ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಣವಾಗದಿರಲಿ ಗಣತಂತ್ರದ ತಾತ್ವಿಕ ಆಶಯ

Last Updated 26 ಜನವರಿ 2017, 19:30 IST
ಅಕ್ಷರ ಗಾತ್ರ
ಕಳೆದ ವಾರ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ಜಗತ್ತಿನ ವ್ಯಾವಹಾರಿಕ, ಬೌದ್ಧಿಕ ಮತ್ತು ರಾಜಕೀಯ ಕ್ಷೇತ್ರಗಳ ಗಣ್ಯರೆಲ್ಲರೂ ಪ್ರತಿ ವರ್ಷದಂತೆ ವಿಶ್ವ ಆರ್ಥಿಕ ವೇದಿಕೆಯಲ್ಲಿ (ವರ್ಲ್ಡ್ ಇಕನಾಮಿಕ್‌ ಫೋರಮ್) ನೆರೆದಿದ್ದರು. ದಾವೋಸ್‌ ಶೃಂಗಸಭೆಯ ಸಂದರ್ಭಕ್ಕೆ ಸರಿಹೊಂದುವಂತೆ, ಜಾಗತಿಕ ಬಡತನ ನಿವಾರಣೆಗಾಗಿ ಕೆಲಸ ಮಾಡುವ ಆಕ್ಸ್‌ಫ್ಯಾಮ್‌ ಸಂಸ್ಥೆಯು ಜನವರಿ 15ರಂದು ‘99% ಜನರಿಗೊಂದು ಅರ್ಥವ್ಯವಸ್ಥೆ’ (ಆ್ಯನ್ ಇಕಾನಮಿ ಫಾರ್ 99%) ಎನ್ನುವ ಶೀರ್ಷಿಕೆಯ ವರದಿಯೊಂದನ್ನು ಬಿಡುಗಡೆ ಮಾಡಿತು. ಇತ್ತೀಚೆಗೆ ಲಭ್ಯವಾಗಿರುವ ಬಡತನದ ಕುರಿತಾದ ಅಂಕಿಅಂಶಗಳು ಮತ್ತು ಪ್ರಪಂಚದ ಅತ್ಯಂತ ಶ್ರೀಮಂತರ ಸಂಪತ್ತಿನ ಬಗೆಗಿನ ಮಾಹಿತಿ ಆಧರಿಸಿ ಸಿದ್ಧಪಡಿಸಿದ ಈ ವರದಿ ಇತ್ತೀಚಿನ ದಶಕಗಳಲ್ಲಿ ಹೆಚ್ಚುತ್ತಿರುವ ಅಸಮಾನತೆಯ ಕಡೆಗೆ ನಮ್ಮ ಗಮನ ಸೆಳೆಯಲು ಬಯಸಿತು.
 
ಆಕ್ಸ್‌ಫ್ಯಾಮ್ ವರದಿಯ ಮುಖ್ಯ ಶಿರೋನಾಮೆಯಿದು: ಜಗತ್ತಿನ ಶೇ 50ರಷ್ಟು ಸಾಮಾನ್ಯ  ಜನರು ಹೊಂದಿರುವ ಸಂಪತ್ತನ್ನು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿನ ಮೊದಲ 8 ಜನರು ಹೊಂದಿದ್ದಾರೆ. ಈಗಾಗಲೆ ಹಲವು ಮೂಲಗಳಿಂದ ತಿಳಿದಿರುವಂತೆ, ಮೇಲಿನ 1% ಜನರು ಉಳಿದ 99% ಜನರಿಗಿಂತ ಹೆಚ್ಚು ಸಂಪತ್ತಿನ ಪಾಲನ್ನು ಹೊಂದಿದ್ದಾರೆ ಮತ್ತು ಅವರ ಪಾಲು ದಿನೇದಿನೇ ಹೆಚ್ಚುತ್ತಲೇ ಇದೆ. ಅಲ್ಲದೆ ಹೊಸದಾಗಿ ಭಾರತ ಮತ್ತು ಚೀನಾದಿಂದ ದೊರಕಿರುವ ಮಾಹಿತಿಯ ಪ್ರಕಾರ, ಕೆಳಗಿನ 50% ಜನ ಹೊಂದಿರುವ ಸಂಪತ್ತಿನ ಪಾಲು ನಾವು ತಿಳಿದಿದ್ದಕ್ಕಿಂತ ಕಡಿಮೆಯಿದೆ. ಈ ವರ್ಗವು ಜಾಗತಿಕ ಸಂಪತ್ತಿನ ಶೇ 1ರ ಕಾಲು ಭಾಗದಷ್ಟು ಪಾಲನ್ನು ಹೊಂದಿದೆ. ಇದು ಜಗತ್ತಿನ ಶ್ರೀಮಂತರ ಪಟ್ಟಿಯ ಮೊದಲ 8 ಜನರು ಹೊಂದಿರುವುದಕ್ಕಿಂತ ಕಡಿಮೆ. 
 
ಮೈಕ್ರೊಸಾಫ್ಟ್‌ನ ಸಂಸ್ಥಾಪಕ ಬಿಲ್ ಗೇಟ್ಸ್‌ರಿಂದ ಪ್ರಾರಂಭವಾಗುವ ಶ್ರೀಮಂತರ ಈ ಪಟ್ಟಿಯಲ್ಲಿ ಯಶಸ್ವಿ ಹೂಡಿಕೆದಾರರಾದ ವಾರೆನ್ ಬಫೆ (3ನೇ ಸ್ಥಾನ) ಅಮೆಜಾನ್ ಕಂಪೆನಿಯ ಸಂಸ್ಥಾಪಕ ಜೆಫ್‌ ಬೆಜೊಸ್ (5ನೇ ಸ್ಥಾನ), ಫೇಸ್‌ಬುಕ್‌ನ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ (6ನೇ ಸ್ಥಾನ) ಹಾಗೂ ಒರಾಕಲ್ ಕಂಪೆನಿಯ ಸಹಸಂಸ್ಥಾಪಕ ಲ್ಯಾರಿ ಎಲಿಸನ್ (7ನೇ ಸ್ಥಾನ) ಇದ್ದಾರೆ. ಈ ಪಟ್ಟಿಯಲ್ಲಿ ಆರು ಅಮೆರಿಕನ್ನರು ಇದ್ದಾರೆ. ಜೊತೆಗೆ ಎಲ್ಲರೂ ಶ್ವೇತವರ್ಣೀಯ ಪುರುಷರು ಎನ್ನುವುದೂ ಕೇವಲ ಆಕಸ್ಮಿಕವಲ್ಲ. 
 
ಆಕ್ಸ್‌ಫ್ಯಾಮ್‌ ಒದಗಿಸುತ್ತಿರುವ ಶೀರ್ಷಿಕೆ ನಾಟಕೀಯವಾಗಿದೆ ಎನ್ನಿಸಬಹುದು. ಆದರೆ 1800ರಿಂದ ಇಂದಿನವರೆಗೆ ಸಂಪತ್ತಿನ ಉತ್ಪತ್ತಿ ಮತ್ತು ಅದರ ಅಸಮಾನ ಹಂಚಿಕೆಯನ್ನು ಅಭ್ಯಸಿಸಿರುವ ಥಾಮಸ್ ಪಿಕೇಟಿ, ಪಾಶ್ಚಿಮಾತ್ಯ ಅರ್ಥವ್ಯವಸ್ಥೆಗಳ ರಚನೆಯಲ್ಲಿಯೇ ಸಂಪತ್ತು ಕೆಲವರಲ್ಲಿಯೇ ಕೇಂದ್ರೀಕೃತವಾಗುವಂತೆ ಮಾಡುವ ಗುಣವಿದೆ ಎಂದು ವಾದಿಸುತ್ತಾರೆ. ಈ ಸಮಯದಲ್ಲಿ ಪ್ರಜಾಪ್ರಭುತ್ವ, ಕಲ್ಯಾಣರಾಜ್ಯ ಮತ್ತು ರಾಷ್ಟ್ರವ್ಯವಸ್ಥೆ ಜಾಗತಿಕವಾಗಿ ಹರಡಿರಬಹುದು, ಆದರೆ 1800ರಿಂದ ಇಂದಿನವರೆಗೆ ಆರ್ಥಿಕ ಅಸಮಾನತೆ ಹೆಚ್ಚುತ್ತಲೇ ಬರುತ್ತಿದೆ ಎಂದು ಪಿಕೇಟಿ ತೋರಿಸುತ್ತಾರೆ. ಈ ಪ್ರವೃತ್ತಿಗೆ ಅಪವಾದವಾಗಿದ್ದ ಕಾಲಘಟ್ಟವೆಂದರೆ 1914-1950ರ ನಡುವಿನ ಸಮಯ. ಆಗಮಾತ್ರ ಅಸಮಾನತೆ ಕಡಿಮೆಯಾಯಿತು. ಆದರೆ ಇದಕ್ಕೆ ಕಾರಣವೆಂದರೆ, ಎರಡು ಮಹಾಯುದ್ಧಗಳ ಕಾರಣದಿಂದ ಯುರೋಪಿನಲ್ಲಿ ಅಪಾರವಾದ ಪ್ರಾಣಹಾನಿ, ಉತ್ಪಾದನಾ ಸಾಮರ್ಥ್ಯ ಹಾಗೂ ನಗರಗಳು ನಾಶವಾದುದು ಎಂದು ಪಿಕೇಟಿ ವಿವರಿಸುತ್ತಾರೆ. ಕಳೆದ ಕೆಲವು ದಶಕಗಳಲ್ಲಿ, ಅದರಲ್ಲೂ ಜಾಗತೀಕರಣದ ಪ್ರಕ್ರಿಯೆಗಳು ಪ್ರಾರಂಭವಾದ ಮೇಲೆ, ಸಂಪತ್ತಿನ ಕೇಂದ್ರೀಕರಣ ಪ್ರವೃತ್ತಿ ಮತ್ತೆ ಹೆಚ್ಚುತ್ತಿದೆ ಎಂದೂ ಪಿಕೇಟಿ ವಾದಿಸುತ್ತಾರೆ. ಇಂತಹ ಸಂಪತ್ತಿನ ಕೇಂದ್ರೀಕರಣ ಪ್ರವೃತ್ತಿಗೆ ಭಾರತವೂ ಅಪವಾದವೇನಲ್ಲ ಎನ್ನುವುದನ್ನು ಇಲ್ಲಿ ಉಲ್ಲೇಖಿಸಬೇಕು.
 
ಪಿಕೇಟಿಯವರು ಆಧುನಿಕ ಅರ್ಥವ್ಯವಸ್ಥೆಯ ಇತಿಹಾಸ ಕುರಿತಾದ ಈ ಹೊಳಹನ್ನು ಕೊಟ್ಟು ಸುಮ್ಮನಾಗುತ್ತಿಲ್ಲ. ಅಸಮಾನತೆ ಹೀಗೆ ಬೆಳೆಯುತ್ತಿರುವುದು ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆ ತರುತ್ತದೆ, ಇದನ್ನು ತಡೆಯಲು ಜಾಗತಿಕವಾಗಿ ಸಂಪತ್ತಿನ ಮೇಲೆ ತೆರಿಗೆಯನ್ನು ಹಾಕಬೇಕು ಎನ್ನುವ ವಾದವನ್ನು ಅವರು ಮುಂದಿಡುತ್ತಾರೆ. ಇದಕ್ಕೆ ಪೂರಕವಾಗಿ ಅವರು ಶ್ರೀಮಂತ ವರ್ಗಗಳ ತೆರಿಗೆ ದಾಖಲೆಗಳನ್ನು ಬಳಸಿ ನಡೆಸಿದ ಅಧ್ಯಯನದಿಂದ ತಿಳಿದುಬಂದ ಬಹುಮುಖ್ಯ ಅಂಶವನ್ನು ಒದಗಿಸುತ್ತಾರೆ. ಅದೇನೆಂದರೆ ಅತ್ಯಂತ ಶ್ರೀಮಂತ ವರ್ಗಗಳು ಸಂಪತ್ತನ್ನು ಶೇಖರಣೆ ಮಾಡಿಕೊಳ್ಳುವ ಗತಿ ಇತರರಿಗಿಂತ ಹೆಚ್ಚಾಗಿರುತ್ತದೆ. ಸಾಮಾನ್ಯ ತಿಳಿವಳಿಕೆಯ ಅಂಶ ಎಂದು ಅನ್ನಿಸಬಹುದು. ಆದರೆ ಪಿಕೇಟಿಯವರ ಅಧ್ಯಯನಗಳ ತನಕ ಬಂಡವಾಳಶಾಹಿಯ ಈ ಆಯಾಮಗಳ ಬಗ್ಗೆ ಯಾರೂ ಅಂಕಿಅಂಶಗಳನ್ನು ಆಧರಿಸಿದ ಅಧ್ಯಯನವನ್ನು ಮಾಡಿರಲಿಲ್ಲ. ಫ್ರಾನ್ಸ್ ಮೂಲದ ಪಿಕೇಟಿ ಅರ್ಥಶಾಸ್ತ್ರದ ಮುಖ್ಯಧಾರೆಯಿಂದಲೇ ಬಂದವರು ಮತ್ತು ಸಮಾಜವಾದ ಇಲ್ಲವೇ ಕಮ್ಯುನಿಸಮ್‌ನ ಹಿನ್ನೆಲೆಯವರಲ್ಲ ಎನ್ನುವುದನ್ನು ಇಲ್ಲಿ ಮರೆಯಬಾರದು. 
 
ಆಕ್ಸ್‌ಫ್ಯಾಮ್‌ನ 2017ರ ವರದಿಯಲ್ಲಿಯೂ ಪಿಕೇಟಿಯವರ ಒಳನೋಟಗಳನ್ನು ದೃಢಪಡಿಸುವ ಕೆಲವು ನಿರ್ದಿಷ್ಟ ಅಂಕಿಅಂಶಗಳಿವೆ. ಇದರಲ್ಲಿ ಒಂದನ್ನು ಗಮನಿಸಿ. 1988 ಮತ್ತು 2011ರ ನಡುವೆ ಕೆಳಗಿನ 10% ಜನರ ಆದಾಯ ಕೇವಲ 65 ಡಾಲರುಗಳಷ್ಟು ಹೆಚ್ಚಾದರೆ, ಶ್ರೀಮಂತ 1% ಜನರ ಆದಾಯ 11,800 ಡಾಲರುಗಳಷ್ಟು ಹೆಚ್ಚಾಯಿತು. ಅಂದರೆ ಎರಡನೆಯ ವರ್ಗ ಮೊದಲ ವರ್ಗಕ್ಕಿಂತ 182 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿತು. ಹೀಗೆ ಸಂಪತ್ತಿನ ಅಸಮಾನ ಹಂಚಿಕೆಯಾಗುತ್ತಿದೆ ಎನ್ನುವುದನ್ನು ಎಲ್ಲ ಸೈದ್ಧಾಂತಿಕ ಹಿನ್ನೆಲೆಯ ಅರ್ಥಶಾಸ್ತ್ರಜ್ಞರೂ ಒಪ್ಪುತ್ತಾರೆ. 
 
ಆದರೆ ಇಂತಹ ಅಸಮಾನತೆಯ ಅಪಾಯಗಳೇನು ಮತ್ತು ಬಡತನ ನಿವಾರಣೆಯ ದಾರಿಗಳು ಯಾವುವು ಎನ್ನುವುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಆರ್ಥಿಕ ಅಸಮಾನತೆಯ ಬಗ್ಗೆ ವ್ಯಾಕುಲಿತವಾಗಿರುವ ಆಕ್ಸ್‌ಫ್ಯಾಮ್‌ನಂತಹ ಸಂಸ್ಥೆಗಳು ಸಂಪತ್ತಿನ ಕೇಂದ್ರೀಕರಣದಿಂದ ಬಡತನ ಹೆಚ್ಚುತ್ತಿದೆ, ಹಾಗಾಗಿ ಬಡತನ ನಿವಾರಣೆಯಾಗಬೇಕಾದರೆ ನಮ್ಮ ಆರ್ಥಿಕ ವ್ಯವಸ್ಥೆಯನ್ನು ಬದಲಿಸಬೇಕು ಮತ್ತು ಸಂಪತ್ತಿನ ಮರುಹಂಚಿಕೆಯಾಗಬೇಕೆಂದು ವಾದಿಸುತ್ತವೆ.  ಇದಕ್ಕೆ ಆದಾಯ ತೆರಿಗೆಯ ದರವನ್ನು ಹೆಚ್ಚಿಸುವುದೂ ಅನಿವಾರ್ಯವಾಗುತ್ತದೆ. ಆಕ್ಸ್‌ಫ್ಯಾಮ್‌ನ ವರದಿಯನ್ನು ಟೀಕಿಸುವ ಹಲವು ಬಲಪಂಥೀಯ ಚಿಂತಕರ ಚಾವಡಿಗಳ ಪ್ರಕಾರ, ಬಡತನ ನಿವಾರಣೆಗೆ ಇರುವ ಮುಖ್ಯ ಪರಿಹಾರವೆಂದರೆ ಮತ್ತಷ್ಟು ಸಂಪತ್ತಿನ ಸೃಷ್ಟಿ. ಇದನ್ನು ಸಾಧಿಸಬೇಕೆಂದರೆ ಸಂಪತ್ತನ್ನು ಸೃಷ್ಟಿಸುವ ಉದ್ಯಮಿಗಳಿಗೆ, ಬಂಡವಾಳ ಹೂಡುವ ಶ್ರೀಮಂತ ವರ್ಗಗಳ ಮೇಲೆ ಹೆಚ್ಚಿನ ತೆರಿಗೆಯ ಭಾರ ಹಾಕಬಾರದೆಂದು ಇಂತಹ ಚಿಂತಕರ ಚಾವಡಿಗಳು ವಾದಿಸುತ್ತವೆ. ಇವುಗಳ ಪ್ರಕಾರ ಮಾರುಕಟ್ಟೆಗಳನ್ನು ಮುಕ್ತಗೊಳಿಸುವುದು ಮತ್ತು ನಿಯಂತ್ರಕ ನಿಯಮಗಳನ್ನು ತೆಗೆದುಹಾಕುವುದರ ಮೂಲಕ ಆಗುವ ಆರ್ಥಿಕ ಪ್ರಗತಿ ಬಡತನವನ್ನು ಕಡಿಮೆ ಮಾಡುತ್ತದೆ. ಇದರ ಮೂಲಕ ಅಸಮಾನತೆ ಹೆಚ್ಚುತ್ತ ಬಂದರೂ ಬಲಪಂಥೀಯರು ಅದರ ಬಗ್ಗೆ ವ್ಯಾಕುಲಿತರಾಗುವುದಿಲ್ಲ.  ಸಂಪತ್ತಿನ ಸೃಷ್ಟಿ ಹೆಚ್ಚಾದಂತೆ ಬಡವರ ಜೀವನದ ಮಟ್ಟವೂ ಸುಧಾರಿಸುತ್ತದೆ ಎಂದು ಅವರು ವಾದಿಸುತ್ತಾರೆ. ಈ ವಾದವನ್ನು ಪೋಷಿಸಲು ಬಲಪಂಥೀಯ ಚಿಂತಕರು ಕೆಲವು ಬಲವಾದ ಪುರಾವೆಗಳನ್ನು ಒದಗಿಸುತ್ತಾರೆ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಹಾಗಾಗಿ ನಾವು ಮಾಡುವ ಆಯ್ಕೆಗಳು ನಮಗೆ ಯಾವ ಬಗೆಯ ವ್ಯವಸ್ಥೆ ಬೇಕೆನ್ನುವ ಸೈದ್ಧಾಂತಿಕ ನಿಲುವುಗಳಿಂದಲೇ ಸ್ಫೂರ್ತಿ ಪಡೆದಿರುತ್ತವೆ ಎನ್ನುವುದು  ಸತ್ಯವೇ.
 
68ನೆಯ ಗಣರಾಜ್ಯೋತ್ಸವದಂದು ಈ ಚರ್ಚೆಯನ್ನು ಮತ್ತೆ ಪ್ರಸ್ತಾಪಿಸಲು ಎರಡು ಕಾರಣಗಳಿವೆ. ಮೊದಲನೆಯದಾಗಿ, ಆಕ್ಸ್‌ಫ್ಯಾಮ್ ವರದಿಯಲ್ಲಿ ಗುರುತಿಸಿರುವಂತೆ ಜಗತ್ತಿನ ಕೆಳಗಿನ 50% ಜನರ ಪೈಕಿ ನಾಲ್ಕನೆಯ ಒಂದು ಭಾಗದವರು (ನಿರ್ದಿಷ್ಟವಾಗಿ ಹೇಳುವುದಾದರೆ ಶೇ 27ರಷ್ಟು) ಭಾರತದಲ್ಲಿಯೇ ವಾಸಿಸುತ್ತಾರೆ. ಅಂದರೆ ಸುಮಾರು 97 ಕೋಟಿ ಭಾರತೀಯರು ಈ ವರ್ಗಕ್ಕೆ ಸೇರಿದವರು. ಇದಕ್ಕೆ ಪ್ರತಿಯಾಗಿ ನಮಗಿಂತ ಹೆಚ್ಚು ಜನಸಂಖ್ಯೆಯಿರುವ ಚೀನಾದಲ್ಲಿ 54 ಕೋಟಿ ಜನರು ಈ ವರ್ಗಕ್ಕೆ ಸೇರಿದವರು. ಅಂದರೆ ನಮಗಿಂತ ಗಣನೀಯ ಪ್ರಮಾಣದಲ್ಲಿ ಚೀನಾ  ದೇಶವು ತನ್ನ ಜನರನ್ನು ಜಗತ್ತಿನ ಕೆಳಗಿನ 50% ಗುಂಪಿನಿಂದ ಮೇಲೆ ತರುವಲ್ಲಿ ಯಶಸ್ಸನ್ನು ಕಂಡಿದೆ. ಹಾಗಾಗಿ ಬಡತನ ನಿವಾರಣೆಗೆ ನಾವೇನು ಮಾಡಬೇಕು ಎನ್ನುವುದರ ಬಗ್ಗೆ ಗಂಭೀರ ಚರ್ಚೆ ಕೈಗೊಳ್ಳಬೇಕಾದ ಅಗತ್ಯವಿದೆ. 
 
ಎರಡನೆಯದಾಗಿ, ಬಡತನ ನಿವಾರಣೆಯ ಪ್ರಶ್ನೆಗಿಂತಲೂ ಮಿಗಿಲಾದ, ಗಣರಾಜ್ಯ ವ್ಯವಸ್ಥೆಯೊಂದಕ್ಕಿರುವ ತಾತ್ವಿಕ ಆಶಯವನ್ನು ನಾವು ಇಂದು ಮರೆಯಬಾರದು. ಅದೇನೆಂದರೆ ದೇಶದ ಎಲ್ಲ ಪ್ರಜೆಗಳನ್ನೂ ಸಮಾನರನ್ನಾಗಿ ಪರಿಗಣಿಸಿ, ನಡೆಸಿಕೊಳ್ಳಬೇಕು ಎನ್ನುವ ಆಶಯ. ಅಂದರೆ ಗಣರಾಜ್ಯ ವ್ಯವಸ್ಥೆಯ ಮೂಲ ಅಡಿಪಾಯವೆಂದರೆ ಸಮಾನತೆಯೇ. ಸ್ವಾತಂತ್ರ್ಯವನ್ನು ಪಡೆದುದಕ್ಕಿಂತಲೂ ಎಲ್ಲ ಭಾರತೀಯರೂ ಸಮಾನರು ಎನ್ನುವ ಆಶಯವನ್ನು ಹೊಂದಿರುವ ಸಂವಿಧಾನವನ್ನು ರಚಿಸಿಕೊಂಡು, ಭಾರತದ ಗಣರಾಜ್ಯವನ್ನು ಸ್ಥಾಪಿಸಿದ್ದು ಹಾಗೂ ಅದನ್ನು ಕಳೆದ ಏಳು ದಶಕಗಳಲ್ಲಿ ಉಳಿಸಿಕೊಂಡು ಬಂದಿರುವುದು ನಮ್ಮ ಅತ್ಯಂತ ದೊಡ್ಡ ಸಾಧನೆಯೆಂದರೆ ತಪ್ಪಾಗಲಾರದು. ಆಚರಣೆಯಲ್ಲಿ ಸಮಾನತೆಯನ್ನು ಸಂಪೂರ್ಣವಾಗಿ ಸಾಧಿಸುತ್ತೇವೆ ಎಂದು ಹೇಳುವ ಹುಂಬತನ ನಮಗಿರದಿದ್ದರೂ ಈಗ ಬೆಳೆಯುತ್ತಿರುವ ರೀತಿಯ ಅಸಮಾನತೆ ಒಪ್ಪಲು ಸಾಧ್ಯವಿಲ್ಲ. ಹಾಗಾಗಿ ಆರ್ಥಿಕ ಅಭಿವೃದ್ಧಿ ಮತ್ತು ಬಡತನ ನಿವಾರಣೆಯ ಜೊತೆಗೆ ಹೆಚ್ಚುತ್ತಿರುವ ಅಸಮಾನತೆ ತೊಡೆಯಲು ನಾವು ಮಾಡಬೇಕಿರುವುದಾದರೂ ಏನು ಎನ್ನುವುದು ನಮ್ಮನ್ನು ಕಾಡಬೇಕಿರುವ ಬಹುದೊಡ್ಡ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT