ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿಯಷ್ಟೇ, ಸಾಗುವ ಹಾದಿಯೂ ಮುಖ್ಯ

Last Updated 15 ಮೇ 2012, 19:30 IST
ಅಕ್ಷರ ಗಾತ್ರ

ಸ್ವರ್ಗಕ್ಕೆ ಸ್ವಾಗತ ಎಂಬ ಸ್ವಾಗತಫಲಕ ಆ ಹಳ್ಳಿಯ ಪಕ್ಕದ ರಸ್ತೆಯಲ್ಲಿ ಇನ್ನೂ ನೇತಾಡುತ್ತಿದೆ. ಈಗ ಮಾವೊವಾದಿಗಳ ಅಡ್ಡೆ ಎಂದೇ ಪರಿಗಣಿಸಿರುವ ಬಸ್ತಾರ್ ಅರಣ್ಯ ಪ್ರದೇಶದ ಹೊರವಲಯದಲ್ಲಿರುವ ಚಿಂತಾಗುಫ ಎಂಬ ಹಳ್ಳಿಯ ಬಳಿ ಈ ನಾಮಫಲಕವಿದೆ.
 
ಹಿಂದೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಜನಪ್ರಿಯವಾಗಿದ್ದಂತಹ ದಿನಗಳಲ್ಲಿ ಹಾಕಲಾಗಿದ್ದ ನಾಮಫಲಕ ಅದು. ಈಗ ಪರಿಸ್ಥಿತಿ ಆ ರೀತಿ ಇಲ್ಲ. ಆದರೆ ನಾಮಫಲಕ ಮಾತ್ರ ಹಾಗೆಯೇ ಉಳಿದುಹೋಗಿದೆ ಅಷ್ಟೆ. ಈ ಪ್ರದೇಶದಲ್ಲಿಯೇ ಈಚೆಗೆ ಜಿಲ್ಲಾಧಿಕಾರಿ ಅಲೆಕ್ಸ್ ಪೌಲ್ ಅವರನ್ನು ಮಾವೊವಾದಿಗಳು ಅಪಹರಿಸಿ, ಬಿಡುಗಡೆ ಮಾಡಿದ್ದು.

ಮಾವೊವಾದಿಗಳ ಪ್ರಕಾರ ಕ್ರಾಂತಿಯು ಬಂದೂಕಿನ ಸದ್ದುಗಳಿಂದಲೇ ಆಗಬೇಕು. ಚೀನಾದಲ್ಲಿ ಮಾವೊತ್ಸೆ ತುಂಗ್ ಈ ಹಾದಿಯಲ್ಲಿಯೇ ಯಶಸ್ಸು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದರು ಎನ್ನುವುದು ಮಾವೊವಾದಿಗಳ ವಾದ.

ಮಾವೊತ್ಸೆ ತುಂಗ್ ಸಫಲರಾಗಿದ್ದೆಲ್ಲಿ, ನಕ್ಸಲೀಯರು ವಿಫಲರಾಗುತ್ತಿರುವುದೆಲ್ಲಿ ಎಂಬ ಬಗ್ಗೆ ತಿಳಿದುಕೊಳ್ಳಬೇಕಿದೆ. ಚೀನಾದಲ್ಲಿ  ಕಮ್ಯುನಿಸ್ಟರು ಜನರನ್ನು ವಿಚಾರದೆಡೆಗೆ `ಮತಾಂತರ~ಗೊಳಿಸಲು ಶಕ್ತರಾದರು.
 
ಆದರೆ ಭಾರತದ ಮಾವೊವಾದಿಗಳು ಪಶ್ಚಿಮ ಬಂಗಾಳದಲ್ಲಿ ಅರ್ಧ ಶತಮಾನದ ಹಿಂದೆ ಶುರು ಮಾಡಿದ ಸಶಸ್ತ್ರ ಹೋರಾಟ ಎಲ್ಲಿಗೂ ತಲುಪಿದಂತೆ ಕಾಣುತ್ತಿಲ್ಲ. ಹೋರಾಟಗಾರರು ಅಭಯಾರಣ್ಯಗಳ ಒಳಗೆ ತಮ್ಮನ್ನು ರಕ್ಷಿಸಿಕೊಂಡಿದ್ದಾರಷ್ಟೆ.

ವ್ಯಾಪಕವಾಗಿ ಜನಮನ ಗೆಲ್ಲುವಲ್ಲಿ ಅವರು ಯಶಸ್ಸು ಪಡೆದಿಲ್ಲ. `ವಿಮೋಚನೆ~ಹೊಂದಿದ ಪ್ರದೇಶಗಳಲ್ಲಿ ಅವರು ಭೂರಹಿತರಿಗೆ ಭೂಮಿ ನೀಡಿದ್ದಾರೆ. ಅಂತಹ ವಿಮೋಚನೆ ಹೊಂದಿದ ಪ್ರದೇಶಗಳ ವಿಸ್ತರಣೆಗೆ ಯತ್ನಿಸುತ್ತಿದ್ದಾರಷ್ಟೆ.
 
ಮಾವೊವಾದಿಗಳು ಭೂರಹಿತರು ಮತ್ತು ಕೃಷಿಕರ ನಡುವೆ ಹೊಂದಾಣಿಕೆ ತರುವಲ್ಲಿಯೇ ಗೊಂದಲದಲ್ಲಿದ್ದಾರೆ. ಆದರೆ ಅವರೆಲ್ಲರೂ ಕ್ರಾಂತಿಯಲ್ಲಿ ಪಾಲ್ಗೊಳ್ಳಬೇಕೆಂದು ಬಯಸುತ್ತಾರೆ.
 
ಚೀನಾದಲ್ಲಿ ಅಂದು ಹೋರಾಟಗಾರರು ಜನಸೇನೆಯ ಭಾಗವಾಗಿದ್ದರು. ಆದರೆ ಭಾರತದಲ್ಲಿ ಇವತ್ತು ಮಾವೊವಾದಿಗಳು ಕೆಲವು ಪ್ರದೇಶಗಳಲ್ಲಿ ಭೂರಹಿತರಿಗೆ ಭೂಮಿ ಸಿಗುವುದಕ್ಕಾಗಿ ಹೋರಾಟ ನಡೆಸುತ್ತಿರುವವರಾಗಿದ್ದಾರಷ್ಟೆ.

ಇವತ್ತು ತಮ್ಮ ರಕ್ಷಣೆಗಾಗಿಯೇ ಕಾಡುಗಳ ಒಳಗೆ ಆಶ್ರಯ ಪಡೆದಿರುವ ಅವರು ಹಿರಿಯ ಅಧಿಕಾರಿಗಳನ್ನು ಅಪಹರಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲೆತ್ನಿಸುವುದು, ಪೊಲೀಸರೊಡನೆ ಘರ್ಷಣೆಗಿಳಿಯುವುದಕ್ಕಷ್ಟೇ ಸೀಮಿತಗೊಂಡಂತಿದೆ.

ಒಟ್ಟಾರೆ, ತಮ್ಮ ವಿಚಾರಧಾರೆಗೆ ವ್ಯಾಪಕವಾಗಿ ಸಾರ್ವಜನಿಕರ ಬೆಂಬಲ ಸಿಗುತ್ತಿಲ್ಲ ಎಂಬ ಸತ್ಯ ಕೂಡಾ ನಕ್ಸಲರಿಗೆ ಗೊತ್ತಾಗಿದೆ. ಅದೇನೇ ಇದ್ದರೂ, ಮಾವೊವಾದಿಗಳು ಇವತ್ತು ಹಿಂದುಳಿದ ಪ್ರದೇಶಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.
 
ಅಲ್ಲಿರುವ ಬುಡಕಟ್ಟು ಜನರು ಮತ್ತು ಬಡವರನ್ನು ಸಂಘಟಿಸುತ್ತಿದ್ದಾರೆ. ಅಂತಹ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಗಣಿಗಾರಿಕೆ ನಡೆಯುತ್ತದೆ ಅಥವಾ ನೈಸರ್ಗಿಕ ಸಂಪತ್ತುಗಳ ಲೂಟಿ ನಡೆಯುತ್ತದೆ.
 
ವಿಶೇಷವೆಂದರೆ ಅಂತಹ ಗಣಿಕಂಪೆನಿಗಳ ಮಾಲೀಕರಿಗೆ ಆಡಳಿತದ ಬೆಂಬಲವಿರುತ್ತದೆ ಮತ್ತು ಎಂತಹ ಪ್ರತಿಭಟನೆಗಳನ್ನೂ ಮಟ್ಟ ಹಾಕುವಂತಹ ತೋಳ್ಬಲ ಇರುತ್ತದೆ.

ಇಂತಹವರ ವಿರುದ್ಧವೇ ಮಾವೊವಾದಿಗಳು ನಿರಂತರವಾಗಿ ದಶಕಗಳಿಂದ ಹೋರಾಟ ನಡೆಸುತ್ತ ಬಂದಿದ್ದಾರೆ. ಕೆಲವು ಸೀಮಿತ ಸ್ಥಳಗಳಲ್ಲಿ ಆಡಳಿತಗಾರರನ್ನೂ ಹೆದರಿಸಿ, ತಮ್ಮ ಗೆರಿಲ್ಲಾ ತಂತ್ರಗಳ ಮೂಲಕ ತಮ್ಮ ಮಾತುಗಳೇ ನಡೆಯುವಂತಹ `ಕೆಂಪು ಪ್ರದೇಶ~ಗಳನ್ನು ಸೃಷ್ಟಿಸಿಕೊಂಡಿದ್ದಾರೆ.
 
ಇದಕ್ಕಿಂತ ಮುಂದೆ ಹೋಗಲು ಅವರಿಗೆ ಸಾಧ್ಯವಾಗಿಲ್ಲ. ರಾಜ್ಯ ಅಥವಾ ಕೇಂದ್ರದ ಆಡಳಿತಗಾರರಿಗೆ ತಮ್ಮ ಭದ್ರತಾ ಪಡೆಗಳನ್ನು ಅಂತಹ ಸ್ಥಳಗಳಿಗೆ ಕಳುಹಿಸಿ, ಅಲ್ಲಿರುವ ಮಾವೊವಾದಿಗಳನ್ನು ಸದೆಬಡಿಯಲು ತೀರಾ ಪ್ರಯಾಸವೇನೂ ಇಲ್ಲ.
 
ಅದು ಕಾಲಕ್ಕೆ ಸಂಬಂಧಿಸಿದ ವಿಷಯವಷ್ಟೇ. ಏಕೆಂದರೆ ಮಾವೊವಾದಿಗಳಿಗಿಂತ ಭದ್ರತಾ ಪಡೆಗಳೇ ಸಹಸ್ರಾರು ಪಟ್ಟು ಬಲಿಷ್ಠ ಎನ್ನುವುದು ನಿಜ. ಇಂತಹ ಹೋರಾಟಗಳನ್ನು ನ್ಯಾಷನಲ್ ಕೌಂಟರ್ ಟೆರರಿಸಂ ಸೆಂಟರ್ (ಎನ್‌ಸಿಟಿಸಿ) ಯಾವುದೇ ಸಮಯದಲ್ಲಿ ಹೊಸಕಿ ಹಾಕಿಬಿಡುತ್ತದಷ್ಟೇ.

ಭಾರತದಲ್ಲಿ ಮಾರ್ಕ್ಸಿಸ್ಟರು ಕೂಡಾ ಇದೇ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಅವರು ಚುನಾವಣಾ ವ್ಯವಸ್ಥೆಯೊಳಗೆ ಸೇರಿಕೊಂಡು ಬಿಟ್ಟಿದ್ದಾರೆ. ಅವರು ಕೇರಳದಲ್ಲಿ ಚುನಾವಣಾ ಪ್ರಕ್ರಿಯೆ ಮೂಲಕವೇ ಐವತ್ತರ ದಶಕದ ಕೊನೆಯಲ್ಲಿ ಅಧಿಕಾರದ ಗದ್ದುಗೆ ಏರಿದರು.

ಪಶ್ಚಿಮ ಬಂಗಾಳ ಮತ್ತು ತ್ರಿಪುರಗಳಲ್ಲಿಯೂ ಅವರು ಆಡಳಿತ ನಡೆಸಲು ಸಾಧ್ಯವಾಯಿತು. ಅವರು ಕೇರಳದಲ್ಲಿ ಸೋಲನುಭವಿಸಿದ್ದು ಮತ್ತು ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡಿದ್ದನ್ನು ಗಮನಿಸಿದರೆ ಅವರು ಜನಮನ ಒಲಿಸುವಲ್ಲಿ ವೈಫಲ್ಯ ಕಂಡಿದ್ದಾರೆಂದೇ ಅರ್ಥ.
 
ಮಾರ್ಕ್ಸಿಸ್ಟ್ ಆಡಳಿತಗಾರರು ಮತ್ತು ಆ ಸಂಘಟನೆಯ ಕಾರ್ಯಕರ್ತರು ಆಡಳಿತ ನಡೆಸಿದ್ದಾರೆ, ಕೆಲವೊಮ್ಮೆ ಬಲು ಕಟುವಾಗಿಯೇ ನಡೆದುಕೊಂಡಿದ್ದಾರೆ. ಆದರೆ ವರ್ಗರಹಿತ ಸಮಾಜದ ಪರಿಕಲ್ಪನೆಯನ್ನು ಜನರಿಗೆ ಮನದಟ್ಟು ಮಾಡಿಕೊಡುವಲ್ಲಿ ಅವರು ವಿಫಲರಾಗಿದ್ದಾರೆ.
 
ಪಶ್ಚಿಮ ಬಂಗಾಳದ ದಿವಂಗತ ಮುಖ್ಯಮಂತ್ರಿ ಜ್ಯೋತಿಬಸು ಅವರು ಹಿಂದೊಮ್ಮೆ ನನ್ನ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ `ಈ ವ್ಯವಸ್ಥೆಯೊಳಗೆ ನಾನು ಏನೆಲ್ಲಾ ಮಾಡಬೇಕೆಂದುಕೊಂಡಿದ್ದೆನೋ ಅವುಗಳನ್ನು ಮಾಡಲಾಗುತ್ತಿಲ್ಲ~ ಎಂದು ಒಪ್ಪಿಕೊಂಡಿದ್ದರು.

ಕಮ್ಯುನಿಸ್ಟ್ ಸಿದ್ಧಾಂತ ನಂಬಿದ್ದ ಸಿಖ್ ಉಗ್ರವಾದಿಗಳು ಕೂಡಾ ದುರಂತವನ್ನೇ ಕಾಣುವಂತಾಯಿತು. ಆ ದಿನಗಳಲ್ಲಿ ಅಮೃತಸರದ ಸ್ವರ್ಣಮಂದಿರದಲ್ಲಿ ಭಿತ್ತಿಪತ್ರಗಳ ಅಕ್ಷರಗಳನ್ನೂ ಕೆಂಪಕ್ಷರಗಳಲ್ಲೇ ಬರೆಯಲಾಗಿತ್ತು.
 
ತಾವು ಹುಟ್ಟು ಹಾಕಲು ಹೊರಟಿದ್ದ ಪ್ರತ್ಯೇಕ ಸ್ವಾಯತ್ತ ಪಂಜಾಬ್ ಸಂಸ್ಥಾನದಲ್ಲಿ ಸಮಾನತೆಯೇ ಮುಖ್ಯವಾಗಿರುತ್ತದೆ ಎಂದೂ ಅವರು ಅಂದು ಘೋಷಿಸಿದ್ದರು. ಕೊನೆಗೆ ಅವರೂ ಕೂಡ ನಕ್ಸಲರಂತೆ ಅಧಃಪತನ ಕಾಣುವಂತಾಯಿತು.
 
ಅಪಹರಣ, ಕೊಲೆ ಪ್ರಕರಣಗಳಲ್ಲೇ ತಮ್ಮನ್ನು ಸೀಮಿತಗೊಳಿಸಿಕೊಳ್ಳುವಂತಾಯಿತು. ಅಂದು ಅವರ ಉಗ್ರವಾದ ಕುಸಿತ ಕಾಣಲು ದೇಶದ ಬಲಿಷ್ಠ ಭದ್ರತಾ ವ್ಯವಸ್ಥೆಯೇ ಕಾರಣವೇನಲ್ಲ, ಅವರಿಗೆ ಜನಬೆಂಬಲವೇ ಸಿಗಲಿಲ್ಲ ಎನ್ನುವ ಮಾತೂ ಸತ್ಯ.

ಕೆಲವು ಸಲ ವೈಯಕ್ತಿಕ ಬೇಕು ಬೇಡಗಳೇ ಮೇಲುಗೈ ಸಾಧಿಸಿ ವಿಚಾರಧಾರೆ, ತತ್ವಗಳೇ ತರಗೆಲೆಗಳಂತಾಗಿಬಿಡುವುದೂ ಇದೆ. ನಂಬಿಕೆಯು ಕೇವಲ ತೋರಿಕೆಯಂತಾದರೆ ವಿಚಾರವೂ ಸುಲಭದಲ್ಲಿಯೇ ಕಿತ್ತು ಹೋಗುತ್ತದೆ.

ಅಧಿಕಾರದ ಲಾಲಸೆ ಎಲ್ಲವನ್ನೂ ಕಬಳಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಕ್ರಾಂತಿಕಾರಿಗಳಿಗೂ, ರಾಜಕಾರಣಿಗಳಿಗೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಎಲ್ಲರದೂ ಒಂದೇ ಗುರಿ ಆಗಿರುತ್ತದಷ್ಟೇ. ಅದು ಯಾವುದೇ ಹಾದಿ ಇರಲಿ, ಅಧಿಕಾರವೊಂದು ಕೈಗೆಟುಕಬೇಕಷ್ಟೆ!

ವಿಚಾರ ಆಗ ಹಿಂದೆ ಸರಿಯುತ್ತದೆ. ಆಸೆ, ಮಹತ್ವಾಕಾಂಕ್ಷೆಯೇ ಮುಂದಿರುತ್ತದೆ. ಹೌದು, ಆಗ ಗೆಲುವು ಸಿಗುತ್ತದೆ ನಿಜ, ಆದರೆ ಅದು ತಾತ್ಕಾಲಿಕ. ಇದಕ್ಕೆ ಮಾರ್ಕ್ಸಿಸ್ಟರೇ ಒಂದು ವಿಷಾದಕರ ಉದಾಹರಣೆ.

ಬಡವರಿಗೆ, ಅಸಹಾಯಕರಿಗೆ, ದಲಿತರಿಗೆ ನೆರವು ನೀಡುವಲ್ಲಿ ಆ ಜನಗಳ ಪರ ಧ್ವನಿ ಎತ್ತುವಲ್ಲಿ ಹಿಂದೆ ಮಾವೊವಾದಿಗಳ ಸ್ಪಷ್ಟತೆ, ದೃಢ ನಿಲುವು ಎಂತಹವರಲ್ಲಿಯೂ ಅಚ್ಚರಿ ಮೂಡಿಸುವಂತಿತ್ತು. ತುಳಿತಕ್ಕೆ ಒಳಗಾದವರಿಗೆ ನ್ಯಾಯ ಸಿಗುವಂತೆ ಮಾಡುವಲ್ಲಿ ಅವರ ಹೋರಾಟ ಮರೆಯುವುದೆಂತು.

ಆದರೆ ಈಗ ಅವರು ಕೇವಲ ಬಂದೂಕಿನ ಸದ್ದುಗಳ ನಡುವೆ ಕಳೆದುಹೋದಂತಿದ್ದಾರೆ. ಅವರ ಪ್ರಭಾವದಲ್ಲಿರುವ ಪ್ರದೇಶಗಳ ಕೃಷಿಕರು, ನಿರುದ್ಯೋಗಿಗಳೂ ಖುಷಿಯಿಂದ ಇದ್ದಾರೆನ್ನುವಂತಿಲ್ಲ. ಮಾವೊವಾದಿಗಳ ವ್ಯಾಪ್ತಿಯಲ್ಲಿರುವ `ವಿಮೋಚನೆ ಹೊಂದಿದ ಪ್ರದೇಶ~ಗಳ ಸ್ಥಿತಿಗತಿ ಹೇಗಿದೆ ಎಂದು ಅಲ್ಲಿಗೆ ಹೋಗಿ ನೋಡಿದವರಿಗೇ ಗೊತ್ತಾಗುತ್ತದೆ.
 
ಆದರೆ ಪ್ರಜಾಸತ್ತೆಯ ಚೌಕಟ್ಟಿನಲ್ಲಿರುವ ಈ ದೇಶದ ಬಹುತೇಕ ಪ್ರದೇಶಗಳೆಲ್ಲವೂ ಹಿಂದಿನ ದಿನಗಳಿಗೆ ಹೋಲಿಸಿದರೆ ಬಹಳ ಅಭಿವೃದ್ಧಿಗೊಂಡಿರುವುದು ಎದ್ದು ಕಾಣುತ್ತವೆ.

ಪ್ರಜಾಪ್ರಭುತ್ವ ವ್ಯವಸ್ಥೆಯೊಳಗಿರುವ ಪ್ರದೇಶಗಳಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ತಪ್ಪುಗಳಿರಬಹುದು, ಗೊಂದಲಗಳಿರಬಹುದು. ಆದರೆ ಇಲ್ಲಿ ಸರ್ವಾಧಿಕಾರದ ಕ್ರೌರ್ಯವಂತೂ ಇಲ್ಲವೇ ಇಲ್ಲ.
 
ಸ್ಟಾಲಿನ್ ಕಾಲದಲ್ಲಿ ರಷ್ಯ ಸ್ಥಿತಿ ಎಂತಹ ದಯನೀಯವಾಗಿತ್ತೆನ್ನುವುದು ಈಗ ಎಲ್ಲರಿಗೂ ಗೊತ್ತಿದೆ. ಸ್ಟಾಲಿನ್‌ನ ಸರ್ವಾಧಿಕಾರದ ಅಡಿಯಲ್ಲಿ ರಷ್ಯ ಜನತೆ ನರಳಿದ್ದ ಕಥೆಗಳು ಚರಿತ್ರೆಯ ಕಪ್ಪುಪುಟಗಳೇ ಹೌದು. ಅವನ ನಂತರದ ಸರ್ವಾಧಿಕಾರಿಗಳು ಅವನಷ್ಟು ಕ್ರೂರವಾಗಿರಲಿಲ್ಲ ಅಷ್ಟೇ. ಚೀನಾ ಅಭಿವೃದ್ಧಿ ಹೊಂದುತ್ತಿದೆ ನಿಜ, ಆದರೆ ಅಲ್ಲಿ ಮುಕ್ತ ಸಮಾಜ ಇಲ್ಲವೇ ಇಲ್ಲ.

ಭಾರತದಲ್ಲಿ ಮಾವೊವಾದಿಗಳು ಕೂಡ ಅವರದೇ ಆದ ಆದರ್ಶ, ಭವಿಷ್ಯದ ಬಗ್ಗೆ ಪರಿಕಲ್ಪನೆ ಇರಿಸಿಕೊಂಡಿದ್ದಾರೆ. ಆದರೆ ಭರವಸೆ ಕಾಣಿಸುತ್ತಿಲ್ಲ. ವಿಚಾರಗಳು ಎಂಥದೇ ಒತ್ತಡದ ಸಂದರ್ಭದಲ್ಲಿಯೂ ಜಾಳು ಜಾಳಾಗಬಾರದು. ಆದರೆ ಇಲ್ಲಿ ಏನಾಗಿದೆ ಎಂಬುದು ಗೊತ್ತಿರುವಂಥದೇ.

ಅಪಹರಣ ಅಥವಾ ಹಫ್ತಾ ವಸೂಲಿ ಇಲ್ಲವೇ ಸ್ಫೋಟ ಇತ್ಯಾದಿಗಳಿಂದ ನಕ್ಸಲೀಯರು ತಾತ್ಕಾಲಿಕವಾಗಿ ಗಮನ ಸೆಳೆಯಬಹುದು. ಆದರೆ ಹಿಂದೆ ತಾವೇ ಕಂಡಿದ್ದಂತಹ ಸೈದ್ಧಾಂತಿಕ ನೆಲೆಯ ಕನಸುಗಳು ನನಸಾಗಲು ಸಾಧ್ಯವಿಲ್ಲ.
 
ನಮಗೆ ಗುರಿ ಎಷ್ಟು ಮುಖ್ಯವೋ ಅದನ್ನು ಈಡೇರಿಸಿಕೊಳ್ಳಲು ಸಾಗುವ ಹಾದಿ ಕೂಡ ಅಷ್ಟೇ ಮುಖ್ಯ ಎಂಬುದನ್ನೂ ಮಾವೊವಾದಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಇಂತಹ ಸಂದರ್ಭದಲ್ಲಿಯೇ ನಮಗೆ  ಗಾಂಧೀಜಿಯವರು ನಡೆದ ದಾರಿ ಬಹಳ ಮುಖ್ಯವೆನಿಸುವುದು. ಗಾಂಧೀಜಿ ಭಾರತದಲ್ಲಿ ತಮ್ಮ ಹೋರಾಟ ಆರಂಭಿಸಿದ ಸುಮಾರು ಮೂರು ದಶಕಗಳಲ್ಲಿ ತಮ್ಮ ಗುರಿ ಸಾಧಿಸಲು ಸಾಧ್ಯವಾಯಿತು.

ಎಡಪಂಥೀಯ ಉಗ್ರರು ಭಾರತದಲ್ಲಿ ಅದಕ್ಕಿಂತ ಹೆಚ್ಚು ವರ್ಷಗಳಿಂದ ಹೋರಾಡುತ್ತಿದ್ದರೂ ಎಲ್ಲಿಗೂ ತಲುಪುತ್ತಿಲ್ಲ. ಈ ಬಗ್ಗೆ ಎಡಪಂಥೀಯ ತೀವ್ರವಾದಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.
(ನಿಮ್ಮ ಅನಿಸಿಕೆ ತಿಳಿಸಿ: editpagefeedback.prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT