ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವನ್ನು ಕೂಡಿ ತಾವೇ ಗುರುವಾದವರಿಗೆ...

Last Updated 17 ಜುಲೈ 2014, 19:30 IST
ಅಕ್ಷರ ಗಾತ್ರ

ಈ ಸಲದ ಗುರುಹುಣ್ಣಿಮೆಯಂದು ಅಂದು ಗುರು­­ಹುಣ್ಣಿಮೆ­ಯೆಂಬುದೇ ಮರೆತು ಹೋಗಿತ್ತು. ನನ್ನನ್ನು ತನ್ನ ಗುರುವೆಂದು ನಂಬಿ­ರುವ ನನ್ನ ಒಬ್ಬ ವಿದ್ಯಾರ್ಥಿನಿ ಬ್ರಾಹ್ಮೀ ಮುಹೂ­ರ್ತ­ದಲ್ಲಿ ಫೋನು ಮಾಡಿ ನನ್ನ ಆಶೀರ್ವಾದ ಕೇಳಿ­ದಳು. ನನಗೆ ನಗು ಬಂತು.  ‘ಒಳ್ಳೆಯ ಶಿಷ್ಯನೂ ಆಗಲೊಲ್ಲದ ನನ್ನಂಥ ಯಃಕಶ್ಚಿತ್ ವ್ಯಕ್ತಿ ಗುರು­­ವಾ­ಗಲು ಸಾಧ್ಯವಿಲ್ಲ, ನಿನಗೆ ನಿಜಗುರು ಸಿಕ್ಕಲಿ’ ಎಂದು ಹೇಳಿ ಮಾತುಮುಗಿಸಿದೆ.
ಈ ದೂರವಾಣಿ ಸಂಭಾಷಣೆ ಗುರು ವಿಚಾ­ರದ ಬಗ್ಗೆ ಪುನರಾಲೋಚಿಸುವಂತೆ ನನಗೆ ಪ್ರೇರಣೆ ನೀಡಿತು.

ಇಂದು ಜಗತ್ತಿನ ತುಂಬಾ ಅಸಂಖ್ಯಾತ ಗುರು­ಗಳು ಇಟ್ಟಾಡುತ್ತಿದ್ದಾರೆ. ಧಾರ್ಮಿಕ ರಚನೆಗಳು ಶಿಥಿ­ಲ­ವಾಗುತ್ತಿರುವ ಸುತ್ತುನೆಲೆಯಲ್ಲಿ ಗುರು­ಮಹಾತ್ಮರಿಗಾಗಿ ಬೃಹತ್ ಮಾರುಕಟ್ಟೆ­ಯೊಂದು ನಿರ್ಮಾಣವಾಗಿದೆ. ಅವಸರದ ಗುರುಗ­ಳಿಗೆ ಅವ­ಸರದ ಶಿಷ್ಯರೂ ಬೇಡಿಕೆ–- ಸರಬ­ರಾಜು ನಿಯಮ­ದನ್ವಯ ಅವತರಿಸುತ್ತಲೇ ಇರು­ತ್ತಾರೆ. ಜಗತ್ತಿಗೆ ವೈರಾ­ಗ್ಯ­ವನ್ನು ಬೋಧಿಸಿ ಆಶ್ರಮ­ಗ­ಳೆಂಬ ಸಂಪ­ತ್ತಿನ ಸಾಮ್ರಾಜ್ಯಗಳನ್ನು ಕಟ್ಟಿ­ಕೊಳ್ಳು­ತ್ತಿ­ರುವ, ಇಂದ್ರಿ­ಯ­­ನಿಗ್ರಹವನ್ನು ಬೋಧಿಸಿ ಕಳ್ಳ ಶೃಂಗಾರ­ಲೀಲೆಗಳಲ್ಲಿ ಸಿಕ್ಕಿಹಾಕಿ­ಕೊ­ಳ್ಳುವ ಗುರು­ವರೇ­ಣ್ಯರಿ­ಗೇನೂ ಕಡಿಮೆಯಿಲ್ಲ. ಗುರು-ಶಿಷ್ಯರ ಬೃಹತ್ ಉತ್ಪಾ­ದ­ನೆಗೆ ಇತರ ಕೆಲವು ದೇಶಗಳ ಕೊಡು­ಗೆ­ಯಿ­ರುವುದು ನಿಜವಾ­ದರೂ ಅದರ ಸಿಂಹಪಾಲು ಭಾರತದ್ದು. ಇಂಥ ಗುರು­ಗಳ ಗುಟ್ಟುಗಳನ್ನು ರಟ್ಟು­ಮಾಡುವ ವಿಚಾರ­ವಂತರ, ಸತ್ಯಶೋಧಕರ ಪ್ರಯತ್ನಗಳೂ ಸದಾ ಜಾರಿಯಿವೆ. ಆಶ್ಚರ್ಯ­ವೆಂದರೆ ಮಾಧ್ಯಮ ಪ್ರಧಾನವಾದ ಅನಿಮಿಷ ಜಗತ್ತಿ­ನಲ್ಲಿ ಈ ರೀತಿಯ ‘ಮಹಿಮೆ’ಗಳು ಸಾರ್ವ­ಜ­ನಿ­ಕರ ಗಮ­ನಕ್ಕೆ ಬಂದ ಮೇಲೂ ಇಂಥಾ ಗುರು­ಗಳ ಬಗೆಗೆ ಅವರವರ ಶಿಷ್ಯವೃಂದದವರಿಗಿ­­ರುವ ಶ್ರದ್ಧೆ ಕುಗ್ಗುವುದಿಲ್ಲ.

ಒಬ್ಬ ಜರ್ಮನ್ ಮಹಿಳೆ ತನ್ನ ಕತೆ ಹೇಳಿದಳು. ಅವ­­ಳೂರಿಗೆ ಭಾರತದ ಯೋಗ-ವೇದಾಂತದ ಗುರು­ವೊಬ್ಬ ಬಂದ. ಅವನಿಂದ ಯೋಗ ಅಂದರೆ ಆಸನ­­ಗಳನ್ನು ಆಕೆ ಕಲಿತಳು. ಅವನ ಸಂಸ್ಥೆಯ ಯೋಗ­­ಗುರುವೂ ಆದಳು. ಆತ ಅವಳಿಗೆ  ಕಾಮ ಮಹಾನ್ ಪಾಪವೆಂದು ಸದಾ ಬೋಧಿಸುತ್ತಿದ್ದ. ತುಂಬಾ ಜಾಣಳಾದರೂ ಸ್ವಲ್ಪ ಕೋಣಳಾಗಿದ್ದ ಅವಳು ಅವನು ಅಂದದ್ದೆಲ್ಲಾ ಅಮೃತ­ವಾಕ್ಯ
ವೆ­ಂದು ನಂಬಿದ್ದಳು. ಅವಳು ಗಂಡನ ಜೊತೆ ಮಲ­­ಗು­ವುದನ್ನೂ ಬಿಟ್ಟಳು. ಕೆಲವು ದಿನಗಳ ನಂತರ ಗುರುವಿನ ಮಾಯಾಸಿದ್ಧಾಂತದ ಇನ್ನೊಂದು ಮುಖ ಅವಳಿಗೆ ತೋರತೊಡಗಿತು. ಆತ ತನ್ನ ಶಿಷ್ಯರ ಜಾತಕಗಳನ್ನು ಓದಿ ಅವರ ಲೌಕಿಕ ತೊಂದರೆಗಳ ಪರಿಹಾರಕ್ಕಾಗಿ ಯಥೇ­ಚ್ಛ­ವಾಗಿ ಕಾಸು ಕೀಳತೊಡಗಿದ; ಚಿನ್ನ-–ಬೆಳ್ಳಿ ಯಂತ್ರ­ಗ­­ಳನ್ನು ದುಬಾರಿ ಬೆಲೆಗೆ ಮಾರತೊಡಗಿದ. ಅವಳು ತನ್ನ ಗುರುವಿನ ಜೊತೆ ಭಾರತಕ್ಕೆ ಬಂದಾಗ ಅವಳ ಮೇಲೆ ಕೈಹಾಕಿ ಕಾಮಕೇಳಿಗೆ ಬಲ­­ವಂತ ಮಾಡತೊಡಗಿದ. ಅವಳಿಗೆ ಪೂರ್ತಿ ಭ್ರಮಾ­ಭಂಗವಾಯಿತು. ಅಂದಿನಿಂದ ಗುರು ಪದ ಕೇಳಿ­ದರೆ ಸಾಕು ಅವಳು ತಾಳ್ಮೆಗೆಡುತ್ತಾಳೆ. ಮತ್ತೆ ಭಾರ­ತಕ್ಕೆ ಬರುವ ಧೈರ್ಯ ಮಾಡಲಿಲ್ಲ. ಗಂಡನ ಮನೆಗೆ ವಾಪಸಾದರೂ ಅವರಿಬ್ಬರ ಸಂಬಂಧ ಮೂರು ದಶಕಗಳಿಂದ ನಿತ್ಯ ಚಿತ್ರಹಿಂಸೆಯಾಗಿ ಮಾರ್ಪ­ಟ್ಟಿದೆ.  ಇದು ‘ಗುರುಮಹಿಮೆ’ಯ ಒಂದು ಉದಾಹರಣೆ.

ಇಂಥ ‘ಗುರುಮಹಿಮೆ’ಗಳ ಕತೆಗಳು ಭಾರತ­ದಲ್ಲೂ ಹೇರಳವಾಗಿ ಸಿಕ್ಕುತ್ತವೆ. ಹೃಷಿಕೇಶದಲ್ಲಿ ಹುಟ್ಟಿ ಬೆಳೆದ ಸಾಮಾಜಿಕ ಆಂದೋಲನಕಾರ ತ್ರಿಪನ್ ಸಿಂಗ್ ಚವಾಣರ ಬಳಿ ಹೃಷಿಕೇಶದ ಬಹು­­ತೇಕ ಮಹಾತ್ಮರ ಕುಂಡಲಿ ಇದೆ. ಅವರ ಪ್ರಕಾರ ಸ್ವಾಮಿ ಶಿವಾನಂದರಂತಹ ಕೆಲವೇ ಸಾಚಾ ಯೋಗಿಗಳನ್ನು ಹೊರತುಪಡಿಸಿದರೆ ಮಿಕ್ಕ­­ವರು ಡೋಂಗಿಗಳು. ನೆಲ­ಗಳ್ಳತನ­ದಲ್ಲಿ ನಿಸ್ಸೀಮರು.

ಅಂಥವರ­ಲ್ಲೊ­ಬ್ಬನಿಗೆ ದೆಹಲಿ­ಯ ಶ್ರೀಮಂತ ದಂಪತಿ ಶಿಷ್ಯ­ರಾ­ದರು. ವ್ಯವಹಾ­ರದ ತೊಂದರೆಯಲ್ಲಿದ್ದ ಗಂಡ­ನಿಗೆ ಆಶ್ರಮದ ಶಾಂತಿಯ ಅಗತ್ಯವಿತ್ತು. ಹೆಂಡತಿ ಅನು­­­­ಪಮ ಚೆಲುವೆ. ಅವಳ ಮೇಲೆ ಗುರುವಿನ ಕಣ್ಣು ಬಿತ್ತು. ಅವ­ಳಲ್ಲಿ ವಿಶೇಷವಾದ ಆಧ್ಯಾತ್ಮಿಕ ಅರ್ಹತೆಯಿ­ದೆ­­ಯೆಂದು ನಂಬಿಸಿ ಅವಳಿಗೆ ವಿಶೇಷ ತರಪೇತಿ ಕೊಡು­­­ವುದಕ್ಕಾಗಿ ಆಶ್ರಮದಲ್ಲೇ ಇರು­ವಂತೆ ಪ್ರೇರೇ­ಪಿಸಿದ. ಅವಳನ್ನು ಲೈಂಗಿಕವಾಗಿ ವಶಪ­ಡಿಸಿ­ಕೊಂಡು ತನ್ನ ಕೈಗೊಂಬೆಯನ್ನಾಗಿ­ಸಿ­ಕೊಂಡು ಅವಳ ಸಹಕಾರದಿಂದ ಗಂಡನನ್ನು ಚಾಣಾ­­ಕ್ಷ­­ವಾಗಿ ಕೊಲೆ ಮಾಡಿಸಿದ. ತಾವಿಬ್ಬರೂ ಅವಳ ಗಂಡನ ಅಪಾರ ಆಸ್ತಿಯ ನೆರವಿನಿಂದ ಅಮೆರಿಕ­ದಲ್ಲಿ ಆಶ್ರಮ ಸ್ಥಾಪಿಸಿ ಎರ್ರಾಬಿರ್ರಿ ಕಾಸು ಮಾಡಿ­ಕೊಳ್ಳ­ಬಹುದೆಂದು ಅವಳನ್ನು ಒಪ್ಪಿಸಿದ್ದ.  ಆದರೆ ಅವನ ಯಶಸ್ಸು ಅಲ್ಪಕಾಲೀನವಾಗಿತ್ತು. ಆ ಮಹಿ­ಳೆಗೆ ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಬಂದು ಪೊಲೀ­ಸರಿಗೆ ಶರಣಾಗಿ ತಪ್ಪೊಪ್ಪಿ­ಕೊಂಡಳು. ಕಳ್ಳ­ಗುರು ಸಿಕ್ಕಿಬಿದ್ದ. ಇಬ್ಬರಿಗೂ ಜೀವಾ­ವಧಿ ಶಿಕ್ಷೆ ದೊರಕಿತು.

ಇಂಥಾ ‘ಗುರುಮಹಿಮೆ’ಗಳಷ್ಟೇ ಪೂರ್ಣ ಸತ್ಯ­ವಾಗಿದ್ದರೆ ಗುರು-ಶಿಷ್ಯ ಸಂಬಂಧ ಒಂದು ಮೋಸದ ಜಾಲವೆಂದು ತೀರ್ಮಾನಿಸಿಬಿಡಬಹು­ದಾ­ಗಿತ್ತು. ಆದರೆ ರಾಮಕೃಷ್ಣ, ರಮಣ ಮಹರ್ಷಿ ಮುಂತಾದ ನೂರಾರು ನಿಸ್ವಾರ್ಥಿ ಗುರು­ಗಳ ಪರಂಪರೆಯೂ ನಮ್ಮ ಮುಂದಿದೆ. ರಾಮ­ಕೃಷ್ಣರಾಗಲಿ ರಮಣರಾಗಲಿ ಯಾವ ಪ್ರಲೋ­ಭನೆಗೂ ಸಿಗಲಿಲ್ಲ. ರಮಣರು ಕಾಸನ್ನು ಮುಟ್ಟ­ಲಾರೆನೆಂಬ ವ್ರತ ತೊಟ್ಟಿದ್ದರು. ಹರಿ­ಯುವ ತಿಳಿನೀರಿನ ಹಾಗೆ ತಮ್ಮನ್ನು ಸದಾ ಶುದ್ಧ­ವಾ­ಗಿರಿಸಿಕೊಂಡಿದ್ದರು. ರಾಮಕೃಷ್ಣರು ನಿರ್ಮ­ಲತೆಯ ಸಾಕಾರವಾಗಿದ್ದರು. ಇಂತಹ ನಿಜಗುರು­ಗಳು ಲೋಕಪ್ರಸಿದ್ಧರಾಗಬೇಕೆಂಬ ನಿಯಮವೂ ಇಲ್ಲ. ಪ್ರಚಾರದ ಕಣ್ಣಿಗೆ ಬೀಳದಂತೆ ಪ್ರಾಮಾಣಿಕ­ವಾಗಿ ತಮ್ಮ ಸಾಧನೆ ಮಾಡಿಕೊಂಡು ಶಿಷ್ಯರಿಗೆ ದಾರಿ ತೋರುತ್ತಿರುವ ಅನೇಕ ಗುರುಗಳನ್ನು ನಾನು  ಭಾರತದಾದ್ಯಂತ ಕಂಡಿದ್ದೇನೆ. ವಿವೇಕಾ­ನಂದ ಮತ್ತಿತರ ಶಿಷ್ಯರು ಸಿಗದಿದ್ದರೆ ರಾಮಕೃ­ಷ್ಣರು ಇದ್ದದ್ದೂ ನಮಗೆ ಗೊತ್ತಾಗುತ್ತಿರಲಿಲ್ಲ. ಇಂಥ­ವರನ್ನೇ ಶಂಕರಾನಂದ ಶಿವಯೋಗಿಗಳು ತಮ್ಮ ರಚನೆಯೊಂದರಲ್ಲಿ ‘ಉನ್ನತ ಜೀವ ರತ್ನ’­ಗಳೆಂದು ಕರೆದದ್ದು. ಇಂಥ ಒಬ್ಬಿಬ್ಬರು ಸಾಚಾ ಯೋಗಿ­ಗಳ ನಿಕಟ ಪರಿಚಯವನ್ನು ನನ್ನ  ‘ಬತ್ತೀಸ­ರಾಗ’ದಲ್ಲಿ ಮಾಡಿಕೊಟ್ಟಿದ್ದೇನೆ.

ಭಾರತೀಯ ಆಧ್ಯಾತ್ಮಿಕ ಪರಂಪರೆಗಳಲ್ಲಿ ಗುರುವಿಗೆ ವಿಶೇಷ ಸ್ಥಾನ ಕೊಡಲಾಗಿದೆ.  ‘ನ ಗುರೋ­­ರ­ಧಿಕಂ’ ಎಂದಿದೆ ಗುರುಮಹಿಮಾ ಸ್ತ್ರೋತ್ರ. ‘ಶಿವಪಥವನರಿವಡೆ ಗುರುಪಥವೇ ಮೊದಲು’ ಎಂಬುದು ಬಸವವಚನ.  ಚೌರಾಂಶಿ­ಲಕ್ಷ­ಜೀವಿಗಳನ್ನು ಮಾತೃ­ವಾತ್ಸಲ್ಯದಿಂದ ಪೊರೆದು ಶಿಷ್ಯರಿಗೆ ಸಮಸ್ತ ವಿದ್ಯೆಯನ್ನು ಧಾರೆ­ಯೆ­ರೆಯುವ ಕೆಲವೇ ಗುರುಗಳ ನಡುವೆ ನಕಲಿ  ಗುರು­ಗಳೂ ಇಂದಿನಂತೆ ಹಿಂದೆಯೂ ಇದ್ದರು. ಇಂಥ­ವರ ಬಗ್ಗೆ ಎಚ್ಚರಿಕೆಯನ್ನೂ ಸಾಚಾ ಯೋಗಿ­ಗ­ಳು ಕೊಡುತ್ತಾ ಬಂದಿದ್ದಾರೆ. ವಚನಕಾ­ರರು ತಮ್ಮ ರಚನೆಗಳಲ್ಲಿ ಅಂಥವರನ್ನು ಕಟು­ವಾಗಿ ಟೀಕಿಸಿದ್ದಾರೆ. ‘ಪದುಮನಾಭನಲಿ ಲೇಶ ಭಕುತಿ­ಯಿರದ ಉದರವೈರಾಗ್ಯ’ದವರ ಬಗ್ಗೆ ಪುರಂ­ದರ ದಾಸರೂ ಎಚ್ಚರಿಕೆ ನೀಡಿದ್ದಾರೆ. ಆಧು­ನಿಕ ಯುಗದ ಅಸಾಂಪ್ರದಾಯಿಕ ಯೋಗಿಯಾ­ಗಿದ್ದ ಜಿಡ್ಡು ಕೃಷ್ಣಮೂರ್ತಿ ಅವರು ಇಂದಿನ ಗುರು­ಗಿ­­ರಿಗೆ ಹೇಸಿ ಇಡೀ ಗುರು-ಶಿಷ್ಯ ಸಂಸ್ಥೆ­ಯನ್ನೇ ಪ್ರಶ್ನಿಸತೊಡಗಿದರು.

ಇಂದಿನ ಪ್ರಚಾರಪ್ರಿಯ ಯುಗದಲ್ಲಿ ಗುರು­ಗಳ ವ್ಯಕ್ತಿಪೂಜೆಯ ಅಪಾಯ ಎಂದಿಗಿಂತಲೂ ಹೆಚ್ಚಾ­ಗಿದೆ. ಅಸಮಾನತೆಯ ವಿಷಮ ಸನ್ನಿವೇಶ­ದಲ್ಲಿ ಇಂದು ಬಡವರಂತೆ ಬಲ್ಲಿದರೂ ಅಶಾಂತಿ­ಯಿಂದ ಹತಾಶರಾಗುತ್ತಿದ್ದಾರೆ. ಇಂಥ ಪರಿಸ್ಥಿತಿ­ಯಲ್ಲಿ ಒಂದಿಷ್ಟು ಶಾಂತಿ ದೊರಕೀತೆಂಬ ನಂಬುಗೆ­ಯಿಂದ ಸರ್ವಶಕ್ತರಂತೆ ಸೋಗು ಹಾಕುವ ‘ಗುರು’­ಗಳಿಗೆ ಸುಲಭವಾಗಿ ಬೇಸ್ತು ಬೀಳುತ್ತಾರೆ. ತಮ್ಮ ಜವಾಬುದಾರಿಯನ್ನು ಗುರುವಿಗೆ ವರ್ಗಾ­ಯಿಸಿ ಹಗುರವಾಗಲಿಚ್ಛಿಸುತ್ತಾರೆ. ಹೀಗೆ ಶರಣಾ­ಗತ­­ರಾದವರ ದೌರ್ಬಲ್ಯಗಳನ್ನು ಬಳಸಿಕೊಂಡು ಖೋಟಾ ಗುರುಗಳು ಹೆಚ್ಚುಹೆಚ್ಚು ಪ್ರಭಾವ ಬೆಳೆಸಿ­ಕೊಳ್ಳುತ್ತಾರೆ. ‘ಅಂಧಕನ ಕೈಯನ್ನು ಅಂಧಕ ಹಿಡಿದಂತೆ’ ಶಿಷ್ಯರನ್ನು  ಕತ್ತಲದಾರಿ­ಯಲ್ಲಿ ಇನ್ನೂ ದೂರ ಕೊಂಡೊಯ್ಯುತ್ತಾರೆ.

ಚಿಕ್ಕಂದಿನಿಂದ ಗುರುಗಳ ಬಗ್ಗೆ ಅದಮ್ಯ ಆಸಕ್ತಿಯಿದ್ದ ನಾನು ಬೆಟ್ಟ-ಗುಡ್ಡಗಳ ನಡುವೆ, ಹಳ್ಳಿ-ನಗರಗಳಲ್ಲಿ ಗುರುಗಳನ್ನು ಅರಸುತ್ತಾ ಅಲೆದಾಡಿದ್ದೇನೆ. ನನಗೆ ಸಿಕ್ಕ ಗುರುಗಳಲ್ಲಿ ಕಳ್ಳಗುರುಗಳೇ ಹೆಚ್ಚು. ಸದ್ಗುರುಗಳು ತೀರಾ ಅಪರೂಪ. ಇನ್ನು ಕೆಲವರು ನಡುಮಧ್ಯದವರು. ಕೆಲವು ಗುರುಗಳಿಂದ ಅನರ್ಘ್ಯವಾದ ಸಂಸ್ಕಾರ­ಗ­ಳನ್ನು ಪಡೆದುಕೊಂಡ ಮೇಲೂ ಹಲವು ಸಲ ಡೂಪ್ಲಿಕೇಟ್ ಗುರುಗಳಿಂದ ವಂಚನೆಗೂ ಒಳಗಾ­ದ­ದ್ದು­ಂಟು. ಖೋಟಾ ಗುರುಗಳು ನನ್ನಲ್ಲುಂಟು ಮಾಡಿದ ತಮಂಧಘನವನ್ನು ನಿಜಗುರುಗಳು ಕಿರು­ಸೊ­ಡರಿನಿಂದ ದೂರಮಾಡಿದ್ದರಿಂದಲೇ ಗುರು­ಗಿರಿಯ ಅಪಾಯಗಳು ಪೂರ್ಣ ಗೊತ್ತಿ­ದ್ದರೂ ಗುರುತತ್ವವನ್ನು ನಿರಾಕರಿಸುವ ಅಗತ್ಯ ನನಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಗುರು­ವಿಚಾರದ ಬಗ್ಗೆ ನನ್ನ ಕೆಲವು ಅನು­ಭ­ವೋ­ಕ್ತಿಗ­ಳನ್ನು ನಿಮ್ಮ ಮುಂದಿಡಬಯಸುತ್ತೇನೆ.

‘ಗುರೂರುಪಾಯಮ್’ ಎಂಬ ‘ಶಿವ­ಸೂ­ತ್ರ’ದ ಮಾತು ಮಹತ್ವಪೂರ್ಣ. ಅಂದರೆ ಗುರು ಎಷ್ಟೇ ಮುಖ್ಯವಾದರೂ ಅವನು ಗುರಿ­ಯಲ್ಲ, ಉಪಾಯ ಮಾತ್ರ. ಹಾಗಿದ್ದರೆ ಗುರಿ? ನನ್ನ ಸೂಫಿ ಗುರು ಆಶದುಲ್ಲಾ ಖಾದ್ರಿ ಶಿವ­ಯೋಗಿ­ಗಳು ತಮ್ಮ ಸರಳ ಭಾಷೆಯಲ್ಲಿ ಹೇಳು­ತ್ತಿ­ದ್ದರು: ‘ನಿನ್ನ ಗುರುತನ್ನು ನಿನಗೆ ಕೊಡುವುದೆಲ್ಲಾ ಗುರುವೇ’. ಹೀಗಾಗಿ ಗುರು ಒಬ್ಬ ವ್ಯಕ್ತಿಯಾಗಿರ­ಬ­­ಹುದು. ಆತ ಶರೀರಧಾರಿ ವ್ಯಕ್ತಿಯಾಗಬೇಕೆಂಬ ನಿಯ­ಮ­ವಿಲ್ಲ. ನನ್ನ ಪರಮಗುರುಗಳು ಅಶರೀರ ಸ್ಥಿತಿ­­ಯಲ್ಲಿದ್ದು ನನಗೆ ಜಾಗೃದೇತರ ಸ್ಥಿತಿಗಳಲ್ಲಿ ಅರು­­ಹುತ್ತಾರೆ. ‘ಊರಿಂಗೆ ದಾರಿಯನು ಆರು ತೋರಿ­ದರೇನು? ಸಾರಾಯದ ನಿಜವ ತೋರು­ವನೆ ಗುರು’ ಅನ್ನುತ್ತಾನೆ ಸರ್ವಜ್ಞ. ವ್ಯಕ್ತಿಯಲ್ಲದ ಗುರು­­ಗಳೂ ಇವೆ. ಕಲಿಯುಗದಲ್ಲಿ ಗುರುಗಳು ದುರ್ಲ­ಭ­ವೆಂಬ ಕಾರಣ ಸಿಖ್ಖರ ಕೊನೆಯ ಗುರು ಗುರು ಗೋಬಿಂದ್ ಸಿಂಗ್ ‘ಗುರು ಗ್ರಂಥ­ಸಾ­ಹಿಬ್’ ಅನ್ನೇ ಗುರುವೆಂದು ಸಾರಿದ. ಚೀನಾ­ದಲ್ಲಿ ಕಾಲಜ್ಞಾನದ ಪುಸ್ತಕವಾದ ‘ಆಯ್ ಕಿಂಗ್’ ಅನ್ನೇ ಗುರುವೆಂದು ಕೆಲವರು ನಂಬು­ತ್ತಾ­ರೆ­.
ನಾನು ಸಂಧಿಸಿದ ಹಿರಿಯ ಯೋಗಿಗಳಲ್ಲೊಬ್ಬ­ರಾದ ವಿಜಾಪುರ ಜಿಲ್ಲೆಯ ನಾಥಪಂಥೀಯ ಗುರು ಶ್ರೀಮದ್ವೀರೇಶ ಪ್ರಭುಗಳು ನನಗೊಮ್ಮೆ ಹೇಳಿ­ದರು: ‘ಈ ಮಾಂಸಪಿಂಡವನ್ನು ಗುರು­ವೆಂದು ತಿಳಿದರೆ ಅಪಾಯ. ಗುರುವಿನದು ಮಂತ್ರ­ಪಿಂಡ. ಒಮ್ಮೆ ಶಿಷ್ಯನಿಗೆ ಒಂದು ಮಂತ್ರವನ್ನೋ ಅಥವಾ ಇನ್ಯಾವುದೋ ಧ್ಯಾನಕ್ರಮವನ್ನೋ ಕೊಟ್ಟೊ­ಡ­ನೆ ಗುರುವಿನ ಕೆಲಸ ಮುಗಿಯಿತು. ಅಂದಿಂದ ಆ ಸಾಧನಾಕ್ರಮವೇ ಗುರು’.

ಶಿಷ್ಯನೊಳಗಿನ ಗುರುತತ್ವವನ್ನು ಹಸ್ತಮಸ್ತಕ ಸಂಯೋಗದಿಂದ ಎಚ್ಚರಿಸುವ ಕ್ರಿಯೆಯನ್ನೇ ದೀಕ್ಷೆ­ಯೆಂದು ತಂತ್ರಾಗಮಗಳು ಕರೆದಿವೆ. ಆ ಗುರು­ತತ್ವವು ಪೂರ್ಣ ಜಾಗೃತಿ ಹೊಂದಿದಾಗ ಶಿಷ್ಯನೇ ಗುರು. ಅಲ್ಲಮನನುಸಾರ ‘ಗುರುವೇ ಶಿಷ್ಯ­ನಾದ ತನ್ನ ವಿನೋದಕ್ಕೆ, ಶಿಷ್ಯನೇ ಗುರು­ವಾದ ತನ್ನ ವಿನೋದಕ್ಕೆ’. ಈ ಅವಿನಾ ಸಂಬಂಧ ಗುರು­ಶಿಷ್ಯರಿಬ್ಬರಿಗೂ ಜೀವಾಳ. ದೀಕ್ಷಾ ಕ್ರಮ ವಿಧಿ­ಪೂರ್ವಕವೇ ನಡೆಯಬೇಕೆಂದಿಲ್ಲ. ಉದಾ­ಹ­ರ­ಣೆಗೆ ಅಲ್ಲಮನಿಗೆ  ದೀಕ್ಷೆ ನೀಡಿದ ಅವನ ಕಾಣ­ಬಾ­ರದ ಗುರು ತನ್ನ ಶಿಷ್ಯನಿಗಿತ್ತದ್ದು ‘ಪೂಜೆಗೆ ಬಾರದ ಲಿಂಗ’.

ಗುರು ವ್ಯಕ್ತಿಯಲ್ಲ, ಬದಲಿಗೆ ಒಂದು ತತ್ವವೆಂದು ತಿಳಿದದ್ದರಿಂದ ಯಾವ ನಿಜಗುರುವೂ ಶಿಷ್ಯನಲ್ಲಿ ಶಕ್ತಿಯನ್ನು ಜಾಗೃತಗೊಳಿಸಿದ ಬಳಿಕ ಅವನು ತನ್ನ ಮೇಲೆ ಅವಲಂಬಿತ­ನಾಗಿ­ರ­ಬೇ­ಕೆಂದು ಬಯಸುವುದಿಲ್ಲ. ಸ್ವಾಮಿ ಶಿವಾನಂದರು ತಮ್ಮ ಶಿಷ್ಯ ಸತ್ಯಾನಂದರಿಗೆ ಕ್ರಿಯಾದೀಕ್ಷೆ ನೀಡಿದ ಮರು­ಕ್ಷಣವೇ ಜಾಗ ಬಿಡಿಸಿದರು. ಆದರೆ ಶಿಷ್ಯ ಇಂಥಾ ದೀಕ್ಷೆಗೆ ತಯಾರಾಗುವವರೆಗೆ ಗುರು  ಅನೇಕ ಪರೀಕ್ಷೆಗಳನ್ನು ನೀಡುತ್ತಿರುತ್ತಾನೆ.

ಟಿಬೆ­ಟ್ಟಿನ ಮಹಾಯೋಗಿ  ಮಿಲರೇಪನಿಗೆ ಆತನ ಗುರು­ ಮಾರ್ಪಾ ಅಗ್ನಿಪರೀಕ್ಷೆಗಳನ್ನು ನೀಡಿದ. ಮಾರ್ಪಾ, ಮಿಲರೇಪನಿಗೆ ಗುಡ್ಡದ ಮೇಲೆ ಬುದ್ಧ­ವಿಹಾರವನ್ನು ಕಟ್ಟಲು ಹೇಳಿದ. ಅದನ್ನು ಕಟ್ಟಿ ಮುಗಿಸಿದ ಕೂಡಲೇ ಕೆಡವಲೆಂದು ಹೇಳಿದ. ಎಷ್ಟೋ ಸಲ ಕಟ್ಟಿಸಿ, ಕೆಡವಿಸಿ ಮಿಲರೇಪನ ಅಹಂಕಾ­ರ­ವನ್ನು ನಷ್ಟಗೊಳಿಸಿದ ನಂತರ ಅವನಿಗೆ ತನ್ನೆಲ್ಲಾ ಜ್ಞಾನವನ್ನು ಧಾರೆಯೆರೆದ. ಆ ನಂತರ ಮಿಲ­ರೇಪ ಬೌದ್ಧಜಗತ್ತಿನ ಮಹಾನ್ ಜ್ಯೋತಿ­ಯಾಗಿ ಬೆಳಗಿದ.

ಶಿಷ್ಯನು ಒಬ್ಬನೇ ಗುರುವಿನ ಅಡಿಯಾಳಾಗಿರ­ಬೇ­ಕೆಂಬುದು ಗುರು ಮಾಫಿಯಾಗಳ ಅಂಬೋಣ. ಕಾಶ್ಮೀರದ ಮಹಾನ್‌ ಯೋಗಿ ಅಭಿನವ­ಗುಪ್ತನಿಗೆ ಮೂವರು ಗುರುಗಳು ಮೂರು ಮಾರ್ಗದಲ್ಲಿ ದೀಕ್ಷೆ ಕೊಟ್ಟರು. ರಾಮ­ಕೃಷ್ಣರಿಗೆ ಇಬ್ಬರು ಗುರುಗಳು. ತಿರುವಣ್ಣಾ­ಮಲೈನ ಅವಧೂತಯೋಗಿ ರಾಂ ಸುರತ್ಕುಮಾರ­ರಿಗೆ ಅರವಿಂದರು, ರಮಣ ಮಹರ್ಷಿ, ಪಪ್ಪಾ ರಾಮದಾಸ್– ಹೀಗೆ ಮೂವರು ಗುರುಗಳು.
ನನ್ನ ಸೂಫಿಗುರು ಹೇಳುತ್ತಿದ್ದರು: ‘ಶಿವನ ಹಾಗೆ ಗುರುವೂ ಎಲ್ಲಾ ತವಲೂ ಅವನೆ.   ಅವನನ್ನ ಕಾಣ ಕಣ್ಣುಗಳನ್ನ ಪಡಕೊ’.
ಇಂದಿನ ಖೋಟಾಗುರುಗಳ ಸೂಪರ್ ಮಾರ್ಕೆ­ಟ್ಟಿ­ನಲ್ಲೆ ನಿಜಗುರು ಅಡಗಿದ್ದಾನೆ.  ‘ಅಪ­ರಿ­ಮಿತದ ಕತ್ತಲೆಯೊಳಗೆ ವಿಪರೀತದ ಬೆಳಕನಿಕ್ಕಿ­ದ­ವ­ರಾರೋ? ಬೆಳಗೂ ಅದೆ, ಕತ್ತಲೆಯೂ ಅದೆ!’ ಎಂದ ಅಲ್ಲಮ.

ಹೀಗೆ ಅನುಭವದ ಮುಖೇನ ಶಾಸ್ತ್ರಗಳನ್ನು  ಅರ್ಥೈಸಿ­ಕೊಳ್ಳುತ್ತಾ ಹೋದರೆ ಗುರುತತ್ವವನ್ನು ಅರಸುವವರಿಗೆ ‘ಅರಸುವ ಬಳ್ಳಿ ಕಾಲ ತೊಡರು­ವಂತೆ’ ಗುರುತತ್ವ ತಾನಿದ್ದಲ್ಲಿಯೇ, ತನ್ನೊಳಗೇ ಸಿಗ­­ಬ­ಹುದು. ಪ್ರಚಾರಪ್ರಿಯ ಗುರುಗಳ ಹಿಂದೆ ಇಡೀ ಲೋಕದಲ್ಲಿ ಅಲೆದಾಡಿದರೂ ಏನೂ ಸಿಗದೇ ಹೋಗಬಹುದು.

ಹೀಗೆ ತನ್ನೊಳಗಿನ ನಿಜಗುರುವನ್ನು ಗಳಿಸಿ­ಕೊಂಡ ಬಳಿಕ ಶಿಷ್ಯ ಅನುತ್ತರ ಸ್ಥಿತಿ ತಲುಪುತ್ತಾನೆ. ಗುರು ಸಿಕ್ಕಿದ ಅನುಭವದ ತೀವ್ರತೆ ಮತ್ತು ಉತ್ಕಟತೆ­ಗಳನ್ನು ಅನೇಕ ಮಂದಿ ಕವಿಗಳು ಅದ್ಭುತ ಉಪಮಾರೂಪಕಗಳಿಂದ ಬಣ್ಣಿಸಿದ್ದಾರೆ. ಅನುಭವದ ಸರಳ ಸುಂದರ ನಿರೂಪಣೆ­ಯೊಂದು ಕನ್ನಡ ಜಾನಪದ ಕವಿಯೊಬ್ಬಳಲ್ಲಿದೆ:
ನಿದ್ದುರೆಗಣ್ಣಲಿ ಕಂಡೆ ಸದ್ದಗುರುವಿನ ಪಾದ
ನಿದ್ದೂರೆ ತಿಳಿದಾಗ ನಿರ್ವಯಲು! ಶ್ರೀಗುರುವೆ
ರುದ್ದುರನ ಮೈಮೆ ತಿಳಿಯಾದು
ಹೀಗೆ ಗುರುವನ್ನು ಕಂಡು ಗುರುವನ್ನು ಕೂಡಿ ತಾವೇ ಗುರುವಾದವರಿಗೆ  ಪ್ರತಿ ದಿನವೂ ಗುರುಹುಣ್ಣಿಮೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT