ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರೇ, ಕನಸು ಕಂಡದ್ದು ಸಾಕು!

Last Updated 27 ಸೆಪ್ಟೆಂಬರ್ 2017, 17:10 IST
ಅಕ್ಷರ ಗಾತ್ರ

ಏಳಿ, ಮುಖಕ್ಕೆ ನೀರೆರಚಿಕೊಳ್ಳಿ. ಜಾಹೀರಾತುಗಳು ವಾಸ್ತವವಲ್ಲ. ಭಾರೀ ಬೆಲೆ ತೆರುತ್ತಿದ್ದೀರಿ ನೀವು. ಕಣ್ಬಿಟ್ಟು ನೋಡಿ. ಕೊಂಡದ್ದೆಲ್ಲ ಕಸವಾಗಿ ಅಮರಿಕೊಂಡಿದೆ ನಿಮ್ಮ ಸುತ್ತಮುತ್ತ.

ಮಗು, ಮೊಬೈಲಿನಲ್ಲಿ ಅಡಗಿ ಕುಳಿತಿದೆ. ಪೋಲಿತನದ ಆಟ ಆಡುತ್ತಿದೆ. ಮಗಳು, ಶಾಲೆ ಮರೆತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾಳೆ. ಶ್ರೀಮತಿಯವರು ದುಡಿದು ದಣಿದಿದ್ದಾರೆ. ನಿಮಗೋ ದೂಳಿನ ದಮ್ಮಲು.

ನಿಮ್ಮ ಸುತ್ತ ಕಾಂಕ್ರೀಟಿನ ಕಾಡು ಬೆಳೆದಿದೆ. ಕುಡಿಕೆ ಹಣ ಕೂಡಿಸಿ ಕಟ್ಟಿಸಿದ ಗೂಡು ಕರ್ಕಶದ ಬೀಡಾಗಿದೆ. ಉಸಿರು ಕಟ್ಟಿದಾಗೊಮ್ಮೆ ಆಸ್ಪತ್ರೆಗೆ ಹೋದರೆ, ಆಮ್ಲಜನಕ ನೀಡಿ ಆ್ಯಂಟಿಬಯೊಟಿಕ್ ನೀಡಿ ಸಾಯಲಿಕ್ಕೂ ಬಿಡದೆ ಬದುಕಲಿಕ್ಕೂ ಕೊಡದೆ ಲಾಭ ಮಾಡುತ್ತವೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು. ಜೊತೆಗೆ ರೋಗಾಣುಗಳು. ಮೊದಲು ಕೇವಲ ಜ್ವರ ಬರುತ್ತಿತ್ತು ನಿಮಗೆ. ಈಗ ಒಂದು ಕೊಂಡರೆ ಮತ್ತೆರಡು ಫ್ರೀ ಎಂಬಂತೆ, ಜ್ವರದೊಟ್ಟಿಗೆ ಸಂಧಿವಾತವೂ ಬರುತ್ತಿದೆ ಪದೇ ಪದೇ.

ಆದರೆ, ನಿಮ್ಮ ನಿಜವಾದ ಕಾಯಿಲೆ ಇದಾವುದೂ ಅಲ್ಲ. ನಿಮ್ಮ ಜಠರ, ಯಕೃತ್ತು, ಹೃದಯ ಯಾವುದನ್ನೂ ಹಿಡಿದಿಲ್ಲ ನಿಜವಾದ ಕಾಯಿಲೆ. ಅದು ಹಿಡಿದಿರುವುದು ನಿಮ್ಮ ಮನಸ್ಸನ್ನು. ಮಾನಸಿಕ ಕಾಯಿಲೆ ಅದು. ಆಧುನಿಕವಾದದ್ದು. ಅದನ್ನು ‘ಕೊಳ್ಳುಬಾಕತೆ’ ಎಂದು ಕರೆಯುತ್ತಾರೆ.

ಈ ಕಾಯಿಲೆಯ ಲಕ್ಷಣ ಸುಮಾರಾಗಿ ಹೀಗಿರುತ್ತದೆ. ಮೂರೂ ಹೊತ್ತು ಕೈ ಕಡಿಯುತ್ತಿರುತ್ತದೆ; ಏನಾದರೂ ಕೊಳ್ಳಬೇಕು, ಏನಾದರೂ ಕೊಳ್ಳಬೇಕು ಎಂದು ಮನಸ್ಸು ತುಡಿಯುತ್ತಿರುತ್ತದೆ. ಕಂಡ ಕಂಡದ್ದನ್ನೆಲ್ಲ ಕೊಂಡು ಕೊಂಡು, ಕೊಂಡದ್ದರ ಆಕರ್ಷಣೆ ಕೊಂಡಷ್ಟೇ ವೇಗವಾಗಿ ಕಳೆದುಕೊಂಡು, ಹಳತಾಗುತ್ತಿರುತ್ತದೆ, ದುಬಾರಿ ಬೆಲೆ ತೆತ್ತು ಕೊಂಡದ್ದೆಲ್ಲ. ಕೊಳ್ಳುವುದೇ ಧ್ಯಾನ, ಕೊಳ್ಳುವುದೇ ಯೋಗ, ಕೊಳ್ಳುವುದೇ ಧರ್ಮ, ಕೊಳ್ಳುವುದೇ ಮನರಂಜನೆ ಎಂಬಂತಾಗಿ ಮನಸ್ಸು ಸುಖಾಸುಮ್ಮನೆ ಉದ್ವಿಗ್ನವಾಗುತ್ತಿರುತ್ತದೆ. ಕೊಳ್ಳುವುದಕ್ಕಾಗಿ ಕಳ್ಳ ದುಡಿಮೆಗೆ ಇಳಿಯತೊಡಗುತ್ತಾರೆ ಕೆಲವರು. ವೇದ ಪ್ರಮಾಣಕ್ಕಿಂತ ಮಿಗಿಲಾದ ಪ್ರಮಾಣ ಜಾಹೀರಾತು ಅನ್ನಿಸುತ್ತಿರುತ್ತಿದೆ ನಿಮಗೆ...

ನಿಮ್ಮ ಈ ಕಾಯಿಲೆಗೆ ರಾಜಕಾರಣಿಗಳು ಕಾರಣರಲ್ಲ, ತಿಳಿಯಿರಿ. ಸಿದ್ದರಾಮಯ್ಯನವರು ಅಥವಾ ನರೇಂದ್ರ ಮೋದಿಯವರೂ ಕಾರಣರಲ್ಲ. ಅಥವಾ ಅವರ ಅದಕ್ಷತೆ, ಅಪ್ರಾಮಾಣಿಕತೆ, ಭ್ರಷ್ಟತೆ ಯಾವುದೂ ಕಾರಣವಲ್ಲ. ನೀವೇ ಕಾರಣರು ನಿಮ್ಮ ಕಾಯಿಲೆಗೆ. ನೀವೇ ‘ಪ್ರಾಮಾಣಿಕವಾಗಿ, ದಕ್ಷವಾಗಿ, ಪ್ರಗತಿಪರವಾಗಿ’ ಪ್ರಯತ್ನಿಸಿ ಅಂಟಿಸಿಕೊಂಡಿರುವ ಭಯಾನಕ ಕಾಯಿಲೆಯಿದು. ರಾಜಕಾರಣಿಗಳು ಕೇವಲ ಸೇವಕರು, ಕನಸುಗಳ ಸೇವಕರು. ನಿಮ್ಮದೇ ಕನಸಿನಲ್ಲಿ ನೀವು ಅವರ ಕೈಹಿಡಿದು ಮಾಡಿಸಿದ್ದೀರಿ, ನ್ಯಾಯ– ಅನ್ಯಾಯ, ಒಳಿತು– ಕೆಡುಕು ಎಲ್ಲವನ್ನೂ. ನಿಮ್ಮ ಕಾಯಿಲೆಯನ್ನು ದೇವರೂ ವಾಸಿ ಮಾಡಲಾರ. ಏಕೆಂದರೆ, ಮಾರುಕಟ್ಟೆಯು ದೇವರ ಮೂರ್ತಿಗಳನ್ನೆಲ್ಲ ಖರೀದಿಸಿ ದುರ್ಬಳಕೆ ಮಾಡಿ ನಿಷ್ಕ್ರಿಯಗೊಳಿಸಿಬಿಟ್ಟಿದೆ.

ಆದರೆ ನಿಮಗೆ ಆಯ್ಕೆಗಳಿವೆ. ನೀವು ಈ ಸಂಗತಿಯನ್ನು ಮರೆತು ಕುಳಿತಿದ್ದೀರಿ. ಸುಳ್ಳು ಜಾಹೀರಾತುಗಳ ನಡುವಿನ ಆಯ್ಕೆಯ ಬಗ್ಗೆ ಹೇಳುತ್ತಿಲ್ಲ ನಾನು. ಜಾಹೀರಾತೇ ಮಾಡದ ಜಗತ್ತಿನ ಆಯ್ಕೆಯಿದೆ ನಿಮಗೆ.

ಆಯ್ಕೆ ಸರಳವಾದದ್ದು. ಮನುಷ್ಯರೇ ಬೆಳೆದದ್ದನ್ನ ಉಣ್ಣುವುದು, ಮನುಷ್ಯರೇ ನೇಯ್ದದ್ದನ್ನ ಉಡುವುದು, ಕಾಲ್ನಡಿಗೆಯಲ್ಲಿ ಪಯಣಿಸುವುದು, ಕೈಕೆಲಸ ಮಾಡುವುದು ಇತ್ಯಾದಿ. ದೇವರಿಗೆ ನಮಿಸುವವರು ನೀವಾಗಿದ್ದರೆ ಬಂಗಾರದ ಮೂರ್ತಿಗಳಿಗೆ ಮರೆತೂ ಸಹ ನಮಿಸದಿರಿ. ಶ್ರಮದ ದೇವರಿಗೆ ನಮಿಸಿರಿ, ಶ್ರಮದ ದಿಂಡರಿಗೆ ನಮಿಸಿರಿ. ಹಾಗೂ ಯಂತ್ರ ಕಳಚಿರಿ. ಆದರೆ ಕ್ರಮೇಣವಾಗಿ ಕಳಚಿರಿ. ಧಡಾರನೆ ಕೈಬಿಡಬೇಡಿ. ಯಂತ್ರಗಳೊಟ್ಟಿಗೆ ನೀವೂ ಬಿದ್ದು ಬಿಡುತ್ತೀರಿ.

ರೋಗನಿವಾರಣೆ ಹಾದಿಯಲ್ಲಿ ನಿಜವಾದ ತೊಡಕಿರುವುದು ನಿಮ್ಮ ವ್ಯಸನದಲ್ಲಿ. ವ್ಯಸನಮುಕ್ತಿ ಸುಲಭವಲ್ಲ. ಯಂತ್ರಗಳೊಟ್ಟಿಗೆ ಹರಟುವುದು, ಯಂತ್ರಗಳೊಟ್ಟಿಗೆ ರಮಿಸುವುದು ನಿಲ್ಲಿಸಬೇಕು ನೀವು. ಯಂತ್ರಸಂಭೋಗ, ಯಂತ್ರವ್ಯಾಯಾಮ, ಯಂತ್ರಾರ್ಥ ಯಾಂತ್ರಿಕಧರ್ಮ, ಯಾಂತ್ರಿಕಸಂಗೀತ, ಯಾಂತ್ರಿಕಸಾಹಿತ್ಯ ನಿಲ್ಲಿಸಬೇಕು ನೀವು. ಸಹಜಸಂತಸ, ಸಹಜವ್ಯಾಯಾಮ, ಸಹಜಧರ್ಮ, ಸಹಜಸಂಗೀತಗಳನ್ನು ಮತ್ತೆ ಅಭ್ಯಾಸ ಮಾಡಬೇಕು.

ಜೊತೆಗೆ ಇನ್ನೊಂದು ಸಮಸ್ಯೆಯಿದೆ. ಶ್ರಮದ ಉತ್ಪನ್ನಗಳು ಕೊಂಚ ದುಬಾರಿ. ಪ್ರತಿಕೃತಿಗಳ ಈ ದಿನಮಾನಗಳಲ್ಲಿ ಮೂಲಕೃತಿ ಸಹಜವಾಗಿಯೇ ದುಬಾರಿ. ನೈಸರ್ಗಿಕ ಆಹಾರ ದುಬಾರಿ, ನೈಸರ್ಗಿಕ ವಸ್ತ್ರ ದುಬಾರಿ, ನೈಸರ್ಗಿಕ ಗಾಳಿ, ನೀರು ನೆಲ, ಗಿಡಮರ, ಪ್ರಾಣಿಪಕ್ಷಿ... ಎಲ್ಲವೂ ದುಬಾರಿ. ಆದರೂ ಕೊಳ್ಳಿ. ಗ್ರಾಹಕರು ಹೆಚ್ಚಿದಂತೆ ಮೂಲಕೃತಿಗಳು ಸೋವಿಯಾಗಬಲ್ಲವು. ಚಿಂತೆ ಮಾಡದಿರಿ. ‘ಬಡವರಿಗೆ ಸಹಾಯ ಮಾಡುತ್ತೇನೆ’ ಎಂದು ಭಾವಿಸಿಕೊಂಡು ಶ್ರಮದ ಉತ್ಪನ್ನಗಳನ್ನು ಕೊಳ್ಳದಿರಿ. ಅಹಂಕಾರವೆಂಬ ರೋಗ ಬಡಿದೀತು ನಿಮಗೆ. ಶ್ರಮದ ಉತ್ಪನ್ನಗಳನ್ನು ‘ಔಷಧಿಗಳು’ ಎಂಬ ವಿನೀತ ಭಾವದಿಂದ ಕೊಂಡುಕೊಳ್ಳಿ.

ಇನ್ನು, ಹಣ ಎನ್ನುವುದು ನಗರಗಳ ಕೊಳಚೆ ನೀರಿನಂತೆ. ರೋಗಾಣುಗಳು ತುಂಬಿರುತ್ತವೆ ಹಣದ ಥೈಲಿಯ ತುಂಬ. ಸಂಗ್ರಹಿಸಿ ಇಡದಿರಿ. ಗ್ರಾಮಗಳತ್ತ ಹರಿಬಿಡಿರಿ ಹಣವನ್ನು. ಗ್ರಾಮಸ್ಥರಿಗೆ ತಿಳಿದಿದೆ ಕೊಳಚೆ ನೀರನ್ನು ಶುದ್ಧೀಕರಿಸಿ ಬಳಸುವ ವಿಧಾನ. ತರಕಾರಿ ಬೆಳೆಯಬಲ್ಲರು ಕೊಳಚೆ ನೀರೊಳಗೆ ಅವರು. ಆದರೆ ತಪ್ಪಿಯೂ ಕೂಡ ಗ್ರಾಮಸ್ಥರ ಕೈಗಳಿಗೆ ಯಂತ್ರ ಕೊಡದಿರಿ. ಯಂತ್ರವು ಹಣಕ್ಕಿಂತ ಹೆಚ್ಚು ಸಾಂಕ್ರಾಮಿಕವಾದದ್ದು, ಹೆಚ್ಚು ಅಪಾಯಕಾರಿಯಾದದ್ದು.

ಗ್ರಾಮಗಳಿಗೂ ಹರಡತೊಡಗಿದೆ ಕೊಳ್ಳುಬಾಕತೆಯ ರೋಗ. ಸರ್ಕಾರಗಳನ್ನು ನಿದ್ರೆಯಿಂದ ಎಬ್ಬಿಸಿರಿ. ನೀವು ಹೇಳಿದರೆ ಕೇಳುತ್ತವೆ ಸರ್ಕಾರಗಳು. ಸರಿದಾರಿಗೆ ತನ್ನಿ. ಉದಾಹರಣೆಗೆ ಹೇಳುತ್ತೇನೆ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆ (ಜಿಎಸ್‌ಟಿ) ಎಂಬ ಅತಿರೇಕದ ತೆರಿಗೆಯೊಂದನ್ನು ವಿಧಿಸಿವೆ ಸರ್ಕಾರಗಳು ನಿಮ್ಮ ಮೇಲೆ. ಈ ತೆರಿಗೆಯು ಕೈಉತ್ಪನ್ನಗಳನ್ನು ಮತ್ತಷ್ಟು ದುಬಾರಿಯಾಗಿಸಿದೆ. ಕೊಳ್ಳುಬಾಕತೆಯ ರೋಗ ಹರಡುವ ಯಂತ್ರೋತ್ಪನ್ನಗಳನ್ನು ಆಕರ್ಷಕವಾಗಿಸಿದೆ. ಸಿಗರೇಟು, ವಿಸ್ಕಿ, ಕಾರು ಇತ್ಯಾದಿ ಮೋಜುಗಳನ್ನು ಆಕರ್ಷಕವಾಗಿಸಿದೆ. ಇಂಗ್ಲಿಷರು ವಿಧಿಸಿದ್ದರು ಕೈಉತ್ಪನ್ನಗಳ ಮೇಲೆ ವಿಪರೀತ ತೆರಿಗೆ ಎಂಬ ಮರಣದಂಡನೆಯನ್ನು. ಈಗ ದೇಶಭಕ್ತರು ವಿಧಿಸಿದ್ದಾರೆ ಗ್ರಾಮೀಣ ಉತ್ಪನ್ನಗಳ ಮೇಲೆ ಅದೇ ಮರಣದಂಡನೆಯನ್ನು.

ಎಲ್ಲಾದರೂ ಉಂಟೇ? ಸಿಗರೇಟು, ವಿಸ್ಕಿ, ಕಾರು, ಸೆಲ್ಫಿ, ಪೋರ್ನೊಗ್ರಫಿಗಳಿಗೆ ವಿಧಿಸಿದ ತೆರಿಗೆಯನ್ನೇ ಖಾದಿವಸ್ತ್ರ, ನೈಸರ್ಗಿಕ ಆಹಾರ, ಕುರುಬನ ಕಂಬಳಿ ಇತ್ಯಾದಿಗಳಿಗೆ ಜಡಿದರೆ ನ್ಯಾಯಸಮ್ಮತವೇ? ಔಷಧವನ್ನೂ ವಿಷವನ್ನೂ ಸಮಾನವಾಗಿ ಕಾಣಲು ಬಂದೀತೆ? ನಿಸರ್ಗವನ್ನೂ ಯಂತ್ರನಾಗರಿಕತೆಯನ್ನೂ ಸಮಾನವಾಗಿ ಕಾಣಲು ಬಂದೀತೆ? ಕೈಉತ್ಪನ್ನಗಳನ್ನು ಶೂನ್ಯಕರದ ಅಡಿ ತರುವಂತೆ, ಕೊಳ್ಳುಬಾಕತೆಯ ರೋಗ ಹರಡುವ ಪದಾರ್ಥಗಳಿಗೆ ‘ಅಪರಾಧಿ’ ಅಥವಾ ‘ತಪ್ಪಿನ ಕರ’ ವಿಧಿಸುವಂತೆ ಘಟ್ಟಿಸಿ ಹೇಳಿರಿ ನೀವು.

ಸರ್ಕಾರಗಳು ಇಷ್ಟೊಂದು ತಿಳಿಗೇಡಿ ಹೇಗಾದವು ಗೊತ್ತೆ? ನಿಮ್ಮನ್ನು ತೃಪ್ತಿಪಡಿಸುವ ಧಾವಂತ ಅವುಗಳಿಗೆ. ನಿಮ್ಮ ಇಂಗ್ಲಿಷು ಉಡುಗೆ ಹಾಗೂ ಫ್ಯಾಷನ್ನಿನ ನಡಿಗೆಗಳಿಗೆ ಮರುಳಾಗಿವೆ ಸರ್ಕಾರಗಳು. ನೀವು ಬಯಸುತ್ತೀರಿ ನಿಮ್ಮದೇ ಕಾಯಿಲೆಯನ್ನು ಎಂದು ತಿಳಿದಿವೆ ಬುದ್ಧಿಗೇಡಿ ಸರ್ಕಾರಗಳು.

ನಿಮ್ಮಲ್ಲೂ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಉದಾಹರಣೆಗೆ, ದುಡ್ಡಿನ ದಾನ ಮಾಡಿದರೆ ರೋಗ ನಿವಾರಣೆಯಾಗುತ್ತದೆ ಎಂದು ತಿಳಿದಿದ್ದೀರಿ ನೀವು. ಹಾಗಾಗಿ ವಿಪರೀತ ದುಡ್ಡಿನದಾನ, ಯಂತ್ರಗಳದಾನ ಮಾಡತೊಡಗಿದ್ದೀರಿ. ಆದರೆ, ಇವುಗಳೇ ರೋಗಾಣುಗಳು. ಒಳಿತು ಮಾಡುವೆನೆಂದು ತಿಳಿದು ಕೆಡುಕು ಮಾಡುತ್ತಿದ್ದೀರಿ ನೀವು. ಮಾಡುವುದಿದ್ದರೆ ಹಣರಹಿತ ಸೇವೆ ಮಾಡಿ. ಆಗ ರೋಗ ನಿವಾರಣೆಯಾದೀತು.

ನಿಮಗೆ ತಿಳಿದಿದೆಯೇನು? ಕೊಳ್ಳುಬಾಕತೆಯ ರೋಗ ಬಡವರಲ್ಲಿಯೂ ಬಂದಿದೆ. ಹಣವಿಲ್ಲದ ಬಡವರು ಹಾಗೂ ಯಂತ್ರಗಳಿಲ್ಲದ ಗ್ರಾಮೀಣರು ಸಹ ಕೊಳ್ಳುಬಾಕತೆಯ ರೋಗಕ್ಕೆ ಬಲಿಯಾಗತೊಡಗಿದ್ದಾರೆ. ಇವರಲ್ಲಿ ರೋಗಲಕ್ಷಣವು ಕೊಂಚ ಭಿನ್ನವಾಗಿರುತ್ತದೆ. ಕೊಳ್ಳಲಾರದವರನ್ನು ತಾಕಿದಾಗ ಕೊಳ್ಳುಬಾಕತೆ ಹತಾಶೆಯ ರೂಪು ಪಡೆಯುತ್ತದೆ. ನಗರಗಳ ಕೊಳೆಗೇರಿಗಳಲ್ಲಿ, ಗ್ರಾಮೀಣ ಪರಿಸರಗಳಲ್ಲಿ ಕಾಣುತ್ತಿರುವ ಹಳೆಯ ರೋಗದ ಹೊಸಪ್ರಭೇದವಿದು ‘ಹತಾಶೆ’.

ಇದರ ರೋಗಲಕ್ಷಣ ಸುಮಾರಾಗಿ ಹೀಗಿರುತ್ತದೆ. ಶಾಂತ ಪ್ರಕೃತಿಗೆ ಹೆಸರಾದವರೂ ‘ಕೊಳ್ಳಲಾರದ ಹತಾಶೆಯ ರೋಗ’ ತಗುಲಿದ್ದೇ ತಡ ವ್ಯಗ್ರರಾಗುತ್ತಾರೆ. ಅಸ್ಥಿರತೆ, ಆತ್ಮಹತ್ಯೆ, ಖಿನ್ನತೆ, ಹಿಂಸಾವೃತ್ತಿ, ಕಳ್ಳತನ, ಕುಡಿತ, ವ್ಯಭಿಚಾರ ಇತ್ಯಾದಿ ಲಕ್ಷಣಗಳು ಅವರಲ್ಲಿ ಕಾಣಿಸಿಕೊಳ್ಳತೊಡಗುತ್ತವೆ. ಒಟ್ಟಾಗಿ ಇಲ್ಲವೇ ಬಿಡಿಬಿಡಿಯಾಗಿ ಕಾಣಿಸಿಕೊಳ್ಳುತ್ತವೆ ಈ ರೋಗಲಕ್ಷಣಗಳು.

ಕೆಲವರು ಲಾಂಗು, ಮಚ್ಚು, ಪಿಸ್ತೂಲು ಇತ್ಯಾದಿ ಆಯುಧಗಳನ್ನು ಹಿಡಿದರೆ; ಕೆಲವರು ಕೆಟ್ಟ ಭಾಷೆ ಬಳಸುತ್ತಾರೆ. ಕೆಲವರು ಹೆಂಗಸರ ಮಾಂಗಲ್ಯಕ್ಕೆ ಹಾಗೂ ಸೀರೆಯ ಒಡಲಿಗೆ ಕೈಹಾಕುತ್ತಾರೆ. ಕೆಲವರು ಮೌನಿಗಳಾಗುತ್ತಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸರಳವಾಗಿ ಹೇಳಬೇಕೆಂದರೆ ರೋಗಪೀಡಿತರು, ‘ಕನ್ನಡ ಸಿನಿಮಾಗಳ ನಾಯಕರು ತೆರೆಯ ಮೇಲೆ ಆಡುವಂತೆ’ ನಿಜದ ಬದುಕಿನಲ್ಲಿ ಆಡತೊಡಗುತ್ತಾರೆ. ರೋಗವನ್ನು ಹಾಗೆಲ್ಲ ಸಂಭ್ರಮಿಸಬೇಡಿ ಎಂದು ಸಿನಿಮಾ ನಾಯಕರಿಗೆ ಹೇಳಿ ನೀವು. ಮನರಂಜನೆಯ ಮಾಧ್ಯಮಗಳಿಗೂ ನೀವು ಗ್ರಾಹಕರು ಹೌದು ತಾನೆ?

ಸರ್ಕಾರಗಳಿಗೂ ಅಂಟಿಸಿದ್ದೀರಿ ನಿಮ್ಮ ಕಾಯಿಲೆಯನ್ನು ನೀವು. ಅವೂ ಸಹ, ಆಡಳಿತ ಮಾಡುವುದನ್ನು ಮರೆತು ದಾನಧರ್ಮ ಮಾಡುತ್ತಿವೆ. ಅನ್ನಭಾಗ್ಯ, ಕ್ಷೀರಭಾಗ್ಯ ಇತ್ಯಾದಿ ಹೆಸರುಗಳುಳ್ಳ ಧಾರ್ಮಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಗ್ರಾಮೀಣ ಉತ್ಪಾದಕರಿಗೆ ಉತ್ಪಾದಕ ಉದ್ಯೋಗ ಹಂಚುವ ಬದಲು ಭಿಕ್ಷೆ ಹಂಚತೊಡಗಿವೆ. ಇತ್ತೀಚೆಗೆ ಕರುನಾಡ ನಾಡದೇವಿಯ ಗುಡಿಯ ಸುತ್ತ ಸರ್ಕಾರಿ ಭಿಕ್ಷುಕರು ನೆರೆದಿರುತ್ತಾರೆ ಮೂರೂ ಹೊತ್ತು.

ಕಲಿಗಾಲವೆಂದು ಕರೆದರು ಕವಿ ಕುವೆಂಪು ಈ ಕಾಲವನ್ನು. ಕಲಿಗಾಲದ ಯುಗಪುರುಷ ಕಲ್ಕಿಯನ್ನು ಅವರು ವರ್ಣಿಸಿದ್ದು ಹೀಗೆ:
ಅಸ್ಥಿಪಂಜರದಶ್ವವನೇರಿ
ಬೆಳ್ಳಗೆ ಚಿಲಿಯುವ ದಾಡೆಯ ತೋರಿ
ಅಸ್ಥಿಪಂಜರದಾಳವನು
ಮೂರ್ತ ಸ್ವರೂಪಿ ಅದಾರವನು?
ಎಂದು ವರ್ಣಿಸಿದರು ಮೃತ್ಯುವಾಗಿ ಬಂದೆರಗಲಿರುವ ದೇವರನ್ನು. ಕಲಿ ಹಸಿದಿರುತ್ತಾನೆ. ಕೊಳ್ಳುಬಾಕರು, ಭಿಕ್ಷೆಬಾಕರು, ರೋಗಗ್ರಸ್ತರು ಎಂಬ ಯಾವ ವ್ಯತ್ಯಾಸವನ್ನೂ ಎಣಿಸದೆ ಸಿಕ್ಕ ಸಿಕ್ಕ ಮಾನವರನ್ನೆಲ್ಲಾ ಹಸಿ ಹಸಿಯಾಗಿ ಭುಜಿಸುವವನಿದ್ದಾನೆ, ದೇವರು.

ನಾನೂ ಸಹ ಹಳೆಯ ರೋಗಿ. ಇತ್ತೀಚೆಗೆ ನಾಟಿ ವೈದ್ಯ ಮಾಡಿಸಿಕೊಂಡಿದ್ದೇನೆ. ಕೊಂಚ ವಾಸಿ. ಹಾಗಾಗಿ ಇಷ್ಟೆಲ್ಲ ಮಾತನಾಡುತ್ತಿದ್ದೇನೆ. ಹಾಗಾಗಿ ನಂಬಬಹುದು ನೀವು ನನ್ನ ಮಾತುಗಳನ್ನು.

ದೇಶದಲ್ಲಿ ಹೊಸದೊಂದು ನೈತಿಕ ಚಳವಳಿ ಶುರುವಾಗಿದೆ. ಕರನಿರಾಕರಣೆ ಸತ್ಯಾಗ್ರಹ ಎಂದು ಕರೆದಿದ್ದಾರೆ ಈ ಚಳವಳಿಯನ್ನು. ‘ಕೈಉತ್ಪನ್ನಗಳನ್ನು ಕರಮುಕ್ತಗೊಳಿಸಿ’ ಎಂಬ ಬೇಡಿಕೆ ಇಟ್ಟು ಆಗ್ರಹಿಸತೊಡಗಿದ್ದಾರೆ ಪ್ರಜ್ಞಾವಂತ ಗ್ರಾಹಕರು. ನೀವೂ ಸೇರಿ ಚಳವಳಿಯಲ್ಲಿ. ‘ಕೈಉತ್ಪನ್ನಗಳು ಸಾಮಾಜಿಕ ಔಷಧಿಗಳಾದ್ದರಿಂದ ಅವುಗಳನ್ನು ಕರಮುಕ್ತಗೊಳಿಸಿ’ ಎಂದು ಸರ್ಕಾರಗಳಿಗೆ ಕಿವಿಹಿಂಡಿ ಹೇಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT