಅಲ್ಲೇ ಇದ್ದ ಟಿಷ್ಯೂ ಪೇಪರಿನ ಮೇಲೆ ಪೂರ್ತಿ ಲೆಕ್ಕ ಬರೆದು ತೋರಿಸಿದಳು. ವಾರಕ್ಕೊಂದು ಕಾಫೀ ಕುಡಿಯುವ ಖರ್ಚು, ಜೊತೆಗೆ ಟಿಪ್ಸು, ಬಂದು ಹೋಗುವ ಖರ್ಚು, ಹಾಲಿ ಸಂಬಳದಲ್ಲಿ ವಿಜಿಯ ವಾರ್ಷಿಕ ಆದಾಯ ಎಷ್ಟಾಗುತ್ತದೆ, ಮತ್ತೆ ಅದರಲ್ಲಿ ಬರೀ ಕಾಫಿಯ ವೆಚ್ಚದಿಂದ ಆಗುತ್ತಿರುವ ಆರ್ಥಿಕ ನಷ್ಟ ಎಷ್ಟು, ಅದನ್ನು ಬಿಟ್ಟರೆ ಎಷ್ಟು ದುಡ್ಡು ಉಳಿಯುತ್ತದೆ ಅಂತೆಲ್ಲ ವಿವರಿಸಿದಳು.

ವಿಜಿಗೆ ಒಂದೊಮ್ಮೆ ಹೊಸ ಜಗತ್ತಿನ ಬಾಗಿಲು ತೆರೆದಂತಾಯ್ತು. ಮಾತೇ ನಿಂತುಬಿಟ್ಟಿತು. ಅವಳ ಮೌನವನ್ನು ಪ್ರೋತ್ಸಾಹವೆಂದುಕೊಂಡ ಸೂಸಿ ಮುಂದುವರೆದು ‘ನೋಡು, ನೀನು ವರ್ಷಕ್ಕೆ ಹತ್ತಿರತ್ತಿರ ಅರವತ್ತು ಸಾವಿರ ಗಳಿಸುತ್ತೀ ಅಂತ ಇಟ್ಟುಕೊಂಡರೆ, ವಾರಕ್ಕೊಂದು ಕಾಫಿಯಂತೆ ಲೆಕ್ಕ ಹಾಕಿದರೂ ಕೆಫೆ ಕಾಫೀ ಡೇಗೆ ಏನಿಲ್ಲ ಅಂದರೂ ಐದಾರು ಸಾವಿರ ಬಡಿಯುತ್ತೀ. ಅದೇ ದುಡ್ಡನ್ನು ಉಳಿಸಿದರೆ ನೀನು ಬ್ಯಾಂಕಿಗೆ ಹಾಕಿ ಬಡ್ಡಿ ತಗೋಬಹುದು. ಆದಾಯ ಹೆಚ್ಚಾಗುತ್ತೆ’ ಎಂದಳು.

ವಿಜಿಗೆ ‘ಹೌದಲ್ಲ!...’ ಎನಿಸಿತು...
‘ಅಯ್ಯೋ ನಂಗೆ ಇದೆಲ್ಲ ಹೊಳೆದೇ ಇರಲಿಲ್ಲ ಕಣೇ! ಬ್ಯಾಂಕಿಗೆ ದುಡ್ಡು ಹಾಕಿದರೆ ಮಜಾ ಮಾಡೋದು ಹೆಂಗೆ?’
‘ದುಡ್ಡ್ ಜಾಸ್ತಿ ಬರುತ್ತಲ್ಲ ಆವಾಗ!’
‘ದುಡ್ಡ್ ಜಾಸ್ತಿಯಾಗೋಕೆ ಟೈಮ್ ಹಿಡಿಯುತ್ತೆ’
‘ಹೌದು ಹಿಡಿಯುತ್ತೆ’
‘ಮತ್ತೆ ಅಲ್ಲೀತನಕ ಏನ್ ಮಾಡೋದು?’
‘ದುಡ್ಡು ಬ್ಯಾಂಕಲ್ಲಿ ಸೇರ್ತಾ ಇದೆಯಲ್ಲ ಅಂತ ಖುಷಿ ಪಡೋದು!’
‘ಅಯ್ಯೋ! ಲೈಫು ಒಣ ಒಣ ಆಗುತ್ತಲ್ಲ?’
‘ದುಡ್ಡು ಒಟ್ಟಿಗೇ ಕೈಗೆ ಸಿಕ್ರೆ ಖುಷಿ ಆಗಲ್ವಾ?’
‘ನೀನು ಹಂಗೇ ಸೇವಿಂಗ್ಸ್ ಮಾಡ್ತಾ ಇರೋದಾ?’
‘ಹೌದು. ಹಂಗೇ ಸೇವಿಂಗ್ಸ್ ಮಾಡಿ ನಮ್ ಭಾವನ್ ಕೈಗೆ ಕೊಟ್ಟಿದೀನಿ. ಅವ್ರು ಬಡ್ಡಿ ವ್ಯವಹಾರ ಮಾಡ್ತಾರೆ. ದುಡ್ಡು ಇನ್ನೂ ಜಾಸ್ತಿಯಾಗುತ್ತೆ’
‘ಬಡ್ಡಿ ಗಿಡ್ಡೀ ಅಂದ್ರೆ ಹೆದ್ರಿಕೆ ಕಣೆ. ಸುಮ್ನೆ ಸೇವಿಂಗ್ಸು, ಬ್ಯಾಂಕಲ್ಲಿ ಇಡೋದು ಅಂದ್ರೆ ಓಕೆ’ ಸೂಸಿ ಅಷ್ಟಕ್ಕೆಲ್ಲ ಬಿಟ್ಟುಬಿಡುವ ಸ್ವಭಾವದವಳಾಗಿರಲಿಲ್ಲ.

ವಿಜಿಯನ್ನು ಅಕ್ಷರಶಃ ಅರೆಸ್ಟ್ ಮಾಡಿದಂತೆ ಹಿಡಿದು ಹಾಕಿ ಬಡ್ಡಿ ವ್ಯವಹಾರದ ಒಳಹೊರಗುಗಳನ್ನೆಲ್ಲಾ ಹೇಳಿಕೊಟ್ಟಳು. ತನ್ನ ಭಾವ ಫೈನಾನ್ಶಿಯರ್ ಎಂದು ಹೇಳಿ ಮನೆಮಂದಿಯೆಲ್ಲ ಅವನ ಕೈಗೆ ದುಡ್ಡು ಕೊಟ್ಟಿದ್ದೇವೆ, ಪ್ರತೀ ತಿಂಗಳು ತಪ್ಪದೆ ಬಡ್ಡಿ ಕೊಡುತ್ತಾನೆ ಎಂದು ಹೇಳಿದಳು.

‘ನಾನೂ ಹಂಗಾರೆ ದುಡ್ಡು ಕೊಟ್ರೆ ನಿಮ್ ಭಾವನ ಕೈಗೆ ಕೊಟ್ಟು ಬಡ್ಡಿ ಕೊಡುಸ್ತೀಯಾ?’
‘ಓಹೋ! ಆರಾಮಾಗಿ! ಆದರೆ ಮಿನಿಮಮ್ ಹತ್ತು ಸಾವಿರವಾದರೂ ಆಗಬೇಕು’
‘ಸರಿ ಹಂಗಾದ್ರೆ. ಅಷ್ಟು ಒಟ್ಟುಗೂಡಿದ ಮೇಲೆ ಕೊಡ್ತೀನಿ’ ಎಂದು ಹೇಳಿದಳು ವಿಜಿ.

ಮುಂದೆ ಒಂದು ವಾರ ಸೂಸಿಯ ಭೇಟಿಯಾಗಲಿಲ್ಲ. ವಿಜಿಯೂ ಕೆಲಸದ ಭರಾಟೆಯಲ್ಲಿ ಅತ್ತ ಗಮನ ಕೊಡಲಿಲ್ಲ. ಕೆಫೆ ಕಾಫೀ ಡೇ ಕಡೆ ತಲೆ ಕೂಡ ಹಾಕಿ ಮಲಗಲಿಲ್ಲ. ಒಂದು ದಿನ ಬೆಳಿಗ್ಗೆ ಸೂಸಿ ಹೋ ಎಂದು ಅಳುವುದು ಕೇಳಿಸಿತು. ಎಲ್ಲರೂ ಸಮಾಧಾನ ಮಾಡಿದರೂ ಅವಳಿಗೆ ಸಮಾಧಾನವಾಗುತ್ತಿಲ್ಲ. ಕಣ್ಣೀರ ಧಾರೆ ಹರಿಯುತ್ತಲೇ ಇತ್ತು.

ಸಮಾಧಾನ ಹೇಳಿ ಹೇಳಿ ಸಾಕಾಗಿ ಎಲ್ಲರೂ ತಂತಮ್ಮ ಆಫೀಸುಗಳಿಗೆ ಹೊರಟರು. ವಿಜಿ ಯಾವುದೋ ಕಾರಣಕ್ಕೆ ಆವತ್ತು ರಜೆ ಹಾಕಿದ್ದಳು ಅಂತ ಪೀಜಿಯಲ್ಲೇ ಉಳಿದುಕೊಂಡಿದ್ದಳು. ಎಲ್ಲರೂ ಹೋದ ಮೇಲೆ ಸೂಸಿಯನ್ನು ಮಾತನಾಡಿಸಲು ಹೋದರೆ ಅವಳ ರೂಮಿನಲ್ಲಿದ್ದ ಪುಟ್ಟ ಜೀಸಸ್ ಮುಂದೆ ಮಂಡಿಯೂರಿ ಪ್ರಾರ್ಥನೆ ಮಾಡುತ್ತಿದ್ದಳು. ಅತ್ತೂ ಅತ್ತೂ ಅವಳ ಕಣ್ಣುಗಳೆಲ್ಲಾ ಊದಿಕೊಂಡಿದ್ದವು.

‘ಏನಾಯ್ತೇ ಸೂಸಿ?’
‘ನನ್ ಸೇವಿಂಗ್ಸೆಲ್ಲಾ ಹೋಯ್ತು ಕಣೇ! ದೇವರು ನನಗೇ ಇಂಥಾ ಕಷ್ಟ ಕೊಟ್ಟುಬಿಟ್ಟ!’
‘ಭಾವನ ಹತ್ರ ಇತ್ತು ಅಂದ್ಯಲ್ಲ?’
‘ಭಾವ ಎಲ್ಲಾ ದುಡ್ಡೂ ಎತ್ತಿ ಹಾಕ್ಕೊಂಡು ಇನ್ಯಾವಳ ಜೊತೆಗೋ ಓಡಿಹೋಗಿದಾನಂತೆ’
‘ಅಯ್ಯೋ ಮತ್ತೆ ನಿಮ್ಮಕ್ಕನ ಗತಿ?’
‘ಅಕ್ಕನ ಗತಿ ನೋಡಕ್ಕೆ ಅಪ್ಪ ಇದಾರೆ. ನನ್ನ ದುಡ್ಡ್ ಹೋಯ್ತು ಕಣೆ! ಓ ದೇವ್ರೆ!’ ಕಣ್ಣೊರೆಸಿಕೊಳ್ಳುತ್ತಾ ಮೂಗು ಏರಿಸಿಕೊಳ್ಳುತ್ತಾ ಹೇಳಿದಳು.
‘ಎಷ್ಟ್ ಕೊಟ್ಟಿದ್ದೆ?’
‘ಐದ್ ವರ್ಷದಿಂದ ಸೇವಿಂಗ್ಸ್ ಮಾಡಿ ಒಂದು ಲಕ್ಷ ಕೊಟ್ಟಿದ್ದೆ. ಇನ್ನೂ ಹತ್ತು ಸಾವಿರ ಈ ಸಾರಿ ಮನೆಗೆ ಹೋದಾಗ ಕೊಡೋದು ಅಂತ ಇಟ್ಕೊಂಡಿದ್ದೆ!’
‘ದುಡ್ಡು ಕೊಟ್ಟಿರೋದು ಮನೇಲಿ ಗೊತ್ತು ತಾನೆ?’
‘ಅಯ್ಯೋ! ಅದೇ ಕರ್ಮ ಕಣೇ! ಯಾರಿಗೂ ಗೊತ್ತಿರಲಿಲ್ಲ. ಹೇಳಬೇಡ ಅಂತ ಭಾವನೇ ಹೇಳಿದ್ರು...’
‘ಬಡ್ಡೀನಾದ್ರೂ ಬಂತಾ?’
‘ಒಂದು ವರ್ಷ ಕರೆಕ್ಟಾಗಿ ಬಡ್ಡಿ ಕೊಟ್ರು. ಈಗ ಮೂರು ತಿಂಗಳಿಂದ ಸತಾಯಿಸ್ತಾ ಇದ್ರು’
‘ಆವಾಗಲಾದ್ರೂ ಮನೇಲಿ ಯಾರಿಗಾದ್ರೂ ಹೇಳಬಾರದಿತ್ತಾ?’
‘ನಮ್ಮಕ್ಕನಿಗೆ ಹೇಳಿದೆ. ಅವಳೂ ಭಾವನಿಗೆ ಏನೋ ತೊಂದರೆ ಇದೆ, ಮನೇಲಿ ಹೇಳಿದ್ರೆ ಗಲಾಟೆ ಆಗುತ್ತೆ ಸುಮ್ಮನೆ ಇರು. ನಿನ್ನ ದುಡ್ಡು ನಾನೇ ವಾಪಾಸು ಕೊಡ್ತೀನಿ ಅಂದಿದ್ಲು’
‘ಈಗ ಅವಳಿಗೂ ತೊಂದರೆ ಆಯ್ತಲ್ಲೇ?’
ಸೂಸಿ ಇದ್ದಕ್ಕಿದ್ದಂತೆ ವ್ಯಗ್ರಳಾದಳು. ‘ಅವರದ್ದು ಲವ್ ಮ್ಯಾರೇಜು. ಬೇಡ ಬೇಡ ಅಂದ್ರೂ ಅವನನ್ನೇ ಮಾಡಿಕೊಳ್ತೀನಿ ಅಂತ ಹಟ ಹಿಡಿದು ಮಾಡಿಕೊಂಡ್ಲು.

ಅವನು ಸರಿ ಇಲ್ಲಾಂತ ಎಲ್ಲರಿಗೂ ಗೊತ್ತಿತ್ತು. ಈಗ ಅವನು ಯಾವಳನ್ನೋ ಕಟ್ಟಿಕೊಂಡು ಓಡಿ ಹೋದ. ಅವಳಿಗೆ ತೊಂದರೆ ಆದರೆ ನಾನೇನು ಮಾಡೋಕಾಗುತ್ತೆ! ನನ್ ದುಡ್ಡು ಅವಳು ವಾಪಾಸ್ ಕೊಡ್ಲಿ!’ ಎಂದು ಹಲ್ಲು ಕಡಿದಳು.

ಮಾತನಾಡಲು ಯಾಕೋ ಸಂದರ್ಭ ಸರಿ ಇಲ್ಲ ಅನ್ನಿಸಿತು ವಿಜಿಗೆ. ಹತ್ತು ಕ್ಷಣದ ಮೌನದಲ್ಲಿ ಸೂಸಿಯ ದುಃಖ ಮತ್ತೆ ಉಕ್ಕಿ ಬಂತು.
‘ಬೋಳಿಮಗ! ಹೋಗೋದು ಹೋದ. ನನ್ನ ದುಡ್ಡೂ ಹೋಯ್ತು! ವಯಸ್ಸಲ್ಲಿ ಎಲ್ಲರೂ ಮಜಾ ಮಾಡ್ತಿದ್ದರೆ ನಾನು ದುಡ್ಡು ಕೂಡಿ ಹಾಕ್ತಾ ಇದ್ದೆ. ಯಾವನ ಬಾಯಿಗೋ ಹೋಯಿತು! ಅಯ್ಯೋ ದೇವರೇ! ನನಗೆ ಯಾಕಿಂಥಾ ಶಿಕ್ಷೆ ಕೊಟ್ಟೆ! ಎಂಥಾ ಕ್ರೂರಿ ನೀನು!’
‘ಅಲ್ಲ ಸೂಸಿ, ಇದರಲ್ಲಿ ದೇವರ ತಪ್ಪೇನು?’
‘ಅವನೇ ಅಲ್ವಾ ನಾನು ಭಾವ ಅನ್ನೋ ಮಂಗನಿಗೆ ದುಡ್ಡು ಕೊಡೋ ಹಾಗೆ ಮಾಡಿದ್ದು?’
‘ಇಲ್ಲ. ದೇವರು ದುಡ್ಡು ನಿನ್ನ ಕೈಗೆ ಬರೋ ಹಾಗೆ ಮಾಡಿದ್ದ. ಅದನ್ನ ಭಾವನ ಕೈಗೆ ನೀನೇ ಕೊಟ್ಟದ್ದು’
‘ಒಪ್ಪಿದೆ. ಆದರೆ ಮೋಸವಾಯ್ತಲ್ಲ?’
‘ಆ ಮೋಸ ಆದದ್ದು ನಿನ್ನ ಆಸೆಯಿಂದ. ಆ ದುಡ್ಡನ್ನ ಬ್ಯಾಂಕಲ್ಲಿ ಇಟ್ಟಿದ್ರೆ ಇರ್ತಿತ್ತು. ನಿನಗೆ ಅದನ್ನ ಮರಿ ಹಾಕುಸ್ಬೇಕು ಅಂತ ದುರಾಸೆ ಇತ್ತಲ್ವಾ? ನಿಮ್ಮ ಭಾವನಿಗೂ ನಿನಗಿಂತ ದೊಡ್ಡ ಬಕರಾ ಸಿಕ್ಕಿರಲಿಕ್ಕಿಲ್ಲ’
‘ಥತ್! ಹೌದು ಕಣೆ! ಅಯ್ಯೋ! ಆದರೆ ಒಂದು ಲಕ್ಷ ಹೋಯಿತಲ್ಲ! ಹೊಟ್ಟೆ ಒಳಗೆ ಸಂಕಟ ಆಗುತ್ತೆ!’
‘ಏನೂ ಮಾಡೋಕಾಗಲ್ಲ. ಸಮಾಧಾನ ಮಾಡ್ಕೋ. ಹತ್ತು ಸಾವಿರ ಮಿಕ್ಕಿದೆಯಲ್ಲ? ಅಷ್ಟನ್ನೇ ದೇವರು ಉಳಿಸಿದ್ದು ಅಂದುಕೋ’
ಅರಚಾಡಿ ಕಿರುಚಾಡಿ ನೆಲದ ಮೇಲೆ ಬಿದ್ದು ಹೊರಳಾಡಿದಳು ಸೂಸಿ. ಇಷ್ಟೆಲ್ಲಾ ನಡೆಯುತ್ತಿರುವಾಗ ಸದ್ಯ ಯಾರೂ ಇರಲಿಲ್ಲ ಪೀಜಿಯಲ್ಲಿ. ಸ್ವಲ್ಪ ಹೊತ್ತಿನ ನಂತರ ವಿಜಿಯ ರೂಮಿಗೆ ಬಂದಳು.

‘ಸಾಯಂಕಾಲ ಫ್ರೀ ಇದೀಯಾ?’
‘ಯಾಕೆ?’
‘ಒಂದು ಬಿಯರ್ ಕುಡಿದು ಬರೋಣ ಬಾ. ಪ್ರತೀ ಶನಿವಾರ ಬಿಯರ್ ಕುಡಿಯೋಣ’
‘ಮತ್ತೆ ಸೇವಿಂಗ್ಸು?’
‘ಶಾ*! ಇರೋ ತನಕ ಮಜಾ ಮಾಡಿ ಸಾಯ್ತೀನಿ’
ದುಡ್ಡಿನ ಸೇವಿಂಗ್ಸು ಬಿಟ್ಟು ಖುಷಿಯ ಸೇವಿಂಗ್ಸಿನ ದಾರಿ ಕಂಡಿತ್ತು ಸೂಸಿಗೆ. ದೇವರು ನಿಜಕ್ಕೂ ದೊಡ್ಡವನೇ ಅಂದುಕೊಂಡಳು ವಿಜಿ. ಕಾಫಿಯನ್ನೇ ದುಂದುವೆಚ್ಚ ಅಂದಿದ್ದ ಹುಡುಗಿಗೆ ಬಿಯರು ಸಂತೋಷದ ದಾರಿ ಅಂತ ಇನ್ಯಾರು ತಾನೇ ತೋರಿಸಲು ಸಾಧ್ಯವಿತ್ತು? ಹುಲುಮಾನವರ ಕೈಲಂತೂ ಸಾಧ್ಯವಿರಲಿಲ್ಲ ಈ ಕೆಲಸ. ಅಲ್ಲಿಗೆ ದೇವರು ಇದ್ದಾನೆ ಎನ್ನುವ ಮಾತು ಖಂಡಿತ ಎಂದು ಸಿದ್ಧವಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT