ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿ ಚರ್ಚು ಮಸೀದಿಗಳ ಬಿಟ್ಟ ದೇವರು ‘ಅಮ್ಮ’ ಆದ!

Last Updated 4 ಮೇ 2016, 19:30 IST
ಅಕ್ಷರ ಗಾತ್ರ

ಚಿತ್ರಾಳ ಅಣ್ಣ ಡ್ರಗ್ಸ್ ಸೇವಿಸಿ ಓವರ್ ಡೋಸ್ ಆಗಿ ತಂದೆ ತಾಯಿಗೆ ವಿಚಾರ ತಿಳಿದು ಅವನನ್ನು ಮೊದಲು ಆಸ್ಪತ್ರೆಗೆ ಸೇರಿಸಿ, ನಂತರ ಪುನರ್ವಸತಿ ಕೇಂದ್ರಕ್ಕೆ ಸೇರಿಸಿ ಬಹಳ ಕಷ್ಟದ ದಿನಗಳನ್ನು ಸವೆಸಬೇಕಾಯಿತು. ಅಷ್ಟೂ ದಿನಗಳೂ ಚಿತ್ರಾಗೆ ನರಕವೇ. ಮೊದಮೊದಲು ಫೋನ್ ಮಾಡಿದಾಗಲೆಲ್ಲ ಅವಳ ಅಪ್ಪ ಅಮ್ಮ ಅವಳನ್ನೇ ದೂರುತ್ತಿದ್ದರು.

ಅವಳೂ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ಸ್ಪಷ್ಟವಾಗದೆ ಸುಮ್ಮನೆ ಅಪರಾಧೀ ಪ್ರಜ್ಞೆಯಲ್ಲಿ ನರಳುತ್ತಿದ್ದಳು. ಆದರೆ, ಯಾವಾಗಲೋ ಒಮ್ಮೆ ಒಳಗಿನೆ ಜ್ವಾಲಾಮುಖಿ ಸ್ಫೋಟಗೊಳ್ಳಬೇಕಲ್ಲ? ಇನ್ನೊಮ್ಮೆ ಫೋನ್ ಮಾಡಿದಾಗ ಅವರಮ್ಮ ಅಳುತ್ತಾ ಮಾತಾಡಿದರಂತೆ. ಇವಳೂ ಯಾಕೋ ಕೆಟ್ಟ ಕೋಪದಲ್ಲೇ ಇದ್ದಳು. ಹಿಂದೆ ಮುಂದೆ ನೋಡದೆ ಝಾಡಿಸಿಬಿಟ್ಟಳು.

‘ಅಲ್ಲಮ್ಮಾ... ಅವನ ಡ್ರಗ್ಸ್ ಹವ್ಯಾಸ ನನಗೆ ಗೊತ್ತಿತ್ತಾ? ಯಾಕೆ ನನ್ನ ಮೇಲೆ ಗೂಬೆ ಕೂರುಸ್ತೀರಾ? ನೀವು ಕೊಡ್ತಿರೋ ದುಡ್ಡಲ್ಲೂ ಅವನು ಡ್ರಗ್ಸ್ ತಗೊಂಡಿದ್ರೆ ನೀನೇನು ಮಾಡೋಕಾಗ್ತಿತ್ತು? ಸುಮ್ಮನೆ ನನ್ನ ಮೇಲೆ ರೇಗ್ತೀರಲ್ಲಾ? ನಾನು ಬೇಕಂತ ಮಾಡಿದ್ದಾ?’ ಅಂತ ಹೇಳಿದರೆ ಅವರಮ್ಮ ಯಾವ ಮಾತಿಗೂ ಕಿವಿಗೊಡುವ ಸ್ಥಿತಿಯಲ್ಲಿ ಇರಲೇ ಇಲ್ಲ.

‘ನನಗೆ ಸುಸ್ತಾಗಿ ಹೋಗಿದೆ ಚಿತ್ರಾ. ಅವನು ಡ್ರಗ್ಸ್ ತಗೊಂಡು ಹಾಳಾಗಿದ್ದಕ್ಕೆ ನಿಮ್ಮಪ್ಪ ನನ್ನನ್ನ ಬೈತಾರೆ. ನೀನೂ ನನ್ನೇ ಬೈತೀಯ. ಚಿತ್ತಿ ದುಡ್ಡು ಕಳಿಸೋದ್ರಿಂದಲೇ ಅವನ ಜೀವನ ಹಾಳಾಯ್ತು ಅಂತ ಅಪ್ಪ ನಂಬಿಬಿಟ್ಟಿದ್ದಾರೆ ಕಣೇ. ಅವನು ಪಿಯು ಓದುತ್ತಿರುವಾಗಲಿಂದಲೂ ಇದೇ ಕೆಲಸ ಮಾಡುತ್ತಿದ್ದನಂತೆ. ನಮಗೆ ಗೊತ್ತಾಗ್ಲೇ ಇಲ್ಲ’ ಎಂದು ಅವಳ ಅಮ್ಮ ಬಹಳ ನೊಂದುಕೊಂಡು ಹೇಳಿದರು.

ಚಿತ್ರಾಗೆ ತಾಯಿ ಅಳುವುದನ್ನು ಕೇಳಿ ಮನಸ್ಸು ಸ್ವಲ್ಪ ಕರಗಿತು. ಆದರೂ ಮೊದಲೆಲ್ಲಾ ತನಗೆ ಬಯ್ದದ್ದು ನೆನಪಾಗಿ ಸಿಟ್ಟು ಮತ್ತೆ ಏರಿತು. ‘ಅಮ್ಮಾ, ಅವನಿಗೆ ಮೆಡಿಕಲ್ ಸೇರಕ್ಕೆ ಇಷ್ಟ ಇರಲಿಲ್ಲ. ನೀವೇ ಬಲವಂತ ಮಾಡಿ ಸೇರಿಸಿದ್ರಿ. ಅಪ್ಪ ಅಂತೂ ನಮ್ ಆಫೀಸ್ ಪ್ಯೂನ್ ಮಗ ಮೆರಿಟ್ಟಲ್ಲಿ ಮೆಡಿಕಲ್ ಸೇರ್ಕೊಂಡಿದಾನೆ, ಇವನು ಪೇಮೆಂಟಲ್ಲಾದ್ರೂ ಸೇರ್ಕೋಬೇಕು ಅಂತ ಹಟ ಮಾಡಿ ಸೇರಿಸಿದರು.

ಅವನಿಗೆ ಗಿಟಾರ್ ಕಲಿಯೋ ಆಸಕ್ತಿ ಇತ್ತು. ಚೆನ್ನಾಗ್ ಹಾಡ್ತಿದ್ದ. ಅದನ್ನೆಲ್ಲಾ ಬಂದ್ ಮಾಡಿಸಿದ್ರಲ್ಲಾ ಅವನಿಗೆ ಎಷ್ಟು ಸಂಕಟ ಆಗಿರಬೇಕಮ್ಮಾ? ಅಪ್ಪ ಯಾಕಮ್ಮಾ ಹಂಗೆ ಮಾಡಿದ್ರು?’ ಅಂತ ಕೇಳುತ್ತ ಅತ್ತೇ ಬಿಟ್ಟಳು. ಆದರೂ ಅಣ್ಣ ತನ್ನ ಜೀವನದ ಹಣೆ ಬರಹವನ್ನು ಬೇರೆ ಥರ ಬರೆದುಕೊಳ್ಳಬಹುದಿತ್ತು ಅಂತ ಅನ್ನಿಸದೆ ಇರಲಿಲ್ಲ.

ಪೀಜಿಗೆ ವಾಪಸ್‌ ಬಂದಾಗ ಅವಳ ಕಣ್ಣುಗಳು ಊದಿಕೊಂಡಿದ್ದವು. ಸರಳಾ ಹೊರಗೆ ಕುಳಿತಿದ್ದವರು ಒಳಗೆ ಹೋಗುತ್ತಿದ್ದವಳನ್ನು ಮಾತಾಡಿಸಿದರು. ‘ಬಾ! ಟೀ ಮಾಡಿಕೊಡ್ತೀನಿ.

ಕೂತು ಮಾತಾಡೋಣ’ ಅಂದರು. ಹಾಗೆ ನೋಡಿದರೆ ಚಿತ್ರಾಗೆ ಸರಳಾ ಹತ್ತಿರ ಹೇಳಿಕೊಳ್ಳಬೇಕೆನ್ನುವ ಉದ್ದೇಶ ಇರಲಿಲ್ಲ. ಆದರೆ, ಮಾತಾಡದೆ ಇರಲು ಕಾರಣವೂ ಇರಲಿಲ್ಲ. ಹೇಳಿದರೆ ಕಳಕೊಳ್ಳುವಂಥದ್ದು ನೋವು ಮಾತ್ರ. ಹಾಗಿರುವಾಗ ಊರಲ್ಲದ ಊರಲ್ಲಿ ಯಾರೋ ನಿನ್ನ ದುಃಖ ಕೇಳ್ತೀನಿ ಅಂತ ಹೇಳಿದರೆ ಖುಷಿ ಪಡಬೇಕೋ ಇಲ್ಲಾ ಆಸ್ತಿ ಹೋದ ಹಾಗೆ ಅಳಬೇಕೋ?

ತನ್ನ ಮತ್ತು ತನ್ನ ಅಣ್ಣನ ನಡುವೆ ತಂದೆ ತಾಯಿ ಭೇದ ಮಾಡುತ್ತಿರಲಿಲ್ಲವಾದರೂ, ಸ್ವಲ್ಪ ಮಟ್ಟಿಗೆ ಕಂಡೂ ಕಾಣದಂತೆ ತನ್ನ ಮಟ್ಟಿಗೆ ಹೆಚ್ಚು ದೂರದೃಷ್ಟಿ ಇಟ್ಟುಕೊಳ್ಳದೆ, ಅಣ್ಣನ ವಿಷಯದಲ್ಲಿ ಬಹಳ ಚುರುಕಾಗಿ ಯೋಚಿಸುತ್ತಿದ್ದ ಬಗ್ಗೆ ಚಿತ್ರಾ ಬಹಳ ವಿಚಲಿತಳಾಗುತ್ತಿದ್ದಳು.

‘ಯಾಕೆ ಹೀಗೆ?’ ಅಂತ ಯೋಚಿಸಿದರೆ ತನ್ನ ಮದುವೆ ಪ್ರಶ್ನೆ ಅವರ ತಲೆಯ ಮೇಲಿನ ಭಾರ ಎನ್ನುವುದು ತಿಳಿಯಿತು. ‘ನಾನು ಮೆರಿಟ್ಟಲ್ಲೇ ಓದಿದೆ ಅಂತ ಎಂಜಿನಿಯರಿಂಗ್ ಸೇರಿಸಿದ್ರು ಕಣ್ರೀ. ಇಲ್ಲಾಂದ್ರೆ ಅದನ್ನೂ ಮಾಡ್ತಿರಲಿಲ್ಲವೇನೋ ನಮ್ತಂದೆ ತಾಯಿ’ ಅಂತ ಸ್ವಲ್ಪ ಖಾರವಾಗಿಯೇ ಅಭಿಪ್ರಾಯಗಳನ್ನು ಹೇಳಿಕೊಂಡಳು.

ಸರಳಾ ಬಹಳ ತಾಳ್ಮೆಯಿಂದ ಕೇಳಿಕೊಂಡರು. ಅವರಿಗೂ ಹೆಚ್ಚು ಜನ ಸಂಬಂಧಿಗಳು ಅಂತ ಇರಲಿಲ್ಲ. ಇಂದಿರಾನಗರ ಬಿಡಿಏ ಕಾಂಪ್ಲೆಕ್ಸಿನಲ್ಲಿ ಪಾರ್ಲರ್ ಇಟ್ಟುಕೊಂಡಿದ್ದ ಯಾರೋ ಫ್ರೆಂಡ್ ಒಬ್ಬಳ ಹತ್ತಿರ ಮಾತಾಡೋದನ್ನ ಬಿಟ್ಟರೆ ಇನ್ಯಾರೂ ಇದ್ದಂತಿರಲಿಲ್ಲ. ಹಾಗಂತ ಅವರು ಮುದಿಗೂಬೆ ಥರಾ ಬದುಕುತ್ತಿದ್ದರು ಅಂತ ಅಂದುಕೊಂಡರೆ ಅದು ನಿಮ್ಮ ಮನಸ್ಸಿನ ಬಡತನವಾದೀತು. ಇದ್ದಲ್ಲೇ ಜಗತ್ತನ್ನು ಕಟ್ಟಿಕೊಳ್ಳುವ ಲವಲವಿಕೆ ಸ್ವಭಾವ ಅವರದ್ದು.

ಅದಕ್ಕಾಗಿಯೇ ಗುರುತು ಪರಿಚಯ ಇಲ್ಲದ ಹುಡುಗಿ ಕಷ್ಟ ಕೇಳಲು ಕುಳಿತಿದ್ದರು. ಚಿತ್ರಾ ಹೇಳುವುದನ್ನೆಲ್ಲಾ ಹೇಳಿಕೊಂಡು ಅತ್ತು ಕರೆದು ಮಾಡಿದ ಮೇಲೆ ಸುಮ್ಮನೆ ಅವಳ ಬೆನ್ನ ಮೇಲೆ ಕೈ ಇಟ್ಟರು. ಆಗ ತಾನೇ ಅತ್ತು ಮುಗಿದಿದ್ದರೂ ಮತ್ತೆ ಕೆರೆ ಕೋಡಿ ಬಿದ್ದಂತೆ ‘ಹೋ!!!!!!!!’ ಎಂದು ಅಳಲು ಶುರು ಮಾಡಿದಳು ಚಿತ್ರಾ.

ಇದೆಲ್ಲದರ ಮಧ್ಯಂತರ ಎನ್ನುವಂಥ ಸಮಯದಲ್ಲಿ ಅಂದರೆ ಹಿಂದು ಮುಂದು ಅರ್ಥವಾಗದಂಥಾ ಭಾವೋತ್ಕಟತೆಯ ಹೊತ್ತಿನಲ್ಲಿ ಸೂಸಿ ಮತ್ತು ವಿಜಿ ಚಿತ್ರಾಳನ್ನು ವಿಚಾರಿಸಲೆಂದು ಬಂದರು. ಸರಳಾ, ಚಿತ್ರಾ ಇಷ್ಟು ಕ್ಲೋಸ್ ಆಗಿ ಮಾತನಾಡುತ್ತಿದ್ದುದನ್ನು ನೋಡಿ ಏನೋ ಮಸಲತ್ತು ನಡೆದಿದೆ ಎಂದೇ ಸೂಸನ್ ತಿಳಿದಳು.  ಏನು ನಡೆದಿರಬಹುದು ಅಂತ ತಿಳಿದುಕೊಳ್ಳುವ ಪ್ರಯತ್ನದಲ್ಲಿ ವಿಜಿ ವಿಷಯ ಪ್ರಸ್ತಾಪ ಮಾಡುವ ಬಗ್ಗೆ ಯೋಚಿಸುತ್ತಿರುವಾಗಲೇ ಸೂಸನ್ ಎಂಬ ಅತಿ ಅವಸರದ ಬಾಲೆ ಸರಳಾರನ್ನು ಸಂಶಯದ ದೃಷ್ಟಿಯಿಂದ ನೋಡತೊಡಗಿದಳು.

‘ಏನಂದ್ರಿ ಆಂಟಿ ಅವಳಿಗೆ? ಮೊದಲೇ ಕಷ್ಟದಲ್ಲಿದಾಳೆ ಅವಳು. ಅದರ ಮೇಲೆ ನಿಮ್ಮ ಎನ್‌ಕ್ವೈರಿ ಬೇರೆ. ನಿಮಗೆ ಸುಮ್ಮನೆ ಇರಕ್ಕಾಗಲ್ವಾ? ಅವಳಿಗೆ ನೋವಾಗೋ ಹಾಗೆ ಮಾತಾಡಿದ್ರಾ? ನಿಮಗೇನು ಗೊತ್ತಾಗುತ್ತೆ ಅಪ್ಪ ಅಮ್ಮನ ಹತ್ರ ಅನ್ನಿಸಿಕೊಂಡು ಬದುಕೋ ಕಷ್ಟ!’ ಅಂತ ಧಡಭಡ ಮಶಿನ್ ಗನ್ ಥರ ಮಾತುಗಳನ್ನು ಉದುರಿಸಿದಳು. ಆ ಸ್ಪೀಡಿಗೆ ಸರಳಾ ಗಾಬರಿಯಾದರು. ಚಿತ್ರಾಗೆ ಸಿಕ್ಕಾಪಟ್ಟೆ ಕಸಿವಿಸಿ ಆಯಿತು. ಅವಳಿಗೆ ಅನ್ನುವಂತಿಲ್ಲ, ಸುಮ್ಮನಿದ್ದು ಅನುಭವಿಸುವಂತಿಲ್ಲ... ಏನಪ್ಪಾ ಈ ಥರದ ಕುತ್ತಿಗೆ ಹಿಸುಕುವ ಸ್ನೇಹ ಅಂತ ತಲೆ ಕೆಟ್ಟೇ ಹೋಯಿತು...

‘ಸೂಸಿ...ಕಾಮ್ ಡೌನ್... ರಿಲ್ಯಾಕ್ಸ್... ಸುಮ್ಮನೆ ಇರು. ಅವರೇನೂ ತಪ್ಪು ಮಾತಾಡಲಿಲ್ಲ... ಸುಮ್ಮನೆ ನನ್ನ ಲೈಫ್ ಬಗ್ಗೆ ಮಾತಾಡಿಕೊಳ್ತಾ ಇದ್ವಿ... ಪ್ಲೀಸ್ ಬಾಯಿ ಮುಚ್ಚಿಕೋ’ ಚಿತ್ರಾ ಸ್ವಲ್ಪ ಜೋರಾಗೇ ಹೇಳಿದಳು. ಸಮಸ್ಯೆ ಏನೆಂದರೆ ಸೂಸನ್ ತನ್ನ ಪ್ರಾಬ್ಲಮ್ಮುಗಳನ್ನೆಲ್ಲಾ ಬದಿಗಿಟ್ಟು ಈಗ ಬೇರೆಯವರಿಗೆ ಸಹಾಯ ಮಾಡುವುದೇ ತನ್ನ ಜೀವನದ ಧ್ಯೇಯ ಅಂತ ನಂಬಿಬಿಟ್ಟಿದ್ದಳು.

‘ಜೀಸಸ್ಸು ನನ್ನ ದುಡ್ಡು ಕಳೆದದ್ದೇ ನನಗೆ ಬುದ್ಧಿ ಬರಲಿ ಅಂತ ಕಣೇ. ಇಲ್ಲಾಂದ್ರೆ ಬೇರೆಯವರಿಗೆ ನಾನು ಹೇಗೆ ಸಹಾಯ ಮಾಡೋಕಾಗ್ತಿತ್ತು?’ ಅಂತ ಆಗಾಗ ಪಾರಮಾರ್ಥಿಕ ಚಿಂತನೆ ಕೂಡ ಮಾಡುತ್ತಿದ್ದಳು. ಇದನ್ನ ಕೇಳೀ ಕೇಳೀ ಚಿತ್ರಾ, ವಿಜಿ ಇಬ್ಬರಿಗೂ ಒಂಥರಾ ಜ್ವರ ಬಂದ ಹಾಗೆ ಆಗುತ್ತಿತ್ತು. ‘ಇವಳು ಕಾಸಿಗೆ ಕಾಸು ಗಂಟಾಕ್ಕೊಂಡಿರುವಾಗಲೇ ಸರಿ ಇದ್ಲು ಅನ್ಸುತ್ತೆ.

ಈಗ ನೋಡು ಸುಮ್ಮನೆ ಜಬರ್ದಸ್ತಿ ಬಂದು ಸಹಾಯ ಮಾಡ್ತೀನಿ ಅಂತಾಳೆ. ಆಗ ಒಂಥರಾ ಪೀಡೆ ಆದ್ರೆ ಈಗ ಇನ್ನೊಂಥರಾ ಪೀಡೆ ಇವಳದ್ದು’ ಅಂದುಕೊಳ್ಳುತ್ತಿದ್ದರು. ಆದರೆ ಸೂಸಿಗೆ ಇದ್ಯಾವುದೂ ಮನಸ್ಸಿಗೆ ನಾಟುತ್ತಿರಲಿಲ್ಲ. ಚರ್ಚಿಗೆ ಹೆಂಗೂ ಹೋಗುತ್ತಿದ್ದಳಲ್ಲಾ? ಅಲ್ಲಿ ಇವಳಿಗೆ, ಇವಳಂತೆ ಬೇರೆಯವರಿಗೆ ಸಹಾಯ ಮಾಡ್ತೀನಿ ಅನ್ನುವ ಹುಚ್ಚು ಹಿಡಿದವರಿಗೆ ಫ್ರೀ ಬೈಬಲ್ ಕಾಪಿ ಕೊಡುತ್ತಿದ್ದರು.

ಪೀಜಿಯಲ್ಲಿ ಯಾರಿಗಾದರೂ ಹುಷಾರಿಲ್ಲ ಅಂದರೆ ಸಾಕು, ಅವರ ಪಕ್ಕ ಹೋಗಿ ಬೈಬಲ್ ಓದುತ್ತಾ ಕೂತುಬಿಡುತ್ತಿದ್ದಳು. ಅವರು ಅನ್ನುವಂತಿರಲಿಲ್ಲ, ಅನುಭವಿಸುವಂತಿರಲಿಲ್ಲ.

ಆದರೆ ಕೆಲವರು ತೀರಾ ಸಹಿಸಿಕೊಳ್ಳಲಾಗದೆ ಇರುವವರು ಬೈದು ಕಳಿಸುತ್ತಿದ್ದರು. ಅದರಿಂದ ಇವಳಿಗೆ ಬೇಜಾರಾಗುತ್ತಿತ್ತೇನು? ಊಊಊಹೂಹೂಹೂಂ! ಎಷ್ಟೆಷ್ಟೂ ಇಲ್ಲ.

‘ಜೀಸಸ್ ನನಗೆ ಹೆಲ್ಪ್ ಮಾಡಕ್ಕೆ ಶಕ್ತಿ ಕೊಟ್ಟಿದಾರೆ. ಅದಕ್ಕೆ ದಾರಿಯಲ್ಲಿ ಇಷ್ಟೊಂದು ಕಷ್ಟಗಳು ಬರುತ್ತೆ. ನಿನ್ನ ಶತ್ರುವನ್ನೂ ಪ್ರೀತಿಸು ಅಂತ ದೇವರ ಮಗ ನಮಗೆ ಹೇಳಿದಾರೆ.

ಫಾದರ್ರು ಚರ್ಚಲ್ಲಿ ಪ್ರತೀ ಸಂಡೇ ಇದನ್ನೇ ಹೇಳೋದು ನಮಗೆ’ ಅಂತ ತಾನೇನೋ ತ್ಯಾಗಜೀವಿ ಎನ್ನುವಂತೆ ಮಾತಾಡುತ್ತಿದ್ದಳು. ಇದನ್ನೆಲ್ಲಾ ನೋಡುತ್ತಾ ನೋಡುತ್ತಾ ಚಿತ್ರಾ ಮತ್ತು ವಿಜಿ ಇವಳು ನಾರ್ಮಲ್ ಆಗುತ್ತಾಳೆ ಎನ್ನುವ ಆಸೆಯನ್ನೇ ಬಿಟ್ಟಿದ್ದರು. ಯಾವಾಗ ಸರಳಾ ಮೇಲೆ ರೇಗಿ ಬಾಣ ಬಿಟ್ಟಂತೆ ಮಾತಾಡಿದಳೋ, ಆಗ ಸರಳಾಗೆ ರುಮ್ಮನೆ ಸಿಟ್ಟು ಏರಿದರೂ ಒಮ್ಮೆ ಬಿಡುಗಣ್ಣು ಬಿಟ್ಟು ಸುಮ್ಮನಾದರು.

‘ಸುಮ್ಮನೆ ಕೂತ್ಕೋ. ನಿನಗೇನು ಅನುಭವ ಇದೆ ಜೀವನದಲ್ಲಿ? ಸುಮ್ಮನೆ ಸಹಾಯ ಮಾಡ್ತೀನಿ ಅಂತ ಓಡಾಡೋದು, ಅಲ್ಲಿ ಇಲ್ಲಿ ಬೈಬಲ್ ತಂದಿಟ್ಟು ಕಾಟ ಕೊಡ್ತೀಯಾ’ ಅಂತ ಹೇಳಿಬಿಟ್ಟರು.

ಸೂಸಿ ಸುಮ್ಮನೆ ಚಿತ್ರಾ, ವಿಜಿ ಮುಖ ನೋಡಿದಳು. ಆದದ್ದು ಇಷ್ಟು. ಯಾವಾಗಲೋ ಸರಳಾ ಹುಷಾರಿಲ್ಲ ಅಂತ ಮಲಗಿದ್ದಾಗ ಇವಳು ಅವರ ಪಕ್ಕ ಬೈಬಲ್ ತಂದಿಟ್ಟು ಹೋಗಿದ್ದಾಳೆ. ಎಷ್ಟೆಂದರೂ ಅವಳಿಗೆ ಪರೋಪಕಾರಾರ್ಥಂ ಇದಂ ಶರೀರಂ ಎನ್ನುವ ಹೊಸ ಹುಚ್ಚು ಮೆಟ್ಟಿಕೊಂಡಿತ್ತು ತಾನೆ?

ಸರಳಾ ಮಲಗಿದ್ದ ಕಾರಣ ಬೇರೆ. ಅವರಿಗೆ ಮುಟ್ಟು ನಿಲ್ಲುವ ಸಮಯವಾಗಿತ್ತು. ನಲವತ್ತು ದಾಟಿದ ಮೇಲೆ ಋತುಚಕ್ರದ ನೋವುಗಳು, ಅಸಹಾಯಕತನಗಳು, ಆ ಹಾರ್ಮೋನಿನ ಏರುಪೇರು, ಮಿಗಿಲಾಗಿ ಹೊಸ ಜಾಗ, ಒಂಟಿತನ—ಎಲ್ಲವೂ ಸೇರಿ ಒಂದು ವಿಚಿತ್ರ ರೀತಿಯ ಗಟ್ಟಿತನವನ್ನು ಅವರ ವ್ಯಕ್ತಿತ್ವಕ್ಕೆ ತಂದು ಕೊಟ್ಟಿದ್ದವು.

ಮಾನಸಿಕ ಹಾಗೂ ದೈಹಿಕ ನೋವನ್ನು ಮೀರುವುದೆಂದರೆ ಸುಲಭವೇನು? ನನ್ನ ದೇಹ ನನ್ನ ನಿಯಂತ್ರಣದಲ್ಲಿ ಇಲ್ಲ ಎನ್ನಿಸುವಾಗಲೂ ತನ್ನ ಕೆಲಸ ತಾನು ಮಾಡಿಕೊಳ್ಳುತ್ತಾ ಲವಲವಿಕೆಯಿಂದ ಇರುವುದು ಕಷ್ಟ. ಕೆಲವೊಮ್ಮೆ ಸರಳಾ ಅವರ ಮನೋಬಲವನ್ನೂ ಮೀರಿ ಋತುಚಕ್ರದ ನೋವು ಅವರನ್ನು ಮಲಗಿಸಿಬಿಡುತ್ತಿತ್ತು. ಆಗ ಯಾರನ್ನೂ ಮಾತಾಡಿಸದೆ ಸುಮ್ಮನೆ ಇರುತ್ತಿದ್ದರು. ಎಚ್ಚರಾದರೆ ಯಾವುದಾದರೂ ಪುಸ್ತಕ ಓದುವುದು, ಇಲ್ಲಾಂದರೆ ಮಲಗುವುದು...ಇಷ್ಟೇ ದಿನಚರಿ.

ಅಂಥಾ ಒಂದು ಸಂದರ್ಭದಲ್ಲಿ ಸರಳಾ ಮಲಗಿದ್ದಾಗ ಸೂಸನ್ ಎನ್ನುವ ಜ್ಞಾನೋದಯವನ್ನು ಹೊಂದಿದ ಧಾರ್ಮಿಕ ಭಾವನೆಗಳುಳ್ಳ ಹರೆಯದ ಹುಡುಗಿ ಅವರ ಟೇಬಲ್ಲಿನ ತುದಿಗೆ ಬೈಬಲ್ ಅನ್ನು ಇಟ್ಟು ಮರೆಯಾದಳು. ಸರಳಾಗೆ ಎಚ್ಚರವಾದಾಗ ಟೇಬಲ್ ತುದಿಗಿದ್ದ ಬೈಬಲ್ ಅನ್ನು ಗೊತ್ತಿಲ್ಲದೆ ಮುಟ್ಟಿದ್ದಾರೆ. ಅದು ಕೆಳಗೆ ಬಿದ್ದಿದೆ. ಅಷ್ಟಕ್ಕೇ ಅವರಿಗೆ ಕಸಿವಿಸಿ ಶುರುವಾಗಿದೆ. ಸೂಸನ್ ಅನ್ನು ಕರೆದು ಈ ಪುಸ್ತಕ ನೀನು ಇಟ್ಟಿದ್ದಾ ಅಂತ ಕೇಳಿದರೆ ಹುಡುಗಿ ಅಭಿಮಾನದಿಂದ ಹೂಂ ಎಂದಿದ್ದಾಳೆ.

‘ತಲೆ ಹರಟೆ! ಇನ್ನೊಂದ್ಸಾರಿ ಹಿಂಗೆಲ್ಲಾ ಪುಸ್ತಕ ಇಟ್ರೆ ಓನರ್ರಿಗೆ ಕಂಪ್ಲೇಂಟ್ ಕೊಡ್ತೀನಿ. ಏನಂದ್ಕೊಂಡಿದೀಯ ನೀನು?’ ಅಂತ ಬಯ್ದು ಬಿಟ್ಟಿದಾರೆ.ತಾನು ಒಳ್ಳೆಯದನ್ನೇ ಮಾಡುತ್ತಿದ್ದೇನೆ ಅಂತ ನಂಬಿರುವ ಸೂಸನ್ ಅಕ್ಕನಿಗೆ ಸರಳಾ ಬಯ್ದದ್ದು ಯಾಕೆ ಅಂತ ಅರ್ಥವಾಗಿಲ್ಲ. ‘ಓಹೋ! ಇವರ ದ್ವೇಷ ದೇವರ ವಾಣಿ ಮೇಲೆ ಇದೆ. ಪವಿತ್ರ ಗ್ರಂಥವನ್ನು ದ್ವೇಷಿಸುವವರ ಕಷ್ಟಗಳನ್ನು ದೇವರು ಪರಿಹರಿಸುವುದಿಲ್ಲ’ ಅಂತ ತೀರ್ಪು ಕೊಟ್ಟು ಸುಮ್ಮನಾಗಿ ಬಿಟ್ಟಿದ್ದಾಳೆ.

ಒಳಗೊಳಗೇ ಆ ಸಿಟ್ಟು, ಅವಮಾನ, ಅಸಮಾಧಾನ ಕುದಿಯತೊಡಗಿದೆ. ಆವತ್ತಿನಿಂದ ಸರಳಾರ ಮೇಲೆ ಹೇಗಾದರೂ ಮಾಡಿ ಸ್ಕೋರ್ ಸೆಟ್ಲ್ ಮಾಡಬೇಕು ಅಂತ ಅವಕಾಶಕ್ಕಾಗಿ ಕಾಯುತ್ತಾ ಇದ್ದವಳಿಗೆ ಈವತ್ತು ಚಿತ್ರಾ ಮತ್ತು ಸರಳಾ ಅನಾಯಾಸವಾಗಿ ಒಟ್ಟಿಗೇ ಸಿಕ್ಕು, ಚಿತ್ರಾಳ ಕಣ್ಣೀರು ಒರೆಸುವ ನೆಪದಲ್ಲಿ ಸರಳಾ ಮೇಲೆ ಮಿಸೈಲ್ ಬಿಟ್ಟಿದ್ದಳು.

ಸರಳಾ ಇವಳ ಅವತಾರ, ಮಾತುಗಳನ್ನು ನೋಡಿ ಒಂದು ನಿಮಿಷ ಅಧೀರರಾಗಿ ಹೋದರು. ‘ನಿಮಗೇನ್ರೀ ಅರ್ಥವಾಗುತ್ತೆ ನಮ್ಮ ಕಷ್ಟ? ಆರಾಮಾಗಿ ಒಬ್ರೇ ಇದೀರಾ’ ಅನ್ನುವಷ್ಟರಲ್ಲಿದ್ದಳು ಆ ಹುಡುಗಿ, ಸರಳಾನೇ ಮುಂದುವರೆದು ಮಾತನಾಡಿದರು.

‘ನಿನಗೆ ನನ್ನ ಮೇಲೆ ಸಿಟ್ಟಿದೆ ಎನ್ನುವುದು ನನಗೆ ಗೊತ್ತು. ಆದರೆ ಕಾರಣವಿಲ್ಲದೆ ನೀನು ಸಿಟ್ಟನ್ನ ಬೆಳೆಸ್ತಾ ಇದೀಯಾ’ ಎಂದರು. ಮೊದಲಿಗೆ ಸೂಸನ್ ಚಿತ್ರಾ ಹಾಗೂ ವಿಜಿಯನ್ನು ಅನುಮಾನದಿಂದ ನೋಡಿದಳು—ಇವರಿಬ್ಬರಲ್ಲಿ ಯಾರಾದರೂ ಸರಳಾಗೆ ವಿಷಯ ತಿಳಿಸಿಬಿಟ್ರಾ ಹೆಂಗೆ? ಅಂತ ಯೋಚಿಸಿದಳು.

ಸರಳಾನೇ ಮುಂದುವರೆದು ಹೇಳಿದರು. ‘ಹಂಗೆಲ್ಲಾ ಬೈಬಲ್ ತಂದು ನನ್ನ ಟೇಬಲ್ ಮೇಲೆ ಇಟ್ಟು ಹೋದೆಯಲ್ಲಾ? ನಮ್ಮ ಕಡೆ ಪೀರಿಯಡ್ಸ್ ಬಂದ್ರೆ ದೇವರ ಪೂಜಾ ಸಾಮಗ್ರಿ ಏನೂ ಮುಟ್ಟೋ ಹಂಗಿಲ್ಲ ಗೊತ್ತಾ? ನಾನು ಗೊತ್ತಿಲ್ಲದೆ ನಿನ್ನ ಬೈಬಲ್ ಅನ್ನ ಮುಟ್ಟಿಬಿಟ್ಟೆ. ಅದು ಮೈಲಿಗೆ ಆಗಿಬಿಡ್ತು ಅಂತ ನನಗೆ ಎಷ್ಟು ಆತಂಕ ಆಯಿತು...’ ಅಂದರು.

ಅದನ್ನ ಕೇಳುತ್ತಲೇ ಚಿತ್ರಾ, ಸೂಸಿ, ವಿಜಿ ಜೋರಾಗಿ ನಗಲು ಶುರು ಮಾಡಿದರು. ‘ಅಲ್ಲಾ ಸರಳಕ್ಕಾ, ನಿಮ್ಮ ದೇವರ ಪೂಜಾ ಸಾಮಗ್ರಿ ಮುಟ್ಟೋದು ಬ್ಯಾಡ ಅಂದ್ರೆ ಅದೊಂದು ಮಾತು. ಆದರೆ ನಿಮ್ಮದಲ್ಲದ ಬೈಬಲ್ ಮೈಲಿಗೆ ಆಯ್ತು ಅಂತೀರಲ್ಲಾ?’ ಅಂತ ಕೇಳಿದಳು ವಿಜಿ, ‘ಬೈಬಲ್ ದೇವರ ಗ್ರಂಥ ಅಲ್ಲವಾ? ಪವಿತ್ರ ಪುಸ್ತಕ ಅಲ್ಲವೇನು? ನನ್ನ ದೇವರು ನಿನ್ನ ದೇವರು ಅಂತ ಇದ್ದಾರೇನು?’ ಅಂತ ಸರಳಾ ಕೇಳಿದ ಪ್ರಶ್ನೆ ದಿಗ್ದಿಗಂತಗಳ ನಡುವಿದ್ದ ಗೋಡೆಯನ್ನು ಬರೀ ಕಾಲ ಉಗುರಿನಿಂದ ಕೆಡವಿದ ಹಾಗೆ ಸರಾಗವಾಗಿ ತರ್ಕದ ಪರದೆ ಹರಿಯಿತು.

‘ಇದನ್ನ ಮೂಢನಂಬಿಕೆ ಅಂತ ಬೇಕಾದ್ರೆ ಅಂದುಕೋ. ಮೊದಲಿಂದಲೂ ನಮ್ಮಲ್ಲಿ ಹೆಣ್ಣು ಮಕ್ಕಳು ಮನೆಯಲ್ಲಿ ಪೂಜಾ ಸ್ಥಳದ ಹತ್ತಿರ ಬಾರದೆ ಇರುವುದಕ್ಕೆ ನನ್ನ ತಾಯಿಯೇ ಮುಖ್ಯ ಕಾರಣ. ದೇವರು ಮೈಲಿಗೆ ಆದರೆ ಅವರಿಗೆ ನೋವಾಗುತ್ತಿತ್ತು. ಹಾಗಾಗಿ ನಾವೆಲ್ಲ ಸೈನ್ಸು ಕಾಮರ್ಸು ಓದಿಕೊಂಡಿದ್ದರೂ, ಅಮ್ಮನ ಕಷ್ಟದ ಮುಂದೆ, ಅವಳ ಕಣ್ಣೀರಿನ ಮುಂದೆ ನಮಗೆ ಯಾವ ತರ್ಕಕ್ಕೂ, ಬದಲಾವಣೆಗೂ ಅವಕಾಶವೇ ಇರಲಿಲ್ಲ’ ಅಂತ ಹೇಳುತ್ತಾ ಸಪ್ಪೆಯಾಗಿ ನಕ್ಕರು ಸರಳಾ. ತಾಯಿಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವಂತಿತ್ತು.

ಸೂಸನ್ ಒಪ್ಪುವ ಹಾಗಿರಲಿಲ್ಲ. ‘ನಿಮ್ಮ ದೇವರು ಬೇರೆ. ನನ್ನ ದೇವರು ಬೇರೆ ಅಲ್ವಾ? ನನ್ನ ದೇವರು ಮಡಿ, ಮುಟ್ಟು ಇದನ್ನೆಲ್ಲಾ ನೋಡಲ್ಲ’ ಅಂದಳು. ‘ಅದು ಹಾಗಲ್ಲ. ನಿನ್ನ ದೇವರು ನನ್ನೊಳಗೆ ಇಳಿಯಬೇಕಾದರೆ ನನ್ನ ಮನಸ್ಸಿನ ಮೂಲಕವೇ ಇಳಿಯಬೇಕು. ನನ್ನ ಮನಸ್ಸಿನಲ್ಲಿ ನನ್ನ ಅಮ್ಮ ಇದ್ದಾಳೆ. ಅವಳು ಕಲಿಸಿಕೊಟ್ಟ ಆಚರಣೆಗಳ ಮೂಲಕವೇ ದೇವರು ನನಗೆ ದಕ್ಕುವುದು.

ಆ ಪ್ರಕಾರ ಪೀರಿಯಡ್ಸಿನಲ್ಲಿ ದೇವರ ಪುಸ್ತಕ ಮುಟ್ಟಿದರೆ ಅಮ್ಮನಿಗೆ ಅಪಚಾರವೆಸಗಿದಂತೆ’ ಎಂದು ಸರಳಾ ಹೇಳುತ್ತಿರುವಾಗ ಯಾವುದೋ ಅನೂಹ್ಯ ವಿಶ್ವದ ಬಾಗಿಲೊಂದು ಎಲ್ಲರಿಗೂ ತೆರೆದುಕೊಳ್ಳುತ್ತಿರುವಂತೆ ಭಾಸವಾಗುತ್ತಿತ್ತು. ಮತಾಂತರ ಮತ್ತು ಧರ್ಮ ನಿರಪೇಕ್ಷತೆ ಎರಡರ ನಡುವೆ ಒಂದು ಸೇತುವೆ ಇರುವುದಾದರೆ, ಅದರ ಇಂಜಿನಿಯರ್ರು ದೇವರಿಗಿಂತ ಒಂದು ಮೆಟ್ಟಿಲು ಎತ್ತರಕ್ಕೇ ಕುಳಿತಿರುವ ಒಂದು ಜೀವ.

ಅದನ್ನು ಸ್ನೇಹಿತ/ತೆ, ಅಮ್ಮ, ಅಪ್ಪ, ಅಜ್ಜ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ – ಯಾವ ಹೆಸರಿಟ್ಟು ಕರೆದರೂ ಓಕೆ. ಕಣ್ಣು ತೆರೆದಿದ್ದರೆ, ಎದೆ ಹಸಿದಿದ್ದರೆ ಮಾತ್ರ ದಿಗಂತ ದರ್ಶನ ಸಾಧ್ಯ ಎನ್ನುವ ಸತ್ಯ ಹಾಗೇ ಸಂಜೆ  ಸೂರ್ಯನಂತೆ ತಂಪಾಗಿ ಭೂಮಿಯೊಳಗೆ ಸೇರಿಕೊಂಡಿತು.

ಸೂಸನ್ ಎದ್ದಳು. ಸರಳಾರನ್ನು ತಬ್ಬಿಕೊಂಡಳು. ಇಬ್ಬರ ಕಣ್ಣಲ್ಲೂ ನೀರು. ‘ಸಾರಿ ಆಂಟಿ...’ ಎಂದಳು. ಚಿತ್ರಾ, ವಿಜಿ ಬಿಟ್ಟ ಬಾಯಿ ಬಿಟ್ಟ ಹಾಗೆ ಡ್ರಗ್ಸ್‌ನಿಂದ ಶುರುವಾದ ಮಾತು ಧರ್ಮದಲ್ಲಿ ಮುಗಿದಿದ್ದರ ಬಗ್ಗೆ ಸೋಜಿಗವ ಪಟ್ಟುಕೊಂಡರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT