ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಲೇಸಿಯರ್ ಪರ್ಯಟನೆ

Last Updated 1 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಉತ್ಪ್ರೇಕ್ಷೆಯಲ್ಲ; ಅಲಾಸ್ಕವನ್ನು ಎಷ್ಟು ಬಾರಿ ನೋಡಿದರೂ ಅದರ ಪೂರ್ಣತೆ ನಮ್ಮ ಗ್ರಹಿಕೆಗೆ ದಕ್ಕುವುದು ಕಷ್ಟ. ಕಾರಣ, ಇಲ್ಲಿರುವ ಗ್ಲೇಸಿಯರ್‌ಗಳ ಸಂಖ್ಯೆ ಎಷ್ಟು ಎಂದು ನಿಖರವಾಗಿ ಇಂದಿಗೂ ತಿಳಿದಿಲ್ಲ. ಒಂದು ಅಂದಾಜಿನ ಪ್ರಕಾರ ಅವು ಒಂದು ಲಕ್ಷಕ್ಕೂ ಹೆಚ್ಚಿವೆ! ಅವುಗಳಲ್ಲಿ ಆರು ನೂರಾ ಐವತ್ತಕ್ಕೆ ಮಾತ್ರ ನಾಮಕರಣ ಮಾಡಲಾಗಿದೆ. ನಾಮಕರಣಗೊಂಡವುಗಳನ್ನೆಲ್ಲಾ ನೋಡುವುದು ಕಷ್ಟ. ಅಪಾರ ಸಮಯ, ಹಣ, ಆಸಕ್ತಿ, ಗಟ್ಟಿಕಾಲು ಮತ್ತು ತಾಳ್ಮೆ ಇಟ್ಟುಕೊಂಡವರಿಗೆ ಮಾತ್ರ ಕೆಲವು ಗ್ಲೇಸಿಯರ್‌ಗಳು ದೇವರಂತೆ ದರ್ಶನ ಕೊಡುತ್ತವೆ.

ನನ್ನಂಥ ಸಾಮಾನ್ಯ, ಆದರೆ ಆಸಕ್ತಿ ಉಳ್ಳ ಪ್ರವಾಸಿಗರಿಗಿರುವ ಸರಳವಾದ ಮಾರ್ಗಗಳು ಎಂದರೆ ಸಾರ್ವಜನಿಕ ವಾಹನಗಳಲ್ಲಿ ಹೋಗಿ ಇಳಿದು, ಅನಂತರ ಶಕ್ತ್ಯಾನುಸಾರ ಗ್ಲೇಸಿಯರ್‌ಗಳತ್ತ ನಡೆದು ಹೋಗುವುದು. ಇನ್ನೊಂದು ದಾರಿ ಎಂದರೆ ಕೆಳಗಿಳಿಯದೆ ಹಡಗು ಅಥವಾ ಸಣ್ಣ ದೋಣಿಗಳಲ್ಲಿ ಕುಳಿತು ದೂರದಿಂದ ನೋಡಿ ತೃಪ್ತರಾಗುವುದು. ಮತ್ತೊಂದು ವಿಧಾನ, ವಿಮಾನದಲ್ಲಿ ಕುಳಿತು ಕಿಟಕಿ ಗಾಜಿನ ಮೂಲಕ ಪಕ್ಷಿ ನೋಟವನ್ನು ನೋಡಿ ಪುಳಕಿತರಾಗುವುದು. ಮೂರೂ ಭಿನ್ನ ಅನುಭವಗಳೇ. ನಾನು ಈ ಮೂರು ಬಗೆಯಲ್ಲೂ ಆಸ್ವಾದಿಸಿದ ಅದೃಷ್ಟಶಾಲಿ. ಗ್ಲೇಸಿಯರ್‌ಗಳನ್ನು ಅತ್ಯಂತ ಸನಿಹದಿಂದ ನೋಡುವುದು ಅತ್ಯಂತ ರೋಮಾಂಚಕ.

ನಿಮ್ಮೆದುರೇ ಹಿಮಬಂಡೆಗಳು ದಪದಪನೆ ಕುಸಿದು ಬೀಳುವುದು ಅದ್ಭುತ ಅನುಭವ. ಇದು ಅಪಾಯಕಾರಿ ಮತ್ತು ಅಪರೂಪಕ್ಕೆ ಲಭಿಸುವ ಅನುಭವ ಕೂಡಾ. ನಮ್ಮ ಹಡಗು ಜುನೌನಿಂದ ಆಂಕ್ರೆಜ್‌ವರೆಗೆ ಹೋಗುವವರೆಗೆ ಉದ್ದಕ್ಕೂ ನೂರಾರು ಗ್ಲೇಸಿಯರ್‌ಗಳ ನಿತ್ಯೋತ್ಸವ. ಹೋಗುತ್ತ-ಬರುತ್ತ ಇದು ಸಾವಿರದ ಆರುನೂರ ಎಂಬತ್ತು ನಾಟಿಕಲ್ ಮೈಲುಗಳನ್ನು ಕ್ರಮಿಸುವ, ಎಂಟು ದಿನಗಳ ಪ್ರಯಾಣ. ಇದನ್ನು ಪ್ರಮುಖವಾಗಿ ಗ್ಲೇಸಿಯರ್‌ಗಳ ಪ್ರಯಾಣ ಎಂದೇ ಕರೆಯಬಹುದು. ಈ ದಾರಿಯಲ್ಲಿ ಹೆಜ್ಜೆಗೊಂದರಂತೆ ಸಿಗುವ ಸಣ್ಣ ದೊಡ್ಡ ಗ್ಲೇಸಿಯರ್‌ಗಳೆಂದರೆ ಮೆಂಡೆನ್ ಹಾಲ್, ಗ್ಲೇಸಿಯರ್ ಬೇ, ಲಾಂಪ್ಲಾ, ಮಾರ್ಗರೀ, ಗ್ರ್ಯಾಂಡ್ ಪೆಸಿಫಿಕ್, ಕಾಲೇಜ್ ಫೋರ್ಡ್, ಜಾನ್ ಹಾಪ್‌ಕಿನ್ಸ್, ಯಕುಟಾಟ್ ಬೇ, ರೀಡ್ ಮುಂತಾದವುಗಳು.

ಹಡಗು ಗ್ಲೇಸಿಯರ್‌ಗಳನ್ನು ಸುತ್ತುತ್ತಿದ್ದರೆ ಹಿಮಪರ್ವತಗಳೇ ನಮ್ಮ ಸುತ್ತ ಸುತ್ತುತ್ತಿವೆ ಎನಿಸುತ್ತದೆ. ರೇಂಜರ್ ಅಧಿಕಾರಿ ಎಲ್ಲರ ಪೆದ್ದುತನದ, ಜಾಣತನದ, ಕುತೂಹಲದ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರ ಕೊಡುತ್ತಿದ್ದ. ಹಂಪ್‌ಬ್ಯಾಕ್ ವೇಲ್‌ಗಳು ಗ್ಲೇಸಿಯರ್ ಬೇನಲ್ಲಿ ಬೇಕಾದಷ್ಟು ಕಂಡವು. ಶಿಲಾ ಪದರಗಳ ಕುಸಿತ ಮತ್ತು ಅಧಿಕ ಹಿಮಪಾತದಿಂದ ಗ್ರ್ಯಾಂಡ್ ಪೆಸಿಫಿಕ್ ಗ್ಲೇಸಿಯರ್ ಕೊಳಕಾಗಿತ್ತು. ಮಾರ್ಗರೀ ಚಿಕ್ಕದಾದ ಚೊಕ್ಕದಾದ ಗ್ಲೇಸಿಯರ್. ಮರು ಪ್ರಯಾಣದಲ್ಲಿ ಅವುಗಳ ಸ್ವರೂಪವೇ ಬದಲಾಗಿತ್ತು. ಹೋಗುವಾಗ ಬಹುತೇಕ ಎಳೆಬಿಸಿಲು. ಬರುವಾಗ ಜಿಟಿಜಿಟಿ ಮಳೆ. ಕಲ್ಲುಬಂಡೆಗಳಿರುವ ಬೆಟ್ಟದಂತೆ ಅವು ಸ್ಥಿರವಲ್ಲ. ಕರಗುತ್ತವೆ. ಕುಸಿಯುತ್ತವೆ. ಮತ್ತೆ ಚಿಗುರುತ್ತವೆ.

ಗ್ಲೇಸಿಯರ್‌ಗಳು ಪ್ರವೇಶಕ್ಕೆ ಎಷ್ಟು ದುರ್ಗಮವಾಗಿವೆ ಎಂದರೆ ಅಲಾಸ್ಕದ ರಾಜಧಾನಿ ಜುನೌಗೆ ಹೊರಗಿನಿಂದ ರಸ್ತೆ ಸಂಪರ್ಕವೇ ಇಲ್ಲ. ನೀರಿನ ಮೇಲೆ ಅಥವಾ ಆಕಾಶದ ಮೇಲೆ ಹೋಗಿ ಮುಟ್ಟಬೇಕು. ಗ್ಲೇಸಿಯರ್‌ಗಳು ಹೇಗೆ ರೂಪುಗೊಂಡವು? ಭೂಮಿಯ ಮೇಲಿನ ಅತಿಶೀತದಿಂದ ಉಂಟಾಗುವ ಸ್ನೋ, ಗ್ಲೇಸಿಯರ್‌ನ ಮೂಲಧಾತು. ತಲೆತಲಾಂತರಗಳಿಂದ ಬಿದ್ದ ಸ್ನೋ ಪದರ ಪದರಗಳಾಗಿ ಘನಗೊಳ್ಳುತ್ತಾ ದಪ್ಪ ಚಪ್ಪಡಿಗಳಾಗುತ್ತಾ ಹೋಗುತ್ತದೆ. ಒತ್ತಡವೂ ತೂಕವೂ ಹೆಚ್ಚುತ್ತಾ ಹಿಮಬಂಡೆಗಳು ಪೇರಿಸಲ್ಪಡುತ್ತವೆ. ಬಂಡೆಗಳ ಸಂಘಟನೆಯು ಬೃಹದಾಕಾರವಾಗಿ ಬೆಳೆದು ಬೆಟ್ಟವಾಗುತ್ತವೆ. ಅವುಗಳ ಸಾಂದ್ರತೆಯು ಹೆಚ್ಚಿದ್ದಾಗ ಸಹಜವಾಗಿ ಭೂಮಿಯ ಗುರುತ್ವಾಕರ್ಷಣ ಶಕ್ತಿಯ ಸೆಳೆತಕ್ಕೆ ಕುಸಿಯುತ್ತವೆ.

ಅಂಚಿನಲ್ಲಿ ನದಿ ಅಥವಾ ಕಡಲಿದ್ದರೆ ನೀರಿಗೆ ಅವು ಬೀಳುವ ಪ್ರಕ್ರಿಯೆಯನ್ನು calving ಎನ್ನುತ್ತಾರೆ. ನೀರಲ್ಲಿ ತೇಲುವ ಹಿಮಬಂಡೆಗೆ iceberg ಎನ್ನುತ್ತಾರೆ. ಟೈಟಾನಿಕ್ ಹಡಗು ಡಿಕ್ಕಿ ಹೊಡೆದದ್ದು ಇಂಥ ಬೃಹತ್ iceberg ಒಂದಕ್ಕೆ. Ice sizzleನ ಸದ್ದು ಕೂಡಾ ರೋಚಕ. ಜಪಾನ್‌ನಲ್ಲಿ ಇದೇ ಒಂದು ದೊಡ್ಡ ಉದ್ಯಮವಾಗಿದೆ. ಮದ್ಯಪಾನಿಗಳು ಆನ್ ದಿ ರಾಕ್ ಎಂದು ಕರೆದು ಐಸ್‌ನ ಸಣ್ಣ ತುಂಡು ಆಲ್ಕೋಹಾಲ್ ಜೊತೆಗೆ ಕರಗುವುದನ್ನು ಸುಖಿಸುತ್ತಾರೆ. ಒಮ್ಮೆ ಅಲಾಸ್ಕದಲ್ಲಿ ವಿಜ್ಞಾನಿಗಳು ತಳದಲ್ಲಿರುವ ಅತ್ಯಂತ ಆಳದ ಹಿಮದ ಚೂರನ್ನು ತೆಗೆಯಲು 2000 ಅಡಿ ಕೊರೆದರು. ಈ ಖುಷಿಯನ್ನು ಆಚರಿಸಲು ಪಾರ್ಟಿಯನ್ನು ಏರ್ಪಡಿಸಿದರು. ಆದರೆ ಐಸ್ ಕೋರ್‌ಅನ್ನು ಗ್ಲಾಸಿಗೆ ಹಾಕುತ್ತಿದ್ದಂತೆ ಗ್ಲಾಸುಗಳು ಛಿದ್ರಗೊಂಡವು.

ನೀರನ್ನು ಅತಿಶೀತಕ್ಕೊಳಪಡಿಸಿ ಘನೀಕರಿಸಿದ ಐಸ್‌ಗಿಂತ, ನಿಸರ್ಗದಲ್ಲಿ ಸಹಜವಾದ ಸ್ನೋ ಪದರಗಳಿಂದ ಆದ ಐಸ್ ಬಹಳ ಸಾಂದ್ರಗೊಂಡಿದ್ದು ಅಧಿಕಶಕ್ತಿ ಮತ್ತು ಒತ್ತಡವನ್ನು ಹೊಂದಿರುತ್ತದೆ. ಭೂಮಿಯ ಮೇಲೆ ಗ್ಲೇಸಿಯರ್‌ಗಳ ಸಂಖ್ಯೆ ಅತಿಯಾಗುವುದೂ ಅಪಾಯವೇ. ದಿನೇ ದಿನೇ ಭೂಮಿಯ ತಾಪಮಾನ ಹೆಚ್ಚುತ್ತಿದೆ. ಎಲ್ಲ ಗ್ಲೇಸಿಯರ್‌ಗಳೂ ಕರಗಿದರೆ ಈಗಿರುವ ಸಮುದ್ರಗಳ ಮಟ್ಟ 265 ಅಡಿ ಹೆಚ್ಚಿ ಕಡಲಂಚಿನ ಪಟ್ಟಣಗಳೆಲ್ಲ ಪ್ರವಾಹದಲ್ಲಿ ಮುಳುಗಿಹೋಗುತ್ತವೆ. ಪರಿಸರ ಸಮತೋಲನ ಕಾಯ್ದುಕೊಳ್ಳದಿದ್ದರೆ ಆ ದಿನಗಳು ದೂರವಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಹಡಗಿನಿಂದ ರೈಲಿಗೆ ವರ್ಗಾಯಿಸಲ್ಪಟ್ಟ ಚೇತೋಹಾರಿ ಅನುಭವ ಒದಗಿದ್ದು ಸ್ಕಾಗ್‌ವೇನಲ್ಲಿ. ಹಡಗೂ, ಗ್ಲೇಸಿಯರ್‌ಗಳೂ ಅಜೀರ್ಣ ಅನ್ನುವಂತಾಗಿತ್ತು. ಹಿಮಾಚ್ಛಾದಿತ ಶಿಖರಗಳ ಸಾಲಿನ ನಡುವಿನ ಕೊಲ್ಲಿಗಳಲ್ಲಿ ಗರಗರ ಸುತ್ತಿ ಸುಳಿದು ಹಡಗೂ ದಣಿದಂತಿತ್ತು. ಓಡಿಹೋಗಿ ರೈಲಿಗೆ ಕುಳಿತೆ. ಹಾಸನ -– ಮಂಗಳೂರು ರೈಲು ಹಾದಿ ನೆನಪಾಯಿತು. ಅಲ್ಲಿ ಸುರಂಗಮಾರ್ಗ ಹೆಚ್ಚು. ಇಲ್ಲಿ ಎತ್ತರದ ಕಬ್ಬಿಣದ ಹಳೆಯ ಸೇತುವೆಗಳು. ಹಿಮಶೃಂಗಗಳ ನಡುವೆ ಹಾಯುವುದರಿಂದ, ಯುಕನ್ ನದಿಯನ್ನು ದಾಟಬೇಕಾದ್ದರಿಂದ, ಮತ್ತು ಆಗಿನ ಕೆನಡಾದ ಮಂತ್ರಿಯ ಹೆಸರು ಸರ್ ಥಾಮಸ್ ವೈಟ್ ಆದ್ದರಿಂದ ಇರಬಹುದು ಈ ರೈಲುಮಾರ್ಗಕ್ಕೆ ‘ವೈಟ್‌ಪಾಸ್‌ ಯುಕನ್‌ ರೂಟ್’ ಎನ್ನಲಾಗಿದೆ.

ಈ ಐತಿಹಾಸಿಕ ರೈಲು ಮಾರ್ಗದ ಹಿಂದೆ ರೋಚಕ ಕಥೆ ಇದೆ. ೧೮೯೬ರಲ್ಲಿ ಗೋಲ್ಡ್‌ರಶ್ ಆರಂಭವಾಯಿತು. ಈ ದುರ್ಗಮ ಕಾನನದಲ್ಲಿರುವ ಹೊಳೆ, ಕಣಿವೆ, ಹೊಲಗಳಲ್ಲಿದ್ದ ಚಿನ್ನದ ಗಟ್ಟಿ ಮತ್ತು ಚಿನ್ನದ ಮಣ್ಣನ್ನು ಅರಸಿ ಸಹಸ್ರಾರು ಜನ ಮುಗಿಬಿದ್ದರು. ಆದರೆ ಚಿನ್ನ ಲಭಿಸಿದ್ದು ಕೆಲವರಿಗಷ್ಟೆ. ಈ ಚಿನ್ನದ ಬೇಟೆಯ ಮುನ್ಸೂಚನೆ ಅರಿತ ವಿಲಿಯಂ ಮೋರ್, ಇಲ್ಲಿಗೊಂದು ರೈಲು ದಾರಿಯನ್ನು ಕಲ್ಪಿಸಿದ. ಇದು ಅಮೆರಿಕ –- ಕೆನಡಾಗಳ ಮಧ್ಯೆ ಸಂಚರಿಸುವ ನ್ಯಾರೋ ಗೇಜ್ ರೈಲು. ಹಾಗೆ ನೋಡಿದರೆ ಹತ್ತೊಂಬತ್ತನೇ ಶತಮಾನ ಎಲ್ಲ ಕಡೆ ರೈಲು ಮಾರ್ಗಗಳ ಸ್ಥಾಪನೆಯ ಕಾಲಘಟ್ಟ. ಮೈಕೇಲ್ ಜೆ. ಹೆನ್ರಿ ಎಂಬ ರೈಲು ರಸ್ತೆ ನಿರ್ಮಾಣದ ಪ್ರಸಿದ್ಧ ಕಂಟ್ರಾಕ್ಟರ್ ನನಗೆ ಕೇಳಿದಷ್ಟು ಡೈನಮೈಟ್ ಕೊಡಿ. ಸ್ವರ್ಗಕ್ಕೂ, ನರಕಕ್ಕೂ ಒಂದು ರೈಲು ರಸ್ತೆ ಕಟ್ಟಿಕೊಡುತ್ತೇನೆ ಎನ್ನುತ್ತಿದ್ದ.

ಅದು ಕೈಗಾರಿಕಾ ಕ್ರಾಂತಿಯ ಉತ್ಕರ್ಷದ ಉಮೇದಿನ ಕಾಲ. ಅಂತೂ 1898ರ ಮೇ 28ರಂದು ಈ ವೈಟ್‌ಪಾಸ್ ರೈಲು ರಸ್ತೆ ನಿರ್ಮಾಣ ಆರಂಭವಾಯಿತು. ನೂರಾ ಹತ್ತು ಮೈಲುಗಳ, ಕಡಿದಾದ ಪರ್ವತಗಳ, ಸುರಂಗ ಹಾದಿಯ, ಅಸಂಖ್ಯ ಸೇತುವೆಗಳ, ಈ ರೈಲು ಮಾರ್ಗ ಹಿಮಪಾತ ಮತ್ತು ನೈಸರ್ಗಿಕ ವೈಪರೀತ್ಯಗಳನ್ನು ಎದುರಿಸುತ್ತಾ ದಿಟ್ಟವಾಗಿ ಬದುಕಿದೆ. ಗೋಲ್ಡ್ ರಶ್, ಎರಡನೇ ವಿಶ್ವ ಯುದ್ಧದ ಭರಾಟೆ ಎಲ್ಲವನ್ನೂ ಕಂಡ ಈ ಐತಿಹಾಸಿಕ ರೈಲು ಇದೀಗ ಪ್ರವಾಸಿಗರ ಆಕರ್ಷಣೆಯಾಗಿ ಉಳಿದಿದೆ. ಅದು ಕಾಕತಾಳೀಯವಿರಬೇಕು; ಉತ್ತರ ಧ್ರುವದಂಚಿನ ನ್ಯೂಜಿಲ್ಯಾಂಡ್‌ನಲ್ಲೂ ಇಂಥ ಒಂದು ರೈಲಿದೆ. ಅದೂ ಗೋಲ್ಡ್‌ರಶ್ ಕತೆಯಿಂದಲೇ ಆರಂಭವಾಗುತ್ತದೆ.

ಅದು ಪ್ರಾರಂಭವಾದದ್ದು 1870ರಲ್ಲಿ. ಅದರ ಹೆಸರು ಟಾಮೆರಿಜಾರ್ಜ್ ರೈಲ್ವೇ ಎಂದು. ನಿವೃತ್ತ ವೃದ್ಧರು ನಡೆಸುವ ಖಾಸಗಿ ರೈಲು. ಅವರು ಆ ರೈಲನ್ನು ರಿಕ್ಷಾದಂತೆ ಎಲ್ಲಾ ಕಡೆ ನಿಲ್ಲಿಸುತ್ತಾರೆ. ಪ್ರವಾಸಿಗಳಿಗೆ ಕಾಯುತ್ತಾರೆ. ಅಡುಗೆ ಮಾಡಿ ಬಡಿಸುತ್ತಾರೆ. ನಾನೊಮ್ಮೆ ಅಲ್ಲಿಗೆ ಹೋಗಿದ್ದೆ. ಹಡಗು, ರೈಲಿನದಾಯಿತು. ಇವೆರಡಕ್ಕೂ ಸಿಗದ ಬೃಹತ್ ಗ್ಲೇಸಿಯರ್‌ಗಳನ್ನು ಕಾಣಲು ಏನು ಮಾಡಬೇಕು? ಅದಕ್ಕೆ ವಾಯು ಮಾರ್ಗ ಅನಿವಾರ್ಯ. ಖಾಸಗಿ ಸಣ್ಣ ಸಣ್ಣ ವಿಮಾನಗಳಿದ್ದರೂ ಅವು ತುಂಬಾ ದುಬಾರಿ. ಸೂರ್ಯನೂ ಸಹಕರಿಸಬೇಕು. ಅವನೊಬ್ಬ ಮಹಾವಂಚಕ. ವಿಮಾನ ಅಥವಾ ಹೆಲಿಕಾಪ್ಟರ್ ಹಾರುವ ಮತ್ತು ಲ್ಯಾಂಡ್ ಆಗುವ ಸಮಯದಲ್ಲಿ ಮೋಡಗಳ ಕರವಸ್ತ್ರಗಳಿಂದ ಮುಖ ಮುಚ್ಚಿಕೊಂಡು ಬಿಡುತ್ತಾನೆ.

ಸಿಯಾಟಲ್, ಚಿಕಾಗೋ, ಡೆಟ್ರಾಯಿಟ್‌ಗಳಿಂದ ಆಂಕ್ರೆಜ್‌ಗೆ ಹೋಗುವ ವಿಮಾನಗಳಲ್ಲಿ ಕಿಟಕಿ ಪಕ್ಕ ಕುಳಿತರೆ, ಸೂರ್ಯನ ಬಿಸಿಲಿದ್ದರೆ, ಅಲಾಸ್ಕದ ಮುಖ್ಯ ಗ್ಲೇಸಿಯರ್‌ಗಳಾದ ಬೆರಿಂಗ್, ಪ್ರಿನ್ಸ್ ವಿಲಿಯಂ ಸೌಂಡ್, ಸೆಂಟ್ ಎಲಿಯಾಸ್, ಮುಂತಾದವುಗಳನ್ನು ಕಣ್ಣು ದಣಿಯುವಷ್ಟು ನೋಡಬಹುದು. ಇದು ಉತ್ಪ್ರೇಕ್ಷೆ ವರ್ಣನೆಗಳನ್ನೂ ಮೀರಿದ ನಿಬ್ಬೆರಗಾಗಿಸುವ ಸೌಂದರ್ಯ. ಪೈಲಟ್‌ಗಳೂ ವಿಮಾನವನ್ನು ಆದಷ್ಟು ಕೆಳಗಿಳಿಸಿ ಪ್ರತಿ ಗ್ಲೇಸಿಯರ್‌ಗಳನ್ನೂ ವಿವರಿಸ ತೊಡಗುತ್ತಾರೆ. ವಿವರಣೆಯನ್ನು ಅವರ ಗಡಸು ಧ್ವನಿಯಲ್ಲಿ ಕೇಳುವುದೇ ಚೆಂದ.

ಸುಸ್ತಾಗಿ ಹಡಗನ್ನೇರಿದಾಗ ಲೈಲಾ ಕ್ಯಾಬಿನ್‌ಗೆ ಬಂದು ‘ಇಂದು ಕ್ಯಾಪ್ಟನ್ ಶಾಂಪೇನ್ ಪಾರ್ಟಿ ಕೊಡಲಿದ್ದಾರೆ. ಸ್ಮಾರ್ಟ್ ಕ್ಯಾಶುಯಲ್ ಡ್ರೆಸ್ ಧರಿಸಿ ಹೋಗು’ ಎಂದು ಸೂಚಿಸಿದಳು. ರಿಚ್ಮಂಡ್‌ನಲ್ಲಿರುವ ನನ್ನ ಗೆಳೆಯ ಸ್ವರೂಪ್‌ರಾಜ್ ಇಂಥ ಆಪತ್ಕಾಲವನ್ನು ಊಹಿಸಿ ಕೆಲವು ಟೈಗಳನ್ನು ಕೊಟ್ಟಿದ್ದ. ನನಗೆ ಟೈ ಕಟ್ಟಲು ಬರುವುದಿಲ್ಲ ಮಾತ್ರವಲ್ಲ ಇಷ್ಟವಾಗುವುದಿಲ್ಲ. ಆದರೂ ಕ್ಯಾಪ್ಟನ್ ಪಾರ್ಟಿಗೆ ಹೋಗುವ ಸಲುವಾಗಿ ಅಸಡಾ ಬಸಡಾ ಸುತ್ತಿಕೊಂಡು ಸಂಕೋಚದಿಂದಲೇ ಹೋದೆ. ಅಲ್ಲಿ ನೋಡಿದರೆ ಅನೇಕರ ವೇಷಭೂಷಣಗಳು, ನನ್ನವೇ ವಾಸಿ ಅನ್ನುವಂತಿದ್ದವು. ಈ ಪಾರ್ಟಿಗಳು ಆತಿಥ್ಯಭಾವಕ್ಕಿಂತ ವ್ಯಾವಹಾರಿಕ ಗಿಮಿಕ್‌ಗಳಂತೆ ಕಂಡವು.

ಮರಳಿ ಬರುವಾಗ ‘ತಿಂಗಳ ನೌಕರ’ ಎಂದು ಗೋವಾದ ಡೆರ್ರಿಕ್ ಡಿಯಾಸ್‌ನನ್ನು ಆಯ್ಕೆ ಮಾಡಿ ಆತನ ಭಾವಚಿತ್ರವನ್ನು ಹಾಕಿದ್ದನ್ನು ಕಂಡೆ. ನೌಕರರನ್ನು ಉತ್ತೇಜಿಸಲು ಮತ್ತು ಗೌರವಿಸಲು ಹೀಗೆ ತಿಂಗಳಿಗೊಬ್ಬ ನೌಕರನನ್ನು ಬೇರೆ ಬೇರೆ ವಿಭಾಗದಿಂದ ಆಯ್ಕೆ ಮಾಡಿ ಬೆನ್ನು ತಟ್ಟುತ್ತಾರೆ. ಆ ಹಡಗಿನಲ್ಲಿ ಮಲೆಯಾಳಿಗಳು ಒಬ್ಬರೂ ಇರಲಿಲ್ಲ. ಆದರೆ ಗೋವಾದ ಅನೇಕ ಹುಡುಗರು ಕೆಲಸಕ್ಕಿದ್ದರು. ಡೆರ್ರಿಕ್‌ನನ್ನು ಕೇಳಿದೆ. ಸಂಬಳ ಸಾರಿಗೆ, ಕಷ್ಟ ಸುಖ ಏನೂಂತ. ಅವನು ಹೇಳಿದ.

ಕೇವಲ ೯೦೦ ಡಾಲರ್ ಮಾಸಿಕ ಸಂಬಳ ಸಾಕಾಗುವುದಿಲ್ಲ. ಟಿಪ್ಸ್‌ನಲ್ಲಿ ಸಂಗ್ರಹವಾದದ್ದನ್ನು ಹಂಚುತ್ತಾರೆ. ಊಟ, ಉಡುಪು, ವಸತಿ ಉಚಿತ. ಜಗತ್ತು ನೋಡಬಹುದು ಅನ್ನೋ ಆಸೆಗೆ ಇಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳ ನೌಕರ ಅನ್ನುವ ಬಿರುದು ನಮ್ಮನ್ನು ಚೆನ್ನಾಗಿ ದುಡಿಸುವ ಒಂದು ತಂತ್ರ ಅಷ್ಟೆ ಎಂದ. ಕನ್ನಡದಲ್ಲಿ ಇವನಿಗೆ ಬಿರುದು ಕೊಟ್ಟು ಹಡಗುವೀರ, ಜಹಜೇಶ್ವರ, ಮಹಾನಾವಿಕ ಇತ್ಯಾದಿಯಾಗಿ ಕರೆದರೆ ಹೇಗಿರುತ್ತದೆ ಎಂದು ಯೋಚಿಸತೊಡಗಿದೆ.
(ಮುಂದಿನ ವಾರ : ಅಲಾಸ್ಕ ಯಾತ್ರೆಯ ಕೊನೆಯ ಕಂತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT