ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬಿ ಬಣ್ಣದ ಸಾಂಕೇತಿಕತೆ ಆಚೆಗೆ ದಕ್ಕಿದ್ದು ಏನು?

Last Updated 6 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಸರ್ಕಾರದ ಲಿಂಗತ್ವ ನೀತಿಗಳು ಹಾಗೂ ಅವುಗಳ ಅನುಷ್ಠಾನದ ಮಧ್ಯದ ಪ್ರಮುಖ ಕೊಂಡಿ, ಬಜೆಟ್. ಬಜೆಟ್ ಮಂಡನೆ ಎಂಬುದು ಲಿಂಗತ್ವ ಸಮಾನತೆಗೆ ಬದ್ಧತೆಯನ್ನು ಪ್ರದರ್ಶಿಸಲು ಇರುವ ಒಂದು ಅವಕಾಶ. ಗುರಿ ಅಥವಾ ಉದ್ದೇಶವನ್ನು ಕ್ರಿಯೆಯಾಗಿ ಪರಿವರ್ತಿಸಿ ಜನರ ಬದುಕಿನ ಮೇಲೆ ಪರಿಣಾಮ ಬೀರಲು ಸಾಕಷ್ಟು ಹಣಕಾಸು ಹಂಚಿಕೆಗೆ ಇಲ್ಲಿ ಅವಕಾಶವಿದೆ. ಪುರುಷರು ಹಾಗೂ ಮಹಿಳೆಯರ ಮೇಲೆ ಭಿನ್ನ ರೀತಿಗಳಲ್ಲಿ ಬಜೆಟ್ ಪ್ರಸ್ತಾವಗಳು ಅನುಕೂಲ ಮಾಡಿಕೊಡಬಹುದು. ಅಥವಾ ಪಿತೃ ಪ್ರಧಾನ ಸಾಮಾಜಿಕ ತತ್ವಗಳು ಹಾಗೂ ಪೂರ್ವಗ್ರಹಗಳನ್ನೇ ಮತ್ತೆ ಬಲಪಡಿಸಲೂಬಹುದು.

ಹೀಗಾಗಿಯೇ ಲಿಂಗತ್ವ ಸಂವೇದನಾಶೀಲ ಬಜೆಟಿಂಗ್ ಎಂಬುದನ್ನು (ಜೆಂಡರ್ ರೆಸ್‍ಪಾನ್ಸಿವ್ ಬಜೆಟಿಂಗ್- ಜಿಆರ್‌ಬಿ) 2005-06ರಲ್ಲಿ ಭಾರತ ಸರ್ಕಾರ ಅಳವಡಿಸಿಕೊಂಡಿತು. ಹತ್ತಕ್ಕೂ ಹೆಚ್ಚು ವರ್ಷಗಳಾಗಿವೆ ಈ ಪರಿಕಲ್ಪನೆಯನ್ನು ಅಳವಡಿಸಿಕೊಂಡು. ಆದರೂ ಇದರ ಪರಿಣಾಮಗಳು ದೊಡ್ಡ ಮಟ್ಟದಲ್ಲಿ ಕಾಣಿಸುತ್ತಿಲ್ಲ. ಜಿಆರ್‌ಬಿ ಎಂದರೆ, ಮಹಿಳೆಯರಿಗಾಗಿ ಬರೀ ಹಣಕಾಸು ಹಂಚಿಕೆ ಮಾಡುವುದಲ್ಲ. ಲಿಂಗತ್ವದ ಕನ್ನಡಿಯಲ್ಲಿ ಬಜೆಟ್ ಅನ್ನು ಪರಿಶೀಲನೆಗೆ ಒಳಪಡಿಸುವುದು.

ಭಾರತದ ಜನಸಂಖ್ಯೆಯಲ್ಲಿ ಶೇ 48ರಷ್ಟಿದ್ದಾರೆ ಮಹಿಳೆಯರು. ಪ್ರಮುಖ ಸಾಮಾಜಿಕ ಸೂಚ್ಯಂಕಗಳಾದ ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ರಂಗಗಳಲ್ಲಿ ಮಹಿಳೆಯರು ಈಗಲೂ ಹಿಂದುಳಿದಿದ್ದಾರೆ ಎಂಬುದು ನಾಚಿಕೆಗೇಡು. ಈ ವಿಚಾರದ ಬಗ್ಗೆ ಈ ಸಾಲಿನ ಎಂದರೆ 2018ರ ಆರ್ಥಿಕ ಸಮೀಕ್ಷೆಯು ತನ್ನ ಮುಖಪುಟವನ್ನು ಗುಲಾಬಿ ಬಣ್ಣದಲ್ಲಿ ಮುದ್ರಿಸಿ ಗಮನ ಸೆಳೆದಿದೆ. ಪುತ್ರ ವ್ಯಾಮೋಹವನ್ನು ಪ್ರಮುಖ ಲಿಂಗತ್ವ ವಿಚಾರವಾಗಿ ಈ ಸಮೀಕ್ಷೆ ಎತ್ತಿ ಹೇಳಿದೆ.

ಹೀಗಿದ್ದೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‍‍ಡಿಎ ಸರ್ಕಾರದ ಬಹುಮುಖ್ಯ ಯೋಜನೆಯಾದ ‘ಬೇಟಿ ಬಚಾವೊ ಬೇಟಿ ಪಢಾವೊ’ಗೆ ಈ ವರ್ಷ ₹ 280 ಕೋಟಿ ಹಂಚಿಕೆಯಾಗಿದೆ. ಕಳೆದ ಸಾಲಿಗಿಂತ ಕೇವಲ ₹ 80 ಕೋಟಿ ಹೆಚ್ಚಳ ಅಷ್ಟೆ ಇದು. ಬೇರೆ ಮಹಿಳಾ ಪರ ಯೋಜನೆಗಳಿಗೆ ಹಂಚಿರುವ ಹಣದ ಪ್ರಮಾಣ ನೋಡಿದರೆ ಇದೇ ಅತಿ ಹೆಚ್ಚಿನ ಹೆಚ್ಚಳ ಎನ್ನಬೇಕು. ಹೀಗಾಗಿ ಗುಲಾಬಿ ಬಣ್ಣದ ಮುಖಪುಟ ಸಾಂಕೇತಿಕತೆಗಷ್ಟೇ ಸೀಮಿತ. ಬಜೆಟ್ ಹಂಚಿಕೆ ಪ್ರಸ್ತಾವಗಳಲ್ಲಿ ಈ ಲಿಂಗತ್ವ ಸಂವೇದನೆಯ ಕಾಳಜಿ ಎದ್ದು ಕಾಣಿಸುವುದಿಲ್ಲ ಎಂಬುದು ವಿವರಗಳನ್ನು ಗಮನಿಸಿದಲ್ಲಿ ತಿಳಿಯುತ್ತದೆ.

ಒಟ್ಟು ಬಜೆಟ್ ವೆಚ್ಚಕ್ಕೆ ಹೋಲಿಸಿದಲ್ಲಿ, ಲಿಂಗತ್ವ ಬಜೆಟ್ ಪ್ರಮಾಣ ಕೇವಲ ಶೇ 4.9ರಷ್ಟಿದೆ. ಈ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಇಳಿಕೆ ಕಾಣುತ್ತಿದೆ ಎಂಬುದು ಅಂಕಿಅಂಶಗಳಿಂದ ವ್ಯಕ್ತ. 2017-18ರ ಕೇಂದ್ರ ಬಜೆಟ್‌ನಲ್ಲಿ ಮಹಿಳೆ ಮೇಲಿನ ವೆಚ್ಚದ ಪ್ರಮಾಣ ಶೇ 5.26ರಷ್ಟಿತ್ತು. 2013 -14ರ ಯುಪಿಎ ಆಡಳಿತ ಅವಧಿಯಲ್ಲಿ ಈ ಪ್ರಮಾಣ ಶೇ 5.83ರಷ್ಟಿತ್ತು. ನಂತರ, 2014-15ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಗದ್ದುಗೆ ಏರಿದ ನಂತರ ಮಂಡಿಸಲಾದ 2014-15ರ ಕೇಂದ್ರ ಬಜೆಟ್‍ನಲ್ಲಿ ಇದು ಶೇ 5.46ಕ್ಕೆ ಇಳಿಯಿತು. ಹಾಗೆಯೇ 2015-16ರಲ್ಲಿ ಶೇ 4.46 ಹಾಗೂ 2016-17ರಲ್ಲಿ ಶೇ 4.50 ಇತ್ತು.

ಸರ್ಕಾರದ ಮಹಿಳಾ ಸಂಬಂಧಿತ ಯೋಜನೆಗಳಿಗೆ ಹಂಚಿಕೆಯಾದ ಹಣದ ಪ್ರಮಾಣದಲ್ಲಿ ಶೇ 7.6ರಷ್ಟು ಸೀಮಿತ ಪ್ರಮಾಣದ ಏರಿಕೆ ಇದೆ. ಉಚಿತ ಅಡುಗೆ ಅನಿಲ ಸಂಪರ್ಕ ಕಲ್ಪಿಸುವ ‘ಉಜ್ವಲ ಯೋಜನೆ’ಗೂ ಹಣದ ಹಂಚಿಕೆ ಈ ವರ್ಷ ಕಡಿಮೆ ಮಾಡಲಾಗಿದೆ. ಆದರೆ ವಿಚಿತ್ರ ಎಂದರೆ ಈ ಯೋಜನೆ ಅಡಿ ಈ ವರ್ಷ ತಲುಪಬೇಕಿರುವ ಫಲಾನುಭವಿಗಳ ಸಂಖ್ಯೆಯನ್ನು 5 ಕೋಟಿಯಿಂದ 8 ಕೋಟಿಗೆ ಏರಿಸಲಾಗಿದೆ.

ಜೆಂಡರ್ ಬಜೆಟ್ ಹೇಳಿಕೆಯಲ್ಲಿ (ಜಿಬಿಎಸ್) 2 ಭಾಗಗಳಿರುತ್ತವೆ. ‘ಪಾರ್ಟ್ ಎ’ನಲ್ಲಿ ಮಹಿಳೆಯರಿಗೆ ಶೇ 100ರಷ್ಟು ಹಂಚಿಕೆ ಇರುವ ಮಹಿಳಾ ನಿರ್ದಿಷ್ಟ ಯೋಜನೆಗಳು ದಾಖಲಾಗುತ್ತವೆ. ‘ಪಾರ್ಟ್ ಬಿ’ಯಲ್ಲಿ ಮಹಿಳೆಯರಿಗೆ ಕನಿಷ್ಠ ಶೇ 30ರಷ್ಟು ಹಂಚಿಕೆ ಇರುವ ಯೋಜನೆಗಳಿರುತ್ತವೆ. ಒಟ್ಟಾರೆ, ಲಿಂಗತ್ವ ಬಜೆಟ್ ಹಂಚಿಕೆ 2018- 19ರ ಸಾಲಿಗೆ ₹ 1,21,961 ಕೋಟಿ ಇದೆ.  2017- 18ರ ಸಾಲಿನಲ್ಲಿ ಇದು ₹ 1,13,311 ಕೋಟಿ ಇತ್ತು.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಅನೇಕ ಬಾರಿ ಮಹಿಳೆ ಪದ ಉಚ್ಚರಿಸುತ್ತಾ ಮಹಿಳಾ ಕಾಳಜಿ ಬಿಂಬಿಸುವಂತೆ ಕಂಡರು. ಹೀಗಿದ್ದೂ 2018-19ರ ಒಟ್ಟು ಪ್ರಸ್ತಾವಿತ ಬಜೆಟ್ ವೆಚ್ಚ ಹಂಚಿಕೆಯಲ್ಲಿ ಶೇ 1ರಷ್ಟು ಪ್ರಮಾಣ ಮಾತ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ದಕ್ಕಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಒಟ್ಟಾರೆ ಬಜೆಟ್ ಸಹ ಲಿಂಗತ್ವ ಕಾಳಜಿಗಳಿಗೆ ಬಹುಮುಖ್ಯ ಪ್ರತೀಕ. ಹೀಗಿದ್ದೂ 2018-19ರ ಬಜೆಟ್ ಅಂದಾಜಿನಲ್ಲಿ ಈ ಇಲಾಖೆಗೆ ಹಂಚಿಕೆಯಾಗಿರುವ ಹಣದ ಪ್ರಮಾಣ ₹ 24,700 ಕೋಟಿಗೆ ಅತ್ಯಲ್ಪ ಏರಿಕೆಯಾಗಿದೆ. 2017-18ರಲ್ಲಿ ಈ ಪ್ರಮಾಣ ₹ 22,094.67 ಕೋಟಿ ಇತ್ತು.

ಮಹಿಳೆಗಷ್ಟೇ ಸೀಮಿತವಾದ ಯೋಜನೆಗಳಿಗೆ ₹ 33,872 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಜೆಂಡರ್ ಬಜೆಟ್ ಹೇಳಿಕೆ (ಜಿಬಿಎಸ್) ಪ್ರತಿಪಾದಿಸುತ್ತದೆ. ಆದರೆ ಇದು ವಿಚಿತ್ರ. ಪ್ರಧಾನಮಂತ್ರಿ ಆವಾಸ ಯೋಜನೆಯನ್ನೂ ಮಹಿಳೆಗೇ ಸೀಮಿತವಾದ ಯೋಜನೆ ಅಡಿ ತೋರಿಸಲಾಗಿದೆ. ಈ ಯೋಜನೆಗಾಗಿ ₹ 21,000 ಕೋಟಿ ಹಂಚಿಕೆ ಮಾಡಲಾಗಿದೆ. ಆದರೆ ಮಹಿಳೆಯರು ಸೇರಿದಂತೆ ಪರಿಶಿಷ್ಟ ಜಾತಿ, ಪಂಗಡದವರಲ್ಲದೆ ಹಲವು ಆದಿವಾಸಿ ಸಮುದಾಯಗಳೂ ಈ ಯೋಜನೆಯ ಫಲಾನುಭವಿಗಳು. ಮಹಿಳಾ ಒಡೆತನದ ಕುಟಂಬಗಳಿಗಷ್ಟೇ ಈ ಯೋಜನೆ ಇಲ್ಲ ಎಂಬಂಥ ವಾಸ್ತವವನ್ನು ಏಕೆ ಗ್ರಹಿಸಿಲ್ಲ ಎಂಬುದು ಪ್ರಶ್ನೆ.

ಹಾಗೆಯೇ ಆಯುಷ್ ಸಚಿವಾಲಯದ ಅಡಿ ಬರುವ ಅನೇಕ ಕಾರ್ಯಕ್ರಮಗಳನ್ನೂ ಮಹಿಳೆಯರಿಗೇ ಸೀಮಿತವಾದ ಯೋಜನೆಗಳ ಅಡಿ ಸೇರಿಸಿರುವುದು ಅಸಂಗತ. ಮತ್ತೊಂದು ಅಸ್ಪಷ್ಟ ಯೋಜನೆಯೂ ಇಲ್ಲಿದೆ. ಮಹಿಳೆಯರ ಸಶಕ್ತೀಕರಣಕ್ಕಾಗಿ, 14 ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿನ 2800 ಮನೆಗಳ ಸೌರ ವಿದ್ಯುದೀಕರಣ ಯೋಜನೆಯ ಪ್ರಸ್ತಾಪ ಬಜೆಟ್‌ನಲ್ಲಿದೆ. ಅದೂ... ಈ ಯೋಜನೆ ವಿದೇಶಾಂಗ ವ್ಯವಹಾರ ಸಚಿವಾಲಯದ ವ್ಯಾಪ್ತಿಯಲ್ಲಿದೆ!

ಮಹಿಳಾ ಸಬಲೀಕರಣ ಯೋಜನೆಗಳಿಗಾಗಿ ಹಣ ಹಂಚಿಕೆಯಷ್ಟೇ ಸಾಕಾಗುವುದಿಲ್ಲ. ಅದು ವೆಚ್ಚವಾಗುವ ರೀತಿಯೂ ಮುಖ್ಯ ಎಂಬುದಕ್ಕೆ ‘ನಿರ್ಭಯಾ ನಿಧಿ’ ಉದಾಹರಣೆ. ಮಹಿಳೆ ಸುರಕ್ಷತೆ ಹಾಗೂ ಭದ್ರತೆಗಾಗಿ ಸ್ಥಾಪಿಸಿರುವ ಈ ನಿಧಿ ಸೂಕ್ತ ರೀತಿಯಲ್ಲಿ ಬಳಕೆಯಾಗದೆ ಟೀಕೆಗಳಿಗೆ ಒಳಗಾಗಿರುವುದರಿಂದ ಈಗ ‘ನಿರ್ಭಯಾ ನಿಧಿ’ ಬಳಕೆ ವಿಚಾರ ಸುಪ್ರೀಂ ಕೋರ್ಟ್ ಪರಿವೀಕ್ಷಣೆಯ ವ್ಯಾಪ್ತಿಗೆ ಸೇರಿದೆ. ಈ ನಿಧಿಯಲ್ಲಿದ್ದ ₹ 3100 ಕೋಟಿಯಲ್ಲಿ ಕಳೆದ ವರ್ಷ ಆಗಸ್ಟ್ ವರೆಗೆ ಕೇವಲ ₹ 264 ಕೋಟಿ ವ್ಯಯಿಸಲಾಗಿದೆ ಎಂದು ವರದಿಯಾಗಿತ್ತು. ಹೀಗಿದ್ದೂ ಈ ಬಳಕೆಯಾಗದ ನಿಧಿಗೆ ಈ ವರ್ಷವೂ ₹ 378.75 ಕೋಟಿ ಸೇರಿಸಲಾಗಿದೆ. ಯೋಜನೆಗಳ ವಿನ್ಯಾಸ ಹಾಗೂ ಅವುಗಳ ಸಕಾಲಿಕ ಹಾಗೂ ಪರಿಣಾಮಕಾರಿ ಜಾರಿಗೂ ಸಮಾನ ಗಮನ ನೀಡುವುದು ಮುಖ್ಯವಾದದ್ದು ಎಂಬುದು ಇಲ್ಲಿರುವ ಪಾಠ.

ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (ಪಿಎಂಎಂವಿವೈ) ವಿಚಾರವನ್ನೇ ತೆಗೆದುಕೊಳ್ಳಿ. ಅಸಂಘಟಿತ ವಲಯದ ದುಡಿಯುವ ಮಹಿಳೆಯರಿಗೆ ಹೆರಿಗೆ ಸೌಲಭ್ಯ ಇಲ್ಲ. ಹೀಗಾಗಿ ಆ ಸಂದರ್ಭದಲ್ಲಿನ ವೇತನ ನಷ್ಟಕ್ಕೆ ಪರಿಹಾರವಾಗಿ ₹ 6000 ನೀಡುವ ಯೋಜನೆ ಇದು. ಕಳೆದ ವರ್ಷ ಈ ಯೋಜನೆಗೆ ಶೇ 300ರಷ್ಟು ಹೆಚ್ಚುವರಿ ಹಣ ಹಂಚಿಕೆಯಾಗಿತ್ತು. ಈ ಪ್ರಕಾರ, 53 ಲಕ್ಷ ಮಹಿಳೆಯರಿಗೆ ಈ ಹೆರಿಗೆ ಸೌಲಭ್ಯದ ಹಣ ವಿತರಣೆ ಆಗಬೇಕಿತ್ತು. ಆದರೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಕಿಅಂಶಗಳು ಹೇಳುವ ಕಥೆಯೇ ಬೇರೆ. ಕೇವಲ 96,460 ಮಹಿಳೆಯರಿಗೆ ನೇರ ನಗದು ವರ್ಗಾವಣೆಯಾಗಿದೆ. ಎಂದರೆ ನಿಗದಿಪಡಿಸಿದ ಹಣದಲ್ಲಿ ಬಳಕೆ ಆಗಿರುವುದು ಕೇವಲ ಶೇ 2. ಕಳೆದ ವರ್ಷ ಈ ಯೋಜನೆಗೆಂದೇ ₹ 2700 ಕೋಟಿ ತೆಗೆದಿರಿಸಲಾಗಿತ್ತು.

ಈಗ 2018-19ರ ಈ ವರ್ಷದ ಮುಂಗಡಪತ್ರದಲ್ಲಿ ಕೇವಲ 2400 ಕೋಟಿಯನ್ನು ಈ ಯೋಜನೆಗಾಗಿ ತೆಗೆದಿರಿಸಲಾಗಿದೆ. ಈಗಾಗಲೇ ಈ ಯೋಜನೆ ಅಡಿ ಫಲಾನುಭವಿಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಲಾಗಿದೆ ಎಂಬುದು ನಮಗೆ ಗೊತ್ತಿರುವ ಸಂಗತಿ. ಕಳೆದ ವರ್ಷ ಮೇ ತಿಂಗಳಲ್ಲೇ ಎರಡು ಮಕ್ಕಳ ಹೆರಿಗೆಗಳಿಗೆ ಬದಲಾಗಿ ಮೊದಲ ಮಗುವಿನ ಹೆರಿಗೆಗೆ ಮಾತ್ರ ಈ ಯೋಜನೆಯನ್ನು ಸರ್ಕಾರ ಸೀಮಿತಗೊಳಿಸಿದ್ದು ನೆನಪಿದೆಯಲ್ಲವೇ? ಆದರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಪ್ರಕಾರ, ಇದು ಗರ್ಭಿಣಿ ಹಾಗೂ ಹಾಲೂಡಿಸುವ ತಾಯಂದಿರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬಂಥ ಟೀಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ. 2013ರಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಜಾರಿಗೊಳಿಸಿದಾಗ ಒಂದೇ ಮಗು ನೀತಿ ಅಸ್ತಿತ್ವದಲ್ಲಿರಲಿಲ್ಲ ಎಂಬುದು ಇಲ್ಲಿ ಗಮನಿಸ ಬೇಕಾದ ಅಂಶ.

ಸಂಘಟಿತ ವಲಯದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಪ್ರೋತ್ಸಾಹ ನೀಡುವ ಉಪಕ್ರಮವಾಗಿ ಅವರ ಭವಿಷ್ಯ ನಿಧಿ ಕೊಡುಗೆಯನ್ನು ಕೆಲಸಕ್ಕೆ ಸೇರಿದ ಮೊದಲ ಮೂರು ವರ್ಷಗಳಲ್ಲಿ ಸದ್ಯದ ಶೇ 12ರಿಂದ ಶೇ 8ಕ್ಕೆ ಇಳಿಸುವ ಪ್ರಸ್ತಾವವಿದೆ. ಇದರಿಂದ ಮಹಿಳೆಯರು ಮನೆಗೆ ಒಯ್ಯುವ ಸಂಬಳ ಹೆಚ್ಚಾಗಲಿದೆ. 2005-06ರಲ್ಲಿ ಶೇ 36ರಷ್ಟಿದ್ದ ಮಹಿಳಾ ಉದ್ಯೋಗಿಗಳ ಪ್ರಮಾಣ 2015-16ರ ವೇಳೆಗೆ ಶೇ 24ಕ್ಕೆ ಕುಸಿದಿರುವಂತಹ ಸದ್ಯದ ಪರಿಸ್ಥಿತಿಯಲ್ಲಿ ಕೈಗೊಂಡಿರುವ ಕ್ರಮ ಇದು. ಭಾರತೀಯ ಆರ್ಥಿಕ ವ್ಯವಸ್ಥೆ ಹಾಗೂ ಸಮಾಜಕ್ಕೆ ಮಹಿಳೆಯರದೂ ಸಮಾನ ಕೊಡುಗೆ ಇರಬೇಕು ಎಂಬ ಅಂಶ ಮನದಟ್ಟಾಗಿಸುವುದು ಇಲ್ಲಿ ಮುಖ್ಯ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು (ನರೇಗಾ) ಗ್ರಾಮೀಣ ಮಹಿಳೆಯರಿಗೆ ಸಾಮಾಜಿಕ ಭದ್ರತೆ ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕಳೆದ ಅನೇಕ ವರ್ಷಗಳಲ್ಲಿ ಈ ಯೋಜನೆಯ ಲಾಭವನ್ನು ಹೆಚ್ಚಿನ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಆದರೂ ಈ ಯೋಜನೆಗೆ ಕಳೆದ ಸಾಲಿನಲ್ಲಿ ನೀಡಿದ್ದಷ್ಟೇ ₹ 55,000 ಕೋಟಿ ಹಣವನ್ನೇ ಈ ಸಾಲಿನ ಬಜೆಟ್‍‍ನಲ್ಲೂ ಹಂಚಿಕೆ ಮಾಡಲಾಗಿದೆ. ಕೃಷಿ ಹಾಗೂ ಗ್ರಾಮೀಣ ಭಾರತಕ್ಕೆ ಈ ಬಾರಿಯ ಬಜೆಟ್‍‍ನಲ್ಲಿ ಒತ್ತು ನೀಡಲಾಗಿದೆ. ಆದರೆ ಸ್ತ್ರೀಮಯವಾಗುತ್ತಿರುವ ಕೃಷಿಲೋಕದ ವಾಸ್ತವಗಳನ್ನು ಗಣನೆಗೆ ತೆಗೆದುಕೊಂಡಿಲ್ಲದ ವೈರುಧ್ಯಗಳೂ ಕಣ್ಣಿಗೆ ರಾಚುತ್ತವೆ.

ಈ  ಅಂಶಗಳನ್ನೆಲ್ಲಾ ಗಮನಿಸಿಸುತ್ತಿದ್ದರೆ, ರಾಷ್ಟ್ರ ಹಾಗೂ ರಾಜ್ಯಗಳ ಮಟ್ಟಗಳಲ್ಲಿ ಲಿಂಗತ್ವ ಸಂವೇದನಾಶೀಲ ಬಜೆಟ್ ಸಾಂಸ್ಥೀಕರಿಸಲು ಪ್ರಯತ್ನಗಳನ್ನು ಮಾಡುವುದು ಅಗತ್ಯ ಎನಿಸುತ್ತದೆ. ಅನುಷ್ಠಾನ, ಉಸ್ತುವಾರಿ ಹಾಗೂ ಮೌಲ್ಯಮಾಪನದಲ್ಲಿ ಲಿಂಗತ್ವ ವಿಶ್ಲೇಷಣೆ ಅನ್ವಯಿಸಿ ಬಲವರ್ಧನೆ ಮಾಡುವುದು ಇಲ್ಲಿ ಮುಖ್ಯ. ವೆಚ್ಚ ಹಾಗೂ ಅದರಿಂದಾಗುವ ಲಾಭಗಳನ್ನು ನಿರಂತರವಾಗಿ ಗಮನಿಸುತ್ತಿರಬೇಕು. ಈ ಹೆಜ್ಜೆಗಳು ಇಲ್ಲದಿದ್ದಲ್ಲಿ ಬಜೆಟ್ ಕಸರತ್ತು ಮಹಿಳೆಗೆ ಹೆಚ್ಚಿನದೇನೂ ನೀಡದು.

6.3 ಕೋಟಿ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ಲಿಂಗಾನುಪಾತ ಕುಸಿತದ ಅನಿಷ್ಟದ ಬಗ್ಗೆಯೂ ಈ ಬಾರಿಯ ಆರ್ಥಿಕ ಸಮೀಕ್ಷೆ ಎಚ್ಚರಿಕೆ ನೀಡಿದೆ. ಹೀಗಾಗಿ ಲಿಂಗತ್ವ ಪೂರ್ವಗ್ರಹ ಮುಕ್ತ ಸಮಾಜ ನಿರ್ಮಾಣ ಸದ್ಯದ ತುರ್ತು ಅಗತ್ಯ. ಇದಕ್ಕಾಗಿ ಸಮಾನ ವೇತನ, ಸುರಕ್ಷತೆ ಹೆಚ್ಚಳ ಹಾಗೂ ಉದ್ಯೋಗ ರಂಗ ಪ್ರವೇಶಿಸಿ ಮಧ್ಯದಲ್ಲೇ ಕೆಲಸ ಬಿಡದೆ ಉಳಿದುಕೊಳ್ಳಲು ಅನುಕೂಲ ಮಾಡಿಕೊಡುವಂತಹ ಮೂಲಸೌಕರ್ಯಗಳ ನಿರ್ಮಾಣದತ್ತ ಗಮನ ಹರಿಸಬೇಕು.

ಈ ಬದಲಾವಣೆಗಳನ್ನು ತಂದಾಗ ಮಾತ್ರ ರಾಷ್ಟ್ರವಾಗಿ ನಾವು ಬೆಳೆಯಬಹುದು. ಸರಾಗವಾಗಿ ವಾಣಿಜ್ಯೋದ್ಯಮ ಚಟುವಟಿಕೆ ನಡೆಸಲು ಸಾಧ್ಯವಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಶ್ರೇಯಾಂಕ ಸುಧಾರಣೆಗೆ ನಾವು ಬದ್ಧವಾಗಿದ್ದೇವಲ್ಲವೇ? ಅದೇ ರೀತಿ ಲಿಂಗತ್ವ ವಿಚಾರಗಳಲ್ಲೂ ನಮ್ಮ ಶ್ರೇಯಾಂಕ ಸುಧಾರಣೆಗೆ ಇದೇ ಬದ್ಧತೆ ಇರಬೇಕು ಎಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಿರುವ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT