ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೆ ಏಳುತ್ತಿರುವ ಗ್ರಾಮೀಣ ಶರಣರು

Last Updated 14 ಏಪ್ರಿಲ್ 2017, 19:33 IST
ಅಕ್ಷರ ಗಾತ್ರ

ಹೌದು, ಮಧ್ಯಯುಗದಲ್ಲಿ ಇವರನ್ನು ಶರಣರೆಂದು ಕರೆದೆವು. ಇಂದು ಇವರನ್ನು ಕೃಷಿಕಾರ್ಮಿಕ ಕೃಷಿಕ ಕುಶಲಕರ್ಮಿ ನೇಕಾರ ಎಂದು ಕರೆಯುತ್ತೇವೆ. ಇಂದು ಇವರು, ಪಾಪ, ಭೂಮಿಯಿಂದ ಒಮ್ಮೆಗೇ ಮೇಲೆದ್ದು ಬಂದ ಹುಳುಗಳಂತೆ ಚೆಲ್ಲಾಪಿಲ್ಲಿ ಚಲಿಸತೊಡಗಿದ್ದಾರೆ. ಶತ ಶತಮಾನಗಳಿಂದ ತಮ್ಮ ಬದುಕು ರೂಢಿಸಿಕೊಂಡು ಬಂದಿರುವ ಗ್ರಾಮಗಳನ್ನು ತೊರೆದು, ಕೂಲಿ ಸಿಕ್ಕಬಹುದೆಂಬ ಕುರುಡುನಂಬಿಕೆ ಹೊತ್ತು, ನಗರಗಳತ್ತ ದೌಡಾಯಿಸಿದ್ದಾರೆ. ಹಿಂದೆಲ್ಲ ಇವರು ಹೀಗಾಡುತ್ತಿದ್ದದ್ದು, ಬರ ಬಿದ್ದಾಗ ಅಥವಾ ಮತೀಯ ಗಲಭೆಗಳಾದಾಗ ಅಥವಾ ಶತ್ರು ರಾಜ ದಂಡೆತ್ತಿ ಬಂದಾಗ ಮಾತ್ರ. ಆಗ ಮಾತ್ರ ಗುಳೆ ಹೋಗುತ್ತಿದ್ದರು, ಅದೂ ತಾತ್ಕಾಲಿಕವಾಗಿ ಹೋಗುತ್ತಿದ್ದರು. ಗುಳೆ ಹೋಗುವುದೆಂದರೆ ಒಬ್ಬ ಗ್ರಾಮಸ್ಥನಿಗೆ, ತೀವ್ರತರವಾದ ನೋವು ಸಾವು ಸೋಲು ಹತಾಶೆಗಳ ಸಂಕೇತವಾಗಿತ್ತು.

ಈಗ, ಹಳ್ಳಿಗರನ್ನು ಗುಳೆ ಎಬ್ಬಿಸುವುದು ಪ್ರಗತಿಯ ಸಂಕೇತವಾಗಿದೆ. ಗುಳೆ ಎಬ್ಬಿಸುವುದು, ಎಬ್ಬಿಸುತ್ತಲೇ ಇರುವುದು, ಕಲ್ಯಾಣಕಾರಿಯೆಂದು ಸರ್ಕಾರಗಳು ತಿಳಿಯತೊಡಗಿವೆ. ಯಂತ್ರ ನಾಗರಿಕತೆಯ ಪ್ರಾಥಮಿಕ ಅಗತ್ಯವಾಗಿದೆ ಗುಳೆ. ಬದುಕು ಕೊಂಚ ಹಾಳಾದರೇನಂತೆ ಹಣ ಬರುತ್ತದೆ ತಾನೆ ಎನ್ನುತ್ತವೆ ಸರ್ಕಾರಗಳು. ಹೌದು, ಹಣ ಬರುತ್ತದೆ. ಗ್ರಾಮೀಣ ಬಡವನ ಬಹುದೊಡ್ಡ ಆದಾಯ ಮೂಲವು ಇಂದು ಗುಳೆಯಿಂದಲೇ ಬರುತ್ತಿದೆ. ಗುಳೆ ಏಳಬಲ್ಲವನು ಸಮರ್ಥನೂ ಜಾಣನೂ, ಏಳಲಾರದವನು ಅಸಮರ್ಥನೂ ಓಬಿರಾಯನ ಕಾಲದ ಮುದುಕನೂ ಎಂದು ಪರಿಗಣಿತವಾಗುತ್ತಿದೆ.

ಹಳ್ಳಿಗಳು ಇವೆ. ಇದ್ದೂ ಸತ್ತಂತಿವೆ. ವಿವಿಧ ಕಲ್ಯಾಣ ಯೋಜನೆಗಳ ಮೂಲಕ ಸರ್ಕಾರ ನೀಡುವ ಪರಿಹಾರಗಳಿಗೆ ಕೈ ಚಾಚುತ್ತ, ಭ್ರಷ್ಟ ಅಧಿಕಾರಿ ಹಾಗೂ ರಾಜಕಾರಣಿಗಳ ಕೈ ಬಿಸಿ ಮಾಡುತ್ತ, ಸಾಲ ಮನ್ನಾ ಆದೀತೆಂದು ಕಾದು ಕುಳ್ಳಿರುತ್ತ ಉಳಿದಿದ್ದಾರೆ, ಗ್ರಾಮಗಳಲ್ಲಿ ಇನ್ನೂ ಉಳಿದಿರುವ ಗ್ರಾಮಸ್ಥರು. ದುಡಿತದ ಸಂತಸ ಹಾಗೂ ಸಂಸ್ಕೃತಿಗಳು ಮಾಯವಾಗಿವೆ. ಏನನ್ನಾದರೂ ಸಾಧಿಸಬಲ್ಲೆ ಎಂಬ ಆತ್ಮಸ್ಥೈರ್ಯ ಮಾಯವಾಗಿದೆ. ಹಾಗಂತ ಧೀರರು ಹಳ್ಳಿಗಳಲ್ಲಿ ಇಲ್ಲವೇ ಇಲ್ಲವೆಂದಲ್ಲ. ಸುಸ್ಥಿರ ಕೃಷಿ ಹಾಗೂ ಕುಶಲಕರ್ಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದರಲ್ಲೇ ಒಂದು ಮಟ್ಟದ ಆದಾಯ ಹಾಗೂ ಸಂತೃಪ್ತಿಯನ್ನು ಪಡೆಯುತ್ತಿರುವ ಗ್ರಾಮಸ್ಥರು ಅಲ್ಲಲ್ಲಿ ಉಳಿದಿದ್ದಾರೆ. ಆದರೆ  ಅಪವಾದವೆಂಬಂತೆ ಉಳಿದಿದ್ದಾರೆ. ಅಪರೂಪದ ಸಾಹಸಿಗಳೆಂತಲೂ ಅದೃಷ್ಟವಂತರೆಂತಲೂ ಅಂತಹವರು ಪರಿಗಣಿತರಾಗುತ್ತಿದ್ದಾರೆ. ಹಳತಿನ ನೆನಪು ಬಿಟ್ಟರೆ ಹಳ್ಳಿಗಳಲ್ಲಿ ಮತ್ತೇನೂ ಉಳಿದಿಲ್ಲ.

ಹೊಸತೂ ಅಷ್ಟೆ; ಅರೆಬರೆ, ಪೇಟೆಯ ನಕಲು. ಅಡ್ಡಾದಿಡ್ಡಿ ಅರ್ಧಮರ್ಧ ಕಟ್ಟಿಸಿಕೊಂಡು, ಜಾರಿದ ಹೆಂಚು, ಕಳಚಿದ ಕಂಬ, ತಲೆಬಾಗಿಲು, ಅರೆಯುವ ಕಲ್ಲು, ಇಟ್ಟಿಗೆ, ಮಣ್ಣುಗಳ ಹಳೆಯ ರಾಶಿಗೆ ಒತ್ತಿಕೊಂಡು ಹೊಸತು ನಿಂತಿರುತ್ತದೆ. ತೆರೆದ ಬಾವಿಗಳು ಕಸದ ತೊಟ್ಟಿಗಳಾಗಿವೆ. ದನಕರುಗಳು ಉದ್ದೇಶರಹಿತವಾಗಿವೆ. ತಿಪ್ಪೆಗುಂಡಿಗಳು ಉದ್ದೇಶರಹಿತವಾಗಿವೆ. ಕೊಟ್ಟಿಗೆ, ಕಣಜ, ಗಾಣ, ಮಗ್ಗ ಎಲ್ಲವೂ ಉದ್ದೇಶರಹಿತವಾಗಿವೆ. ಸಮಗ್ರವಾದ ಈ ಉದ್ದೇಶರಹಿತತೆಯ ನಡುವೆ ಟ್ರ್ಯಾಕ್ಟರು ಟಿಲ್ಲರುಗಳು ಮೂಗುತೂರಿಸಿಕೊಂಡು- ಹೊಸ ಉದ್ದೇಶ ಸಾಧಿಸಲಾರದೆ ಕೆಟ್ಟು ನಿಂತಿರುತ್ತವೆ. ಪಂಪುಸೆಟ್ಟುಗಳು, ಪೈಪುಗಳು, ಕೊಳವೆಬಾವಿಗಳು ಅಂತರ್ಜಲವಿಲ್ಲದೆ ಒಣಗುತ್ತಿರುತ್ತವೆ. ತೆಂಗಿನ ಮರಗಳು ಹೆಡೆಮುರಿದು ನಿಂತಿರುತ್ತವೆ. ದಾಳಿಂಬೆ, ದ್ರಾಕ್ಷಿ ಗಿಡಗಳು ಕ್ರಿಮಿನಾಶಕಗಳ ವ್ಯಸನಕ್ಕೆ ಬಲಿಯಾಗಿ ತಲೆದೂಗುತ್ತಿರುತ್ತವೆ. ಕಬ್ಬು, ಸಕ್ಕರೆ ಕಾರ್ಖಾನೆಗಳ ಕರೆಗೆ ಕಾದು ಕಾದು ರಸಹೀನವಾಗುತ್ತಿರುತ್ತದೆ.

ಮದುವೆಯಾಗಲಿಕ್ಕೆ ಹೆಣ್ಣೇ ಸಿಕ್ಕದೆ ಹಳ್ಳಿಯ ಗಂಡಸರು ಮುದಿಯಾಗುತ್ತಿರುತ್ತಾರೆ. ಪೇಟೆಯ ವ್ಯಸನಕ್ಕೆ ಸಿಕ್ಕ ಹೆಂಗಸರು, ಪಾಪ, ಮಲಿನವಾಗುತ್ತಿರುತ್ತಾರೆ.
ಪಂಪ ಬನವಾಸಿಯನ್ನು ಗ್ರಾಮೀಣ ಪರಿಸರವನ್ನು ಹೆಮ್ಮೆಯಿಂದ ವರ್ಣಿಸಿದ್ದ. ಬಿಭೂತಿ ಭೂಷಣ ಬಂದೋಪಾಧ್ಯಾಯರು ‘ಪಥೇರ್ ಪಾಂಚಾಲಿ’ ಎಂಬ ಹೆಸರಿನ ತಮ್ಮ ಕಾದಂಬರಿಯಲ್ಲಿ ಬಡ ಗ್ರಾಮೀಣ ಸಭ್ಯತೆಯೊಂದನ್ನು ಹೆಮ್ಮೆಯಿಂದ ವರ್ಣಿಸಿದ್ದರು. ಕುವೆಂಪು, ಕಾರಂತ, ಗೊರೂರರು ಗ್ರಾಮ ಸಭ್ಯತೆಗಳನ್ನು ಚಿತ್ರಿಸಿದ್ದರು. ಬೇಂದ್ರೆಯವರ ಕಾವ್ಯ ಗ್ರಾಮ ಸಭ್ಯತೆಯನ್ನು ಚಿತ್ರಿಸಿತ್ತು. ಈ ಎಲ್ಲ ಚಿತ್ರಣಗಳೂ ಈಗ ಕೊನೆಯುಸಿರೆಳೆಯುತ್ತ ಏದುಬ್ಬಸಪಡುತ್ತ ಪ್ಲಾಸ್ಟಿಕ್ಕಿನ ಕಸದ ನಡುವೆ ಮಲಗಿವೆ. ಹಳ್ಳಿಗಳ ವಿಘಟನೆಯ ಆರಂಭಿಕ ಸೂಚನೆ ನೀಡಿದ್ದರು ನವೋದಯ ಲೇಖಕರು. ಅದರ ಅಂತ್ಯಕಾಲವನ್ನು ವರ್ಣಿಸಬೇಕಿರುವ ದುರಂತವನ್ನು ಅನುಭವಿಸುತ್ತಿದ್ದೇನೆ ನಾನು.

ಗುಳೆ ಎದ್ದಿರುವ ಗ್ರಾಮೀಣ ಬಡವ ನಗರಗಳಿಗೆ ಬೇಡವಾದವನು. ಅವರಿಗೆ ಬೇಕಿರುವುದು ಅವರು ಪಡಲಾರದ, ಶ್ರಮ ಮಾತ್ರ. ಇತ್ತೀಚೆಗೆ ದುಬಾರಿಯೂ ಅಲಭ್ಯವೂ ಆಗಿರುವ ಮಾರುಕಟ್ಟೆ ಪದಾರ್ಥವದು. ಅದನ್ನು ಮಾರಿ ಮುಂದಕ್ಕೆ ನಡೆಯಬೇಕಿದೆ ಗ್ರಾಮೀಣರು. ಗಂಡನೆಲ್ಲೋ ಹೆಂಡತಿಯೆಲ್ಲೋ ಮಕ್ಕಳು ಮರಿ ಭಾಷೆ ಸಂಸ್ಕೃತಿ ಎಲ್ಲೆಲ್ಲೋ. ಶಾಪಗ್ರಸ್ತ ಹರಿಶ್ಚಂದ್ರ, ಚಂದ್ರಮತಿ ಹಾಗೂ ಲೋಹಿತಾಶ್ವರು ನೆನಪಾಗುತ್ತಾರೆ ಇವರನ್ನು ಕಂಡಾಗ. ಆದರೆ ಹರಿಶ್ಚಂದ್ರ, ಚಂದ್ರಮತಿ,  ಲೋಹಿತಾಶ್ವರು ಕಥಾಪಾತ್ರಗಳು. ಕಥಾಪಾತ್ರಗಳಿಗೆ ಸುಖಾಂತವಾದ ಮುಕ್ತಿಯಿರುತ್ತದೆ. ಇವರಿಗಿಲ್ಲ. ಹಾಗಾಗಿ ಅನಿವಾರ್ಯವಾಗಿ ಪುಂಡರಾಗುತ್ತಿದ್ದಾರೆ ಇವರು. ವ್ಯಸನಗಳಿಗೆ ತುತ್ತಾಗುತ್ತಿದ್ದಾರೆ. ಗಲೀಜು ವ್ಯವಹಾರ, ಗಲೀಜು ಭಾಷೆ, ಗಲೀಜು ನೈತಿಕತೆಗಳನ್ನು ಅಳವಡಿಸಿಕೊಂಡು, ತಾನೂ ನೊಂದು ನಗರಗಳನ್ನೂ ನೋಯಿಸುತ್ತಿದ್ದಾರೆ ಇವರು.

ಉತ್ತರ ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಮಧ್ಯಯುಗದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದವರು ಇಲ್ಲಿನ ಬಡವರು. ಭಕ್ತಿಯ ಹೊಳೆ ಹರಿಸಿದವರು, ಕವಿಯಾಗಿ ಹಾಡಿದವರು. ಕನ್ನಡ ಭಾಷೆ ರೂಪಿಸಿದವರು. ಈಗ ಇವರಲ್ಲಿ ಕವಿತ್ವ ಉಳಿದಿಲ್ಲ, ಭಕ್ತಿ ಉಳಿದಿಲ್ಲ, ಕ್ರಾಂತಿ ಉಳಿದಿಲ್ಲ. ಸೂಳೆ ಸಂಕವ್ವ ಬರಿದೆ ಸೂಳೆಯಾಗಿದ್ದಾಳೆ. ಮೋಳಿಗೆ ಮಾರಯ್ಯ ಮೋಳಿಗೆ ಕಳಚಿ ಮಾರಾಮಾರಿ ಮಾರಯ್ಯನಾಗಿದ್ದಾನೆ. ಬಸವಣ್ಣನಾಗಬಹುದಾಗಿದ್ದ ಯುವಕ ಹೆದ್ದಾರಿಗಳಿಗೆ ಡಾಂಬರು ಸುರಿಯುತ್ತಿದ್ದಾನೆ. ಮಹಾದೇವಿ, ಅಕ್ಕತಂಗಿಯರನ್ನೆಲ್ಲ ಕಳೆದುಕೊಂಡು, ಚನ್ನಮಲ್ಲಿಕಾರ್ಜುನನನ್ನೂ ಕಳೆದುಕೊಂಡು, ಅನಾಥಳೂ ನಿಕೃಷ್ಟಳೂ ನಗ್ನಳೂ ಆಗಿ, ಬೆಂಗಳೂರಿನ ವಾಹನ ದಟ್ಟಣೆಯ ನಡುವೆ ಅಲೆಯುತ್ತಿದ್ದಾಳೆ.

ಮಠಗಳು, ಧರ್ಮಗುರುಗಳು, ಜಂಗಮರು ಯಾರೂ ಇವರನ್ನು ಇಂದು ಗುರುತಿಸಲಾರರು. ಒಂದೊಮ್ಮೆ ಗುರುತಿಸಿದರೂ ಗೌರವಿಸಲಾರರು. ಮುಖ ತಿರುಗಿಸಿ ಕುಳಿತ ನಾವುಗಳು ನಮ್ಮ ನಮ್ಮ ಊಟದೆಲೆಗಳನ್ನು ಭದ್ರಪಡಿಸಿಕೊಂಡಿದ್ದೇವೆ. ಇರಲಿ. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಪ್ರಯಾಣ ಮಾಡುತ್ತಿದ್ದೆ. ರಾಯಚೂರಿನಿಂದ ಮಂಗಳೂರಿಗೆ ಹೊರಟಿದ್ದ ರಾತ್ರಿ ಪಾಳಿಯ ಬಸ್ಸೊಂದನ್ನು ಮಾರ್ಗ ಮಧ್ಯದಲ್ಲಿ, ಗಜೇಂದ್ರಗಡದಲ್ಲಿ ಏರಿದ್ದೆ. ಬಸ್ಸಿನ ತುಂಬ ಅಸ್ತವ್ಯಸ್ತ ದೇಹಗಳು ದುರ್ನಾತ ಬೀರುತ್ತ ಮಲಗಿದ್ದವು. ಬಟ್ಟೆಯ ಗಂಟುಗಳು, ಪಾತ್ರೆ ಪಡಗಗಳು ಕಾಲು ಕಾಲಿಗೆ ಅಡರುತ್ತಿದ್ದವು. ಕೂರಲಿಕ್ಕಾಗಿ ಖಾಲಿ ಸೀಟು ಹುಡುಕಿದೆ. ಬಸ್ಸಿನ ಹಿಂಭಾಗದಲ್ಲಿ ಸೀಟೊಂದು ಕಣ್ಣಿಗೆ ಬಿತ್ತು. ಆದರೆ ಅಲ್ಲಿಗೆ ತಲುಪಲಾರದವನಾಗಿದ್ದೆ.

ಸೀಟುಗಳ ನಡುವಣ ದಾರಿಯಲ್ಲಿ ತೊಟ್ಟಿಲು ತೂಗುತ್ತಿತ್ತು. ಹರಿದ ಸೀರೆಯೊಂದನ್ನು ಬಸ್ಸಿನ ಛಾವಣಿಗೆ ಕಟ್ಟಿ, ತೂಗು ತೊಟ್ಟಿಲು ಮಾಡಿ ಮಗುವನ್ನು ಮಲಗಿಸಿದ್ದರು. ಕೆಳಗೆ ಮೇಲೆ ಸಂದುಗೊಂದುಗಳಲ್ಲಿ ಎಲ್ಲೆಂದರಲ್ಲಿ ದಣಿದ ದೇಹಗಳು ನಿದ್ರಿಸುತ್ತ ಪಯಣಿಸುತ್ತಿದ್ದವು. ನಾನು ನಿಂತೇ ಪಯಣಿಸಿದೆ. ನಿಂತೇ ಯೋಚಿಸಿದೆ: ‘ಇಲ್ಲ! ಇವರ ಅಸ್ತವ್ಯಸ್ತ  ಬದುಕನ್ನು ಕಂಡು ಅಸಹ್ಯ ಪಡಬಾರದು ನಾನು. ಇವರ ದುರ್ನಾತ ಸಹಿಸಿಕೊಳ್ಳಬೇಕು. ಮೂಗು ಸಿಂಡರಿಸಬಾರದು. ಕಲ್ಯಾಣದ ಬಾಗಿಲಿಗೆ ಗಲೀಜಾಗಿ ಹಾಗೂ ಅಸಭ್ಯನಾಗಿ ಬಂದು ಬಾಗಿಲು ಬಡಿದ ಅಲ್ಲಮನೇ ಇವರು. ಇವರನ್ನು ಗುರುತಿಸಲಾರದ ನಾನು  ಪಾಖಂಡಿ’.

ಬಸ್ಸು ಗದಗ ತಲುಪಿತು. ಕಂಡಕ್ಟರನ ಪಕ್ಕ ಕುಳಿತಿದ್ದಾತ ಮುಖ ಸಿಂಡರಿಸುತ್ತಲೇ ಬಸ್ಸಿನಿಂದಿಳಿದು ಹೋದ. ಅವನ ಜಾಗದಲ್ಲಿ ಹೋಗಿ ಕುಳಿತೆ. ನಿದ್ರೆ ಹಾರಿತ್ತು. ಕಂಡಕ್ಟರ್ ಮಾತಿಗಿಳಿದ. ‘ಸಾರ್! ಬಯಲುಸೀಮೆಯ ಒಂದೊಂದು ಊರಿನಿಂದಲೂ ಮಂಗಳೂರಿಗೆ ರಾತ್ರಿ ಪಾಳಿಯ ಬಸ್ಸುಗಳಿವೆ. ಗುಳೆ ಎದ್ದವರಿಗಾಗಿಯೇ ಹಾಕಿರುವ ಲೈನುಗಳಿವು. ಮುದ್ದೇಬಿಹಾಳ, ಇಳಕಲ್, ಕುಷ್ಟಗಿ, ರಾಯಚೂರು, ಲಿಂಗಸುಗೂರು,  ಯಾದಗಿರಿ ಎಲ್ಲ ಕಡೆಗಳಿಂದ ಪ್ರತಿದಿನ, ಪ್ರತಿಯೂರಿನಿಂದ ಮೂರುನಾಲ್ಕು ಬಸ್ಸು ಜನಗಳು ಅಲ್ಲಿಗೆ ಹೋಗುತ್ತಾರೆ. ಕುಂದಾಪುರ, ಉಡುಪಿ, ಮಂಗಳೂರುಗಳಲ್ಲಿ ಆಳುಗಳ ಸಂತೆ ನೆರೆಯುತ್ತದೆ. ಆಳು ಬೇಕಾದವರು ಬಂದು ಕೊಂಡೊಯ್ಯುತ್ತಾರೆ. ನಾಲ್ಕು ನೂರರಿಂದ ಎಂಟು ನೂರರವರೆಗೆ ಪಗಾರ... ಜೊತೆಗೆ ಊಟ!... ಗುಳೆ ಬಂದವರನ್ನೇ ಖಯೀಷು ಮಾಡುತ್ತಾರೆ ಸಾರ್!’  ಅಂದ. ಮಧ್ಯಯುಗದ ಗುಲಾಮರ ಸಂತೆಗಳು ನೆನಪಾದವು.

ಶ್ರಮಜೀವಿಗಳನ್ನು ಶರಣರನ್ನಾಗಿ ಪರಿವರ್ತಿಸಿದ್ದ ಸಾಮಾಜಿಕ ಚಳವಳಿಗಳು ಕರ್ನಾಟಕಕ್ಕೆ ಸೀಮಿತವಾದದ್ದೇನಲ್ಲ. ಅಥವಾ ಆಧುನಿಕ ಪ್ರಗತಿಯ ಸಂಕೇತವಾಗಿರುವ ಗುಳೆ ಕೂಡ ಕರ್ನಾಟಕಕ್ಕೆ ಸೀಮಿತವಾದದ್ದಲ್ಲ. ಭಾರತದಾದ್ಯಂತ, ಅಷ್ಟೇ ಏಕೆ, ವಿಶ್ವದಾದ್ಯಂತ ನಡೆದಿರುವ ಪ್ರಕ್ರಿಯೆ ಇದು. ಯಂತ್ರ ನಾಗರಿಕತೆಯ ಅಬ್ಬರದಲ್ಲಿರುವ ನಮಗೆ ನಾವೇನು ನಾಶ ಮಾಡುತ್ತಿದ್ದೇವೆ ಎಂಬ ಅರಿವು ಕೂಡ ಇಲ್ಲ. ಧರ್ಮವನ್ನು ಬಂಗಾರದ ಗುಡಿಗಳಲ್ಲಿಟ್ಟು ಪೂಜಿಸುತ್ತೇವೆ. ಹಾಗೆ ಪೂಜಿಸಿದ  ರಾಮದಾಸ, ರವಿದಾಸ, ಕಬೀರ ಅಷ್ಟೇ ಏಕೆ, ಏಸುಕ್ರಿಸ್ತರ ಮಾನವ ರೂಪಗಳನ್ನು ದಣಿಯದೆ ಗುಳೆ ಎಬ್ಬಿಸಿ, ಶೋಷಿಸಿ, ಹಿಂಸಿಸಿ ಕೊಲ್ಲುತ್ತೇವೆ.

ರಾತ್ರಿ ಪಾಳಿಯ ಬಸ್ಸು ದಣಿದ ದೇಹಗಳನ್ನು ದಣಿಯದೆ ಹೊತ್ತೊಯ್ದಿತ್ತು. ಯೋಚಿಸಿದೆ. ಛತ್ತೀಸ್‌ಗಡದ ರೈತ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾನೆ,  ಅಸ್ಸಾಮಿನ ನೇಕಾರ ಮುಂಬಯಿಯಲ್ಲಿ ಕಾಣಿಸಿಕೊಂಡಿದ್ದಾನೆ, ನೇಪಾಳದ ಸಾಧ್ವಿ  ದೆಹಲಿಯ ವೇಶ್ಯಾವಾಟಿಕೆಯಲ್ಲಿ ಕಾಣಿಸಿಕೊಂಡಿದ್ದಾಳೆ... ಸ್ಮಾರ್ಟ್ ಸಿಟಿಗಳು ಶ್ರೀಮಂತರ ಸ್ಲಮ್ಮುಗಳಾಗಿವೆ. ಶ್ರೀಮಂತರು ಹಣವಿದ್ದೂ ಅನುಭವಿಸಲಾರದವರಾಗಿದ್ದಾರೆ, ಆಧುನಿಕತೆಯನ್ನು ನಾವು ಅಪ್ಪಿ ಸ್ವಾಗತಿಸಿದ್ದು ಯಂತ್ರ ನಾಗರಿಕತೆಯೆಂಬ ಈ ಅಸಹ್ಯವನ್ನು ಸ್ಥಾಪಿಸಲಿಕ್ಕಾಗಿ ಅಲ್ಲ. ಆಧುನಿಕ ವಿಚಾರವಂತಿಕೆ, ವೈಜ್ಞಾನಿಕತೆಗಳಿಗಾಗಿ ನಾವದನ್ನು ಸ್ವಾಗತಿಸಿದ್ದು. ಹಳ್ಳಿಗಳನ್ನು ಟೀಕಿಸಿದ್ದು ಅದರ ಸರಳತೆಗಾಗಿ ಅಲ್ಲ. ಅಥವಾ ಅದು ಮೇಲೆತ್ತಿ ಹಿಡಿದ ಸಂತರು ಸಾಧ್ವಿಮಣಿಗಳಿಗಾಗಿ ಅಲ್ಲ. ಹಳ್ಳಿಗಳನ್ನು ಟೀಕಿಸಿದ್ದು ಅದು ಉಳಿಸಿಕೊಂಡು ಬಂದ ಮೌಢ್ಯಕ್ಕಾಗಿ, ಸಾಮಾಜಿಕ ವಿಷಮತೆಗಾಗಿ. ಆದರೆ ಆದದ್ದೇನು? ವಿಚಾರ ಹಿಂದಾಗಿದೆ, ವಿಜ್ಞಾನ ಹಿಂದಾಗಿದೆ, ಮೌಢ್ಯ, ಜಾತೀಯತೆ ಮುಂದಾಗಿವೆ. ಮುಂದಾಗಿ ನಗರ ಸೇರಿವೆ. ಇತ್ತ ಯಂತ್ರ ಅತ್ತ ಮೌಢ್ಯ... ಶಿವ ಶಿವ!

ಯಂತ್ರಕ್ಕೆ ಭಾವನೆಗಳಿರುವುದಿಲ್ಲ. ಅತ್ತಿತ್ತ ಸರಿಸಾಡಿಸಿದಾಗ ನೋವು ತಾಕುವುದಿಲ್ಲ. ಮದುವೆಯಾಗುವುದಿಲ್ಲ, ಮಕ್ಕಳಾಗುವುದಿಲ್ಲ... ಯಂತ್ರವು ಯಂತ್ರವನ್ನು ಹಡೆಯುವುದಿಲ್ಲ... ಯಂತ್ರಗಳ ಜೊತೆ ಸೇರಿ ನಾವು ಯಂತ್ರಗಳಾಗಿಬಿಟ್ಟಿದ್ದೇವೆ. ಸರ್ಕಾರಗಳು ಸರ್ಕಾರಿಯಂತ್ರಗಳಾಗಿ ಬಿಟ್ಟಿವೆ. ಯಂತ್ರಗಳಾಗದೆ ಉಳಿದಿರುವವರು ನಮಗೆ ಅರ್ಥವಾಗುತ್ತಿಲ್ಲ. ಅವರ ಭಾವನೆಗಳು, ನೋವು, ನಲಿವು ಯಾವುದೂ ಅರ್ಥವಾಗುತ್ತಿಲ್ಲ. ಶರಣತ್ವ ಅರ್ಥವಾಗುತ್ತಿಲ್ಲ, ಧರ್ಮ ಅರ್ಥವಾಗುತ್ತಿಲ್ಲ... ಧರ್ಮ ಯಾಂತ್ರಿಕವಾಗಿದೆ, ದೇವರು ಯಾಂತ್ರಿಕವಾಗಿದ್ದಾನೆ! ಶಿವ ಶಿವ!

ಬೊಜ್ಜು ಹೊಟ್ಟೆಯ ಜಂಗಮ ನಾನು. ಬೊಜ್ಜು ಹೊಟ್ಟೆಯ ಬ್ರಾಹ್ಮಣ ನಾನು. ಬೊಜ್ಜು ಹೊಟ್ಟೆಯ ಯಂತ್ರೋದ್ಯಮಿ ನಾನು. ಬೊಜ್ಜು ಹೊಟ್ಟೆಯ ಒಕ್ಕಲಿಗ, ದಲಿತ ಇತ್ಯಾದಿ ಎಲ್ಲವೂ ನಾನು. ನಾನು ಯಂತ್ರಮಾನವ. ಇವರು ಶರಣರು ಅಂಡಲೆವರು. ಇವರ ಅಂಡಲೆತ ತಪ್ಪಿಸದೆ ಹೋದರೆ ಉಳಿಗಾಲವಿಲ್ಲ, ನಗರ ಉಳಿಯುವುದಿಲ್ಲ. ಮಕ್ಕಳು ಮರಿ ಉಳಿಯುವುದಿಲ್ಲ. ಬರೆದಿಟ್ಟುಕೊಳ್ಳಿ ಬೇಕಾದರೆ ಮಾನವರು ಉಳಿಯುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT