ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಎಂಬ ಆಷಾಢಭೂತಿ

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತ ಜಾಗತೀಕರಣದ ವಿರುದ್ಧ ತೀವ್ರ ಸ್ವರೂಪದ ವಾಗ್ದಾಳಿ ನಡೆಯುತ್ತಿದೆ. ಜಾಗತೀಕರಣದ ಸಕಾರಾತ್ಮಕ ಫಲಿತಾಂಶಗಳ ಬಗ್ಗೆ ಅನುಮಾನ ಹೊಂದಿರುವವರ ಜತೆಗೆ, ಎಡಪಂಥೀಯ ಮತ್ತು ಎಡಪಂಥೀಯ ಚಿಂತನೆ ಪರ ವಾಲುವವರಿಂದಲೂ ಟೀಕೆಗಳ ಸುರಿಮಳೆ ಕೇಳಿ ಬರುತ್ತಿದೆ. ಇದಕ್ಕಿಂತಲೂ ಹೆಚ್ಚಾಗಿ, ಚುನಾಯಿತ ಬಲಿಷ್ಠ ಪ್ರಜಾಸತ್ತಾತ್ಮಕ ಸಿರಿವಂತ ದೇಶಗಳೂ ಜಾಗತೀಕರಣದ ವಿರುದ್ಧ ದೊಡ್ಡ ದನಿಯಲ್ಲಿ ಮಾತನಾಡುತ್ತಿರುವುದು ಹೊಸ ಬೆಳವಣಿಗೆಯಾಗಿದೆ.

ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿದ್ದ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್‌) ವಾರ್ಷಿಕ ಸಮಾವೇಶವು ಶನಿವಾರವಷ್ಟೇ ಕೊನೆಗೊಂಡಿದೆ. ವಿಶ್ವದ ಒಟ್ಟಾರೆ ಪರಿಸ್ಥಿತಿ ಸುಧಾರಿಸುವುದಕ್ಕೆ ತಾನು ಕಟಿಬದ್ಧವಾಗಿರುವುದಾಗಿ ಈ ವೇದಿಕೆಯು ಮೊದಲಿನಿಂದಲೂ ಪ್ರತಿಪಾದಿಸುತ್ತಲೇ ಬಂದಿದೆ. ಒಳ್ಳೆಯ ದಿನಗಳಲ್ಲಿ ಈ ನಿಲುವನ್ನು ಬಾಯ್ತುಂಬ ಶ್ಲಾಘಿಸಲಾಗುತ್ತಿತ್ತು. ಆದರೆ, ಈ ಬಾರಿಯ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ವಿಶ್ವದಾದ್ಯಂತ ಒಳ್ಳೆಯ ದಿನಗಳೇನೂ ಕಂಡು ಬರುತ್ತಿರಲಿಲ್ಲ. ಜಾಗತೀಕರಣ ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ಯುವ ಚಾಲಕ ಶಕ್ತಿಯಾಗಿರುವ ಈ ವೇದಿಕೆಯನ್ನು ಅನೇಕರು ತುಂಬ ಗೌರವದಿಂದ ಕಾಣುತ್ತಾರೆ. ಇನ್ನು ಕೆಲವರು ಅದರ ಬಗ್ಗೆ ತಿರಸ್ಕಾರ ಧೋರಣೆಯನ್ನೂ ತಳೆದಿದ್ದಾರೆ.

ವಿಶ್ವದಲ್ಲಿ ಸದ್ಯಕ್ಕೆ ಬಲಿಷ್ಠ ಕಮ್ಯುನಿಸ್ಟ್‌ ಸರ್ಕಾರ ಇರುವ ಚೀನಾದ ಪ್ರಭಾವಿ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರು ಈಗ ಜಾಗತೀಕರಣದ ಪ್ರಬಲ ಪ್ರತಿಪಾದಕರಾಗಿ ವಿಶ್ವದ ಗಮನ ಸೆಳೆಯುತ್ತಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ರಿಪಬ್ಲಿಕನ್‌ ಪಕ್ಷದ ಕೋಟ್ಯಧಿಪತಿ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರು ಜಾಗತೀಕರಣದ ಕಟು ಟೀಕಾಕಾರರಾಗಿ ಹೊರ ಹೊಮ್ಮಿರುವುದು ನಾವಿಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಸಂಗತಿಯಾಗಿದೆ. ವಿಶ್ವದ ಎರಡು ಪ್ರಮುಖ ಆರ್ಥಿಕ ಶಕ್ತಿಗಳು ಜಾಗತೀಕರಣದ ಬಗ್ಗೆ ವಿಭಿನ್ನ ನಿಲುವು ತಳೆದಿರುವ ಸದ್ಯದ ಸಂದರ್ಭದಲ್ಲಿ, ವಿಶ್ವದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ವಿಶ್ವ ಆರ್ಥಿಕ ವೇದಿಕೆಯು ಮುಂಬರುವ ದಿನಗಳಲ್ಲಿ ಯಾವ ಕಾರ್ಯತಂತ್ರ ಅನುಸರಿಸಲಿದೆ ಎನ್ನುವುದು ಸ್ಪಷ್ಟವಾಗಿಲ್ಲ.

ದಾವೋಸ್‌ನಲ್ಲಿ ಕುಳಿತುಕೊಂಡು ವಿಶ್ವ ಭೂಪಟದ ಮೇಲೆ ಒಂದು ಬಾರಿ ಕಣ್ಣು ಹಾಯಿಸಿದರೆ, ಜಗತ್ತಿನ ವಿವಿಧ ಭಾಗಗಳಲ್ಲಿ ಅಧಿಕಾರದಲ್ಲಿ ಇರುವ ಜಾಗತಿಕ ಪ್ರಮುಖರು ವಿಶೇಷವಾಗಿ ಕಣ್ಣಿಗೆ ಬೀಳುತ್ತಾರೆ. ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌, ವ್ಲಾಡಿಮಿರ್‌ ಪುಟಿನ್ (ರಷ್ಯಾ), ಅಬೆ (ಜಪಾನ್‌), ಕ್ಸಿ ಜಿನ್‌ ಪಿಂಗ್ (ಚೀನಾ), ನರೇಂದ್ರ ಮೋದಿ (ಭಾರತ), ಎರ್ಡೊಗನ್ (ಟರ್ಕಿ) ಮತ್ತು ನೆತಾನ್ಯಹು  (ಇಸ್ರೇಲ್‌) ಅಧಿಕಾರದಲ್ಲಿ ಇರುವುದು ಗಮನ ಸೆಳೆಯುತ್ತದೆ. ಜಾಗತಿಕ ವಿದ್ಯಮಾನಗಳಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಈ ದೇಶಗಳಲ್ಲಿ ಅಧಿಕಾರ ಸೂತ್ರ ಹಿಡಿದಿರುವ  ಇವರೆಲ್ಲ ಸಮರ್ಥರು ಮತ್ತು ಪ್ರಭಾವಶಾಲಿ ನಾಯಕರೂ ಆಗಿದ್ದಾರೆ. ದೃಢ ನಿರ್ಧಾರ ಕೈಗೊಳ್ಳುವುದಕ್ಕೂ ಖ್ಯಾತರಾಗಿದ್ದಾರೆ.

ಈ ಜಾಗತಿಕ ಮುಖಂಡರಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಆಡಳಿತಶೈಲಿಗೂ ಖ್ಯಾತರಾಗಿದ್ದಾರೆ. ಆದರೆ, ಅವರಲ್ಲಿ ಕೆಲ ಗುಣ ವಿಶೇಷಗಳು ಮಾತ್ರ ಒಂದೇ ಬಗೆಯಲ್ಲಿ ಇರುವುದು ಕಂಡು ಬರುತ್ತದೆ. ಜನಪ್ರಿಯತೆಗೆ ಜೋತು ಬಿದ್ದಿರುವುದು, ಉಗ್ರ ರಾಷ್ಟ್ರೀಯವಾದ ಪಾಲಿಸುವುದು ಸಾಮಾನ್ಯ ಗುಣವಾಗಿದೆ. ಇದರ ಜತೆಗೆ, ನೇರ ನಡೆ ನುಡಿ ಮತ್ತು ಕೆಲವೊಮ್ಮೆ ತಮ್ಮ ಒರಟು ಮಾತುಗಳಿಂದ ಜಾಗತಿಕ ಸಮುದಾಯದ ಗಮನ ಸೆಳೆಯುತ್ತಿದ್ದಾರೆ. ಈ ಜಾಗತಿಕ ಪ್ರಮುಖರ ನಡೆನುಡಿ, ಮಾತುಗಳು ಒಂದೊಮ್ಮೆ ನಿಮಗೆ ಬೇಸರ ಉಂಟು ಮಾಡಿದರೆ ಫಿಲಿಪ್ಪೀನ್ಸ್‌ನ ವಾಚಾಳಿ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಅವರತ್ತ ಗಮನಹರಿಸಿ. ಆದರೆ, ಸದ್ಯಕ್ಕೆ ಫಿಲಿಪ್ಪೀನ್ಸ್‌ಗೆ ಭೇಟಿ ನೀಡಲು ಮಾತ್ರ  ಹೋಗಬೇಡಿ.

ಟ್ರಂಪ್‌ ನೇತೃತ್ವದಲ್ಲಿನ ಅಮೆರಿಕವು ಸೇನಾ ಸಾಮರ್ಥ್ಯ, ಆರ್ಥಿಕ ಶಕ್ತಿ  ಮತ್ತು ತಂತ್ರಜ್ಞಾನ ರಂಗದಲ್ಲಿ ಈಗಲೂ ಅತ್ಯಂತ ಬಲಿಷ್ಠ ದೇಶವಾಗಿದೆ. ರಷ್ಯಾದ ತುಂಬೆಲ್ಲ ಪ್ರಭಾವ ಬೀರಿರುವ ಪುಟಿನ್‌, ಟ್ರಂಪ್‌ ಜತೆಗೂ ಸೌಹಾರ್ದ ಸಂಬಂಧ ಹೊಂದಿದ್ದಾರೆ. ಅಬೆ ಅವರಿಗೆ ಜಪಾನ್‌ನಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾಗಿವೆ. ಜನಸಂಖ್ಯೆ ಕುಸಿತದ ಸಮಸ್ಯೆಯಿಂದ ಹೊರ ಬರುವುದು ಅವರಿಗೆ ಮುಖ್ಯ ಸವಾಲಾಗಿದೆ. ಜಾಗತಿಕ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ಆಂತರಿಕ ವಿದ್ಯಮಾನಗಳತ್ತ ಹೆಚ್ಚು ಗಮನ ಕೇಂದ್ರೀಕರಿಸಲು ಮುಂದಾಗಿರುವ ಅಮೆರಿಕದ ಬದಲಾದ ಧೋರಣೆಯಿಂದಾಗಿ, ಬಲಿಷ್ಠ, ಪ್ರಭಾವಶಾಲಿ ದೇಶವಾಗಿ ಚೀನಾವನ್ನು ಮುನ್ನಡೆಸುವ ಸದವಕಾಶವು ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರಿಗೆ ಒದಗಿ ಬಂದಿದೆ.

ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎದುರಿಗೆ ಹಲವಾರು ಆಯ್ಕೆಗಳಿವೆ. ಅಮೆರಿಕದ ಜತೆಗಿನ ಬಾಂಧವ್ಯ ಗಟ್ಟಿಯಾಗಿಯೇ ಇರುವುದರ ಜತೆಗೆ, ಸಂಬಂಧವನ್ನು ಇನ್ನಷ್ಟು ಸುಧಾರಿಸಿಕೊಳ್ಳುವ ಅವಕಾಶವೂ ಇದೆ. ರಷ್ಯಾವು ಪಾಕಿಸ್ತಾನದ ಜತೆ ಬಾಂಧವ್ಯ ಸುಧಾರಣೆಗೆ ಮುಂದಾಗಿರುವುದರಿಂದ ರಷ್ಯಾ ಜತೆಗಿನ ಭಾರತದ ಸಂಬಂಧವು ಕೆಲ ಮಟ್ಟಿಗೆ ಹಳಿ ತಪ್ಪಿದಂತೆ ಭಾಸವಾಗುತ್ತಿದೆ. ಜಪಾನ್, ಭಾರತವನ್ನು ತನ್ನ ಮಿತ್ರ ದೇಶವಾಗಿ ಮತ್ತು ಬಂಡವಾಳ ಹೂಡಿಕೆಯ ನೆಚ್ಚಿನ ತಾಣವನ್ನಾಗಿ ಪರಿಗಣಿಸುತ್ತಿದೆ. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಪರ ಬೆಂಬಲಕ್ಕೆ ನಿಲ್ಲುವ ಚೀನಾ, ಭಾರತದ ಜತೆಗಿನ ಆಮದು– ರಫ್ತು ವಹಿವಾಟಿನಲ್ಲಿ ₹ 4.69 ಲಕ್ಷ ಕೋಟಿಗಳಷ್ಟು ರಫ್ತು  ಕಳೆದುಕೊಳ್ಳಲು ಯಾವುದೇ ಕಾರಣಕ್ಕೂ ಬಯಸಲಾರದು.

ಒಂದು ವೇಳೆ ಟ್ರಂಪ್‌ ಅವರು ಜಾಗತೀಕರಣಕ್ಕಿಂತ ಸ್ವರಕ್ಷಣೆ ನೀತಿಗೆ ಆದ್ಯತೆ ನೀಡುವ ಚುನಾವಣಾ ಪೂರ್ವದ ತಮ್ಮ ಮಾತಿನಂತೆಯೇ ನಡೆದುಕೊಂಡು ಚೀನಾದ ಸರಕುಗಳ ಆಮದಿಗೆ ತಡೆ ಒಡ್ಡಿದರೆ, ಚೀನಾಕ್ಕೆ ಭಾರತದ ಜತೆಗಿನ ಬಾಂಧವ್ಯ ಇನ್ನಷ್ಟು ಮುಖ್ಯವಾಗಲಿದೆ.

ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ದಿನವೇ (ಜ. 20) ನಾನು ಈ ಅಂಕಣ ಬರೆಯುತ್ತಿರುವೆ. ಜಾಗತಿಕ ದೃಷ್ಟಿಕೋನಕ್ಕೆ ತಕ್ಕಂತೆ ಭಾರತವು ಇದುವರೆಗೆ ತನ್ನ ನಿಲುವಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತ ಬಂದಿರುವುದು ಸಹಜ ಪ್ರವೃತ್ತಿಯಾಗಿದೆ. ಸದ್ಯದ ಜಾಗತಿಕ ಸಂದರ್ಭದಲ್ಲಿ ಅದು ಚಲಾವಣೆ ಕಳೆದುಕೊಂಡ ಧೋರಣೆಯಾಗಿದೆ. ಕಾಲಕ್ಕೆ ತಕ್ಕಂತೆ ಭಾರತವೂ ತನ್ನ ನಿಲುವು ಬದಲಾಯಿಸಿಕೊಳ್ಳಬೇಕಾಗಿದೆ. ಚೀನಾದ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗುವ ನಿಲುವು ತಳೆದರೆ ಅದು ಭೌಗೋಳಿಕ ಮತ್ತು ಆರ್ಥಿಕ ದೃಷ್ಟಿಕೋನದಿಂದ ಭಾರತಕ್ಕೆ ತುಂಬ ಮಹತ್ವದ್ದಾಗಲಿದೆ.

ಸರಕು ತಯಾರಿಕೆ ಆರ್ಥಿಕತೆಯಲ್ಲಿ ಚೀನಾ ಈಗ ವಿಶ್ವದಲ್ಲಿ ಎಲ್ಲರನ್ನೂ ಮೀರಿಸಿದ ಹೊಸ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದೆ. ಆ ದೇಶ ಈಗ ಬಾಹ್ಯ ಜಗತ್ತಿನತ್ತ ನೋಡುತ್ತಿದ್ದು, ಪರಹಿತ ಸಾಧನೆ ಬಗ್ಗೆ ಆಲೋಚಿಸುತ್ತಿದೆ. ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಕ್ಸಿ ಜಿನ್‌ ಪಿಂಗ್‌ ಅವರು ಮಾಡಿರುವ ಭಾಷಣವು ವಿಶ್ವ ಸಮುದಾಯಕ್ಕೆ ಹೊಸ ಸಂದೇಶ ನೀಡಿದೆ. ಜಾಗತೀಕರಣದ ಆರ್ಥಿಕತೆ ಮತ್ತು ಮುಕ್ತ ವ್ಯಾಪಾರದ ಬೆಂಬಲಕ್ಕೆ ಚೀನಾ ನಿಂತಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ವಿದೇಶಿ ಸರಕುಗಳ ಆಮದು ಮೇಲೆ ಗರಿಷ್ಠ ಪ್ರಮಾಣದ ತೆರಿಗೆ ವಿಧಿಸಿ ಸ್ವದೇಶಿ ಕೈಗಾರಿಕೆಗಳನ್ನು ರಕ್ಷಿಸುವ ಧೋರಣೆಯು ಒಂದರ್ಥದಲ್ಲಿ ವ್ಯಕ್ತಿಯೊಬ್ಬ ತನ್ನಷ್ಟಕ್ಕೆ ತನ್ನನ್ನು ಕತ್ತಲ ಕೋಣೆಯಲ್ಲಿ ಬಂಧಿಸಿ ಇಟ್ಟುಕೊಂಡಂತೆ ಭಾಸವಾಗುತ್ತದೆ; ಇದರಿಂದ ವ್ಯಕ್ತಿ ಮಳೆ, ಚಳಿಯಿಂದ ರಕ್ಷಣೆ ಪಡೆದುಕೊಂಡರೂ ಬೆಳಕು ಮತ್ತು ಗಾಳಿಯಿಂದಲೇ ವಂಚಿತನಾಗಬೇಕಾಗುತ್ತದೆ ಎಂದಿದ್ದಾರೆ. ಜಾಗತೀಕರಣದ ಪರ ಮಾತನಾಡುವ ಭರದಲ್ಲಿ ಜಿನ್‌ ಪಿಂಗ್‌ ಅವರು ಡೊನಾಲ್ಡ್‌ ಟ್ರಂಪ್‌ ಅವರಿಗೆ ಬುದ್ಧಿ ಮಾತು ಹೇಳಲೂ ಹವಣಿಸಿರುವುದು ವೇದ್ಯವಾಗುತ್ತದೆ.

ಜಾಗತಿಕ ಹವಾಮಾನ ಬದಲಾವಣೆಯ ಈ ದಿನಗಳಲ್ಲಿ ಜಾಗತಿಕ ಸಮುದಾಯವು ಶಾಂತಿಯುತವಾಗಿ ಪರಸ್ಪರ ಸಹಬಾಳ್ವೆ ನಡೆಸುವ ಅಗತ್ಯ ಹೆಚ್ಚಿರುವ ಸಂದರ್ಭದಲ್ಲಿ ಜಾಗತೀಕರಣಕ್ಕೆ ಹೆಚ್ಚು ಮಹತ್ವ ಇರುವುದನ್ನು ನಿರ್ಲಕ್ಷಿಸಲಿಕ್ಕಾಗದು. ಜಾಗತೀಕರಣದ ವಿಷಯದಲ್ಲಿ ಚೀನಾ ತಳೆದಿರುವ ಧೋರಣೆಯು ಅದರ ಆಷಾಢಭೂತಿತನವನ್ನೂ ಬಯಲುಗೊಳಿಸಿದೆ. ಮುಕ್ತ ವ್ಯಾಪಾರ ಮತ್ತು ಜಾಗತಿಕ ವ್ಯಾಪಾರ ಕಾಯ್ದೆ ಮತ್ತು ನಿಯಮಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಚೀನಾ ಪ್ರತಿಪಾದಿಸುತ್ತಿರುವುದು ಅದರ ಕಪಟತನಕ್ಕೆ ಕನ್ನಡಿ ಹಿಡಿಯುತ್ತದೆ.

ಚೀನಾ, ಒಂದೆಡೆ ಜಾಗತಿಕ ಹೊಸ ತಂತ್ರಜ್ಞಾನದ ಶಕ್ತಿಗಳಾದ ಗೂಗಲ್‌, ಟ್ವಿಟರ್‌ಗಳ ಮೇಲೆ ನಿರ್ಬಂಧ ವಿಧಿಸಿದೆ. ಆಮದು ನಿರ್ಬಂಧಿಸಲು ಅನೇಕ ಕ್ರಮಗಳನ್ನೂ ಕೈಗೊಂಡಿದೆ. ಬೌದ್ಧಿಕ ಆಸ್ತಿ ಹಕ್ಕುಗಳನ್ನು (ಐಪಿಆರ್‌) ಕದಿಯುತ್ತಿದೆ. ತನಗೆ ಸರಿಕಂಡಾಗಲೆಲ್ಲ ವಿದೇಶಿ ಕಾರ್ಪೊರೇಟ್‌ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತದೆ. ಬಹುರಾಷ್ಟ್ರೀಯ ಸಂಸ್ಥೆಗಳ ಕಂಪ್ಯೂಟರ್‌ಗಳಿಂದ ಮಾಹಿತಿ ಕದಿಯುತ್ತಿದೆ. ತನ್ನ ‘ಸಾಗರ ಭಯೋತ್ಪಾದನೆ’ ವಿಸ್ತರಿಸಲು ಸಮುದ್ರದಲ್ಲಿ ಕೃತಕ ದ್ವೀಪಗಳನ್ನು ಸೃಷ್ಟಿಸುವ ಯಕ್ಷಿಣಿಯನ್ನೂ ಮಾಡುತ್ತದೆ. ಪಾಕಿಸ್ತಾನದ ಉಗ್ರ ಮಸೂದ್‌ ಅಜರ್‌ನಂತಹ ಜಾಗತಿಕ ಭಯೋತ್ಪಾದಕನನ್ನು ತುಂಬು ಹೃದಯದಿಂದ ಬೆಂಬಲಿಸುತ್ತದೆ.

ತನ್ನೊಳಗೆ ಇಷ್ಟೆಲ್ಲ ಕಪಟತನ ತುಂಬಿಕೊಂಡಿದ್ದರೂ, ಚೀನಾವು ಜಾಗತೀಕರಣದ ಪರವಾಗಿ ದೊಡ್ಡ ದನಿಯಲ್ಲಿ ಮಾತನಾಡುತ್ತಿರುವುದು ಅಚ್ಚರಿ ಮೂಡಿಸುತ್ತದೆ. ವಿಶ್ವದ ಅನೇಕ ಶಕ್ತ ರಾಷ್ಟ್ರಗಳು ಜಾಗತೀಕರಣದಿಂದ ಹಿಂದೆ ಸರಿಯುವ ಮಾತು ಆಡುತ್ತಿರುವಾಗ ಚೀನಾ, ಜಾಗತೀಕರಣದ ಪ್ರಯೋಜನಗಳ ಬಗ್ಗೆ ದೊಡ್ಡದಾಗಿ ದನಿ ಎತ್ತಿರುವುದು ಕುತೂಹಲಕಾರಿ ಸಂಗತಿಯಾಗಿದೆ. ಕ್ಸಿ ಜಿನ್‌ ಪಿಂಗ್‌ ಅವರ ಭಾಷಣವು, ಚೀನಾ ವಿಶ್ವದ ನಾಯಕತ್ವ ವಹಿಸಿಕೊಳ್ಳುವ ಇರಾದೆಯನ್ನು ಸ್ಪಷ್ಟಪಡಿಸುತ್ತದೆ.

ನೆರೆಹೊರೆಯಲ್ಲಿಯೇ ಇರುವ ಮತ್ತು ನಮಗೆ ಸೇರಿದ ಭೂಭಾಗದ ಮೇಲೆ ಚೀನಾ ಈಗಲೂ ತನ್ನ ಹಕ್ಕು ಸ್ಥಾಪಿಸಲು ಹವಣಿಸುತ್ತಲೇ ಇದೆ. ಜಿನ್‌ಪಿಂಗ್ ಅವರು ತಮ್ಮ ಭಾಷಣದಲ್ಲಿ, ಯುರೊ ಏಷ್ಯಾ ಮತ್ತು ಚೀನಾದ ಮಧ್ಯೆ ರಸ್ತೆ ಸಂಪರ್ಕದ ವ್ಯಾಪಾರ ವಹಿವಾಟು ಉತ್ತೇಜಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಸಮಾವೇಶದ ಇತರ ವೇದಿಕೆಗಳಲ್ಲಿ ಮಾತನಾಡಿರುವ ಚೀನಾದ ಪ್ರತಿನಿಧಿಗಳು, 64 ದೇಶಗಳನ್ನು ಒಳಗೊಂಡ 100 ವರ್ಷಗಳ ಯೋಜನೆ ಬಗ್ಗೆ ವಿವರ ಮುಂದಿಟ್ಟಿದ್ದಾರೆ. ಈ ಸಲಹೆಗಳನ್ನು ನೋಡಿದರೆ, ಚೀನಾ, ಉತ್ತರ ಅಟ್ಲಾಂಟಿಕ್‌ ಒಪ್ಪಂದ ಸಂಘಟನೆಗಿಂತ (ನ್ಯಾಟೊ) ದೊಡ್ಡದಾದ ಸಂಘಟನೆ ಅಸ್ತಿತ್ವಕ್ಕೆ ತರುವ ಕನಸು ಹೊಂದಿರುವುದು ಸ್ಪಷ್ಟಗೊಳ್ಳುತ್ತದೆ.

ಸೇನಾ ಶಕ್ತಿಯನ್ನು ನೇರವಾಗಿ ಬಳಸಿಕೊಳ್ಳದೆ ಏಷ್ಯಾದ ಅಭ್ಯುದಯ ಸಾಧಿಸುವುದು ಚೀನಾದ ಉದ್ದೇಶವಾಗಿರುವಂತಿದೆ. ಉದಾಹರಣೆಗೆ ಚೀನಾ – ಪಾಕಿಸ್ತಾನ ಆರ್ಥಿಕ ಕಾರಿಡಾರ್‌ನಿಂದಾಗಿ ಪಾಕಿಸ್ತಾನದ ನಿಲುವು ಬದಲಾಗಿರುವುದನ್ನು ನಾವೀಗ ಕಾಣಬಹುದಾಗಿದೆ. ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಮ್ಯಾನ್ಮಾರ್‌ ಮತ್ತು ಶ್ರೀಲಂಕಾ ದೇಶಗಳನ್ನು ತನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಭಾರತದ ಸುತ್ತಲೂ ಚೀನಾ ತನ್ನ ಪ್ರಭಾವಳಿ ನಿರ್ಮಿಸುತ್ತಿದೆ. ಈ ಕಾರಣಕ್ಕೆ ಭಾರತ ತನ್ನ ವಿದೇಶಾಂಗ ನೀತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಆ ಪ್ರಕ್ರಿಯೆ ಆರಂಭಿಸುವ ಮುನ್ನ ನಾವು ಮೊದಲು ನಮ್ಮ ಮನಸ್ಥಿತಿಯನ್ನೂ ಬದಲಾಯಿಸಿಕೊಳ್ಳಬೇಕಾಗಿದೆ.

ಹಿಮಾಲಯದಲ್ಲಿ ಇನ್ನಷ್ಟು ಸೇನಾ ತುಕಡಿಗಳನ್ನು ನಿಯೋಜಿಸಿದರೆ ಅದು ಚೀನೀಯರ ಅತಿಕ್ರಮಣ ಯತ್ನಕ್ಕೆ ಅಡ್ಡಿಪಡಿಸಲಿದೆ. ಅರುಣಾಚಲ ಪ್ರದೇಶದಲ್ಲಿನ ತವಾಂಗ್‌ ಮೇಲೆ ತನ್ನ ಹಕ್ಕು ಸ್ಥಾಪಿಸುವ ಏಕೈಕ ಉದ್ದೇಶದಿಂದ ಚೀನಾ, ‘ಕುಟುಂಬಕ್ಕೊಂದು ಮಗು’ ನೀತಿ ಅನುಸರಿಸುತ್ತಿರುವ ತನ್ನ ಸಾವಿರಾರು ಗಂಡು ಮಕ್ಕಳ ಪ್ರಾಣ ಒತ್ತೆ ಇಡಲು ಮುಂದಾಗುವುದೇ ಮತ್ತು ಭಾರತದ ಜತೆಗಿನ ಲಾಭದಾಯಕ ರಫ್ತು ವಹಿವಾಟು ಕಳೆದುಕೊಳ್ಳಲು ಸಿದ್ಧ ಇರುವುದೇ ಎನ್ನುವ ಪ್ರಶ್ನೆಗಳೂ ಇಲ್ಲಿ ಉದ್ಭವವಾಗುತ್ತವೆ.

ಇದೇ ಕಾರಣಕ್ಕೆ, ಚೀನಾ ಈಗ ಯುದ್ಧ ಕಾರ್ಯತಂತ್ರದ ಬದಲಿಗೆ ತನಗೆ ಅನುಕೂಲಕರವಾದ ಆಯಕಟ್ಟಿನ ನೀತಿ ಅನುಸರಿಸುತ್ತಿರುವುದು ಕಂಡು ಬರುತ್ತಿದೆ. 1962ರಿಂದ 2017ರ ಅವಧಿಯಲ್ಲಿ ವಿಶ್ವ ಸಾಕಷ್ಟು ದೂರ ಕ್ರಮಿಸಿ ಬಂದಾಗಿದೆ. ಹೀಗಾಗಿ ಭಾರತವೂ ತನ್ನ ಧೋರಣೆ ಬದಲಾಯಿಸಿಕೊಳ್ಳುವ ಅನಿವಾರ್ಯ ಈಗ ಎದುರಾಗಿದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT