ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂದಮಾನದ ವಿಷ ಮತ್ತು ಕೊನೆಯಿಲ್ಲದ ಆಮಿಷ

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

`ತಪ್ಪಿತಸ್ಥರು ಯಾರೇ ಇರಲಿ, ಅವರ ಮೇಲೆ ದಾವೆ ಹೂಡಿ, ಶಿಕ್ಷೆಗೆ ಗುರಿಪಡಿಸಲಾಗುವುದು'  ಎಂಬ ಮಾತನ್ನು ನಮ್ಮ ಧುರೀಣರು ಆಗಾಗ ಹೇಳುತ್ತಿರುತ್ತಾರೆ. ಬಿಹಾರದ ಛಾಪ್ರಾ ಜಿಲ್ಲೆಯ ಗಂದಮಾನ್ ಎಂಬ ಊರಿನ ಶಾಲೆಯ 22 ಮಕ್ಕಳು ವಿಷಪೂರಿತ ಬಿಸಿಯೂಟ ಸೇವಿಸಿ ಮೃತಪಟ್ಟಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಅದನ್ನೇ ಹೇಳಿದ್ದರು. ದುರ್ಘಟನೆ ಸಂಭವಿಸಿ 15 ದಿನಗಳೇ ಕಳೆದಿವೆ. ಶಾಲೆಯ ಮುಖ್ಯ ಅಧ್ಯಾಪಕಿ ಮೀನಾ ಕುಮಾರಿಯನ್ನು ಬಂಧಿಸಿದ್ದನ್ನು ಬಿಟ್ಟರೆ ಬೇರೆ ಯಾವ ಮಾಹಿತಿಯೂ ಅಲ್ಲಿಂದ ಬರುತ್ತಿಲ್ಲ.

ತಪ್ಪಿತಸ್ಥರ ಪಟ್ಟಿಯನ್ನು ನಾವೇ ಊಹಿಸೋಣ: ಮೀನಾ ಕುಮಾರಿ ತನ್ನ ಗಂಡನ ಅಂಗಡಿಯಿಂದ ಎಣ್ಣೆ ತಂದಿದ್ದಳು. ಪರಾರಿಯಾಗಿರುವ ಆತನನ್ನು ಹಿಡಿದು ದಾವೆ ಹೂಡಬೇಕು. ಅಡುಗೆಗೆ ಬಳಸಿದ ಸಾಸಿವೆ ಎಣ್ಣೆಯನ್ನು ತುಂಬಿಟ್ಟಿದ್ದ ಡಬ್ಬಿಯಲ್ಲಿ ಹಿಂದೆಂದೊ  `ಮೊನೊಕ್ರೊಟೊಫಾಸ್' ಹೆಸರಿನ ಉಗ್ರ ಕೀಟನಾಶಕವನ್ನು ತುಂಬಿಡಲಾಗಿತ್ತು. ಅಂಗಡಿ ನಡೆಸುತ್ತಿದ್ದ ಅವಳ ಗಂಡನೂ ತಪ್ಪಿತಸ್ಥ ಆಗಿರಬೇಕು. ಆದರೆ ಆ ಡಬ್ಬಿ ಅವನ ಅಂಗಡಿಗೆ ಬಂದಿದ್ದು ಹೇಗೆ? ಗಾಣದವನೇ ಎಣ್ಣೆಯನ್ನು ಆ ಡಬ್ಬಿಗೆ ಸುರಿದಿರಬೇಕು.

ಅವನೂ ಆರೋಪಿಯ ಸಾಲಿಗೆ ಸೇರುತ್ತಾನೆ. ಆದರೆ ಗಾಣದವನು ಮೊನೊಕ್ರೊಟೊಫಾಸ್ ವಿಷವನ್ನು ಬಳಸುವುದಿಲ್ಲ. ಯಾವನೋ ಒಬ್ಬ ರೈತನೇ ಡಬ್ಬಿಯನ್ನು  ಖರೀದಿಸಿ ಅದರಲ್ಲಿನ ವಿಷವನ್ನು ಬೆಳೆಯ ಮೇಲಿನ ಸಿಂಪಡನೆಗೆ ಬಳಸಿದ್ದಾನೆ. ಹಾಗಾಗಿ ಆ ರೈತ ಯಾರೆಂಬುದನ್ನು ನೋಡಬೇಕು. ನಿಯಮಗಳ ಪ್ರಕಾರ ವಿಷದ ಡಬ್ಬಿ ಖಾಲಿಯಾದ ನಂತರ ಚೊಕ್ಕಟಗೊಳಿಸಿ ಅದನ್ನು ಮನೆಯಾಚೆ ಸುರಕ್ಷಿತ ವಿಲೆವಾರಿ ಮಾಡಬೇಕು.

ಹಾಗೆ ಮಾಡದೆ ಅದು ಗಾಣದ ಬಳಿ ಹೋಗಿದ್ದಕ್ಕೆ ರೈತನೂ ತಪ್ಪಿತಸ್ಥನಾಗುತ್ತಾನೆ. ಅವನನ್ನೂ ಕೋರ್ಟಿಗೆ ಎಳೆಯಬೇಕು. ವಿಧಿವಶಾತ್ ಆ ರೈತ ಮೊನೊಕ್ರೊಟೊಫಾಸ್ ತರಕಾರಿ ಬೆಳೆಗೆ ಸಿಂಪಡಿಸಲೆಂದು ಆ ವಿಷವನ್ನು ಬಳಸಿದ್ದರೆ ಆತನ ಮೇಲೆ ಪ್ರತ್ಯೇಕ ದಾವೆ ಹೂಡಬೇಕು. ಏಕೆಂದರೆ ತರಕಾರಿ ಬೆಳೆಗಳ ಮೇಲೆ ಇದನ್ನು ಸಿಂಪಡಿಸಕೂಡದು ಎಂಬ ಕಾನೂನು ಇದೆ.
ರೈತ ಜಾಣನಾಗಿದ್ದರೆ, ಅಥವಾ ಜಾಣ ವಕೀಲನನ್ನು ಸಂಪರ್ಕಿಸಿದರೆ ಈ ಎರಡನೆಯ ಆಪಾದನೆಯಿಂದ ಪಾರಾಗಬಹುದು.

ವಿಷ ಸಿಂಪಡನೆಗೆ ಸಲಹೆ ಮಾಡಿದ ಕೃಷಿ ಅಧಿಕಾರಿಯ ಮೇಲೆ ಹಾಗೂ ವಿಷವನ್ನು ಮಾರಿದ ಅಂಗಡಿ ಮಾಲಿಕನ ಮೇಲೆ ತಪ್ಪು ಹೊರಿಸಬಹುದು. ವಿಷದ ಡಬ್ಬಿಯ ಜತೆ ಇರಬೇಕಿದ್ದ 15 ಪುಟಗಳ ಮುಂಜಾಗ್ರತಾ ಕ್ರಮಗಳ ಸೂಚನಾಪಟ್ಟಿ ಇರಲೇ ಇಲ್ಲವೆಂದೊ ಅಥವಾ ಅದರಲ್ಲಿನ ಇಂಗ್ಲಿಷ್ ಬರಹಗಳು ತನಗೆ ತಿಳಿಯದೆಂದೊ ಅಥವಾ ಹಿಂದಿಯಲ್ಲಿದ್ದರೂ ತನಗೆ ಓದಲು ಗೊತ್ತಿಲ್ಲವೆಂದೊ ವಾದಿಸಬಹುದು. ತನ್ನಂಥ ರೈತರನ್ನು ಹೀಗೆ ಅಶಿಕ್ಷಿತ  ಸ್ಥಿತಿಯಲ್ಲಿಟ್ಟು ವಿಷದ ಡಬ್ಬಿಯನ್ನು ಕೈಗೆ ಕೊಟ್ಟಿದ್ದಕ್ಕೆ ಬಿಹಾರ ಸರ್ಕಾರವೇ ಕಾರಣವೆಂದು ವಾದಿಸಬಹುದು.

ಅಥವಾ ಇಂಥ ಉಗ್ರವಿಷದ ಉತ್ಪಾದನೆ ಮತ್ತು ವಿತರಣೆಗೆ ಅನುಮತಿ ನೀಡಿದ ಭಾರತ ಸರ್ಕಾರವನ್ನೇ ಕಟಕಟೆಯಲ್ಲಿ ನಿಲ್ಲಿಸಬಹುದು. ನ್ಯಾಯಾಲಯದಲ್ಲಿ ಇಂಥ ವಾದಗಳೆಲ್ಲ ನಿಲ್ಲಲಾರದು, ಅದು ಬೇರೆ ಮಾತು. ಅಸಲೀ ತಪ್ಪಿತಸ್ಥರು ಬೇರೆ ಯಾರೋ ಇರಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ `1.2 ಗ್ರಾಮ್ ಅಂದರೆ ಒಂದು ಚಮಚೆಯಷ್ಟು ಮೊನೊಕ್ರೊಟೊಫಾಸ್ ನಮ್ಮ ಶರೀರಕ್ಕೆ ಹೋದರೆ ಸಾವು ನಿಶ್ಚಿತ' ಸಂಭವಿಸುತ್ತದೆ.

ಮಕ್ಕಳಿಗೆ, ಅದರಲ್ಲೂ ಬಿಹಾರದ ಅರೆಹೊಟ್ಟೆಯ ಹಳ್ಳಿಮಕ್ಕಳ ಸಾವಿಗೆ ಅರ್ಧ ಚಮಚದಷ್ಟೇ ಸಾಕಾಗುತ್ತದೆಂದು ಅಂದುಕೊಂಡರೂ 22 ಮಕ್ಕಳನ್ನು ಕೊಲ್ಲುವಷ್ಟು ದೊಡ್ಡ ಪ್ರಮಾಣದ ವಿಷವಸ್ತು ಸಾಸಿವೆ ಎಣ್ಣೆಯಲ್ಲಿ ಸೇರಿದ್ದು ಆಕಸ್ಮಿಕ ಇರಲಾರದು. ವಿಷದ ಖಾಲಿ ಡಬ್ಬಿಯಲ್ಲಿ ಸಾಸಿವೆ ಎಣ್ಣೆಯನ್ನು ತುಂಬಿಟ್ಟಿದ್ದರೆಂಬ ಈಗಿನ ಆಪಾದನೆಯ ಬದಲು, ಸಾಸಿವೆ ಎಣ್ಣೆಯ ಡಬ್ಬಿಗೇ ಯಾರೋ ಈ ವಿಷವನ್ನು ಸುರಿದಿರಬೇಕೆಂದು ಊಹಿಸಬೇಕಾಗುತ್ತದೆ. ಯಾರಾದರೂ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದರೆ ಮುಖ್ಯ ಶಿಕ್ಷಕಿ, ಅವಳ ಗಂಡ ಎಲ್ಲ ಬಚಾವಾಗುತ್ತಾರೆ. ತಪ್ಪಿತಸ್ಥರ ಸಾಲಿಗೆ ಬೇರೆ ಯಾರೋ ನಿಲ್ಲುತ್ತಾರೆ. ಆದರೂ ನಮ್ಮ ಪಟ್ಟಿ ಇಲ್ಲಿಗೇ ನಿಲ್ಲುವುದಿಲ್ಲ.

ಮೊನೊಕ್ರೊಟೊಫಾಸ್ ಇರಲಿ, ಎಂಡೊಸಲ್ಫಾನ್ ಇರಲಿ, ಡಿಡಿಟಿ ಇರಲಿ, ಜಿರಲೆ ಕೊಲ್ಲುವ ಯಾವ ವಿಷವೇ ಇರಲಿ- ಅದು ಅಕಸ್ಮಾತ್ ಹೊಟ್ಟೆಗೆ ಹೋದರೆ ಮೊದಲ ಶುಶ್ರೂಷೆ ಏನೆಂದರೆ ವಾಂತಿ ಮಾಡಿಸುವುದು. ಜಠರದಲ್ಲಿದ್ದ ವಿಷವಸ್ತು ರಕ್ತಗತವಾಗುವ ಮೊದಲೇ ಹೊರಕ್ಕೆ ಬಂದರೆ ಬದುಕಿಸಲು ಸಾಧ್ಯವಿದೆ. ಆದರೆ ಮಾಧ್ಯಮಗಳ ವರದಿಯ ಪ್ರಕಾರ, ಸರ್ಕಾರಿ ವೈದ್ಯರದೂ ತಪ್ಪಿದೆ. ಅಸ್ವಸ್ಥ ಮಕ್ಕಳನ್ನು ಸಾಲು ಸಾಲಾಗಿ ಆಸ್ಪತ್ರೆಗೆ ಹೊತ್ತು ತಂದಾಗ ಡಾಕ್ಟರು ತುರ್ತಾಗಿ ವಾಂತಿಭೇದಿಯನ್ನು ನಿಲ್ಲಿಸುವ ಔಷಧ ನೀಡಿದ್ದಾರೆ.

ಊಟದ ಬಟ್ಟಲಿಗೆ ಅಥವಾ ಅಡುಗೆ ಪಾತ್ರೆಗೆ ಕಿಲುಬು ಹಿಡಿದಿದ್ದರೆ ಅಥವಾ ಹಳಸಿದ ವಸ್ತುಗಳಿದ್ದರೆ ವಿಷಕಾರಿ ಏಕಾಣುಜೀವಿಗಳಿಂದ ಅತಿಯಾದ ವಾಂತಿಭೇದಿಯಾಗಿ ಮಕ್ಕಳ ಜೀವ ಹೋಗುವ ಸಾಧ್ಯತೆಯೂ ಇದೆ ಅನ್ನಿ. ಅಸ್ವಸ್ಥತೆಯ ಲಕ್ಷಣಗಳು ಏನೆಂಬುದನ್ನು ಸರಿಯಾಗಿ ಅಧ್ಯಯನ ಮಾಡದೆಯೇ ಡಾಕ್ಟರರು ವಾಂತಿ ಬರುವಂತೆ ಮಾಡುವ ಬದಲು ವಾಂತಿ ನಿಲ್ಲಿಸಿದ್ದಾರೆ. ವಿಷವಸ್ತು ದೇಹದಲ್ಲೇ ಬಿಗಿದು ಕೂರುವಂತೆ ಮಾಡಿದ್ದಾರೆ.

ಇದು ನಿಜವೆಂದು ಸಾಬೀತಾದರೆ ಡಾಕ್ಟರರೂ ತಪ್ಪಿತಸ್ಥರೇ ಆಗುತ್ತಾರೆ. ಆದರೆ ಅವರನ್ನು ಹಿಡಿಯುವುದು ಸುಲಭವಾಗಲಿಕ್ಕಿಲ್ಲ. ಸರ್ಕಾರಿ ಆಸ್ಪತ್ರೆಗೆ ಪೂರೈಸಿದ ವಾಂತಿನಿರೋಧಕ ಔಷಧಗಳೆಲ್ಲ ನಕಲಿ ಆಗಿದ್ದುವೆಂದು ವೈದ್ಯರು ಸಾಕ್ಷ್ಯಗಳ ಸಮೇತ ವಾದಿಸಿದರೆ ನುಣುಚಿಕೊಳ್ಳಲು ಸಾಧ್ಯವಿದೆ. ನಮ್ಮ ದೇಶದಲ್ಲಿ ಅದೇನೂ ಅಸಂಭವನೀಯ ಕತೆಯೇನಲ್ಲವಲ್ಲ.

ನೈತಿಕ ದೃಷ್ಟಿಯಿಂದ ನೋಡುವುದಾದರೆ ಬಿಹಾರ ಸರ್ಕಾರ ಹಾಗೂ ಭಾರತ ಸರ್ಕಾರವೂ ತಪ್ಪಿತಸ್ಥರ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಮೊನೊಕ್ರೊಟೊಫಾಸ್ ವಿಷವನ್ನು ಬಹಳಷ್ಟು ರಾಷ್ಟ್ರಗಳು ನಿಷೇಧಿಸಿವೆ. ಎಲ್ಲ ಸುಧಾರಿತ ದೇಶಗಳೂ ಇದನ್ನು ನಿಷೇಧಿಸಿವೆ. ನಮ್ಮ ಅಕ್ಕಪಕ್ಕದ ಪಾಕಿಸ್ತಾನ, ಚೀನಾ ಕೂಡ ಬಳಸುತ್ತಿಲ್ಲ. ಶ್ರಿಲಂಕಾದಲ್ಲಿ ತೆಂಗಿಗೆ ಮಾತ್ರ ಇದನ್ನು ಬಳಸಬಹುದೆಂದು ಮಿತಿ ಹಾಕಲಾಗಿದೆ. ಜಗತ್ತಿನಲ್ಲಿ ಪ್ರತಿವರ್ಷ ಈ ವಿಷದ ಉತ್ಪಾದನೆ 30 ಸಾವಿರ ಟನ್‌ಗಳಷ್ಟಿದ್ದು ಇದರ ಬಳಕೆಯಲ್ಲಿ ಭಾರತದ್ದೇ ಸಿಂಹಪಾಲು (ಶೇಕಡಾ 43ರಷ್ಟು) ಇದೆ.

  ದಕ್ಷಿಣ ಅಮೆರಿಕದ ಹತ್ತಾರು ದೇಶಗಳು ಒಟ್ಟಾಗಿ ಶೇ 26ರಷ್ಟನ್ನೂ ಇನ್ನುಳಿದವನ್ನು ಆಗ್ನೇಯ ಏಷ್ಯದ ರಾಷ್ಟ್ರಗಳೂ ಬಳಸುತ್ತಿವೆ. ಭಾರತದಲ್ಲಿ ಮುಖ್ಯವಾಗಿ ಯುನೈಟೆಡ್ ಫಾಸ್ಫರಸ್ ಎಂಬ ಕಂಪನಿ ಇದನ್ನು ಉತ್ಪಾದಿಸುತ್ತಿದೆ.  `ಇದು ಹಾನಿಕಾರಕ ವಿಷ ಅಲ್ಲವೇ ಅಲ್ಲ' ಎಂದು ಈ ಕಂಪನಿಯ ಮುಖ್ಯಸ್ಥ ರಜ್ಜು ಶ್ರಾಫ್ ಎಂಬವರು ಹೇಳಿದ್ದನ್ನು ರಾಯ್ಟರ್ಸ್ ವಾರ್ತಾಸಂಸ್ಥೆ ದಾಖಲಿಸಿದೆ. ಇದೇ ವ್ಯಕ್ತಿ ಹಿಂದೆ ಎಂಡೊಸಲ್ಫಾನ್ ವಿಷದ ಕುರಿತೂ ಇಂಥದ್ದೇ ಮಾತಾಡಿದ್ದು ನಮಗೆಲ್ಲ ಗೊತ್ತೇ ಇದೆ.

ಆಮಿರ್ ಖಾನ್‌ನ `ಸತ್ಯಮೇವ ಜಯತೆ' ಸರಣಿಯಲ್ಲಿ ಇದೇ ಬಗೆಯ ಸುಳ್ಳಿನ ಸರಮಾಲೆಯನ್ನು ಹೆಣೆಯುತ್ತ, ಒಂದು ಹಂತದಲ್ಲಂತೂ  `ಕೀಟನಾಶಕ ಸಿಂಪಡನೆ ಮಾಡುವವರ ಆರೋಗ್ಯ ಇತರ ಜನರಿಗಿಂತ ಉತ್ತಮವಾಗಿದೆ' ಎಂತಲೂ ಹೇಳಿ ಈತ ನಗೆಪಾಟಲಿಗೀಡಾಗಿದ್ದಾರೆ. ಭಾರತ ಸರ್ಕಾರ ಮೊನೊಕ್ರೊಟೊಫಾಸನ್ನು ನಿಷೇಧಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳೆದ ಏಳು ವರ್ಷಗಳಿಂದ ಹೇಳುತ್ತಲೇ ಬಂದಿದೆ. ಅನಕ್ಷರಸ್ಥರಿರುವಲ್ಲಿ ಇದು ಬಳಕೆಗೇ ಬರಬಾರದಿತ್ತು ಎಂತಲೂ ಹೇಳಿದೆ.

ಆದರೆ ಕೃಷಿ ಇಲಾಖೆಯ ವಕ್ತಾರರ ಪ್ರಕಾರ ಇದು ಪೀಡೆನಾಶಕ ವಿಷಗಳ ಪೈಕಿ ಅತ್ಯಂತ ಅಗ್ಗದ್ದಾಗಿದ್ದು ಅನೇಕ ಬಗೆಯ ಬೆಳೆಗಳನ್ನು ರಕ್ಷಿಸುವ ಸಾಮರ್ಥ್ಯ ಇದಕ್ಕಿದೆ. ಇದನ್ನು ನಿಷೇಧಿಸಿದರೆ ರೈತರು ಇದಕ್ಕಿಂತ ಸುರಕ್ಷಿತವಾದ ಆದರೆ ಬೇರೆಬೇರೆ ದುಬಾರಿ ವಿಷಗಳನ್ನು ಖರೀದಿಸಬೇಕಾಗುತ್ತದೆ. ಕೃಷಿಕರ ಹಣಕಾಸು ಸ್ಥಿತಿಯ ಬಗ್ಗೆ ಇಷ್ಟೊಂದು ಕರುಣೆ ಇರುವ ಸರ್ಕಾರಕ್ಕೆ ಜಯಕಾರ ಹಾಕೋಣವೆ? ಆಧುನಿಕ ಕೃಷಿಯ ಭರಾಟೆಯಲ್ಲಿ ಸೋತು ಸುಣ್ಣವಾದವರ ಕೈಗೆ ತೀರ ಅಗ್ಗದ ವಿಷವೇ ಸಿಗುವಂತಾಗಿದೆ ಎಂದು ಹೆಮ್ಮೆ ಪಡೋಣವೆ? ಅಸಲೀ ಸಂಗತಿ ಏನೆಂದರೆ, ನಮ್ಮ ಕೃಷಿ ವಿಜ್ಞಾನಿಗಳು ಎಂದೂ ಪೀಡೆನಾಶಕಗಳ ಉಗ್ರತೆಯನ್ನು ಹಾಗೂ ಅವುಗಳ ಅಡ್ಡ ಪರಿಣಾಮಗಳನ್ನು ಪರೀಕ್ಷೆ ಮಾಡುವವರಲ್ಲ.

ಅದು ಅವರ ವ್ಯಾಪ್ತಿಗೆ ಬರುವುದಿಲ್ಲ. ವಿಷದ ತೀವ್ರತೆಯನ್ನು ಅಳೆಯಬೇಕಾದವರು ವೈದ್ಯವಿಜ್ಞಾನಿಗಳು. ಆದರೆ ಕೃಷಿ ವಿಷಗಳು ಅವರ ವ್ಯಾಪ್ತಿಗೂ ಬರುವುದಿಲ್ಲ!  `ಕೇಂದ್ರ ಕೀಟನಾಶಕ ಮಂಡಲಿ ಮತ್ತು ನೋಂದಣಿ ಸಮಿತಿ' ಎಂಬ ಸಂಸ್ಥೆಯ ನಿಯಂತ್ರಣಕ್ಕೆ ದೇಶದ ಎಲ್ಲ ಬಗೆಯ ಕೃಷಿವಿಷಗಳೂ ಬರುತ್ತವೆ. ಈ ಸರ್ಕಾರಿ ಸಂಸ್ಥೆ ಕೂಡ ವಿಷದ ಉಗ್ರತೆಯ ಪರೀಕ್ಷೆ ಮಾಡುವುದಿಲ್ಲ. ಕಂಪೆನಿಗಳು ಹೇಳಿದ್ದನ್ನು ನಂಬುತ್ತದೆ. ಭಾರತದಲ್ಲಿ ತಳವೂರಿದ ಖಾಸಗಿ ಕಂಪೆನಿಗಳೂ ವಿಷ ತಯಾರಿಕೆಯ ಸೂತ್ರಗಳನ್ನು ಆಮದು ಮಾಡಿಕೊಂಡು ಇಲ್ಲಿ ವಿಷ ಉತ್ಪಾದನೆ ಮಾಡುತ್ತವೆ ವಿನಾ ಭಾರತದ ರೈತರ ಮೇಲೆ, ಜೀವಜಂತುಗಳ ಮೇಲೆ ವಿಷದ ಪರಿಣಾಮ ಹೇಗಿರುತ್ತದೆ ಎಂಬುದನ್ನು ಪರೀಕ್ಷೆ ಮಾಡಿದ್ದಿಲ್ಲ.

ಅವರು ಇಲ್ಲಿ ನಡೆಸುವ ಪರೀಕ್ಷೆ ಏನೆಂದರೆ ಯಾರ‌್ಯಾರಿಗೆ ಯಾವ ಯಾವ ಬಗೆಯ ಆಮಿಷಗಳನ್ನು ಒಡ್ಡಿದರೆ ವಿಷವಸ್ತುಗಳ ಮಾರಾಟವನ್ನು ಹೆಚ್ಚಿಸಬಹುದು ಎಂಬುದಷ್ಟೆ. ಯಾವ ಅಧಿಕಾರಿಗೆ ಸಿಂಗಪೂರ್ ಪ್ರವಾಸ ಇಷ್ಟ, ಯಾವ ದಲ್ಲಾಳಿಗಳಿಗೆ ಮೈಕ್ರೊವೇವ್ ಅವನ್ ಇಷ್ಟ ಇತ್ಯಾದಿ ಗೊತ್ತಿದ್ದರೆ ಸಾಕು.

ಇಲ್ಲೊಂದೇ ಅಲ್ಲ, ಅಮೆರಿಕದಲ್ಲೂ ಪೀಡೆನಾಶಕಗಳ ತೀವ್ರತೆಯನ್ನು ಸರ್ಕಾರಿ ಸಂಸ್ಥೆಗಳ ಬದಲು ಖಾಸಗಿ ಕಂಪೆನಿಗಳೇ ನಿರ್ಧರಿಸುತ್ತವೆ. ಅವು ಒಪ್ಪಿಸಿದ ವಿಷವನ್ನು  ನಿಬಂಧನೆಗಳಿಗೊಳಪಟ್ಟು ನೋಂದಣಿ  ಮಾಡಲಾಗುತ್ತದೆ. ನಂತರ ನಿಧಾನಕ್ಕೆ ಪರೀಕ್ಷಿಸಿ ನೋಡಬೇಕು. ಅಲ್ಲಿ ಸದ್ಯಕ್ಕೆ 16 ಸಾವಿರ ಬಗೆಯ ವಿಷಗಳಿಗೆ ಅನುಮತಿ ನೀಡಲಾಗಿದ್ದು, ಅವುಗಳ ಪೈಕಿ ಹನ್ನೊಂದು ಸಾವಿರ ವಿಷಗಳ ಪರೀಕ್ಷೆ ಇನ್ನೂ ಆಗಿಲ್ಲ  ಆದರೆ ದಿನದಿನಕ್ಕೆ ವಿಷವೈವಿಧ್ಯ ಹೆಚ್ಚುತ್ತಿದೆ. ಪ್ಲಾಸ್ಟಿಕ್ ಪಾತ್ರೆಗಳು, ಸೌಂದರ್ಯ ವರ್ಧಕಗಳು, ಅಷ್ಟೇಕೆ ಒಳ ಉಡುಪುಗಳಲ್ಲಿ ಬೆವರಿನ ಕಣಗಳಲ್ಲಿರುವ ಏಕಾಣುಜೀವಿಗಳ ನಿರ್ನಾಮಕ್ಕೂ ಈಗ ವಿಷಕಾರಿ ನ್ಯಾನೊಕಣಗಳನ್ನು ಲೇಪಿಸಿದ ಬಟ್ಟೆಗಳು ಬಂದಿವೆ.

ಮೊನೊಕ್ರೊಟೊಫಾಸ್ ಬಳಕೆಯ ಅತ್ಯಂತ ಘೋರ ಪರಿಣಾಮ ಪಕ್ಷಿಗಳ ಮೇಲೆ, ಕಪ್ಪೆ-ಏಡಿ, ಮೀನುಗಳಂಥ ಕಿರುಜೀವಿಗಳ ಮೇಲೆ ಆಗುತ್ತದೆ. ಉತ್ತರ ಪ್ರದೇಶದಲ್ಲಿ ವಿಷಪೂರಿತ ಬಿತ್ತನೆ ಬೀಜ ತಿಂದು ಹಿಂಡು ಹಿಂಡು ನವಿಲುಗಳು ಸತ್ತು ಬಿದ್ದಿದ್ದನ್ನು ನಾವು ಕೇಳಿದ್ದೇವೆ. ವಿಷ ಸಿಂಪಡನೆ ಮಾಡುತ್ತಿದ್ದಂತೆಯೇ ಕೀಟಗಳು ಎಗರಿ ವಿಲವಿಲ ಎನ್ನುವಾಗ ಗೊರವಂಕ, ಕಾಜಾಣ, ಬೇಲಿಚಟಕ, ಗೀಜಗಗಳು ಅವನ್ನು  ತಿಂದು ಕ್ರಮೇಣ ಅವೂ ವಿಲವಿಲ ಎನ್ನುವಾಗ ಹದ್ದುಗಳ ಬಾಯಿಗೆ ಸಿಕ್ಕು ಅವೂ ಸಂತಾನೋತ್ಪತ್ತಿ ಮಾಡಲಾಗದೆ ನಿರ್ವಂಶವಾಗುತ್ತವೆ.  ಹದಿನೈದು ವರ್ಷಗಳ ಹಿಂದೆ ಅರ್ಜೆಂಟಿನಾದಲ್ಲಿ ಪಕ್ಷಿಪ್ರೇಮಿಗಳ ಸಂಘಟಿತ ಒತ್ತಾಯದಿಂದಾಗಿಯೇ ಮೊನೊಕ್ರೊಟೊಫಾಸನ್ನು ಗಡೀಪಾರು ಮಾಡಲಾಯಿತು.

ನಮ್ಮಲ್ಲಿ ಕೇರಳದ ಪಡ್ರೆ ಊರಿನ ಅದೆಷ್ಟೊ ಮಕ್ಕಳು ಎಂಡೊಸಲ್ಫಾನ್‌ಗೆ ಬಲಿಯಾಗಿದ್ದು ಗೊತ್ತಾಗಿ ಹನ್ನೆರಡು ವರ್ಷಗಳ ಕಾಲ ಯಾರೆಷ್ಟೇ ಸಂಘಟಿತ ಒತ್ತಾಯ ನಡೆಸಿದರೂ ಕೊನೆಗೆ ಕೇರಳದ ಮುಖ್ಯಮಂತ್ರಿಯೇ ಒಂದು ದಿನ ಉಪವಾಸ ಕೂತ ನಂತರವಷ್ಟೇ ಎಂಡೊಸಲ್ಫಾನ್ ನಿಷೇಧಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿತು. ಬಿಹಾರದ ಮುಖ್ಯಮಂತ್ರಿ ಹಾಗೆ ಕೂತಾರೆಯೆ? ಕೂರಬಹುದು. ಅವರ ಹೆಬ್ಬೆರಳ ಮೂಳೆಗೆ ಕೂದಲೆಳೆ ಸೀಳು ಬಿಟ್ಟಿದ್ದರಿಂದ ವೈದ್ಯರ ಸಲಹೆಯಂತೆ ಮಕ್ಕಳ ಅಂತಿಮದರ್ಶನಕ್ಕೂ ಹೋಗದೆ ಕೂತಿದ್ದರು. ಕೂತಲ್ಲೇ ರಾಜಕೀಯ ಒತ್ತಡ ಹಾಕುವ ಇಚ್ಛಾಶಕ್ತಿ ಇರಬೇಕಷ್ಟೆ.
ನಿಮ್ಮ ಅನಿಸಿಕೆ ತಿಳಿಸಿeditpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT