ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡೆ ಕಾಣಿಸಿದ ಬದುಕು!

Last Updated 30 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಲಂಡನ್‌ನ ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ಯಾಕೆ ಕಲಿಸಬೇಕು ಎಂಬುದು ನನಗೂ ಒಂದು ಪ್ರಶ್ನೆಯಾಗಿತ್ತು. ತಮ್ಮ ಸಂಸ್ಕೃತಿ ಹಾಳಾಗುತ್ತಿದೆ, ಭಾರತೀಯ ಸಂಸ್ಕೃತಿಯ ಸಂಸ್ಕಾರಗಳನ್ನು ತಮ್ಮ ಮಕ್ಕಳು ರೂಢಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅಲ್ಲಿನ ಮಕ್ಕಳಿಗೆ ಇಲ್ಲಿನ ಕಲೆಗಳನ್ನು ಕಲಿಸುವ, ಹೊಸ ಅಭಿರುಚಿ ಮೂಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂಬುದು ನನಗೆ ಆಮೇಲೆ ತಿಳಿಯಿತು.

ಅಲ್ಲಿ, ಶಿವನಿಗೆ ಗಣಪತಿ ಪ್ರದಕ್ಷಿಣೆ ಬರುವುದು, ಶ್ರೀರಾಮ ತನ್ನ ತಂದೆಯ ಮಾತನ್ನು ಪಾಲಿಸುವುದು, ಶ್ರೀಕೃಷ್ಣ ತಂದೆ-ತಾಯಿಯರ ಸೆರೆಬಿಡಿಸುವುದು ಇತ್ಯಾದಿ ಪೌರಾಣಿಕ ಸಂಗತಿಗಳನ್ನು ಅಭಿನಯದ ಮೂಲಕ ಮಕ್ಕಳಿಗೆ ಮಾಡಿ ತೋರಿಸುತ್ತಿದ್ದೆ. ಬೇರೆಯದೇ ಸಂಸ್ಕೃತಿಯಲ್ಲಿ ಬೆಳೆದು ಬಂದ ಮಕ್ಕಳಿಗೆ ಯಕ್ಷಗಾನ ಹೇಗೆ ಹಿಡಿಸೀತು ಎಂಬ ಸಂದೇಹ ನನಗಾದರೋ ಇದ್ದೇ ಇತ್ತು. ಹಾಗೇನೂ ಆಗದೆ, ಅಲ್ಲಿನ ಪುಟಾಣಿಗಳು ಅದ್ಭುತವಾಗಿ ಸ್ಪಂದಿಸಿದರು.

ಅದರಲ್ಲೂ ನನ್ನ ಮನಸ್ಸಿನಲ್ಲಿ ಈಗಲೂ ಉಳಿದಿರುವುದು ವಿಶೇಷ ಸಾಮರ್ಥ್ಯದ ಮಕ್ಕಳೊಂದಿಗಿನ ಆರ್ದ್ರ ಅನುಭವ. ಅಲ್ಲಿ ನಾನು ಮಕ್ಕಳೊಂದಿಗೆ ಮಗುವೇ ಆಗಿ ಕುಣಿಯುತ್ತ್ದ್ದಿದಾಗ ಅದರ ಬಗ್ಗೆ ಕೆಲವರು ಆಕ್ಷೇಪಿಸಿದ್ದೂ ಇದೆ. ಆದರೆ, ಅಲ್ಲಿದ್ದ ಮುಖ್ಯ ಪ್ರೊಫೆಸರ್ ಒಬ್ಬರು ನನ್ನನ್ನು ಸಮರ್ಥಿಸಿದರು. ಇಂಗ್ಲಿಷಿನಲ್ಲಿ ನಡೆಯುತ್ತಿದ್ದ ಅವರ ಸಂವಾದಗಳೆಲ್ಲ ನನಗೆ ಹೇಗೆ ಅರ್ಥವಾಗುತ್ತದೆ! ಅಲ್ಲಿದ್ದ ಭರತನಾಟ್ಯ ಕಲಾವಿದೆಯರು ಇದನ್ನು ನನಗೆ ಹೇಳಿದಾಗಲೇ ನನಗೆ ಗೊತ್ತಾದದ್ದು.

ಈಗಲೂ, ಕುಂದಾಪುರ ಬಳಿಯ ಮೂಡುಬಗೆಯ ವಾಗ್ಜೋತಿ ಶಾಲೆಯ ಕಿವುಡ-ಮೂಕ ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆಯಲ್ಲಿ ಕಲಿಸುವಾಗ ನನಗೆ ಲಂಡನ್ನಿನ ಆ ಮಕ್ಕಳೇ ಕಣ್ಣೆದುರು ಬರುತ್ತಾರೆ. ನಾನು, ಅವರೊಂದಿಗೆ ಚೆಂಡೆ ಬಾರಿಸುತ್ತ ಕುಣಿಯುತ್ತಿದ್ದರೆ ಅವರೂ ನನ್ನ ಜೊತೆಗೆ ಕುಣಿಯುತ್ತಿದ್ದರು. ಚೆಂಡೆಯ ಧ್ವನಿ ಕೇಳಿದಾಗಲೆಲ್ಲ ಅವರ ಮುಖ ಅರಳುತ್ತಿತ್ತು. ಒಮ್ಮೆ ನಾನು ಏನು ಮಾಡಿದೆನೆಂದರೆ ಶ್ರವಣ ಸಾಮರ್ಥ್ಯವಿಲ್ಲದ ಒಂದು ಪುಟಾಣಿಯ ಕಿವಿಯ ಹತ್ತಿರಕ್ಕೆ ಚೆಂಡೆಯಿಟ್ಟು ನುಡಿಸಿದೆ.

ಆ ಪುಟಾಣಿಯ ಮುಖ ಮೆಲ್ಲನೆ ಅರಳಿತು. ಚೆಂಡೆಯ ಧ್ವನಿ - ಅದೂ ಈವರೆಗೆ ಕೇಳದ ಧ್ವನಿ, ಲಯಬದ್ಧವಾದ ನುಡಿತ - ಕೇಳಿದರೆ ಯಾರ ಮನಸ್ಸು ಅರಳುವುದಿಲ್ಲ ಹೇಳಿ!

ನಾನು ಮಾತ್ರ ಮುದುಡಿಕೊಂಡು ಕೂತಿದ್ದೆ. ಏನು ಮಾಡುವುದು ಹೇಳಿ, ಬದುಕು ಕೆಲವೊಮ್ಮೆ ಹೀಗೆ ಮದುಡಿಸಿಬಿಡುತ್ತದೆ! ಕಿಟಕಿಯ ಹೊರಗೆ ಕಣ್ಣು ಹಾಯಿಸಿದರೆ ಸಮುದ್ರ ಕುಂಭಕರ್ಣನಂತೆ ಮಲಗಿತ್ತು. ಸನಿಹವೇ ಇದ್ದ ಅಮ್ಮನ ಮಡಿಲಿಗೆ ಒರಗಿದೆ. ಕಪ್ಪಲಿನ (ಹಡಗಿನ) ಲಯಬದ್ಧ ಓಲಾಟದಲ್ಲಿ ನಿದ್ರೆಯಾವರಿಸಿದ್ದೇ ಗೊತ್ತಾಗಲಿಲ್ಲ. ಉಡುಪಿಯಿಂದ ಮಲ್ಪೆಗೆ ಬಂದು ಪಾಂಡಿ (ದೊಡ್ಡ ದೋಣಿ)ಯನ್ನು ಏರಿ, ದೂರ ನಿಂತಿದ್ದ ಕಪ್ಪಲನ್ನು ತಲುಪಿ, ಅದರ ಮೂಲಕ ತೇಲುತ್ತ ಮಹಾನಗರದೆಡೆಗೆ ಸಾಗಿದ್ದು ಚೆನ್ನಾಗಿ ನೆನಪು. ಇಸವಿ 1965 ಇರಬಹುದೋ ಏನೋ. ಆಗ ಊರಿನಿಂದ ಬೊಂಬಾಯಿಗೆ ನಾಲ್ಕು ದಿನಗಳ ಪ್ರಯಾಣ. ಜಲಮಾರ್ಗದ ಮೂಲಕವೇ ಸಾಗಬೇಕು. ಬೊಂಬಾಯಿಗೆ ಹೋಗುವುದೆಂದರೆ ಯಾರಿಗೆ ಖುಷಿಯಿಲ್ಲ ಹೇಳಿ! ಆದರೆ, ಅಂದಿನದ್ದು ಖುಷಿಯೊ ಸಂಕಟವೊ; ಏನಾದರೊಂದು! ಇರಲಿ.

ಅಮ್ಮ ತಟ್ಟಿ ಎಚ್ಚರಿಸಿ ಹೇಳಿದಳು, `ಬೊಂಬಾಯಿ ಬಂತು'.
ಯಾಕೆ ಬೊಂಬಾಯಿಗೆ ಬಂದದ್ದು- ನಾನು ಕೇಳಲಿಲ್ಲ. ಕೇಳುವ ಬುದ್ಧಿಯ ಪ್ರಾಯವೂ ಅದಲ್ಲ. ಏಳೋ ಎಂಟೋ ಅಥವಾ ಹತ್ತರೊಳಗಿನ ಹುಡುಗ ನಾನು. ಆ ಮಾಯಾನಗರಿಯಲ್ಲಿ ಇಳಿದವರೇ ನಮ್ಮನ್ನು ಕರೆದುಕೊಂಡು ಬಂದಿದ್ದ ಆ ಮಹನೀಯರನ್ನು ಅನುಸರಿಸಿ ಸಾಗಿದೆವು. `ಎಲ್ಲಿಗಮ್ಮೋ?' ಅಂತ ನಾನು ಕೇಳುತ್ತಿದ್ದರೂ ಅಮ್ಮ ಉತ್ತರ ಹೇಳುವ ಸ್ಥಿತಿಯಲ್ಲಿರಲಿಲ್ಲ. 

ಅದೊಂದು ಹಳೆಯ ಕಟ್ಟಡಗಳಿರುವ ಜಾಗವನ್ನು ದಾಟಿ ಒಂದು ದೊಡ್ಡ ಮಹಡಿ ಮನೆಯ ಬಳಿಗೆ ಬಂದೆವು. ಅಲ್ಲಿ ತುಂಬ ಜನ ಹೆಂಗಸರು. ನಾವು ಮನೆಯ ಹೊರಗೆ ಹೋಗಿ ನಿಂತಾಗ ನಮ್ಮ ಜೊತೆ ಬಂದಿದ್ದ ಮಹನೀಯರು ಒಬ್ಬಾಕೆಯನ್ನು ಹೊರಗೆ ಕರೆತಂದರು. ಅವಳನ್ನು ಕಂಡವರೇ ನನ್ನ ಅಮ್ಮ ಜೋರಾಗಿ ಅಳಲಾರಂಭಿಸಿದರು. ಅವರು ಅಳುವುದನ್ನು ನೋಡಿ ನನ್ನ ಕಣ್ಣಲ್ಲೂ ನೀರು. ಆದರೆ, ಈಗ ಅದನ್ನು ನೆನೆದರೆ ಕಣ್ಣುಗಳು ಒದ್ದೆಯಾಗಿ ಮನಸ್ಸು ಬಿಕ್ಕಳಿಸುತ್ತದೆ.
ಏಕೆಂದರೆ, ಅವಳು ನನ್ನ ಅಕ್ಕ!

ನನ್ನ ದೊಡ್ಡಕ್ಕ! ಹೇಳುತ್ತ ಹೋದರೆ ಅದೊಂದು ದೊಡ್ಡ ಕತೆ. ಅವಳಾಗಿಯೇ ಮುಂಬಯಿಗೆ ಬಂದಳೋ, ಯಾರಾದರೂ ಕರೆದುಕೊಂಡು ಬಂದರೋ ನಮಗೆ ಗೊತ್ತಿಲ್ಲ.

ಯಕ್ಷಗಾನಕ್ಕೂ ಈ ಕತೆಗೂ ಏನು ಸಂಬಂಧವೆಂದು ಕೇಳುವಿರಾ? ಏನೂ ಇಲ್ಲ. ಹೆಚ್ಚೆಂದರೆ ಒಂದು ಯಕ್ಷಗಾನ ಪ್ರಸಂಗ ಬರೆಯಬಹುದು ಅಷ್ಟೆ. ಬದುಕೇ ಕತೆಯಾಗುವುದು, ಕತೆಯೇ ಬದುಕಾಗುವುದು- ಇವೆಲ್ಲ ಜಗತ್ತಿನಲ್ಲಿ ಇದ್ದದ್ದೇ.
ಈಗಲೂ ದೊಡ್ಡಕ್ಕನನ್ನು ನೋಡಬೇಕೆನ್ನಿಸುತ್ತದೆ. ಜೀವಂತವಾಗಿದ್ದರೆ ಎಂಬತ್ತರ ಹತ್ತಿರ ಹತ್ತಿರದಲ್ಲಿರಬಹುದು. ಒಂದು ಕಾಲದಲ್ಲಿ ಅವಳೂ ನಮ್ಮ ಸಂಸಾರಕ್ಕೆ ಆಧಾರವಾಗಿದ್ದಳು ಎಂಬುದನ್ನು ಅಲ್ಲವೆನ್ನುವುದಾದರೂ ಹೇಗೆ? ಆಮೇಲೆ ಪುನಃ ಸಂಪರ್ಕ ತಪ್ಪಿಹೋಯಿತು.

ಮತ್ತೆ ಎಲ್ಲಿ ಹೋದಳೋ ಗೊತ್ತಾಗಲಿಲ್ಲ. ಏತದಿಂದ ಬಿದ್ದು ಬೆನ್ನುಮೂಳೆ ಮುರಿದುಕೊಂಡು ಅಸ್ವಸ್ಥರಾಗಿದ್ದ ಅಪ್ಪ, ಕೂಲಿ ಕೆಲಸಕ್ಕೆ ಹೋಗಿ ಸಂಸಾರ ಪೊರೆಯುತ್ತಿದ್ದ ಅಮ್ಮ, ಅಕ್ಕನ ಕಣ್ಮರೆಯಿಂದ ಕಂಗಾಲಾಗಿದ್ದ ಅಣ್ಣಂದಿರು... ಇವರೆಲ್ಲರ ಮಧ್ಯೆ ನಮ್ಮ ಸಂಸಾರದ ರಥ ಕುಸಿಯದಂತೆ ಆಧರಿಸಿದವಳು ನನ್ನ ಎರಡನೆಯ ಅಕ್ಕ...
ಈಗಲೂ ಅಮ್ಮನ ಪ್ರತಿರೂಪದಂತಿದ್ದಾಳೆ... ಆ ಅಕ್ಕ.

`ತಂಗೀ' ಎಂದು ಕರೆದ ದನಿಗೆ ನಾನು ಹೆದರಿದ್ದೆನೋ ಇಲ್ಲವೋ ಗೊತ್ತಿಲ್ಲ. ಅದು ಸುಧನ್ವನ ಗಂಭೀರ ಧ್ವನಿ. ಹಾರಾಡಿ ರಾಮಗಾಣಿಗರಂಥ ಮೇರು ಕಲಾವಿದರ ಒಡನಾಟದಲ್ಲಿದ್ದ ಉಡುಪಿ ಬಸವನವರ ವೇಷವೆಂದ ಮೇಲೆ ಆ ಗಾಂಭೀರ್ಯ ಇರಲೇಬೇಕಲ್ಲ. ನನ್ನದು ಸುಧನ್ವನ ತಂಗಿಯ ಪಾತ್ರ. ಕುವಲೆ. ಇದನ್ನು ನಾನು ಯಾಕೆ ಹೇಳಿಕೊಳ್ಳಲೇಬೇಕೆಂದರೆ ಇದು ನನ್ನ ಯಕ್ಷಗಾನದ ಮೊತ್ತಮೊದಲ ವೇಷ. ಆಗ ಆ ಪ್ರದರ್ಶನದಲ್ಲಿ ಪ್ರಭಾವತಿಯ ಪಾತ್ರ ಮಾಡಿದವರು ಮಾರ್ಗೋಳಿ ಗೋವಿಂದ ಸೇರೆಗಾರರು.

`ಅಣ್ಣ ಕೇಳ್ ಅಚ್ಚುತಾರ್ಜುನರಿದರಾಗಿ ರಣದಿ...
ಬೆನ್ನ ತೋರಿಸದೆ ಹಿಮ್ಮೆಟ್ಟಿದರೆ...'

ಅರ್ಥವನ್ನು ಹೇಳಿಕೊಟ್ಟು ನನ್ನನ್ನು `ಕುವಲೆ'ಯನ್ನಾಗಿ ಸಿದ್ಧಗೊಳಿಸಿದವರು ಗುರುಗಳಾದ ಗುಂಡಿಬೈಲು ನಾರಾಯಣ ಶೆಟ್ಟರೇ. ನಾನು, ಹಿಂದೊಮ್ಮೆ `ಭೀಷ್ಮ ವಿಜಯ' ತಾಳಮದ್ದಲೆಯ ಅಜಪುಚ್ಚ, ಗಜಪುಚ್ಚ ಪಾತ್ರಕ್ಕೆ ಅವರು ಬರೆದುಕೊಟ್ಟ ಅರ್ಥವನ್ನು ಓದಲಾಗದೆ, ಓದು ಬರಹ ಬಾರದ ನನ್ನಂಥವನಿಗೆ ಯಕ್ಷಗಾನ ಒಲಿಯಲಾರದು ಎಂಬ ಭಾವನೆಯಲ್ಲಿ ಹೇಳದೆ ಕೇಳದೆ ಮತ್ತೆ ಟೈಲರಂಗಡಿಗೆ ಸೇರಿಬಿಟ್ಟಿದ್ದೆ. ಗುಬ್ಬಿ (ಬಟನ್) ಹಾಕುವುದು, ಅಂಚು ಹೊಲಿಯುವುದು ನನಗೆ ಮೊದಲೇ ಗೊತ್ತಿತ್ತಲ್ಲವೆ? ಇದನ್ನು ತಿಳಿದ ಗುಂಡಿಬೈಲು ನಾರಾಯಣ ಶೆಟ್ಟರು ಮರುದಿನವೇ ಅಂಗಡಿಗೆ ಬಂದು ನನ್ನನ್ನು ದರದರನೆ ಎಳೆದುಕೊಂಡು ಹೋದರು.

`ನಿನಗೆ ಕಷ್ಟಪಟ್ಟು ಕಲಿಯಲೇನು ಸಂಕಟ' ಎಂದು ಗದರಿಸಿದ ರೀತಿ ಅಂದು ನನಗೆ ನಿರ್ದಯವಾಗಿ ಕಂಡರೂ ಈಗ ನನಗೆ ಅದರ ಹಿಂದೆ ಇದ್ದ ಪ್ರೀತಿ ಅರ್ಥವಾಗುತ್ತಿದೆ. ಕಾರಂತರಾದಿಯಾಗಿ ಇಂಥ ವ್ಯಕ್ತಿಗಳು ನನಗೆ ಬದುಕಿನಲ್ಲಿ ಸಿಗದೇ ಇರುತ್ತಿದ್ದರೆ ನನ್ನ ಹೆಸರಿನ ಮುಂದೆ ನೀವೆಲ್ಲ ಸೇರಿಸುವ `ಗುರು' ಎಂಬ ಪೂರ್ವಪ್ರತ್ಯಯವೇ ಇರುತ್ತಿರಲಿಲ್ಲ. `ಕುವಲೆ' ಪಾತ್ರಕ್ಕೂ ನಾನು ಅರೆಮನಸ್ಸಿನಲ್ಲಿಯೇ ತಯಾರಾದದ್ದು. ಆಗ ನನ್ನ ವಯಸ್ಸು ಹದಿನಾಲ್ಕು- ಹದಿನೈದು. ಆದರೆ, ಅದು ಉಡುಪಿ ಬಸವನವರ ಜೊತೆಗೆ ಮಾಡಿದ ವೇಷ ಎಂಬುದು ಇವತ್ತಿಗೂ ರೋಮಾಂಚನ ತರುವ ಸಂಗತಿಯಾಗಿದೆ.  

ಅಂದಿನ `ಸುಧನ್ವ ಮೋಕ್ಷ' ಪ್ರಸಂಗವು ಬನ್ನಂಜೆ ದೇವಸ್ಥಾನದಲ್ಲಿ ಚಿಕ್ಕಮೇಳವನ್ನು ಆರಂಭಿಸಿದ ಶುಭಾವಸರದಲ್ಲಿ ಪ್ರದರ್ಶನಗೊಂಡದ್ದು.  ಹುಡುಗರಿಗೆ ಅಭ್ಯಾಸವಾಗಲಿ ಎಂಬ ಉದ್ದೇಶದಲ್ಲಿ ಭಾಗವತ ನಾರಾಯಣ ಶೆಟ್ಟರಂಥ ಹಿರಿಯರು ಚಿಕ್ಕಮೇಳವನ್ನು ಹೊರಡಿಸಿದ್ದರು. ಚಿಕ್ಕಮೇಳವೆಂದರೆ, ಮಳೆಗಾಲದ ಬಿಡುವಿನಲ್ಲಿ ರಾಧಾಕೃಷ್ಣರ ವೇಷ ಧರಿಸಿ ಸಂಜೆಯ ಹೊತ್ತು ವಿಭಿನ್ನ ಸ್ತ್ರೀ-ಪುರುಷ ಪಾತ್ರಗಳ ಸಂಭಾಷಣೆ- ಅಭಿನಯಗಳನ್ನು ಮನೆ ಮನೆಗಳ ಚಾವಡಿಗಳಲ್ಲಿ ಪ್ರದರ್ಶಿಸುವುದು. ರಾಧಾಕೃಷ್ಣರು ಮನೆಯೊಳಗೆ ಪ್ರವೇಶಿಸುವಾಗ ಅಕ್ಷತೆಯನ್ನು ತಲೆಗೆ ಹಾಕಿ ಪ್ರತಿ ಮನೆಯವರು ಸ್ವಾಗತ ಕೋರುತ್ತಿದ್ದರು.

ಅವರು ಕೊಟ್ಟ ಅಕ್ಕಿ- ತೆಂಗಿನಕಾಯಿ- ಕಾಣಿಕೆಗಳನ್ನು ಕಟ್ಟಿಕೊಂಡು ಬಂದರೆ ಅದೇ ಪಾತ್ರಧಾರಿಗಳಿಗೆ ಜೀವನಾಧಾರ. ನಾನೂ ಇಂಥ ಚಿಕ್ಕಮೇಳದಲ್ಲಿ ಕೆಲವೊಮ್ಮೆ ರಾಧೆ, ಮತ್ತೆ ಕೆಲವೊಮ್ಮೆ ಕೃಷ್ಣನ ವೇಷ ಧರಿಸಿ ಮನೆಮನೆಗೆ ಹೋಗಿ ಕುಣಿದದ್ದಿದೆ. ಇದು ಅಂದಿನ ಕಲಾವಿದರಿಗೆ ಅನೌಪಚಾರಿಕ ತರಬೇತಿ ಶಾಲೆಯೇ ಆಗಿತ್ತು.

ಯಕ್ಷಗಾನ ತರಬೇತಿ ಎಂದಾಗ ನಾನು ಒಂದು ಮಾತು ಹೇಳಬೇಕು. ಸಾಂಪ್ರದಾಯಿಕ ಯಕ್ಷಗಾನವನ್ನು ಅಂದಿನ ಗುರುಗಳು ಎಷ್ಟೊಂದು ಕಠಿಣ ಕ್ರಮದಲ್ಲಿ ಕಲಿಸುತ್ತಿದ್ದರು! ತಲೆಯಲ್ಲಿ ಆರೇಳು ಸೇರು (ಸುಮಾರು ಹತ್ತು ಕೇಜಿ) ಮರಳು ತುಂಬಿರುವ ಗೋಣಿಚೀಲ. ಅದನ್ನು ಹೊತ್ತುಕೊಂಡು ತಿತ್ತಿತ್ತೈ...ತಿತ್ತಿತ್ತೈ... ಎಂದು ಹೇಳುತ್ತ ಆರಂಭದ ಹೆಜ್ಜೆಗಳನ್ನು ಹಾಕಬೇಕು. ತಲೆಯಲ್ಲಿ ಭಾರವಿರುವುದರಿಂದ ಸೊಂಟವೂ ಬಳುಕುತ್ತದೆ. ಮರಳಿನ ಗೋಣಿಯೇನಾದರೂ ಕೆಳಗೆ ಬಿದ್ದರೆ ಬೆನ್ನಿಗೆ ಏಟು! ಎರಡು ಕೈಗಳನ್ನು ಮುಂದೆ ಚಾಚಿ ಬಾರುಕೋಲನ್ನು ಇಟ್ಟುಕೊಂಡು ಅಂಗೈ ತಿರುಗಿಸುತ್ತ ಕುಣಿಯಬೇಕು.

ಬಿದ್ದರೆ, ಬಿದ್ದ ಕೋಲು ಬೆನ್ನ ಮೇಲಿರುತ್ತಿತ್ತು. ಇವೆಲ್ಲ ನಡೆಯುತ್ತಿದ್ದುದು ಗುರುಗಳ ಮನೆಗಳ ಬಾವಿಕಟ್ಟೆಯ ಬಳಿ. ನನಗನ್ನಿಸುವಂತೆ ಇಂಥ ಅನೌಪಚಾರಿಕ ಪ್ರಾದೇಶಿಕ ಕಲಾಕಲಿಕಾ ಮಾದರಿಗಳು `ಕಲಾಕ್ಷೇತ್ರ', `ಕಲಾಮಂಡಲ'ಗಳಿಗಿಂತ ಕಡಿಮೆಯದ್ದೇನಲ್ಲ. ಯಕ್ಷಗಾನವನ್ನು ಇಂಥ ಕಠಿಣ ಕ್ರಮದಲ್ಲಿ ಕಲಿತ ಕಾರಣದಿಂದಲೋ ಏನೋ, ನನ್ನ ವಿದ್ಯಾರ್ಥಿಗಳ ಪಾಲಿಗೂ ನಾನು ನಿಷ್ಠುರವಾದಿಯಾಗಿದ್ದೇನೆ ಅಂತನ್ನಿಸುತ್ತದೆ.

ಹುಡುಗಾಟಿಕೆಯ ದಿನಗಳಲ್ಲಿ ಅನೇಕ ಬಾರಿ ಗುರುಗಳ ಮನೆಯಿಂದ ತಪ್ಪಿಸಿಕೊಂಡು ಓಡಿಹೋಗುವುದಕ್ಕೂ ಇದೇ ಕಾರಣವಿರಬಹುದು.

“ನೀನು ಓಡಿ ಬಂದವನೆ?” ಎಂದು ನಾನು ಕೇಳಬೇಕೆಂದುಕೊಂಡಿದ್ದೆ. ಆದರೆ, ಕೇಳಲಿಲ್ಲ. ಅವನೇ ಹೇಳಿದ: ಬಂದದ್ದು ಇಂಜಿನಿಯರಿಂಗ್ ಕಲಿಯಲು. ಆದರೆ, ಇಲ್ಲಿ ರೈಲ್ವೇ ಸ್ಟೇಶನ್ ಕಾಯುವ ಕೆಲಸ ಮಾಡಿದರೆ ಭಾರತದಲ್ಲಿ ಸಿಗುವ ನಾಲ್ಕೈದು ಪಟ್ಟು ಸಂಬಳ ಸಿಗುತ್ತದೆ. ಹತ್ತು ವರ್ಷ ದುಡಿದರೂ ಸಾಕು, ಊರಿನಲ್ಲಿ ನೆಮ್ಮದಿಯಲ್ಲಿ ದಿನದೂಡಬಹುದು.
ಲೀಡ್ಸ್ ರೈಲ್ವೇ ಸ್ಟೇಶನ್‌ನಲ್ಲಿ ಇಂಗ್ಲಿಷ್ ಬಾರದ ನಾನು ಪ್ರತೀದಿನ ರೈಲನ್ನು ಕಾಯುತ್ತ ನಿಂತಿದ್ದಾಗ ಆ ಮನುಷ್ಯ ನನ್ನನ್ನೇ ನೋಡುತ್ತಿದ್ದ. ಪ್ರತೀದಿನ ಅದೇ ಜಾಗದಲ್ಲಿ ನಿಲ್ಲುತ್ತಿದ್ದ. ನನಗಾದರೋ ಒಂದು ರೀತಿಯ ಭಯ. ಭಾರತೀಯನಂತೇನೋ ಕಾಣಿಸುತ್ತಿದ್ದ. ನನಗೆ ಗೊತ್ತಿರುವ ಹರಕುಮುರುಕು ಹಿಂದಿಯಲ್ಲಿ ಮಾತನಾಡಿಸೋಣವೆಂದು ಅನ್ನಿಸಿದರೂ ಸುಮ್ಮನಿರುತ್ತಿದ್ದೆ.

ಆದರೆ, ಒಮ್ಮೆ ಅವನು ನನ್ನನ್ನು ನೋಡಿ ನಕ್ಕದ್ದನ್ನು ನೋಡಿ ಕೇಳಿಯೇ ಬಿಟ್ಟೆ, ಅದೂ ಕನ್ನಡದಲ್ಲಿ, “ಯಾವೂರು... ನಿಮ್ಮದು?”
“ಗುಲ್ಬರ್ಗಾರ್ರೀ...” ಅವನೆಂದಾಗ ನಾನು ಸಂತೋಷದಲ್ಲಿ ಅಷ್ಟೆತ್ತರ ನೆಗೆದುಬಿಟ್ಟೆ. ಪರದೇಶದಲ್ಲಿ ನಮ್ಮ ಭಾಷೆ ಗೊತ್ತಿರುವವರನ್ನು ಕಂಡರೆ ಆಗುವ ಸಂತೋಷವದು. ಅವನು ನನ್ನ ಸ್ನೇಹಿತನಾಗಿ ಬಿಟ್ಟ. ನಾನು ಕಲಾ ರಾಯಭಾರಿಯಾಗಿ ಬಂದಿರುವ ವಿಷಯವನ್ನು ಕೇಳಿ ಅವನಿಗೆ ಅತೀವ ಸಂತೋಷವಾಯಿತು.

ಇಂಜಿನಿಯರಿಂಗ್ ಕಲಿಯಲು ಲಂಡನ್‌ಗೆ ಬಂದವನು ಆ ಆಸೆಯನ್ನು ತೊರೆದು ದುಡಿದು ಸಂಪಾದಿಸುವುದೇ ಉತ್ತಮವೆಂದು ರೈಲ್ವೇ ಸ್ಟೇಶನ್‌ನ ಗಾರ್ಡ್ ಕೆಲಸಕ್ಕೆ ಸೇರಿದ್ದ. ಮುಂದೆ ಅವನೇ ನನಗೆ ಅಲ್ಲಿಂದಿಲ್ಲಿಗೆ ಹೋಗುವ ರೈಲುಗಳನ್ನು ಗುರುತಿಸಿ ಮಾರ್ಗದರ್ಶನ ನೀಡುತ್ತಿದ್ದ.

ನಾನು ಯಕ್ಷಗಾನ ಕಲಿಸುವ ಶಾಲೆಗಳಿರುವ ವ್ಯೆತ್ಸ್‌ಬರ್ಗ್‌ನಿಂದ ಮರಳುವ ರೈಲ್ವೇ ಸ್ಟೆಶನ್‌ಗೂ ನಾನು ಉಳಿದುಕೊಂಡಿದ್ದ ಬುತ್ರಾಯ್‌ಲೇನ್‌ಗೂ ನಾಲ್ಕೈದು ಕಿ.ಮೀ.ಗಳ ಅಂತರವಿತ್ತು. ಟ್ಯಾಕ್ಸಿಗೆ ಕೊಡುವ ಒಂದೆರಡು ಪೌಂಡುಗಳನ್ನು ಉಳಿಸುವ ಉದ್ದೇಶದಿಂದ ನಾನು ಚೆಂಡೆಯನ್ನು ಬಗಲಿಗೇರಿಸಿ ನಡೆದು ಸಾಗುತ್ತಿದ್ದೆ. ಒಮ್ಮೆ ಮುಲ್ಕಿಯಲ್ಲಿ ಆಟವೊಂದಕ್ಕೆ ಚೆಂಡೆ ವಾದಕನಾಗಿ ಹೋಗಿದ್ದಾಗ, ಆ ಪ್ರದರ್ಶನ ರದ್ದಾಗಿ, ಮರಳಿ ಬರಲು ಜೇಬಿನಲ್ಲಿ ಪೂರ್ಣ ದುಡ್ಡಿಲ್ಲವಾಗಿ, ಚೆಂಡೆಯನ್ನು ಹೊತ್ತುಕೊಂಡು ನಡೆದುಕೊಂಡೇ ಮರಳಿದ್ದು ನೆನಪಾಯಿತು. ಚೆಂಡೆಯಾದರೂ ಕಡಿಮೆ ಭಾರದ್ದಲ್ಲ! 

ಆ ಲಂಡನ್ ಮಹಾನಗರದ ರಸ್ತೆಯಲ್ಲಿ ನನ್ನಂಥ ಅಪರಿಚಿತ ನಡೆದುಕೊಂಡು ಸಾಗುವಾಗ ನನ್ನ ಸನಿಹ ಕಾರೊಂದು ನಿಂತು, `ಬರುತ್ತೀರಾ?' ಎಂದು ಹಿಂದಿಯಲ್ಲಿ ಕೇಳಿದಾಗ ಆಶ್ಚರ್ಯವಾಗದಿರುತ್ತದೆಯೆ? ಮೊದಲು ಆತ ಕೇಳಿದ್ದೇ ಹೀಗೆ, ``ನೀವು ಭಾರತದವರಾ? ಪಾಕಿಸ್ತಾನದವರಾ?'. ನಾನು ಭಾರತದವನೆಂದೆ. `ಹೋ ಬನ್ನಿ... ನಾನು ಪಾಕಿಸ್ತಾನದವನು. ನಾವು ನೆರೆ ರಾಷ್ಟ್ರದವರು. ಜೀವನೋಪಾಯಕ್ಕೆ ನಾನಿಲ್ಲಿ ಹಣ್ಣಿನಂಗಡಿ ಇಟ್ಟಿದ್ದೇನೆ...'- ಹೀಗೆ ಮಾತು ಸಾಗಿತು.

ಅವನೂ ನನಗೆ ಗೆಳೆಯನಾಗಿ ಬಿಟ್ಟ. ಪ್ರತೀದಿನ ಅವನದೇ ಕಾರಿನಲ್ಲಿ ಮರಳುತ್ತಿದ್ದೆ. ಅದರಲ್ಲೂ ಅಚ್ಚರಿಯ ಸಂಗತಿಯೆಂದರೆ, ಅವನು ಯಕ್ಷಗಾನದ ಬಗ್ಗೆ ಕೇಳಿ, ದೃಶ್ಯ ದಾಖಲೆಗಳನ್ನು ನೋಡಿ ಖುಷಿಪಟ್ಟದ್ದು. ಅವನ ಜೊತೆಗಿದ್ದ ಮತ್ತೆ ಕೆಲವರ  ಪರಿಚಯವಾಯಿತು. ನಾನು ಪ್ರತೀದಿನ `ಯೋಗಾಭ್ಯಾಸ' ಮಾಡುತ್ತೇನೆ ಎಂದು ಅವರಿಗೆ ಗೊತ್ತಾಗಿ ನನ್ನಿಂದ ಯೋಗ ಕ್ಲಾಸ್ ತೆಗೆದುಕೊಂಡರು! ಅಂತೂ ಲಂಡನ್‌ನಿಂದ ಮರಳುವ ದಿನ ಬಂತು...

ಮರಳಿ ಮರಳಿ ಯತ್ನವ ಮಾಡಿ, ಉಡುಪಿ `ಯಕ್ಷಗಾನ ಕೇಂದ್ರ'ದ ಬಾಗಿಲಲ್ಲಿ ನಿಂತಿದ್ದೆ. ಅಲ್ಲಿದ್ದ ಸಹೃದಯರಿಂದಾಗಿ ನನ್ನ ಪಾಲಿಗೆ ಆ ಬಾಗಿಲು ತೆರಿದಿತ್ತು. ತಲೆ ಎತ್ತಿ ನೋಡಿದರೆ! ತಲೆಗೊಂದು ಟೊಪ್ಪಿಗೆ, ಅರೆ ಹಣ್ಣಾದ ಮೀಸೆ, ಗಂಭೀರ ಭಾವದ ಮುಖಮುದ್ರೆ....
ಯಾರವರು!
ಮತ್ತಾರು; ಗುರು ಮಟಪಾಡಿ ವೀರಭದ್ರ ನಾಯಕರು!

(ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT