ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಹಾಗೂ ಅಂಬೇಡ್ಕರ್‌ವಾದಗಳ ನಡುವೆ....

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ಮಹಾತ್ಮಾ ಗಾಂಧಿ 1930ರಲ್ಲಿ ಉಪ್ಪಿನ ಸತ್ಯಾಗ್ರಹ ಆರಂಭಿಸಿದರು. ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಅದು ಅವರ ಎರಡನೇ ಪ್ರಮುಖ ಆಂದೋಲನವಾಗಿತ್ತು. ಅದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾದರೂ, ಭಾರತೀಯರ ಎರಡು ಗುಂಪುಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಗಾಂಧಿ ಹಾಗೂ ಅವರ ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನಲ್ಲ, ಕೇವಲ ಹಿಂದೂಗಳನ್ನು ಮಾತ್ರ ಪ್ರತಿನಿಧಿಸುತ್ತದೆ ಎಂದು ಭಾವಿಸುವವರ ಒಂದು ಗುಂಪು ಮತ್ತು ಹಿಂದೂಗಳಲ್ಲಿ ನಿಜಕ್ಕೂ ಮೇಲ್ಜಾತಿಯವರ ಹಿತಾಸಕ್ತಿಯನ್ನು ಮಾತ್ರ ಪ್ರತಿನಿಧಿಸುತ್ತದೆ ಎಂದು ಭಾವಿಸುವವರ ಮತ್ತೊಂದು ಗುಂಪು ಈ ಆಂದೋಲನವನ್ನು ವಿರೋಧಿಸಿದ್ದವು. ಈ  ವಿರೋಧ ಗಾಂಧಿಯವರ ಮನಸ್ಸನ್ನು ಚುಚ್ಚಿತ್ತು. ಮುಸ್ಲಿಂ ನಾಯಕರ ಜೊತೆ ಬಾಂಧವ್ಯ್ನ ಬೆಳೆಸಲು ಅವರು ಪ್ರಯತ್ನಿಸಿದರು.

ಅಸ್ಪೃಶ್ಯತೆ ತೊಡೆಯುವ ಹೋರಾಟವನ್ನೂ ತೀವ್ರಗೊಳಿಸಿದರು. ಚಮ್ಮಾರಿಕೆ ಹಾಗೂ ಭಂಗಿ ಕೆಲಸಗಳಂತಹ ಪಾರಂಪರಿಕ ಉದ್ಯೋಗಗಳನ್ನು ಮಾಡುವ ಜಾತಿಗಳವರನ್ನು `ಅಶುದ್ಧರು' ಎಂದು ಪರಿಗಣಿಸಲಾಗುತ್ತಿದ್ದು ದೇವಾಲಯ, ಶಾಲೆ, ಆಸ್ಪತ್ರೆ ಹಾಗೂ ಸ್ವಚ್ಛ ನೀರಿನ ಮೂಲಗಳ ಬಳಿಗೂ ಅವರಿಗೆ ಪ್ರವೇಶವಿರಲಿಲ್ಲ.

ಈ ದಮನಿತ ಜಾತಿಗಳನ್ನು ಆಧ್ಯಾತ್ಮಿಕ ಹಾಗೂ ಸಾಮಾಜಿಕವಾಗಿ ಸಮಾನರೆಂದು ಪರಿಗಣಿಸುವಂತೆ ಹಿಂದೂಗಳಿಗೆ ಒತ್ತಾಯಿಸಲು ಗಾಂಧಿಯವರು 1932 ಹಾಗೂ 1933ರಲ್ಲಿ ಅನೇಕ ಬಾರಿ ಉಪವಾಸ ಮಾಡಿದರು. `ಅಸ್ಪೃಶ್ಯ' ಪದವನ್ನು ಬಳಸಲು ಅವರು ತಿರಸ್ಕರಿಸಿದರು. ಬದಲಿಗೆ `ಹರಿಜನ' (ಅಥವಾ ದೇವರ ಮಕ್ಕಳು) ಪದವನ್ನು ಬಳಕೆಗೆ ತಂದರು.

`ಧರ್ಮದ ಹೆಸರಲ್ಲಿ ಕುಬ್ಜಗೊಳಿಸುವ ಆಚರಣೆಗಳು ಎಷ್ಟೇ ಕಡಿಮೆ ಇರಲಿ ಅಥವಾ ಹೆಚ್ಚಿರಲಿ ಸವರ್ಣೀಯರ ನಾಚಿಕೆಗೇಡಿತನ ಮುಂದುವರಿಯುತ್ತದೆ' ಎಂದು ಭಾರತದ ದಕ್ಷಿಣ ಹಾಗೂ ಪೂರ್ವ ಭಾಗಗಳಲ್ಲಿ ಪ್ರವಾಸ ಮಾಡಿದ ಸಂದರ್ಭದಲ್ಲಿ ಹೇಳಿದ್ದರು.
`ಹೀಗಾಗಿ ಇಂತಹ ಆಚರಣೆಗಳನ್ನು  ಸಾಧ್ಯವಾದಷ್ಟು ಕಟುವಾದ ಮಾತುಗಳಲ್ಲಿ ಖಂಡಿಸುವುದು ಸನಾತನಿಗಳ ಆದ್ಯ ಕರ್ತವ್ಯ. ಅಲ್ಲದೆ ಧಾರ್ಮಿಕ ಕಟ್ಟಳೆಗಳ ಹೆಸರಲ್ಲಿ ಹೊರಿಸುವ ಅಪಮಾನಗಳಿಂದ ಹರಿಜನರನ್ನು ರಕ್ಷಿಸುವಲ್ಲಿ ಸುಧಾರಕರ ಜೊತೆ ಕೈಜೋಡಿಸಬೇಕು' ಎಂದೂ ಹೇಳಿದ್ದರು.

ಗಾಂಧಿಯವರ ಈ ಆಂದೋಲನ ರಾಜಕೀಯ ಹಾಗೂ ಸಾಮಾಜಿಕ ಬದುಕಿನಲ್ಲಿ ಕಂಪನಗಳನ್ನುಂಟುಮಾಡಿತು. ಹಾಗೆಯೇ ಸಾಹಿತ್ಯದಲ್ಲೂ. ಇತ್ತೀಚೆಗಷ್ಟೇ ಮುಲ್ಕ್ ರಾಜ್ ಆನಂದ್ ಅವರ ಚಿಕ್ಕದಾದ ತೀಕ್ಷ್ಣ ಕಾದಂಬರಿ `ಅನ್‌ಟಚಬಲ್'  ಓದುತ್ತಿದ್ದೆ. ಇದು ಮೊದಲು ಪ್ರಕಟವಾದದ್ದು 1935ರಲ್ಲಿ. ಗಾಂಧಿ ಹಾಗೂ ಅವರ ವಿಚಾರಧಾರೆಗಳ ಪರಿಣಾಮ ಇದರಲ್ಲಿ ಎದ್ದುಕಾಣುವಂತಿದೆ.  ಈ ಕಾದಂಬರಿಯೊಳಗೆ ಸ್ವತಃ ಗಾಂಧಿಯವರೂ ಅತಿಥಿ ಪಾತ್ರವಾಗಿ ಬರುತ್ತಾರೆ.

  ಜೊತೆಗೆ ಇತರ ಕೆಲವು ಪಾತ್ರಗಳು ಗಾಂಧಿ ಪ್ರಭಾವದಲ್ಲಿ ಕೆಲಸ ಮಾಡುವುದು (ಹಾಗೂ ಯೋಚಿಸುವುದು) ಎದ್ದು ಕಾಣಿಸುವಂತಿದೆ. ಈ ಕಿರುಕಾದಂಬರಿ ಪ್ರಕಟವಾಗುವುದಕ್ಕೆ ಮುಂಚೆ ಪ್ರಕಟವಾದ ವರ್ಜೀನಿಯಾ ವುಲ್ಫ್ ಅವರ `ಮಿಸೆಸ್ ಡಾಲೊವೆ' ಹಾಗೂ ನಂತರದ ದಿನಗಳಲ್ಲಿ ಬಂದ ಸಾಲ್ ಬ್ಲ್ಲೆಲೊ ಅವರ `ಸೀಜ್ ದ ಡೇ' ಕೃತಿಗಳಂತೆ ` ಅನ್‌ಟಚಬಲ್' ಒಂದೇ ದಿನದಲ್ಲಿ ನಡೆಯುವಂತಹ ಕಥಾನಕ. ಈ ಕೃತಿಯ ಮುಖ್ಯ ಪಾತ್ರಧಾರಿ ಭಂಗಿ ಜಾತಿಗೆ ಸೇರಿದ ಬಾಲಕ ಬಾಕನ ಬದುಕಿನ ಅನುಭವಗಳನ್ನು ಇದು ಚಿತ್ರಿಸುತ್ತದೆ.

  ಕುಟುಂಬದ ಇತರ ಸದಸ್ಯರೊಂದಿಗೆ ಬಾಕನ ನಂಟು, ಅವನ ವಯಸ್ಸಿನ ಇತರ ಮಕ್ಕಳು ಹಾಗೂ ಮೇಲ್ಜಾತಿಗಳು, ಮುಸ್ಲಿಂ ಹಾಗೂ ಯೂರೋಪಿಯನ್ ಹಿನ್ನೆಲೆಗಳ ಅಪರಿಚಿತರೊಂದಿಗಿನ ಅವನ ಸಂಬಂಧ ಕಾದಂಬರಿಯಲ್ಲಿ ಚಿತ್ರಿತವಾಗುತ್ತದೆ. ಆತ ಬದುಕುವಂತಹ ಕಂಟೋನ್ಮೆಂಟ್‌ನಲ್ಲಿ ಅವನ ದಿನನಿತ್ಯದ ಅನುಸಂಧಾನಗಳು, ಜಾತಿಯೊಳಗೆ ಅಂತರ್ಗತವಾಗಿರುವ ಪರಂಪರೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತವೆ.

ದೇವಸ್ಥಾನದ ಪೂಜಾರಿ, ಸಿಹಿತಿಂಡಿ ಮಾರುವವ, ಶಿಕ್ಷಕ, ಸೈನಿಕ, ಎತ್ತಿನಗಾಡಿ ಓಡಿಸುವವ, ಹೀಗೆ ಆತ ಭೇಟಿಯಾಗುವ ಎಲ್ಲರೂ, ಆತ ತನ್ನ ಪೂರ್ವಜರಿಂದ ಆನುವಂಶಿಕವಾಗಿ ಪಡೆದುಕೊಂಡುಬಂದಿರುವ ಮಲಿನಯುಕ್ತ ವೃತ್ತಿಯ ಸಂಬಂಧದಲ್ಲೇ ಆತನನ್ನು ಕಾಣುತ್ತಾರೆ. ಬಾಕನನ್ನು ಅವನದೇ ನೆಲೆಯಲ್ಲಿ ವ್ಯಕ್ತಿಯಾಗಿ ಕಾಣುವ ಅಥವಾ ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇಲ್ಲಿ ಇಲ್ಲವೇ ಇಲ್ಲ.

ಆದರೂ ಬಾಕ ಹೊಸ ಭರವಸೆಯಿರಿಸಿಕೊಳ್ಳುವ ಧೈರ್ಯ ತೋರುತ್ತಾನೆ. ಬಿಡುಗಡೆಗೆ ಅವನ ಆಯ್ಕೆಯ ದಾರಿ ವೇಷಭೂಷಣಗಳ ವಲಯವಾಗುತ್ತದೆ. ವಿಭಿನ್ನ ರೀತಿಯಲ್ಲಿ ಬಟ್ಟೆ ತೊಟ್ಟು ತನ್ನನ್ನು ಪುನರ್‌ನಿರ್ಮಿಸಿಕೊಳ್ಳುತ್ತಾನೆ. ತೀರಾ ಚಿಕ್ಕಂದಿನಿಂದಲೂ, ಬ್ರಿಟಿಷ್ ಸೈನಿಕರ ವೇಷಭೂಷಣ ಹಾಗೂ ನಡಿಗೆಯ ಬಗ್ಗೆ ಅವನಿಗೆ ತೀವ್ರ ಆಕರ್ಷಣೆ ಇರುತ್ತದೆ. ಆರಂಭದ ಒಂದು ಪ್ಯಾರಾದಲ್ಲಿ ಹೀಗೆ ವರ್ಣಿಸಲಾಗಿದೆ. ` ಆತ ಮಗುವಾಗಿದ್ದಾಗಲಿಂದಲೂ ಮರದ ಪೆಟ್ಟಿ ಅಂಗಡಿಯನ್ನು ಸಾಗಿ ಹೋಗುತ್ತಿದ್ದ.

ಅಲ್ಲಿ  ಬ್ರಿಟಿಷ್ ಸೈನಿಕರು ಎಸೆದುಹೋದ ಅಥವಾ ಗಿರವಿ ಇಟ್ಟ ಕಡುಗೆಂಪು ಹಾಗೂ ಖಾಕಿ ಸಮವಸ್ತ್ರಗಳು, ಬಿಸಿಲಿನಿಂದ ರಕ್ಷಿಸುವ ಟೋಪಿಗಳು, ಚೂಪಾದ ಟೋಪಿಗಳು ....ಹೀಗೆ ಆಂಗ್ಲೊ ಇಂಡಿಯನ್ ಬದುಕಿನ  ಚೂರುಪಾರು ವಸ್ತುಗಳು ಅಲ್ಲಿರುತ್ತಿತ್ತು. ಅವುಗಳನ್ನು ಮುಟ್ಟಲು ಆತ ಹಾತೊರೆಯುತ್ತಿದ್ದ....”ನಾನು ಸಾಹೇಬನ ರೀತಿ ಕಾಣುತ್ತೇನೆ”, ಎಂದು ಆತ ತನಗೆ ತಾನೇ ಗುಟ್ಟಾಗಿ ಅಂದುಕೊಳ್ಳುತ್ತಿದ್ದ. “ನಾನು ಆತನ ರೀತಿಯೇ ನಡೆಯುತ್ತೇನೆ,,,,,,ಆದರೆ ಆ ವಸ್ತುಗಳನ್ನು ಕೊಳ್ಳಲು ನನ್ನ ಬಳಿ ದುಡ್ಡಿಲ್ಲ” '.

ಗಾಂಧಿ ಆಶ್ರಮದಲ್ಲಿ ತಾವು ಅನೇಕ ವಾರಗಳನ್ನು ಕಳೆದಿದ್ದುದಾಗಿ ತಮ್ಮ ಆತ್ಮಚರಿತ್ರಕಾರರೊಬ್ಬರಿಗೆ ಆನಂದ್ ಹೇಳಿಕೊಂಡಿದ್ದಾರೆ. ಆಗ ಪ್ರತಿ ದಿನ ಒಂದು ಅಧ್ಯಾಯದಂತೆ ಮಹಾತ್ಮಗೆ `ಅನ್‌ಟಚಬಲ್' ಕಾದಂಬರಿಯ ಆರಂಭದ ಕರಡನ್ನು ಓದಿ ಹೇಳುತ್ತಿದ್ದರಂತೆ. ಕಾದಂಬರಿಯ ಪಾತ್ರಗಳು ಬಳಸುವ ಭಾಷೆ ತೀರಾ ಬೌದ್ಧಿಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ಗಾಂಧಿ,   ಕಿವಿಗಳನ್ನು ದೊಡ್ಡದಾಗಿ ತೆರೆದುಕೊಂಡು ಭಾರತದ ಹಳ್ಳಿಗಳಲ್ಲಿ ಪ್ರವಾಸ ಮಾಡಿ ಆ ನಂತರ ಮತ್ತೆ ಕಾದಂಬರಿಯನ್ನು ತಿದ್ದಿ ಬರೆಯಬೇಕೆಂದು ಆನಂದ್‌ಗೆ ಹೇಳಿದ್ದರು.

  ಆಧುನಿಕ ಮನಸ್ಸಿನ ವ್ಯಕ್ತಿಯಾಗಿ ಆನಂದ್ ಅವರು ಗಾಂಧಿವಾದದ ಮಿತಿಯನ್ನು ಗುರುತಿಸುತ್ತಾರೆ. ಅಸ್ಪೃಶ್ಯತೆಯ ನಿವಾರಣೆಗಿರುವ ಒಂದು ಮಾರ್ಗ, ದಮನಕಾರರ ಅಪರಾಧಿ ಪ್ರಜ್ಞೆಯನ್ನು ಎಚ್ಚರಗೊಳಿಸುವುದು. ಮತ್ತೊಂದು, ಬಹುಶಃ  ಇನ್ನೂ ಖಚಿತವಾದ, ತ್ವರಿತವಾದ ಮಾರ್ಗವೆಂದರೆ ಪಾಶ್ಚಿಮಾತ್ಯ ಅಥವಾ ಫ್ಲಷ್ ಟಾಯ್ಲೆಟ್‌ನ ಆಧುನಿಕ ತಂತ್ರಜ್ಞಾನ. ಕಾದಂಬರಿಯ ಕಡೆಯ ಪುಟಗಳಲ್ಲಿ, ಇದನ್ನೇ ಅಸ್ಪೃಶ್ಯತೆಯ ಸಮಸ್ಯೆಗೆ ಪರಿಹಾರವಾಗಿ ನೀಡಲಾಗಿದೆ. ಗಾಂಧಿಯನ್ನು ಮೆಚ್ಚುವ ಆದರೆ ಉದ್ದಕ್ಕೂ ಅವರನ್ನನುಸರಿಸಲಾಗದ ಈ ಆಧುನಿಕ ಕವಿ ನೀಡಿರುವ ಪರಿಹಾರ ಅದು.

`ಅನ್‌ಟಚಬಲ್' ಕಾದಂಬರಿಯಲ್ಲಿ ಗಾಂಧಿಯ ಇರುವಿಕೆ ಗಣನೀಯವಾದದ್ದು. ಮಹಾತ್ಮರ ಕಿರಿಯ ಸಮಕಾಲೀನ ಹಾಗೂ ರಾಜಕೀಯ ಪ್ರತಿಸ್ಪರ್ಧಿ ಬಿ. ಆರ್ ಅಂಬೇಡ್ಕರ್ ಅವರ್ದ್ದದೂ ಗೈರುಹಾಜರಿಯ ಇರುವಿಕೆ. ಕಾದಂಬರಿಯಲ್ಲಿ ಅಂಬೇಡ್ಕರ್ ಅವರನ್ನು ಹೆಸರಿಸಿಲ್ಲ. ಆದರೆ, ಈಗ, 2013ರಲ್ಲಿ, ಅವರ ಕುರಿತಾದ ಪ್ರಖರ ಪ್ರಜ್ಞೆ ಹಾಗೂ ಗಾಂಧಿ ಜೊತೆಗಿನ ಅವರ ಹೋರಾಟಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಈ ಕಾದಂಬರಿಯನ್ನು ಓದಲಾಗುವುದಿಲ್ಲ. 1930 ಹಾಗೂ 1940ರ ದಶಕಗಳಲ್ಲಿ ಅಂಬೇಡ್ಕರ್ ಅವರು ಗಾಂಧಿ ಜೊತೆ ಆವೇಶ, ಆಕ್ರೋಶದ ವಿವಾದಾತ್ಮಕ ಚರ್ಚೆಗಳಲ್ಲಿ ತೊಡಗಿಕೊಂಡಿದ್ದರು.

ಜಾತಿ ಪದ್ಧತಿ  ಕುರಿತಂತೆ ಈ ಹಿರಿಯ ವ್ಯಕ್ತಿಯ ಟೀಕೆಗಳು ತೀರಾ ಮೃದುವಾದವು ಎಂಬುದು ಅಂಬೇಡ್ಕರ್ ಭಾವನೆಯಾಗಿತ್ತು. ಗಾಂಧಿಯವರು ವೈಭವೀಕರಿಸುವ ಭಾರತೀಯ ಗ್ರಾಮವನ್ನು `ಅಸಮಾನತೆಯ ಗೂಡು' ಎಂದು ಅವರು ತಳ್ಳಿಹಾಕುತ್ತಿದ್ದರು. ಅನೇಕ ಸವರ್ಣೀಯರಿಗೆ ಅಂತಃಸ್ಸಾಕ್ಷಿ ಇದೆ ಎಂದೇ ಅವರು ಭಾವಿಸುತ್ತಿರಲಿಲ್ಲ. ಹೀಗೆಂದೇ ತಮ್ಮ ಹಕ್ಕುಗಳಿಗಾಗಿ ಗಟ್ಟಿಯಾಗಿ ಸಂಘಟಿತರಾಗಬೇಕೆಂದು ಅಸ್ಪೃಶ್ಯರನ್ನು ಆಗ್ರಹಪಡಿಸುತ್ತಿದ್ದರು.

ಅಸ್ಪೃಶ್ಯತೆಯ ಪಾಪ ತೊಳೆದು ಹಿಂದೂಧರ್ಮವನ್ನು ಶುದ್ಧೀಕರಿಸಬೇಕೆಂಬುದು ಗಾಂಧಿಯ ವಾದವಾಗಿದ್ದರೆ, ಹಿಂದೂಧರ್ಮದ ಮೂಲತತ್ವವೇ ಸಾಮಾಜಿಕ ತಾರತಮ್ಯ ಎಂಬುದು ಅಂಬೇಡ್ಕರ್ ಚಿಂತನೆಯಾಗಿತ್ತು. ಹೀಗಾಗಿ ಒಟ್ಟಾಗಿ ಮತ್ತೊಂದೇ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವುದು ಅವರು ಹಾಗೂ ಅವರ ಬೆಂಬಲಿಗರಿಗೆ ಉಳಿದಿದ್ದ ಏಕೈಕ ಭರವಸೆಯಾಗಿತ್ತು. ಜೊತೆಗೇ ತ್ವರಿತ ಗತಿಯ ನಗರೀಕರಣ, ಕೈಗಾರಿಕೀಕರಣಗಳಿಗೆ ಒತ್ತಾಯಿಸುತ್ತಾ ಹಳ್ಳಿಗಳಿಂದ ಅಸ್ಪೃಶ್ಯರನ್ನು ಹೊರ ತಂದು ಆಧುನಿಕ ಹಾಗೂ ಕೀಳಲ್ಲದ ಉದ್ಯೋಗಗಳಲ್ಲಿ ಅವರನ್ನು ತೊಡಗಿಸುವ ಇರಾದೆ ಅವರದಾಗಿತ್ತು.

`ಅನ್‌ಟಚಬಲ್' ಬರೆದಾಗ ಮುಲ್ಕ್ ರಾಜ್ ಆನಂದ್ ಅವರಿಗೆ ಅಂಬೇಡ್ಕರ್ ಬಗ್ಗೆ ತಿಳಿದಿತ್ತೆ ಎಂಬುದು ಸ್ಪಷ್ಟವಿಲ್ಲ. ಆದರೆ, ನಂತರದ ವರ್ಷಗಳಲ್ಲಿ ಅವರು ಆ ವ್ಯಕ್ತಿಯ ಕುರಿತು ಹೆಚ್ಚು ಮೆಚ್ಚುಗೆ ಬೆಳೆಸಿಕೊಂಡರು. 1950ರ ದಶಕದ ಆರಂಭದಲ್ಲಿ ಬಾಂಬೆಯಲ್ಲಿ  ಅವರನ್ನು ಅವರು ಭೇಟಿಯಾಗಿದ್ದಿರಲೂಬಹುದು. ಬಹಳ ವರ್ಷಗಳ ನಂತರ, 1980ರಲ್ಲಿ ಅಂಬೇಡ್ಕರ್ ಅವರ  `ದಿ ಅನಿಹಿಲೇಷನ್ ಆಫ್ ಕಾಸ್ಟ್'  ಎಂಬ ಮರು ಮುದ್ರಿತ ಕೃತಿಗೆ  ಮುನ್ನುಡಿಯನ್ನು ಬರೆದಿದ್ದರು.

ಈ ಪುಸ್ತಕ ಮೊದಲು ಪ್ರಕಟವಾದದ್ದು 1936ರಲ್ಲಿ.   ಅಂಬೇಡ್ಕರ್ ಅವರ ಈ ಪುಸ್ತಕಕ್ಕೆ ಒಂದು ವರ್ಷ ಮೊದಲೇ ಆನಂದ್ ಅವರ ಕಾದಂಬರಿ ಪ್ರಕಟವಾಗಿತ್ತು. ಈ ಕೃತಿ ಕೆಲವೊಂದು ವಿಷಯಗಳನ್ನು ಮೊದಲೇ ನಿರೀಕ್ಷಿಸಿತ್ತು. ಜೊತೆಗೆ ಅಂಬೇಡ್ಕರ್ ಅವರು ಆರಂಭಿಸಿದ ರಾಜಕೀಯದ ಸಾಂಕೇತಿಕತೆಯನ್ನೂ ಬಹುಶಃ ಹೆಚ್ಚು ನಿರ್ದಿಷ್ಟವಾಗಿ ನಿರೀಕ್ಷಿಸಿತ್ತು. ತಮ್ಮ ಜೀವಿತಾವಧಿಯಲ್ಲಿ ಅಂಬೇಡ್ಕರ್ ಅವರು ಸತತವಾಗಿ ಗಾಂಧಿಯವರ ನಂತರದ ಸ್ಥಾನದಲ್ಲೇ ಇದ್ದರು.

ಗಾಂಧಿಯವರು `ರಾಷ್ಟ್ರದ ಪಿತಾಮಹ' ಆಗಿದ್ದರು ಮಾತ್ರವಲ್ಲ ಬಹುತೇಕ ಹರಿಜನರೂ ತಮ್ಮದೇ ನಾಯಕನಿಗಿಂತ  ಗಾಂಧಿಯವರನ್ನೇ ಹೆಚ್ಚು ಅನುಸರಿಸುತ್ತಿದ್ದರು. 1948ರಲ್ಲಿ ಗಾಂಧಿಯವರು ತೀರಿಕೊಂಡರು. ಅಂಬೇಡ್ಕರ್ ಅವರು ತೀರಿಕೊಂಡಿದ್ದು 1956ರಲ್ಲಿ. ಅವರಿಬ್ಬರ ನಡುವಿನ ಪ್ರತಿಸ್ಪರ್ಧಿತನ ಅವರುಗಳ ಸಾವಿನ ನಂತರವೂ ಮುಂದುವರಿಯಿತು. ನಂತರದ ದಿನಗಳಲ್ಲಿ ಕಿರಿಯ ನಾಯಕನೇ ಭಾರತದಲ್ಲಿ  ಪ್ರತಿವರ್ಷವೂ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿಕೊಳ್ಳತೊಡಗಿದರು. ಬಹುಶಃ ಪ್ರತಿ ದಿನ ಅವರ ಅಭಿಮಾನಿಗಳ ಸಂಖ್ಯೆ ಹಿಗ್ಗುತ್ತಾ ಹೋಯಿತು. ಈಗ ಸಾಮಾಜಿಕ ಕಾರ್ಯಕರ್ತರು `ಹರಿಜನ್' ಪದವನ್ನೇ ನಿರಾಕರಿಸುತ್ತಾರೆ.

`ತುಳಿತಕ್ಕೊಳಗಾದವರು' ಎಂಬುದನ್ನು ಧ್ವನಿಸುವ, ಅಂಬೇಡ್ಕರ್ ಅವರೂ ಬಳಸಿದ್ದ `ದಲಿತ' ಪದ ಬಳಕೆಯನ್ನೇ ಅವರು ಹೆಚ್ಚು ಇಷ್ಟಪಡುತ್ತಾರೆ. ಅನುಗ್ರಹ ತೋರುವಂತಹ ಮೇಲ್ಜಾತಿಯ ಸುಧಾರಕ ಎಂದು ಭಾರತದಾದ್ಯಂತ ಗಾಂಧಿಯವರನ್ನು ದಲಿತರು ತಳ್ಳಿಹಾಕುತ್ತಾರೆ. ಹಾಗೆಯೇ ಅಂಬೇಡ್ಕರ್ ಚಿಂತನೆ ಹಾಗೂ ಆಚರಣೆಗಳು, ಸ್ವಂತಿಕೆಯ ಪ್ರತಿಪಾದನೆಯ ಪರ್ಯಾಯ ಮಾರ್ಗಗಳನ್ನು ತೆರೆದು ತೋರಿದ್ದರಿಂದಾಗಿ ಅಂಬೇಡ್ಕರ್ ಅವರು ಮಹಾನ್ ವಿಮೋಚಕ ಎಂದು ಅವರನ್ನು  ಗೌರವಿಸುತ್ತಾರೆ.

ಗಾಂಧಿಯವರ ಹೆಚ್ಚಿನ ಭಾವಚಿತ್ರಗಳಲ್ಲಿ ಅವರು ತೊಟ್ಟಿರುವುದು ತುಂಡು ಬಟ್ಟೆ. ಆದರೆ ಅಂಬೇಡ್ಕರ್ ಅವರನ್ನು ಸದಾ ಸೂಟ್, ಟೈ ಧರಿಸಿದವರಾಗಿಯೇ ಅವರ ಅಭಿಮಾನಿಗಳು ಅವರನ್ನು ಪ್ರತಿಬಿಂಬಿಸಿದ್ದಾರೆ. ಮೇಲ್ಜಾತಿಯ ಗಾಂಧಿಗೆ ತುಂಡು ಬಟ್ಟೆ ತ್ಯಾಗವನ್ನು ಸಂಕೇತಿಸುತ್ತದೆ. ಅಂಬೇಡ್ಕರ್ ಅವರು ತುಂಡು ಬಟ್ಟೆ ಧರಿಸಿದ್ದಲ್ಲಿ ಅದು ಗಮನ ಸೆಳೆಯುವುದು ಸಾಧ್ಯವಿಲ್ಲ. ಏಕೆಂದರೆ ಸಂಪ್ರದಾಯ, ಪರಂಪರೆಯ ಪ್ರಕಾರ, ತುಂಡುಬಟ್ಟೆ ಧರಿಸುವುದಕ್ಕೇ ಅವರಿಗೆ ಅನುಮತಿ ಇರುವುದು.

ಈ ಪಾಶ್ಚಿಮಾತ್ಯ ವೇಷಭೂಷಣ ಧರಿಸುವ ವಿಚಾರವೇ ಮೇಲ್ಜಾತಿಯ ಕೋಟೆಯನ್ನು ಯಶಸ್ವಿಯಾಗಿ ಭೇದಿಸುವುದನ್ನು ಸಂಕೇತಿಸುತ್ತದೆ. ಹುಟ್ಟಿನ ಅನಾನುಕೂಲಗಳ ಹೊರತಾಗಿಯೂ ಅಂಬೇಡ್ಕರ್ ಅವರು ಯಶಸ್ವಿ ವಕೀಲ ಹಾಗೂ ಅರ್ಥಶಾಸ್ತ್ರಜ್ಞರಾದರು. ಅಷ್ಟೇ ಅಲ್ಲ ಭಾರತ ಸಂವಿಧಾನದ ರಚನೆಯಲ್ಲೂ ಪಾಲ್ಗೊಂಡರೆಂಬ ವಿಸ್ಮಯದ, ಉನ್ನತ  ಸಾಧನೆಗಳನ್ನು ಸೂಟು ಧರಿಸುವ ಸಾಂಕೇತಿಕ ಪ್ರಕ್ರಿಯೆಯಲ್ಲಿ ಸೆರೆಹಿಡಿಯಲಾಗಿದೆ.

ಆನಂದ್ ಅವರ ಕಾದಂಬರಿ ಈಗಲೂ ಇಂದಿನ ಭಾರತದ ಜೊತೆಗೂ ಹೆಣೆದುಕೊಳ್ಳುತ್ತದೆ. ಶೇಕಡ 40ಕ್ಕಿಂತ ಕಡಿಮೆ ಭಾರತೀಯರಿಗಷ್ಟೇ ಆಧುನಿಕ ಫ್ಲಷ್ ಟಾಯ್ಲೆಟ್‌ಗಳ ಸೌಕರ್ಯವಿದೆ ಎಂದು 2012ರ ಅಕ್ಟೋಬರ್‌ನಲ್ಲಿ, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್ ಹೇಳಿದ್ದರು. ಉಳಿದವರಿಗೆ ಬಯಲೇ ಶೌಚಾಲಯ. ಬಹಳ ಸಂದರ್ಭಗಳಲ್ಲಿ ಬಾಕಾನಂತಹ  ಜಲಗಾರರೇ ಸ್ವಚ್ಛಗೊಳಿಸುತ್ತಿದ್ದಾರೆ. ಇದು ಭಾರಿ ಸಾಮಾಜಿಕ ಹಾಗೂ ಪರಿಸರ ಪ್ರಾಮುಖ್ಯದ ಸಮಸ್ಯೆಯೆಂದು ಪ್ರತಿಪಾದಿಸಿದ್ದ ಜೈ ರಾಂ ರಮೇಶ್ ಅವರು `ಟಾಯ್ಲೆಟ್‌ಗಳು ದೇವಾಲಯಗಳಿಗಿಂತ ಮುಖ್ಯವಾದವು. ಶೌಚಾಲಯಗಳು ಹಾಗೂ ಸ್ವಚ್ಛತೆಗೆ  ನಾವು ಆದ್ಯತೆ ನೀಡಬೇಕು' ಎಂದು ಹೇಳಿದ್ದರು.

ಈ ಮಾತುಗಳಿಗಾಗಿ ಬಲಪಂಥೀಯ ಹಿಂದೂಗಳು ರಮೇಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಬಹುಸಂಖ್ಯಾತ ಭಾರತೀಯರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಲಾಗಿದೆ ಎಂದು ಆರೋಪಿಸಿದರು. ಆದರೆ ಅಂಬೇಡ್ಕರ್ ಹಾಗೂ ಗಾಂಧಿಯನ್ನು ಓದಿಕೊಂಡವರು,(ಈ ನಿರ್ದಿಷ್ಟ ಸಚಿವರಂತೂ ಖಂಡಿತವಾಗಿಯೂ ಓದಿಕೊಂಡಿದ್ದವರೇ ಆಗಿರುತ್ತಾರೆ)  ಇತ್ತೀಚಿನ ವರ್ಷಗಳಲ್ಲಿ ತೀವ್ರ ಆರ್ಥಿಕ ಬೆಳವಣಿಗೆ, ನಿಯಮಿತ ಚುನಾವಣೆಗಳು, ಸಂವಿಧಾನ ನೀಡಿರುವ ಸಮಾನತೆಯ ಭರವಸೆಗಳ ಮಧ್ಯೆಯೂ ಅನೇಕ ರೀತಿಗಳಲ್ಲಿ ಭಾರತ ಇನ್ನೂ ಅಸಮಾನ ಸಮಾಜ ಎಂಬುದನ್ನು ಗುರುತಿಸುತ್ತಾರೆ. ಅಸ್ಪೃಶ್ಯತೆಯ ವಿರುದ್ಧ ಹೋರಾಟ ನಡೆದಿದೆ. ಆದರೆ ಇನ್ನೂ ಅಂತ್ಯವಾಗಿಲ್ಲ. ಭಂಗಿಗಳು, ಕಸ ಗುಡಿಸುವವರು, ಕ್ಷೌರಿಕರು, ಅಗಸರು, ಚಮ್ಮಾರರು ಈಗಲೂ ರಾಷ್ಟ್ರದಾದ್ಯಂತ  ತಾರತಮ್ಯ  ಅನುಭವಿಸುತ್ತಲೇ ಇದ್ದಾರೆ.

ಕಲಾಕೃತಿಗಳಿಗೆ ಹಣೆಪಟ್ಟಿ ಅಂಟಿಸುವುದಕ್ಕೆ ಹಿಂಜರಿಯಲಾಗುತ್ತದೆ. ಆದರೆ,  ಹಾಗೆ ಮಾಡಲೇಬೇಕಾದಲ್ಲಿ ಆಗ ಮುಲ್ಕ್ ರಾಜ್ ಆನಂದ್‌ರ `ಅನ್‌ಟಚಬಲ್' ಗಾಂಧಿವಾದ ಹಾಗೂ ಅಂಬೇಡ್ಕರ್‌ವಾದ ಎರಡನ್ನೂ ಧ್ವನಿಸುತ್ತದೆ. ಇದು ಚಾರಿತ್ರಿಕ ಪ್ರಸಿದ್ಧಿಯ ಕೃತಿ. ಹಾಗೆಯೇ ಸಮಕಾಲೀನವಾದದ್ದೂ ಹೌದು. ಏಕೆಂದರೆ ಗಾಂಧಿ ಹಾಗೂ ಅಂಬೇಡ್ಕರ್ ಆರಂಭಿಸಿದ ಯುದ್ಧಗಳು ಇನ್ನೂ ಪೂರ್ಣವಾಗಿ ಗೆಲ್ಲಲಾಗಿಲ್ಲ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT