ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಸಿಗೊಂಡ ಮನಸ್ಸಿಗೆ ‘ಮೆಂಟಲ್’ ಎಂಬ ಹೊದಿಕೆ ಕಂಡಿರೆ...

Last Updated 22 ಜೂನ್ 2016, 19:30 IST
ಅಕ್ಷರ ಗಾತ್ರ

ಪೀಜಿ ಓನರ್ರು ಹೆದರಿಕೆಯಲ್ಲಿ ಫೋನ್ ಮಾಡಿದಾಗ ತಕ್ಷಣ ಬರುತ್ತೇವೆ ಅಂದ ಪೊಲೀಸರು ಬರುವ ಹೊತ್ತಿಗೆ ಎಲ್ಲ ಅಸ್ತವ್ಯಸ್ತವಾಗಿತ್ತು. ಓನರ್ರು ಪೊಲೀಸರಿಗೆ ಫೋನು ಮಾಡಿದ್ದು ಬೆಳಗಿನ ಸಮಯದಲ್ಲಿ.

ಆದರೆ ಆರಕ್ಷಕರು ಬಂದಾಗ ಎಲ್ಲರೂ ಸಂಜೆಯ ಟೀ ಕುಡಿಯುತ್ತಿದ್ದರು. ಒಬ್ಬರು ಮಹಿಳಾ ಪೊಲೀಸ್ ಕರೆದುಕೊಂಡು ಇಬ್ಬರು ಕಾನ್‌ಸ್ಟೆಬಲ್ಲುಗಳು ಬಂದು ಗೇಟಿನ ಹೊರಗೆ ನಿಂತು ತಮ್ಮತಮ್ಮಲ್ಲೇ ಮಾತಾಡುತ್ತಿದ್ದರು.

ಯಾರೋ ಮಿನಿಸ್ಟರ್ ಇಂದಿರಾನಗರಕ್ಕೆ ಬರುತ್ತಾರಂತ ಮುಖ್ಯ ಠಾಣೆಯ ಇವರನ್ನು ಬಂದೋಬಸ್ತ್ ಡ್ಯೂಟಿಗೆ ಹಾಕಿದ್ದರಂತೆ. ಹಾಗಾಗಿ ಓನರ್ ಫೋನ್ ಮಾಡಿದ ಕೂಡಲೇ ಹೊರಡಲು ಆಗಿರಲಿಲ್ಲ.

ಅಲ್ಲದೆ ಮಿನಿಸ್ಟರು ಕೂಡ ನಿಗದಿಪಡಿಸಿದ ಸಮಯಕ್ಕೆ ಬಾರದೆ ಬಹಳ ಲೇಟಾಗಿ ಬಂದರಂತೆ. ಅವರು ಹೋದ ತಕ್ಷಣ ಊಟ ಕೂಡ ಮಾಡದೆ ಬಂದರಂತೆ. ಅವರ ಒಣಗಿದ ಮುಖ ನೋಡಿದರೆ ಅಯ್ಯೋ ಪಾಪ ಎನ್ನಿಸುವಂತಿತ್ತು.

ಇವರೆಲ್ಲ ಗೇಟಿನಲ್ಲಿ ನಿಂತಿರುವಾಗ ಹುಡುಗಿಯೊಬ್ಬಳು ಅಲ್ಲೇ ಪೇಪರೋದುತ್ತಾ ಕುಳಿತಿದ್ದಳು. ಅವಳನ್ನು ಕರೆದು ಪೊಲೀಸರು ಮನೆಯ ಅಡ್ರೆಸ್ ಖಾತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಏನೋ ಗಲಿಬಿಲಿ ಉಂಟಾಯಿತು.

ಪೀಜಿ ಓನರ್ ಮನೆಯಲ್ಲಿ ಇರಲಿಲ್ಲ. ಕೆಳಗಿನ ಮನೆಗೆ, ಗೇಟಿಗೆ ಬೀಗ ಹಾಕಿತ್ತು. ಪೀಜಿಯಾಗಿ ನಡೆಯುತ್ತಿದ್ದ ಮೇಲಿನ ಮನೆಯಲ್ಲಿ ನಾಲ್ಕು ಜನ ಹುಡುಗಿಯರು ಕುಳಿತು ಟೀ ಕುಡಿಯುತ್ತಾ ಮಾತನಾಡುತ್ತಿದ್ದರು.

ಪೊಲೀಸರು ಪೇಪರೋದುತ್ತಾ ಕೂತಿದ್ದ ಹುಡುಗಿಯನ್ನು ಕೇಳಿದರು. ‘ಇಲ್ಲಿಂದ ಯಾರೋ ಫೋನ್ ಮಾಡಿದ್ದರಲ್ಲ? ಏನ್ ಸಮಾಚಾರ? ಯಾರು ಕಂಪ್ಲೇಂಟ್ ಕೊಟ್ಟಿದ್ದು?’

ಅವಳು ಮಾತಾಡಲಿಲ್ಲ, ಮಾತಾಡುವ ಮನೆ ಹಾಳಾಗಿ ಹೋಗಲಿ; ಇವರನ್ನು ತಲೆ ಕೂಡ ಎತ್ತಿ ನೋಡಲಿಲ್ಲ. ಗೇಟಿನ ಹೊರಗೆ ನಿಂತದ್ದು ಒಂದು ಅಸಹನೆಯಾದರೆ, ಹಸಿದ ಹೊಟ್ಟೆ ಅಮಾನವೀಯ ವರ್ತನೆಗೆ ಪ್ರೋತ್ಸಾಹ ನೀಡುತ್ತಿತ್ತು.

ಆದರೂ ಬರೀ ಹುಡುಗಿಯರು ಇರುವ ಜಾಗವಾದ್ದರಿಂದ ಜೋರಾಗಿ ಕೂಗಿದರೆ ತಮ್ಮ ಪೌರುಷ ಸುಖಾಸುಮ್ಮನೆ ವೇಸ್ಟ್ ಆದೀತೆಂಬ ಆಲೋಚನೆಯಲ್ಲಿ ಮತ್ತೆ ಅದೇ ಹುಡುಗಿಯನ್ನು ಮಾತಾಡಿಸಿದರು.

‘ಏನಮ್ಮಾ? ಕಿವಿ ಕೇಳ್ಸಲ್ವಾ? ನಿನ್ನನ್ನೇ ಮಾತಾಡಿಸ್ತಾ ಇರೋದು...’ ಎಂದರು ಪೊಲೀಸ್ ಪೇದೆಗಳು. ಮಹಿಳಾ ಪೇದೆ ಸುಮ್ಮನೆ ನಿಂತು ನೋಡುತ್ತಿದ್ದವರು ಇದ್ದಕ್ಕಿದ್ದ ಹಾಗೆ ಗೇಟ್ ತೆಗೆಯಲು ಮುಂದಾದರು.

ತಾರಸಿ ಮೇಲೆ ನಿಂತು ಟೀ ಕುಡಿಯುತ್ತಿದ್ದ ಹುಡುಗಿಯರು ಅದನ್ನು ನೋಡಿ ಒಮ್ಮೆ ವಿಚಲಿತರಾದಂತೆ ಕಂಡರು. ‘ಏನ್ ಮೇಡಮ್? ಯಾರ್ ಬೇಕಿತ್ತು?’ ಎಂದು ವಿಜಿ ಟೀ ಲೋಟ ಕೈಲಿ ಹಿಡಿದುಕೊಂಡೇ ಕೇಳಿದಳು.

ಮಹಿಳಾ ಪೇದೆ ಮೇಲಕ್ಕೆ ನೋಡಿ ‘ಇಲ್ಲಿಂದ ಫೋನ್ ಬಂದಿತ್ತಮ್ಮ... ಏನೋ ಅನಾಹುತ ಆಗಿದೆ. ಬೇಗ ಬನ್ನಿ ಅಂತ ಯಾರೋ ಲೇಡೀಸ್ ಫೋನ್ ಮಾಡಿದ್ರು...’ ಎಂದರು.

‘ಇಲ್ಲಿಂದಾನಾ? ಸಾಧ್ಯ ಇಲ್ವಲ್ಲ ಮೇಡಮ್. ಇರಿ ಒಂದ್ನಿಮಿಷ ಕೆಳಗೆ ಬಂದೆ...’ ವಿಜಿ ಧಡಭಡ ಮೆಟ್ಟಿಲು ಇಳಿಯುತ್ತಾ ಕೆಳಗೆ ಬಂದಳು. ಅವಳು ಬರುವುದು ಐದು ನಿಮಿಷವಾಯಿತೇನೋ... ಅಷ್ಟರಲ್ಲಿ ಆ ಪೇಪರೋದುತ್ತಿದ್ದ ಹುಡುಗಿಯನ್ನು ಮತ್ತೆ ಪೊಲೀಸರು ಮಾತಾಡಿಸಿ ಮಾಹಿತಿ ಕಲೆ ಹಾಕಲು ಪ್ರಯತ್ನ ಮಾಡಿದ್ದರು. ಆದರೆ ಅವಳು ಯಥಾ ಪ್ರಕಾರ ಏನೂ ಮಾತಾಡಿರಲಿಲ್ಲ.

ಇವರು ಗೇಟಿನ ಹೊರಗೆ ನಿಂತ ಸಂಗತಿಯೇ ಅವಳ ಗಮನಕ್ಕೆ ಬಂದಿರಲಿಲ್ಲ. ವಿಜಿ ಕೆಳಗೆ ಬರುವಾಗ ಪೊಲೀಸರಿಗೆ ಯಾಕೋ ಸಿಟ್ಟು ಬಂದಂತಿತ್ತು. ‘ಎಷ್ಟ್ ಮಾತಾಡಿದ್ರೂ ಮಾತಾಡಲ್ವಲ್ಲ? ಇದು ಹುಡುಗೀನಾ ಇಲ್ಲಾ ಗೊಂಬೆನಾ? ನಮಗೇನು ಹುಚ್ಚಾ ಬಂದು ಗೇಟ್ ಹೊರಗೆ ನಿಲ್ಲಕ್ಕೆ. ಮಧ್ಯಾಹ್ನ ಊಟ ಕೂಡ ಮಾಡಿಲ್ಲ ನಾವು’ ಅಂತ ಎಗರಾಡುತ್ತಿದ್ದರು.

ಪಾಪ! ಎಂಥೆಂಥಾ ಸಂದರ್ಭಗಳಲ್ಲಿ ಎಲ್ಲೆಲ್ಲೋ ಕೆಲಸ ಮಾಡುವ ಅನಿವಾರ್ಯದಿಂದಾಗಿ ಸಿಟ್ಟು ಸೆಡವು ದೈವಗುಣಗಳಂತೆ ಪೊಲೀಸರಲ್ಲಿ ಆವಾಹನೆಯಾಗಿರುತ್ತವೆ.

ಹಸಿದ ಹೊಟ್ಟೆ, ಕೆಟ್ಟ ಹೊಟ್ಟೆ, ಗ್ಯಾಸು ತುಂಬಿದ ಹೊಟ್ಟೆ, ಉಚ್ಚೆ ಹುಯ್ಯಲೂ ಪುರುಸೊತ್ತಿಲ್ಲದಂಥಾ ಬಂದೋಬಸ್ತ್ ಡ್ಯೂಟಿಗಳು...ಗಂಡಸರು ಗೋಡೆ ಮರೆಯಲ್ಲಿ ಒಂದು ರೀತಿ ನಿರ್ವಾಣ ಅನುಭವಿಸಿಯಾರು; ಆದರೆ ಹೆಣ್ಣು ಮಕ್ಕಳು? ಮುಟ್ಟು, ಚಿಟ್ಟು,

ಮೂತ್ರ ಎಲ್ಲವನ್ನೂ ಹಲ್ಲು ಕಚ್ಚಿಕೊಂಡೇ ಸಹಿಸಬೇಕು. ಅಷ್ಟೇ ಅಲ್ಲ, ಜನರ ಸೇವೆ ಮಾಡುವಾಗ ಸುತರಾಂ ಟೆಂಪರ್ ಕಳೆದುಕೊಳ್ಳಬಾರದು. ಇದು ಅಮಾನವೀಯ ನಿರೀಕ್ಷೆ ಅಂತ ಬಹಳ ಜನಕ್ಕೆ ಅನ್ನಿಸುವುದಿಲ್ಲ.

ತಮ್ಮ ಯಾವುದೇ ಆರೋಗ್ಯ-ವೈಯಕ್ತಿಕ ಸಮಸ್ಯೆಗಳನ್ನು ಮುಂದಿಡದೆ ವರ್ಷಗಟ್ಟಲೆ ಕೆಲಸ ಮಾಡುವ ಅನಿವಾರ್ಯ ಇರುವಾಗ, ಆ ಕೆಲಸ ತರುವ ಅಧಿಕಾರ ಕೆಲವೊಮ್ಮೆ ತಮ್ಮ ವ್ಯಕ್ತಿತ್ವದ ಪರಿಧಿಯನ್ನೂ ಮೀರಿ ಪ್ರಭಾವಳಿಯಂತೆ ಕೆಲಸ ಮಾಡುವಾಗ, ಪೊಲೀಸರ ವಿಷಯದಲ್ಲಿ ಅದೇಕೋ ಜಗತ್ತಿನ ಜೊತೆಗಿನ ವ್ಯವಹಾರವೇ ಬೇರೆಯಾಗುತ್ತದೆ...

ಆ ಅಂಶ ಹಾಗಿರಲಿ. ಪತ್ರಕರ್ತರಿಗೂ, ಪೊಲೀಸರಿಗೂ ಒಂದು ಚಟ, ಚಾಳಿ ಅಥವಾ ಕೆಲಸಕ್ಕೆ ಸಂಬಂಧಪಟ್ಟ ಒಂದು ವಿಶೇಷ ಗುಣ ಇರುತ್ತದೆ. ಅದೇನೆಂದರೆ ತಮಗೆ ಸಿಕ್ಕ ಮಾಹಿತಿಯನ್ನು ಬಿಟ್ಟು ಇನ್ನೂ ಹೆಚ್ಚಿನ ವಿಷಯವನ್ನು ಕಲೆ ಹಾಕುವುದು.

ಹಾಗೆ ಮಾಡುವುದು ಅವರ ವೃತ್ತಿಜೀವನಕ್ಕೆ ಅನಿವಾರ್ಯ ಕೂಡ. ಏಕೆಂದರೆ ಆಧುನಿಕ ಗಾದೆಯೊಂದನ್ನು ಹೊಂದಿಸುವುದಾದರೆ ‘ಪತ್ರಕರ್ತರಿಗೆ, ಪೊಲೀಸರಿಗೆ ನಿಜ ಹೇಳಿ ಬದುಕ್ದೋರಿಲ್ಲ’ ಅಂತ ಮಾಡಬಹುದೇನೋ. ಏಕೆಂದರೆ ಸುಳ್ಳಿಗೂ ಸತ್ಯಕ್ಕೂ ಇರುವುದು ಬರೀ ದೃಷ್ಟಿಕೋನದ ವ್ಯತ್ಯಾಸ ಮಾತ್ರ ತಾನೆ? ಯಾವ ಸುಳ್ಳನ್ನೂ ದಿನಗಟ್ಟಲೆ ಚರ್ಚೆ ಮಾಡಿದರೆ ನಿಜವೇ ಆಗಿಬಿಡುತ್ತದೆ.

ವಿಜಿ ಕೆಳಗೆ ಬಂದ ತಕ್ಷಣ ಪೊಲೀಸರು ಪೇಪರ್ ಹುಡುಗಿಯ ಬಗ್ಗೆ ಕೇಳಿದರು. ‘ಈ ಹುಡುಗಿಗೇನು ಲೂಸಾ? ಪೇಪರಿಂದ ತಲೆ ಕೂಡ ಎತ್ತಲಿಲ್ವಲ್ಲಾ? ಅಷ್ಟೊತ್ತಿಂದ ಮಾತಾಡಿಸ್ತಾನೇ ಇದೀವಿ...ಅಷ್ಟೂ ಅರ್ಥ ಆಗ್ತಾ ಇಲ್ವಾ ಅವಳಿಗೆ?’

ವಿಜಿ ಒಂದು ನಿಮಿಷ ಇರಿ ಎನ್ನುವಂತೆ ಸನ್ನೆ ಮಾಡಿ ಆ ಹುಡುಗಿ ಹತ್ತಿರ ಹೋದಳು. ಅವಳ ಪೇಪರಿನ ಹತ್ತಿರ ಮುಖವಿಟ್ಟಳು. ಆ ಕ್ಷಣದಲ್ಲಿ ಆ ಹುಡುಗಿಯ ಮುಖ ಅರಳಿದ್ದು ಮಾತ್ರ ಬಹು ದಿವ್ಯವಾದ ಅನುಭವ. ಪೇಪರೋದುತ್ತಾ ಪೊಲೀಸರನ್ನು ನಿರ್ಲಕ್ಷಿಸಿದ ಆ ಸುಂದರಿ ಹೆಸರು ಕಲ್ಪನಾ.

ತುಮಕೂರಿನ ಹುಡುಗಿ. ಅದ್ಭುತ ಪೇಂಟಿಂಗ್ ಮಾಡುತ್ತಿದ್ದಳು. ವಿಜಿ ಸಂಜ್ಞಾ ಭಾಷೆಯಲ್ಲಿ ಕಲ್ಪನಾಳಿಗೆ ಪೊಲೀಸರನ್ನು ತೋರಿಸಿ ಇವರು ನಿನ್ನ ಕರೀತಾ ಇದ್ರೂ ನೀನು ನೋಡಲಿಲ್ವಂತೆ ಎಂದು ಹೇಳಿದಳು.

ಆ ಹುಡುಗಿ ಪೊಲೀಸರನ್ನು ನೋಡುತ್ತಾ ಇವರು ಯಾಕೆ ನನ್ನ ಕರೀತಾ ಇದ್ರು? ಅನ್ನೋ ಅರ್ಥದ ಭಾಷೆಯನ್ನು ಹೊರಡಿಸಿತು. ನಾನೇನು ತಪ್ಪು ಮಾಡಿದೆ ಅಂತ ಕೇಳಿತು. ವಿಜಿ ಮತ್ತೆ ಕೈಕಾಲು ಆಡಿಸುತ್ತಾ ‘ಇವರಿಗೆ ಇಲ್ಲಿಂದ ಯಾರೋ ಕಂಪ್ಲೇಂಟ್ ಕೊಟ್ಟರಂತೆ. ಅದಕ್ಕಾಗಿ ಬಂದಿದ್ದಾರೆ’ ಎಂದಳು.

ಕಲ್ಪನಾ ಆಶ್ಚರ್ಯ ನಟಿಸುತ್ತಾ ಪೊಲೀಸರ ಕಡೆ ನೋಡುತ್ತಾ ‘ಇಲ್ಲಿಂದಲಾ?’ ಅಂತ ಕೇಳಿದಳು. ಪೊಲೀಸರಿಗೆ ಇದ್ಯಾಕೋ ಬರ್ಕತ್ತಾಗುವ ವಿಷಯವಲ್ಲ ಎನ್ನಿಸಲು ಶುರುವಾಯಿತು. ವಿಜಿಯನ್ನೇ ಕೂಗಿ ಕರೆದರು. ‘ಏ ಬಾಮ್ಮಾ ಇಲ್ಲಿ...’ ವಿಜಿ ಹೋಗಿ ನಿಂತಳು...‘ಏನ್ ಸಾರ್?’

‘ಈಗ ಆ ಹುಡುಗೀದು ಏನ್ ಪ್ರಾಬ್ಲಮ್ಮು? ಯಾರೋ ರೂಮ್ ಬಾಗ್ಲು ತೆಗೀತಾ ಇಲ್ಲ ಅಂತ ಫೋನ್ ಮಾಡಿದ್ರು. ನಾವು ಸೂಸೈಡ್ ಕೇಸ್ ಅಂತ ಬಂದ್ವಿ... ಇಲ್ ನೋಡಿದ್ರೆ ಯಾವ್ದೋ ನಾಟ್ಕದ್ ಕಂಪ್ನಿ ಥರ ಆಟ ಕಟ್ತಿದೀರಾ’

‘ಇಲ್ಲ ಸರ್... ಇವಳೇ ರೂಮ್ ಒಳಗೆ ಇದ್ದಿದ್ದು... ಆದರೆ ಇವಳು ಬಾಗ್ಲು ತೆಗೀತಾ ಇಲ್ಲ ಅಂತ ಯಾರು ಹೇಳಿದ್ರೋ ಗೊತ್ತಿಲ್ಲ ಸರ್. ಇವಳ ಹೆಸರು ಕಲ್ಪನಾ ಅಂತ. ಇವಳಿಗೆ ಪ್ರಾಬ್ಲಮ್ ಇದೆ. ಆದರೆ ಪೊಲೀಸ್‌ ಕಂಪ್ಲೇಂಟ್ ಕೊಡೋ ಅಷ್ಟು ಅಲ್ಲ...’
‘ಏನ್ ಪ್ರಾಬ್ಲಮ್ಮು?’ ಒಬ್ಬ ಪೇದೆ ಸರ್ವ ಸಮಸ್ಯಾ ಪರಿಹಾರಕನಂತೆ ವಿಜಯದ ನಗೆ ಬೀರಿ ಕೇಳಿದ.

ವಿಜಿ ಒಂದು ಬಾರಿ ಕಲ್ಪನಾ ಕಡೆ ನೋಡಿ ಹೇಳಿದಳು. ‘ಇವಳಿಗೆ ಕಿವಿ ಕೇಳಲ್ಲ ಸರ್. ಹಿಯರಿಂಗ್ ಏಡು ಹಾಕ್ಕೊಂಡ್ರೆ ಮಾತ್ರ ಸರಿ. ಕೆಲವೊಮ್ಮೆ ತಲೆ ಸ್ನಾನ ಮಾಡಿದ ತಕ್ಷಣ ರೂಮಿಗೆ ಹೋಗಿ ಬಾಗಿಲು ಹಾಕ್ಕೊಂಡ್ ಬಿಡ್ತಾಳೆ.

ಕಿವಿಯಲ್ಲಿ ನೀರು ಇರುತ್ತಲ್ವಾ? ಆ ಹಿಯರಿಂಗ್ ಏಡ್‌ಗೆ ನೀರು ಬೀಳಬಾರದು ಸರ್. ಸಾವಿರಗಟ್ಟಲೆ ದುಡ್ಡಾಗುತ್ತೆ. ಹೊಸದು ಮಾಡಿಸಿಕೊಳ್ಳಕ್ಕೆ ಬಹಳ ಟೈಮೂ ಹಿಡಿಯುತ್ತೆ. ಅದಕ್ಕೆ ಅವಳು ಕೂದಲು ಮತ್ತು ಕಿವಿ ಒಣಗೋವರೆಗೂ ಹಿಯರಿಂಗ್ ಏಡ್ ಹಾಕ್ಕೊಳಲ್ಲ. ಆಗ ಹೊರಗೆ ಬೆಟ್ಟ ಕಳಚಿ ಬಿದ್ದರೂ ಅವಳಿಗೆ ಏನೂ ಕೇಳಿಸಲ್ಲ...’

‘ಕಿವಿ ಎಷ್ಟೂ ಕೇಳ್ಸಲ್ವಾ?’ ಇನ್ನೊಬ್ಬ ಪೇದೆ ಕೇಳಿದ. ಮಹಿಳಾ ಪೊಲೀಸು ತಲೆ ಮೇಲೆ ಕೈ ಹೊತ್ತು ನಿಂತಿದ್ದಳು.
‘ಇಲ್ಲ ಸರ್, ಎಷ್ಟೂ ಕೇಳ್ಸಲ್ಲ’
‘ಮತ್ತೆ ಪೇಪರೋದುತ್ತಾ ಐತೆ ಈ ಯಮ್ಮ?’
‘ಆಂ?’

ಅವನಿಗೆ ತಾನು ಕೇಳಿದ ಪ್ರಶ್ನೆಯ ಅಸಂಬದ್ಧತೆ ಮಟ್ಟ ಗೊತ್ತಾಯಿತೂಂತ ಕಾಣ್ಸುತ್ತೆ. ಲೇಡಿ ಕಾನ್‌ಸ್ಟೆಬಲ್ಲು ಅವನಿಗೆ ಹೇಳಿದಳು. ‘ಸಾರ್ ನೀವು ಸುಮ್ಮನಿದ್ದು ಬಿಡಿ. ಮ್ಯಾಟ್ರೇ ಸೀರಿಯಸ್ ಇದ್ದಂಗಿಲ್ಲ. ಸುಮ್ನೆ ಆಟ ಆಡ್ತಿದಾರೆ, ಅವ್ರು ಕೇಳ್ತರೆ ಸುಮ್ಕಿರಿ...’ 
ಸರಿ, ಇದ್ದುದರಲ್ಲಿ ಬುದ್ಧಿವಂತ ಮತ್ತೆ ಕೇಳಿದ. ಈ ಸಾರಿ ಟೆಂಪರು ಸ್ವಲ್ಪ ಏರಿದಂತೆ ಇತ್ತು.  
‘ಈ ಕಂತೆ ಪುರಾಣ ಬಿಡಿ, ವಿಷಯಕ್ಕೆ ಬನ್ನಿ. ಮನೆ ಓನರ್ರು ಎಲ್ಲಿ? ಅವರೇ ಫೋನ್ ಮಾಡಿದ್ದು...’

‘ಮನೆ ಓನರ್ರಾ?’ ಎಂದು ಅನುಮಾನಿಸುತ್ತಾ ವಿಜಿ ಸುತ್ತಲೂ ನೋಡಿದಳು. ಕಲ್ಪನಾ ಸುಮ್ಮನೆ ನಗುತ್ತಾ ಕೂತಿತ್ತು...
‘ಮನೆ ಓನರ್ರು ಊರಿಗೆ ಹೋಗಿದ್ದಾರೆ ಸರ್. ಮೂರು ದಿನವಾಯ್ತು’
‘ಬೆಳಿಗ್ಗೆ ಫೋನ್ ಮಾಡಿದ್ದರಲ್ರೀ?’

‘ಯಾರ್ ಮಾಡಿದ್ರೊ ಗೊತ್ತಿಲ್ಲ ಸರ್. ನಮಗಂತೂ ಇಲ್ಲಿ ಫೋನ್ ರಿಸೀವ್ ಮಾಡೋಕೆ ಮಾತ್ರ ಅವಕಾಶ ಇರೋದು. ಫೋನ್ ಮಾಡಕ್ಕೆ ಸಾಧ್ಯವೇ ಇಲ್ಲ. ಅಂದ ಮೇಲೆ ಇಲ್ಲಿಂದ ಯಾರೂ ಮಾಡಿದ ಹಂಗೆ ಕಾಣೆ.

ಅಲ್ಲದೆ ಈವತ್ತು ಇವಳು ರೂಮಿನಲ್ಲಿ ಜಾಸ್ತಿ ಹೊತ್ತು ಇರಲೂ ಇಲ್ಲ. ಬೆಳಿಗ್ಗೆ ಎಲ್ಲೋ ಹೋಗಿದ್ದೋಳು ಮನೆಗೆ ಬಂದು ಸ್ವಲ್ಪ ಹೊತ್ತಾಯ್ತು ಅಷ್ಟೆ...ಇಲ್ಲಿ ನಿಮಗೆ ಕಂಪ್ಲೇಂಟ್ ಕೊಡೋ ಅಂಥದ್ದು ಏನೂ ನಡೆದಿಲ್ಲ ಸರ್’

ಪಕ್ಕದಲ್ಲಿದ್ದವ ಇದ್ದಕ್ಕಿದ್ದಂತೆ ‘ಸರ್, ಒಳಗೆ ಹೋಗಿ ನೋಡೇ ಬಿಡನ ಸರ್. ಏನೋ ನಡೆದೈತೆ ಇಲ್ಲಿ... ಎಲ್ಲಾ ಮುಚ್ಚಿಡಕ್ಕೆ ನೋಡ್ತಿದಾರೆ... ಕಳ್ರು...’ ಅಂದ. ಲೇಡಿಗೂ ಇದು ಸರಿ ಅನ್ನಿಸಿ ಒಳಗೆ ಹೋಗಿ ನೋಡುವ ಉತ್ಸಾಹ ತೋರಿಸಿದಳು.

ಮೊದಲಿನವ ಸ್ವಲ್ಪ ಹಿಂಜರಿದ. ‘ರೀ...ಇದು ಬರೀ ಲೇಡೀಸ್ ಇರೋ ಮನೆ ಕಣ್ರೀ ಹೋಗಿ ಮೇಡಂ, ನೀವೇ ನೋಡ್ಕೊಂಡು ಬನ್ನಿ’ ಅಂತ ತನ್ನ ಮಹಿಳಾ ಸಹೋದ್ಯೋಗಿಗೆ ಹೇಳಿದ. ಅವಳು ಒಮ್ಮೆ ಅತ್ತಿತ್ತ ನೋಡಿ ಜಡೆಯನ್ನು ತುರುಬು ಮಾಡಿ ಕಟ್ಟಿ ಭುಜ ಕುಣಿಸಿ ರೆಡಿಯಾದಳು. ‘ನಡಿಯಮ್ಮಾ...ಒಳಗೆ ನೋಡನ...’
‘ಮೇಡಂ, ಓನರ್ ಇಲ್ಲ. ಮನೆ ಒಳಗೆ...’

‘ಏ! ಸುಮ್ನೆ ನಡಿ ತಾಯೀ...ಮೊದ್ಲೆ ಬೆಳಗಿನಿಂದ ಏನೂ ತಿಂದಿಲ್ಲ. ಇಲ್ಲದ್ದೆ ಮಾತಾಡಿದ್ರೆ ಸರಿ ಇರಲ್ಲ. ಇಲ್ಲಿಂದ ಫೋನ್ ಬಂದಿದೆ ಅಂದ್ರೆ ನಾವ್ ಚೆಕ್ ಮಾಡ್ಕೊಂಬರ್ಬೇಕ್ ಅಷ್ಟೆ. ಏನೂ ಇಲ್ಲ ಅಂದ್ರೆ ಯಾಕೆ ಹೆದರ್ತೀರಾ? ನಾನೇನು ಜೆಂಟ್ಸ್ ಅಲ್ವಲ್ಲಾ? ಲೇಡೀಸೇ ತಾನೆ? ಒಳಗೆ ನೋಡಕ್ಕೆ ಏನ್ ಪ್ರಾಬ್ಲಮ್ಮು?’ ಕೇಳಿದಳು ತುರುಬಮ್ಮ.

ಬೇರೆ ದಾರಿಯಿಲ್ಲದೆ ‘ಸರಿ ಬನ್ನಿ’ ಅಂತ ವಿಜಿ ಆಕೆಯನ್ನು ಮೇಲಕ್ಕೆ ಕರೆದುಕೊಂಡು ಹೋದಳು. ಪೊಲೀಸಮ್ಮ ರೂಮುಗಳನ್ನು ಪರಿಶೀಲಿಸಿ, ಅವರಿವರು ಕೊಡುತ್ತಿರುವ ಬಾಡಿಗೆ ಬಗ್ಗೆ ವಿಚಾರಿಸಿ,

ಈ ಓನರ್ರಿಗೆ ಇದರಿಂದ ಎಷ್ಟು ದುಡ್ಡು ಬರುತ್ತಾ ಇರಬಹುದು ಅಂತ ಲೆಕ್ಕ ಹಾಕಿ, ಹುಡುಗಿಯರು ಮಾಡಿಕೊಟ್ಟ ಟೀ ಕುಡಿದು ಹೊರಗೆ ಬರುವ ಹೊತ್ತಿಗೆ ಹದಿನೈದು ನಿಮಿಷ ಆಗಿತ್ತು. ಟೀ ಕುಡಿದದ್ದರಿಂದ ಹಂಗಾಮಿ ನೆಲೆಯ ಮೇಲೆ ಹಸಿವೆ ಮಾಯವಾಗಿತ್ತು. ಹಾಗಾಗಿ ಸ್ವಲ್ಪ ಸಮಾಧಾನವೂ ಇತ್ತು.

‘ಏನೂ ಇಲ್ಲ ಸರ್. ಯಾರೋ ಸುಳ್ಳ್ ಏಳವ್ರೆ... ಆ ನಿಮ್ ಸಿಸ್ಯ ಐದಾನಲ್ಲ ರಂಗ, ಅವ್ನ್ ಕೆಲ್ಸವೇ ಇರ್ಬೇಕು... ಆ ಸ್ಲಮ್ಮು ಇಲ್ಲೇ ಅತ್ರನೇ ಸಾರ್. ಸುಮ್ನೆ ಕಾಟ ಕೊಡಕ್ಕೆ ಅಂತ ಫೋನ್ ಮಾಡಿ ಸುಳ್ಳ್ ಏಳವ್ನೆ’ ಅಂತ ಬುದ್ಧಿವಂತನಿಗೆ ಹೇಳಿದಳು.

ಮೂರೂ ಜನ ಗೊಣಗುತ್ತಾ ಹೊರಟರು. ಹುಡುಗಿಯರು ವಾಪಸು ರೂಮ್ ಸೇರಿಕೊಂಡರು. ಕಲ್ಪನಾ ನಗುತ್ತಾ ಮನೆಯ ಹಿಂದಿನ ಬಾಗಿಲಿಗೆ ಹೋಗಿ ಓನರ್ರಿಗೆ ಪೊಲೀಸರು ಹೋದ ವಿಷಯ ತಿಳಿಸಿದಳು.

ಇತ್ತ ಪೀಜಿಯಲ್ಲಿ ಶಹೀನ ಸುಸ್ತಾಗಿ ಮಲಗಿದ್ದಳು. ಸರಳಾ ಅವಳ ಪಕ್ಕವೇ ಕೂತಿದ್ದರು. ಓನರ್ರು ಮೆಲ್ಲಗೆ ಹಿಂದಿನ ಮೆಟ್ಟಿಲಿನಿಂದ ಪೀಜಿಯ ಒಳಗೆ ಬಂದರು. ಅವರ ಮನೆಗೆ, ಗೇಟಿಗೆ ಮುಂದಿನಿಂದ ಹಾಕಿದ ಬೀಗ ಹಾಗೇ ಇತ್ತು.

ಇತ್ತ ಕೆಲಸದವಳಿಗೆ ಅಂದರೆ ನಾಗಸುಂದರಿಗೆ ಶಹೀನ ಆ ದಿನ ಮುಂಜಾನೆ ಬಾಗಿಲು ತೆರೆದಾಗ ನಡೆದ ಘಟನೆ ಇಷ್ಟು: ಶಹೀನ ಮೈಮೇಲೆ ಒಂದೇ ಒಂದು ನೂಲಿನೆಳೆಯೂ ಇಲ್ಲದ ಹಾಗೆ ರೂಮಿನಲ್ಲಿ ಬೆತ್ತಲೆ ನಿಂತಿದ್ದಳು.

ತಲೆಯಲ್ಲಿನ ಕೂದಲನ್ನು ಒಂದು ಚೂರೂ ಬಿಡದೆ ಕತ್ತರಿಯಿಂದ ಸಿಕ್ಕಸಿಕ್ಕ ಹಾಗೆ ಕತ್ತರಿಸಿ ಹಾಕಿದ್ದಳು. ಮೈ ಮೇಲೆಲ್ಲಾ ಚೂಪಾದ ವಸ್ತುವಿನಿಂದ ಗಾಯಗಳನ್ನು ಮಾಡಿಕೊಂಡು ರಕ್ತ ಸುರಿಯುತ್ತಿದ್ದರ ಪರಿವೆಯೂ ಇಲ್ಲದೆ ನಿಂತಿದ್ದಳು.

ನಾಗಸುಂದರಿಯ ಬುದ್ಧಿಯ ಮಿತಿಯಲ್ಲಿ ಶಹೀನ ಚಿಕಿತ್ಸೆ ಬೇಕಿರುವ ಮಾನಸಿಕ ಅಸ್ವಸ್ಥೆಯಂತೆ ಕಾಣದೆ ದೆವ್ವದಂತೆ, ರಣದಂತೆ, ಆತ್ಮದಂತೆ, ಪ್ರೇತದಂತೆ ಕಂಡಿದ್ದಳು. ತಮಿಳುನಾಡಿನಿಂದ ಬಂದ ಹೊಸತರಲ್ಲಿ ಯಾರೋ ಅವಳಿಗೆ ಇಂದಿರಾನಗರವನ್ನು ಸ್ಮಶಾನದ ಮೇಲೆ ಕಟ್ಟಿದ್ದಾರೆ ಅಂತ ಹೇಳಿದ್ದರು.

ಅವಳು ಹೇಗಾದರೂ ಮಾಡಿ ಬೇರೆ ಏರಿಯಾಕ್ಕೆ ಹೋಗಬೇಕು ಅಂತ ಕಾಯುತ್ತಿದ್ದರೂ ಹೊಟ್ಟೆಪಾಡು ಇಲ್ಲೇ ನಡೆಯುತ್ತಿದ್ದರಿಂದ ಇನ್ನೆಲ್ಲೂ ಹೋಗಲು ಸಾಧ್ಯವಾಗಿರಲಿಲ್ಲ.

ಅಲ್ಲದೆ ಶಹೀನ ತಲೆ ಬೋಳಿಸಿಕೊಂಡು ಮೈ ರಕ್ತ ಮಾಡಿಕೊಳ್ಳುವ ತನಕ ಅವಳು ಹೆದರುವಂಥಾ ಘಟನೆ ಯಾವುವೂ ನಡೆದಿರಲಿಲ್ಲ. ಅದಾದ ಮೇಲೆ ನಾಗಸುಂದರಿಗೆ ಈ ಏರಿಯಾದಲ್ಲಿ ಪ್ರೇತಗಳಿವೆ ಅಂತ ಗ್ಯಾರಂಟಿಯಾಯಿತು.

ಕೈಯಲ್ಲಿ ಪೊರಕೆ ಇಟ್ಟುಕೊಂಡಿದ್ರೂ ಪ್ರಕಟಗೊಂಡ ದೆವ್ವ ತನ್ನನ್ನು ಸಾಯಿಸೇಬಿಡುತ್ತದೆ ಅಂತ ಹೆದರಿ ಮನೆಗೆ ಹೋಗಿ ತಲೆ ಮೇಲೆ ತಣ್ಣೀರು ಸುರಿದುಕೊಂಡು ಜೀಸಸ್ ಮುಂದೆ ಕ್ಯಾಂಡಲ್ ಹಚ್ಚಿ ನಡುಗುತ್ತಾ ಕುಳಿತಿದ್ದಳು.

ಅವಳು ಕಣ್ಣು ಮುಚ್ಚಿದರೆ ಸಾಕು, ರೂಮಿನಲ್ಲಿ ರಕ್ತಸಿಕ್ತ ಶಹೀನ ತನ್ನನ್ನು ದುರುಗುಟ್ಟುತ್ತಾ ಕಳೆದು ಹೋದ ಕಣ್ಣುಗಳಲ್ಲಿ ನೋಡುತ್ತಿದ್ದುದು, ರೂಮಿನ ತುಂಬಾ ಹರಡಿದ ಕೂದಲು ಕಾಣುತ್ತಿತ್ತು.

ಸರಳಾ ಒಬ್ಬರಿಗೆ ಮಾತ್ರ ಇದು ಬಗೆಹರಿಸಬಲ್ಲ ಸಮಸ್ಯೆ ಎನ್ನುವ ಆತ್ಮವಿಶ್ವಾಸ ಇದ್ದಂತಿತ್ತು. ಬೆಳಿಗ್ಗೆ ಶಹೀನ ಒಂದು ಎಳೆಯನ್ನೂ ಬಿಡದಂತೆ ಕತ್ತರಿಸಿದ ಕೂದಲೆಲ್ಲಾ ಚೆಲ್ಲಾಪಿಲ್ಲಿಯಾಗಿ ನೆಲದ ಮೇಲೆ ಹರಡಿಕೊಂಡಿದ್ದನ್ನು ಗುಡಿಸಿ ಕ್ಲೀನ್ ಮಾಡುವ ಹೊತ್ತಿಗೆ ಸರಳಾಗೆ ವಾಂತಿ ಬರುವ ಹಾಗೆ ಆಗಿತ್ತು. ಉಗುಳು ನುಂಗಿದರೂ, ಉಸಿರಾಡಿದರೂ ಅದರಲ್ಲಿ ಕೂದಲು ಇದೆಯೇನೋ ಅನ್ನುವ ಹಾಗೆ ಅನಿಸುತ್ತಿತ್ತು.

ವಿಜಿ ಅವರ ಪಕ್ಕ ಬಂದು ಕೂತಳು. ಸೂಸನ್ ಚರ್ಚಿನಿಂದ ಬಂದು ಶಹೀನಳ ವಿಷಯ ತಿಳಿದು ದಿಗ್ಭ್ರಾಂತಳಾಗಿದ್ದಳು. ಚಿತ್ರಾಗೆ ಇದನ್ನೆಲ್ಲ ನೋಡಿ ರೋಸಿಹೋಯಿತು.

‘ನಾಲ್ಕ್ ದಿನ ಊರಿಗ ಹೋಗನ ಅಂದ್ರೆ ಅಲ್ಲಿ ಇದಕ್ಕಿಂತ ಕಾಂಪ್ಲಿಕೇಟೆಡ್ ಕೇಸ್ ಇದೆ... ಥೂ! ಯಾಕಪ್ಪಾ ದೇವರೇ ಹೀಗೆ ಎಲ್ಲಾ ಕಡೆ ಒಂದೇ ಪರೀಕ್ಷೆ ಮಾಡಿಸ್ತಿ?’ ಅಂತ ಅಲವತ್ತುಕೊಳ್ಳುತ್ತಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT