ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿಗಳ ಅನುಷ್ಠಾನದಲ್ಲಿ ಆಡಳಿತ ಸಾಮರ್ಥ್ಯದ ಕೊರತೆ

Last Updated 24 ಜನವರಿ 2013, 19:59 IST
ಅಕ್ಷರ ಗಾತ್ರ

ಕಾಂಗ್ರೆಸ್ ಉಪಾಧ್ಯಕ್ಷರಾಗಿ ರಾಹುಲ್ ಗಾಂಧಿ ಆಯ್ಕೆ ಹಾಗೂ ಮುಂದಿನ ಸಾರ್ವತ್ರಿಕ ಚುನಾವಣೆಗಳ ನಂತರ ಅವರ ಪಕ್ಷವೇನಾದರೂ ಸರ್ಕಾರ ರಚಿಸಬೇಕಾದಲ್ಲಿ  ಅವರೇ ಪ್ರಧಾನಿಯಾಗಬಹುದಾದ ಸಾಧ್ಯತೆಗಳಿಂದಾಗಿ ರಾಹುಲ್‌ರ ರಾಜಕೀಯ ಜೀವನದ ದಾಖಲೆಗಳ ಕುರಿತು ಜಾಗರೂಕ ಪರಿಶೀಲನೆ ಅತ್ಯಗತ್ಯ. ಈ ಅಂಶಗಳನ್ನು ಗಮನಿಸಿ:

1. ರಾಹುಲ್ ಗಾಂಧಿಯವರು ಈಗ ಬಹುತೇಕ ಒಂಬತ್ತು ವರ್ಷಗಳಿಂದ ಲೋಕಸಭೆ ಸದಸ್ಯರಾಗಿದ್ದಾರೆ. ಆ ಸಂದರ್ಭದಲ್ಲಿ ಸಂಸತ್ ಅಧಿವೇಶನ ನಡೆದ ಪ್ರತಿ ಹತ್ತು ದಿನಗಳ ಪೈಕಿ ನಾಲ್ಕು ದಿನಗಳು ಮಾತ್ರ ಅಧಿವೇಶನಕ್ಕೆ ಅವರು ಹಾಜರಾಗಿದ್ದಾರೆ.  ಎಂಪಿ ಯಾಗಿದ್ದಂತಹ ಎರಡು ಪೂರ್ಣಾವಧಿ ಕಾಲದಲ್ಲಿ ಅವರು ನಾಲ್ಕು ಅಥವಾ ಐದು ಪ್ರಶ್ನೆ ಕೇಳಿದ್ದಾರೆ. ಜೊತೆಗೆ ನಾಲ್ಕು ಅಥವಾ ಐದು ಚಿಕ್ಕ ಭಾಷಣಗಳನ್ನೂ ಮಾಡಿದ್ದಾರೆ. ಯಾವುದೇ ಅರ್ಥಪೂರ್ಣ ರೀತಿಯಲ್ಲಿ ಅವರ ಪ್ರಶ್ನೆಗಳು ಅಥವಾ ಭಾಷಣಗಳು ಸರ್ಕಾರದ ನೀತಿಗಳ ಮೇಲೆ ಪರಿಣಾಮ ಬೀರಿಲ್ಲ. ಅಥವಾ ಸಾರ್ವಜನಿಕ ಪ್ರಜ್ಞೆಯಲ್ಲೂ ಅವು ಉಳಿದುಕೊಂಡು ಬರುವುದು ಸಾಧ್ಯವಾಗಿಲ್ಲ.

2. ಈ ಒಂಬತ್ತು ವರ್ಷಗಳು ರಾಹುಲ್ ಗಾಂಧಿಯವರು ಎಂಪಿ ಯಾಗಿರುವ ಸಂದರ್ಭದಲ್ಲಿ ಅವರ ಪಕ್ಷ ನಿರಂತರವಾಗಿ ಅಧಿಕಾರದಲ್ಲಿದೆ.  ದಿಢೀರನೆ ನೇರವಾಗಿ ಸಚಿವ ಸ್ಥಾನದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಅವರು ಇಷ್ಟಪಡದಿರುವುದು ಅರ್ಥ ಮಾಡಿಕೊಳ್ಳುವಂತಹದ್ದೆ. ಹೀಗಿದ್ದೂ, 2008ರಲ್ಲಿ ಕೆಲವು ಯುವ ಕಾಂಗ್ರೆಸಿಗರಿಗೆ ಕಿರಿಯ ಸಚಿವ ಸ್ಥಾನಗಳನ್ನು ನೀಡಿದಾಗ ರಾಹುಲ್ ಗಾಂಧಿಯವರು ಸರ್ಕಾರದಲ್ಲಿ ಹುದ್ದೆ ವಹಿಸಿಕೊಳ್ಳಲು ನಿರಾಕರಿಸಿದರು ಎಂಬುದು ಗಮನಾರ್ಹ.

2009ರಲ್ಲಿ ಕಾಂಗ್ರೆಸ್ ನೇತೃತ್ವದ  ಸಮ್ಮಿಶ್ರ ಸರ್ಕಾರ  ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಾಗ ಆಗಲೂ ಅವರು ಸಚಿವ ಸಂಪುಟಕ್ಕೆ ಸೇರ್ಪಡೆಯಾಗದಿರುವುದನ್ನೇ ಆಯ್ಕೆ ಮಾಡಿಕೊಂಡರು. ಗ್ರಾಮೀಣ ಅಭಿವೃದ್ಧಿಯ ಪ್ರಶ್ನೆಗಳಲ್ಲಿ ಅವರು ಆಸಕ್ತಿ ತೋರಿದ್ದರು. ಆದರೆ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಅಧಿಕಾರ ವಹಿಸಿಕೊಳ್ಳಲು ನಿರ್ದಿಷ್ಟವಾಗಿ ಕೋರಿದಾಗ ಅದನ್ನು ನಿರಾಕರಿಸಿದರು.

3. ರಾಜಕೀಯದಲ್ಲಿ ಈ ಒಂಬತ್ತು ವರ್ಷಗಳಲ್ಲಿ ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಪರವಾಗಿ ಅನೇಕ ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದಾರೆ. ಗುಜರಾತ್‌ನಲ್ಲಿ ಒಂದು ದಿನ ಕಳೆದಿದ್ದಾರೆ. ಆದರೆ ಕಾಂಗ್ರೆಸ್‌ಗೆ ಇದು ಮತವಾಗಿ ಪರಿವರ್ತಿತವಾಗಲಿಲ್ಲ. ಬಿಹಾರದಲ್ಲಿ ಅವರು ಹೆಚ್ಚಿನ ಕಾಲವನ್ನು ಕಳೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಕಾಲ ಕಳೆದಿದ್ದಾರೆ. ಆದರೂ ಕಾಂಗ್ರೆಸ್‌ನ ಕಾರ್ಯನಿರ್ವಹಣೆ ಆ ರಾಜ್ಯಗಳಲ್ಲೂ ಚೆನ್ನಾಗಿರಲಿಲ್ಲ.

2009ರ ಸಾರ್ವತ್ರಿಕ ಚುನಾವಣೆಗಳಲ್ಲಿ ಸಾಕಷ್ಟು ವ್ಯಾಪಕವಾಗಿಯೇ ಅವರು ಪ್ರಚಾರ ನಡೆಸಿದ್ದರು. ಆದರೆ ಕಾಂಗ್ರೆಸ್‌ನ ಸುಧಾರಿತ  ಕಾರ್ಯನಿರ್ವಹಣೆಗೆ ಮುಖ್ಯವಾಗಿ ಸೋನಿಯಾಗಾಂಧಿ (ಮಾಹಿತಿ ಹಕ್ಕು ಹಾಗೂ ಗ್ರಾಮೀಣ ಉದ್ಯೋಗ ಗ್ಯಾರಂಟಿ ಯೋಜನೆಗಳ ಆರಂಭಕ್ಕಾಗಿ) ಹಾಗೂ ಮನಮೋಹನ್ ಸಿಂಗ್ (ಆರ್ಥಿಕ ಬೆಳವಣಿಗೆಗೆ ಅವರ ಬದ್ಧತೆ ಹಾಗೂ ನ್ಯಾಯಬದ್ಧತೆ ಹಾಗೂ ಪ್ರಾಮಾಣಿಕತೆ ಬಗ್ಗೆ ಅವರಿಗಿದ್ದ  ಹೆಸರಿನಿಂದ) ಅವರೇ ಕಾರಣ ಎಂಬುದು ಬಹುತೇಕರ ವಿಶ್ಲೇಷಣೆಯಾಗಿತ್ತು. 

ಈ ವಿಚಾರಗಳು, ರಾಹುಲ್ ಗಾಂಧಿಯವರು  ಅಷ್ಟೇನೂ ಆಸಕ್ತಿ ತೋರದ ಹಾಗೂ ಎದ್ದು ಕಾಣಿಸದ ಸಂಸದೀಯ ಪಟು ಎಂಬುದನ್ನು ಎತ್ತಿ ತೋರಿಸುತ್ತವೆ. ಸಚಿವ  ಸ್ಥಾನದ ಹೊಣೆಗಾರಿಕೆ ಹೊತ್ತುಕೊಳ್ಳಲು ಹಿಂಜರಿಯುವ ಇವರು ತಮ್ಮ ಪಕ್ಷಕ್ಕೆ ಮತಗಳನ್ನು ಅಥವಾ ಸ್ಥಾನಗಳನ್ನು ಗೆದ್ದುಕೊಡುವಲ್ಲಿ ಹೆಚ್ಚು ಪರಿಣಾಮಕಾರಿಯೇನೂ ಆಗಿಲ್ಲ. ನಿಜ ಹೇಳಬೇಕೆಂದರೆ, ಸಂಸತ್ತು, ಸಂಪುಟ ಹಾಗೂ ಚುನಾವಣೆಗಳಲ್ಲೇ ರಾಜಕೀಯ ಅಥವಾ ಸಾರ್ವಜನಿಕ ಬದುಕಿನ ವ್ಯಾಪ್ತಿ ಮುಗಿದುಹೋಗುವುದಿಲ್ಲ. ಹೀಗಾಗಿ, ರಾಹುಲ್ ಗಾಂಧಿಯವರು ಕೈಗೊಂಡ ಕೆಲವು ಹೆಚ್ಚುವರಿ ಉಪಕ್ರಮಗಳನ್ನು ಕುರಿತು ಹೇಳುತ್ತೇನೆ. ಈ ಐದು ವಿಚಾರಗಳನ್ನು ಕ್ರಮವಾಗಿ ಇಲ್ಲಿ ಪಟ್ಟಿ ಮಾಡುತ್ತೇನೆ:

1. 2008ರ ಮಾರ್ಚ್‌ನಲ್ಲಿ ರಾಹುಲ್ ಗಾಂಧಿ ಅವರು ಒಡಿಶಾದ ನಿಯಮಗಿರಿ ಬೆಟ್ಟಗಳಿಗೆ ಭೇಟಿ ನೀಡಿದ್ದರು. ಅಲ್ಲಿ, ತಮಗೆ ಪವಿತ್ರವಾದಂತಹ ಬೆಟ್ಟವನ್ನು ನಾಶ ಮಾಡುವುದಲ್ಲದೆ ತಮ್ಮ ಜೀವನೋಪಾಯವನ್ನೂ ಕಿತ್ತುಕೊಳ್ಳುವಂತಹ ಬಾಕ್ಸೈಟ್ ಗಣಿಗಾರಿಕೆ ವಿರುದ್ಧ ಡೊಂಗ್ರಿಯಾ ಕಾಂಡ್‌ಗಳು ಪ್ರತಿಭಟನೆ ನಡೆಸುತ್ತಿದ್ದರು. ಆದಿವಾಸಿಗಳ ಪರ ನಿಲುವು ಕೈಗೊಂಡಿದ್ದ ರಾಹುಲ್ ಗಾಂಧಿ ಅವರು ಅವರಿಗೆ  ಹೀಗೆ ಹೇಳಿದ್ದರು:  `ಮೈ ದಿಲ್ಲಿ ಮೇ ಆಪ್‌ಕಾ ಸಿಪಾಹಿ ಹ್ಞೂಂ ` ( ನಾನು ದೆಹಲಿಯಲ್ಲಿ ನಿಮ್ಮ ಸೈನಿಕನಾಗಿರುತ್ತೇನೆ - ಎಂದರೆ  ದೆಹಲಿಯಲ್ಲಿ ನಿಮ್ಮ ಸಕ್ರಿಯ ಪ್ರತಿನಿಧಿಯಾಗಿರುತ್ತೇನೆ).

2. 2009ರ ಜನವರಿಯಲ್ಲಿ  ರಾಹುಲ್ ಗಾಂಧಿಯವರು ಆಗಿನ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಮಿಲ್ಲಿಬ್ಯಾಂಡ್ ಅವರನ್ನು ಉತ್ತರ ಪ್ರದೇಶದ ಗ್ರಾಮವೊಂದಕ್ಕೆ ಕರೆದೊಯ್ದಿದ್ದರು. ಅಲ್ಲಿ ಅವರು ಅಕ್ಕಪಕ್ಕದ ಹಗ್ಗದ ಮಂಚಗಳಲ್ಲಿ ದಲಿತರ ಮನೆಯೊಬ್ಬರ ಮನೆಯಲ್ಲಿ ಮಲಗಿ ರಾತ್ರಿ ಕಳೆದಿದ್ದರು.

3. ಫೆಬ್ರುವರಿ 2010ರಲ್ಲಿ ರಾಹುಲ್ ಗಾಂಧಿಯವರು ಮುಂಬೈನಲ್ಲಿ ಸಬರ್ಬನ್ ರೈಲಿನಲ್ಲಿ ಪಯಣಿಸಿದ್ದರು.
4. 2011ರ ಮೇ ತಿಂಗಳಲ್ಲಿ ರಾಹುಲ್ ಗಾಂಧಿ ಅವರು ದೆಹಲಿಯಿಂದ ಬಹಳ ದೂರವೇನೂ ಇಲ್ಲದ ಭಟ್ಟಾಪಾರ್ಸಾಲ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಅಲ್ಲಿ ಮೂಲ ಸೌಕರ್ಯ ಯೋಜನೆಗಾಗಿ  ತಮ್ಮ ಒಪ್ಪಿಗೆ ಇಲ್ಲದೆ ಹಾಗೂ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಪರಿಹಾರ ನೀಡಿ ತಮ್ಮ ಭೂಮಿಗಳನ್ನು ಸ್ವಾಧೀನ  ಪಡಿಸಿಕೊಂಡಿದ್ದರ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದರು.

5. 2012ರ ಅಕ್ಟೋಬರ್‌ನಲ್ಲಿ ಕೆಲವು ಪ್ರಮುಖ ಕೈಗಾರಿಕೋದ್ಯಮಿಗಳ ಜೊತೆಗೆ ರಾಹುಲ್ ಗಾಂಧಿಯವರು ಶ್ರೀನಗರಕ್ಕೆ ಭೇಟಿ ನೀಡಿದ್ದರು. ಈ ತಂಡದ ಜೊತೆ ರತನ್ ಟಾಟಾ ಕೂಡ ಇದ್ದರು. ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ್ದ ರಾಹುಲ್, ಹಣಹೂಡಿಕೆ ಹೆಚ್ಚಿಸಲು ಹಾಗೂ ಹೆಚ್ಚಿನ ಕೌಶಲದ ಉದ್ಯೋಗಗಳನ್ನು ಒದಗಿಸಲು ಉನ್ನತ ದರ್ಜೆಯ ಕಂಪೆನಿಗಳನ್ನು ಕಣಿವೆಗೆ ತರುವ ಭರವಸೆಯನ್ನು  ನೀಡಿದ್ದರು.

ಇತರ ರಾಜಕೀಯ ಪಕ್ಷಗಳಲ್ಲಿ ಹಾಗೂ ವ್ಯಾಪಕ ಸಾರ್ವಜನಿಕ ಚರ್ಚೆಗಳಲ್ಲಿ  ಹೆಚ್ಚು  ಪ್ರಾಮುಖ್ಯ ಸಾಧಿಸದ ಈ ಐದೂ ಉಪಕ್ರಮಗಳು ಸಾಕಷ್ಟು ವಿಚಾರಗಳನ್ನು ಎತ್ತಿ ಹೇಳಿವೆ. ಆದಿವಾಸಿಗಳ ಸ್ಥಿತಿ, ದಲಿತರು ಹಾಗೂ ಮುಸ್ಲಿಮರಿಗಿಂತ ಇನ್ನೂ ಕೆಟ್ಟದ್ದಾಗಿದೆ. ಸ್ವತಂತ್ರ ಭಾರತದ ಅರವತ್ತೈದು ವರ್ಷಗಳ ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಯಿಂದ ಅವರು ಪಡೆದುಕೊಂಡಿರುವುದು ಅತಿ ಕಡಿಮೆ ಹಾಗೂ ಕಳೆದುಕೊಂಡಿರುವುದು ಬಹಳ ಹೆಚ್ಚು. ಹಿರಿಯ ರಾಜಕೀಯ ಹುದ್ದೆಗಳು, ಕಾನೂನು ಹಾಗೂ ವೈದ್ಯಕೀಯದಂತಹ ವೃತ್ತಿಗಳು, ಅಧಿಕಾರಶಾಹಿ ಹಾಗೂ ನ್ಯಾಯಾಂಗದಲ್ಲಿ ಅವರ ಪ್ರಾತಿನಿಧ್ಯ ಬಹಳ ಕಡಿಮೆ ಇದೆ.

ಆದಿವಾಸಿ ಗ್ರಾಮಗಳು ಅತಿ ಬಲಿಷ್ಠ ಆರ್ಥಿಕ ಹಿತಾಸಕ್ತಿಗಳಿಗೆ ತಮ್ಮ ಭೂಮಿಗಳು ಹಾಗೂ ಅರಣ್ಯಗಳನ್ನು  ಕಳೆದುಕೊಂಡಿವೆ. ಇದಕ್ಕೆ ಪ್ರತಿಯಾಗಿ ಅವರಿಗೆ ದಕ್ಕಿರುವುದು ಅತ್ಯಂತ ಕಡಿಮೆ ಅಥವಾ ಏನೇನೂ ಇಲ್ಲ. ನಿರಂತರವಾಗಿ ನಡೆಯುತ್ತಲೇ ಬಂದ ಈ ಸುಲಿಗೆ ಮಧ್ಯ ಭಾರತದಲ್ಲಿ ಮಾವೊವಾದಿ ಚಳವಳಿಯ ಬೆಳವಣಿಗೆಗೆ ಪ್ರಮುಖ ಕಾರಣ.  ಶೋಷಿತ ಆದಿವಾಸಿಗಳಿಗೆ ಬೆಂಬಲ ತೋರಿಸುವುದಕ್ಕಾಗಿ ಒಡಿಶಾಗೆ ಹೋಗಲು ರಾಹುಲ್ ಗಾಂಧಿಯವರು ಆಯ್ಕೆ ಮಾಡಿಕೊಂಡಿದ್ದು ಅವರ ವಿವೇಕಯುತವಾದ ಸೂಕ್ಷ್ಮ ರಾಜಕೀಯ  ಪ್ರವೃತ್ತಿಯನ್ನು ತೋರಿಸುತ್ತದೆ.

ರಾಹುಲ್ ಗಾಂಧಿಯವರ ಇತರ ಉಪಕ್ರಮಗಳೂ ಒಳ್ಳೆಯ ಉದ್ದೇಶಗಳನ್ನು ಹೊಂದಿರುವಂತಹವೇ. ಎಂಪಿಗಳು ಹಾಗೂ ಸಚಿವರಿಗೆ ತಾನಾಗೇ ದೊರೆಯುವ ಅನುಕೂಲಗಳು ಹಾಗೂ ಸವಲತ್ತುಗಳ ಲಾಲ್ ಬತ್ತಿ (ಕಾರುಗಳ ಮೇಲಿನ ಕೆಂಪುದೀಪ) ಸಂಸ್ಕೃತಿ ಬಗ್ಗೆ  ನಾಗರಿಕರು  ಜುಗುಪ್ಸೆ ಹೊಂದಿದ್ದಾರೆ. ಇಂತಹ ಸಂದರ್ಭದಲ್ಲಿ  ಜನಸಾಮಾನ್ಯರು ಎಲ್ಲಿ ಮಲಗುತ್ತಾರೆ ಹಾಗೂ ಹೇಗೆ ಪ್ರಯಾಣ ಮಾಡುತ್ತಾರೆ ಎಂಬುದನ್ನು ಅರಿಯಲು ಅವರ ಜೊತೆ ಬೆರೆಯುವುದು ಒಳ್ಳೆಯದೇ. ಮತ್ತೆ, ಕೈಗಾರಿಕೆ ಅಥವಾ ಮೂಲಸೌಕರ್ಯಗಳ ಯೋಜನೆಗಳಿಗಾಗಿ ಹೊಲ,ಮನೆಗಳನ್ನು  ಬಲವಂತವಾಗಿ ಒಕ್ಕಲೆಬ್ಬಿಸುವ ಕ್ರಿಯೆ ಇತ್ತೀಚಿನ ದಶಕಗಳಲ್ಲಿ ಸಾಕಷ್ಟು  ನೋವು ನೀಡಿದೆ. ಅಂತಿಮವಾಗಿ, ಕಾಶ್ಮೀರ ಕಣಿವೆಯನ್ನು  ಉಳಿದ ಭಾರತದ ಜೊತೆ ಸಂಪರ್ಕಿಸುವಂತಹ  ಕಾರ್ಯಸಾಧುವಾದ ವಿಧಾನಕ್ಕೆ ಬೇಕಿರುವುದು ಅಲ್ಲಿನ ಯುವ ವಿದ್ಯಾರ್ಥಿಗಳಿಗಾಗಿ ಉದ್ಯಮಗಳು ಹಾಗೂ ಉದ್ಯೋಗಗಳ ಸೃಷ್ಟಿ.

ಈ ಉಪಕ್ರಮಗಳು ಒಳ್ಳೆಯದಾಗಿದ್ದವು. ಉದಾತ್ತವೂ ಆಗಿದ್ದವು. ಆದರೂ  ಈ ಯಾವ ವಿಚಾರಗಳೂ ಮುಂದೇನಾದವು ಎಂಬುದು ಮಾತ್ರ ತಿಳಿಯಲಿಲ್ಲ.  ರಾಹುಲ್ ಗಾಂಧಿ ಅವರು ಒಂದು ದಿನಕ್ಕೆ ಮಾತ್ರ ಆದಿವಾಸಿಗಳ ಸಿಪಾಯಿ ಆಗಿದ್ದರು.  ಅವರು ಒಂದೇ ಒಂದು ದಿನ ಸಬರ್ಬನ್ ರೈಲಿನಲ್ಲಿ ಪ್ರಯಾಣಿಸಿದರು. ದಲಿತ್ ಗ್ರಾಮದಲ್ಲಿ ಕಳೆದದ್ದು ಒಂದೇ ರಾತ್ರಿ. ಹಾಗೆಯೇ, ಮತ್ತೆ ಯಾವಾಗಲಾದರೂ ಅಥವಾ ಎಂದಾದರೂ ಮತ್ತೆ ಕೈಗಾರಿಕೋದ್ಯಮಿಗಳನ್ನು ಜೊತೆಗೆ ಕಟ್ಟಿಕೊಂಡು ಕಾಶ್ಮೀರಕ್ಕೆ ಮರುಭೇಟಿ ನೀಡುವರೆ ಎಂದೂ ನನಗೆ ತಿಳಿದಿಲ್ಲ.

ಯಾಕೆ ರಾಹುಲ್ ಗಾಂಧಿ ಅವರು ಒಂದು ಬಾರಿಗೆ ಒಂದೇ ವಿಷಯ ಕೈಗೆತ್ತಿಕೊಂಡು ಅದು ತಾರ್ಕಿಕವಾಗಿ ಅಂತ್ಯ ಕಾಣುವವರೆಗೆ ಪಟ್ಟು ಹಿಡಿಯಬಾರದು? ಕೈಗಾರಿಕೆ ಅಥವಾ ಗಣಿ ಯೋಜನೆಗಳಲ್ಲಿ ಆದಿವಾಸಿಗಳ ಭಾಗವಹಿಸುವಿಕೆಗೂ ಸಂವಿಧಾನದಲ್ಲಿ ವಿಶೇಷ ಅವಕಾಶ ಮಾಡಿಕೊಡಲಾಗಿದೆ.  ಆದಿವಾಸಿಗಳಿಂದ ತಾನು ಭೂಮಿ ಪಡೆದದ್ದಕ್ಕೆ ಪ್ರತಿಯಾಗಿ ತನ್ನ ಶೇ 25ರಷ್ಟು ಷೇರುಗಳನ್ನು ಆದಿವಾಸಿಗಳಿಗೆ ನೀಡಲು ಪ್ರಮುಖ ಕಂಪೆನಿಯ ಮನ ಒಲಿಸಲು ರಾಹುಲ್ ಗಾಂಧಿ ಏಕೆ ಮುಂದಾಗಲಿಲ್ಲ? ಕೌಶಲದ ಶಿಕ್ಷಣ ಹಾಗೂ ಸುಸ್ಥಿರ ಉದ್ಯೋಗ ಸೃಷ್ಟಿಗೆ ತನ್ನ ಲಾಭಾಂಶಗಳನ್ನು ಬಳಸುತ್ತಾ, ಇಂತಹ ಅನುಸರಿಸಬಹುದಾದ ಮಾದರಿಯನ್ನು ಇತರ ಕಂಪೆನಿಗಳೂ ಏಕೆ ಅನುಸರಿಸುವಂತಾಗಬಾರದು?

ಇದೇ ರೀತಿ, ಓಬಿರಾಯನ ಕಾಲದ 1894ರ ಭೂ ಸ್ವಾಧೀನ ಕಾಯಿದೆ ಬದಲಿಗೆ ಪ್ರಗತಿಪರವಾದ ಮಸೂದೆ ಮಂಡನೆಗಾಗಿ ನಡೆಯುತ್ತಿರುವ ತೀವ್ರತರವಾದ ಚರ್ಚೆಗಳಲ್ಲಿ ತನ್ನ ಗೈರುಹಾಜರಿಯಿಂದಾಗಿ (ಸಂಸತ್ ಒಳಗೆ ಮತ್ತು ಹೊರಗೆ) ಎದ್ದು ಕಾಣಿಸುತ್ತಿರುವ ಒಂದು ದನಿ ಎಂದರೆ ಗಾಂಧಿಯವರದ್ದು. ಅಂತಿಮವಾಗಿ, ಕಾಶ್ಮೀರದಲ್ಲಿನ ಬಂಡಾಯವೂ ಮಾವೊವಾದದಷ್ಟೇ ಗಂಭೀರವಾದ ಭದ್ರತಾ ಬೆದರಿಕೆ ಆಗಿರುವುದರಿಂದ, ರಾಹುಲ್ ಗಾಂಧಿಯವರು ರತನ್ ಟಾಟಾ ಅವರನ್ನು ಮತ್ತೆ ಕಾಶ್ಮೀರಕ್ಕೆ ಕರೆದೊಯ್ದು ಒಂದಾದರೂ ಟಾಟಾ ಘಟಕ ಅಲ್ಲಿ ತೆರೆಯುವಂತೆ ಮಾಡಬಾರದೇಕೆ?

ರಾಹುಲ್ ಗಾಂಧಿಯ ಬಗ್ಗೆ ಹೇಳಬಹುದಾದ ಒಂದು ಒಳ್ಳೆಯ ವಿಚಾರ ಎಂದರೆ,  ಅವರು ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದರೂ, ಆಳವಾದ ಆಸಕ್ತಿಯಿಲ್ಲದೆ ಮೇಲುಮೇಲೆ ಅಭ್ಯಾಸ ಮಾಡುವ ಮನೋಭಾವದವರು. ಅವರು ಆಡಳಿತಾತ್ಮಕ ಸಾಮರ್ಥ್ಯದ ಯಾವ ಸಂಕೇತವನ್ನೂ ತೋರ್ಪಡಿಸಿಲ್ಲ. ದೊಡ್ಡದಾದ ಮುಖ್ಯವಾದ ಜವಾಬ್ದಾರಿಗಳನ್ನು ಕೈಗೆತ್ತಿಕೊಳ್ಳುವ ಆಸಕ್ತಿ ತೋರಿಲ್ಲ. ಗಂಭೀರವಾದ ಸಾಮಾಜಿಕ ಸಮಸ್ಯೆಗಳನ್ನು  (ಬರೀ ಗುರುತಿಸುವುದಕ್ಕಿಂತ ಹೆಚ್ಚಾಗಿ) ಪರಿಹರಿಸಲು ಯಾವುದೇ  ಸಾಮರ್ಥ್ಯ ಅಥವಾ ಬದ್ಧತೆ ತೋರಿಲ್ಲ.

ರಾಹುಲ್ ಅವರು ಇನ್ನೂ ಕಾಲೇಜಿನಲ್ಲಿದ್ದಿದ್ದರೆ ಅಥವಾ ಖಾಸಗಿ ವಲಯದ ಉದ್ಯೋಗದಲ್ಲಿದ್ದಿದ್ದರೆ ಅಥವಾ  ತಮ್ಮದೇ ಸ್ವಂತ ಉದ್ಯಮ ನಡೆಸುತ್ತಿದ್ದಿದ್ದರೆ ಯಾವುದನ್ನೂ ತೀರಾ ಆಳವಾಗಿ ಪರಿಗಣಿಸದ ರಾಹುಲ್‌ರ ಈ ಪ್ರವೃತ್ತಿಯಿಂದ ಸಮಸ್ಯೆಯೇನೂ ಆಗುತ್ತಿರಲಿಲ್ಲ. ಆದರೆ ಭಾರತದ ಅತಿದೊಡ್ಡ, ಹಳೆಯ ಹಾಗೂ ಈಗಲೂ ಅತ್ಯಂತ ಪ್ರಭಾವಶಾಲಿಯಾದ ರಾಜಕೀಯ ಪಕ್ಷದ ಉಪಾಧ್ಯಕ್ಷ ಹಾಗೂ ಭಾವಿ ನಾಯಕನಾಗಿ ಹಾಗೂ ಮುಂದೆ ಪ್ರಧಾನಿ ಹುದ್ದೆಯ ಅಭ್ಯರ್ಥಿಯೂ ಆಗಬಹುದಾದ್ದರಿಂದ ಇದು ಮುಖ್ಯವಾಗುತ್ತದೆ.

ರಾಹುಲ್ ಅವರನ್ನು ಚಿಂತಕ ಹಾಗೂ  ಕಾರ್ಯಕರ್ತ, ರಾಜಕಾರಣಿ ಹಾಗೂ ಸಮಾಜ ಸುಧಾರಕರಾಗಿ ಕಂಡಿರುವ ನಮಗೆ, ಮುಂದಿನ ಸಾರ್ವತ್ರಿಕ ಚುನಾವಣೆಗಳ ನಂತರ ಕಾಂಗ್ರೆಸ್ ಏನಾದರೂ  ಸರ್ಕಾರ ರಚಿಸುವ ಸ್ಥಾನದಲ್ಲಿದ್ದು, ಪ್ರಧಾನಿಯಾಗಿ ರಾಹುಲ್ ಅವರನ್ನು ಪಕ್ಷ  ನಾಮಕರಣ ಮಾಡಿದ್ದೇ ಆದಲ್ಲಿ ರಾಷ್ಟ್ರವು ಸುರಕ್ಷಿತ ಕೈಗಳಲ್ಲಿ ಇರುವುದಿಲ್ಲ ಎಂಬುದಂತೂ ಸ್ಪಷ್ಟವಾಗಿ ಗೋಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT