ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ ಗೋಡೆ ಮೇಲಿನ ಬರಹ

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಗೋಡೆ ಮೇಲಿನ ಬರಹ’ ಎನ್ನುವ ರೂಪಕವನ್ನು ಅನೇಕ ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಗೋಡೆ ಬರಹಗಳನ್ನು ತುಂಬ ಹುಷಾರಾಗಿ ಓದಬೇಕು. ಇವುಗಳನ್ನು ಓದುವಾಗ ಕಣ್ಣು, ಕಿವಿ, ಮೂಗು ತೆರೆದುಕೊಂಡಿರಬೇಕು. ಮುಕ್ತ ಮನಸ್ಸಿನಿಂದ ಓದಿದರೆ ಮಾತ್ರ ಜನರ ಮನಸ್ಸಿನಲ್ಲಿ ಇರುವುದನ್ನು ಖಚಿತವಾಗಿ ಗ್ರಹಿಸಲು ಸಾಧ್ಯ. ಯಾವ ಬದಲಾವಣೆಗಳಾಗುತ್ತಿವೆ, ಏಕೆ ಆಗುತ್ತಿವೆ, ಕೆಲ ಬದಲಾವಣೆಗಳೇಕೆ ಘಟಿಸುತ್ತಿಲ್ಲ, ಅದಕ್ಕೆ ಕಾರಣಗಳು ಏನು ಎನ್ನುವುದನ್ನೆಲ್ಲ ಮನದಟ್ಟು ಮಾಡಿಕೊಳ್ಳಲು ಸಾಧ್ಯವಾಗುವುದು. ಎಲ್ಲ ಸಂದರ್ಭಗಳಲ್ಲಿ ಅಲ್ಲದಿದ್ದರೂ, ಈ ಬರಹಗಳು ಜನರು ಯಾರಿಗೆ ಮತ ಹಾಕಲು ಮುಂದಾಗಿದ್ದಾರೆ ಅಥವಾ ಯಾರ ವಿರುದ್ಧ ಮತ ಚಲಾಯಿಸಲಿದ್ದಾರೆ ಎನ್ನುವುದರ ಬಗ್ಗೆಯೂ ಒಳನೋಟ ನೀಡುತ್ತವೆ.

2012ರಲ್ಲಿ ನಡೆದಿದ್ದ ಚುನಾವಣೆಯ ಸಂದರ್ಭದಲ್ಲಿ ಕಂಡು ಬಂದಿದ್ದ ಗೋಡೆ ಬರಹಗಳು ಬೇರೆಯಾಗಿದ್ದವು. ಅವೆಲ್ಲವೂ ಗೀಚು ಬರಹಗಳಾಗಿದ್ದವು ಅಥವಾ
ಜಾಹೀರಾತುಗಳಾಗಿದ್ದವು. ಅವುಗಳು ಬೇರೆಯೇ ಆದ ಅರ್ಥ ಧ್ವನಿಸುತ್ತಿದ್ದವು. ಹೆದ್ದಾರಿ ಮಗ್ಗುಲಿನ ಕಾರ್ಖಾನೆಗಳು, ತುಂಬಿ ಹರಿಯುತ್ತಿದ್ದ ಕಾಲುವೆಗಳು, ವಿಮಾನದಿಂದ ನೋಡಿದಾಗ ನೀರಿನಿಂದ ತುಂಬಿದ್ದ ಕೆರೆ, ಕಿಂಡಿ ಅಣೆಕಟ್ಟೆಗಳು ಕಣ್ಣಿಗೆ ಬೀಳುತ್ತಿದ್ದವು. ಇವೆಲ್ಲವೂ ಗುಜರಾತ್‌ನ ಸಮೃದ್ಧತೆಗೆ ಸಾಕ್ಷಿಯಾಗಿದ್ದವು. ನರೇಂದ್ರ ಮೋದಿ ಅವರು ಅಜೇಯರಾಗಿರುವುದನ್ನು ಗೋಡೆಗಳ ಮೇಲಿನ ಈ ಎಲ್ಲ ಬರಹಗಳು ಸಾಬೀತುಪಡಿಸುತ್ತಿದ್ದವು. ಮೋದಿ ಅವರ ಅಧಿಕಾರಾವಧಿಯಲ್ಲಿ ಗುಜರಾತ್ ರಾಜ್ಯವು ಆರ್ಥಿಕವಾಗಿ ಪ್ರಗತಿಪಥದಲ್ಲಿತ್ತು. ನಿರುದ್ಯೋಗ ಸಮಸ್ಯೆ ಇದ್ದಿರಲಿಲ್ಲ. ಇತರ ಹಿಂದುಳಿದ ವರ್ಗದವರಲ್ಲಿ ಶ್ರೀಮಂತರ ಬಗ್ಗೆ ಹೊಟ್ಟೆಕಿಚ್ಚೂ ಇರಲಿಲ್ಲ. ಮತದಾರರಲ್ಲಿ ನಿರಾಶಾವಾದವೂ ಮನೆ ಮಾಡಿರಲಿಲ್ಲ. ಈಗ ಇವೆಲ್ಲವೂ ಬದಲಾಗಿವೆ. ಉತ್ತರ ಪ್ರದೇಶದಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಕಂಡು ಬಂದಂತಹ ಹತಾಶೆ ಅಥವಾ ನಿರಾಶಾವಾದ ಗುಜರಾತ್‌ನಲ್ಲಿ ಕಂಡು ಬಂದಿರದಿದ್ದರೂ ಅನೇಕರ ಮನದಲ್ಲಿ ಅತೃಪ್ತಿಯಂತೂ ಮನೆ ಮಾಡಿದೆ. ಯುವ ಜನತೆ ತಮ್ಮ ಈ ಆಕ್ರೋಶವನ್ನು ಅಡಗಿಸಿ ಇಡುವ ಪ್ರಯತ್ನವನ್ನೂ ಮಾಡಿಲ್ಲ.

ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶಗಳಲ್ಲೂ ಇದೇ ಬಗೆಯ ಚಿತ್ರಣ ಕಂಡು ಬರುತ್ತದೆ. ಗುಂಪು ಗುಂಪಾಗಿ ಸೇರುವ ತರುಣರು ಬೀಡಿ – ಸಿಗರೇಟ್‌ ಸೇದುತ್ತ ತಮ್ಮ ಮೊಬೈಲ್‌ಗಳಲ್ಲಿ ಇಣುಕಿ ನೋಡುತ್ತ, ಇಸ್ಪೀಟ್‌ ಆಡುತ್ತ ಕಾಲಹರಣ ಮಾಡುತ್ತಿರುತ್ತಾರೆ. ಅವರೇನೂ ಬಡವರಲ್ಲ. ಅವರ ಬಳಿ ಬೈಕ್‌ಗಳಿವೆ. ಆದರೂ ಅವರು ನಿರುದ್ಯೋಗಿಗಳು. ಅವರಲ್ಲಿ ಅನೇಕರು ಮುಂಚೆ ಉದ್ಯೋಗದಲ್ಲಿ ಇದ್ದವರು. ಈಗ ಕೆಲಸಕ್ಕೆ ಎರವಾಗಿದ್ದಾರೆ. ಟಾಟಾ ನ್ಯಾನೊ ಕಾರ್‌ ತಯಾರಿಕಾ ವಲಯದ ಹೃದಯ ಭಾಗದಲ್ಲಿ ಇರುವ ಚರಲ್‌ ಗ್ರಾಮದ ಯುವಕರು ಮೋದಿ ಅವರ ಭಾಷಣ ಅಣಕು ಮಾಡುತ್ತ ತಮ್ಮ ಹಣೆಬರಹ ಶಪಿಸಿಕೊಳ್ಳುತ್ತಿದ್ದರು.

ಅಹ್ಮದಾಬಾದ್‌ನ ಗೋಡೆಬರಹಗಳಲ್ಲೂ ಈಗ ಇಂತಹ ಚಿತ್ರಣ ಕಂಡು ಬರುತ್ತಿದೆ. ನಗರದ ಗೋಡೆಗಳ ಮೇಲೆಲ್ಲ ಜಾಹೀರಾತುಗಳೇ ರಾರಾಜಿಸುತ್ತಿವೆ. ಪಂಜಾಬ್‌ ಮತ್ತು ದೇಶದ ಇತರ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಕಳಪೆ ಶಿಕ್ಷಣದ ಪ್ರವೇಶಕ್ಕೆ ಸಂಬಂಧಿಸಿದ ಜಾಹೀರಾತುಗಳು ಗುಜರಾತ್‌ನಲ್ಲಿಯೂ ಈಗ ಕಣ್ಣಿಗೆ ರಾಚುತ್ತವೆ. ಗುಜರಾತ್‌ನಲ್ಲಿ ಈ ಹಿಂದೆಯೂ ಇಂತಹ ಜಾಹೀರಾತುಗಳು ಕಂಡು ಬಂದಿದ್ದವು. ಆದರೆ, ಈಗ ಅವುಗಳ ಹಾವಳಿ ವಿಪರೀತವಾಗಿ ಹೆಚ್ಚಿದೆ. ಗೋಡೆಗಳಲ್ಲದೆ ಸಣ್ಣ, ಸಣ್ಣ ಫಲಕಗಳು, ಬೀದಿ ಬದಿ ಮಾಹಿತಿ ತಾಣಗಳು, ಕಂಬ, ಕಂಬಗಳ ಮೇಲೆಲ್ಲ ಶಿಕ್ಷಣವನ್ನು ಮಾರಾಟ ಸರಕನ್ನಾಗಿಸಿದ ಜಾಹೀರಾತುಗಳೇ ತುಂಬಿವೆ.

ಅಮೆರಿಕ, ಇಂಗ್ಲೆಂಡ್‌, ಕೆನಡಾ ಮತ್ತು ಆಸ್ಟ್ರೇಲಿಯಾಗಳು ಅಭಿವೃದ್ಧಿಯ ಉತ್ತುಂಗ ಸಾಧಿಸಿವೆ. ಗುಜರಾತಿಗಳ ಪಾಲಿಗೆ ಇವು ಆಕರ್ಷಣೆಯ ಹೊಸ ತಾಣಗಳಾಗಿವೆ. ಇವುಗಳ ಸಾಲಿಗೆ ಈಗ ಪೋಲಂಡ್‌ ಕೂಡ ಸೇರಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲೇಬೇಕೆಂಬ ಹುಚ್ಚು ಆವರಿಸಿದ್ದರೆ ಅದರಿಂದ ಹೊರಬರಲು ಯಾರೊಬ್ಬರಿಗೂ ಸಾಧ್ಯವಾಗಲಾರದು. ವಿದೇಶದಲ್ಲಿನ ಯಾವುದೇ ತಾಣವಾದರೂ ಸರಿಯೇ, ಹೋಗಲೇಬೇಕೆಂಬ ತುಡಿತವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ.

ಇವೆಲ್ಲವೂ ಕೆಲ ಮುಖ್ಯ ಸಂಗತಿಗಳತ್ತ ಗಮನ ಸೆಳೆಯುತ್ತವೆ. ಸ್ಥಳೀಯವಾಗಿ ಉನ್ನತ ಶಿಕ್ಷಣ ಸುಲಭವಾಗಿ ದೊರೆಯದಿರುವುದು, ಕಳಪೆ ಮತ್ತು ಉದ್ಯೋಗ ಖಾತರಿ ನೀಡದ ಇಂತಹ ಶಿಕ್ಷಣದಿಂದ ಹೆಚ್ಚಿನ ಒಳಿತೇನೂ ಆಗಲಾರದು. ಪಂಜಾಬ್‌ನ ಬಹುತೇಕ ವಲಸಿಗರು ಈಗ ಆರ್ಥಿಕವಾಗಿ ನಿರಾಶ್ರಿತರಾಗಿದ್ದಾರೆ. ಗುಜರಾತಿಗರು ಸಹ ವಹಿವಾಟು ಮತ್ತು ಉದ್ದಿಮೆ ವಿಸ್ತರಣೆ ಉದ್ದೇಶಕ್ಕೆ ವಲಸೆ ಹೋಗುತ್ತಾರೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಪೂರಕವಾಗಿ ಇರದಿರುವುದು ಮತ್ತು ನಿರುದ್ಯೋಗ ಸಮಸ್ಯೆಯು, ಸದ್ಯಕ್ಕೆ ಇಂತಹ ವಲಸೆ ಪ್ರವೃತ್ತಿಗೆ ಒತ್ತಾಸೆಯಾಗಿದೆ.

ಅಪೂರ್ಣಗೊಂಡ ಅಪಾರ್ಟ್‌ಮೆಂಟ್‌ನಲ್ಲಿ ನಮಗೆ ಎದುರಾದ 24 ವರ್ಷದ ಯುವಕ, ಗುಜರಾತ್‌ ಯುವ ಸಮುದಾಯದಲ್ಲಿನ ಈ ಹತಾಶೆಯನ್ನೇ ತಮ್ಮ ಸ್ವಂತ ರಾಜಕೀಯಕ್ಕೆ ಇಂಧನವನ್ನಾಗಿ ಪರಿವರ್ತಿಸಿಕೊಂಡಿದ್ದಾರೆ. ಗುಜರಾತ್‌ನ ಬೀದಿಗಳಲ್ಲಿನ ಎರಡನೇ ಅತ್ಯಂತ ಜನಪ್ರಿಯ ನಾಯಕನಾಗಿ ಹಾರ್ದಿಕ್‌ ಪಟೇಲ್‌ ಹೊರಹೊಮ್ಮಿ
ದ್ದಾರೆ. ಯುವ ಸಮುದಾಯದ ಹತಾಶೆಯನ್ನು ತಮ್ಮದೇ ಆದ ವಿಶಿಷ್ಟ ರಾಜಕೀಯಕ್ಕೆ ಬಂಡವಾಳವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ, ಕೇವಲ ಪಟೇಲ್‌ ಸಮುದಾಯದ ಮುಖಂಡನಾಗಿದ್ದರೂ ಸಾವಿರಾರು ಯುವಕರು ಅವರ ಮಾತಿಗೆ ಓಗೊಡುತ್ತಿದ್ದಾರೆ. ಪೊಲೀಸರ ಅಶ್ರುವಾಯು ಷೆಲ್‌ ಮತ್ತು ಗುಂಡುಗಳನ್ನು ಲೆಕ್ಕಿಸದೆ ಬೀದಿಗಿಳಿದು ಪ್ರತಿಭಟಿಸುತ್ತಾರೆ. ನಾಯಕನ ಬೀದಿ ಬದಿ ಪ್ರಚಾರದಲ್ಲಿ ಅತ್ಯುತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇದನ್ನೆಲ್ಲ ನೋಡಿದಾಗ ನನಗೆ 1980ರ ದಶಕದ ಆರಂಭದಲ್ಲಿ ಅಸ್ಸಾಂನಲ್ಲಿ ಕಂಡು ಬಂದಿದ್ದ ವಿದ್ಯಾರ್ಥಿ ಚಳವಳಿ ನೆನಪಾಗುತ್ತದೆ.

ಹಾರ್ದಿಕ್ ಪಟೇಲ್‌ ಅವರ ಹಿಂಬಾಲಕರಲ್ಲಿ ತಮ್ಮ ಮುಖಂಡನ ಬಗ್ಗೆ ಅಪಾರ ನಿಷ್ಠೆ ಇರುವುದು ಕಂಡು ಬರುತ್ತದೆ. ಯುವ ಸಮುದಾಯವು ಅವರನ್ನು ಆರಾಧಿಸುತ್ತಿದೆ. ತಮ್ಮ ಸಮುದಾಯಕ್ಕೆ ಇತರ ಹಿಂದುಳಿದ ವರ್ಗದ (ಒಬಿಸಿ) ಸ್ಥಾನಮಾನ ನೀಡಬೇಕು ಮತ್ತು ಉದ್ಯೋಗ ಮೀಸಲಾತಿ ಕಲ್ಪಿಸಬೇಕು ಎನ್ನುವುದಷ್ಟೇ ಹಾರ್ದಿಕ್‌ ಅವರ ಮುಖ್ಯ ಬೇಡಿಕೆಯಾಗಿದೆ. ಇಂತಹ ಬೀದಿ ಬದಿಯ ಪ್ರಚಾರ ಕಾರ್ಯಕ್ರಮಗಳಲ್ಲಿ ನರೇಂದ್ರ ಮೋದಿ ಅವರಿಗೆ ಅತ್ಯಂತ ಕಠಿಣ ಸ್ಪರ್ಧೆ ನೀಡುವ ಎದುರಾಳಿಯೂ ಬಳಸದ ಕಟು ಮಾತುಗಳು ಕಿವಿಗೆ ಬೀಳುತ್ತವೆ. ಅಂತಹ ಒಂದು ಘೋಷಣೆ ಹೀಗಿದೆ. ದೇಖೊ ದೇಖೊ ಕೌನ್‌ ಆಯಾ, ಮೋದಿ ತೇರಾ ಬಾಪ್‌ ಆಯಾ (ನೋಡಿ, ನೋಡಿ ಯಾರು ಬಂದರು, ಮೋದಿ ನಿನ್ನಪ್ಪ ಬಂದಾ ನೋಡು) ಎನ್ನುವುದು 24 ವಯಸ್ಸಿನ ಯುವಕನ ಬಗ್ಗೆ ಯುವ ಸಮುದಾಯದ ಉದ್ಗಾರ ಇದಾಗಿದೆ.

ಹಾರ್ದಿಕ್‌ ಪಟೇಲ್‌, ಸ್ಥಳೀಯ ಕಾಲೇಜಿನಲ್ಲಿ ಬಿ.ಕಾಂ ಕೋರ್ಸ್‌ಗೆ ಹೆಸರು ನೋಂದಾಯಿಸಿದ್ದರೂ ವಿದ್ಯಾರ್ಥಿ ರಾಜಕೀಯದಿಂದ ಪ್ರವರ್ಧಮಾನಕ್ಕೆ ಬಂದವರಲ್ಲ. ಪಟೇಲ್‌ ಜಾತಿ ಚಳವಳಿಯಲ್ಲಿ ಉದಯಿಸಿದ ಹೊಸ ನಾಯಕ. ‘ಇತರ ಸಮುದಾಯದವರು ನಮ್ಮ ಹೆಣ್ಣುಮಕ್ಕಳನ್ನು ಸೆಳೆದುಕೊಂಡು ಹೋಗುವುದನ್ನು ತಡೆಯುವ ಚಳವಳಿಯಲ್ಲಿ ಭಾಗಿಯಾಗಿದ್ದರಿಂದ ನಾನು ಜನಾನುರಾಗಿ ಆದೆ’ ಎಂದು ಹಾರ್ದಿಕ್‌ ಹೇಳುತ್ತಾರೆ. ಹುರಿದುಂಬಿಸುವ ಜನ ಸಮೂಹ, ಆಳವಾದ ಜಾತೀಯತೆ ಮತ್ತು ಸಾಮಾಜಿಕ ಸಂಪ್ರದಾಯಶೀಲತೆಯು ಅವರ ಅಂತಃಪ್ರೇರಣೆಗಳಾಗಿವೆ. ತಮ್ಮ ಹೋರಾಟದ ಸ್ವರೂಪದ ಬಗ್ಗೆ ಅವರಲ್ಲಿ ಸ್ಪಷ್ಟತೆ ಇದೆ.

‘ನಾನೇಕೆ ಇಷ್ಟು ಜನಪ್ರಿಯನಾಗಿರುವೆ ಎನ್ನುವುದನ್ನು ನೀವು ತಿಳಿದುಕೊಳ್ಳಲು ಇಷ್ಟಪಡುವೀರಾ. ನನ್ನ ಅಜ್ಜಂದಿರು 100 ಬಿಘಾದಷ್ಟು ಭೂಮಿ ಹೊಂದಿದ್ದರು. ನನ್ನ ಪಾಲಿಗೆ ಈಗ ಕೇವಲ ಎರಡು ಬಿಘಾ ಉಳಿದಿದೆ. ಉಳಿದವರ ಪಾಡು ಇದಕ್ಕಿಂತ ಕಡೆಯಾಗಿದೆ. ನಾವು ಬದುಕುಳಿಯಲು ಭೂಮಿ ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಪ್ರತಿಯೊಂದು ಪಟೇಲ್ ಕುಟುಂಬವೂ ಇದೇ ಬಗೆಯ ಸಮಸ್ಯೆ ಎದುರಿಸುತ್ತಿದೆ. ಗುಜರಾತ್‌ನಲ್ಲಿ ಯುವಕರು ಉದ್ಯೋಗ ಅಥವಾ ವಹಿವಾಟು ಇರದಿದ್ದರೆ ಮದುವೆಯೇ ಆಗುವುದಿಲ್ಲ’ ಎಂದು ಹೇಳುತ್ತಾರೆ.

ರಾಜಕೀಯಕ್ಕೆ ಹಾರ್ದಿಕ್ ಹೊಸಬನಾಗಿರಬಹುದು. ಆದರೆ, ಭರವಸೆ ಮೂಡಿಸುವ ರೀತಿಯಲ್ಲಿ ಮಾತನಾಡುತ್ತಾರೆ. ವಯಸ್ಸಿಗೆ ಮೀರಿದ ಪ್ರೌಢತೆ ಅವರಲ್ಲಿ ಕಂಡು ಬರುತ್ತದೆ. ಅಸಾಧಾರಣ ಪ್ರತಿಭೆಯೂ ಅವರಲ್ಲಿ ಇದೆ.

‘ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡಲು ಸಾಧ್ಯವೇ’ ಎಂದು ಪ್ರಶ್ನಿಸಿದರೆ, ‘ವಿಶೇಷ ಅನುಮತಿ ದೊರೆತರೆ ಆ ಬೇಡಿಕೆ ಈಡೇರಲಿದೆ’ ಎನ್ನುತ್ತಾರೆ. ರಾಜ್ಯದಲ್ಲಿ ಮೋದಿ ಅವರನ್ನು ಸೋಲಿಸುವುದೇ ಅವರ ಏಕೈಕ ಉದ್ದೇಶವಾಗಿದೆ. ಬಿಜೆಪಿ ಸರ್ಕಾರವು ಇವರನ್ನು ರಾಜ್ಯದಿಂದಲೇ ಗಡಿಪಾರು ಮಾಡಿತ್ತು. ರಾಜಸ್ಥಾನದ ಉದಯಪುರದಲ್ಲಿ ಗೃಹ ಬಂಧನದಲ್ಲಿ ಇರಿಸಿತ್ತು. ಪೊಲೀಸ್ ಗೋಲಿಬಾರ್‌ನಲ್ಲಿ 15 ಪಾಟಿದಾರರನ್ನು ಬಲಿ ತೆಗೆದುಕೊಂಡಿತ್ತು. ಹಾರ್ದಿಕ್‌, ಅಜ್ಞಾತ ಮಹಿಳೆಯೊಬ್ಬಳ ಜತೆಗೆ ಏಕಾಂತದಲ್ಲಿ ಇದ್ದ ವಿಡಿಯೊವನ್ನೂ (ಸೆಕ್ಸ್‌ ಸಿ.ಡಿ) ಬಹಿರಂಗಪಡಿಸಿತ್ತು.

ಚುನಾವಣೆಗೆ ಸ್ಪರ್ಧಿಸಲು ತಾನಿನ್ನೂ ಚಿಕ್ಕವ ಎನ್ನುವುದನ್ನು ವಿನಯಪೂರ್ವಕವಾಗಿ ಒಪ್ಪಿಕೊಳ್ಳುವ ಹಾರ್ದಿಕ್‌, ತಮಗೆ ಯಾವುದೇ ಹುದ್ದೆಯಲ್ಲಿ ಆಸಕ್ತಿ ಇಲ್ಲ ಎಂದೂ ಹೇಳಿಕೊಳ್ಳುತ್ತಾರೆ. ಹಾರ್ದಿಕ್‌ ಕೋಣೆಯಲ್ಲಿದ್ದ ಬಾಳಾಸಾಹೇಬ್‌ ಠಾಕ್ರೆ ವರ್ಣಚಿತ್ರ ನನ್ನ ಗಮನ ಸೆಳೆಯಿತು. ‘ಇವರು ನಿಮ್ಮ ಆದರ್ಶ ಪುರುಷರೇ?’ ಎಂದು ನಾನು ಪ್ರಶ್ನಿಸಿದ್ದೆ.

‘ನೋಡಿ, ಬಾಳಾಸಾಹೇಬ್‌ ಯಾವತ್ತೂ ರಾಜಕೀಯ ಅಧಿಕಾರ ಅನುಭವಿಸಿದವರಲ್ಲ. ಆದರೆ ರಾಷ್ಟ್ರಪತಿ, ಪ್ರಧಾನಿ ಇವರ ಮನೆಗೆ ಬಂದು ಇವರ ಆತಿಥ್ಯ ಸವಿಯುತ್ತಾರೆ’ ಎಂದು ಹಾರ್ದಿಕ್‌ ಹೇಳುವಾಗ ಅವರ ಕಣ್ಣುಗಳಲ್ಲಿ ಮೆಚ್ಚುಗೆ ಮತ್ತು ಮಹತ್ವಾಕಾಂಕ್ಷೆ ಎರಡನ್ನೂ ಕಾಣಬಹುದಾಗಿತ್ತು. ಯುವ ಹಾರ್ದಿಕ್‌ಗೆ, ಪಟೇಲ್‌ ಸಮುದಾಯದ ಬಾಳಾಸಾಹೇಬ್‌ ಆಗುವ ಹೆಬ್ಬಯಕೆ ಇರುವಂತಿದೆ. ಯಾವುದೇ ಅಧಿಕಾರ ಅನುಭವಿಸದೆ ಬೀದಿ, ಬೀದಿಗಳಲ್ಲಿ ಜನನಾಯಕನಾಗಿ ಮೆರೆಯಬೇಕು ಎನ್ನುವ ಆಕಾಂಕ್ಷೆ ಅವರಲ್ಲಿ ಇದೆ.

ಉದ್ಯಮಶೀಲತೆ ಮತ್ತು ವ್ಯವಹಾರ ಕುಶಲತೆಯ ರಾಜ್ಯದಲ್ಲಿ ಕೃಷಿ ಬೆಳವಣಿಗೆಯೂ ದೇಶದಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಇದೆ. ಇನ್ನೊಂದೆಡೆ ಹಾರ್ದಿಕ್‌ ಅವರ ಪ್ರಭಾವಳಿಯೂ ಹೆಚ್ಚುತ್ತಿದೆ. ರಾಜ್ಯದಲ್ಲಿ ನಿರಾಶಾದಾಯಕ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಅವಕಾಶಗಳು ಕಡಿಮೆ ಇರುವುದು ಗೋಡೆ ಮೇಲಿನ ಬರಹಗಳು ಸ್ಪಷ್ಟಪಡಿಸುತ್ತವೆ. ನಿರುದ್ಯೋಗಿ ಗುಜರಾತಿ ಯುವಕರು ಬೆಲೆ ಇಲ್ಲದ ಡಿಗ್ರಿ ಹೊಂದಿರುವುದು ಅಥವಾ ಪದವಿಯೇ ಹೊಂದಿಲ್ಲದಿರು
ವುದು ಹಾರ್ದಿಕ್‌ ಅವರ ಹಿಂಬಾಲಕರಲ್ಲಿ ಆಕ್ರೋಶ ಹೆಚ್ಚಿಸಿದೆ.

ಈಗ ಗುಜರಾತ್‌ನಲ್ಲಿ ಕೆಲ ಮಟ್ಟಿಗಿನ ಬದಲಾವಣೆಯಂತೂ ಗೋಚರಿಸುತ್ತದೆ. ಅನೇಕರು ತಮ್ಮದೇ ಸರ್ಕಾರದ ವಿರುದ್ಧ ದೂರುತ್ತಿರುವುದು ಕಿವಿಗೆ ಬೀಳುತ್ತದೆ. 2002ರ ನಂತರದ ತಮ್ಮ ಬದುಕಿನ ಬಗ್ಗೆ ಅವರೆಲ್ಲ ಗೊಣಗುತ್ತಿದ್ದಾರೆ. ಒಂದು ವೇಳೆ ಮತಗಟ್ಟೆ ಸಮೀಕ್ಷೆಗಳು ನಿಜವಾಗಿದ್ದರೆ ಮತ್ತು ಹೇಳಿಕೆ ಬದಲಿಸಿದ ಚುನಾವಣಾ ಶಾಸ್ತ್ರಜ್ಞ ಯೋಗೇಂದ್ರ ಯಾದವ್‌ ಅವರ ರಾಜಕೀಯ ಭವಿಷ್ಯ ವಾಣಿಯಂತೆ ಬಿಜೆಪಿ ಗೆಲುವು ಸಾಧಿಸಲಿದೆ.

ಇಂಡಿಯಾ ಟುಡೆ ಸಮೂಹದ ಮತಗಟ್ಟೆ ಸಮೀಕ್ಷೆಯಲ್ಲಿ ಕಂಡುಕೊಂಡಿರುವ ಕೆಲ ಮಹತ್ವದ ಸಂಗತಿಗಳನ್ನು ಇಲ್ಲಿ ನಿರ್ಲಕ್ಷಿಸಲಿಕ್ಕಾಗದು. ಎಲ್ಲ ವಯೋಮಾನದವರಲ್ಲಿ ಬಿಜೆಪಿ ಮತ್ತು ಮೋದಿ ಮುಂಚೂಣಿಯಲ್ಲಿ ಇದ್ದರೂ, 18 ರಿಂದ 25 ವಯಸ್ಸಿನವರಲ್ಲಿ ಮಾತ್ರ ಕಾಂಗ್ರೆಸ್‌ ಹೆಚ್ಚು ಜನಪ್ರಿಯತೆ ಹೊಂದಿದೆ. ಇದು ಬಿಜೆಪಿಯ ಪಾಲಿಗೆ ಎಚ್ಚರಿಕೆಯ ಸಂಕೇತವಾಗಿದೆ. ಇಲ್ಲಿಯವರೆಗೆ ಯುವ ಸಮುದಾಯವು ಮೋದಿ ಅವರ ಶಕ್ತಿಯಾಗಿತ್ತು. ಈಗ ಅದು ದುರ್ಬಲಗೊಳ್ಳುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಬಿಕ್ಕಟ್ಟು, ಉದ್ಯೋಗ, ತಯಾರಿಕಾ ವಲಯದಲ್ಲಿನ ಮಂದಗತಿ ಮತ್ತು ಕುಂಠಿತ ವ್ಯಾಪಾರದಿಂದಾಗಿ ಯುವಕರ ಕನಸುಗಳು ಕಮರುತ್ತಿವೆ.

ಇವೇ ಮತಗಟ್ಟೆ ಸಮೀಕ್ಷೆಗಳು, ಮೋದಿ ಮತ್ತು ಬಿಜೆಪಿಯು ವಯಸ್ಸಾದವರ ವಿಭಾಗದಲ್ಲಿ ಮಾತ್ರ ಹೆಚ್ಚು ಬೆಂಬಲಿಗರನ್ನು ಹೊಂದಿವೆ ಎಂದೂ ಹೇಳುತ್ತವೆ. ಭವಿಷ್ಯದ ಆಶಾಕಿರಣ ಎಂದು ಹೋದಲ್ಲೆಲ್ಲ ಮೋದಿ ಅವರು ಪ್ರತಿಪಾದಿಸುವ ಯುವ ಸಮುದಾಯವು ಈಗ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ.

ಬಿಜೆಪಿಯ ಗೆಲುವಿನ ಓಟ ಏನೇ ಇರಲಿ, ಪಕ್ಷಕ್ಕೆ ಸ್ಥಳೀಯ ನಾಯಕತ್ವದ ಅಗತ್ಯ ಇದೆ. ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಒತ್ತು ನೀಡಬೇಕಾಗಿದೆ. ಇಲ್ಲದಿದ್ದರೆ ಅದರ ಜನಪ್ರಿಯತೆಯ ಕುಸಿತ ತೀವ್ರಗೊಳ್ಳಲಿದೆ. ಈ ಬಗ್ಗೆ ಗೋಡೆ ಮೇಲಿನ ಬರಹ ಸ್ಪಷ್ಟ ಸಂದೇಶ ನೀಡುತ್ತಿದೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT