ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಿತ್ರಿಕ ಅಡ್ಡಿ ಮತ್ತು ಇಂದಿರಾ ಕ್ಯಾಂಟೀನ್...

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕಳೆದ ವರ್ಷದ ಮೇ 19ರಂದು ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ ಇತಿಹಾಸ ನಿರ್ಮಾಣವಾಗಿತ್ತು. 32 ವರ್ಷಗಳ ನಂತರ, ಅಧಿಕಾರದಲ್ಲಿ ಇದ್ದ ಪಕ್ಷವೇ ಮರಳಿ ಅಧಿಕಾರಕ್ಕೆ ಬಂದಿತ್ತು. ಕಳೆದ ಮೂರು ದಶಕಗಳ ಅವಧಿಯಲ್ಲಿ ಅಲ್ಲಿನ ಜನರು ಪ್ರತಿಸಾರಿ ಚುನಾವಣೆ ನಡೆದಾಗಲೂ ಅಧಿಕಾರದಲ್ಲಿ ಇದ್ದ ಪಕ್ಷವನ್ನು ಮನೆಗೆ ಕಳಿಸಿ ಇನ್ನೊಂದು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. 2016ರ ವಿಧಾನಸಭೆ ಚುನಾವಣೆಯ ನೇತೃತ್ವವನ್ನು ಜಯಲಲಿತಾ ವಹಿಸಿದ್ದರು. ಅದು ಅವರಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆ ಆಗಿತ್ತು. ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿ, ಜೈಲು ಶಿಕ್ಷೆಗೆ ಗುರಿಯಾಗಿ, ಅಧಿಕಾರ ಕಳೆದುಕೊಂಡು, ಖುಲಾಸೆಯಾಗಿ, ಮತ್ತೆ ಮುಖ್ಯಮಂತ್ರಿಯಾಗಿ ಅವರು ಚುನಾವಣೆ ಎದುರಿಸಿದ್ದರು. ಇದನ್ನೆಲ್ಲ ಅಲಕ್ಷಿಸಿ ಜನರು ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದಕ್ಕೆ, ಜಯಾ ಜಾರಿಗೆ ತಂದ ಅನೇಕ ಜನಪ್ರಿಯ ಯೋಜನೆಗಳು ಕಾರಣ ಎಂದು ಆಗ ವಿಶ್ಲೇಷಿಸಲಾಗಿತ್ತು.

ವಿಧಾನಸಭೆ ಚುನಾವಣೆ ನಡೆಯುವುದಕ್ಕಿಂತ ಮೂರು ವರ್ಷ ಮುಂಚೆ, 2013ರಲ್ಲಿ, ಜಯಲಲಿತಾ ಅವರು ‘ಅಮ್ಮ ಉಣವುಗಂ (ಕ್ಯಾಂಟೀನ್‌)’ ಆರಂಭಿಸಿದ್ದರು. ಅಲ್ಲಿ ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಊಟ –ತಿಂಡಿ ಬಡಿಸಲಾಗುತ್ತಿತ್ತು. ಸ್ವಸಹಾಯ ಗುಂಪುಗಳಲ್ಲಿ ಕೆಲಸ ಮಾಡುವ ಹತ್ತು–ಹನ್ನೆರಡು ಮಂದಿ ಹೆಣ್ಣು ಮಕ್ಕಳನ್ನು ಪ್ರತಿ ಕ್ಯಾಂಟೀನ್‌ಗಳಲ್ಲಿ ಕೆಲಸಕ್ಕೆ ನಿಯೋಜಿಸಲಾಗಿತ್ತು. ಅವರಿಗೆ ನಿತ್ಯ ₹300 ರಿಂದ ₹350 ವೇತನ ಸಿಗುತ್ತಿತ್ತು.

ಜಯಲಲಿತಾ ಅತ್ಯಂತ ಪ್ರಬಲ ನಾಯಕಿಯಾಗಿದ್ದರು. ಒಂದು ರೀತಿ ಸರ್ವಾಧಿಕಾರಿ ಎಂದರೂ ನಡೆಯುತ್ತಿತ್ತು. ಅವರ ಮುಂದೆ ಎದೆಸೆಟೆಸಿ ನಿಲ್ಲುವ ಗಂಡಸು ಯಾರೂ ಇರಲಿಲ್ಲ. ಅವರು ಒಬ್ಬ ಒಳ್ಳೆಯ ಅಡಳಿತಗಾರ್ತಿಯೂ ಆಗಿದ್ದರು. ತಾವು ರೂಪಿಸಿದ ಯೋಜನೆಗಳು ಸಮರ್ಪಕವಾಗಿ ಜಾರಿಗೆ ಬರುವಂತೆ ಅವರು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದರು. ಅವರ ಕನಸಿನ, ‘ಅಮ್ಮ ಉಣವುಗಂ’ ಕೆಲವೇ ದಿನಗಳಲ್ಲಿ ಎಷ್ಟು ಜನಪ್ರಿಯವಾಯಿತು ಎಂದರೆ ಈಜಿಪ್ಟ್‌ನಿಂದ ಅಲ್ಲಿನ ಸರ್ಕಾರದವರು ಬಂದು ‘ಅಮ್ಮ ಕ್ಯಾಂಟೀನು’ಗಳ ಮಾದರಿ ನೋಡಿಕೊಂಡು ಹೋದರು. ಅಮರ್ತ್ಯ ಸೇನ್‌ ಅವರಂಥ ಆರ್ಥಿಕ ಪರಿಣತರು ಈ ಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು, ಅವರು, ‘ಇದು ಒಂದು ಬಹುದೊಡ್ಡ ಪರಿಕಲ್ಪನೆ’ (A big idea) ಎಂದಿದ್ದರು. ‘ಅಮ್ಮ ಕ್ಯಾಂಟೀನ್‌’ ಇಡೀ ದೇಶಕ್ಕೇ ಮಾದರಿ ಎನ್ನುವಂತೆ ಆಯಿತು. ಪಕ್ಷಭೇದ ಮರೆತು ಅನೇಕ ರಾಜ್ಯಗಳು  ಈ ಮಾದರಿಯನ್ನು ಅನುಸರಿಸಲು ಮುಂದೆ ಬಂದುವು. ರಾಜಸ್ಥಾನ, ಜಾರ್ಖಂಡ್‌, ಮಧ್ಯಪ್ರದೇಶ, ಒಡಿಶಾ, ಆಂಧ್ರಪ್ರದೇಶ, ದೆಹಲಿ, ಉತ್ತರಪ್ರದೇಶ, ಗುಜರಾತ್‌ ಹಾಗೂ ಈಚೆಗೆ ಕರ್ನಾಟಕಗಳು ಕೂಡ ಇದೇ ಬಗೆಯ ಕ್ಯಾಂಟೀನುಗಳನ್ನು ತೆರೆದಿವೆ. ಇದು ಬಹುಬೇಗ ಕೇಂದ್ರ ಸರ್ಕಾರದ ಯೋಜನೆಯಾಗಿ ಪರಿವರ್ತನೆಗೊಂಡರೆ ಆಶ್ಚರ್ಯವೇನೂ ಇಲ್ಲ.

‘ಅಮ್ಮ ಕ್ಯಾಂಟೀನ್‌’ ಏಕೆ ‘ಬಿಗ್ ಐಡಿಯಾ’ ಎಂದು ಅನಿಸಿತು ಎಂದರೆ ಅಲ್ಲಿ ಶುಚಿಯಾದ, ರುಚಿಯಾದ ತಿಂಡಿ ಮತ್ತು ಊಟ ಅತ್ಯಂತ ಕಡಿಮೆ ದರದಲ್ಲಿ ಜನರಿಗೆ ಸಿಗುತ್ತದೆ. ಅಲ್ಲಿಗೆ ಬರುವ ಜನರ ನಡುವೆ ಯಾವ ಭೇದಭಾವವೂ ಇರುವುದಿಲ್ಲ. ಜನರಿಗೆ ಸಿಗಬೇಕಿದ್ದ ಸಹಾಯಧನ ಕೊನೆಯ ಹಂತದಲ್ಲಿ ಸಿಗುವುದರಿಂದ ಅದರಲ್ಲಿ ಸೋರಿಕೆ ಆಗುವ ಸಂಭವ ತೀರಾ ಕಡಿಮೆ. ನಿತ್ಯವೂ ದುಡಿದೇ ಉಪಜೀವನ ಮಾಡಬೇಕಾದ ವರ್ಗಗಳ ಜನರು ನೇರವಾಗಿ ‘ಅಮ್ಮ ಕ್ಯಾಂಟೀನಿ’ಗೆ ಬಂದು ಅಲ್ಲಿಯೇ ತಿಂಡಿ ತಿಂದು ಕೆಲಸಕ್ಕೆ ಹೋಗುತ್ತಾರೆ ಮತ್ತೆ ಮಧ್ಯಾಹ್ನ ಬಂದು ಊಟ ಮಾಡಿ ಮತ್ತೆ ಕೆಲಸಕ್ಕೆ ತೆರಳುತ್ತಾರೆ. ಮನೆಯಲ್ಲಿ ಅಡುಗೆ ಮಾಡುವ, ಪಾತ್ರೆ ತೊಳೆಯುವ ಎಲ್ಲ ತಾಪತ್ರಯದಿಂದ ಅವರು ತಪ್ಪಿಸಿಕೊಳ್ಳುತ್ತಾರೆ. ಹಾಗೂ ಅಷ್ಟು ಸಮಯವನ್ನು ಅವರು ದುಡಿಯುವುದಕ್ಕೇ ಬಳಸುತ್ತಾರೆ. ಜೊತೆಗೆ ಕ್ಯಾಂಟೀನ್‌ಗಳ ಶುಚಿತ್ವ, ಫಳ ಫಳ ಹೊಳೆಯುವ ತಟ್ಟೆಗಳು, ಅಲ್ಲಿ ಕೆಲಸ ಮಾಡುವ ಮಹಿಳೆಯರು ಧರಿಸುವ ವಸ್ತ್ರಗಳ ಅಚ್ಚುಕಟ್ಟುತನಗಳೆಲ್ಲ ‘ಅಮ್ಮ ಕ್ಯಾಂಟೀನಿ’ನ ಹೆಗ್ಗಳಿಕೆಯ ಗರಿಗಳಾಗಿದ್ದುವು.

ಜಯಲಲಿತಾ ಅವರು ಬರೀ ‘ಅಮ್ಮ ಕ್ಯಾಂಟೀನ್‌’ನ್ನು ಮಾತ್ರ ಮಾಡಿರಲಿಲ್ಲ. ಅವರು ‘ಅಮ್ಮ’ ಹೆಸರಿನಲ್ಲಿ ಕೊಡದೇ ಇದ್ದ ವಸ್ತುಗಳು ಮತ್ತು ಸೇವೆಗಳು ಇರಲೇ ಇಲ್ಲ. ‘ಅಮ್ಮ ಉಪ್ಪು’, ‘ಅಮ್ಮ ಔಷಧ’, ‘ಅಮ್ಮ ನೀರು’, ‘ಅಮ್ಮ ಸಿಮೆಂಟು...’ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ತಮಿಳುನಾಡಿನ ಜನರು ಜಯಲಲಿತಾ ಅವರ ಇಂಥ ‘ಸಾರ್ವತ್ರಿಕ ಪ್ರಯೋಜನ’ದ ಯೋಜನೆಗಳಿಗೆ ಮೆಚ್ಚಿ ಮತ ಹಾಕಿದ್ದರು. ಜನರಿಗೆ ಉಚಿತವಾಗಿ ಟೀವಿ, ಮೊಬೈಲ್ ಸೆಟ್ಟು, ಮದುವೆ ಸಮಯದಲ್ಲಿ ಚಿನ್ನ ಕೊಡುವುದಕ್ಕಿಂತ ಜನಪರವಾದ ಇಂಥ ಯೋಜನೆಗಳು ಹೆಚ್ಚು ಉಪಯುಕ್ತ. ಹೇಗಿದ್ದರೂ ಸರ್ಕಾರಗಳು ಜನಕಲ್ಯಾಣದ ಯೋಜನೆಗಳನ್ನು ಹಾಕಿಕೊಳ್ಳುವ ಒತ್ತಡದಲ್ಲಿ ಇದ್ದೇ ಇರುತ್ತವೆ. ಇಂಥ ಜನಪ್ರಿಯ ಯೋಜನೆಗಳು ಮಾತ್ರ ತಮಗೆ ಮತ ತಂದುಕೊಡಬಲ್ಲವು ಎಂದು ಅವರೂ ನಂಬಿರುತ್ತಾರೆ. ಅದಕ್ಕಾಗಿಯೇ ಜನರಿಗೆ ಹೊಸದಾಗಿ ಏನು ಕೊಡಬಹುದು ಎಂದು ಅವರು ಯಾವಾಗಲೂ ಯೋಚಿಸುತ್ತಲೂ ಇರುತ್ತಾರೆ. ಅದರಲ್ಲಿ, ಕಷ್ಟದಲ್ಲಿ ಇರುವ ಜನರಿಗೆ ಒಳ್ಳೆಯದು ಮಾಡಬೇಕು ಎಂಬ ಕಾಳಜಿಯ ಜೊತೆಗೆ ತಾವು ಅಧಿಕಾರಕ್ಕೆ ಬರಬೇಕು ಎಂಬ ಹುನ್ನಾರವೂ ಇರುತ್ತದೆ. ಅದು ಇಲ್ಲವಾಗಿದ್ದರೆ ಜಯಾ ಅವರು ತಾವು ಜಾರಿಗೊಳಿಸಿದ ಎಲ್ಲ ಉಚಿತ ಯೋಜನೆಗಳ ಹಿಂದೆ ‘ಅಮ್ಮ’ ಎಂಬ ಹೆಸರು ಅಂಟಿಸುತ್ತಿರಲಿಲ್ಲ. ಅವರಿಗೆ ಗೊತ್ತಿತ್ತು, ತಾವು ತಮಿಳುನಾಡಿನ ‘ಅಮ್ಮ’ ಎಂದು.

ಮುಖ್ಯಮಂತ್ರಿ ಸಿದ್ದರಾಮಯ್ಯ 2017ರ ಮುಂಗಡಪತ್ರ ಮಂಡಿಸುವಾಗ ‘ಅಮ್ಮ ಕ್ಯಾಂಟೀನ್‌’ ಮಾದರಿಯಲ್ಲಿ ‘ನಮ್ಮ ಕ್ಯಾಂಟೀನ್‌’ ಶುರು ಮಾಡುವುದಾಗಿ ಘೋಷಿಸಿ ₹ 100 ಕೋಟಿ ತೆಗೆದು ಇರಿಸಿದ್ದರು. ಹಾಗೆ ಮಾಡುವಾಗ ಜಯಲಲಿತಾ ಅವರು ಅಧಿಕಾರದಲ್ಲಿ ಇದ್ದೂ ಜನಪ್ರೀತಿ ಕಳೆದುಕೊಳ್ಳದೆ ಮರಳಿ ಅಧಿಕಾರಕ್ಕೆ ಬಂದುದು ಸಿದ್ದರಾಮಯ್ಯ ಅವರ ನೆನಪಿನಲ್ಲಿ ಇತ್ತು.

ಈಗ ಅವರ ಮುಂದೆ ದೊಡ್ಡ ಸವಾಲು ಇದೆ. ಮುಂದಿನ ವರ್ಷ ನಡೆಯುವ ಚುನಾವಣೆಯ ನೇತೃತ್ವ ಅವರದೇ ಎಂದು ಈಗಾಗಲೇ ಘೋಷಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಅವರ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿ ಇದೆ. ಅವರ ಸರ್ಕಾರದ ಬಗೆಗೆ ಜನರಲ್ಲಿ ಮಿಶ್ರ ಭಾವನೆಗಳು ಇವೆ. ಸಾಮಾನ್ಯವಾಗಿ ಒಂದು ಅವಧಿಗೆ ಆಡಳಿತ ಮಾಡಿದ ಸರ್ಕಾರವನ್ನು ಜನರು ಮರಳಿ ಚುನಾಯಿಸುವುದು ಬಹಳ ಕಷ್ಟ. ಜನರಿಗೆ ಬದಲಾವಣೆ ಬೇಕು. ಬದಲಾವಣೆ ಏಕೆ ಬೇಕು ಎಂದರೆ, ‘ಈ ಸರ್ಕಾರದಿಂದ ಒಳ್ಳೆಯದು ಆಗಲಿಲ್ಲ, ಆ ಸರ್ಕಾರದಿಂದ ಲಾದರೂ ಒಳ್ಳೆಯದು ಆಗಬಹುದು’ ಎಂದು ಅವರು ನಿರೀಕ್ಷಿಸುತ್ತ ಇರುತ್ತಾರೆ. ಅವರ ನಿರೀಕ್ಷೆಗಳು ನಿಜವಾಗುವುದು ಕಡಿಮೆ. ಹಾಗೆಂದು ಜನರು ಆಸೆ ಕಳೆದುಕೊಳ್ಳಲು ಆಗುವುದಿಲ್ಲ. ‘ಮರಳಿ ಯತ್ನವ ಮಾಡು’ ಎಂದು ಮತ್ತೆ ಮತ್ತೆ ಮತಗಟ್ಟೆಗೆ ಬರುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದುದು ಜನರ ಇಂಥ ನಿರೀಕ್ಷೆಯ ಅಲೆಯ ಮೇಲೆ. ಈಗ ಬಿಜೆಪಿಯವರು ಮತ್ತೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎನ್ನುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಆ ಪಕ್ಷ ಅಧಿಕಾರಕ್ಕೆ ಬರಬಹುದಾಗಿದ್ದರೆ ಅದು ಕರ್ನಾಟಕದಲ್ಲಿ ಮಾತ್ರ ಎನ್ನುವುದು ಕೂಡ ಮುಂದಿನ ವರ್ಷ ನಡೆಯುವ ಚುನಾವಣೆಯ ತೀವ್ರತೆ ಎಷ್ಟು ಇರಬಹುದು ಎಂಬುದಕ್ಕೆ ಒಂದು ಇಂಗಿತವನ್ನು ಕೊಡಬಹುದು. ಪರಸ್ಪರರ ವಿರುದ್ಧ ಅವರು ಬಳಸುತ್ತಿರುವ ‘ಅಸ್ತ್ರ’ಗಳನ್ನು ನೋಡಿದರೆ ಆ ತೀವ್ರತೆ ಈಗಲೇ ಅನುಭವಕ್ಕೆ ಬರುತ್ತಿದೆ. ಮೂರನೇ ಆಟಗಾರನಾಗಿರುವ ಜನತಾದಳ (ಎಸ್‌) ಕೂಡ ತಾನೇನೂ ಕಡಿಮೆ ಇಲ್ಲ ಎನ್ನುತ್ತಿದೆ. ಅದಕ್ಕೂ ಸ್ವತಂತ್ರವಾಗಿ ಅಧಿಕಾರ ಹಿಡಿಯುವ ಹುಕಿ.

ಬೆಂಗಳೂರಿನಲ್ಲಿ ಕಳೆದ ಬುಧವಾರ ಆರಂಭವಾಗಿರುವ ‘ಇಂದಿರಾ ಕ್ಯಾಂಟೀನಿ’ಗೆ ಈ ಎಲ್ಲ ಹಿನ್ನೆಲೆ ಇದೆ. ಮುಖ್ಯಮಂತ್ರಿಯವರು ಬಜೆಟ್‌ ಮಂಡಿಸುವಾಗ ಪ್ರಕಟಿಸಿದ್ದ ‘ನಮ್ಮ ಕ್ಯಾಂಟೀನ್‌’ ಈಗ ಅದು ‘ಇಂದಿರಾ ಕ್ಯಾಂಟೀನ್‌’ ಆಗಿದೆ. ತಮಿಳುನಾಡಿನಲ್ಲಿ ಅದು ‘ಅಮ್ಮ ಕ್ಯಾಂಟೀನ್‌’ ಆಗಿದೆ. ದೆಹಲಿಯಲ್ಲಿ ಅದು ‘ಆಮ್‌ ಆದ್ಮಿ ಪಾರ್ಟಿ ಕ್ಯಾಂಟೀನ್‌’ ಆಗಿದೆ. ಆಂಧ್ರಪ್ರದೇಶದಲ್ಲಿ ಅದು ‘ಎನ್‌ಟಿಆರ್ ಕ್ಯಾಂಟೀನ್‌’ ಆಗಿದೆ. ಇಂಥ ಕ್ಯಾಂಟೀನ್‌ಗಳನ್ನು ಚುನಾವಣೆ ಮೇಲೆ ಕಣ್ಣಿಟ್ಟು ಆರಂಭಿಸದೇ ಇದ್ದರೆ ಈ ಎಲ್ಲ ಉಪಾಧಿಗಳು ಅದಕ್ಕೆ ಜೊತೆಯಾಗಿ ಇರಬೇಕಿರಲಿಲ್ಲ. ‘ಬಡವರ ಹಸಿವು ಶ್ರೀಮಂತರಿಗೇನು ಗೊತ್ತು’ ಎಂದು ಸಿದ್ದರಾಮಯ್ಯನವರು ಕೇಳಿದರೂ ಮತಗಳಿಕೆಯ ಅವರ ‘ಹಸಿವೂ’ ಈ ಕ್ಯಾಂಟೀನ್ ಗಳ ಸ್ಥಾಪನೆ ಹಿನ್ನೆಲೆಯಲ್ಲಿ ಇದ್ದೇ ಇದೆ ಎಂದು ಎಂಥ ಮೂಢನಿಗಾದರೂ ತಿಳಿಯುತ್ತದೆ.

ಆದಾಗ್ಯೂ ಒಂದು ಪರಿಕಲ್ಪನೆಯಾಗಿ ಯಾರೂ ಇದನ್ನು ವಿರೋಧಿಸಿಲ್ಲ. ಆದರೆ, ಇಂಥ ಕ್ಯಾಂಟೀನುಗಳ ಸ್ಥಾಪನೆಯಿಂದ ಒಳ್ಳೆಯ ರಾಜಕೀಯ ಫಲಗಳು ಸಿಗಬಹುದಾದರೂ ಅದರಿಂದ ಆಯಾ ರಾಜ್ಯದ ಆರ್ಥಿಕ ಸ್ಥಿತಿಯ ಮೇಲೆ ಆಗುವ ಪರಿಣಾಮಗಳು ಒಳ್ಳೆಯವು ಆಗಿರುವುದಿಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ತಮಿಳುನಾಡಿನಲ್ಲಿ ಕೂಡ ‘ಅಮ್ಮ ಕ್ಯಾಂಟೀನ್‌’ ಅನ್ನು ಕೆಲವು ಕಡೆಗಳಲ್ಲಿ ಮಾತ್ರ ತೆರೆಯಲಾಯಿತು. ಅಷ್ಟಕ್ಕೇ ಆ ರಾಜ್ಯ, ಪ್ರತಿ ವರ್ಷ ₹300 ಕೋಟಿ ತೆಗೆದು ಇರಿಸಬೇಕಾಯಿತು. ಈಗ ಕರ್ನಾಟಕದಲ್ಲಿ ಕೂಡ ಬೆಂಗಳೂರಿನಲ್ಲಿ ಮಾತ್ರ ಕ್ಯಾಂಟೀನ್‌ ಆರಂಭಿಸಲಾಗಿದೆ. ಅದಕ್ಕಾಗಿ ₹ 100 ಕೋಟಿ ತೆಗೆದು ಇರಿಸಲಾಗಿದೆ. ಇದು ಎಷ್ಟು ದಿನಕ್ಕೆ ಸಾಕಾಗಬಹುದು ಎಂದು ಇನ್ನಷ್ಟೇ ತಿಳಿಯಬೇಕಿದೆ. ಒಂದು ವೇಳೆ ರಾಜ್ಯದ ಬಹುಪಾಲು ಕಡೆಗಳಲ್ಲಿ ಕ್ಯಾಂಟೀನು ಆರಂಭಿಸಿದರೆ ಅದರಿಂದ ಬೊಕ್ಕಸದ ಮೇಲೆ ಆಗುವ ಹೊರೆ ಎಷ್ಟು ಮತ್ತು ಸರ್ಕಾರ ಅದನ್ನು ಹೇಗೆ ಭರಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ರಾಜ್ಯದಲ್ಲಿ ‘ಇಂದಿರಾ ಕ್ಯಾಂಟೀನ್‌’ ಆರಂಭವಾಗಿ ಈಗಿನ್ನೂ ನಾಲ್ಕು ದಿನಗಳು ಮಾತ್ರ ಕಳೆದಿವೆ. ಮುಂದಿನ ದಿನಗಳಲ್ಲಿ ಅಲ್ಲಿ ಹೇಗೆ ಆಹಾರ ಪೂರೈಕೆ ಆಗುತ್ತದೆ, ಅದರ ಗುಣಮಟ್ಟ ಹೇಗಿರುತ್ತದೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಅಲ್ಲಿ ದಿನದ ಕೊನೆಯವರೆಗೂ ಶುಚಿತ್ವ ಇರುತ್ತದೆಯೇ ಇಲ್ಲವೇ ಎನ್ನುವುದರ ಮೇಲೆ ಅದರ ಜನಪ್ರಿಯತೆಯೂ ನಿಂತಿರುತ್ತದೆ. ಕ್ಯಾಂಟೀನುಗಳ ಮುಂದೆ ಜನರು ಈಗ ಸಾಲು ನಿಲ್ಲುತ್ತಿರುವುದನ್ನು ನೋಡಿದರೆ ಅವು ಜನರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿರಬಹುದು ಎಂದು ಭಾವಿಸಬಹುದಾಗಿದೆ.

ಆದರೆ, ಸವಾಲು ನಿಂತಿರುವುದು ಜನಪ್ರತಿನಿಧಿಗಳು ಇದನ್ನು ತಮ್ಮ ಹೃದಯಕ್ಕೆ ಎಷ್ಟು ಹಚ್ಚಿಕೊಂಡಿದ್ದಾರೆ ಎನ್ನುವುದರ ಮೇಲೆ. ತಮಿಳುನಾಡಿನಲ್ಲಿ ಇದು ಜಯಲಲಿತಾ ಅವರಿಗೆ ಬಹಳ ಆಪ್ತವಾದ ಯೋಜನೆಯಾಗಿತ್ತು. ಅವರು ಇದಕ್ಕೆಲ್ಲ ಜವಾಬ್ದಾರಿ ನಿಗದಿ ಮಾಡಿದ್ದರು. ಅದಕ್ಕಾಗಿಯೇ ಅವರು ಬದುಕಿ ಇರುವ ವರೆಗೆ ಅಲ್ಲಿ ಯಾವ ಲೋಪವೂ ಆಗಲಿಲ್ಲ. ಈಗ ಆಡಳಿತದಲ್ಲಿ ಅದೇ ಬಿಗಿಯಿಲ್ಲ. ಕ್ಯಾಂಟೀನುಗಳ ನಿರ್ವಹಣೆಯಲ್ಲಿಯೂ ಅದು ಕಂಡು ಬರುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಬೆಂಗಳೂರಿನ ಕ್ಯಾಂಟೀನುಗಳ ನಿರ್ವಹಣೆಯನ್ನು ಬಿಬಿಎಂಪಿಗೆ ವಹಿಸಲಾಗಿದೆ. ಒಬ್ಬರಾದ ನಂತರ ಒಬ್ಬರಂತೆ ಅನೇಕ ಜನ ಮೇಯರುಗಳೇ ಹೇಳಿರುವ ಹಾಗೆ, ಕಡುಭ್ರಷ್ಟತೆ ಮತ್ತು ಅದಕ್ಷತೆಗೆ ಇನ್ನೊಂದು ಹೆಸರು ಎನಿಸಿರುವ ಬಿಬಿಎಂಪಿಯ ಆಡಳಿತದ ದುಷ್ಪರಿಣಾಮಗಳು ಕ್ಯಾಂಟೀನುಗಳ ನಿರ್ವಹಣೆಯಲ್ಲಿಯೂ ಪ್ರತಿಫಲಿತವಾಗುವುದಿಲ್ಲ ಎಂದು ಹೇಗೆ ನಂಬುವುದು? ಕಸದಲ್ಲಿ, ಕೊಚ್ಚೆಯಲ್ಲಿ, ಚರಂಡಿಯಲ್ಲಿ (ಇವೆಲ್ಲದರ ನಿರ್ವಹಣೆಯಲ್ಲಿ ಎಂದು ಬೇಕೆಂದೇ ಬರೆದಿಲ್ಲ!) ದುಡ್ಡು ಹೊಡೆಯುವವರು ಇರುವಾಗ, ಹತ್ತು ಹನ್ನೆರಡು ಸೆಂಟಿಮೀಟರ್‌ ಮಳೆ ಬಂದರೂ ಇಡೀ ಬೆಂಗಳೂರೇ ಮುಳುಗಿ ಹೋದರೂ ಆಡಳಿತದಲ್ಲಿ ಇದ್ದವರು ನಿಶ್ಚಿಂತೆಯಿಂದ ಇರುವಾಗ ಊಟ, ತಿಂಡಿ ಸರಬರಾಜಿನಲ್ಲಿ ದುಡ್ಡು ಹೊಡೆಯುವುದಿಲ್ಲ ಎಂದು ಹೇಗೆ ತಿಳಿಯುವುದು?

ಯೋಜನೆಗಳನ್ನು ರೂಪಿಸುವುದು ಸುಲಭ. ಅವುಗಳ ಸಮರ್ಪಕ ಅನುಷ್ಠಾನ ಬಹಳ ಕಷ್ಟ. ಏಕೆಂದರೆ ಐದು ವರ್ಷದಲ್ಲಿ ಮತ್ತೆ ಜನರನ್ನು ಎದುರಿಸುವ ಕಷ್ಟ ಅಧಿಕಾರಿಗಳಿಗೆ ಗೊತ್ತಿರುವುದಿಲ್ಲ. ಅದನ್ನು ಅವರಿಗೆ ಅರ್ಥ ಮಾಡಿಸಲು ಜನಪ್ರತಿನಿಧಿಗಳು ಎಷ್ಟೇ ಪ್ರಯತ್ನ ಮಾಡಿದರೂ ನಾನಾ ಕಾರಣಗಳಿಂದಾಗಿ ಅದರಲ್ಲಿ ಅವರು ಸಫಲರಾಗುವುದಿಲ್ಲ. ನೌಕರಶಾಹಿಯ ಅದಕ್ಷತೆಯನ್ನು, ಭ್ರಷ್ಟಾಚಾರವನ್ನು ಜನಪ್ರತಿನಿಧಿಗಳು ಎಲ್ಲಿಯೋ ಒಳಗೊಳಗೆ ಪೋಷಿಸಿರುತ್ತಾರೆ ಮತ್ತು ರಕ್ಷಿಸಿರುತ್ತಾರೆ.

ಇಂಥ ಯೋಜನೆಗಳ ಇನ್ನೊಂದು ಸಮಸ್ಯೆ ಎಂದರೆ ಅವುಗಳ ನಿರಂತರತೆಯಲ್ಲಿ ಇರುವ ಅನುಮಾನ. ಏಕೆಂದರೆ ಈಗ ಸಿದ್ದರಾಮಯ್ಯ ಸರ್ಕಾರ ಇದಕ್ಕೆ ‘ಇಂದಿರಾ ಕ್ಯಾಂಟೀನ್‌’ ಎಂದು ಹೆಸರು ಇಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಬೇರೆ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ‘ಇಂದಿರಾ ಕ್ಯಾಂಟೀನಿ’ಗೆ ಅವರು ಹಣ ಕೊಡುತ್ತಾರೆಯೇ? ಇಡೀ ದೇಶವನ್ನು ‘ಕಾಂಗ್ರೆಸ್‌ ಮುಕ್ತ’ ಮಾಡಲು ಹೊರಟಿರುವ ಒಂದು ಪಕ್ಷ ಇಂದಿರಾ ಹೆಸರನ್ನು ಸಹಿಸುತ್ತದೆಯೇ? ಹಾಗೆ ನೋಡಿದರೆ ಇದರಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರವೂ ಹಿಂದೆ ಬಿದ್ದಂತೆ ಕಾಣುವುದಿಲ್ಲ. ಇನ್ನು ಮುಂದೆ ಪ್ರಾರಂಭವಾಗುವ ವಿದ್ಯಾರ್ಥಿಗಳ ವಸತಿ ಶಾಲೆಗಳ ಹೆಸರುಗಳು ಮೊರಾರ್ಜಿ ವಸತಿ ಶಾಲೆಗಳ ಬದಲಿಗೆ ಇಂದಿರಾ ವಸತಿ ಶಾಲೆಗಳು ಎಂದು ಆಗುತ್ತವೆ ಎಂದು ರಾಜ್ಯ ಸರ್ಕಾರ ಈಗಾಗಲೇ ಪ್ರಕಟಿಸಿದೆ.

ರಾಜಕೀಯ ಎನ್ನುವುದು ತೀರಾ ವೈಯಕ್ತಿಕ ನೆಲೆಗೆ ಹೋಗುತ್ತಿರುವುದರ ಪರಿಣಾಮ ಇದು. ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲು ಇನ್ನೂ ಕನಿಷ್ಠ ಎಂಟು ತಿಂಗಳು ಬಾಕಿ ಇವೆ. ಆದರೆ, ಎಲ್ಲ ಪಕ್ಷಗಳೂ ಈಗಲೇ ಚುನಾವಣೆ ಗುಂಗಿನಲ್ಲಿ ಮುಳುಗಿ ಏಳುತ್ತಿವೆ. ಬಹುಶಃ ಮುಂದಿನ ಏಪ್ರಿಲ್ ವೇಳೆಗೆ ವಿಧಾನಸಭೆಗೆ ಚುನಾವಣೆ ನಡೆಯುತ್ತದೆ. ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವ ಕಾಂಗ್ರೆಸ್‌ ಪಕ್ಷಕ್ಕೆ ಇಂದಿರಾ ಕ್ಯಾಂಟೀನು ಎಂಬ ಇನ್ನೊಂದು ‘ಭಾಗ್ಯ’ ಆಸರೆಯಾಗುತ್ತದೆಯೇ? ಆಸರೆಯಾದರೆ ಕರ್ನಾಟಕದಲ್ಲಿಯೂ 33 ವರ್ಷಗಳ ನಂತರ ಇತಿಹಾಸ ನಿರ್ಮಾಣವಾಗುತ್ತದೆ. ಅಂದರೆ ಆಡಳಿತ ಮಾಡಿದ ಪಕ್ಷವೇ ಮರಳಿ ಅಧಿಕಾರಕ್ಕೆ ಬಂದಂತೆ ಆಗುತ್ತದೆ. ರಾಜ್ಯದಲ್ಲಿ 1985ರ ನಂತರ ಇದುವರೆಗೆ ಅದೇ ಪಕ್ಷದ ಸರ್ಕಾರ ಮರು ಆಯ್ಕೆಯಾಗಿಲ್ಲ. ಈಗ ಆಡಳಿತ ಮಾಡುತ್ತಿರುವ ಕಾಂಗ್ರೆಸ್ಸಿಗೆ ತಕ್ಷಣ ಮರಳಿ ಅಧಿಕಾರ ಹಿಡಿಯಲು ಇರುವ ‘ಚಾರಿತ್ರಿಕ’ ಅಡ್ಡಿ ಇದು. ಸರ್ಕಾರ ಜಾರಿಗೆ ತಂದಿರುವ ‘ಇಂದಿರಾ ಕ್ಯಾಂಟೀನ್‌’ನಂಥ ‘ಭಾಗ್ಯ’ಗಳು ಈ ‘ಅಡ್ಡಿ’ಯನ್ನು ನಿವಾರಿಸುತ್ತವೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT