ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ವಿಶ್ವಾಸಾರ್ಹತೆಯ `ಗಡಿ' ಉಲ್ಲಂಘನೆ

Last Updated 28 ಮೇ 2013, 19:59 IST
ಅಕ್ಷರ ಗಾತ್ರ

`ಡಿಯನ್ನು ದಾಟಿ ಹೆಜ್ಜೆ ಇಟ್ಟಿದ್ದ ನಿಮಗೆ ನಾವು 1962ರಲ್ಲಿ ನೀಡಿದ ಶಿಕ್ಷೆಯನ್ನು ನೀವು ಮರೆತಿಲ್ಲ ತಾನೆ ?' ಎಂದು ಚೀನಾ ಸೇನೆಯ ನಿವೃತ್ತ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದು ಇವತ್ತಿಗೂ ನನ್ನ ನೆನಪಲ್ಲಿದೆ. ದಶಕದ ಹಿಂದೆ ಬೀಜಿಂಗ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ ಆ ಅಧಿಕಾರಿ ಮಾತನಾಡಿದ ಅಂಶಗಳು ನನ್ನನ್ನು ಕಾಡುತ್ತಲೇ ಇವೆ. ಈಚೆಗೆ ಚೀನಾದವರು ಗಡಿ ದಾಟಿ ಒಳ ಬಂದಿದ್ದು ಸುದ್ದಿಯಾದಾಗ ಮತ್ತೆ ಆ ಮಾತುಗಳು ನೆನಪಾಯಿತು. ಅದೇನೇ ಇರಲಿ, ಮೊನ್ನೆ ಮೊನ್ನೆ ನಮ್ಮ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಚೀನಾ ಪ್ರಧಾನಿ ಲೀ ಕೆಕಿಯಾಂಗ್ ದೆಹಲಿಯಲ್ಲಿ ಕುಳಿತು ಗಡಿ ವಿವಾದದ ಬಗ್ಗೆಯೇ ಬಹಳ ಹೊತ್ತು ಮಾತನಾಡಿದರು.

`ಬೀಜಿಂಗ್ ಮಂದಿ' ಮಾತ್ರ ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೇ ಮಾತಾಡಿದ್ದೂ ನಿಜ. `ಗಡಿ ವಿವಾದದ ಬಗ್ಗೆ ನೀವು ಧ್ವನಿ ಎತ್ತದಿದ್ದರೆ ಸಹಜ ಪರಿಸ್ಥಿತಿ ಇರುತ್ತದೆ' ಎಂದು ಚೀನಾ ನಿಯೋಗ ಹೇಳಿದೆ. ಇದರ ಅರ್ಥವೇನೆಂದರೆ ಚೀನಾ ನಮ್ಮ ಗಡಿಯೊಳಗೆ ಅತಿಕ್ರಮಣ ನಡೆಸಿದರೂ ನಾವು ಸುಮ್ಮನಿದ್ದರೆ ನಾವು ಒಳ್ಳೆಯವರು, ಅವರು ಗಡಿ ದಾಟಿ ಬಂದಾಗ ನಾವು ತಕರಾರು ಮಾಡಿದರೆ, ನಾವೇ ತಂಟೆಕೋರರು ! ಹೇಗಿದೆ ನೋಡಿ ಚೀನಾ ಮಂದಿಯ ವಾದ. ಇಂತಹ ಸಂದಿಗ್ಧದಲ್ಲಿ ನಮ್ಮ ಪ್ರಧಾನಿಯವರು ತೆಗೆದುಕೊಂಡ ನಿಲುವು ಸರಿಯಾಗಿಯೇ ಇದೆ. `ಗಡಿ ವಿವಾದ ಬಗೆಹರಿಯದ ಹೊರತು ಶಾಂತಿ ಅಸಾಧ್ಯ' ಎಂದು ಮನಮೋಹನ್ ಸಿಂಗ್ ಪಟ್ಟು ಹಿಡಿದದ್ದು ಸಮಂಜಸವಾಗಿದೆ.

ಭಾರತ ಮತ್ತು ಚೀನಾ ದೇಶಗಳ ಜನಸಾಮಾನ್ಯರಿಗೆ ಮಾತ್ರ ಈ ಗಡಿ ಸಮಸ್ಯೆ ಬಗ್ಗೆ ಅರಿವು ಇದೆಯೋ ಇಲ್ಲವೋ ನನಗಂತೂ ಗೊತ್ತಿಲ್ಲ. 1962ರ ಯುದ್ಧ ಕೊನೆಗೊಂಡಾಗ, ನಾವು ಸೋತಿದ್ದೆವು ತಾನೆ. ಆಗ ಚೀನಾ ಕದನ ವಿರಾಮ ಘೋಷಿಸಿತ್ತು. ಅಂದು ಚೀನಾ ಕದನ ವಿರಾಮ ಘೋಷಿಸಿದ್ದಾಗ ಆ ದೇಶದ ಸೈನಿಕರು ನಮ್ಮ ಗಡಿ ದಾಟಿ ಬಹಳ ಮುಂದೆ ಬಂದಿದ್ದರು. `ನಮ್ಮ ಸೈನಿಕರು ಎಲ್ಲಿ ನಿಂತಿದ್ದಾರೋ ಅದೇ ಭಾರತ-ಚೀನಾ ಗಡಿ' ಎಂದೂ ಚೀನಾ ಅಂದು ಪ್ರಕಟಿಸಿತ್ತು !

ಆದರೆ ಭಾರತ ಮಾತ್ರ ಹಳೆಯ ದಾಖಲೆ ಪತ್ರಗಳು, ಬ್ರಿಟಿಷರ ಕಾಲದ ನಕ್ಷೆ, ಇತಿಹಾಸದ ಪುಟಗಳಲ್ಲಿನ ಬರಹ ಇತ್ಯಾದಿಗಳನ್ನೆಲ್ಲಾ ಮುಂದಿಟ್ಟು ಕರಾರುವಾಕ್ಕಾಗಿ ನೈಜ ಗಡಿಯ ಬಗ್ಗೆ ವಾದ ಮಂಡಿಸತೊಡಗಿದರೆ ಬೀಜಿಂಗ್‌ನ ಅಧಿಕಾರಸ್ತರಿಗೆ ಇನ್ನಿಲ್ಲದ ಕೋಪ ಬಂದು ಬಿಡುತ್ತದೆ. ಚೀನಾ ತಾನು ಸಾಗಿದ್ದೇ ಹಾದಿ, ತಾನು ನಿಂತಿರುವುದೆಲ್ಲಾ ತನ್ನದೇ ನೆಲ ಎಂದು ಭಾವಿಸಿದಂತಿದೆ.

ಭಾರತ ನಂಬಿರುವಂತಹ ಹಾಗೂ ಸಮರ್ಥಿಸಿಕೊಳ್ಳುತ್ತಿರುವಂತಹ `ಭಾರತ ಮತ್ತು ಚೀನಾ ನಡುವಣ ಸಾಂಪ್ರದಾಯಿಕ' ಗಡಿ ರೇಖೆಯನ್ನು ಲಡಾಖ್ ಮತ್ತು ಈಶಾನ್ಯ ಪ್ರದೇಶದ ಅರುಣಾಚಲದಲ್ಲಿ ಚೀನಾ ಹಲವು ಸಲ ಉಲ್ಲಂಘಿಸಿದೆ. ಚೀನಾ ಮಂದಿ ಈ ಗಡಿರೇಖೆಯನ್ನು ಯಾವತ್ತೂ ಗೌರವಿಸುವುದಿಲ್ಲ ಮತ್ತು ನಂಬುವುದಿಲ್ಲ. 1962ರ ಯುದ್ಧದ ನಂತರ ಮಧ್ಯಸ್ಥಿಕೆ ವಹಿಸಲು ಬಂದಿದ್ದ `ಕೊಲಂಬೊ ಅಧಿಕಾರಸ್ತ'ರು ಚೀನಾ ಮತ್ತು ಭಾರತ ತಾವು ಗಡಿ ಎಂದುಕೊಂಡು ನಿಂತುಕೊಂಡಿರುವ ಸ್ಥಳದಿಂದ 26.5 ಮೀಟರ್ಸ್‌ನಷ್ಟು ದೂರ ಹಿಂದಕ್ಕೆ ಸರಿಯಲಿ ಎಂಬ ಸಲಹೆ ನೀಡಿದ್ದರು. ಭಾರತ ಆ ಕ್ಷಣವೇ ಸಲಹೆಯನ್ನು ಪಾಲಿಸಿತು. ಆದರೆ ಚೀನಾ ಆ ರೀತಿ ನಡೆದುಕೊಳ್ಳಲೇ ಇಲ್ಲ. ಚೀನಾ ಇವತ್ತು ಆಕ್ರಮಿಸಿ ಕುಳಿತುಕೊಂಡು ಗಡಿ ರೇಖೆ ಎಂದೇ ಘೋಷಿಸಿಕೊಂಡಿರುವ ಅವೈಜ್ಞಾನಿಕ ಅಡ್ಡಾದಿಡ್ಡಿ ತಿರುವುಗಳು ನಿಜಕ್ಕೂ ನೈಜ ಗಡಿರೇಖೆಗಳೇ ಅಲ್ಲ ಎಂಬುದಂತೂ ಸತ್ಯ.

ಲಡಾಖ್‌ನ ದೌಲತ್ ಬೆಗ್ ಪ್ರದೇಶದಲ್ಲಿ ಚೀನಾ ಮಂದಿ ಅತಿಕ್ರಮಿಸಿದ್ದಂತೂ ನಿಜ ತಾನೆ. ಆ ವಿವಾದಾತ್ಮಕ ಪ್ರದೇಶವು ತನ್ನ ನಿಯಂತ್ರಣದಲ್ಲಿಯೇ ಇದೆ ಎಂಬಂತೆ ಚೀನಾ ಪ್ರದರ್ಶನ ಮಾಡುತ್ತಲೇ ಬಂದಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ `ಬೀಜಿಂಗ್‌ನಲ್ಲಿ ಕುಳಿತ್ತಿರುವ ಆಡಳಿತಗಾರರು' `ದೆಹಲಿಯಲ್ಲಿರುವ ಆಡಳಿತಗಾರ'ರ ಜೊತೆ ಯಾವುದೇ ಸಂವಾದ ನಡೆಸಲಿಲ್ಲ. ಈ ನಡುವೆ ಚೀನಾದ ಯೋಧರು ಭಾರತದ ಭೂಪ್ರದೇಶದೊಳಗೆ ಹಲವು ಕಿಲೋಮೀಟರ್ ಬಂದು ಡೇರೆಗಳನ್ನು ಹಾಕಿಕೊಂಡು 23ದಿನಗಳ ಕಾಲ ಬೀಡು ಬಿಟ್ಟಿದ್ದರು. ಯಾವುದೇ ದೇಶದ ಭೂಪ್ರದೇಶ ದೊಳಗೆ ಈ ರೀತಿ ನುಗ್ಗಬಹುದು ಮತ್ತು ಇಂತಹ ತಪ್ಪೆಸಗಿದ್ದಕ್ಕೆ ಯಾರಿಗೂ ವಿವರಣೆ ಕೊಡದೆಯೇ ಉದ್ಧಟತನ ತೋರಬಹುದು ಎಂಬುದಕ್ಕೆ ಚೀನಾ ಸ್ಪಷ್ಟ ನಿದರ್ಶನ.

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸರಿದಿಕ್ಕಿನಲ್ಲಿ ಮಾತುಕತೆ ನಡೆದು, ನಿಖರ ಗಡಿರೇಖೆಗಳನ್ನು ಗುರುತಿಸಿದ್ದೇ ಆದರೆ ತಮಗೆ ಅರುಣಾಚಲ ಪ್ರದೇಶ ಮುಂತಾದ ಕಡೆ ನಿರಂತರವಾಗಿ ಕಿತಾಪತಿ ನಡೆಸಲು ಅವಕಾಶ ಇರುವುದಿಲ್ಲ ಎಂಬ ಕಾರಣಕ್ಕೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಚೀನಾಕ್ಕೆ ಆಸಕ್ತಿ ಇದ್ದಂತಿಲ್ಲ.

ಕೆಲವು ಸಮಯದ ಹಿಂದೆ ಚೀನಾಕ್ಕೆ ಭೇಟಿ ಕೊಡುವ ಅರುಣಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ಜನರಿಗೆ ಪ್ರತ್ಯೇಕ ವೀಸಾ ನೀಡಿ ಭಾರತ ಸರ್ಕಾರಕ್ಕೆ ಇನ್ನಿಲ್ಲದ ಕಿರಿಕಿರಿ ಉಂಟು ಮಾಡಿತ್ತು. ಚೀನಾದ ಈ ತೆರನಾದ ಚಟುವಟಿಕೆಗಳನ್ನೆಲ್ಲಾ ಗಮನಿಸಿದಾಗ ಆ ದೇಶಕ್ಕೆ ಟಿಬೆಟ್ ಮಾತ್ರ ಮುಖ್ಯ ವಿಷಯ ಎಂದೆನಿಸುತ್ತದೆ. ಬೀಜಿಂಗ್‌ನಲ್ಲಿರುವ ಆಡಳಿತ ಗಾರರು ಇದನ್ನು ನೇರವಾಗಿ ಹೇಳುವುದಿಲ್ಲ. ಆದರೆ ಗಡಿ ಸಮಸ್ಯೆ ಚರ್ಚೆಗೆ ಬಂದಾಗಲೆಲ್ಲಾ ಚೀನಾ ಭಾರತದಲ್ಲಿರುವ ಟಿಬೆಟನ್ನರ ಬಗ್ಗೆಯೇ ಹೆಚ್ಚು ಮಾತನಾಡತೊಡಗುತ್ತದೆ.

`ಬೀಜಿಂಗ್' ಆಶಯ, ಆಸಕ್ತಿ ಏನೇ ಇರಲಿ. ಭಾರತ ಮಾತ್ರ ಟಿಬೆಟ್ ವಿವಾದದ ಕಡತಗಳನ್ನು ಮತ್ತೆ ಬಿಚ್ಚಲು ತಯಾರಿಲ್ಲ. ಭಾರತದ ಬಹುಸಂಖ್ಯಾತ ಹಿಂದೂಗಳು ಬೌದ್ಧ ಧರ್ಮವನ್ನೂ ತಮ್ಮ ಮನದ ಹತ್ತಿರದಲ್ಲಿಟ್ಟು ನೋಡುವವರೇ ಆಗಿದ್ದಾರೆ. ಹೀಗಾಗಿ ಚೀನಾದ ಜೊತೆ ಉತ್ತಮ ಬಾಂಧವ್ಯ ಸಾಧಿಸಲಿಕ್ಕಾಗಿ ಟಿಬೆಟನ್ನರನ್ನು ಬಿಟ್ಟುಕೊಡುವ ಧೈರ್ಯವನ್ನಂತೂ ಭಾರತ ಯಾವತ್ತೂ ತೋರುವುದಿಲ್ಲ. ಇದಲ್ಲದೆ, ಚೀನಾ ಮತ್ತು ಭಾರತ ಬೃಹತ್ ಪ್ರಭಾವಿ ದೇಶಗಳಾಗಿರುವುದರಿಂದ ಈ ಎರಡೂ ದೇಶಗಳ ನಡುವಣ ಕಿತ್ತಾಟ ದಕ್ಷಿಣ ಏಷ್ಯಾದ ಮೇಲೆ ಪರಿಣಾಮ ಬೀರುವಂತಹದ್ದೇ ಆಗಿರುತ್ತದೆ.

  ಹೀಗಾಗಿಯೇ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 1962ರ ಯುದ್ಧದ ನಂತರ ಜಗತ್ತಿನ ಪ್ರಮುಖ ದೇಶಗಳ ಮುಖ್ಯಸ್ಥರಿಗೆಲ್ಲಾ ಪತ್ರ ಬರೆದು ಚೀನಾ ಮತ್ತು ಭಾರತದ ನಡುವಣ ಸಂಬಂಧದ ಕ್ಲೀಷೆಯ ಕುರಿತು ವಿವರಿಸಿದ್ದರು. ಈ ಎರಡೂ ದೇಶಗಳು ವಿಭಿನ್ನ ಸಂಸ್ಕೃತಿ ಮತ್ತು ಪರಂಪರೆಯನ್ನು ಹೊಂದಿವೆ, ವಿಭಿನ್ನ ರಾಜಕೀಯ, ತಾತ್ವಿಕ ಅಂಶಗಳು ಈ ದೇಶಗಳ ಜನಜೀವನದಲ್ಲಿ ಬೆರೆತುಕೊಂಡಿವೆ, ಭಾರತವು ಪ್ರಜಾಸತ್ತಾತ್ಮಕ ದೇಶವಾದರೆ, ಚೀನಾದಲ್ಲಿ ಸರ್ವಾಧಿಕಾರವಿದೆ... ಇತ್ಯಾದಿಗಳ ಕುರಿತು ನೆಹರು ಆ ಪತ್ರದಲ್ಲಿ ಚರ್ಚಿಸಿದ್ದರು. ಮುಂದಿನ ದಿನಗಳಲ್ಲಿ ಈ ಎರಡು ದೇಶಗಳಲ್ಲಿ ಯಾವ ದೇಶ ಸಮರ್ಥವಾಗಿ ಎದ್ದು ನ್ಲ್ಲಿಲುತ್ತವೆ ಎಂಬುದನ್ನು ನೋಡಲು ದಕ್ಷಿಣ ಏಷ್ಯಾದ ಜನರು ಕುತೂಹಲದಿಂದಿದ್ದಾರೆ ಎಂದೂ ನೆಹರು ಅಂದು ಬರೆದಿದ್ದರು.

ಆರ್ಥಿಕವಾದ ಯಶಸ್ಸನ್ನು ತೆಗೆದುಕೊಂಡರೆ ಚೀನಾ ಪ್ರಸಕ್ತ ಭಾರತವನ್ನು ಹಿಂದಿಕ್ಕಿದೆ. ಸರ್ವಾಧಿಕಾರ ಚೌಕಟ್ಟಿನ ಒಳಗೆಯೇ ಚೀನಾ ಬಹಳಷ್ಟು ರಾಜಕೀಯ ಸಮಸ್ಯೆಗಳಿಗೆ ಉತ್ತರವನ್ನು ಕಂಡುಕೊಂಡು ಬಿಟ್ಟಿದೆ. ಆದರೆ ಭಾರತದಲ್ಲಿ ಎಲ್ಲಾ ರಾಜಕೀಯ ವಿಚಾರಧಾರೆಗಳಿಗೂ ಮುಕ್ತ ಅವಕಾಶವಿದೆ. ವಿವಿಧ ತಾತ್ವಿಕ ನೆಲೆಗಟ್ಟಿನ ಮಂದಿ ಇಲ್ಲಿ ತಮ್ಮ ನೆಲೆಗಳನ್ನು ಕಂಡುಕೊಂಡಿದ್ದಾರೆ. ಈ ಮುಕ್ತ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿದೆಯೇ ?  ಕಾಲವೇ ಉತ್ತರ ಕೊಡಬೇಕಷ್ಟೇ.

ಈ ನಡುವೆ ಚೀನಾ ಮತ್ತು ಪಾಕಿಸ್ತಾನ ನಡುವೆ ಬಾಂಧವ್ಯ ಮಧುರವಾಗಿದೆ. ನಾವು ನೋಡುತ್ತಿರುವಂತೆಯೇ ಚೀನಾ ಇನ್ನೊಂದು ರೀತಿಯಲ್ಲಿ ನಮ್ಮನ್ನು ಸುತ್ತುವರಿಯತೊಡಗಿದೆ. ನಮ್ಮ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ,ಮ್ಯಾನ್ಮಾರ್ ದೇಶಗಳೊಂದಿಗೆ ಚೀನಾ ಅತ್ಯುತ್ತಮ ರಾಜತಾಂತ್ರಿಕ ಸಂಬಂಧ ಕುದುರಿಸಿಕೊಂಡಿದೆ. ಚೀನಾದ ಎದುರು ಮತ್ತೆ ಯುದ್ಧದ ಸಾಧ್ಯತೆಯನ್ನು ನಾವು ಸಂಪೂರ್ಣವಾಗಿ ಅಲ್ಲಗಳೆಯಬಹುದು. ಆದರೆ ನಮ್ಮ ರಕ್ಷಣಾ ಪಡೆಗಳ ಮೇಲಣ ಒತ್ತಡ ಮೊದಲಿಗಿಂತಲೂ ಹೆಚ್ಚಾಗಿದೆ. ಭಾರತ ಗಡಿ ಸಮಸ್ಯೆ ಬಗ್ಗೆಯೇ ತೀರಾ ತಲೆಕೆಡಿಸಿಕೊಳ್ಳಬೇಕಿಲ್ಲ. ತನ್ನ ಬೇರೆಲ್ಲಾ ಆದ್ಯತೆಗಳನ್ನೂ ಬದಿಗಿಟ್ಟು ಈ ಬಗ್ಗೆಯೇ ಭಾರತ ಚಿಂತಿಸಬೇಕಿಲ್ಲ. ಆ ರೀತಿ ಭಾರತ ವರ್ತಿಸುತ್ತಾ ತಪ್ಪು ಹೆಜ್ಜೆಗಳನ್ನಿಟ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ತಪ್ಪಿತಸ್ತನಂತೆ ಕಾಣಿಸಲಿ ಎಂದು ಚೀನಾ ನಿರೀಕ್ಷಿಸುತ್ತದೆ ಎನ್ನುವುದನ್ನೂ ನಾವು ಮರೆಯಬಾರದು.

ಭಾರತ ಸರ್ಕಾರ ಟಿಬೆಟ್ ಸಮಸ್ಯೆಯ ಕುರಿತು ಚೀನಾದ ಜೊತೆಗೆ ಮಾತನಾಡಲು ಹಿಂದೇಟು ಹೊಡೆಯುವುದಾದರೂ ಏಕೆ ? ಚೀನಾದವರು ಟಿಬೆಟ್ ಮೇಲೆ ಅತಿಕ್ರಮಿಸಿ ಯಶಸ್ವಿ ಆಗಿದ್ದೇವೆಂದು ಬೀಗುತ್ತಿದ್ದರೂ, ದಲೈಲಾಮಾ ನೇತೃತ್ವದಲ್ಲಿ ಟಿಬೆಟನ್ನರು ಚೀನಾವನ್ನು ಗುಮ್ಮನಂತೆ ಕಾಡುತ್ತಿರುವುದಂತೂ ನಿಜ. ಈಗ ಟಿಬೆಟ್ ಭೂಪ್ರದೇಶ ಯಾರಿಗೆ ಸೇರಿದ ನೆಲ ಅಥವಾ ಅಲ್ಲಿ ಯಾವ ತೆರನಾದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಇದೆ ಎಂಬ ಬಗ್ಗೆ ನಾವು ಚಿಂತಿಸಬೇಕಿಲ್ಲ. ಆದರೆ ಟಿಬೆಟ್ ನೆಲದಲ್ಲಿ ನಡೆದಿರುವ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ಭಾರತ ಪ್ರಶ್ನೆಗಳನ್ನು ಎತ್ತಲೇ ಬೇಕಿದೆ. ಅಲ್ಲಿ ಸ್ವಾತಂತ್ರ್ಯ ಮತ್ತು ವಿಮೋಚನೆಯ ಹೋರಾಟದ ಭಾಗವೆಂಬಂತೆ ಹತ್ತಾರು ಮಂದಿ ಟೆಬೆಟನ್ನರು ಆತ್ಮಾಹುತಿ ಮಾಡಿಕೊಂಡಿರುವ ಬಗ್ಗೆ ಜಗತ್ತಿನ ಎಲ್ಲಿಯೂ ದೊಡ್ಡ ಮಟ್ಟದ ಚರ್ಚೆಯಾಗ ದಿರುವುದೊಂದು ವಿಪರ್ಯಾಸ.

ಭಾರತ ಮತ್ತು ಚೀನಾ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿರುವುದು ಸ್ವಾಗತಾರ್ಹ. ಆದರೆ ಈ ಎರಡೂ ದೇಶಗಳ ನಡುವಣ ಜನರ ನಡುವಣ ಸಂಬಂಧ ನಿಕಟವಾಗಿಲ್ಲ ಎನ್ನುವುದಂತೂ ನಿಜ. ಚೀನಾ ಮತ್ತು ಟಿಬೆಟನ್ನರ ನಡುವಣ ಸಂಬಂಧ ಸುಧಾರಣೆಯ ಸಾಧ್ಯತೆ ಕಲ್ಪನೆಗೆ ನಿಲುಕುತ್ತಿಲ್ಲ. ಒಂದು ವೇಳೆ ಚೀನಾ ಆಡಳಿತ ವ್ಯವಸ್ಥೆಯ ಒಳಗೇ ಟಿಬೆಟ್ ಎಂಬ ಸ್ವಾಯತ್ತ ರಾಜ್ಯ ಹುಟ್ಟು ಪಡೆಯುವುದಾದರೆ ಅದಕ್ಕೆ ದಲೈಲಾಮ ಒಪ್ಪಬಹುದೆನ್ನಿ. ಆದರೆ ಇಂತಹದ್ದೊಂದು ಸೂತ್ರಕ್ಕೆ ಟಿಬೆಟನ್ ಯುವಜನರು ಮಾತ್ರ ಒಪ್ಪಲಿಕ್ಕಿಲ್ಲ. ಅದು ಬೇರೆಯೇ ವಿಷಯ.

ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ, ಟಿಬೆಟ್ ಸಮಸ್ಯೆ ಇತ್ಯಾದಿಗಳೆಲ್ಲಾ ಧಗಧಗ ಎನ್ನುತ್ತಿದ್ದರೂ ಪರಸ್ಪರ ಮಾತುಕತೆ ನಡೆಯುತ್ತಲೇ ಇವೆ. ಆದರೆ ಚೀನಾ ಬಹಳಷ್ಟು ಸಲ ತನ್ನ ಮಾತಿಗೆ ತಕ್ಕುದಾಗಿ ನಡೆದುಕೊಂಡಿಲ್ಲ. ವಿಶ್ವಾಸಾರ್ಹತೆ ಉಳಿಸಿಕೊಂಡಿಲ್ಲ. ಅದೇನೇ ಇದ್ದರೂ ಉಭಯ ದೇಶಗಳೂ ಮತ್ತೆ ಉತ್ತಮ ಬಾಂಧವ್ಯದ ಆಶಯದ ಮಾತುಗಳನ್ನು ಆಡುತ್ತಿವೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT