ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದರೆ ಮುಂದಕ್ಕೆ, ಸೋತರೆ ಮನೆಗೆ

Last Updated 20 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಹತ್ತನೇ ವಿಶ್ವ ಕಪ್ ಕ್ರಿಕೆಟ್‌ನ ಮೊದಲ ನಾಲ್ಕು ವಾರಗಳ ಆಟ ಮುಗಿದಿದೆ. ಇನ್ನೂ ಎರಡು ವಾರಗಳ ಆಟ ಉಳಿದಿದೆ. ಇಂಗ್ಲಿಷ್‌ನಲ್ಲಿ ಹೇಳುವಂತೆ, ಲೀಗ್ ಹಂತದ ‘ಹುಡುಗಾಟ’ ಮುಗಿದು ‘ಗಂಡಸರು’ ಆಡಲು ಇಳಿಯಲಿದ್ದಾರೆ. ಅಂದರೆ ಮುಂದಿನ ಪಂದ್ಯಗಳೆಲ್ಲ, ‘ಗೆದ್ದರೆ ಮುಂದಕ್ಕೆ, ಸೋತರೆ ಮನೆಗೆ’ ಎಂಬಂಥ ಪಂದ್ಯಗಳು. ಇನ್ನೊಂದು ಅವಕಾಶ ಇಲ್ಲ. ಬುಧವಾರ ಬಾಂಗ್ಲಾ ದೇಶದ ಮೀರಪುರದಲ್ಲಿ ಮೊದಲ ಕ್ವಾರ್ಟರ್ ಫೈನಲ್‌ನೊಂದಿಗೆ ನಾಕ್‌ಔಟ್ ಹಂತ ಆರಂಭ. ಭಾರತದ ಅಳಿವು ಉಳಿವಿನ ಪ್ರಶ್ನೆಗೆ ಗುರುವಾರ ಅಹ್ಮದಾಬಾದ್‌ನಲ್ಲಿ ಉತ್ತರ ದೊರೆಯಲಿದೆ.

ಈ ಬಾರಿಯ ವಿಶ್ವ ಕಪ್ ಟೂರ್ನಿಯನ್ನು ಆರು ವಾರಗಳ ಕಾಲ ಎಳೆಯಬಾರದಿತ್ತು ಎಂಬ ಟೀಕೆ ಕೇಳಿಬಂದಿದೆ. ಒಟ್ಟು ಹದಿನಾಲ್ಕು ತಂಡಗಳಲ್ಲಿ ಆರು ತಂಡಗಳು ವಿಶ್ವ ದರ್ಜೆಯ ತಂಡಗಳಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದ್ದ ವಿಷಯ. ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ಬಿಟ್ಟರೆ, ಕೆನ್ಯಾ, ಕೆನಡಾ, ಹಾಲೆಂಡ್ ಮತ್ತು ಐರ್ಲೆಂಡ್ ತಂಡಗಳು ಟೆಸ್ಟ್ ಮಾನ್ಯತೆ ಪಡೆಯದ ತಂಡಗಳು.ಆದರೆ ಈ ತಂಡಗಳು ಅರ್ಹತಾ ಟೂರ್ನಿಯಿಂದ ಮುನ್ನಡೆದಿ ರುವ ತಂಡಗಳು. ಹಾಗೆ ನೋಡಿದರೆ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ಟೆಸ್ಟ್ ಆಡುವ ರಾಷ್ಟ್ರಗಳಾದರೂ ಇವೆರಡೂ ತಂಡಗಳ ಗುಣಮಟ್ಟ ಇನ್ನೂ ಬಹಳ ಸುಧಾರಿಸಬೇಕಿದೆ.

ಬಾಂಗ್ಲಾದೇಶ ತಂಡ ಕ್ವಾರ್ಟರ್ ಫೈನಲ್ ವರೆಗೆ ಮುನ್ನಡೆಯುವ ತಂಡವೇ ಅಲ್ಲ. ಆದರೂ ಅದು ಕೆಲವು ಪಂದ್ಯಗಳನ್ನು ಗೆದ್ದದ್ದಷ್ಟೇ ಅಲ್ಲ, ಇಂಗ್ಲೆಂಡ್‌ನಂಥ ತಂಡವನ್ನು ಸೋಲಿಸಿ ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿತು. ಐರ್ಲೆಂಡ್ ಕೂಡ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದು ತೀರ ಅನಿರೀಕ್ಷಿತವೇ ಆಗಿತ್ತು. ಇವೆರಡರ ವಿರುದ್ಧ ಹತ್ತು ಸಲ ಆಡಿದರೆ ಒಂಬತ್ತು ಸಲ ಗೆಲ್ಲುವ ಇಂಗ್ಲೆಂಡ್ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯಲು ಬೇರೆ ತಂಡಗಳ ಫಲಿತಾಂಶವನ್ನು ಅವಲಂಬಿಸುವ ಪರಿಸ್ಥಿತಿಯಲ್ಲಿ ಬಿತ್ತು.

ಇದನ್ನು ಬರೆಯುವ ಹೊತ್ತಿಗೆ ಇಂಗ್ಲೆಂಡ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ ಗೆದ್ದು ಕ್ವಾರ್ಟರ್‌ಫೈನಲ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದ್ದರೂ ಅದರ ಭವಿಷ್ಯ ಶನಿವಾರ ದಕ್ಷಿಣ ಆಫ್ರಿಕ ಮತ್ತು ಬಾಂಗ್ಲಾ ದೇಶ ನಡುವಣ ಪಂದ್ಯದ ಫಲಿತಾಂಶವನ್ನು ಅವಲಂಬಿಸಿತ್ತು. ಬಾಂಗ್ಲಾದೇಶ ಕೈಲಿ ಇಂಗ್ಲೆಂಡ್ ಸೋತಂತೆ ದಕ್ಷಿಣ ಆಫ್ರಿಕ ಸೋಲುವುದಿಲ್ಲ ಎಂಬ ನಂಬಿಕೆ ಬರೀ ಇಂಗ್ಲೆಂಡ್‌ಗಲ್ಲ, ಭಾರತ ಮತ್ತು ವೆಸ್ಟ್‌ಇಂಡೀಸ್ ತಂಡಗಳಿಗೂ ಇತ್ತು.ವಿಶ್ವ ಕಪ್ ಮರ್ಯಾದೆಗೆ ತಕ್ಕಂತೆ ಪ್ರಮುಖ ತಂಡಗಳೇ ಕ್ವಾರ್ಟರ್‌ಫೈನಲ್ ಹಂತಕ್ಕೆ ಅರ್ಹತೆ ಗಳಿಸಬೇಕು. ಆಗಲೇ ಆಟದಲ್ಲಿ ಮಜಾ ಬರುತ್ತದೆ.
 
ಇಲ್ಲದಿದ್ದರೆ ದುರ್ಬಲ ತಂಡಗಳು ಒಂದೆರಡು ಪಂದ್ಯಗಳಲ್ಲಿನ ಅದೃಷ್ಟದ ಗೆಲುವಿನ ಬಲದಿಂದ ಮುನ್ನಡೆದು ಕ್ವಾರ್ಟರ್‌ಫೈನಲ್‌ನಲ್ಲಿ ಪ್ರಬಲ ತಂಡವೊಂದರ ಗೆಲುವನ್ನು ಸುಲಭಗೊಳಿಸುತ್ತವೆ. ಕ್ರಿಕೆಟ್‌ನಲ್ಲಿ ಕೊನೆಯ ಎಸೆತದ ವರೆಗೆ ಏನೂ ಹೇಳಲು ಸಾಧ್ಯ ವಿಲ್ಲವೆಂದರೂ ಬಾಂಗ್ಲಾದೇಶ ಅಥವಾ ಐರ್ಲೆಂಡ್ ತಂಡಗಳು ಫೈನಲ್ ವರೆಗೆ ಮುನ್ನಡೆಯಬಹುದು ಎಂಬ ನಿರೀಕ್ಷೆಯೇ ಹಾಸ್ಯಾಸ್ಪದವಾಗುತ್ತದೆ. ಅದೂ ಕ್ರಿಕೆಟ್‌ಗೂ ನ್ಯಾಯ ಒದಗಿಸುವುದಿಲ್ಲ. ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ಭಾರತ, ಶ್ರೀಲಂಕಾ, ಪಾಕಿಸ್ತಾನದಂಥ ತಂಡಗಳೇ ಕೊನೆಯ ಮೂರು ಹಂತದ ಪಂದ್ಯಗಳಲ್ಲಿ ಆಡಿದಾಗಲೇ ರೋಚಕ ಆಟವನ್ನು ನೋಡಲು ಸಾಧ್ಯ.

ಇಷ್ಟೆಲ್ಲ ಗೊಂದಲಗಳು, ಲೆಕ್ಕಾಚಾರಗಳು ‘ಬಿ’ ಗುಂಪಿನ ಲೀಗ್‌ನಲ್ಲಿ ಮಾತ್ರ ಆಗಿವೆ. ‘ಎ’ ಗುಂಪಿನಲ್ಲಿ ಪ್ರಮುಖ ತಂಡಗಳೆನಿಸಿದ ಆಸ್ಟ್ರೇಲಿಯ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ದುರ್ಬಲ ತಂಡಗಳಾದ ಜಿಂಬಾಬ್ವೆ, ಕೆನಡಾ ಮತ್ತು ಕೆನ್ಯಾ ತಂಡಗಳನ್ನು ಸೋಲಿಸಿ, ಕ್ವಾರ್ಟರ್‌ಫೈನಲ್ ತಲುಪಿವೆ. ನೀವು ಈ ಅಂಕಣ ಓದುವ ಹೊತ್ತಿಗೆ, ಲೀಗ್‌ನಲ್ಲಿಯ ಸ್ಥಾನಮಾನವೂ ನಿರ್ಧಾರವಾಗಿರುತ್ತದೆ. ಕ್ವಾರ್ಟರ್‌ಫೈನಲ್ ಯಾರು ಯಾರನ್ನು ಎದುರಿಸುತ್ತಾರೆ ಎಂಬುದೂ ಗೊತ್ತಾಗಿ ರುತ್ತದೆ. ಇದೂ ಕೂಡ ಕುತೂಹಲಕರವಾಗೇ ಇತ್ತು.

ಭಾರತಕ್ಕೆ ಪಾಕಿಸ್ತಾನ ಎದುರಾಳಿಯಾಗುವುದೇ ಎಂಬ ಆತಂಕ ಎರಡೂ ರಾಷ್ಟ್ರಗಳಲ್ಲಿ ಇತ್ತು. ಯಾಕೆಂದರೆ ಇವುಗಳ ನಡುವಿನ ಪಂದ್ಯ ಎಂಥ ಭಾವನೆಗಳನ್ನು ಕೆರಳಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಎರಡೂ ತಂಡಗಳು ತೀವ್ರ ಒತ್ತಡದಲ್ಲಿ ಆಡಬೇಕಾಗುತ್ತವೆ. ಭಾರತ ತಂಡ ವಿಶ್ವ ಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಒಮ್ಮೆಯೂ ಸೋತಿಲ್ಲವಾದರೂ ಈ ಸಲ ಅದೇ ಫಲಿತಾಂಶ ಬರುವುದು ಎಂದು ಹೇಳುವುದು ಕಷ್ಟ. ಭಾರತ ಬೇರೆ ಯಾರ ವಿರುದ್ಧ ಸೋತರೂ ಪರವಾಗಿಲ್ಲ, ಪಾಕಿಸ್ತಾನ ಕೈಲಿ ಮಾತ್ರ ಸೋಲಬಾರದು ಎಂಬ ನಿರೀಕ್ಷೆ ಮತ್ತು ಆಕ್ರೋಶ ಭಾರತೀಯರದ್ದಾದರೆ, ಅದೇ ರೀತಿಯ ಅನಿಸಿಕೆ ಹಾಗೂ ಮತಾಂಧ ಭಾವನೆ ಪಾಕಿಸ್ತಾನಿಗಳದ್ದು.

ಚೆನ್ನೈಗೆ ಬರುವಾಗ, ಮುಂಬೈ ವಿಮಾನ ನಿಲ್ದಾಣದಲ್ಲಿ ಮರಾಠಿಯ ಹಿರಿಯ ಕ್ರೀಡಾ ವರದಿಗಾರರೊಬ್ಬರನ್ನು ಭೇಟಿಯಾಗಿದ್ದೆ. ಅವರಿಗೆ ಏಪ್ರಿಲ್ ಎರಡರಂದು ಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ಗೆ, ಹುಬ್ಬಳ್ಳಿಯ ಕ್ರಿಕೆಟ್ ಹುಚ್ಚಿನ ಡಾಕ್ಟರ್‌ಮಿತ್ರನಿಗಾಗಿ ಮೂರು ಟಿಕೆಟ್ ಬೇಕು ಎಂದು ಹೇಳಿದ್ದೆ. “ನಾನು ಭಾರತ ತಂಡ ಫೈನಲ್‌ಗೆ ಬರಬಾರದೆಂದು ಪ್ರಾರ್ಥಿಸುತ್ತಿದ್ದೇನೆ. ಯಾಕೆಂದರೆ ಭಾರತ ಫೈನಲ್‌ಗೆ ಬಂದರೆ, ಐದು ಸಾವಿರ ರೂಪಾಯಿ ಟಿಕೆಟ್ ಬೆಲೆ 40 ರಿಂದ 50 ಸಾವಿರ ಆಗುತ್ತದೆ. ಬೇರೆ ತಂಡಗಳು ಆಡಲು ಬಂದರೆ ಅಂಥ ಬೇಡಿಕೆ ಇರುವುದಿಲ್ಲ.

ಟಿಕೆಟ್ ಸಿಗುತ್ತದೆ. ಭಾರತ ತಂಡ ಬಂದರೆ ನಾನು ಟಿಕೆಟ್ ಕೊಡಿಸಲು ಸಾಧ್ಯವಾಗಲಿಕ್ಕಿಲ್ಲ” ಎಂದು ಅವರು ಹೇಳಿದಾಗ ನನಗೆ ಆಶ್ಚರ್ಯವೇನೂ ಆಗಲಿಲ್ಲ. ಇಷ್ಟು ಹಣ ಕೊಟ್ಟು ನೋಡುವ ಹುಚ್ಚರಿದ್ದಾರೆ. ನಾಗಪುರದಲ್ಲಿ ಒಂದೂವರೆ ಸಾವಿರ ರೂಪಾಯಿ ಬೆಲೆಯ ಟಿಕೆಟ್‌ಗೆ ಇಪ್ಪತ್ತು ಸಾವಿರ ಕೊಟ್ಟು ಬಂದ ನೂರಾರು ಪ್ರೇಕ್ಷಕರಿದ್ದರು. ಫೈನಲ್‌ಗೆ ಅದರ ಬೆಲೆ ದುಪ್ಪಟ್ಟಾಗುವುದು ಸಹಜವೇ. ಬೆಂಗಳೂರಿ ನಲ್ಲಿಯೂ ಕಾಳಸಂತೆಯಲ್ಲಿ ಟಿಕೆಟ್ ಮಾರಿ ದುಡ್ಡು ಮಾಡಿಕೊಂಡವರು ಕಡಿಮೆಯೇನಿಲ್ಲ.

ಭಾರತ ತಂಡ ಆಡುತ್ತಿರುವ ರೀತಿ ನೋಡಿದರೆ, ದೋನಿಪಡೆ ಕ್ವಾರ್ಟರ್‌ಫೈನಲ್ ಅಥವಾ ಸೆಮಿ ಫೈನಲ್ ಹಂತ ದಾಟುವ ಸಾಧ್ಯತೆಗಳಿಲ್ಲ ಎಂದೆನಿಸುತ್ತದೆ. ಆರಂಭದಲ್ಲಿ ಬರೀ ಬೌಲಿಂಗ್ ಬಗ್ಗೆ ಆತಂಕ ಇತ್ತು. ಈಗ ಬ್ಯಾಟಿಂಗ್ ಬಗ್ಗೆ ಅನುಮಾನಗಳು ಶುರುವಾಗಿವೆ. ಆಟಗಾರರ ಗಮನ ಬೇರೆ ಕಡೆ ಹರಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪಂದ್ಯಗಳ ನಡುವೆ ಇರುವ ಬಿಡುವಿನ ದಿನಗಳಲ್ಲಿ ಅವರೆಲ್ಲ ಆಟದ ಅಭ್ಯಾಸ ಬಿಟ್ಟು ಜಾಹೀರಾತು ಷೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ಟೀಕೆಗಳೂ ಕೇಳಿಬಂದಿವೆ. ಆದರೆ ದೋನಿಪಡೆ ಇವನ್ನೆಲ್ಲ ತಲೆಗೆ ಹಚ್ಚಿಕೊಂಡಿಯೇ ಇಲ್ಲ.
ನಾಗಪುರದಲ್ಲಿ ದಕ್ಷಿಣ ಆಫ್ರಿಕ ಕೈಲಿ ಸೋತ ಮೇಲೆ, ದೋನಿ ಪ್ರೇಕ್ಷಕರನ್ನೇ ದೂರಿಬಿಟ್ಟರು. ‘ಆಟಗಾರರು ಪ್ರೇಕ್ಷಕರಿಗಾಗಿ ಆಡುವುದಿಲ್ಲ, ದೇಶಕ್ಕಾಗಿ ಆಡಬೇಕು, ಆಡುತ್ತಾರೆ. ಪವರ್‌ಪ್ಲೇನ ಎಲ್ಲ ಎಸೆತಗಳಲ್ಲಿ ಸಿಕ್ಸರ್, ಬೌಂಡರಿ ಹೊಡೆಯಲು ಆಗುವುದಿಲ್ಲ’ ಎಂದು ಅವರು ಭಾಷಣದ ಶೈಲಿಯಲ್ಲಿ ನೆಪ ಹೇಳಿದ್ದರು. ಒಂದು ದಿನದ ಕ್ರಿಕೆಟ್‌ನಲ್ಲಿ ಪ್ರೇಕ್ಷಕ ಸಹಜವಾಗಿಯೇ ಬೌಂಡರಿ, ಸಿಕ್ಸರ್ ನಿರೀಕ್ಷಿಸುತ್ತಾನೆ. ಬ್ಯಾಟಿಂಗ್‌ನಲ್ಲಿ ಬಲಿಷ್ಠ ಎಂದು ಹೇಳಿಕೊಳ್ಳುವ ಭಾರತ ತಂಡ 29 ರನ್ನುಗಳಿಗೆ ಒಂಬತ್ತು ವಿಕೆಟ್ ಕಳೆದುಕೊಂಡರೆ ಪ್ರೇಕ್ಷಕನಿಗೆ ಸಿಟ್ಟು ಬಂದೇ ಬರುತ್ತದೆ. ದೋನಿ ಹೇಳಿದಂತೆ ಅವರ ಬ್ಯಾಟ್ಸಮನ್ನರು ಸಿಕ್ಸರ್, ಬೌಂಡರಿ ಬೇಡ, ದೇಶಕ್ಕಾಗಿಯೇ ಆಡಿದ್ದರೂ 30-40 ರನ್ ಬರಬಹುದಿತ್ತು. ಭಾರತ ಸೋಲುತ್ತಿರಲಿಲ್ಲ.ಈ ‘ದೇಶಕ್ಕಾಗಿ ಆಡುತ್ತೇವೆ’ ಎಂದು ಕ್ರಿಕೆಟಿಗರು ಹೇಳಿದಾಗ ಅನುಮಾನಗಳು ಮೂಡುತ್ತವೆ. ಅವರು ಆಡಿದ್ದರೆ ಮೋಸದಾಟ ಚಿಗುರಿ ಹೆಮ್ಮರವಾಗುತ್ತಲೇ ಇರಲಿಲ್ಲ.

ಈ ವಿಶ್ವ ಕಪ್‌ನಲ್ಲೂ ಮೋಸದಾಟದ ಬಗ್ಗೆ ಸಣ್ಣಪುಟ್ಟ ಮಾತುಗಳು ಕೇಳಿಬಂದಿವೆ. ಎಲ್ಲ ಕ್ರೀಡಾಂಗಣಗಳಲ್ಲೂ ಇದರ ವಿರುದ್ಧ ಎಚ್ಚರಿಕೆಯ ಬೋರ್ಡ್‌ಗಳನ್ನು ಐಸಿಸಿ ಹಾಕಿದೆ. ಆದರೂ ರಂಗೋಲಿಯ ಕೆಳಗೆ ನುಸುಳುವವರು ಇದ್ದೇ ಇರುತ್ತಾರೆ. ಈಗ ಅದು ಬೇಡ. ಮುಂದಿನ ಪಂದ್ಯಗಳ ಬಗ್ಗೆ ಗಮನ ಹರಿಸೋಣ. ಆದರೆ ಆರು ವಾರಗಳ ಬದಲು ನಾಲ್ಕು ವಾರಗಳ ಕಾಲ ಟೂರ್ನಿ ನಡೆಯುವುದು ಸೂಕ್ತ ಎಂದು ಬಹಳಷ್ಟು ಮಂದಿ ಆಟಗಾರರು ಹೇಳಿದ್ದಾರೆ. ಪಂದ್ಯಗಳ ನಡುವೆ ಬಹಳ ಬಿಡುವು ಇದ್ದರೆ ಬೋರಾಗುತ್ತದೆ ಎಂದು ಆಸ್ಟ್ರೇಲಿಯ ಹೇಳಿದೆ. ಮುಂದಿನ ವಿಶ್ವ ಕಪ್‌ನಲ್ಲಿ ಹತ್ತೇ ತಂಡಗಳನ್ನು ಆಡಿಸಲಾಗುವುದು ಎಂದು ಐಸಿಸಿ ಈಗಾಗಲೇ ಹೇಳಿದೆ. ಕ್ರಿಕೆಟ್ ಆಡುವ ಎಲ್ಲ ರಾಷ್ಟ್ರಗಳಿಗೂ ಅವಕಾಶ ಸಿಗಬೇಕು ಎಂಬ ಭಾವನೆ ಇದ್ದರೆ ಅವುಗಳಿಗಾಗಿಯೇ ಬೇರೆ ಟೂರ್ನಿಗಳನ್ನು ನಡೆಸಲಿ. ವಿಶ್ವ ಕಪ್ ಎಂಬುದು ನಂಬರ್ ಒನ್ ಆಗಿ ಇದ್ದರೆ ಮಾತ್ರ ಅದಕ್ಕೆ ಬೆಲೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT