ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆಯ ಅತ್ತ ಕಡೆ ಗೋಡೆಯ ಇತ್ತ ಕಡೆ

Last Updated 2 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ನ್ಯಾಯ ಬೇಡಲು ರಾಜಧಾನಿಗೆ ಬರುತ್ತಿದ್ದೇವೆ, ಬೆಂಬಲಿಸಿ ಎಂಬ ಬಿನ್ನಹದ ಕರೆ ದೂರದ ಕಾರವಾರದಿಂದ ಬಂದಾಗ ನನಗೆ ಅಚ್ಚರಿ. ತನ್ನೊಳಗಿನ ಹಸುಳೆಗಳನ್ನೇ ಕಾಪಾಡಿಕೊಳ್ಳಲಾಗದ ಈ ಮಹಾನಗರ, ದೂರದೂರಿನವರ ದೂರುಗಳನ್ನು ಆಲಿಸೀತೇ ಎಂಬ ಅನುಮಾನ.

ಬರೆಯುವವನಿಗೆ ಭರವಸೆಯ ಇಂಕು ಎಂದೂ ಖಾಲಿಯಾಗಬಾರದು, ಅವನು ಸಿನಿಕನಾಗಬಾರದು ಎಂಬ ಗಾಢ ನಂಬಿಕೆಯಿಂದ ಮುಂಚೆ ಬಂದೀಖಾನೆಯಾಗಿದ್ದ, ಈಗ ಸ್ವಾತಂತ್ರ್ಯ ಉದ್ಯಾನವನವೆಂದು ಕರೆಯಲಾಗುವ, ಎಷ್ಟು ಧ್ವನಿವರ್ಧಕಗಳನ್ನು ಬಳಸಿ ಅರಚಿಕೊಂಡರೂ ಪ್ರಭುತ್ವಕ್ಕೆ ಕೇಳಿಸಲಾಗದಷ್ಟು ಅಂತರವಿರುವ, ಆ ಜಾಗಕ್ಕೆ ಹೋದಾಗ ಕಾರವಾರ-ಅಂಕೋಲಾ ಪರಿಸರದ ನೌಕಾನೆಲೆ ನಿರಾಶ್ರಿತರು, ಹೋರಾಟಗಾರರು, ರಾಜಕೀಯ ಗಣ್ಯರು ಕುಳಿತು ಧಿಕ್ಕಾರದ ಘೋಷಣೆ ಕೂಗುತ್ತಿದ್ದರು. ಎಂದಿನಂತೆ ಸ್ವಾತಂತ್ರ್ಯ ಹೋರಾ­ಟಗಾರ ಹೆಚ್.ಎಸ್.ದೊರೆಸ್ವಾಮಿ,  ಚಿಂತಕ ಸಿ.ಎಸ್.ದ್ವಾರಕಾನಾಥ್ ಮುಂತಾದವರು ಬರಲಿದ್ದರು. ನಾನೂ ಕುಳಿತು ಒಂದೆರಡು ಮಾತನಾಡಿದೆ; ಒಂದೆರಡು ಘೋಷಣೆ ಕೂಗಿದೆ. ಇದೆಲ್ಲ ನಿಷ್ಫಲವೆಂದು ಒಳದನಿ ಹೇಳುತ್ತಿತ್ತು. ಆದರೆ ಹೀಗೆ ಪ್ರತಿಭಟಿಸುವುದಲ್ಲದೆ ನಮ್ಮ ವ್ಯವಸ್ಥೆಯಲ್ಲಿ ಅನ್ಯಮಾರ್ಗವೇನಿದೆ ?

ತಲೆಗಳೂ, ತಲೆಮಾರುಗಳೂ ಉರುಳಿಹೋದವು. ಈ ಹೋರಾಟ ಆರಂಭವಾಗಿ ಮೂವತ್ತು ವರ್ಷಗಳಾದವು. ಹೋರಾಟ ಆರಂಭವಾದಾಗ ಬಾಲಕರಾಗಿದ್ದವರು ಈಗ ಮಧ್ಯವಯಸ್ಕರಾಗಿದ್ದಾರೆ. ಮಧ್ಯವಯಸ್ಕರು ಮುದುಕರಾಗಿ­ದ್ದಾರೆ. ಮುದುಕರು ತೀರಿಕೊಂಡಿದ್ದಾರೆ. ಬರುವ ಹೊಸತಲೆ­ಮಾರಿಗೆ ಈ ಹೋರಾಟದ ತಲೆಬುಡವೇ ತಿಳಿಯುವುದಿಲ್ಲ. ಈ ಉತ್ತರ ಕನ್ನಡ ಜಿಲ್ಲೆ ನನಗೆ ಬುದ್ಧಿ ತಿಳಿದಾಗಿನಿಂದ ಉತ್ತರ ಕಾಣದ ಜಿಲ್ಲೆಯಂತೆಯೇ ಕಾಣಿಸುತ್ತಿದೆ.

ಸಮೃದ್ಧ ಕಾಡು, ಕಣಿವೆ, ನದಿ, ಘಟ್ಟಶ್ರೇಣಿ ಮತ್ತು ಕಡಲಿನಿಂದಾವೃತವಾದ ಕೆನೆಗಟ್ಟಿದ ಬೆಳ್ಳಿ ಮೋಡಗಳನ್ನು, ಹರಿದ್ವರ್ಣದ ಕಾಡುಗಳನ್ನು ಕಂಡು ಪ್ರಾಸಪ್ರಿಯರು ಕಾರವಾರ ಕನ್ನಡ ನಾಡಿನ ಕಾಶ್ಮೀರ ಎಂದರು. ಬಣ್ಣನೆಗಳು ಹಾಡಲು, ಕೇಳಲು ಚೆಂದ. ಪ್ರಗತಿಯ ಹೆಸರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಏಕಪ್ರಕಾರವಾಗಿ ನಡೆಯುತ್ತಿರುವ ಚಟುವಟಿಕೆಗಳ ದೆಸೆಯಿಂದ ಅಲ್ಲಿನ ಬಡರೈತರ ಬದುಕಿ­ನಲ್ಲಿ ಬಣ್ಣಗಳಿಲ್ಲ; ಬವಣೆ­ಗಳಿವೆ. ಸೀಬರ್ಡ್ ನೌಕಾ­ನೆಲೆ ಯೋಜನೆ ಸಣ್ಣ ರೈತ­ರನ್ನು ಕುಕ್ಕಿ ತಿಂದಿದೆ. ಇನ್ನೂ ಪ್ರಾಣ ಉಳಿಸಿ­ಕೊಂಡಿರುವ ಪಳೆಯುಳಿಕೆ­ಗಳಂಥವರು ಸ್ವಪ್ರೇರಣೆ­ಯಿಂದ ಪ್ರತಿಭಟಿಸಲು ಬೆಂಗಳೂರಿಗೆ ಬಂದಿದ್ದರು.

ಮೂರು ಕಡೆ ನೀರಿರುವ ಭಾರತಕ್ಕೆ ಭೂಸೇನೆ, ವಾಯುಸೇನೆಗಳಂತೆಯೇ ನೌಕಾಸೇನೆಯೂ ಬಹುಮುಖ್ಯ. ಸೇನೆಯ ಸಂರಚನೆ, ಅಗಾಧ ಸ್ವರೂಪ, ಕಡಿವಾಣವಿಲ್ಲದ ಬಜೆಟ್, ಅಪರಿಮಿತ ಯುದ್ಧೋಪಕರಣಗಳ ಖರೀದಿ ಬೆಚ್ಚಿಬೀಳಿಸುತ್ತವೆ. ಶಿಕ್ಷಣ, ಆರೋಗ್ಯ, ಕೃಷಿ ಮುಂತಾದ ಅಗತ್ಯ ಕ್ಷೇತ್ರಗಳಿಗೆ ಹಣದ ಕೊರತೆಯಾದರೂ, ಮಿಲಿಟರಿಗೆ ಅರೆಕೊರೆ ಆಗುವಂತಿಲ್ಲ. ಪಾಕಿಸ್ತಾನ, ಚೀನಾಗಳಂಥ ನೆರೆಯ ರಾಷ್ಟ್ರಗಳಿರುವಾಗ ಭಾರತವು ಸುಸಜ್ಜಿತ ಸೇನೆಯನ್ನು ಹೊಂದಬೇಕಾಗಿರುವುದು ಅನಿವಾರ್ಯ. ಸೈನಿಕರ ತ್ಯಾಗ­ವನ್ನು, ಸೇನೆಯ ಮಹತ್ವವನ್ನು ಯಾರೂ ನಿರಾಕರಿ­ಸುತ್ತಿಲ್ಲ. ಆದರೆ ತನ್ನ ನೌಕಾನೆಲೆಗಾಗಿ ರೈತರ ಭೂಮಿಯನ್ನು ಕಸಿದು­ಕೊಂಡು ಸಾವಿರಾರು ಸಣ್ಣರೈತರನ್ನು ಶಾಶ್ವತ ತಬ್ಬಲಿಗಳ­ನ್ನಾಗಿಸಿ, ಅವರಿಗೆ ನೀಡಬೇಕಾದ ಪರಿಹಾರವನ್ನು ನ್ಯಾಯ­ಬದ್ಧ­ವಾಗಿ ನೀಡದೆ ಬೇಜವಾಬ್ದಾರಿ ತನದಿಂದ ಮೆರೆಯುವ ಇದನ್ನು ರಕ್ಷಣಾ ಇಲಾಖೆ ಎಂದು ಹೇಗೆ ಕರೆಯುವುದು? ದೇಶವನ್ನು ರಕ್ಷಿಸುವ ನೆಪದಲ್ಲಿ ಬಡವರನ್ನು ಕಬಳಿಸಿದರೆ ಇದೆಂಥಾ ರಕ್ಷಣಾ ಇಲಾಖೆ?

ರಾಜೀವ್‌ಗಾಂಧಿಯವರು ಸೀಬರ್ಡ್ ನೌಕಾನೆಲೆಗೆ ಸಾವಿರದ ಒಂಬೈನೂರ ಎಂಬತ್ತಾರರಲ್ಲಿ ಶಿಲಾನ್ಯಾಸ ಮಾಡುತ್ತಾ ಒಬ್ಬನೇ ಒಬ್ಬ ರೈತನ ಕಣ್ಣಲ್ಲಿ ನೀರು ಹಾಕಿಸುವುದಿಲ್ಲ ಎಂದು ಭಾವಾವೇಶದ ಭಾಷಣ ಮಾಡಿದ್ದರು. ಇಪ್ಪತ್ತೆಂಟು ವರ್ಷಗಳ ನಂತರವೂ ಅವರಿಗೆ ಪರಿಹಾರ ದೊರಕದೆ ಕಣ್ಣೀರಿನ ಜತೆಗೆ ರಕ್ತವೂ ಇಂಗಿಹೋದಂತಾಗಿದೆ. ಸೇನೆಯಂತೆಯೇ ರಕ್ಷಣಾ ಇಲಾಖೆಯೂ ನಿರ್ದಯಿಯಾ­ಗಿರುತ್ತದೆ ಎಂಬುದಕ್ಕೆ ಸಾಕ್ಷಿ ಅದು ಒಂದು ಗುಂಟೆ ಭೂಮಿಗೆ ಕೇವಲ ನೂರೈವತ್ತು ರೂಪಾಯಿ ಕೊಡಲು ಮುಂದಾಗಿದ್ದು! ಈ ಹಣಕ್ಕೆ ಒಂದು ಕೇಜಿ ಒಳ್ಳೆಯ ಮೀನೂ ದೊರಕುವುದಿಲ್ಲ. ಆದರೆ ಸ್ಥಳೀಯ ಕೋರ್ಟ್ ಇದನ್ನು ಖಂಡಿಸಿ ಗುಂಟೆಗೆ ಹನ್ನೊಂದೂವರೆ ಸಾವಿರ ರೂಪಾಯಿಗಳನ್ನು ಕೊಡಬೇಕೆಂದು ತೀರ್ಪಿತ್ತಿತು. ಇದನ್ನು ಹೈಕೋರ್ಟ್ ಮತ್ತು ಸುಪ್ರೀಂಗಳು ಎತ್ತಿ ಹಿಡಿದವು.

ಅನ್ಯಾಯವನ್ನು ಸುಪ್ರೀಂ ಸನ್ನಿಧಿಗೆ ಒಯ್ದು ಜಯಶೀಲ­ರಾದವರು ಸತೀಶ್‌ಸೈಲ್ ಮತ್ತು ದೇವದತ್ ಕಾಮತ್. ಭೂಮಿ ಕಳೆದುಕೊಂಡವರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ. ಅದರಲ್ಲಿ ಒಂದು ಎಕರೆಗಿಂತ ಕಡಿಮೆ ಭೂಮಿ ಉಳ್ಳವರೇ ಬಹಳ ಮಂದಿ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ರಕ್ಷಣಾ ಇಲಾಖೆಯ ಡಿಫೆನ್ಸ್ ಎಸ್ಟೇಟ್ ಅಧಿಕಾರಿ ನಿರ್ಲಜ್ಜರಾಗಿ, ನಿಷ್ಕರುಣೆಯಿಂದ ಕುಳಿತು­ಬಿಟ್ಟಿದ್ದಾರೆ. ಎಂಟುನೂರು ಕೋಟಿ ಪರಿಹಾರ ನೀಡಬೇಕಾದ ವ್ಯಾಜ್ಯದಲ್ಲಿ ಐವತ್ತು ಕೋಟಿಗಳನ್ನಷ್ಟೇ ಕಡಲೆಪುರಿಯಂತೆ ಹಂಚಿ ಸುಮ್ಮನಾಗಿದ್ದಾರೆ. ನ್ಯಾಯಾಂಗ ನಿಂದನೆಯ ಅರ್ಜಿಗಳೂ ದೂಳು ಕುಡಿಯುತ್ತಿವೆ. ಹೋರಾಡಲು ರೈತರ ಬಳಿ ಹಣವಿಲ್ಲ, ಸಂಘಟನೆ ಇಲ್ಲ, ಅರಿವಿಲ್ಲ. ಸೈನ್ಯವೆಂಬ ಬೆದರು ಬೊಂಬೆಯ ಭಯ. ರೈತರ ಪರ ನಿಲ್ಲಬೇಕಾದ ಜಿಲ್ಲಾಧಿಕಾರಿ­ಗಳಲ್ಲಿ, ಅತುಲ್‌ಕುಮಾರ್ ತಿವಾರಿಯಂಥ ಕೆಲವು ರಾಷ್ಟ್ರ­ಭಕ್ತರು, ರೈತರಿಗೆ ಲಾಠಿ ಬೀಸಿ ಗುಡಿಸಲಿನಿಂದ ಎಳೆದು ಬಿಸಾಕಿ ಭೂಮಿ ಕಬಳಿಸಿದ ಕರಾಳಕಥೆಯನ್ನು ಅದರ ಹಸಿಗಾಯಗಳನ್ನು ರೈತರು ಈಗಲೂ ನೆನಪಿಸಿಕೊಂಡು ಬೆಚ್ಚಿಬೀಳುತ್ತಾರೆ.

ದೇಶಕ್ಕೆ ನೌಕಾನೆಲೆ ಮುಖ್ಯ. ಆದರೆ ಬಡವನಿಗೆ ತುಂಡು ಭೂಮಿ ಮುಖ್ಯ. ನೌಕಾನೆಲೆ ಅತಿಮುಖ್ಯ ಎನ್ನುವುದಾದರೆ ಬಡವನಿಗೆ ಪರ್ಯಾಯ ಭೂಮಿ ನೀಡಬಾರದೆ? ಅವನ ಕುಟುಂಬಕ್ಕೊಂದು ಉದ್ಯೋಗ ನೀಡಬಾರದೆ? ಈ ಉದ್ಯೋಗ­ಪರ್ವವನ್ನು ಬಿಚ್ಚಿ ನೋಡಿದರೆ ಕರ್ಮಕಾಂಡವೇ ಗೋಚರವಾಗುತ್ತದೆ. ಕೆಳವರ್ಗದ ಹುದ್ದೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂಬ ನಿಯಮವಿದೆ. ಇದನ್ನು ಕೊಂಕಣ ರೈಲ್ವೆ ಅಕ್ಷರಶಃ ಪಾಲಿಸಿದೆ. ಕಾರವಾರದ ಸೀಬರ್ಡ್ ನೌಕಾನೆಲೆಗೆ ಕನ್ನಡಿಗರೆಂದರೆ ಅಸ್ಪೃಶ್ಯರು. ಆಯ್ಕೆಗಾಗಿ ನಡೆಸುವ ಪರೀಕ್ಷಾ­ಕೇಂದ್ರಗಳನ್ನು ಕಾರವಾರದಲ್ಲಿ ಕನ್ನಡದಲ್ಲಿ ನಡೆಸುವುದರ ಬದಲು ಮುಂಬೈನಲ್ಲಿ ಹಿಂದಿಯಲ್ಲಿ ನಡೆಸಲಾಗುತ್ತದೆ.

ಉತ್ತರ ಭಾರತೀಯರನ್ನು ತುಂಬಿಕೊಳ್ಳುವುದೇ ಇದರ ಹಿಂದಿನ ಉದ್ದೇಶ. ಅಥವಾ ಗುತ್ತಿಗೆದಾರರಿಗೆ ವಹಿಸಿ ಹಿಂದಿ ಬಲ್ಲವರನ್ನೇ ಆರಿಸಿಕೊಳ್ಳಲಾಗುತ್ತದೆ. ಕೇರಳದಲ್ಲಿರುವ, ಮಹಾರಾಷ್ಟ್ರ­ದಲ್ಲಿರುವ ನೌಕಾನೆಲೆಗಳಲ್ಲಿ ಶೇಕಡಾ ತೊಂಬತ್ತರಷ್ಟು ಉದ್ಯೋಗವನ್ನು ಆಯಾ ಭಾಷಿಕರಿಗೇ ನೀಡಲಾಗಿದೆ. ಕರ್ನಾಟಕದ ಕಾರವಾರದಲ್ಲಿರುವ ಸೀಬರ್ಡ್ ನೌಕಾನೆಲೆಯಲ್ಲಿ ಕನ್ನಡಿಗರು ಸಿಕ್ಕರೆ, ಕನ್ನಡದ ಮಾತು ಕೇಳಿಸಿದರೆ ನಿಮ್ಮ ಪುಣ್ಯ. ಎಂದೋ ಸಂಭವಿಸುವ ಯುದ್ಧ­ಕ್ಕಾಗಿ ಸನ್ನದ್ಧವಾಗಿರಬೇಕಾದ ನೌಕಾಪಡೆ ಸದಾ ಸುಸಜ್ಜಿತ­ವಾಗಿರಬೇಕಾದದ್ದು ಸರಿಯೇ. ಆದರೆ ನೆಲದ ಮಕ್ಕಳನ್ನು ಅವಮಾನಿಸುವ ಹಕ್ಕು ಇವರಿಗೇನಿದೆ? ಕಾರವಾರ ನಗರಕ್ಕೆ ಆಗಾಗ ವಕ್ಕರಿಸುವ ನೌಕಾನೆಲೆಯ ಸಿಬ್ಬಂದಿ ಉದ್ಧಟತನ­ದಿಂದ ನಡೆದುಕೊಳ್ಳುತ್ತಾರೆ ಎಂಬುದು ಸ್ಥಳೀಯರ ಆಕ್ರೋಶ. ಪೊಲೀಸರಿಗೆ ಹೆದರದ ಇವರು ಸಭ್ಯತೆಯ ಎಲ್ಲೆ ಮೀರಿ ನಡೆದುಕೊಂಡ ಘಟನೆಗಳು ಅನೇಕ. ನ್ಯಾಯಾಂಗದ ಆದೇಶ ಹೊತ್ತ ಪೊಲೀಸ್ ಅಧಿಕಾರಿ ಕೂಡಾ ನೌಕಾನೆಲೆಗೆ ಪ್ರವೇಶಿಸಲು ಅಂಜುವ ಪರಿಸ್ಥಿತಿ ಇದೆ.

ಈ ನೌಕಾನೆಲೆಯನ್ನು ಹಲವು ಬಾರಿ ನೋಡಿ ಬಂದಿರುವ ನನಗೆ ಇಂಥ ಸುಸಜ್ಜಿತ ನೆಲೆಯ ಬಗ್ಗೆ ಅಭಿಮಾನವೆನ್ನಿಸಿದರೂ ಇಲ್ಲಿನ ಭ್ರಷ್ಟಾಚಾರ, ಒಣ ಶಿಷ್ಟಾಚಾರ, ಪಂಚತಾರಾ ಸಂಸ್ಕೃತಿಯ ಹೊಲಸು ಪ್ರದರ್ಶನ, ಸ್ಥಳೀಯ ಭಾಷಿಕರ ಬಗೆಗಿನ ಅನಾದರ, ಕೈ ಕೆಳಗಿನವರನ್ನು ಹೀನಾಯವಾಗಿ ನಡೆಸಿಕೊಳ್ಳುವ ವರ್ತನೆ ಅಕ್ಷಮ್ಯ ಎನಿಸುತ್ತದೆ. ಪೊಲೀಸ್ ಇಲಾಖೆಯ ಪ್ರೋಟೊ­ಕಾಲ್‌ಗಳು, ಅದರ ಹಿರಿಯಣ್ಣನಂತಿರುವ ಸೇನೆಯಲ್ಲಿ ಸಾವಿರ ಪಟ್ಟು ಹೆಚ್ಚಾಗಿವೆ. ಪೊಲೀಸರು ನ್ಯಾಯಾಲಯ­ಕ್ಕಾದರೂ ಅಂಜುತ್ತಾರೆ. ಕಾನೂನು, ಸಂವಿಧಾನಗಳಿಗೆ ಅತೀತವಾಗಿರುವಂತೆ ನಡೆದುಕೊಳ್ಳುವ ಸೇನಾವ್ಯವಸ್ಥೆ ಯಾರಿಗೂ ಅಂಜದ ಭಂಡತನ ಬೆಳೆಸಿಕೊಂಡಿದೆ.

ಕರ್ನಾಟಕದ ಎಲ್ಲ ಜಿಲ್ಲೆಗಳ ಜತೆಗೂ ನನಗೆ ಒಂದಿಲ್ಲೊಂದು ನಂಟಿದೆ. ಈ ನಂಟು ಹೆಚ್ಚಿಗೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಜೊತೆಗೆ. ಒಂದು ಕಾಲಕ್ಕೆ ಕಾರವಾರದಲ್ಲಿ ಪಿಯುಸಿ ಕಲಿಯುತ್ತಿದ್ದೆ. ಶಿವರಾಮ ಕಾರಂತರು ಲೋಕಸಭೆಗೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಈ ಜಿಲ್ಲೆಯ ಹಳ್ಳಿಹಳ್ಳಿಗಳನ್ನೂ ನೋಡುವ ಅವಕಾಶ ಲಭಿಸಿತ್ತು. ಕಲೆ, ಸಾಹಿತ್ಯ, ಜನಪದ, ರಾಜಕಾರಣ, ಆಡಳಿತ, ಪತ್ರಿಕೋದ್ಯಮ ಎಲ್ಲ ಕ್ಷೇತ್ರ­ಗಳಲ್ಲೂ ದೊಡ್ಡದನ್ನು ಸಾಧಿಸಿ­ರುವವರ ಸಂಖ್ಯೆ ಈ ಜಿಲ್ಲೆಯಲ್ಲಿ ಬಹಳಷ್ಟಿದೆ. ಆದರೆ ಅವರೆಲ್ಲ ಸಂಘಟಿತ­ರಾಗಿ, ಸಾಂಸ್ಥಿಕರೂಪದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆ­ಗಳಿಗೆ ಪರಿಹಾರ ಕಂಡು­ಕೊಳ್ಳುವ ಪ್ರಯತ್ನ ಮಾಡಿಲ್ಲ.

ಊರು ಬಿಟ್ಟು ಬಂದವರಿಗೆ ಊರಿನ ನೆನಪಿಲ್ಲ. ನೆನಪಿದ್ದವರಿಗೆ ಸಮಸ್ಯೆಗಳಿಗೆ ಸ್ಪಂದಿಸಲು ಬಿಡುವಿಲ್ಲ. ಬಿಡುವಿದ್ದವರಿಗೆ ಹೋರಾಟವನ್ನು ಕುರಿತು ವ್ಯಂಗ್ಯ, ಉಡಾಫೆಯ ಧೋರಣೆಗಳಿವೆ. ಕಾರವಾರದ ದೈನಿಕ ಕರಾವಳಿ ಮುಂಜಾವು ಪತ್ರಿಕೆಯ ಗಂಗಾಧರ ಹಿರೇಗುತ್ತಿ ಯಾವತ್ತಿನಿಂದಲೂ ಪರಿಸರ ರಕ್ಷಣೆಯ ಹೋರಾಟದಲ್ಲಿ ಮುಂಚೂಣಿಯ­ಲ್ಲಿದ್ದಾರೆ. ವಕೀಲರಾದ ನಾಗರಾಜ ವಿ. ನಾಯಕ್ ಸೀಬರ್ಡ್ ನೌಕಾನೆಲೆಯ ನಿರಾಶ್ರಿತರನ್ನು ಸಂಘಟಿಸಿ ಬೆಂಗಳೂರಿಗೆ ಕರೆತಂದಿದ್ದರು.

ಆದರೆ ಬೆಂಗಳೂ­ರಿನಲ್ಲಿ ಖ್ಯಾತನಾಮ­ರಾಗಿರುವ, ವಿವಿಧ ಕ್ಷೇತ್ರ­ಗಳಲ್ಲಿ ಪ್ರಭಾವಿ­ಗಳಾಗಿರುವ ಉತ್ತರ ಕನ್ನಡ ಜಿಲ್ಲೆಯ ಅನೇಕ ಗಣ್ಯರು ಈ ಪ್ರತಿಭಟನಾ ಸಭೆಗೆ ಆಹ್ವಾನವಿದ್ದರೂ ಬಂದಿರಲಿಲ್ಲ. ದೊರೆಸ್ವಾಮಿಯವರ ನಾಯಕತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿಪತ್ರ ಕೊಡಲಾಗಿದೆ. ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಈ ಅನ್ಯಾಯವನ್ನು ಸರಿಪಡಿಸಲು, ಮಧ್ಯಪ್ರವೇಶ ಮಾಡಲು ಕೋರಲಾಗಿದೆ.

ತಮ್ಮ ಶಕ್ತಿ ಮೀರಿ ಏನು ಮಾಡಲು ಸಾಧ್ಯವೋ ಅಷ್ಟನ್ನೂ ಮುಖ್ಯಮಂತ್ರಿಗಳು ತಕ್ಷಣ ಮಾಡಬೇಕು. ಕಾಗೇರಿ­ಯಂಥವರಿಗೆ ಜಿಲ್ಲೆಯ ಸಮಸ್ಯೆ­ಗಳನ್ನು ಪರಿಹರಿಸುವುದ­ಕ್ಕಿಂತ, ಜಿಲ್ಲೆಯನ್ನು ಹೋಳು ಮಾಡುವುದರಲ್ಲೇ ಆಸಕ್ತಿ ಇದೆ ಎಂಬುದು ಉತ್ತರ ಕನ್ನಡ ಜಿಲ್ಲೆಯ ಕೆಲವು ಜನರ ಅನಿಸಿಕೆ. ಸಿರ್ಸಿ ಪಟ್ಟಣದ ಮುನಿಸಿಪಾಲಿಟಿಯಾಚೆಗೆ ಅವರ ವರ್ಚಸ್ಸಿಲ್ಲ ಎಂಬುದು ಅವರ ದಕ್ಷತೆಯ ಬಗೆಗಿನ ಸ್ಥಳೀಯ ಟೀಕೆಗಳು. ದೇಶಪಾಂಡೆಯವರು ಹಾರಿಕೆ ಉತ್ತರ ಹೇಳುವಲ್ಲಿ ನಿಷ್ಣಾತರು ಎಂಬ ಆರೋಪ. ಈಗಿರುವ ನಾಗರಾಜ್ ನಾಯಕ್‌ರ ಹೋರಾಟ ಸಮಿತಿ ರಾಜಕೀಯೇ­ತರವಾದದ್ದು, ಪಕ್ಷಾತೀತವಾದದ್ದು. ಅದು ನಿಜ ಎನಿಸಿದರೆ ಎಲ್ಲ ಕೂಡಿ ಈ ಹೋರಾಟವನ್ನು ಮುಂದುವರಿಸಿ ಯಶಸ್ವಿಗೊಳಿಸಲು ಇದು ಸಕಾಲ.

ನೌಕಾನೆಲೆ ನಿರಾಶ್ರಿತರ ಬೇಡಿಕೆಗಳೇನೂ ಬೆಟ್ಟದಂಥ­ವುಗಳಲ್ಲ. ಅವುಗಳು ಸಹಜವಾಗಿವೆ ಮತ್ತು ಸರಳವಾಗಿವೆ. ಅವುಗಳನ್ನು ಸಂಗ್ರಹಿಸಿ ದಾಖಲಿಸುವುದಾದರೆ ಭೂ ಹೀನರಿಗೆ ಒಂದೇ ಬಾರಿಗೆ ಪರಿಹಾರ ನೀಡಿ ವಿವಾದ ಮುಕ್ತಾಯ­ಗೊಳಿಸಬೇಕು. ನಕಲಿ ಭೂಹೀನರಿಗೆ ಉದ್ಯೋಗ ಕೊಡುವು­ದನ್ನು ತಪ್ಪಿಸಿ ನಿಜವಾದ ಬಲಿಪಶುಗಳಿಗೆ ಉದ್ಯೋಗ ಸಿಗಬೇಕು. ಗುತ್ತಿಗೆ ಆಧಾರದ ನೇಮಕಾತಿ ನಿಲ್ಲಬೇಕು. ನಿರಾಶ್ರಿತ ಐ.ಟಿ.ಐ.ಗಳಿಗೆ ನೌಕಾನೆಲೆಯಲ್ಲಿ ಅಪ್ರೆಂಟಿಸ್ ಕೋರ್ಸ್‌ಗೆ ಪ್ರವೇಶ ನೀಡಬೇಕು. ನಿರಾಶ್ರಿತ ರಲ್ಲಿ ಹೆಚ್ಚು ಮಂದಿ ಹಿಂದುಳಿದ ವರ್ಗ ಮತ್ತು ದಲಿತರೆಂಬುದನ್ನು ಗಮನಿಸಬೇಕು.

ಕಾರವಾರ ನಗರವನ್ನು ಪ್ರವೇಶಿಸುತ್ತಿದ್ದಂತೆ ಎಡಬದಿಗೆ ಮಹಾಗೋಡೆಯೊಂದು ಸಂಚರಿಸುತ್ತದೆ; ಎಚ್ಚರಿಸುತ್ತದೆ. ಗೋಡೆಯ ಹಿಂದಿರುವ ಮಾಯಾ ನಗರಿ ಸೀಬರ್ಡ್ ಬಡವರ ಕಣ್ಣೀರಿನ ಕಥೆ ಹೇಳುತ್ತದೆ. ಕನ್ನಡಿಗ ಜಾರ್ಜ್‌ ಫರ್ನಾಂಡಿಸ್ ದೂರದೃಷ್ಟಿ ಮತ್ತು ಸದುದ್ದೇಶದಿಂದ ಅಂಕಿತ ಹಾಕಿದ ಯೋಜನೆ, ನೆಲದ ಮಕ್ಕಳಿಗೆ ಮುಳುವಾಗಿದೆ. ಸಾವಿರಾರು ಕೋಟಿ ಯೋಜನೆಯ ಸೀಬರ್ಡ್‌ಗೆ ಅಲ್ಲಿನ ಮೂಲನಿವಾಸಿಗಳಿಗೆ ಪರಿಹಾರ ಕೊಡುವುದು ಕಷ್ಟವೇನಲ್ಲ. ಇಲ್ಲವಾದರೆ ಈ ಗೋಡೆ, ಎಲ್ಲ ಗೋಡೆಗಳಂತೆ ಸಮಾಜ­ವನ್ನು ಸೀಳಿ ಹಾಕಿ ಗೋಡೆಯ ಅತ್ತ ಕಡೆ ಐಷಾರಾಮಿಗಳೂ, ಗೋಡೆಯ ಇತ್ತ ಕಡೆ ಬಂದೂಕು ಹಿಡಿದ ನಕ್ಸಲರೂ ಹುಟ್ಟಿಕೊಳ್ಳಲು ಅನುವು ಮಾಡಿಕೊಟ್ಟಂತಾಗುತ್ತದೆ ಮತ್ತು ಇದಕ್ಕೆ ಸರ್ಕಾರವೇ ಕಾರಣೀಭೂತವಾದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT