ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಪಾ ಹೂವುಗಳು

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ  ರಾಜನೊಬ್ಬನಿಗೆ ಇಬ್ಬರು ಹೆಂಡತಿಯರಿದ್ದರು. ಮೊದಲಿನವಳಿಗೆ ಮಕ್ಕಳಾಗಲಿಲ್ಲವೆಂದು ಎರಡನೆಯವಳನ್ನು ಮದುವೆಯಾಗಿದ್ದ. ಆಕೆ ಸುಂದರಿ, ಮುಗ್ಧೆ ಆದರೆ ಮೂಕಿ.

ಕಿರಿಯ ರಾಣಿ ಬಸುರಿ ಎಂದು ಗೊತ್ತಾದ ಕೂಡಲೇ ಹಿರಿಯ ರಾಣಿಯ ಹೊಟ್ಟೆ ಉರಿಯಿತು. ಚಿಕ್ಕವಳಿಗೆ ಮಗುವಾದರೆ ತನ್ನ ಸ್ಥಾನ ಅಭದ್ರವಾಗುತ್ತದೆಂದು ಭಾವಿಸಿ ಯೋಜನೆಯೊಂದನ್ನು ಮಾಡಿದಳು.

ಒಬ್ಬ ಮಂತ್ರಿಗೆ ಹಣ ನೀಡಿ ತನ್ನ ಕಡೆಗೆ ಒಲಿಸಿಕೊಂಡಳು. ಕಿರಿಯ ರಾಣಿಗೆ ಹೆರಿಗೆಯಾಗುವ ಸಮಯದಲ್ಲಿ  ಹಿರಿಯ ರಾಣಿಯ ಯೋಜನೆಯಂತೆ ಮಂತ್ರಿ ರಾಜನ ಹತ್ತಿರ ಬಂದು ರಾಜ್ಯದ ಗಡಿಯಲ್ಲಿ  ಡಕಾಯಿತರು ನುಗ್ಗಿದ್ದಾರೆಂದು ಗಾಬರಿ ಹುಟ್ಟಿಸಿದ.

ಹಿರಿಯ ರಾಣಿ ತಾನೇ ಸ್ವತಃ ಕಿರಿಯ ರಾಣಿಯ ಹೆರಿಗೆಯ ಜವಾಬ್ದಾರಿ ಹೊರುವುದಾಗಿ ಭರವಸೆ ನೀಡಿ ಅವನನ್ನು ಕಳುಹಿಸಿದಳು. ಕಿರಿಯರಾಣಿಗೆ ಸುಂದರವಾದ ಗಂಡು ಮಗುವಾಯಿತು. ಹಿರಿಯ ರಾಣಿ ತಕ್ಷಣ ಮಗುವನ್ನು ಒಂದು ಬಟ್ಟೆಯ ಬುಟ್ಟಿಯಲ್ಲಿಟ್ಟು ಹೊರತಂದು, ಮಗುವನ್ನು ಕೊಂದು ಅರಮನೆಯ ಹೊರಭಾಗದಲ್ಲಿ  ಹೂಳಿ ಬಿಟ್ಟಳು.

ನಂತರ ಒಂದು ಕೋತಿಯ ಮರಿಯನ್ನು ತಂದು ಕಿರಿಯ ರಾಣಿಯ ಹಾಸಿಗೆಯ ಪಕ್ಕದಲ್ಲಿದ್ದ ತೊಟ್ಟಿಲಿನಲ್ಲಿ   ಇಟ್ಟಳು. ರಾಜ ಬಂದೊಡನೆ ತಾನೇ ಜೋರಾಗಿ ಅಳುತ್ತ ಚಿಕ್ಕ ರಾಣಿ ತಮ್ಮ ಮನೆತನಕ್ಕೆ ತಂದ ಕೆಟ್ಟ ಹೆಸರಿನ ಬಗ್ಗೆ ದೂರಿದಳು. ರಾಜ ತೊಟ್ಟಿಲಲ್ಲಿದ್ದ ಕೋತಿಯ ಮರಿಯನ್ನು ನೋಡಿ ಮುಖ, ಕಣ್ಣು ಕೆಂಪು ಮಾಡಿಕೊಂಡ.

ಆದರೆ, ಅಳುತ್ತಿದ್ದ ಮಾತನಾಡಲಾಗದೇ ಒದ್ದಾಡುತ್ತಿದ್ದ ಕಿರಿಯ ಹೆಂಡತಿ  ಕಂಡು ಸಮಾಧಾನ ಮಾಡಿಕೊಂಡ. ಇದೇ ರೀತಿ ಏಳು ಬಾರಿ ಆಯಿತು. ಹಿರಿಯ ರಾಣಿ ಪ್ರತಿ ಬಾರಿಯೂ ಹುಟ್ಟಿದ ಗಂಡುಮಗುವನ್ನು ಕೊಂದು ಹಿಂದಿನ ಮಗುವಿನ ಪಕ್ಕದಲ್ಲೇ ಹೂಳಿಬಿಡುತ್ತಿದ್ದಳು. ಇದಲ್ಲದೇ ಕಿರಿಯರಾಣಿಯ ಬಗ್ಗೆ ವಿಷಕಾರುತ್ತಿದ್ದಳು. ಪ್ರತಿಸಲವೂ ಕೋತಿಯ ಮರಿಯನ್ನು ಹೆತ್ತ ಕಿರಿಯ ರಾಣಿಯ ಬಗ್ಗೆ ಜುಗುಪ್ಸೆ ಬರುವಂತೆ ಮಾಡುವಲ್ಲಿ  ಯಶಸ್ವಿಯಾದಳು.

ರಾಜ ಕಿರಿಯ ರಾಣಿಯನ್ನು ಅರಮನೆಯ ಹೊರಗೆ ಒಂದು ಗುಡಿಸಲನ್ನು ಕಟ್ಟಿ ಕಳುಹಿಸಿಬಿಟ್ಟ. ಮುಂದೆ ನಾಲ್ಕೈದು ವರ್ಷಗಳಲ್ಲಿ  ಏಳು ಮಕ್ಕಳನ್ನು ಹೂತಿದ್ದ ಸ್ಥಳದಲ್ಲಿ  ಏಳು ಗಿಡಗಳಾದವು. ಅವುಗಳಲ್ಲಿ  ಸುವಾಸನೆ ಬೀರುವ ಸುಂದರ ಹೂಗಳು! ವಿಚಿತ್ರವೆಂದರೆ ಮರಗಳು ಯಾರಿಗೂ ಹೂಗಳನ್ನು ಕೊಡುತ್ತಿರಲಿಲ್ಲ. ಆದರೆ ಕಿರಿಯರಾಣಿ ಹತ್ತಿರ ಹೋದರೆ ಸಾಕು ತಮ್ಮ ಕೊಂಬೆಗಳನ್ನು ಬಾಗಿಸಿ ಅವಳ ಮೇಲೆ ಹೂಗಳ ಮಳೆ ಸುರಿಸುತ್ತಿದ್ದವು.

ರಾಜನಿಗೆ ಈ ವಿಷಯ ತಿಳಿದು ಆ ಹೂಗಳನ್ನು ತರಲು ಸೇವಕರನ್ನು ಕಳುಹಿಸಿದ. ಅವರು ಹತ್ತಿರ ಹೋದೊಡೊನೆ  ಯಾರೂ ಬರಬೇಡಿ, ನಿಮಗೆ ಹೂ ಕೊಡುವುದಿಲ್ಲ  ಎಂದು ಗಿಡಗಳು ಅರಚುತ್ತಿದ್ದವು. ರಾಜ ಆಶ್ಚರ್ಯದಿಂದ ತಾನೇ ಹಿರಿಯ ರಾಣಿಯನ್ನು ಕರೆದುಕೊಂಡು ಹೋದ.

ಆಕೆಗೋ ಭಯ, ಯಾಕೆಂದರೆ ಅವಳಿಗೆ ಅವು ಮಕ್ಕಳ ದೇಹದಿಂದ ಬಂದ ಮರಗಳು ಎಂಬುದು ತಿಳಿದಿತ್ತು. ಆದರೂ ಅನಿವಾರ್ಯವಾಗಿ ರಾಜನ ಜೊತೆಗೆ ಹೋದಳು. ಈಕೆ ಹತ್ತಿರ ಹೋದೊಡನೆ ಎಲ್ಲ ಮರಗಳು ವಿಕಾರವಾಗಿ,  `ಕೊಲೆಗಾರ್ತಿ, ನೀನು ದೂರ ಹೋಗು~ ಎಂದು ಕೂಗಿ ಕೊಂಬೆಗಳನ್ನು ಮೇಲಕ್ಕೆತ್ತಿಕೊಂಡವು.

ಮತ್ತೆ `ರಾಜಾ, ದಯವಿಟ್ಟು ನಮ್ಮ ತಾಯಿಯನ್ನು ಕರೆದು ತಾ~  ಎಂದು ದೀನತೆಯಿಂದ ಬೇಡಿದವು.  `ಯಾರು ನಿಮ್ಮ ತಾಯಿ~  ಎಂದು ಕೇಳಿದಾಗ, `ಕಿರಿಯರಾಣಿ ನಮ್ಮ ತಾಯಿ, ಹಿರಿಯರಾಣಿ ನಮ್ಮ ಕೊಲೆಗಾರ್ತಿ~  ಎಂದು ಬಿಕ್ಕಿದವು. ಆಗ ಹಿರಿಯರಾಣಿ ರಾಜನ ಕಾಲಿಗೆ ಬಿದ್ದು ಸತ್ಯಸಂಗತಿ ತಿಳಿಸಿದಳು.

ರಾಜ ಕೋಪದಿಂದ ಆಕೆಯನ್ನು ರಾಜ್ಯದಿಂದ ಹೊರಹಾಕಿ, ಕಿರಿಯರಾಣಿಯೊಡನೆ ಸುಖವಾಗಿ ಸಂಸಾರ ಮಾಡಿದ. ಅವಳ ಮರಗಳು ಚಂಪಾ ಹೂವಿನ ವೃಕ್ಷಗಳು. ಹೀಗೆ ಸೃಷ್ಟಿಯಾದದ್ದು ಚಂಪಾ ಹೂವಿನ ಮರಗಳು ಎಂದು ರಾಜಸ್ತಾನದ ಜಾನಪದ ಕಥೆ ಹೇಳುತ್ತದೆ.

ಚಂಪಾ ಸುಂದರವಾದ ಹೂವು. ಅದನ್ನು ಸಂಸ್ಕೃತದಲ್ಲಿ  ಕ್ಷೀರಚಂಪಾ ಎಂದೂ, ತಮಿಳಿನಲ್ಲಿ  ಪೆರುಂಗಲ್ಲಿ , ತೆಲುಗಿನಲ್ಲಿ  ಅರ್ಹತೆಗನ್ನೇರು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇದನ್ನು ದೇವಸ್ಥಾನದ ಮರ ಎಂದು ಗುರುತಿಸುತ್ತಾರೆ. ನಮ್ಮ ಪರಂಪರೆಯಲ್ಲಿ  ಪ್ರತಿಯೊಂದಕ್ಕೂ ಒಂದೊಂದು ಸುಂದರ ಸಂಕೇತಗಳಿವೆ.

ಸತ್ತ ಮಕ್ಕಳ ದೇಹದಿಂದ ಕೂಡ ಬರುವುದು ಸುಂದರವಾದ ಹೂವಿನ ಮರ. ಹೀಗೆ ಪ್ರತಿಯೊಂದು ಮರಕ್ಕೊಂದು ಜಾನಪದ, ಪೌರಾಣಿಕ ಕಥೆ ಇದೆ. ತಾತ್ವರ್ಯ ಇಷ್ಟೇ, ನಮ್ಮ ಸುತ್ತಮುತ್ತಲಿನ ಎಲ್ಲ ವಸ್ತುವಿಗೂ ಅದರದೇ ಆದ ಹಿನ್ನೆಲೆ ಇದೆ, ಅದಕ್ಕೊಂದು ಚೈತನ್ಯದ ಸ್ಫ್ಫುರಣೆ ಇದೆ ಎಂದು ನಂಬುವುದು ಭಾರತೀಯ ಪರಂಪರೆಯ ಪ್ರಮುಖ ಲಕ್ಷಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT