ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತೆ ಇಲ್ಲದ ಅಭಿವೃದ್ಧಿಗೆ ಕಿಮ್ಮತ್ತಿಲ್ಲ

Last Updated 8 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಅಭಿವೃದ್ಧಿ ಎಂಬುದು ಎಷ್ಟು ಸಂಕೀರ್ಣವಾದ ಪ್ರಕ್ರಿಯೆ ಎಂದರೆ ತಜ್ಞರು ಅದನ್ನು ಹಲವು ಬಗೆಯಲ್ಲಿ ವಿವರಿಸಿದ್ದಾರೆ. ಇವುಗಳಲ್ಲಿ ಕೆಲವು ಅತ್ಯಂತ ಸಂಕುಚಿತ ಮತ್ತು ಏಕ ಆಯಾಮವನ್ನು ಹೊಂದಿವೆ. ಇನ್ನು ಕೆಲವು ಬಹಳಷ್ಟು ಸಮಗ್ರವಾಗಿವೆ. ಕೆಲವರು ಅಭಿವೃದ್ಧಿಯನ್ನು ಆರ್ಥಿಕ ದೃಷ್ಟಿಕೋನದಿಂದ ನೋಡುತ್ತಾರೆ.
 
ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕರು ಮಾನವನ ಜೀವನ ಮತ್ತು ಪ್ರಗತಿಯ ಮೇಲೆ ಪರಿಣಾಮ ಬೀರುವ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಇತರ ಆಯಾಮಗಳಿಂದಲೂ ಅದನ್ನು ವಿಶ್ಲೇಷಿಸಲಾರಂಭಿಸಿದ್ದಾರೆ.

ಈ ಪ್ರೋತ್ಸಾಹದಾಯಕ ಬೆಳವಣಿಗೆಯನ್ನು ಶೈಕ್ಷಣಿಕ ಮತ್ತು ಸಂಶೋಧನಾತ್ಮಕ ಆಯಾಮದ ಎಲ್ಲೆ ದಾಟಿ, ನಿಜವಾದ ತಳಮಟ್ಟದ ಅಭಿವೃದ್ಧಿಯ ಸಮಗ್ರ ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯ ಇದೆ.

ದುರದೃಷ್ಟದ ಸಂಗತಿಯೆಂದರೆ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಬಹುತೇಕ ಕಾರ್ಯಕ್ರಮಗಳು ಕೇವಲ ಕಲ್ಯಾಣದತ್ತ ಗಮನ ಕೇಂದ್ರೀಕರಿಸಿವೆಯೇ ಹೊರತು ಅಭಿವೃದ್ಧಿಯನ್ನು ವಿಶಾಲ ದೃಷ್ಟಿಕೋನದಿಂದ ನೋಡುವ ಗೋಜಿಗೇ ಹೋಗಿಲ್ಲ.

ಬಡತನದ ವಿರುದ್ಧ ಹೋರಾಡಲು ಜನರನ್ನು ಸಜ್ಜುಗೊಳಿಸುವುದನ್ನೇ ಉದ್ದೇಶವಾಗಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ ಬಡತನವನ್ನು ಸಂಪೂರ್ಣವಾಗಿ ತೊಡೆದುಹಾಕುವಷ್ಟು ಸಬಲರನ್ನಾಗಿ ಅವರನ್ನು ರೂಪಿಸುವ ಕಾರ್ಯ ಆಗುತ್ತಿಲ್ಲ.

ನಿಜವಾದ ಅಭಿವೃದ್ಧಿಯು ಸಬಲೀಕರಣದ ಮೂಲೋದ್ದೇಶವನ್ನು ಹೊಂದಿರಬೇಕು. ಸಂಬಂಧಪಟ್ಟವರ ಘನತೆಯನ್ನು ಎತ್ತಿ ಹಿಡಿಯುವ, ಸಂರಕ್ಷಿಸುವ ರೀತಿಯಲ್ಲಿ ಇರಬೇಕು.

ಇಷ್ಟೇ ಅಲ್ಲದೆ, ಸುರಕ್ಷೆಯ ಪರಿಧಿಯೊಳಗೆ ತಾವಿದ್ದೇವೆ ಎಂಬ ಭರವಸೆಯನ್ನು ಮೂಡಿಸಿ ತಾವು ಸಹ ಬಡತನದಿಂದ ಹೊರಬರಲು ಸಾಧ್ಯ ಎಂಬಂತಹ ಭಾವನೆಯನ್ನು ಅವರಲ್ಲಿ ಮೂಡಿಸಬೇಕು.

ಈ ಜನರು ತಮ್ಮ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಸವಾಲುಗಳನ್ನಷ್ಟೇ ಎದುರಿಸುವುದಿಲ್ಲ. ಸುರಕ್ಷೆಯ ಪರಿಧಿಯನ್ನು ಸೇರುವ ಮಾರ್ಗಗಳೂ ಅವರಿಗೆ ಅಷ್ಟು ಸುಲಭವಾಗಿ ದೊರಕವು. ಇಂತಹ ಜನರೇನಾದರೂ ಅಭಿವೃದ್ಧಿಯನ್ನು ಬಯಸಿದರೆ ಮೊದಲು ಅವರಿಗೆ ಸಿಗುವುದು `ಔದಾರ್ಯ~.
 
ಈ ಹಂತದಲ್ಲೇ ಅವರು ತಮ್ಮ ಅಗತ್ಯಗಳ ಪೂರೈಕೆಗಾಗಿ ಅನುಕಂಪದ ಬಲೆಯೊಳಗೆ ಸುಲಭವಾಗಿ ಬೀಳುತ್ತಾರೆ. ನಂತರ `ದಾತ~ರ ಸ್ಥಾನವನ್ನು ಆಕ್ರಮಿಸಿಕೊಳ್ಳುವವರು ನಿಧಾನವಾಗಿ ಅವರ ಘನತೆ ಮತ್ತು ಆತ್ಮಾಭಿಮಾನವನ್ನು ಕಸಿದುಕೊಳ್ಳಲಾರಂಭಿಸುತ್ತಾರೆ.

ಒಂದು ಶತಮಾನಕ್ಕೂ ಹಿಂದೆ ಸ್ವಾಮಿ ವಿವೇಕಾನಂದರು `ಪೀಠದ ಮೇಲೆ ನಿಂತು `ಏ ಬಡ ವ್ಯಕ್ತಿಯೇ, ಇಗೋ ನನ್ನ ಐದು ರೂಪಾಯಿ~ ಎಂದು ಹೇಳಬೇಡಿ. ತನ್ನ ಸೇವೆ ಮಾಡುವ ಭಾಗ್ಯವನ್ನು ಆ ಬಡವ ನಿಮಗೆ ಒದಗಿಸಿಕೊಟ್ಟಿದ್ದಾನೆ ಎಂದೇ ತಿಳಿಯಿರಿ~ ಎಂದು ಹೇಳಿದ್ದರು.
 
ತೆಗೆದುಕೊಳ್ಳುವವನಿಗಿಂತ ಕೊಡುವವನೇ ಹೆಚ್ಚು ಪಡೆದುಕೊಳ್ಳುತ್ತಾನೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಈ ವಿಷಯ ಸಾಬೀತಾಗುವಂತಹ ಮಹತ್ವದ ಅನುಭವವೊಂದು ಕೆಲ ವರ್ಷಗಳ ಹಿಂದೆ ನನಗಾಯಿತು.

90ರ ದಶಕದ ಕೊನೆಯಲ್ಲಿ ಹೆಗ್ಗಡದೇವನಕೋಟೆ ತಾಲ್ಲೂಕಿನ ಬುಡಕಟ್ಟು ಪ್ರದೇಶದಲ್ಲಿ ನಾವು ಅಸ್ತಿತ್ವ ಕಂಡುಕೊಂಡಿದ್ದೆವು. ಹೊಸಹಳ್ಳಿಯ ಶಾಲೆ ಸಹ ಒಂದು ಹಂತಕ್ಕೆ ಬಂದಿತ್ತು. ಸುಮಾರು 400ಕ್ಕೂ ಹೆಚ್ಚು ಮಕ್ಕಳು ಅಲ್ಲಿ ಕಲಿಯುತ್ತಿದ್ದರು. ಜೇನುಕುರುಬ ಪಂಗಡಕ್ಕೆ ಸೇರಿದ ಹಿರಿಯ ವ್ಯಕ್ತಿ ತಿಮ್ಮಯ್ಯ ಶಾಲೆಗೆ ಸಮೀಪದಲ್ಲೇ ನೆಲೆಸಿದ್ದ.

ಬುದ್ಧಿವಂತನಾಗಿದ್ದ ಆತ ಬಹಳಷ್ಟು ಚಟುವಟಿಕೆಯಿಂದಿದ್ದ. ನಾನು ಶಾಲೆಗೆ ಹೋದಾಗಲೆಲ್ಲ ನನಗೆ ಸಿಗುತ್ತಿದ್ದ. ಕೆಲ ವರ್ಷಗಳ ಹಿಂದೆ ಶಾಲೆಯ ಹಿಂಭಾಗದಲ್ಲೇ ನಾನು ಸರ್ಕಾರದಿಂದ ಅವನಿಗೆ 1.5 ಎಕರೆ ಜಾಗ ಮಂಜೂರಾಗುವಂತೆ ಮಾಡಿದೆ. ಬಳಿಕ ನಾನು ತಂದುಕೊಟ್ಟ ಸಸಿಗಳನ್ನು ನೆಟ್ಟ ಆತ ಅಲ್ಲೊಂದು ಹಣ್ಣಿನ ತೋಟವನ್ನು ನಿರ್ಮಿಸಿದ.

ಈ ತೋಟವನ್ನು ಬಹಳಷ್ಟು ಪ್ರೀತಿಸುತ್ತಿದ್ದ ಅವನು ಆಡುಗಳು, ಸುತ್ತಲಿನ ಅರಣ್ಯದಿಂದ ಆಗಾಗ್ಗೆ ಬರುತ್ತಿದ್ದ ಜಿಂಕೆಗಳು, ಆನೆಗಳ ಬಾಯಿಗೆ ಗಿಡಗಳು ತುತ್ತಾಗದಂತೆ ಅತ್ಯಂತ ಜತನದಿಂದ ಕಾಪಾಡುತ್ತಿದ್ದ.
 
ನಿಧಾನವಾಗಿ ಅವನ ಈ ಶ್ರಮ ಎದ್ದು ಕಾಣಲಾರಂಭಿಸಿತು. ಅಲ್ಲೊಂದು ಅದ್ಭುತವಾದ ತೋಟವೇ ಸೃಷ್ಟಿಯಾಯಿತು. ಈ ಸಣ್ಣ ಭೂಮಿಯಲ್ಲಿ ಇಂತಹದ್ದೊಂದು `ಜಾದೂ~ ನಡೆಯುವುದರ ಹಿಂದೆ ಇದ್ದ ತಿಮ್ಮಯ್ಯ ಮತ್ತು ಅವನ ಹೆಂಡತಿಯ ಪರಿಶ್ರಮವಂತೂ ವರ್ಣಿಸಲಸದಳ.

ಯಾವಾಗ ನೋಡಿದರೂ ಅವರಿಬ್ಬರೂ ಆ ತೋಟದಲ್ಲೇ ಇರುತ್ತಿದ್ದರು. ಅವರ ದುಡಿಮೆಗೆ ತಕ್ಕ ಪ್ರತಿಫಲವೆಂಬಂತೆ ಕೆಲ ವರ್ಷಗಳಲ್ಲೇ ಅಲ್ಲಿನ ಗಿಡಗಳು ಹಣ್ಣು ಬಿಡುವ ಮರಗಳಾಗಿ ಬೆಳೆದು ನಿಂತವು.

ನಿಂಬೆ, ಸೀಬೆ, ಮಾವು, ಹಲಸಿನ ಹಣ್ಣುಗಳಿಂದ ಮರಗಳು ನಳನಳಿಸಲಾರಂಭಿಸಿದವು. ಇದನ್ನು ಕಂಡ ತಿಮ್ಮಯ್ಯನ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ಅಲ್ಲಿಂದೀಚೆಗೆ ಪ್ರತಿ ಋತುವಿನಲ್ಲೂ ಪ್ರತಿ ಮರದ ಮೊದಲ ಹಣ್ಣನ್ನು ನನಗೆ ತಂದುಕೊಡುವ ಪರಿಪಾಠವನ್ನು ಅವನು ಇಟ್ಟುಕೊಂಡ.

ನಾನು ಹೊಸಹಳ್ಳಿಗೆ ಬರುವುದನ್ನೇ ಕಾಯುತ್ತಾ ಇರುತ್ತಿದ್ದ ಆತ, ನಾನು ಬಂದ ಕೂಡಲೇ ಹಣ್ಣುಗಳೊಂದಿಗೆ ಓಡೋಡಿ ಬರುತ್ತಿದ್ದ. ತನ್ನ ಮುಂದೆಯೇ ಅವುಗಳನ್ನು ತಿನ್ನುವಂತೆ ನನ್ನನ್ನು ಒತ್ತಾಯಿಸುತ್ತಿದ್ದ. ಪ್ರತಿ ವರ್ಷವೂ ಹೀಗೇ ಮಾಡುತ್ತಿದ್ದ ಅವನಿಗೆ ಅದರಿಂದ ಸಿಗುತ್ತಿದ್ದ ಸಂತೋಷದ ಅರ್ಥ ನನಗಾಗಿರಲಿಲ್ಲ.

ನಂತರದ ವರ್ಷಗಳಲ್ಲಿ ಶಾಲೆಗೆ ನನ್ನ ಭೇಟಿ ಕಡಿಮೆಯಾಗಲಾರಂಭಿಸಿತು. ಆದರೂ ತನ್ನ ಪರಿಪಾಠವನ್ನು ಮಾತ್ರ ತಿಮ್ಮಯ್ಯ ಬಿಟ್ಟುಕೊಡಲೇ ಇಲ್ಲ. ನಾನು ಊರಿಗೆ ಹೋಗದಿದ್ದರೂ ಹಣ್ಣುಗಳು ನನಗೆ ತಲುಪುವಂತೆ ಆತ ನೋಡಿಕೊಳ್ಳುತ್ತಿದ್ದ.

ಶಾಲೆಯ ವ್ಯವಸ್ಥಾಪಕರಾದ ಪ್ರಸಾದ್ ಅವರ ಬಳಿ ಹಣ್ಣುಗಳನ್ನು ಕೊಟ್ಟು, ನನಗೆ ಸರಿಯಾಗಿ ತಲುಪಿಸಬೇಕು ಎಂದು `ತಾಕೀತು~ ಮಾಡುತ್ತಿದ್ದ. ಅವು ನನ್ನ ಕೈಸೇರುವಷ್ಟರಲ್ಲಿ ಯಾರೊಬ್ಬರೂ ಅವುಗಳನ್ನು ತಿನ್ನದಂತೆ ನೋಡಿಕೊಳ್ಳುವ ಭರವಸೆಯನ್ನೂ ಪ್ರಸಾದ್ ಅವರಿಂದ ಪಡೆದುಕೊಳ್ಳುತ್ತಿದ್ದ.

ಭೂಮಿ ಮತ್ತು ಗಿಡಗಳನ್ನು ಒದಗಿಸಿಕೊಟ್ಟಿದ್ದಕ್ಕೆ ವಿಧೇಯನಾಗಿ ಆತ ಹೀಗೆ ಮಾಡುತ್ತಿದ್ದಾನೆ ಎಂದೇ ಬಹಳಷ್ಟು ವರ್ಷಗಳ ಕಾಲ ನಾನು ನಂಬಿದ್ದೆ. ಛೆ! ಇಂತಹ ನನ್ನ ನಂಬಿಕೆ ಎಷ್ಟೊಂದು ಸಂಕುಚಿತವಾಗಿತ್ತು!

ವಿವೇಕಾನಂದರ ಉಕ್ತಿಗಳನ್ನು ಓದಿಕೊಂಡಿದ್ದರ ನಡುವೆಯೂ ನನ್ನನ್ನು ನಾನು `ದಾತ~ ಎಂದು ಭಾವಿಸಿಕೊಂಡು ತಿಮ್ಮಯ್ಯ ಅದಕ್ಕೆ ಪ್ರತಿಯಾಗಿ ನನಗೆ `ಕೃತಜ್ಞತೆ~ ತೋರುತ್ತಿದ್ದಾನೆ ಎಂಬ ಭಾವನೆಯೇ ನನ್ನ ಸುಪ್ತ ಮನಸ್ಸಿನಲ್ಲಿ ಬೇರೂರಿತ್ತು.

ಹೀಗಾಗಿ ನಾನು ಸುಲಭವಾಗಿ ಹಳ್ಳಕ್ಕೆ ಬಿದ್ದಿದ್ದೆ. ಅದೃಷ್ಟವಶಾತ್, ಇಂತಹ ನನ್ನ ಮನೋಭಾವವನ್ನು ತೊಡೆದುಹಾಕುವ ಘಟನೆಯೊಂದು ತಿಮ್ಮಯ್ಯನ ಮೂಲಕವೇ ಒದಗಿಬಂತು. ಈ ಮೂಲಕ ಆತ ಅತ್ಯಮೂಲ್ಯವಾದ ಪಾಠವೊಂದನ್ನು ನನಗೆ ಕಲಿಸಿದ್ದ.

ಕ್ಷಯ ರೋಗದಿಂದ ಬಳಲುತ್ತಿದ್ದ ತಿಮ್ಮಯ್ಯ ಅದಕ್ಕಾಗಿ ನಾವು ಕೊಡುತ್ತಿದ್ದ ಚಿಕಿತ್ಸೆಯನ್ನು ಸರಿಯಾಗಿ ಅನುಸರಿಸುತ್ತಿರಲಿಲ್ಲ. ತನಗೆ ಇಷ್ಟ ಬಂದಾಗ ಮಾತ್ರ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದ. ಇದರಿಂದ ಆಸ್ಪತ್ರೆಯ ಸಿಬ್ಬಂದಿ ಮತ್ತು ಅವನ ಆಪ್ತೇಷ್ಟರು ಅವನ ಮೇಲೆ ಬೇಸರಗೊಂಡಿದ್ದರು. ಪ್ರತಿ ಬಾರಿ ಅವನು ಔಷಧ ತೆಗೆದುಕೊಳ್ಳಲು ನಿರ್ಲಕ್ಷ್ಯ ತೋರಿದಾಗಲೆಲ್ಲಾ ನನ್ನ ಬಳಿ ದೂರು ಹೇಳುತ್ತಿದ್ದರು.

ಅವನ ಮೇಲೆ ನಿಮಗಿರುವ `ಪ್ರಭಾವ~ ಬಳಸಿ ಔಷಧಿ ತೆಗೆದುಕೊಳ್ಳುವಂತೆ ಒತ್ತಡ ಹೇರಿ ಎಂದು ಕೇಳಿಕೊಳ್ಳುತ್ತಿದ್ದರು. ಕೊನೆಗೊಂದು ದಿನ ನನ್ನ ತಾಳ್ಮೆಯೂ ಕಳೆದುಹೋಯಿತು.
 
ತಿಮ್ಮಯ್ಯನನ್ನು ಭೇಟಿಯಾದ ನಾನು ಔಷಧ ತೆಗೆದುಕೊಳ್ಳುವುದರಿಂದ ಆಗುವ ಪ್ರಯೋಜನದ ಬಗ್ಗೆ ಮೊದಲು ನಿಧಾನವಾಗೇ ಅವನ ಮನವೊಲಿಸಲು ಪ್ರಯತ್ನಿಸಿದೆ. ಇಲ್ಲದಿದ್ದರೆ, ಅವನ ಹಾಗೂ ಅವನ ಸಮುದಾಯದ ಮೇಲೆ ಆಗುವ ಪರಿಣಾಮವನ್ನು ವಿವರಿಸಿದೆ. ಇದನ್ನೆಲ್ಲ  ಸರಿಯಾಗಿ ಕೇಳಿಸಿಕೊಳ್ಳುವಷ್ಟು ಉತ್ಸಾಹವೂ ಅವನಿಗೆ ಇರಲಿಲ್ಲ.

ಬದಲಿಗೆ ತಾನು ಕಳುಹಿಸಿದ್ದ ಹಲಸಿನ ಹಣ್ಣು ನನ್ನನ್ನು ತಲುಪಿತೇ ಎಂದು ಕಕ್ಕುಲತೆಯಿಂದ ವಿಚಾರಿಸಿಕೊಂಡ. ಯಾರಿಗಾಗಿ ನಾನು ಏನೆಲ್ಲ ಮಾಡಿದ್ದೇನೋ ಅವನು ನನ್ನ ಸೂಚನೆಗಳನ್ನು ಪಾಲಿಸದೇ ಇರುವುದನ್ನು ಕಂಡು ನಾನು ರೋಸಿಹೋದೆ.
 
ಇಷ್ಟು ವರ್ಷಗಳಿಂದ ನಾನು ಅವನಿಗೆ ಕೊಡಿಸಿದ ಭೂಮಿ, ಸಸಿಗಳು ಮತ್ತು ಇತರ ನೆರವಿಗಾಗಿ ಕೃತಜ್ಞತೆ ಸಲ್ಲಿಸುವ ಸಲುವಾಗಿಯಾದರೂ ನಾನು ಹೇಳಿದಂತೆ ಅವನು ಕೇಳಲೇಬೇಕು ಎಂದು ತಾಕೀತು ಮಾಡಿದೆ.

ಆಗ ತಿಮ್ಮಯ್ಯ ಪ್ರತಿಕ್ರಿಯಿಸಿದ ರೀತಿ ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸುರಾಗಿಯೇ ಇದೆ. ನನ್ನ ಮಾತುಗಳಿಂದ ಯಾವುದೇ ಉದ್ವೇಗಕ್ಕೆ ಒಳಗಾಗದ ಆತ ಸಾವಧಾನದಿಂದಲೇ ಉತ್ತರಿಸಿದ. ನನ್ನಿಂದ ಪಡೆದ `ಸಹಾಯ~ಕ್ಕಾಗಿ ಕ್ಷಮೆ ಯಾಚಿಸಿದ. `ಈಗ ನನಗೆ ನಿಜವಾಗಲೂ ಗೊಂದಲ ಉಂಟಾಗುತ್ತಿದೆ.

ಯಾಕೆಂದರೆ ಈವರೆಗೆ ನಾನು ನಿಮ್ಮನ್ನು ದಾತ ಎಂದು ತಿಳಿದಿರಲಿಲ್ಲ. ಬದಲಿಗೆ ನನ್ನ ಪ್ರಗತಿಯಲ್ಲಿ ನೀವೂ ಪಾಲುದಾರರೆಂದೇ ಭಾವಿಸಿದ್ದೆ. ಆದರೆ ಈಗ ನೀವು ಹೇಳುತ್ತಿರುವುದನ್ನು ನೋಡಿದರೆ ನನಗೆ ಅಚ್ಚರಿಯಾಗುತ್ತಿದೆ~ ಎಂದು ಹೇಳಿದ.

ನನ್ನನ್ನು ಬೇರೆಯವನೆಂದು ಎಂದೂ ಭಾವಿಸಿರದಿದ್ದ ಆತ, ಒಂದು ಅದ್ಭುತವಾದ ಕಾರ್ಯ ಸೃಷ್ಟಿಗಾಗಿ ನಾವಿಬ್ಬರೂ ಕೂಡಿ ದುಡಿಯುತ್ತಿದ್ದೇವೆ ಎಂದು ಭಾವಿಸಿದ್ದುದಾಗಿ ತಿಳಿಸಿದ. ಅವನೇನೋ ಸರಳವಾಗಿಯೇ ಇದನ್ನು ಹೇಳಿಬಿಟ್ಟನಾದರೂ ಅದರ ಅರ್ಥ ಗ್ರಹಿಕೆ ಮಾತ್ರ ಅತ್ಯಂತ ಕಠಿಣವಾಗಿತ್ತು.
 
ಆ ತೋಟ ಅವನಿಗಾಗಲಿ ನನಗಾಗಲಿ ಇಬ್ಬರಿಗೂ ಸೇರಿದ್ದಲ್ಲ, ಕೇವಲ ಭೂಮಿ ಮತ್ತು ಸಸಿಗಳನ್ನು ಒದಗಿಸಿಕೊಟ್ಟ ಮಾತ್ರಕ್ಕೆ ಅದು ನನ್ನದಲ್ಲ ಅಥವಾ ಭೂಮಿಯ ಹಕ್ಕುಪತ್ರ ತನ್ನ ಹೆಸರಿನಲ್ಲಿದ್ದ ಮಾತ್ರಕ್ಕೆ ಮತ್ತು ಹಗಲಿರುಳೂ ಭೂಮಿಯಲ್ಲಿ ದುಡಿದಷ್ಟಕ್ಕೇ ಅದು ಅವನದೂ ಆಗಿರಲಿಲ್ಲ.

ಬದಲಿಗೆ ಅದು ನಮ್ಮಿಬ್ಬರಿಗೂ ಸೇರಿದ್ದು, ಅಷ್ಟೇ ಅಲ್ಲ, ಇಡೀ ಜಗತ್ತಿಗೇ ಸೇರಿದ್ದು ಎಂದಾತ ಹೇಳಿದ. ಪ್ರತಿ ವರ್ಷ ನನಗೆ ಹಣ್ಣುಗಳನ್ನು ಕಳುಹಿಸುತ್ತಿದ್ದುದು ಕೃತಜ್ಞತಾ ಭಾವನೆಯಿಂದ ಅಲ್ಲ. ತನ್ನ ಮೇಲೆ ಕೃಪೆ ತೋರದೆ, ಸಹಭಾಗಿತ್ವದಲ್ಲಿ ನೀವೂ ಪಾಲುದಾರರು ಎಂಬ ಸಂದೇಶ ಕಳುಹಿಸುವುದು ಅವನ ಉದ್ದೇಶ ಆಗಿತ್ತು.
 
ಅಲ್ಲದೆ, ನಮ್ಮಿಬ್ಬರಲ್ಲಿ ಯಾರೊಬ್ಬರೂ ಪರಸ್ಪರ ಕೃಪೆ ತೋರುವ ಅಗತ್ಯವೂ ಇಲ್ಲ, ಬದಲಿಗೆ ಪ್ರಕೃತಿಗೆ ನಾವು ಆಭಾರಿಯಾಗಿರಬೇಕು, ಒಟ್ಟಿಗೇ ಕೆಲಸ ಮಾಡುವ ಇಂತಹ ಅಸಾಧಾರಣ ಅವಕಾಶವನ್ನು ಅದು ನಮಗೆ ಕಲ್ಪಿಸಿಕೊಟ್ಟಿದೆ ಎಂಬ ಸಂದೇಶವನ್ನು ಹಣ್ಣುಗಳ ಮೂಲಕ ನನಗೆ ಮನದಟ್ಟು ಮಾಡಿಕೊಡಲು ಅವನು ಯತ್ನಿಸಿದ್ದ.

ಭೂಮಿ ಮತ್ತು ಸಸಿಗಳನ್ನು ಒದಗಿಸಿಕೊಡುವ ಮೂಲಕ ನಾನು ಈ ದುಡಿಮೆಯ ಪಾಲುದಾರನಾದರೆ, ಅವುಗಳನ್ನು ಸಂರಕ್ಷಿಸುವ ಕಾಯಕದ ಮೂಲಕ ತಾನು ಸಹಭಾಗಿ, ಇಂತಹ ಪಾಲುದಾರಿಕೆಯಿಂದ ನಮ್ಮಿಬ್ಬರ ಘನತೆ ಉಳಿಯುವುದಷ್ಟೇ ಅಲ್ಲ, ಇನ್ನಷ್ಟು ವೃದ್ಧಿಸುತ್ತದೆ ಎಂಬುದು ಅವನ ಭಾವನೆಯಾಗಿತ್ತು.

ಆದರೆ ಸಾಮಾನ್ಯವಾಗಿ ನಾವು ನಮ್ಮಲ್ಲಿ ಒಬ್ಬನಿಗೆ `ದಾತ~ನ ಸ್ಥಾನ ನೀಡಿ ಮತ್ತೊಬ್ಬನನ್ನು `ಪಡೆದುಕೊಳ್ಳುವವ~ನನ್ನಾಗಿ ಮಾಡುವ ಮೂಲಕ ಅಸಾಧಾರಣ ಅಭಿವೃದ್ಧಿ ಪ್ರಕ್ರಿಯೆಯನ್ನು `ಔದಾರ್ಯ~ವೆಂಬ ಅತ್ಯಂತ ಸಂಕುಚಿತ ಮಟ್ಟಕ್ಕೆ ಇಳಿಸಿಬಿಡುತ್ತಿದ್ದೇವೆ ಎನಿಸುತ್ತದೆ.

ತಿಮ್ಮಯ್ಯನ ಇಂತಹ ಅನಿರೀಕ್ಷಿತವಾದ ಪ್ರತಿಕ್ರಿಯೆಯಿಂದ ಆಘಾತಗೊಂಡ ನಾನು ಮನಸ್ಸಿನಲ್ಲೇ ಅದನ್ನು ವಿಶ್ಲೇಷಿಸಲು ಆರಂಭಿಸಿದೆ. ಬಳಿಕ ಈ ಪ್ರಕರಣ, ಬರೀ ಅಭಿವೃದ್ಧಿಯಷ್ಟೇ ಅಲ್ಲ, ಪಾಲುದಾರಿಕೆ ಎಂದರೇನು, ಸ್ವಾಮಿ ವಿವೇಕಾನಂದರ ಸಂದೇಶ ಈ ಜಗತ್ತಿಗೆ ನೀಡಿರುವುದಾದರೂ ಏನು ಎಂಬ ಬಗ್ಗೆ ನಿಜವಾದ ಅರಿವು ಮೂಡಿಸಿ ನನ್ನ ಕಣ್ತೆರೆಸಿತು.
 
ಘನತೆ ಇಲ್ಲದ ಅಭಿವೃದ್ಧಿಯು ಒಂದು ಅಭಿವೃದ್ಧಿಯೇ ಅಲ್ಲ. ಅಭಿವೃದ್ಧಿ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಸಮಾನರು, ನಮ್ಮಲ್ಲಿ ಯಾವುದೇ ಭೇದಭಾವ ಇಲ್ಲ ಎಂಬ ಭಾವನೆ ಮೂಡಿಸಿದಾಗಷ್ಟೇ ಇಂತಹ ಘನತೆಯಿಂದ ಒಡಗೂಡಿದ ಅಭಿವೃದ್ಧಿಯನ್ನು ನಾವು ನಿರೀಕ್ಷಿಸಲು ಸಾಧ್ಯ.

(ನಿಮ್ಮ ಅನಿಸಿಕೆಗಳನ್ನು ಇಲ್ಲಿಗೆ ಕಳುಹಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT