ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಲೇಖ ಕೊಲೆ ಪ್ರಕರಣವು

Last Updated 12 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಜನವರಿ 19, 2004ರಂದು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಾಯಿತು. ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಚಂದ್ರ ಕಾಂತರಾಜ ಅರಸ್ ಅವರ ಮಗಳು ಚಿತ್ರಲೇಖ ಕಾಣೆಯಾಗಿದ್ದರು. ಅವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಸಂಬಂಧಿ. ದೇವರಾಜ ಅರಸು ಅವರ ಮಗಳಾದ ಭಾರತಿ ಅರಸ್ ಅವರನ್ನು ಭೇಟಿ ಮಾಡಲು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತುಂಬಾ ಸಮೀಪದಲ್ಲಿದ್ದ `ಪಾಮ್ ಗ್ರೂವ್ ನರ್ಸರಿ~ಗೆ ಹೋಗುವುದಾಗಿ ಅಕ್ಕನಿಗೆ ಫೋನ್‌ನಲ್ಲಿ ತಿಳಿಸಿದ್ದ ಚಿತ್ರಲೇಖ, ಆಮೇಲೆ ಮನೆಗೆ ಮರಳಲೇ ಇಲ್ಲ. ಅವರ ಅಕ್ಕನೇ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹೈಗ್ರೌಂಡ್ಸ್ ಪೊಲೀಸರು ಎಷ್ಟು ಯತ್ನಿಸಿದರೂ ಚಿತ್ರಲೇಖ ಪತ್ತೆಯಾಗಲೇ ಇಲ್ಲ. ವೃತ್ತಿಯಲ್ಲಿ ವಕೀಲೆಯಾಗಿದ್ದರಿಂದ ಹಾಗೂ ಮೈಸೂರಿನ ಪ್ರತಿಷ್ಠಿತ ವಂಶದವರಾದ ಕಾರಣ ಪೊಲೀಸರ ಮೇಲೆ ಒತ್ತಡವಿತ್ತು. ದಿನಗಳೆದಂತೆ ಅವರನ್ನು ಪತ್ತೆ ಮಾಡಲು ಪೊಲೀಸರು ವಿಫಲ ರಾಗಿದ್ದಾರೆಂದು ವಕೀಲರ ಸಂಘದವರು ಟೀಕೆ ಮಾಡತೊಡಗಿದರು. ಪ್ರಕರಣ ಒಂದು ರಾದ್ಧಾಂತ ವೆಂಬಂತೆ ಆಯಿತು.

ಹೈಗ್ರೌಂಡ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗಂಭೀರವಾಗಿ ತನಿಖೆ ಪ್ರಾರಂಭಿಸಿ ದರು. ಎರಡು ಮೂರು ತಂಡಗಳನ್ನು ರಚಿಸಿ ಚಿತ್ರಲೇಖ ಅವರಿಗಾಗಿ ಹುಡುಕಾಡ ತೊಡಗಿ ದರು.
 
ತಮ್ಮ ಕಾರಿನ ಸಮೇತ ಚಿತ್ರಲೇಖ ಕಾಣೆಯಾಗಿದ್ದರು. ಆ ಕಾರು ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕಾರು ಸಿಕ್ಕಿತು. ಆದರೆ, ಆ ಕಾರಿನಲ್ಲಿ ಸಂಚರಿಸಿದ್ದ ವ್ಯಕ್ತಿಗಳು ಪತ್ತೆಯಾಗಲಿಲ್ಲ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯ ಒಂದು ತಂಡ ಮಂಗಳೂರಿ ನಲ್ಲಿ ತನಿಖೆ ನಡೆಸಿತು. ಕಬ್ಬನ್‌ಪಾರ್ಕ್ ಇನ್ಸ್‌ಪೆಕ್ಟರ್ ಜಿತೇಂದ್ರನಾಥ್ ಅವರು ಕೊಟ್ಟ ವರದಿಯಂತೆ ಅದೊಂದು ಅಪಹರಣ ಪ್ರಕರಣ ಎಂದು ಕೇಸು ದಾಖಲಾಯಿತು. ಕಾರಿನಲ್ಲಿ ಒಬ್ಬ ಮಹಿಳೆ ಹಾಗೂ ಇಬ್ಬರು ಪುರುಷರಿದ್ದರು ಎಂಬ ಮಾಹಿತಿಯ ಆಧಾರದ ಮೇಲೆ ಕೇಸು ದಾಖಲಿಸಿ ದ್ದರು. ಇದರಿಂದ ಸಮಸ್ಯೆಯೇನೂ ಬಗೆಹರಿಯ ಲಿಲ್ಲ. ಚಿತ್ರಲೇಖ ಪತ್ತೆಯಾಗಲಿಲ್ಲ ಎಂಬ ಕಾರಣಕ್ಕೆ ವಕೀಲರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಹಾಗಾಗಿ ಆಗ ಪೊಲೀಸ್ ಕಮಿಷನರ್ ಆಗಿದ್ದ ಮರಿಸ್ವಾಮಿ ಫೆಬ್ರುವರಿ 7ರಂದು ಪ್ರಕರಣವನ್ನು ಸಿಟಿ ಕ್ರೈಮ್ ಬ್ರ್ಯಾಂಚ್‌ಗೆ (ಸಿಸಿಬಿ) ವರ್ಗಾಯಿಸಿ ದರು.

ಅಬ್ದುಲ್ ಅಜೀಂ ಆಗ ಸಿಸಿಬಿಯಲ್ಲಿ ಎಸಿಪಿ ಆಗಿದ್ದರು. ನನಗೆ ಆಗಷ್ಟೇ ಬಡ್ತಿ ಸಿಕ್ಕಿ, ಸಿಟಿ ಕ್ರೈಮ್ ರೆಕಾರ್ಡ್ ಬ್ಯೂರೋಗೆ ಪೋಸ್ಟಿಂಗ್ ಮಾಡ ಲಾಗಿತ್ತು. ಅಜೀಂ ಅವರು ಚುನಾವಣೆಯಲ್ಲಿ ಸ್ಪರ್ಧಿಸಲೆಂದು ಸ್ವಯಂ ನಿವೃತ್ತಿ ಪಡೆಯುವ ನಿರ್ಧಾರ ಮಾಡಿದ್ದರು. ಆಗ ಕಮಿಷನರ್ ನನ್ನನ್ನು ಸಿಸಿಬಿಗೆ ವರ್ಗಾವಣೆ ಮಾಡಿ, ಚಿತ್ರಲೇಖ ಕೊಲೆ ಪ್ರಕರಣದ ತನಿಖೆ ಜವಾಬ್ದಾರಿ ವಹಿಸಿದರು. ಫೆಬ್ರುವರಿ 23ರಲ್ಲಿ ನಾನು ಈ ಪ್ರಕರಣದ ತನಿಖೆ ಮಾಡಲಾರಂಭಿಸಿದೆ.

ಹೈಗ್ರೌಂಡ್ಸ್ ಪೊಲೀಸರು ಸಂಗ್ರಹಿಸಿದ್ದ ಮಾಹಿತಿ ಯಲ್ಲಿ ಯಾವ ಸುಳಿವೂ ಸಿಗಲಿಲ್ಲ. ಬೆಂಗಳೂರಿ ನಿಂದ ಮಂಗಳೂರಿನ ಹಾದಿಯ ಎಲ್ಲಾ ಠಾಣೆ ಗಳನ್ನೂ ಸಂಪರ್ಕಿಸಿ, ಆ ವ್ಯಾಪ್ತಿಯಲ್ಲಿ ದೊರೆತಿದ್ದ ಮಹಿಳೆಯರ ಶವಗಳ ಬಗ್ಗೆ ಮಾಹಿತಿ ಕಲೆಹಾಕಿ, ಅವುಗಳಲ್ಲಿ ಯಾವುದಾದರೂ ಒಂದು ಚಿತ್ರಲೇಖ ಅವರದ್ದಾಗಿರಬಹುದೇ ಎಂದು ಪರಿಶೀಲಿಸಿದೆ. ಯಾವ ಶವಕ್ಕೂ ಅವರ ಚಹರೆ ಇರಲಿಲ್ಲ. ಆಗ ಚಿತ್ರಲೇಖ ಅವರ ತಾಯಿ ಹಾಗೂ ಅಕ್ಕನ ಹೇಳಿಕೆ ಪಡೆದೆ. ಪ್ರಕರಣದ ಹಿನ್ನೆಲೆಯನ್ನು ಗಮನಿಸಿದರೆ ಭಾರತಿ ಅರಸ್ ಅವರ ಮೇಲೆಯೇ ಅನುಮಾನ ಬರುವಂತಿತ್ತು.

ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಅವರ ತನಿಖಾ ಕಾಲದಲ್ಲಿ, `ನಿಮ್ಮನ್ನು ವಿಚಾರಣೆ ಮಾಡಬೇಕಿದೆ. ನೀವು ವಿಚಾರಣೆಗೆ ಹಾಜರಾಗಬೇಕು~ ಎಂದು ಕಾನೂನಾತ್ಮಕವಾಗಿ  ಭಾರತಿ ಅರಸ್ ಅವರಿಗೆ ಒಂದು ನೋಟಿಸ್ ಕಳುಹಿಸಿದ್ದರು. `ನಾನು ಮಹಿಳೆ. ವಿಚಾರಣೆಗಾಗಿ ಮಹಿಳೆಯರನ್ನು ಠಾಣೆಗೆ ಕರೆಸುವಂತಿಲ್ಲ ಎಂದು ಭಾರತೀಯ ಅಪರಾಧ ಪ್ರಕ್ರಿಯಾ ಸಂಹಿತೆಯಲ್ಲಿ ಸ್ಪಷ್ಟ ಉಲ್ಲೇಖವಿದೆ. ಪಾಲಿಗ್ರಫಿ ಟೆಸ್ಟ್ (ಸುಳ್ಳು ಶೋಧಕ ಪರೀಕ್ಷೆ) ಮಾಡುವುದಾಗಿ ತಿಳಿಸಿದ್ದಾರೆ. ಇದು ಸಲ್ಲ~ ಎಂದು ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಹಾಕಿದರು. ಅವರನ್ನು ವಿಚಾರಣೆಗೆ ಒಳಪಡಿಸಲು ತಾತ್ಕಾಲಿಕ ತಡೆ ಸಿಕ್ಕಿತು.

ಇದು ವಿಚಾರಣೆ ದೃಷ್ಟಿಯಿಂದ ನನಗೆ ಭಾರೀ ಹಿನ್ನಡೆ. ಅವರನ್ನು ಮಾತನಾಡಿಸದ ಹೊರತು ಯಾವ ಸುಳಿವುಗಳೂ ಸಿಗುವ ಸಾಧ್ಯತೆ ಕಾಣಲಿಲ್ಲ. ನಾನು ಮಂಗಳೂರು ಪೊಲೀಸ್ ಠಾಣೆಗೆ ಹೋದೆ. ಅಲ್ಲಿ ನಾಕಾಬಂದಿ ಮಾಡಿದ ಪೊಲೀಸರು ಚಿತ್ರಲೇಖ ಅವರ ಕಾರು ಮಂಗಳೂರು ಸರಹದ್ದಿನ ಒಳಗೆ ಪ್ರವೇಶಿಸಿದ್ದನ್ನು ನಮೂದಿಸಿದ್ದರು. ಆ ಕಾರಿನಲ್ಲಿ ಇಬ್ಬರು ಗಂಡಸರು ಜೊತೆಗಿದ್ದರು ಎಂಬ ಮಾಹಿತಿ ಕೂಡ ಇತ್ತು. ಬಾಬುಗುಡ್ಡ ಎಂಬ ಪ್ರದೇಶದಲ್ಲಿ ಆ ಕಾರು ಸಿಕ್ಕಿದ್ದು. ಅಲ್ಲಿನ ಜನರನ್ನು ವಿಚಾರಿಸಿದರೂ ಹೆಚ್ಚಿನ ವಿವರ ಸಿಗಲಿಲ್ಲ.

ಹೆಸರಾಂತ ಉದ್ಯಮಿ ಹರಿ ಖೋಡೆ ಅವರ ಒಡೆತನದ `ಪಾಮ್ ಗ್ರೂವ್ ನರ್ಸರಿ~ಯನ್ನು ಭಾರತಿ ಅರಸ್ ತಮ್ಮ ವ್ಯವಹಾರ ಚಟುವಟಿಕೆ ನಡೆಸಲು ಕಚೇರಿಯಂತೆ ಬಳಸಿಕೊಳ್ಳುತ್ತಿದ್ದರು. ಮಾರ್ಚ್‌ನಲ್ಲಿ ನಾನು ಹಾಗೂ ನನ್ನ ತಂಡದ ಕೆಲವರು ಅಲ್ಲಿಗೆ ವಿಚಾರಣೆ ಮಾಡಲೆಂದು ಹೋದೆವು. ಅಲ್ಲಿನ ಭದ್ರತಾ ಸಿಬ್ಬಂದಿ ಹಾಗೂ ಕೆಲಸ ಮಾಡುತ್ತಿದ್ದ ಇತರರು ತಮ್ಮ ಹೆಸರನ್ನು ಹೊರತುಪಡಿಸಿ ಬೇರೇನು ಕೇಳಿದರೂ ಬಾಯಿ ಬಿಡುತ್ತಲೇ ಇರಲಿಲ್ಲ. ಲಿಂಗಪ್ಪ ಮತ್ತು ಶಿವಣ್ಣ ಎಂಬಿಬ್ಬರು ಪರಿಚಾರಕರನ್ನು ವಶಕ್ಕೆ ತೆಗೆದುಕೊಂಡೆ. ಅವರನ್ನು ಪ್ರಶ್ನೆ ಮಾಡಲು ಪ್ರಾರಂಭಿಸಿದೆ. ಅಲ್ಲಿ ಯಾರನ್ನು ನಾವು ಪ್ರಶ್ನಿಸಲು ಹೋದರೂ ಅವರ ಸುತ್ತ ಮೂವರು ನಿವೃತ್ತ ಪೊಲೀಸ್ ಅಧಿಕಾರಿಗಳು, ಒಬ್ಬ ನಿವೃತ್ತ ತಹಶೀಲ್ದಾರ್, ಒಬ್ಬ ವಕೀಲ, ಒಬ್ಬ ಮ್ಯಾನೇಜರ್ ಹಾಗೂ ಒಬ್ಬ ಪತ್ರಕರ್ತ ಕೋಟೆಯಂತೆ ನಿಲ್ಲುತ್ತಿದ್ದರು. ಆ ಏಳು ಮಂದಿ ಪ್ರಭಾವಳಿ ಇದ್ದಂಥವರು. ಏನೂ ಹೇಳದಂತೆ ಅವರು ಎಲ್ಲರ ಬಾಯಿಗೆ ಬೀಗ ಹಾಕಿದ್ದಾರೆಂದು ನನಗೆ ಅನುಮಾನ ಬಂತು. ಹಾಗಾಗಿ ಲಿಂಗಪ್ಪ, ಶಿವಣ್ಣ ಇಬ್ಬರನ್ನೂ ಸಿಸಿಬಿ ಕಚೇರಿಗೆ ಕರೆದುಕೊಂಡು ಹೋಗಿ ಪ್ರಶ್ನೆ ಮಾಡಲು ಪ್ರಾರಂಭಿಸಿದೆ. ನಮ್ಮ ತಂಡದಲ್ಲಿದ್ದ ಅಧಿಕಾರಿಗಳು ಕೂಡ ಪ್ರಶ್ನೆಗಳನ್ನು ಕೇಳುವ ಮೂಲಕ ಸಾಕಷ್ಟು ಒತ್ತಡ ಹಾಕಿದರು. 

 `ಊಟ ಆಯಿತಾ~, `ತಿಂಡಿ ತಿಂದಿರಾ~ ಎಂದು ಕೇಳಿದರು ಕೂಡ ಅವರು `ಗೊತ್ತಿಲ್ಲ~ ಎಂಬ ಉತ್ತರ ಕೊಟ್ಟಾಗ ನನ್ನ ಅನುಮಾನ ಬಲವಾಯಿತು. ರಾತ್ರಿ ಹತ್ತು ಗಂಟೆಯವರೆಗೆ ಅವರನ್ನೂ ಎದುರಲ್ಲಿ ಕೂರಿಸಿಕೊಂಡು ಕಾಯುತ್ತಾ ಕುಳಿತೆ. ಅವರ ಸುತ್ತ ಇದ್ದ ಕೋಟೆಯ ಪ್ರತಿಷ್ಠಿತರೆಲ್ಲಾ ರಾತ್ರಿಯ ಮದ್ಯಪಾನ ಇತ್ಯಾದಿ ಚಟ ತೀರಿಸಿಕೊಳ್ಳಲು ಒಬ್ಬರ ನಂತರ ಒಬ್ಬರು ಕರಗಿದರು. ವಿಚಾರಣೆ ನಡೆಸುವಾಗ ಆಸೆ- ಆಮಿಷ ತೋರಿಸುವುದಾಗಲೀ ಒತ್ತಡ ಹೇರುವುದಾಗಲೀ ಕೂಡದೆಂಬುದು ನಿಯಮ. ಹಾಗಾಗಿ ನಾನು ಲಿಂಗಪ್ಪ ಹಾಗೂ ಶಿವಣ್ಣ ಇಬ್ಬರ ಬಾಯಿ ಬಿಡಿಸಲು ಇನ್ನಿಲ್ಲದಂತೆ ಪರದಾಡಿದೆ. ಮೊದಲಿಗೆ ಲಿಂಗಪ್ಪನನ್ನು ಕರೆದೆ.

ಏನು ಮಾಡಿದರೂ ಅವನ ಬಾಯಿ ಬಿಡಿಸಲು ಆಗಲಿಲ್ಲ. ಅವನು ಕಣ್ಣಲ್ಲಿ ನೀರು ಹಾಕಲಾರಂಭಿಸಿದ. ಸ್ವಲ್ಪ ದೂರದಲ್ಲಿ ಕೂರುವಂತೆ ಆತನಿಗೆ ಸೂಚಿಸಿ, ಶಿವಣ್ಣನನ್ನು ಕರೆದೆ. ನನ್ನತ್ತ ಬರುವಾಗಲೇ ತನ್ನ ಸಂಗಡಿಗನ ಕಣ್ಣಲ್ಲಿ ನೀರು ಇದ್ದದ್ದನ್ನು ಆತ ಕಂಡ.

`ಅವನು ಮರ್ಯಾದಸ್ಥ. ನನಗೆ ಎಲ್ಲಾ ಹೇಳಿದಾನೆ; ಈಗ ಏನು ನಡೆಯಿತು ಎಂದು ನೀನು ಹೇಳು~ ಎಂದೆ. ನಾನು ಕೂತಿದ್ದ ಮೇಜಿನ ಮೇಲೆ ಚಿತ್ರಲೇಖ ಅವರ ದೊಡ್ಡ ಫೋಟೋ ಇಟ್ಟಿದ್ದೆ. ಅದನ್ನು ತೋರಿಸಿ, `ಇವರು ಗೊತ್ತೆ~ ಎಂದದ್ದೇ ಅವನು ನಡುಗುತ್ತಾ, ಹೌದೆಂದ. ಆ ದಿನ ಅವರು ಪಾಮ್ ಗ್ರೂವ್ ನರ್ಸರಿಗೆ ಬಂದಿದ್ದರೆಂಬುದನ್ನೂ ತಿಳಿಸಿದ. ಭಾರತಿ ಅರಸ್ ಅವರನ್ನು ಬೇಬಿ ಮೇಡಂ ಎಂದು ಸಂಬೋಧಿಸುತ್ತಿದ್ದ ಅವನು, `ಬೇಬಿ ಮೇಡಂ ಜೊತೆ ಅವರು ಮಾತಾಡುತ್ತಾ ಕೂತಿದ್ದರು. ಅವರ ಜೊತೆಯಲ್ಲಿ ಚಂದ್ರಕಾಂತ್ ಹಾಗೂ ಮಧುಕುಮಾರ್ ಇಬ್ಬರೂ ಇದ್ದರು. ಅವರಿಬ್ಬರು ಮೇಡಂಗೆ ಬಾಡಿಗಾರ್ಡ್ ತರಹ ಇದ್ದರು.

ಸೌತೇಕಾಯಿಯನ್ನು ಕೋಸಂಬರಿಗೆ ಹೆಚ್ಚುವಂತೆ ಸಣ್ಣಗೆ ಹೆಚ್ಚಿಕೊಂಡು ಬರುವಂತೆ ನನಗೆ ಹೇಳಿದರು. ಸೌತೇಕಾಯಿ ಇರಲಿಲ್ಲ. ಹಾಗಾಗಿ ಅಂಗಡಿಗೆ ಹೋಗಿ ಅದನ್ನು ತೆಗೆದುಕೊಂಡು ಬಂದೆ. ಅದೇ ವೇಳೆಗೆ ಲಿಂಗಪ್ಪನನ್ನು ಚಾಲುಕ್ಯ ಹೋಟೆಲ್‌ನಲ್ಲಿ ಬೋಂಡಾ ತರಲು ಮೇಡಂ ಕಳಿಸಿದ್ದರು. ನಾನು ಸೌತೇಕಾಯಿ ಕತ್ತರಿಸಿಕೊಂಡು ಹೋಗುವಷ್ಟರಲ್ಲಿ ಚಿತ್ರಲೇಖ ಮೇಡಂ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರಿಗೆ ತಲೆ ಸುತ್ತು ಬಂದಿತ್ತಂತೆ.
 
ಆಮೇಲೆ ಚಿತ್ರಲೇಖ ಮೇಡಂ ಅವರನ್ನು ಅವರದ್ದೇ ಕಾರಿನಲ್ಲಿ ಕೂರಿಸಿಕೊಂಡು ಚಂದ್ರಕಾಂತ್ ಹಾಗೂ ಮಧುಕುಮಾರ್ ಎಲ್ಲಿಗೋ ಹೋದರು. ಆಗ ನಮ್ಮ ಯಜಮಾನರಾದ ಹರಿ ಖೋಡೆ ಸಾಹೇಬರು ಅಲ್ಲಿರಲಿಲ್ಲ~ ಎಂದು ಅವನು ಭಯದಿಂದಲೇ ಎಲ್ಲವನ್ನೂ ಹೇಳಿಬಿಟ್ಟ. ರಾಜಕೀಯ ಪಕ್ಷವೊಂದರ ಪ್ರಧಾನ ಕಾರ್ಯದರ್ಶಿ ಟಿ.ಮಧುಕುಮಾರ್. ಅವನ ಸ್ನೇಹಿತ ಎಲ್.ಎನ್.ಚಂದ್ರಕಾಂತ್. ನನಗೆ ಹಾಗೂ ಅಲ್ಲಿದ್ದ ಅಧಿಕಾರಿಗಳಿಗೆ ಆಶ್ಚರ್ಯ ವಾಯಿತು. ತಪ್ಪಿತಸ್ಥರು ಇನ್ನು ಸಿಕ್ಕಿಬಿದ್ದರು ಎಂದುಕೊಂಡು ಚಂದ್ರಕಾಂತ್ ಹಾಗೂ ಮಧುಕುಮಾರ್ ಅವರನ್ನು ದಸ್ತಗಿರಿ ಮಾಡಲು ನಿರ್ಧರಿಸಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT