ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ತಂತ್ರಜ್ಞಾನದ ನಿಗೂಢ ಆಯಾಮಗಳು!

Last Updated 26 ಮಾರ್ಚ್ 2018, 20:36 IST
ಅಕ್ಷರ ಗಾತ್ರ

ಕಪಾಟಿನೊಳಗಿನ ಅಸ್ಥಿಪಂಜರ ಈಗ ಹೊರಬಿದ್ದಿದೆ. ಫೇಸ್‌ಬುಕ್‌ನ ಮಾರ್ಕ್ ಝಕರ್‌ಬರ್ಗ್‌ರಿಂದ ಆರಂಭಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ನಮ್ಮ ಪ್ರಧಾನಿಗಳ ತನಕದ ಎಲ್ಲರ ಡಿಜಿಟಲ್ ಕಪಾಟಿನೊಳಗೂ ಕೆಲವು ಅಸ್ಥಿಪಂಜರಗಳಿವೆ ಎಂಬುದು ಬಯಲಿಗೆ ಬರುತ್ತಿದೆ. ಚುನಾವಣಾ ತಂತ್ರ ರೂಪಿಸಲು ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳಲ್ಲಿರುವ ವೈಯಕ್ತಿಕ ಮಾಹಿತಿಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ಬಯಲಿಗೆ ಬಂದ ತಕ್ಷಣ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ‘ಝಕರ್‌ಬರ್ಗ್ ನಿಮ್ಮನ್ನು ಭಾರತಕ್ಕೆ ಕರೆಯಿಸಿ ವಿಚಾರಣೆ ನಡೆಸಬಹುದು ಎಂಬುದು ನಿಮಗೆ ಗೊತ್ತಿದೆಯೇ’ ಎಂದು ಗುಟುರು ಹಾಕಿದರು.

ಪ್ರಧಾನ ಮಂತ್ರಿಯವರ ‘ನಮೋ ಆ್ಯಪ್' ಕೂಡಾ ಇಂಥದ್ದೇ ಕೆಲಸ ಮಾಡುತ್ತಿದೆ ಎಂಬುದನ್ನು ಫ್ರೆಂಚ್ ಸೈಬರ್ ಭದ್ರತಾ ಸಂಶೋಧಕ ಎಲಿಯಟ್ ಆಲ್ಡರ್‌ಸನ್‌ರಿಂದ ಬಯಲಾದ ಮೇಲೆ ರವಿಶಂಕರ್ ಪ್ರಸಾದ್ ಅವರು ಏನಾದರೂ ಹೇಳಿದರೇ?

ಇಲ್ಲ ಅವರೇನನ್ನೂ ಹೇಳಲಿಲ್ಲ. ಆದರೆ ಸರ್ಕಾರದ ಅಧಿಕೃತ ಸ್ಪಷ್ಟೀಕರಣ ಹೊರ ಬಂತು. “ಇಲ್ಲಿ ಮಾಹಿತಿ ಸೋರಿಕೆಯ ಪ್ರಶ್ನೆ ಇಲ್ಲ. ಎಲಿಯಟ್ ಆಲ್ಡರ್‌ಸನ್ ನೀಡಿರುವ ಮಾಹಿತಿಗಳಲ್ಲಿ ಇರುವುದು ಬಳಕೆದಾರರೂ ಸ್ವಯಂ ಪ್ರೇರಣೆಯಿಂದ ನೀಡಿರುವ ಮಾಹಿತಿ” ಎಂದು ಅದು ಹೇಳುತ್ತದೆ. ಫೇಸ್‌ಬುಕ್ ಅನ್ನು ನ್ಯಾಯಾಲಯಕ್ಕೆ ಎಳೆದು ತಂದರೆ ಅದೂ ಇಂಥದ್ದೇ ಪ್ರತಿಕ್ರಿಯೆಯನ್ನು ನೀಡುತ್ತದೆ. ನಮ್ಮ ಸೇವಾ ಷರತ್ತುಗಳಲ್ಲಿ ಎಲ್ಲಾ ಅಂಶಗಳೂ ಇವೆ. ಗ್ರಾಹಕರು ಯಾವ ಮಾಹಿತಿಯನ್ನು ಕೊಡಬೇಕು ಎಂಬುದನ್ನು ಅವರೇ ನಿರ್ಧರಿಸಬಹುದು ಎಂದು ಫೇಸ್‌ಬುಕ್ ಹೇಳಬಹುದು.

ಪ್ರಧಾನಿ ನರೇಂದ್ರ ಮೋದಿಯವರ ಆ್ಯಪ್‌ನಿಂದ ಆರಂಭಿಸಿ ಗೂಗಲ್ ಪ್ಲೇ ಸ್ಟೋರ್ ಮತ್ತು ಐಟ್ಯೂನ್ಸ್ ಆಪ್ ಸ್ಟೋರ್‌ನಲ್ಲಿರುವ ಯಾವ ಆ್ಯಪ್ ಅನ್ನು ನಮ್ಮ ಫೋನಿಗೆ ಅಳವಡಿಸಲು ಪ್ರಯತ್ನಿಸಿದರೂ ಅದು ತಾನು ಯಾವುದೆಲ್ಲಾ ಮಾಹಿತಿಯನ್ನು ಪಡೆಯುತ್ತೇನೆ ಎಂದು ಹೇಳುತ್ತದೆ. ಕೆಲವು ಮಾಹಿತಿಗಳನ್ನು ಕೊಡದೇ ಇರಬಹುದು. ಆದರೆ ಸಂಪೂರ್ಣವಾಗಿ ಎಲ್ಲಾ ಮಾಹಿತಿಯನ್ನು ಕೊಡಲು ಸಾಧ್ಯವಿಲ್ಲ ಎಂದರೆ ಆ್ಯಪ್ ಬಳಸಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವು ಆ್ಯಪ್‌ಗಳು ತಾನು ಯಾವೆಲ್ಲಾ ಮಾಹಿತಿಯನ್ನು ಪಡೆಯುತ್ತೇನೆ ಎಂದೂ ಹೇಳುವುದಿಲ್ಲ. ಒಂದು ವೇಳೆ ಹೇಳಿದರೂ ಅದು ಅಷ್ಟೇ ಮಾಹಿತಿಯನ್ನು ಪಡೆಯುತ್ತಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಸಾಮಾನ್ಯ ಬಳಕೆದಾರನಿಗೆ ಯಾವ ಮಾರ್ಗವೂ ಇಲ್ಲ.

ಈಗ ವಿವಾದದ ಕೇಂದ್ರಬಿಂದುವಾಗಿರುವ ಕೇಂಬ್ರಿಜ್ ಅನಲಿಟಿಕಾ ಮಾಡಿದ್ದೂ ಅದನ್ನೇ. ವ್ಯಕ್ತಿತ್ವದ ವಿಶ್ಲೇಷಣೆಯ ಫೇಸ್‌ಬುಕ್ ಆ್ಯಪ್ ಸಂಗ್ರಹಿಸಿದ್ದ ವೈಯಕ್ತಿಕ ಮಾಹಿತಿಯನ್ನು ತನ್ನದಾಗಿಸಿಕೊಂಡಿತು. ಅದನ್ನು ಬಳಸಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಮತದಾರರ ಮನೋಭೂಮಿಕೆಯನ್ನು ತನಗೆ ಬೇಕಾದಂತೆ ಬದಲಾಯಿಸಲು ಸಾಧ್ಯವಿರುವ ತಂತ್ರವೊಂದನ್ನು ರೂಪಿಸಿತು. ಫೇಸ್‌ಬುಕ್ ಈಗ ವಿಷಾದ ವ್ಯಕ್ತಪಡಿಸುತ್ತಿದೆ. ವಾಸ್ತವದಲ್ಲಿ ಬಳಕೆದಾರರ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಅನುಕೂಲವಾಗುವಂಥ ದ್ವಾರಗಳನ್ನು ಆ್ಯಪ್ ಅಭಿವೃದ್ಧಿ ಪಡಿಸುವವರಿಗೆ ತೆರೆದಿಟ್ಟದ್ದೇ ಫೇಸ್‌ಬುಕ್. ಫೇಸ್‌ಬುಕ್‌ನಲ್ಲಿರುವ ವೈಯಕ್ತಿಕ ಮಾಹಿತಿ ದತ್ತಾಂಶದ ಮೌಲ್ಯವನ್ನು ಅರ್ಧ ಟ್ರಿಲಿಯನ್ ಡಾಲರುಗಳೆಂದು ಅಂದಾಜಿಸಲಾಗಿದೆ. ಅಂದರೆ ಸುಮಾರು ಐದು ಲಕ್ಷ ಕೋಟಿ ಡಾಲರುಗಳು. ಯಾವುದಾದರೂ ಒಂದು ಸರಕು ಅಥವಾ ಮಾಹಿತಿಯ ಮೌಲ್ಯ ನಿಗದಿಯಾಗುವುದು ಅದಕ್ಕಿರುವ ಮಾರುಕಟ್ಟೆ ಬೆಲೆಯ ಆಧಾರದ ಮೇಲೆ. ಈ ದೃಷ್ಟಿಯಲ್ಲಿ ನೋಡಿದರೆ ಈ ದತ್ತಾಂಶಕ್ಕೆ ಒಂದು ಮಾರಾಟ ಮೌಲ್ಯ ಇದೆ ಎಂದಾಯಿತಲ್ಲವೇ?

ಪ್ರಭುತ್ವದ ಮೇಲೆ ನಿಯಂತ್ರಣ ಸಾಧಿಸಬೇಕು ಎಂದು ಹೊಂಚು ಹಾಕುತ್ತಿರುವವರೆಲ್ಲರೂ ಅರಿಯಲು ಪ್ರಯತ್ನಿಸುವುದು ಮತದಾರನ ಮನಸ್ಸಿನೊಳಗೆ ಏನಿದೆ ಎಂಬುದನ್ನು. ಇದಕ್ಕೆ ಉತ್ತರ ದೊರೆತರೆ ಅದನ್ನು ತಮ್ಮತ್ತ ಒಲಿಸಿಕೊಳ್ಳಲು ಏನು ಮಾಡಬೇಕು ಎಂಬ ತಂತ್ರವನ್ನು ಅವರು ರೂಪಿಸುತ್ತಾರೆ. ರಾಜಕಾರಣಿಗಳು ವಿವಿಧ ಸಮೀಕ್ಷಾ ಸಂಸ್ಥೆಗಳ ಮೂಲಕ ತಮ್ಮ ಜನಪ್ರಿಯತೆಯನ್ನು ಅಳೆಯಲು ಪ್ರಯತ್ನಿಸುವುದರಿಂದ ಆರಂಭಿಸಿ ಜ್ಯೋತಿಷಿಗಳ ಮೊರೆ ಹೋಗುವ ತನಕದ ಎಲ್ಲವನ್ನೂ ಮಾಡುವುದು ಗೆಲ್ಲುವುದಕ್ಕಾಗಿ. ಗೆಲುವಿನ ತಂತ್ರ ರೂಪಿಸುವುದಕ್ಕಾಗಿ.

ಇದು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಹೇಗಿರುತ್ತದೆ ಎಂಬುದು ನಿಜಕ್ಕೂ ಅರಿವಾದದ್ದು ಮಾರ್ಚ್ ಎರಡನೇ ವಾರದಲ್ಲಿ ಕ್ರಿಸ್ಟೋಫರ್ ವೈಲ್ ಎಂಬ ತಂತ್ರಜ್ಞ ‘ದಿ ಗಾರ್ಡಿಯನ್’ ಪತ್ರಿಕೆಯ ವರದಿಗಾರನೆದುರು ಬಿಚ್ಚಿಟ್ಟ ಕಥನದಲ್ಲಿ. ಟ್ರಂಪ್ ಗೆಲುವನ್ನು ಖಾತರಿ ಪಡಿಸಲು ನಡೆಸಿದ ‘ಮಾಹಿತಿ ಕಾರ್ಯಚರಣೆ’ಯನ್ನು ಹೇಗೆ ನಡೆಸಲಾಯಿತು ಎಂಬುದನ್ನು ವೈಲ್ ಬಹಿರಂಗ ಪಡಿಸಿದ್ದಾರೆ. ಈ ದತ್ತಾಂಶವನ್ನು ಬಳಸಿಕೊಂಡೇ ಅಮೆರಿಕದ ಮನೋಭೂಮಿಕೆಯ ಮೇಲೆಯೇ ಒಂದು ಯುದ್ಧ ಸಾರಲಾಯಿತು.

ಮನಸ್ಸುಗಳನ್ನು ಪರಿವರ್ತಿಸುವ ಕೆಲಸ ಯಶಸ್ವಿಯಾಗಿ ನಡೆಯಿತು ಎಂಬುದು ನಮ್ಮ ಮುಂದಿರುವ ವಾಸ್ತವ. ಇದನ್ನೇ ಬ್ರೆಕ್ಸಿಟ್‌ನ ಸಂದರ್ಭದಲ್ಲಿಯೂ ಬಳಸಲಾಗಿತ್ತು. ಈ ಮಾಹಿತಿ ಕೊಯ್ಲಿನ ಮಾದರಿಯನ್ನು ಇಂದು ಬಹುತೇಕ ಆನ್‌ಲೈನ್ ಸೇವೆಗಳು ಬಳಸಿಕೊಳ್ಳುತ್ತಿವೆ. ನಮ್ಮ ಮನೋಭೂಮಿಕೆಯ ನಕ್ಷೆಯೊಂದು ಈ ಕಂಪೆನಿಗಳ ಬಳಿ ಇರುತ್ತದೆ. ಅದನ್ನು ಬಳಸಿಕೊಂಡೇ ಅವು ನಾವು ನೋಡಿಯೇ ತೀರುವಂಥ ಜಾಹೀರಾತುಗಳನ್ನೂ ಸೃಷ್ಟಿಸುತ್ತಿರುತ್ತವೆ. ಇದೇ ಮಾದರಿಯನ್ನು ಕೇಂಬ್ರಿಜ್ ಅನಲಿಟಿಕಾ ಬಳಸಿತು ಎಂಬುದು ಸ್ವಲ್ಪ ಸರಳೀಕರಣ. ತಂತ್ರದ ಮಟ್ಟದಲ್ಲಿ ಇದಿಷ್ಟೇ ಇದ್ದರೂ ಕೇಂಬ್ರಿಜ್ ಅನಲಿಟಿಕಾ ಮತದಾರರ ಮನೋಭೂಮಿಕೆಯ ನಕ್ಷೆಗಳನ್ನು ರೂಪಿಸಿದ್ದಷ್ಟೇ ಅಲ್ಲದೇ ಅದನ್ನು ಬದಲಾಯಿಸುವುದಕ್ಕೆ ಬೇಕಾದ ತಂತ್ರಗಳನ್ನೂ ಹೆಣೆಯಿತು ಎಂಬುದು ಈಗಿನ ವಿವಾದದ ಮೂಲಬಿಂದು.

ಈ ವಿವಾದದ ಹಿನ್ನೆಲೆಯಲ್ಲಿಯೇ ‘ನಮೋ ಆ್ಯಪ್' ಸಂಗ್ರಹಿಸುತ್ತಿರುವ ವೈಯಕ್ತಿಕ ಮಾಹಿತಿಯನ್ನೂ ಗಮನಿಸಬೇಕಾಗುತ್ತದೆ. ಬಳಕೆದಾರರು ಸ್ವಯಂ ಪ್ರೇರಣೆಯಿಂದ ಕೊಡುವ ಮಾಹಿತಿ ಎಂದು ಹೇಳುವುದು ಬಹಳ ಸುಲಭ. ಸಾಮಾನ್ಯ ಆಪ್ ಬಳಕೆದಾರರು ಅದು ಯಾವ ಮಾಹಿತಿಯನ್ನು ಸಂಗ್ರಹಿಸುತ್ತದೆ ಎಂಬುದನ್ನು ಗಮನಿಸುವುದಿಲ್ಲ. ಅದರಲ್ಲೂ ಅಭಿಮಾನವೇ ಪ್ರಧಾನವಾದಾಗ ಅದನ್ನು ನೋಡುವುದು ಇನ್ನೂ ಕಡಿಮೆ. ನೀವು ‘ಮಹಾಭಾರತದ ಯಾವ ಪಾತ್ರ’ ಎಂಬಂಥ ವಿವರಗಳನ್ನು ನೀಡುವ ಫೇಸ್‌ಬುಕ್ ಆಪ್ ಗಳ ವಿಷಯದಲ್ಲಿಯೂ ಇದು ಸಂಭವಿಸುತ್ತದೆ. ವೈಯಕ್ತಿಕ ಮಾಹಿತಿಯ ಕುರಿತು ಹೆಚ್ಚು ಕಾಳಜಿ ವಹಿಸದೇ ಇರುವವರು ಈ ಮಾಹಿತಿಗಳನ್ನೆಲ್ಲಾ ತಮಗೆ ಅರಿವಿಲ್ಲದೆಯೇ ನೀಡಿಬಿಟ್ಟಿರುತ್ತಾರೆ. ತಮ್ಮ ಕುತೂಹಲ ತಣಿದ ಮೇಲೆ ಇಂಥ ಆಪ್‌ಗಳನ್ನು ಹೆಚ್ಚಿನವರು ತೆರವುಗೊಳಿಸುವುದಿಲ್ಲ. ನಿರಂತರವಾಗಿ ಆಪ್‌ನ ತಯಾರಕರಿಗೆ ನಮ್ಮ ವೈಯಕ್ತಿಕ ಮಾಹಿತಿಯ ಪೂರೈಕೆ ನಡೆಯುತ್ತಿರುತ್ತದೆ. ಈ ಮಾಹಿತಿಯನ್ನು ಬಳಸಿಕೊಂಡು ವ್ಯಕ್ತಿಯ ಮನೋಭೂಮಿಕೆಯ ನಕ್ಷೆ ತಯಾರಾಗುತ್ತದೆ. ಈ ಬಗೆಯ ನಕ್ಷೆಗಳನ್ನು ಬಳಸಿಕೊಂಡು ಇಂಥ ಅಭ್ಯರ್ಥಿಗೆ ಓಟು ಹಾಕಿ ಎಂದು ಹೇಳವುದಿಲ್ಲ. ಬದಲಿಗೆ ಮನೋಭೂಮಿಕೆಯ ನಕ್ಷೆಯನ್ನಿಟ್ಟುಕೊಂಡು ಯಾರನ್ನು ದ್ವೇಷಿಸಬೇಕು. ನಿರ್ದಿಷ್ಟ ಅಭ್ಯರ್ಥಿಗೆ ಓಟು ಹಾಕುವುದಕ್ಕೆ ಮನೋಭಾವವನ್ನು ಹೇಗೆ ಬದಲಾಯಿಸಬೇಕು. ಯಾರ ಬಗ್ಗೆ ಸಂಶಯ ಸೃಷ್ಟಿಸಬೇಕು ಎಂಬುದನ್ನು ಪರೋಕ್ಷವಾಗಿ ನಿರ್ದೇಶಿಸಲಾಗುತ್ತದೆ.

ಚುನಾವಣೆಯೊಂದು ಮುಕ್ತ, ನಿರ್ಭೀತ ಮತ್ತು ನ್ಯಾಯಯುತವಾದ ಬಗೆಯಲ್ಲಿ ನಡೆಯಬೇಕು ಎಂಬುದು ಆದರ್ಶ. ಮತದಾರರನ್ನು ಒಲಿಸಿಕೊಳ್ಳಲು ವಿವಿಧ ರಾಜಕೀಯ ಪಕ್ಷಗಳು ತಂತ್ರಗಳನ್ನು ಹೂಡಬಾರದು ಎಂಬ ಯಾವ ಷರತ್ತು ಇಲ್ಲ. ಆದರೆ ಅವೆಲ್ಲವೂ ಮುಕ್ತವಾಗಿರಬೇಕು. ನ್ಯಾಯಯುತವಾಗಿರಬೇಕು. ಅಂದರೆ ಆಡಳಿತ ನೀತಿ, ಜನರ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಮಾರ್ಗದ ಬಗ್ಗೆ ಮುಕ್ತವಾದ ಚರ್ಚೆ ನಡೆಯಬೇಕು. ವಿವಿಧ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ತಿಳಿಸಬೇಕು. ಆಮೇಲೆ ಮತದಾರ ತನ್ನ ನಿರ್ಧಾರವನ್ನು ಪ್ರಕಟಿಸುತ್ತಾನೆ. ಕೇಂಬ್ರಿಜ್ ಅನಲಿಟಿಕಾ ಪ್ರಕರಣ ಇಡೀ ಪ್ರಕ್ರಿಯೆಯನ್ನು ಆಧುನಿಕ ತಂತ್ರಜ್ಞಾನ ಹೇಗೆ ಬದಲಾಯಿಸಿಬಿಟ್ಟಿದೆ ಎಂಬುದನ್ನು ನಮ್ಮೆದುರು ಬಿಚ್ಚಿಡುತ್ತಿದೆ. ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಯುತವಾದ ರೀತಿಯಲ್ಲಿ ನಡೆಸುವುದಕ್ಕೆ ಈಗಿರುವ ನಿಯಮಗಳು ಮತ್ತು ಮಾದರಿಗಳ ಮಿತಿಯನ್ನೂ ಇದು ನಮಗೆ ತೋರಿಸಿ ಕೊಡುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿಯವರ ಕಚೇರಿಯ ಮೇಲೆ ಒಂದು ಮಹತ್ತರ ಜವಾಬ್ದಾರಿಯಿದೆ. ನಮೋ ಆಪ್ ಯಾವ ಮಾಹಿತಿಯನ್ನೂ ಗ್ರಾಹಕರ ಅನುಮತಿ ಇಲ್ಲದೆ ಸಂಗ್ರಹಿಸುವುದಿಲ್ಲ ಎಂಬುದನ್ನು ನಿಜವೆಂದೇ ಭಾವಿಸೋಣ. ಆದರೆ ಹೀಗೆ ಸಂಗ್ರಹಿಸಲಾದ ಮಾಹಿತಿಯನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ಪ್ರಧಾನಿ ಕಚೇರಿ ಸ್ವಯಂ ಪ್ರೇರಿತವಾಗಿ ಬಹಿರಂಗ ಪಡಿಸಬಾರದೇಕೆ? ಎಲಿಯಟ್ ಆಲ್ಡರ್‌ಸನ್ ಬಯಲು ಮಾಡಿರುವಂತೆ ಈ ಮಾಹಿತಿಯನ್ನು ಅಮೆರಿಕದ ಕ್ಲವರ್ ಟ್ಯಾಪ್ ಎಂಬ ಕಂಪೆನಿಗೆ ನೀಡಲಾಗುತ್ತಿದೆ. ಇದೇಕೆ ಎಂಬುದನ್ನು ಭಾರತೀಯ ನಾಗರಿಕರು ತಿಳಿಯುವುದು ಅಗತ್ಯವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT