ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗದ ಸ್ತುತ್ಯರ್ಹ ಯತ್ನ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದೇಶದ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅಗತ್ಯವಿರುವ ವ್ಯವಸ್ಥೆಗಳನ್ನು 2018ರ ಸೆಪ್ಟೆಂಬರ್‌ಗೆ ಮುನ್ನ ಸಜ್ಜುಗೊಳಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಘೋಷಿಸುವುದರೊಂದಿಗೆ, ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂಬ ಬೇಡಿಕೆಗೆ ಕಳೆದ ವಾರ ಹೊಸ ಒತ್ತಾಸೆಯೊಂದು ಸಿಕ್ಕಂತೆ ಆಗಿದೆ. ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸಲು ಒಟ್ಟು 40 ಲಕ್ಷ ಎಲೆಕ್ಟ್ರಾನಿಕ್‌ ಮತ ಯಂತ್ರಗಳು ಹಾಗೂ ಮತದಾನ ದೃಢೀಕರಣ ರಸೀದಿ ಯಂತ್ರಗಳು (ವಿವಿಪಿಎಟಿ) ಬೇಕು, ಇವುಗಳನ್ನು ಒಂದು ವರ್ಷದೊಳಗೆ ಖರೀದಿ ಮಾಡಲಾಗುವುದು ಎಂದು ಆಯೋಗ ಹೇಳಿದೆ.

ಈ ಘೋಷಣೆಯು, ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವಂತಹ ವ್ಯವಸ್ಥೆ ಸಜ್ಜುಗೊಳಿಸುವುದು ಸಾಧ್ಯವೇ ಎಂಬ ಪ್ರಶ್ನೆಯನ್ನು ಪಕ್ಕಕ್ಕೆ ಸರಿಸಿದೆ. ಏಕಕಾಲದಲ್ಲಿ ಚುನಾವಣೆ ನಡೆಯುವುದನ್ನು ಸಾಧ್ಯವಾಗಿಸಲು ಸರ್ಕಾರವು ರಾಜಕೀಯ ಒಮ್ಮತ ಮೂಡಿಸುವುದು ಹಾಗೂ ಅಗತ್ಯ ಕಾನೂನು ಕ್ರಮಗಳನ್ನು ಜಾರಿಗೊಳಿಸುವುದು ಈಗ ನಮ್ಮೆದುರು ಇರುವ ಸವಾಲು.

ಏಕಕಾಲದಲ್ಲಿ ಚುನಾವಣೆ ನಡೆಸುವ ಆಲೋಚನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕೆಲವು ರಾಜಕೀಯ ಪಕ್ಷಗಳು ಹೆದರಿಕೆಯಿಂದ ನೀಡಿರುವ ಪ್ರತಿಕ್ರಿಯೆ ಗಮನಿಸಿದರೆ, ಈ ವಿಚಾರದಲ್ಲಿ ರಾಜಕೀಯ ಒಮ್ಮತ ಮೂಡಿಸುವುದು ಸುಲಭವಲ್ಲ ಎಂದು ಅನಿಸುತ್ತಿದೆ. ಆದರೆ ಚುನಾವಣೆಗಳ ಮೇಲೆ ನಾವು ಮಾಡುತ್ತಿರುವ ವೆಚ್ಚವನ್ನು ತಗ್ಗಿಸಬೇಕಾದರೆ, ಚುನಾವಣೆಗಳ ವಿಷವರ್ತುಲವು ನಮ್ಮ ಆಡಳಿತ ವ್ಯವಸ್ಥೆ ಮತ್ತು ಅಭಿವೃದ್ಧಿಯ ಮೇಲೆ ಉಂಟುಮಾಡುವ ಹಾನಿಯನ್ನು ತಗ್ಗಿಸಬೇಕಾದರೆ, ಏಕಕಾಲದಲ್ಲಿ ಚುನಾವಣೆ ನಡೆಸುವ ಆಲೋಚನೆಗೆ ನಾವು ಇನ್ನಷ್ಟು ಬಲ ನೀಡಬೇಕು.

1952, 1957, 1962 ಹಾಗೂ 1967ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಚುನಾವಣೆಗಳು ಒಂದೇ ಬಾರಿಗೆ ನಡೆದವು. ಇದಾದ ನಂತರ, ಎರಡು ಕಾರಣಗಳಿಂದಾಗಿ ಈ ವ್ಯವಸ್ಥೆ ಹಳಿ ತಪ್ಪಿತು. ಮೊದಲನೆಯ ಕಾರಣ: ಸ್ವಾತಂತ್ರ್ಯಾನಂತರ ಹಲವು ರಾಜ್ಯಗಳಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ 1967ರಲ್ಲಿ ಸೋಲು ಕಂಡಿತು, ಉತ್ತರದ ರಾಜ್ಯಗಳಲ್ಲಿ ಸಂಯುಕ್ತ ವಿಧಾಯಕ ದಳದಂತಹ ಮೈತ್ರಿ ಪಕ್ಷಗಳ ಅಸ್ಥಿರ ಸರ್ಕಾರಗಳು ಆಡಳಿತಕ್ಕೆ ಬಂದವು. ಒಂದಕ್ಕೊಂದು ಹೋಲಿಕೆ ಮಾಡಲು ಸಾಧ್ಯವಿಲ್ಲದಂತಹ ರಾಜಕೀಯ ಪಕ್ಷಗಳು ಕಾಂಗ್ರೆಸ್ ವಿರೋಧಿ ಮನೋಭಾವದ ಅಡಿ ಒಟ್ಟಾಗಿ ಸರ್ಕಾರಗಳನ್ನು ರಚಿಸಿದವು. ಆದರೆ, ತಮ್ಮ ಚುನಾವಣಾ ಗುರಿ ಸಾಧಿಸಿದ ನಂತರ ಅವುಗಳ ನಡುವಿನ ಮೈತ್ರಿ ಒಟ್ಟಾಗಿ ಉಳಿಯಲಿಲ್ಲ. ಏಕೆಂದರೆ ಅವುಗಳನ್ನು ಒಟ್ಟಾಗಿ ಇರಿಸುವಂತಹ ಯಾವುದೇ ಇತರ ವಿಚಾರ ಇರಲಿಲ್ಲ. ಅಲ್ಲದೆ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷವು ತನ್ನ ಬತ್ತಳಿಕೆಯಲ್ಲಿ ಇದ್ದ ಎಲ್ಲ ಬಗೆಯ ರಾಜಕೀಯ ಅಸ್ತ್ರಗಳನ್ನು ಈ ಮೈತ್ರಿಕೂಟ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಳಸಿತು. ತನಗೆ ಅಗತ್ಯ ಕಂಡುಬಂದಾಗ ಆ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಅಸ್ತ್ರವನ್ನೂ ಬಳಸಿತು. ನಿಜ ಹೇಳಬೇಕು ಅಂದರೆ, 1990ರ ಮಧ್ಯಭಾಗದಲ್ಲಿ ಬೊಮ್ಮಾಯಿ ಪ್ರಕರಣದ ತೀರ್ಪು ಹೊರಬರುವವವರೆಗೂ, ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದ್ದ ಇತರ ಪಕ್ಷಗಳ ಸರ್ಕಾರಗಳನ್ನು ವಜಾಗೊಳಿಸಲು ಕಾಂಗ್ರೆಸ್ ಪಕ್ಷವು ಸಂವಿಧಾನದ 356ನೇ ವಿಧಿಯನ್ನು ಹಿಂದುಮುಂದು ನೋಡದೆ ಬಳಸಿತು. ಇಂತಹ ರಾಜ್ಯಗಳಲ್ಲಿ ಹೊಸದಾಗಿ ಚುನಾವಣೆ ನಡೆಸಬಹುದು ಎಂದು ತನಗೆ ವಿಶ್ವಾಸ ಮೂಡುವವರೆಗೆ ಕಾಂಗ್ರೆಸ್ ಪಕ್ಷ ರಾಷ್ಟ್ರಪತಿ ಆಡಳಿತ ಮುಂದುವರಿಯುವಂತೆ ಮಾಡುತ್ತಿತ್ತು.

ವಿಧಾನಸಭೆ ಹಾಗೂ ಲೋಕಸಭೆಗಳ ಚುನಾವಣೆಗಳು ಏಕಕಾಲದಲ್ಲಿ ನಡೆಯುವ ವ್ಯವಸ್ಥೆ ಹಾಳಾಗಲು ಲೋಕಸಭೆಗೆ 1971ರಲ್ಲಿ ಅವಧಿಪೂರ್ವ ಚುನಾವಣೆ ನಡೆಸಲು ಪ್ರಧಾನಿ ಇಂದಿರಾ ಗಾಂಧಿ ಅವರು ಕೈಗೊಂಡ ತೀರ್ಮಾನ ಕೂಡ ಕಾರಣವಾಯಿತು. ಆಗ, ಲೋಕಸಭೆ ಮತ್ತು ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಯಲು ಒಂದು ವರ್ಷ ಮಾತ್ರ ಬಾಕಿ ಇತ್ತು. ಲೋಕಸಭೆಗೆ ಮಾತ್ರ ಚುನಾವಣೆ ನಡೆಸಿ, ಅದರಿಂದ ಸಿಗುವ ಚುನಾವಣಾ ಲಾಭವನ್ನು ಹೆಚ್ಚು ಮಾಡಿಕೊಳ್ಳುವ ಉದ್ದೇಶದಿಂದಲೇ ಇಂದಿರಾ ಅವರು ಕೈಗೊಂಡ ಈ ತೀರ್ಮಾನವು, ಏಕಕಾಲದಲ್ಲಿ ಚುನಾವಣೆಗಳು ನಡೆಯುವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳುಮಾಡಿತು. ದೇಶದಲ್ಲಿ ಚುನಾವಣೆ ಪ್ರಕ್ರಿಯೆ ಅಸ್ತವ್ಯಸ್ತಗೊಳ್ಳಲು ಈ ತೀರ್ಮಾನವೇ ಪ್ರಾಥಮಿಕ ಕಾರಣ.

ಈ ವಿಚಾರಗಳನ್ನು ಕಾನೂನು ಆಯೋಗವು ಆಳವಾಗಿ ಅಧ್ಯಯನ ನಡೆಸಿತು. 1999ರಲ್ಲಿ ಮಂಡಿಸಿದ ತನ್ನ 170ನೇ ವರದಿಯಲ್ಲಿ ಆಯೋಗವು, ಏಕಕಾಲದಲ್ಲಿ ಚುನಾವಣೆ ನಡೆಸುವುದನ್ನು ಸಂಪೂರ್ಣವಾಗಿ ಬೆಂಬಲಿಸಿತು. ‘ಈ ಪರಿಸ್ಥಿತಿಯಲ್ಲಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಅಭಿಲಾಷೆಯನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ನಿಸ್ಸಂಶಯ’ ಎಂದೂ ಆಯೋಗ ಹೇಳಿತು. ಏಕೆಂದರೆ, ಬೇರೆ ಬೇರೆ ವಿಧಾನಸಭೆಗಳ ಅವಧಿಗಳು ಬೇರೆ ಬೇರೆ ಸಂದರ್ಭಗಳಲ್ಲಿ ಪೂರ್ಣಗೊಳ್ಳುವುದಿದ್ದವು. ಮುಂದಿನ 12 ತಿಂಗಳಲ್ಲಿ ಚುನಾವಣೆ ಎದುರಿಸಬೇಕಿರುವ ಎಲ್ಲ ವಿಧಾನಸಭೆಗಳಿಗೆ ಒಂದೇ ಬಾರಿಗೆ ಚುನಾವಣೆ ನಡೆಸಬೇಕು ಎಂದು ಆಯೋಗ ಸಲಹೆ ಮಾಡಿತು. ಅವಶ್ಯ ಕಂಡುಬಂದರೆ, ಚುನಾವಣೆಗಳನ್ನು ಒಂದೇ ಬಾರಿಗೆ ನಡೆಸಲು ಕೆಲವು ವಿಧಾನಸಭೆಗಳ ಅವಧಿಯನ್ನು ಆರು ತಿಂಗಳಮಟ್ಟಿಗೆ ಕಡಿಮೆ ಮಾಡಲು ಸಂವಿಧಾನ ತಿದ್ದುಪಡಿ ಮಾಡಬಹುದು ಎಂದೂ ಆಯೋಗ ಹೇಳಿತು.

ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಆಲೋಚನೆ ವಿರೋಧಿಸಿ ಕೆಲವು ಕಡೆಗಳಲ್ಲಿ ಅಬ್ಬರದ ಪ್ರತಿರೋಧ ವ್ಯಕ್ತವಾಗಿದೆ. ಇಂತಹ ಆಲೋಚನೆಗೆ ವಿರೋಧ ವ್ಯಕ್ತಪಡಿಸಿರುವ ಪಕ್ಷಗಳ ಪೈಕಿ ಸಿಪಿಐ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಕೆಲವು ಸಣ್ಣ ಪಕ್ಷಗಳೂ ಸೇರಿವೆ. ಚುನಾವಣೆಗಳು ಒಂದೇ ಬಾರಿಗೆ ನಡೆದರೆ, ರಾಷ್ಟ್ರೀಯ ಪಕ್ಷಗಳೇ ಮತದಾರರ ಮೇಲೆ ಪ್ರಭಾವ ಬೀರುತ್ತವೆ, ರಾಷ್ಟ್ರೀಯ ವಿಚಾರಗಳು ಮಾತ್ರ ಚುನಾವಣಾ ಅಭಿಯಾನದಲ್ಲಿ ಪ್ರಮುಖವಾಗಿ ಪ್ರಸ್ತಾಪ ಆಗುತ್ತವೆ ಎಂಬುದು ಕೆಲವು ಪಕ್ಷಗಳ ಆತಂಕ. ದೊಡ್ಡ ಪಕ್ಷಗಳು ನಡೆಸುವ ಅಬ್ಬರದ ಪ್ರಚಾರದಲ್ಲಿ ಪ್ರಾದೇಶಿಕ ಹಾಗೂ ಸಣ್ಣ ರಾಜಕೀಯ ಪಕ್ಷಗಳು ಮುಳುಗಿಹೋಗುತ್ತವೆ, ಅವುಗಳು ಚುನಾವಣಾ ಕಣದಿಂದ ಅಳಿಸಿಹೋಗುತ್ತವೆ ಎಂದೂ ಅವು ಆತಂಕ ವ್ಯಕ್ತಪಡಿಸಿವೆ. ಆದರೆ, ಲೋಕಸಭೆ ಹಾಗೂ ವಿಧಾನಸಭೆಗಳಿಗೆ ನಡೆಯುವ ಚುನಾವಣೆ ವೇಳೆ ಮತದಾರರು ಆಲೋಚಿಸುವ ಬಗೆಯನ್ನು ಗಮನಿಸಿದರೆ, ಈ ವಾದದಲ್ಲಿ ಹುರುಳಿಲ್ಲ ಅನಿಸುತ್ತದೆ. ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಏಕಕಾಲದಲ್ಲಿ ಅಥವಾ ಕೆಲವು ತಿಂಗಳುಗಳ ಅಂತರದಲ್ಲಿ ಚುನಾವಣೆಗಳು ನಡೆದಾಗ ಮತದಾರರು ಬೇರೆ ಬೇರೆ ಪಕ್ಷಗಳನ್ನು ಆಯ್ಕೆ ಮಾಡಿರುವ ಉದಾಹರಣೆಗಳು ಹಲವು ಇವೆ.

ಇಷ್ಟೇ ಅಲ್ಲ. ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಆಗುವ ತೊಂದರೆಗಳಿಗಿಂತಲೂ, ಅದರಿಂದ ಸಿಗುವ ಪ‍್ರಯೋಜನಗಳು ಹೆಚ್ಚಿವೆ. ಈಗ ಜಾರಿಯಲ್ಲಿರುವ, ಒಂದೊಂದು ಶಾಸನಸಭೆಗೆ ಒಂದೊಂದು ಸಂದರ್ಭದಲ್ಲಿ ಚುನಾವಣೆ ನಡೆಯುವ ವ್ಯವಸ್ಥೆಯು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಯಾದ ತಕ್ಷಣದಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಕೇಂದ್ರ ಸರ್ಕಾರ ಹಾಗೂ ಚುನಾವಣೆ ಎದುರಿಸಲಿರುವ ರಾಜ್ಯ ಸರ್ಕಾರಗಳು ಪ್ರತಿಕ್ರಿಯಿಸುವ ರೀತಿಯಲ್ಲಿ ಖಚಿತತೆ ಇರುವುದಿಲ್ಲ. ಚುನಾವಣಾ ಆಯೋಗದ ಕೋಪಕ್ಕೆ ಗುರಿಯಾಗಬೇಕಾಗಬಹುದು ಎಂಬ ಭೀತಿಯಿಂದ ಈ ಸರ್ಕಾರಗಳು ತಮ್ಮ ಹಲವು ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ತಡೆ ಹಿಡಿಯುತ್ತವೆ. ಹಾಗೆಯೇ, ಪ್ರತಿ ವರ್ಷವೂ ಮತ್ತೆ–ಮತ್ತೆ ಎಂಬಂತೆ ನಡೆಯುವ ಚುನಾವಣೆಗಳಿಂದಾಗಿ ಬೊಕ್ಕಸದ ಮೇಲೆ ಬೀಳುವ ಹೊರೆ ಕೂಡ ದೊಡ್ಡದು. ಈಗಿರುವ ರೀತಿಯಲ್ಲೇ ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಚುನಾವಣೆ ನಡೆಸುವುದರ ವೆಚ್ಚ ₹ 4,500 ಕೋಟಿ ಎಂದು ಚುನಾವಣಾ ಆಯೋಗ ಅಂದಾಜಿಸಿದೆ.

ಕಾನೂನು ಆಯೋಗವು ಚುನಾವಣೆ ಬಗ್ಗೆ ವಿಸ್ತೃತವಾಗಿ ಪರಿಶೀಲನೆ ನಡೆಸಿದ ನಂತರ, ಸಿಬ್ಬಂದಿ, ಸಾರ್ವಜನಿಕ ಸೇವೆಗಳು, ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿಯು ಇದೇ ವಿಷಯದ ಬಗ್ಗೆ ತೀರಾ ಇತ್ತೀಚೆಗೆ ಪರಿಶೀಲನೆ ನಡೆಸಿದೆ. ‘ಮತ್ತೆ ಮತ್ತೆ ನಡೆಯುವ ಚುನಾವಣೆಗಳು ಆಡಳಿತದ ಕೊರತೆ ಹಾಗೂ ಆಡಳಿತದಲ್ಲಿರುವ ನೀತಿ ನಿರೂಪಣೆ ಕಾರ್ಯದಲ್ಲಿ ತೊಡಗದಂತೆ ಮಾಡುತ್ತವೆ’ ಎಂದು ಸ್ಥಾಯಿ ಸಮಿತಿ ಹೇಳಿದೆ. ಆರಂಭಿಕ ಹಂತವಾಗಿ, ರಾಜ್ಯಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಬಹುದು, ಒಂದು ಗುಂಪಿನ ರಾಜ್ಯ ವಿಧಾನಸಭೆಗಳ ಚುನಾವಣೆಯನ್ನು ಲೋಕಸಭಾ ಚುನಾವಣೆ ಜೊತೆ ನಡೆಸಬಹುದು ಎಂದು ಸಮಿತಿ ಹೇಳಿದೆ. ಇನ್ನೊಂದು ಗುಂಪಿನ ರಾಜ್ಯಗಳ ಚುನಾವಣೆಯನ್ನು ಒಂದು ಅಥವಾ ಎರಡು ವರ್ಷಗಳ ನಂತರ ನಡೆಸಬಹುದು. ಕಾಲಕ್ರಮೇಣ, ಎಲ್ಲ ವಿಧಾನಸಭೆಗಳು ಹಾಗೂ ಲೋಕಸಭೆಯ ಚುನಾವಣೆಗಳನ್ನು ಒಂದೇ ಬಾರಿಗೆ ನಡೆಸಬಹುದು ಎಂದೂ ಅದು ಹೇಳಿದೆ.

ಲೋಕಸಭೆ ಹಾಗೂ ವಿಧಾನಸಭೆಗಳ ಚುನಾವಣೆಗಳನ್ನು ಒಂದೇ ಬಾರಿಗೆ ನಡೆಸಬೇಕು ಎಂದು ಪ್ರತಿಪಾದಿಸಿರುವವರಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರೂ ಸೇರಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿಯ ವಿಶಾಲ ನೆಲೆಯಲ್ಲಿ ನೋಡುವುದಾದರೆ, ಚುನಾವಣೆಗಳು ಒಂದೇ ಬಾರಿಗೆ ನಡೆಯಬೇಕು. ರಾಜಕೀಯ ವರ್ತುಲದ ಅಂಚಿನಲ್ಲಿ ಇರುವ ರಾಜಕೀಯ ಪಕ್ಷಗಳ ಸಂಕುಚಿತ ಆಲೋಚನೆಗಳು ಈ ಪ್ರಕ್ರಿಯೆಯ ಹಳಿ ತಪ್ಪಿಸಲು ಬಿಡಬಾರದು. ಒಡೆದುಹೋದ ವಸ್ತುಗಳನ್ನೂ ನಾವೀಗ ಪುನಃ ಒಗ್ಗೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT