ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕ ಮಡಕೆಯಲ್ಲಿ ಅಟ್ಟುಣ್ಣುವ ಆಸೆ

Last Updated 8 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ವಿ‌ಭಜನೆ ಅನ್ನುವುದು ಒಳ್ಳೆಯದೋ, ‌ಕೆಟ್ಟದ್ದೋ ಎಂದು ಸರಳವಾಗಿ ವ್ಯಾಖ್ಯಾನ ಮಾಡುವ ಕಾಲದಲ್ಲಿ ನಾವಿಲ್ಲ. ದೊಡ್ಡ ಮನೆಗಳನ್ನು ತೊರೆದೆವು. ಅವಿಭಕ್ತ ಕುಟುಂಬದ ಕಲ್ಪನೆಯನ್ನು ಮರೆತೆವು. ಸಣ್ಣ ಪಾತ್ರೆ, ಸಣ್ಣ ಅಡುಗೆ ಮನೆ, ಸಣ್ಣ ಪ್ರಪಂಚದಲ್ಲಿ ಸುಖ ಕಂಡುಕೊಳ್ಳಲು ಹೊರಟೆವು. ಸ್ವಕೇಂದ್ರಿತ ಚಿಂತನೆಗಳನ್ನು ಒಪ್ಪಿಕೊಂಡೆವು. ನಾವು, ನಮ್ಮ ಎಂಬ ಪದಗಳಿಗೆ ನಾನು, ನನ್ನ ಎಂಬ ಪದಗಳನ್ನು ಪರ್ಯಾಯವಾಗಿ ಬಳಸತೊಡಗಿದೆವು.

ಗಂಡ ಹೆಂಡತಿ ಇಬ್ಬರೇ ಬದುಕುವ ಕುಟುಂಬವನ್ನೇ ಜಾಯಿಂಟ್ ಫ್ಯಾಮಿಲಿ ಎಂದು ಕರೆಯತೊಡಗಿದೆವು. ನಗರಗಳು ನಡೆದ ಜಾಡಿನಲ್ಲೇ ಹಳ್ಳಿಗಳೂ ನಡೆಯತೊಡಗಿದವು. ಅಲ್ಲಿಯೂ ಸಾಮುದಾಯಿಕ ಬದುಕು ನಾಶವಾಯಿತು. ಈಗ ನಾವು Individualistic ಆಗಿರುವ strong individualsಗಳಲ್ಲದ ಜನ. ವ್ಯವಸ್ಥೆಯಿಂದ ಎಲ್ಲವನ್ನೂ ಬಯಸುತ್ತೇವೆ. ಆದರೆ ವ್ಯವಸ್ಥೆಗೆ ಪ್ರತಿಯಾಗಿ ಏನನ್ನೂ ಕೊಡಬಯಸುವುದಿಲ್ಲ.

ಇಂಥ ಹೊತ್ತಿನಲ್ಲಿ ಆಂಧ್ರ ಇಬ್ಭಾಗವಾಗಿದೆ. ಲೋಕಸಭೆಯಲ್ಲಿ ಸಂಸದರಿಂದ ಪೆಪ್ಪರ್‌ಸ್ಪ್ರೇ ಬಳಸಿದ ಅನಾಗರಿಕ ನಡವಳಿಕೆಯೂ ಆಗಿದೆ. ವಿಭಜನೆ ಬೇಕೆನ್ನುವವರೂ, ಬೇಡ ಎನ್ನುವವರೂ ಆಂಧ್ರದೊಳಗೇ ಇದ್ದಾರೆ. ಪ್ರಗತಿ ಪ್ರತ್ಯೇಕತೆಯಿಂದ ಮಾತ್ರ ಸಾಧ್ಯ ಎಂಬುದು ಒಂದು ಗುಂಪು. ಪ್ರತ್ಯೇಕತೆಯಿಂದ ಭಾಷೆ, ಸಂಸ್ಕೃತಿ, ಪ್ರಗತಿ ಎಲ್ಲಕ್ಕೂ ಧಕ್ಕೆಯಾಗುತ್ತದೆ ಎನ್ನುವುದು ಮತ್ತೊಂದು ಗುಂಪು. ಎರಡೂ ಗುಂಪಿನ ಮುಂಚೂಣಿಯಲ್ಲಿರುವ ನಾಯಕರಿಗೆ ವೈಯಕ್ತಿಕ ಹಿತಾಸಕ್ತಿಗಳಿವೆ. ಬೆಂದ ಮನೆಯಲ್ಲಿ ಗಳ ಹಿರಿಯುವ ಸ್ವಾರ್ಥಿಗಳೂ ಇದ್ದಾರೆ.

ಕರ್ನಾಟಕದ ಏಕೀಕರಣಕ್ಕೆ ಮುನ್ನವೇ ಒಗ್ಗೂಡಿದ್ದ ವಿಶಾಲ ರಾಜ್ಯ ಆಂಧ್ರಪ್ರದೇಶ ಈಗ ಹೋಳಾಗಿದೆ. ಈಗ ವಿಭಜನೆಯ ಆಕಾಂಕ್ಷಿಗಳು ಅನೇಕ ರಾಜ್ಯಗಳಲ್ಲಿ ಇದ್ದಾರೆ. ಕೆಲವರಿಗೆ ಪ್ರತ್ಯೇಕ ದೇಶವೇ ಬೇಕು. ಇನ್ನು ಕೆಲವರಿಗೆ ಪ್ರತ್ಯೇಕ ರಾಜ್ಯಬೇಕು. ಮತ್ತೆ ಕೆಲವರಿಗೆ ಪ್ರತ್ಯೇಕ ಜಿಲ್ಲೆ. ಪ್ರತ್ಯೇಕ ತಾಲ್ಲೂಕು.

ವಿಭಜನೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ನಿಷೇಧಾತ್ಮಕವಾಗಿ ನೋಡುವುದು ಸರಿಯಲ್ಲ. ಕಾರಣ ವಿಭಜನೆಯು ವಿಕೇಂದ್ರೀಕರಣದ ಪರಿಕಲ್ಪನೆಗೆ ಸಮೀಪವಾಗಿದೆ. ವಿಕೇಂದ್ರೀಕರಣವು ಆಧುನಿಕ ಪ್ರಜಾಸತ್ತೆಗೆ ಅತ್ಯಂತ ಅವಶ್ಯವಾದ ಪ್ರಕ್ರಿಯೆ. ಮಂಡಲ್ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಪರಿಕಲ್ಪನೆಗಳು ಚಾಲ್ತಿಗೆ ಬಂದ ಮೇಲೆ ಜನರ ಕೈಗೆ ಅಧಿಕಾರ ಸಿಕ್ಕಿದೆ. ಇದರಲ್ಲಿ ಹಲವು ಆರಂಭಿಕ ದೋಷಗಳಿದ್ದರೂ ಇದೊಂದು ಆದರ್ಶವಾದ ಪ್ರಜಾಸತ್ತಾತ್ಮಕ ನಡವಳಿಕೆ. ವಿಕೇಂದ್ರೀಕರಣ ಗಾಂಧಿಯವರ ನಂಬುಗೆಯಾಗಿತ್ತು.

ಹಳ್ಳಿಗಳಿಗೆ ವಿಕೇಂದ್ರೀಕರಣದ ಫಲ ಬರುವ ಹೊತ್ತಿಗೆ ಹಳ್ಳಿಗ ಸೋಮಾರಿ ಮತ್ತು ಒಂಟಿಯಾಗಿದ್ದ. ಕೆಲವರು ಮಾತ್ರ ಫಲಾನುಭವಿಗಳಾಗತೊಡಗಿದರು. ಪ್ರಭುತ್ವವು ದಯಮಾಡಿಸುವ ಸಕಲೆಂಟು ವರಗಳನ್ನು ಸ್ವೀಕರಿಸಿ, ದೃಢಗೊಳ್ಳಲು ಅಲ್ಲಿ ದುಡಿಯುವ ಬಲಿಷ್ಠ ಕೈಗಳೇ ಇಲ್ಲ. ಇರುವ ಕೈಗಳಿಗೆ ಬಾಚಲು ಮಾತ್ರ ಗೊತ್ತು. ಗಾಂಧಿ, ಲೋಹಿಯಾ, ಗೋಪಾಲಗೌಡ, ಅರಸು, ನಜೀರ್‌ಸಾಬ್ ಅಂಥವರ ಕನಸುಗಳ ಭಗ್ನಾವಶೇಷದಂತೆ ನಮ್ಮ ಹಳ್ಳಿಗಳು ಈಗ ಗೋಚರವಾಗುತ್ತಿವೆ.

ಅರವತ್ತು ವರ್ಷದ ಹಿಂದಿನ ಕರ್ನಾಟಕವನ್ನು ಕಲ್ಪಿಸಿಕೊಂಡರೆ, ಅಸ್ತಿತ್ವವಿರದ, ಚೆದುರಿಹೋದ ತಬ್ಬಲಿ ಕನ್ನಡಿಗನೇ ಕಣ್ಮುಂದೆ ನಿಲ್ಲುತ್ತಾನೆ. ಅವನ ಅಸಹಾಯಕತೆಯನ್ನು ಹೇಳಿಕೊಳ್ಳಲು ಮಾಧ್ಯಮವೂ, ವೇದಿಕೆಯೂ ಇರಲಿಲ್ಲ. ತಮಿಳರಿಗೆ ಸ್ವದೇಶಮಿತ್ರನ್, ದಿನಮಣಿ; ತೆಲುಗರಿಗೆ ಆಂಧ್ರಪ್ರಭಾ, ಕೃಷ್ಣಾ ಪತ್ರಿಕೆಗಳಿದ್ದಂತೆ ಕನ್ನಡಿಗರಿಗೊಂದು ಅಖಿಲ ಕರ್ನಾಟಕ ಪತ್ರಿಕೆಯೇ ಇರಲಿಲ್ಲ.

ಉತ್ತರ ಭಾಗದವರಲ್ಲಿ ಏಕೀಕರಣದ ಆಸೆಗಳಿದ್ದರೆ, ಮೈಸೂರು ಕನ್ನಡಿಗರಲ್ಲಿ ಕೆಲವರಿಗೆ ಅದು ಬೇಕಾಗಿರಲಿಲ್ಲ. ಕಾರಣ ಅವರ ಕಷ್ಟ ಇವರಿಗೆ ತಿಳಿಯದು. ಅವರೊಂದು ಸಣ್ಣ ಕರ್ನಾಟಕ ಸ್ಥಾಪಿಸಿಕೊಳ್ಳಲಿ, ನಾವು ನಮ್ಮಷ್ಟಕ್ಕೆ ಬೇರೆ ಇರೋಣ. ಕಾಲಕ್ರಮದಲ್ಲಿ ಅಗತ್ಯಬಿದ್ದರೆ ಎರಡೂ ಭಾಗಗಳು ಸೇರಿಕೊಂಡರಾಯಿತು ಎಂಬ ನಿಲುವು ಇವರದು. ಸಾಹಿತ್ಯ ಪರಿಷತ್ತು ಏಕೀಕರಣದ ಪರವಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನ ಭಾಷಾ ಪ್ರಾಂತ್ಯ ತತ್ವವನ್ನು ಒಪ್ಪಿದ್ದ ಕಾಂಗ್ರೆಸ್ ಒಡೆದು ಹೋಳಾಯಿತು. ಭಾಷಾ ಪ್ರಾಂತ್ಯ ವಿಂಗಡಣೆಯಿಂದ ದೇಶ ದುರ್ಬಲವಾಗುತ್ತದೆ ಎಂಬ ಕೆಲವು ದೇಶಭಕ್ತರ ಅತಾರ್ಕಿಕ ವಾದ ಒಂದು ಕಡೆ. ಇದಕ್ಕೆ ಪೂರಕವಾಗಿ ಧಾರ್ ಮತ್ತು ಜೆವಿಪಿ ಸಮಿತಿಗಳು. ಇದರ ವಿರುದ್ಧ ಬಂಡೆದ್ದವರು ತೆಲುಗರು. ಮೊದಲಿನಿಂದ ರಾಮಲಸೀಮೆಗೂ ಅಕ್ಕಪಕ್ಕದ ಜಿಲ್ಲೆಗಳಿಗೂ ವೈಮನಸ್ಯ.

ಹಾಗಿದ್ದರೂ ಆಂಧ್ರಪ್ರದೇಶ ಒಟ್ಟಾಯಿತು. ಇದರಿಂದ ಕರ್ನಾಟಕವೂ ಒಂದಾದೀತು ಎಂಬ ಭರವಸೆ ಹುಟ್ಟಿತು. ಭಾರತ ಒಕ್ಕೂಟದಲ್ಲಿರುವ ಎಲ್ಲಾ ಕನ್ನಡ ಭಾಗಗಳು ಹಳೆ ಮೈಸೂರು ರಾಜ್ಯದೊಂದಿಗೆ ವಿಲೀನಗೊಳ್ಳಲು ಯಾವ ಅಡ್ಡಿಯೂ ಇಲ್ಲವೆಂದು ಹಲವು ವಿರೋಧಗಳ ನಡುವೆಯೂ ಗಟ್ಟಿಯಾಗಿ ಸಾರಿದವರು ಮತ್ತು ಕಾರ್ಯೋನ್ಮುಖರಾದವರು ಕರ್ನಾಟಕದ ಮೊಟ್ಟಮೊದಲ ಚುನಾಯಿತ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ. ಆಂಧ್ರಕ್ಕೂ, ಮದರಾಸಿಗೂ ಬೇಡವಾಗಿದ್ದ ಬಳ್ಳಾರಿ ೧೯೫೩ರಲ್ಲಿ ಮೈಸೂರಿನೊಂದಿಗೆ ವಿಲೀನವಾಯಿತು. ಇದು ಕರ್ನಾಟಕ ಏಕೀಕರಣದ ಮೊದಲ ಹೆಜ್ಜೆ. ಅನಂತರ ಹುಬ್ಬಳ್ಳಿ-ಧಾರವಾಡ-ವಿಜಾಪುರಗಳಲ್ಲಿ ಗಲಭೆ, ಚಳವಳಿ ತೀವ್ರಗೊಂಡಿತು.

ಧಾರವಾಡದ ಅದರಗುಂಚಿ ಶಂಕರಗೌಡರ ಆಮರಣ ಉಪವಾಸ ಸತ್ಯಾಗ್ರಹ ಜನಾಂದೋಲನವನ್ನೇ ರೂಪಿಸಿತು. ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಇವೆಲ್ಲಾ ಹಳೆ ಮೈಸೂರಲ್ಲಿ ಐಕ್ಯವಾಗಿ ಹಲವು ಅತೃಪ್ತಿಗಳ ನಡುವೆ ನವೆಂಬರ್ ೧, ೧೯೫೬ರಲ್ಲಿ ವಿಶಾಲ ಕರ್ನಾಟಕ ರಾಜ್ಯ ನಿರ್ಮಾಣವಾಯಿತು. ಆದರೆ ಅದು ನಮ್ಮ ಅನೇಕ ಹಿರಿಯರು ನಿರೀಕ್ಷಿಸಿದ್ದ ಕರ್ನಾಟಕವಾಗಿರಲಿಲ್ಲ. ಉತ್ತರದಲ್ಲಿ ಸೊಲ್ಲಾಪುರ, ಪೂರ್ವದಲ್ಲಿ ಅನಂತಪುರ, -ಹಿಂದೂಪುರ,- ಧರ್ಮಪುರಿ, ದಕ್ಷಿಣದಲ್ಲಿ ಉದಕ ಮಂಡಲ, ಪಶ್ಚಿಮದಲ್ಲಿ ಕಾಸರಗೋಡು ಕರ್ನಾಟಕದ ಭಾಗವಾಗಿ ಉಳಿಯಬೇಕಿತ್ತು.
***
ಇದು ವಿಭಜನೆಯ ಕಾಲ. ಬೇಕೆಂತಲೇ ನಾನು ಕರ್ನಾಟಕದ ಏಕೀಕರಣದ ವಿವರಗಳನ್ನು ಜತೆಗಿಟ್ಟು ಹೋಲಿಸುತ್ತಿದ್ದೇನೆ. ಏಕೀಕರಣಕ್ಕೆ ಹೋರಾಡಿದ ಮಹನೀಯರು ೧೫೦ಕ್ಕೂ ಹೆಚ್ಚು. ಇದರಲ್ಲಿ ಅನೇಕ ಮಹಿಳೆಯರೂ ಇದ್ದಾರೆ. ಸಂಘ ಸಂಸ್ಥೆಗಳೂ ಇವೆ. ಇದರಲ್ಲಿ ಹೆಚ್.ಎಸ್. ದೊರೆಸ್ವಾಮಿ, ಪಾಟೀಲ ಪುಟ್ಟಪ್ಪ, ಜಿ. ವೆಂಕಟಸುಬ್ಬಯ್ಯ ಮುಂತಾದ ಹಿರಿಯರು ಇನ್ನೂ ನಮ್ಮೊಡನಿದ್ದಾರೆ.

ಆಂಧ್ರಪ್ರದೇಶದಲ್ಲೂ ಇಂಥ ಹಿರಿಯ, ಸಾಂಸ್ಕೃತಿಕ ವ್ಯಕ್ತಿಗಳಿದ್ದಾರೆ. ದೊಡ್ಡವರಾದ ಮೇಲೆ ಮಕ್ಕಳು ಪಾಲು ಕೇಳುತ್ತಾರೆ. ವಯಸ್ಸಾದ ಅಪ್ಪ, ಅಮ್ಮ ಬದುಕಿರುವಾಗಲೇ ಮನೆಯನ್ನು ಭಾಗ ಮಾಡುತ್ತಾರೆ. ನಮ್ಮ ಹಳ್ಳಿ ಕಡೆ ಪಾಲಾಗಿ ಹೋಗುವ ತಮ್ಮಂದಿರನ್ನು ‘ಚಿಕ್ ಮಡ್ಕೇಲಿ ಅಟ್ಟುಣ್ಣಕೆ ವೋದ ’ಎನ್ನುತ್ತಾರೆ. ಉತ್ತರ ಭಾರತದಲ್ಲೂ ರಾಜ್ಯಗಳು ಹೀಗೆಯೇ ವಿಭಜನೆಯಾಗಿವೆ.

ಕೆಲವು ವರ್ಷಗಳ ಹಿಂದೆ ನಾನು ‘ಹೂಮಳೆ’ ಎಂಬ ಚಿತ್ರ ಮಾಡಲು ಈಶಾನ್ಯ ರಾಜ್ಯಗಳಲ್ಲಿ ಅಲೆದಾಡುತ್ತಿದ್ದೆ. ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಅರುಣಾಚಲ ಪ್ರದೇಶ, ಮೇಘಾಲಯ, ಮಿಜೊರಾಂ ರಾಜ್ಯಗಳನ್ನು ಸಪ್ತಸೋದರಿಯರು ಎಂದು ಕರೆಯುತ್ತಾರೆ. ಚೆಲುವಾದ, ಅಖಂಡ ನೈಸರ್ಗಿಕ ಸಂಪನ್ಮೂಲವುಳ್ಳ ಈ ರಾಜ್ಯಗಳನ್ನು ಕೇಂದ್ರ ಆಗಲೂ -ಈಗಲೂ ಉಪೇಕ್ಷೆ ಮಾಡಿದೆ. ಅಲ್ಲಿನ ಕೆಲವು ಜನ ನನ್ನನ್ನು ‘ಓಹೋ ಭಾರತದಿಂದ ಬಂದಿದ್ದೀರಾ?’ ಎಂದು ಕೇಳುತ್ತಿದ್ದರು. ಅವರ ಪ್ರಕಾರ ಭಾರತ ಅವರಿಗೆ ಹೊರಗಿನದು.

ಆದ್ದರಿಂದಲೇ ಅಲ್ಲಿ ಬೋಡೋ, ನಾಗಾ, ಉಲ್ಫಾಗಳ ಪ್ರತ್ಯೇಕತಾ ಹೋರಾಟ. ಉಲ್ಫಾ ಉಗ್ರಗಾಮಿಯೊಬ್ಬ ಕೇಳಿದ: ದೆಹಲಿಯಿಂದ ಮುಂಬೈ ಮತ್ತು ಗೌಹಾಟಿ ಸಮಾನ ಅಂತರದಲ್ಲಿವೆ. ಆದರೆ ದೆಹಲಿಯು ಮುಂಬೈಗೆ ಕೊಡುವ ಪ್ರಾಮುಖ್ಯತೆಯಲ್ಲಿ ಅರ್ಧದಷ್ಟನ್ನಾದರೂ ನಮಗೆ ಕೊಟ್ಟಿದೆಯೆ? ಚಹಾ ಬೆಳೆಯುವವರು ನಾವು. ಅದರ ಮಾರುಕಟ್ಟೆಯ ಹಿಡಿತ ಇರುವುದು ಕೋಲ್ಕತ್ತಾದಲ್ಲಿರುವ ಬಂಗಾಳಿ ಬಾಬುಗಳ ಅಧೀನದಲ್ಲಿ. ನಮಗೆ ಒಳ್ಳೆಯ ರಸ್ತೆಗಳಿಲ್ಲ, ಕೈಗಾರಿಕೆಗಳಿಲ್ಲ. ನಿರುದ್ಯೋಗ ತಾಂಡವ ವಾಡುತ್ತಿದೆ.

ಸುತ್ತ ಐದು ದೇಶಗಳ ಹಾವಳಿ. ನುಸುಳಿ ಬರುವವರನ್ನು ತಡೆಯುವವರು ಯಾರೂ ಇಲ್ಲ. ಗಡಿಗಳಲ್ಲಿ ಬೇಲಿಯೂ ಇಲ್ಲ. ಸಪ್ತಸೋದರಿಯರಿಗೆ ಪಂಚಶತ್ರುಗಳ ಕಾಟ. ನೇಪಾಳ, ಭೂತಾನಗಳನ್ನು ತಾಳಿಕೊಳ್ಳಬಹುದು. ಬರ್ಮಾ, ಬಾಂಗ್ಲಾ, ಚೀನಾಗಳ ಕಾಟ ವಿಪರೀತ. ನಮಗೇ ಉದ್ಯೋಗವಿಲ್ಲ. ಬಾಂಗ್ಲಾ ದೇಶೀಯರು ವಲಸೆ ಬರುತ್ತಾರೆ. ಚೀನಾ ಅತಿಕ್ರಮಣ ಮಾಡುತ್ತಿದೆ. ಕೇಂದ್ರದ ಮಂತ್ರಿಗಳು ಬರುವುದು ಚುನಾವಣಾ ಪೂರ್ವ ಭಾಷಣ ಮಾಡಲು ಮಾತ್ರ. ನಾವು ಯಾಕೆ ಭಾರತೀಯ ರಾಗಿರಬೇಕು?
***
ಮುಖ್ಯವಾದ ಪ್ರಶ್ನೆ. ನಾವು ಯಾಕೆ ಭಾರತೀಯರಾಗಿರಬೇಕು? ನಾವು ಯಾಕೆ ಕನ್ನಡಿಗರಾಗಿರಬೇಕು? ಇಂಥ ಪ್ರಶ್ನೆಗಳೇ ವಿಭಜನೆಯ ಬೀಜ. ಹಾಗೆ ಸಿಡಿದು ಹೋದ ಪಾಕಿಸ್ತಾನದ ದಾಯಾದಿ ಮತ್ಸರ ಭಾರತಕ್ಕೆ ವಾಸಿಯಾಗದ ಶಾಶ್ವತ ತಲೆನೋವಿನಂತಿದೆ. ಕಾಶ್ಮೀರ ಭಾಗಶಃ ಭಾರತದ ಜತೆಗಿದ್ದೂ ತಲೆನೋವಾಗಿದೆ. ಜತೆಗಿದ್ದರೂ ಸಮಸ್ಯೆ. ಬೇರೆ ಆದರೂ ಸಮಸ್ಯೆ. ಪ್ರತಿ ರಾಜ್ಯ, ಭಾಷೆ ಮತ್ತು ಸಂಸ್ಕೃತಿಯನ್ನು ಸಮಾನ ಗೌರವದಿಂದ ಕಾಣುವ ಕೇಂದ್ರೀಯ ವ್ಯವಸ್ಥೆ ನಮ್ಮ ಗಣತಂತ್ರಕ್ಕೆ ಅನಿವಾರ್ಯ. ಪ್ರತ್ಯೇಕ ದೇಶದ ಕಲ್ಪನೆ ಈಗಲೂ ತಮಿಳು ಪ್ರಜ್ಞೆಯಲ್ಲಿ ಸುಪ್ತವಾಗಿದೆ.

ದೇಶದ ಪ್ರಧಾನಿಯನ್ನು ಕೊಂದವರನ್ನು ಬಹಿರಂಗವಾಗಿ ಸಮರ್ಥನೆ ಮಾಡುವ ಮನಸ್ಸುಗಳು ಅಲ್ಲಿವೆ. ನಮ್ಮದು ಜಗತ್ತಿನ ಬಹು ದೊಡ್ಡ ಪ್ರಜಾಪ್ರಭುತ್ವ- ಅನೇಕ ಅಸಂತುಷ್ಟ ಸದಸ್ಯರೊಡನೆ. ಕೆಲವೊಮ್ಮೆ ಪ್ರತ್ಯೇಕ ವಾದ ಸಮರ್ಥನೀಯ ಅನ್ನಿಸಿದರೂ ಎಲ್ಲಕ್ಕೂ ವಿಭಜನೆಯೊಂದೇ ಉತ್ತರವಲ್ಲ. ಹಾಗೆ ಪ್ರತ್ಯೇಕಗೊಂಡ ದೇಶ ಅಥವಾ ರಾಜ್ಯಗಳು ಪ್ರಗತಿ ಸಾಧಿಸಿದ್ದೂ ಅಷ್ಟರಲ್ಲೇ ಇದೆ.

ರಷ್ಯಾ ಗಣರಾಜ್ಯದಿಂದ ಸಿಡಿದು ಹೊರಬಂದ ಉಕ್ರೇನ್ ಏನಾಗುತ್ತಿದೆ? ಕೇಂದ್ರವನ್ನು ದೂರುವುದು ಸುಲಭ. ಭಾರತದಂಥ ವೈವಿಧ್ಯಮಯ ಭಾಷೆ, ಸಂಸ್ಕೃತಿಗಳ ಗಣರಾಜ್ಯದಲ್ಲಿ ಕೇಂದ್ರಕ್ಕೆ ನೂರಾರು ಸವಾಲುಗಳಿರುತ್ತವೆ. ಮೂರು ಕಡೆ ನೀರಿದ್ದೂ, ತಲೆಯ ಮೇಲೆ ಹಿಮಾಲಯವಿದ್ದೂ ನಮ್ಮ ರಕ್ಷಣಾತ್ಮಕ ತಲೆನೋವುಗಳು ಅಪಾರ. ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಇಲ್ಲಿ ಪವಾಡವನ್ನು ನಿರೀಕ್ಷಿಸುವುದು ಅಪ್ರಾಯೋಗಿಕ. ಒಂದೇ ಭಾಷೆಯನ್ನಾಡುವ ಜನರಿಗೆ ಎರಡು ರಾಜ್ಯಗಳನ್ನು ವಿಂಗಡಿಸುವುದು ಅವೈಜ್ಞಾನಿಕ.

ಪರ್ಯಾಯ ಕ್ರಮಗಳನ್ನು ಯೋಚಿಸುವ ವ್ಯವಧಾನ ಈಗ ಯಾರಿಗೂ ಇಲ್ಲ. ಆಂಧ್ರ ವಿಭಜನೆ ಇನ್ನಾವ ಭಾಷಿಕರಿಗೂ ಮಾದರಿಯಾಗದಿರಲಿ. ಈ ಅಂಟುಜಾಡ್ಯ ಪಕ್ಕದಲ್ಲೇ ಇರುವ ಕರ್ನಾಟಕಕ್ಕೆ ಎಂದೆಂದೂ ಸೋಂಕದಿರಲಿ. ಕರ್ನಾಟಕದ ವಿಭಜನೆಯಿಂದ ಕನ್ನಡಕ್ಕೆ ತೀವ್ರ ಹಾನಿಯಾಗುತ್ತದೆ. ಹಿಂದುಳಿದ ಪ್ರದೇಶಗಳ ಜನನಾಯಕರು ತಮ್ಮ ಪ್ರಾಂತ್ಯಗಳ ಪ್ರಗತಿಗೆ ಬದ್ಧರಾಗಿ ಕೆಲಸ ಮಾಡಿದರೆ ಎಲ್ಲವೂ ಒಳಿತಾಗುತ್ತದೆ. ಸದ್ಯಕ್ಕೆ ಕನ್ನಡ ನಾಡಿಗೆ ವಿಭಜನೆಯ ಅಪಾಯವಿಲ್ಲ ಎಂಬುದು ಸಮಾಧಾನಕರ ಸಂಗತಿ. ಆದರೆ ಚಿಕ್ಕಮಡಕೆಯಲ್ಲಿ ಅಟ್ಟುಣ್ಣುವ ಆಸೆ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT