ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖ್ಯಾತಿಯಷ್ಟೇ ಕಳಂಕ ಅಂಟಿಸಿಕೊಂಡ ಕಿಸ್ಸಿಂಜರ್‌

Last Updated 10 ಮಾರ್ಚ್ 2016, 19:45 IST
ಅಕ್ಷರ ಗಾತ್ರ

ಬಹುಶಃ ರಾಜಕಾರಣವೇ ಹಾಗೆ. ಅಲ್ಲಿ ಸಣ್ಣದೆಂದುಕೊಂಡ ಸಂಗತಿಯೂ ಕೆಲವೊಮ್ಮೆ ಮುಖ್ಯವಾಗುತ್ತದೆ. ಮರೆಗೆ ಸರಿದದ್ದು ಢಾಳಾಗಿ ಎದುರು ನಿಲ್ಲುತ್ತದೆ. ವರ್ತನೆ, ಒಡನಾಟ, ಉಡುಪು, ಎಂದೋ ಆಡಿದ ಮಾತು, ಯಾರದ್ದೋ ಜೊತೆಗಿನ ಭಾವಚಿತ್ರ ಕೂಡ ಮುನ್ನೆಲೆಗೆ ಬಂದು ಚರ್ಚೆಗೆ ಒಳಪಡುತ್ತವೆ. ಪಂಚೆ ತೊಟ್ಟ ಸಮಾಜವಾದಿ ಮುಖ್ಯಮಂತ್ರಿ ಕೈಯಲ್ಲಿನ ಹೊಳೆಯುವ ಲಕ್ಷದ ವಾಚು ಎಲ್ಲರ ಲಕ್ಷ್ಯವನ್ನೂ ಸೆಳೆಯುತ್ತದೆ.

ಸರಳ, ಸಜ್ಜನ ಎನಿಸಿಕೊಂಡ ರಾಜಕಾರಣಿ ಏರ್ಪಡಿಸಿದ ಭರ್ಜರಿ ಔತಣಕೂಟದಲ್ಲಿ ಯಾರಿದ್ದರು ಎನ್ನುವುದು ಕೂಡ ಮುಖ್ಯ ಪ್ರಶ್ನೆಯಾಗುತ್ತದೆ. ಹಾಗಂತ ಇದು ಕೇವಲ ಭಾರತದ ರಾಜಕಾರಣಕ್ಕೆ ಸೀಮಿತವಾದದ್ದೇನೂ ಅಲ್ಲ. ಅಮೆರಿಕದಲ್ಲಿ ಇತ್ತೀಚೆಗೆ ಇದೇ ಹಿನ್ನೆಲೆಯಲ್ಲಿ ಚರ್ಚೆಯೊಂದು ನಡೆಯಿತು. ಎರಡು ವರ್ಷಗಳ ಹಿಂದೆ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಗೆ ಹಿಲರಿ ಕ್ಲಿಂಟನ್, ಹೆನ್ರಿ ಕಿಸ್ಸಿಂಜರ್ ಅವರ ‘ವರ್ಲ್ಡ್ ಆರ್ಡರ್’ ಕೃತಿಯ ಕುರಿತು ಲೇಖನ ಬರೆದಿದ್ದರು.

ಅದರಲ್ಲಿ ‘ಕಿಸ್ಸಿಂಜರ್ ನನ್ನ ಸ್ನೇಹಿತರು, ನಾನು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿದ್ದಾಗ ಹಲವು ಬಾರಿ ಅವರ ಸಲಹೆಗಳನ್ನು ಪಡೆದುಕೊಂಡಿದ್ದಿದೆ’ ಎಂಬುದನ್ನು ಉಲ್ಲೇಖಿಸಿದ್ದರು. ಮೊನ್ನೆ ಚುನಾವಣಾ ಪೂರ್ವ ಸಾರ್ವಜನಿಕ ಚರ್ಚೆಯ ಕಾಲೆಳೆಯುವ ಆಟದಲ್ಲಿ ಬರ್ನಿ ಸ್ಯಾಂಡರ್ಸ್ ಆ ವಿಷಯ ಪ್ರಸ್ತಾಪಿಸಿ, ವಿದೇಶಾಂಗ ನೀತಿಯ ಬಗ್ಗೆ ಹಿಲರಿ ಅವರ ನಿಲುವುಗಳನ್ನು ಪ್ರಶ್ನಿಸಿದರು.

‘ಕಿಸ್ಸಿಂಜರ್ ಅವರ ಅಮಾನವೀಯ, ಕುಟಿಲ ತಂತ್ರಗಳನ್ನು ಹಿಲರಿ ಅನುಮೋದಿಸುತ್ತಾರೆಯೇ’ ಎಂದು ಕುಟುಕಿದರು. ‘ಸದ್ಯ ಕಿಸ್ಸಿಂಜರ್ ನನ್ನ ಸ್ನೇಹಿತರಲ್ಲ’ ಎಂದು ಕೊಂಕು ನುಡಿದರು. ಸ್ಯಾಂಡರ್ಸ್ ಈ ವಿಷಯ ಪ್ರಸ್ತಾಪಿಸಿದ್ದರಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಹಿಲರಿ ಅವರಿಗೆ ಅಷ್ಟೇನೂ ಹಿನ್ನಡೆ ಆಗದಿದ್ದರೂ ನಿಕ್ಸನ್, ಕಿಸ್ಸಿಂಜರ್ ಅವಧಿಯ ಒಳಿತು ಕೆಡುಕುಗಳನ್ನು ನೆನಪು ಮಾಡಿಕೊಳ್ಳಲು ಸಂದರ್ಭವಂತೂ ಒದಗಿತು. 

ಇದೀಗ 92 ವರ್ಷಗಳನ್ನು ಪೂರೈಸಿರುವ ಕಿಸ್ಸಿಂಜರ್, ಅಮೆರಿಕದ ಪ್ರಮುಖ ರಾಜತಂತ್ರಜ್ಞರಲ್ಲಿ ಒಬ್ಬರು. ಇಂದಿಗೂ ಹಲವು ದೇಶಗಳು ರಾಜತಾಂತ್ರಿಕ ಸಲಹೆಗಳಿಗೆ ಅವರತ್ತ ನೋಡುವುದಿದೆ. ಮೊದಲಿಗೆ ಅಮೆರಿಕದ ಭದ್ರತಾ ಸಲಹೆಗಾರರಾಗಿ ನಂತರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ನಿಕ್ಸನ್ ಮತ್ತು ಫೋರ್ಡ್ ಅವಧಿಯಲ್ಲಿ ಅಮೆರಿಕವನ್ನು ಹೊಸ ಪಥದತ್ತ ಕಿಸ್ಸಿಂಜರ್ ನಡೆಸಿದರು. 1969- 77ರ ಅವಧಿಯಲ್ಲಿ ಅಮೆರಿಕದ ವಿದೇಶಾಂಗ ನೀತಿಯನ್ನು ನಿರ್ದೇಶಿಸಿದರು.

ರಷ್ಯಾ ವಿರೋಧಿಸಲು ಚೀನಾದ ಕಡೆಗೆ ಮುಖ ಮಾಡಿದ್ದು, ಪ್ಯಾರಿಸ್ ಶಾಂತಿ ಒಪ್ಪಂದವನ್ನು ರೂಪಿಸಿದ್ದು, ವಿಯೆಟ್ನಾಂನಿಂದ ಅಮೆರಿಕ ಸೇನೆಯನ್ನು ಹಿಂಪಡೆದಿದ್ದು, ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಶಕ್ತಿ ತುಂಬಿದ್ದು ಕಿಸ್ಸಿಂಜರ್ ಅವಧಿಯ ಪ್ರಮುಖ ಅಂಶಗಳು. ವಿಯೆಟ್ನಾಂ ಯುದ್ಧ ಕೊನೆಗೊಳ್ಳುವಲ್ಲಿ ಮುಖ್ಯಪಾತ್ರ ವಹಿಸಿದ್ದಕ್ಕಾಗಿ ಕಿಸ್ಸಿಂಜರ್ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರವನ್ನೂ ನೀಡಲಾಯಿತು. ಆದರೆ ಸಾಕಷ್ಟು ಟೀಕೆಗಳು ಬಂದವು. ನೊಬೆಲ್ ಆಯ್ಕೆ ಸಮಿತಿಯ ಇಬ್ಬರು ಸದಸ್ಯರು ಕಿಸ್ಸಿಂಜರ್ ಆಯ್ಕೆಯನ್ನು ವಿರೋಧಿಸಿ ಸಮಿತಿಯಿಂದ ಹೊರಬಂದರು.

ಕಿಸ್ಸಿಂಜರ್ ಅಮೆರಿಕದ ವಿದೇಶಾಂಗ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರೂ ಅವರ ನಿಲುವುಗಳ ಬಗ್ಗೆ ಏಕಾಭಿಪ್ರಾಯವಿಲ್ಲ. ಕಾರಣ ಕಿಸ್ಸಿಂಜರ್ ಇಟ್ಟ ಪ್ರತಿ ಹೆಜ್ಜೆ ಒಂದು ಮಗ್ಗುಲಿನಿಂದ ರಾಷ್ಟ್ರೀಯ ಹಿತಕ್ಕೆ ಪೂರಕವಾಗಿ ಕಂಡರೆ, ಮತ್ತೊಂದು ಮಗ್ಗುಲಿನಿಂದ ಸ್ವಹಿತಾಸಕ್ತಿಯ, ವೈಯಕ್ತಿಕ ದ್ವೇಷದ ಕ್ರಮವಾಗಿ ಕಾಣುತ್ತದೆ. ಹಾಗಾಗಿ ಕಿಸ್ಸಿಂಜರ್ ಶ್ರೇಷ್ಠ ರಾಜತಂತ್ರಜ್ಞ ಎಂದು ಕೊಂಡಾಡುವವರೂ ಇದ್ದಾರೆ, ಕುಟಿಲ ರಾಯಭಾರಿ, ಜನಾಂಗೀಯ ದ್ವೇಷಿ ಎಂದು ಜರಿಯುವವರೂ ಇದ್ದಾರೆ. ಅಂತೆಯೇ ಕಿಸ್ಸಿಂಜರ್ ಕ್ರಮವನ್ನು ಒಪ್ಪುವ, ಖಂಡಿಸುವ ಹಲವು ಪುಸ್ತಕಗಳೂ ಬಂದಿವೆ.

ಹಾಗೆ ನೋಡಿದರೆ, ಕಿಸ್ಸಿಂಜರ್ ಸೈದ್ಧಾಂತಿಕ ಭ್ರಮೆಗಳಿಂದ ದೂರಬಂದು, ವಸ್ತುಸ್ಥಿತಿಯನ್ನು ಗ್ರಹಿಸಿ ಅದಕ್ಕೆ ಪೂರಕವಾಗಿ ಪ್ರತಿಕ್ರಿಯಿಸುವ ರಾಜಕೀಯ ಕ್ರಮವನ್ನು ಆಯ್ದುಕೊಂಡವರು. ‘ರಿಯಲಿಸ್ಟಿಕ್ ಪಾಲಿಟಿಕ್ಸ್’ ಎಂದು ಕರೆಯಲಾಗುವ ಈ ವಿಧಾನ ಅಮೆರಿಕದಲ್ಲಿ ಹೆಚ್ಚು ಬಳಕೆಯಾದದ್ದು ರಿಚರ್ಡ್ ನಿಕ್ಸನ್ ಮತ್ತು ಕಿಸ್ಸಿಂಜರ್ ಅವಧಿಯಲ್ಲಿ. ಕಿಸ್ಸಿಂಜರ್ ಅಮೆರಿಕದ ವಿದೇಶಾಂಗ ನೀತಿಯನ್ನು ಈ ವಾಸ್ತವಿಕ ರಾಜಕಾರಣದ ಚೌಕಟ್ಟಿಗೆ ಹೊಂದಿಸಿದರು. ಸೈದ್ಧಾಂತಿಕ ರಾಜಕಾರಣ ನಿಗದಿತ ಸೂತ್ರಗಳ ಮೇಲೆ ನಡೆದರೆ, ವಾಸ್ತವಿಕ ರಾಜಕಾರಣ ತಲುಪಬೇಕಾದ ಗಮ್ಯಕ್ಕೆ ಪೂರಕವಾಗಿರುತ್ತದೆ.

ಈ ನಿಟ್ಟಿನಲ್ಲಿ ಅಮೆರಿಕ ಹಲವು ಮಹತ್ವದ ಹೆಜ್ಜೆಗಳನ್ನು ಮುಂದಿಟ್ಟಿತು. ಕಮ್ಯುನಿಸಂ ವಿರೋಧಿಸುತ್ತಲೇ, ಕಮ್ಯುನಿಸ್ಟ್‌ ಚೀನಾದೊಂದಿಗೆ ಸ್ನೇಹಕ್ಕಾಗಿ ಹಸ್ತ ಚಾಚಿತು. ಸೈದ್ಧಾಂತಿಕವಾಗಿ ಇಸ್ರೇಲ್ ಜೊತೆಗಿದ್ದರೂ, ಅರಬ್ ರಾಷ್ಟ್ರಗಳ ತೈಲ ಪೂರೈಕೆ ಅಮೆರಿಕಕ್ಕೆ ಬೇಕಿತ್ತು. ಹಾಗಾಗಿ ಅರಬ್- ಇಸ್ರೇಲ್ ಯುದ್ಧದ ತರುವಾಯ ಕಿಸ್ಸಿಂಜರ್ ಸರಣಿ ಪ್ರವಾಸಗಳನ್ನು ಮಾಡಿ, ಸಿನಾಯ್ ಪ್ರದೇಶದಿಂದ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಇಸ್ರೇಲ್ ಮನವೊಲಿಸಲು ಯಶಸ್ವಿಯಾದರು. ಅದನ್ನು ‘ಶಟಲ್ ಡಿಪ್ಲೊಮಸಿ’ ಎಂದು ಕರೆಯಲಾಯಿತು. 

ಸರ್ವಾಧಿಕಾರವನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದ ಅಮೆರಿಕ, ಶೀತಲ ಯುದ್ಧದ ಸಮಯದಲ್ಲಿ ಹಲವೆಡೆ ಸರ್ವಾಧಿಕಾರಿ ಆಡಳಿತವನ್ನು ಬೆಂಬಲಿಸಿ ಪೋಷಿಸಿತು. ಇಂತಹ ಆದರ್ಶ ತೊರೆದ, ಕೇವಲ ಗಮ್ಯದೆಡೆಗಿನ ದೃಷ್ಟಿ ಮೇಲ್ನೋಟಕ್ಕೆ ಪ್ರಯೋಜನಕಾರಿಯಾಗಿ ಕಂಡರೂ ಹಲವು ಅನಾಹುತಗಳಿಗೂ ಎಡೆ ಮಾಡಿಕೊಟ್ಟಿತು.

ನಿಕ್ಸನ್ ಅವಧಿಯಲ್ಲಿ ಕಿಸ್ಸಿಂಜರ್ ಭದ್ರತಾ ಸಲಹೆಗಾರರಾಗಿ ನಿಯುಕ್ತಿಗೊಂಡಾಗ, ಅಮೆರಿಕಕ್ಕೆ ತನ್ನ ಪ್ರತಿಸ್ಪರ್ಧಿ ಸೂಪರ್ ಪವರ್ ಸೋವಿಯತ್ ಒಕ್ಕೂಟವನ್ನು ಅಂಕೆಯಲ್ಲಿಡುವುದು ಮೊದಲ ಆದ್ಯತೆಯಾಗಿತ್ತು. ಆ ನಿಟ್ಟಿನಲ್ಲಿ ಕಿಸ್ಸಿಂಜರ್ ಯೋಜನೆ ರೂಪಿಸಿದರು. ರಾಜತಾಂತ್ರಿಕವಾಗಿ ಸೋವಿಯತ್ ಒಕ್ಕೂಟದ ಮೇಲೆ ಒತ್ತಡ ಹೇರಲು, ರಷ್ಯಾದ ಮೇಲೆ ಮುನಿಸಿಕೊಂಡಿದ್ದ ಚೀನಾವನ್ನು ಬಳಸಿಕೊಂಡರು. ಆಗ ಚೀನಾ ಅಮೆರಿಕದ ಸ್ನೇಹಕ್ಕೆ ಸೇತುವೆಯಾಗಿ ನಿಂತದ್ದು ಪಾಕಿಸ್ತಾನ. ಕಿಸ್ಸಿಂಜರ್ 1971ರ ಜುಲೈನಲ್ಲಿ ಚೀನಾಕ್ಕೆ ಗೋಪ್ಯವಾಗಿ ಭೇಟಿ ಕೊಟ್ಟರು.

ಮುಂದೆ 1972ರಲ್ಲಿ ಮಾವೊ ಮತ್ತು ನಿಕ್ಸನ್ ಮಾತುಕತೆಗೆ ಇದು ವೇದಿಕೆ ನಿರ್ಮಿಸಿತು. ಸೋವಿಯತ್ ಒಕ್ಕೂಟ ಕಂಗಾಲಾಯಿತು. ಅಮೆರಿಕ ಅಷ್ಟರಮಟ್ಟಿಗೆ ತನ್ನ ಉದ್ದೇಶ ಈಡೇರಿಸಿಕೊಂಡಿತು. ಆದರೆ ವ್ಯಾವಹಾರಿಕವಾಗಿ ಚೀನಾಕ್ಕೆ ಮುಕ್ತವಾಗಿ ತೆರೆದುಕೊಂಡದ್ದರಿಂದ, ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಅರ್ಥವ್ಯವಸ್ಥೆ ಕಂಪಿಸಿತು. ಜೊತೆಗೆ ಚೀನಾದೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳುವಲ್ಲಿ ಕಿಸ್ಸಿಂಜರ್ ಸ್ವಹಿತಾಸಕ್ತಿ ಇತ್ತು, ಸುಮಾರು 75 ದಶಲಕ್ಷ ಡಾಲರ್ ಮೊತ್ತದ ಹೂಡಿಕೆಯನ್ನು ತಾವು ಮುಖ್ಯಸ್ಥರಾಗಿದ್ದ ಕಂಪೆನಿಗೆ ಬರುವಂತೆ ಕಿಸ್ಸಿಂಜರ್ ನೋಡಿಕೊಂಡರು ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ 1989ರಲ್ಲಿ ವರದಿ ಮಾಡಿತ್ತು.  

ವಿಯೆಟ್ನಾಂ ವಿಷಯದಲ್ಲೂ ಕಿಸ್ಸಿಂಜರ್ ಕುಟಿಲ ತಂತ್ರವನ್ನೇ ಬಳಸಿದರು. ‘Peace with Honor’ ಘೋಷವಾಕ್ಯದೊಂದಿಗೆ ಅಧಿಕಾರಕ್ಕೆ ಬಂದಿದ್ದ ನಿಕ್ಸನ್, ಕಿಸ್ಸಿಂಜರ್ ಅವರನ್ನು ವಿಯೆಟ್ನಾಂ ಉಸ್ತುವಾರಿಗೆ ನೇಮಿಸಿದರು. ಕಮ್ಯುನಿಸಂ ವಿಸ್ತರಣೆಗೆ ಅಂಕುಶ ಹಾಕುವ ಗುರಿ ಹೊಂದಿದ್ದ ಅಮೆರಿಕ, ದಕ್ಷಿಣ ವಿಯೆಟ್ನಾಂ ಕಮ್ಯುನಿಸ್ಟ್‌ ವಶವಾಗುವುದನ್ನು ತಡೆಯಲು ಅದರ ಬೆಂಬಲಕ್ಕೆ ನಿಂತಿತ್ತು. ಹಲವು ವರ್ಷಗಳ ಯುದ್ಧಕ್ಕೆ ಇತಿಶ್ರೀ ಹಾಡಲು ಕಿಸ್ಸಿಂಜರ್ ಹಠಾತ್ ಆಕ್ರಮಣದ ಮಾರ್ಗ ಸೂಚಿಸಿದರು. ಕ್ರಿಸ್ಮಸ್ ವೇಳೆ ಉತ್ತರ ಕಾಂಬೋಡಿಯಾ ಮತ್ತು ಉತ್ತರ ವಿಯೆಟ್ನಾಂ ರಾಜಧಾನಿಯ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಸುಮಾರು ಒಂದೂವರೆ ಲಕ್ಷ ಅಮಾಯಕರು ಮೃತಪಟ್ಟರು. ಉತ್ತರ ವಿಯೆಟ್ನಾಂ ಬೆಚ್ಚಿತು.

ಅತ್ತ ಬಾಂಬ್ ದಾಳಿಗೆ ಆದೇಶಿಸಿದ್ದ ಕಿಸ್ಸಿಂಜರ್, ಇತ್ತ ಬಿಳಿಯ ಬಾವುಟ ಹಿಡಿದು ಶಾಂತಿ ಒಪ್ಪಂದದ ಮಾತುಕತೆಗೆ ಕುಳಿತರು. ಉತ್ತರ ವಿಯೆಟ್ನಾಂನ ಜನರಲ್ ಲೇ ಡಕ್ ಥೋ, ಕಿಸ್ಸಿಂಜರ್ ನಡುವಿನ ಮಾತುಕತೆಯಿಂದ ಯುದ್ಧ ಅಂತ್ಯವಾಯಿತು. ಈ ಕಾರಣಕ್ಕೇ ಇಬ್ಬರಿಗೂ ನೊಬೆಲ್ ಶಾಂತಿ ಪುರಸ್ಕಾರ ಘೋಷಣೆಯಾಯಿತು! ಮಾನವ ವಿರೋಧಿ, ನಿರ್ದಯಿ ಕಿಸ್ಸಿಂಜರ್ ಜೊತೆ ಪ್ರಶಸ್ತಿ ಹಂಚಿಕೊಳ್ಳಲಾರೆ ಎಂದು ಥೋ ಪ್ರಶಸ್ತಿ ನಿರಾಕರಿಸಿದರೆ, ಕಿಸ್ಸಿಂಜರ್ ‘ನೊಬೆಲ್ ಪ್ರಶಸ್ತಿಯನ್ನು ವಿನಮ್ರನಾಗಿ ಸ್ವೀಕರಿಸುತ್ತೇನೆ’ ಎಂದರು.

ಇನ್ನು ಕಿಸ್ಸಿಂಜರ್ ಎಂದಾಕ್ಷಣ ಭಾರತೀಯರಿಗೆ 71ರ ಭಾರತ- ಪಾಕಿಸ್ತಾನ ಯುದ್ಧ ನೆನಪಿಗೆ ಬರಲೇಬೇಕು. ನಿಕ್ಸನ್ ಮತ್ತು ಕಿಸ್ಸಿಂಜರ್ ಅವರ ಭಾರತ ವಿರೋಧಿ ನಿಲುವಿನ ಬಗ್ಗೆ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಗ್ಯಾರಿ ಜೆ ಬಾಸ್ ತಮ್ಮ ‘ಬ್ಲಡ್ ಟೆಲಿಗ್ರಾಂ’ ಕೃತಿಯಲ್ಲಿ ಸವಿಸ್ತಾರವಾಗಿ ಬರೆದಿದ್ದಾರೆ. ನಿಕ್ಸನ್ ಮತ್ತು ಕಿಸ್ಸಿಂಜರ್ ತಳೆದ ನಿಲುವನ್ನು ‘Moral Blindness’ ಎಂದು ಕರೆದಿದ್ದಾರೆ. ಆದದ್ದಾದರೂ ಇಷ್ಟೇ, 1971ರ ಮಾರ್ಚ್ 25ರಂದು ಪಾಕಿಸ್ತಾನದ ಸೇನೆ ಪೂರ್ವ ಪಾಕಿಸ್ತಾನದಲ್ಲಿ ಜನಾಂಗ ಹತ್ಯೆಗೆ ಮುಂದಾಯಿತು.

ಪಾಕಿಸ್ತಾನದಲ್ಲಿದ್ದ ಅಮೆರಿಕ ರಾಯಭಾರಿ ಆರ್ಚರ್ ಬ್ಲಡ್, ಶ್ವೇತಭವನಕ್ಕೆ ಸರಣಿ ಟೆಲಿಗ್ರಾಂಗಳನ್ನು ರವಾನಿಸಿದರು. ‘ಹಿಂದೂಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ಢಾಕಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು, ಪ್ರೊಫೆಸರ್‌ಗಳನ್ನು ಹಾಸ್ಟೆಲ್‌ನಿಂದ ಎಳೆದು ತಂದು ಕೊಲ್ಲಲಾಗುತ್ತಿದೆ. ತ್ವರಿತ ಕ್ರಮದ ಅವಶ್ಯವಿದೆ’ ಎಂದು ತಂತಿ ಕಳುಹಿಸಿದರು. ಪಾಕಿಸ್ತಾನದ ಸೇನಾ ದಾಳಿಯಿಂದಾಗಿ ನಿರಾಶ್ರಿತರು ಭಾರತದತ್ತ ಬರುವಂತಾಯಿತು.

ಭಾರತ ಕೂಡ ಈ ಬಗ್ಗೆ ಅಮೆರಿಕಕ್ಕೆ ಸುದ್ದಿ ಮುಟ್ಟಿಸಿ ಕ್ರಮಕ್ಕೆ ಆಗ್ರಹಿಸಿತು. ಆದರೆ ನಿಕ್ಸನ್ ಮತ್ತು ಕಿಸ್ಸಿಂಜರ್ ತುಟಿ ಬಿಚ್ಚಲಿಲ್ಲ. ಬ್ಲಡ್ ಈ ಬಗ್ಗೆ ಉಲ್ಲೇಖಿಸುತ್ತಾ ‘ಭಾರತ ಮತ್ತು ಇಂದಿರಾ ಗಾಂಧಿ ಅವರ ಬಗ್ಗೆ ನಿಕ್ಸನ್ ಮತ್ತು ಕಿಸ್ಸಿಂಜರ್ ಅವರಿಗಿದ್ದ ವೈಯಕ್ತಿಕ ದ್ವೇಷವೇ ಆ ಮೌನಕ್ಕೆ ಕಾರಣ’ ಎಂದಿದ್ದಾರೆ.

ಈ ವಿಷಯದಲ್ಲಿ ಅಮೆರಿಕ ಕೇವಲ ಮೌನ ತಳೆಯಲಿಲ್ಲ, ಪಾಕಿಸ್ತಾನಕ್ಕೆ ಹಣ ಮತ್ತು ಶಸ್ತ್ರಾಸ್ತ್ರಗಳ ಮೂಲಕ ಶಕ್ತಿ ತುಂಬುವ ಕುಚೋದ್ಯ ಮಾಡಿತು. ಭಾರತ, ಸೋವಿಯತ್ ರಷ್ಯಾದತ್ತ ವಾಲಿದ್ದು, ಇಂದಿರಾ ಗಾಂಧಿ ಅಮೆರಿಕದ ತಾಳಕ್ಕೆ ಕುಣಿಯದೇ ದಿಟ್ಟತನದಿಂದ ಪಾಕಿಸ್ತಾನವನ್ನು ಮುರಿಯುವ ಸಂಕಲ್ಪ ತೊಟ್ಟಿದ್ದು ನಿಕ್ಸನ್ ಮತ್ತು ಕಿಸ್ಸಿಂಜರ್ ಅವರನ್ನು ಕುಪಿತಗೊಳಿಸಿತ್ತು. ಇಂದಿರಾ ಗಾಂಧಿ ಅವರ ಬಗ್ಗೆ ಮಾತನಾಡುತ್ತಾ ‘Bitch’ ಎನ್ನುವ ಪದವನ್ನು ನಿಕ್ಸನ್ ಬಳಸಿದ್ದರು.

ಅತ್ತ ಪಾಕ್ ಅಧ್ಯಕ್ಷ ಯಾಹ್ಯಾ ಖಾನ್, ನಿಕ್ಸನ್ ಗೆಳೆತನ ಗಟ್ಟಿಯಿತ್ತು. ಅಮೆರಿಕ ಪಾಕಿಸ್ತಾನದ ಬಗಲಿಗೆ ನಿಂತಿತು. ಆದರೆ ಸನ್ನದ್ಧವಾಗಿಯೇ ರಣರಂಗಕ್ಕೆ ಇಳಿದಿದ್ದ ಭಾರತದ ಸೇನೆ ಮತ್ತು ತ್ವರಿತ ನಿರ್ಧಾರಗಳನ್ನು ಕೈಗೊಂಡ ಇಂದಿರಾರ ದಿಟ್ಟ ನಾಯಕತ್ವದಿಂದ ಪೂರ್ವ ಪಾಕಿಸ್ತಾನದಲ್ಲಿ ಭಾರತ ಮೇಲುಗೈ ಸಾಧಿಸಿತು. ಪಶ್ಚಿಮ ಪಾಕಿಸ್ತಾನದಲ್ಲಿ ಭಾರತ ಮೇಲುಗೈ ಸಾಧಿಸುವುದನ್ನು ಅಮೆರಿಕ ತಡೆಯಲೇಬೇಕಿತ್ತು.

ಹಾಗಂತ ಪಾಕಿಸ್ತಾನದ ಬಗ್ಗೆ ನಿಕ್ಸನ್ ಅವರಿಗೆ ವಿಶೇಷ ಪ್ರೀತಿಯೇನೂ ಇರಲಿಲ್ಲ. ‘Pakistani military are kind of bastards, but they are our bastards and we need them’ ಎನ್ನುವುದನ್ನು ನಿಕ್ಸನ್ ಹಲವು ಬಾರಿ ಹೇಳಿದ್ದರು. ಕಿಸ್ಸಿಂಜರ್ ಮತ್ತೊಮ್ಮೆ ಕುಟಿಲ ತಂತ್ರಕ್ಕೆ ಮುಂದಾದರು. ಪಶ್ಚಿಮ ಪಾಕಿಸ್ತಾನದ ಗಡಿಯಲ್ಲಿನ ಭಾರತದ ಸೇನಾ ಪ್ರಾಬಲ್ಯ ತಗ್ಗಿಸಲು, ಇನ್ನೊಂದು ದಿಕ್ಕಿನಲ್ಲಿ ಭಾರತದ ಮೇಲೆರಗುವಂತೆ ಚೀನಾವನ್ನು ಪುಸಲಾಯಿಸಿದರು.

ಆದರೆ ಚೀನಾ ಯುದ್ಧಕ್ಕೆ ಹಿಂಜರಿಯಿತು. ಆಗ USS Enterprise ಎಂಬ ಅಮೆರಿಕದ ಯುದ್ಧ ನೌಕೆ ಬಂಗಾಲ ಕೊಲ್ಲಿಯತ್ತ ಹೊರಟಿತು. ಪೂರ್ವ ಪಾಕಿಸ್ತಾನದಲ್ಲಿ ಮೇಲುಗೈ ಸಾಧಿಸಿದ್ದ ಭಾರತ, ಕೊನೆಗೆ ಪಶ್ಚಿಮ ಪಾಕಿಸ್ತಾನ ಭಾಗದಲ್ಲಿ ಯುದ್ಧ ವಿರಾಮ ಘೋಷಿಸಿತು. ಆಗ ಕಿಸ್ಸಿಂಜರ್ ‘Congratulations Mr President, you saved West Pakistan’ ಎಂದು ಖುಷಿಪಟ್ಟಿದ್ದರಂತೆ.

ಹೀಗೆ ತನ್ನ ಜಾಣ್ಮೆ, ತಂತ್ರಗಾರಿಕೆ, ಭಿನ್ನ ಆಲೋಚನೆಗಳಿಂದ ರಾಜತಂತ್ರಜ್ಞರಾಗಿ ಕಿಸ್ಸಿಂಜರ್ ಹೆಸರು ಗಳಿಸಿದರೂ, ಸ್ವಹಿತಾಸಕ್ತಿಯ, ದುರಾಲೋಚನೆಯ ಕೆಲವು ನಿರ್ಧಾರಗಳಿಂದ ಮಸಿಯನ್ನೂ ಅಂಟಿಸಿಕೊಂಡರು. ದಶಕಗಳು ಕಳೆದರೂ ಆ ಮಸಿಯ ಪಸೆ ಆರಿಲ್ಲ. ಕಿಸ್ಸಿಂಜರ್ ಬಗೆಗಿನ ಮೂದಲಿಕೆ ನಿಂತಿಲ್ಲ. ಖ್ಯಾತಿ ಕ್ರಮೇಣ ಕರಗಬಹುದು, ಕಳಂಕಕ್ಕೆ ಆಯಸ್ಸು ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT