ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯ

Last Updated 10 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸಗಡ, ಮಿಜೋರಾಂ ಮತ್ತು ದೆಹಲಿ ವಿಧಾನಸಭೆಗಳ ಚುನಾ­ವಣಾ ಫಲಿತಾಂಶ ಜನರ ಈಚೆಗಿನ ಭಾವನೆ, ಆಶಯಗಳ ಅಭಿವ್ಯಕ್ತಿಯಂತಿದೆ. ಮುಂಬರುವ ಲೋಕಸಭಾ ಚುನಾವಣೆಯ ವೇಳೆ ಪರಿಸ್ಥಿತಿ ಹೇಗಿರಬಹುದು, ಯಾವ ತೆರನಾದ ಪ್ರಶ್ನೆಗಳು ಎದುರಾಗ­ಬಹುದು ಎನ್ನು­ವುದಕ್ಕೆ ಈ ಚುನಾವಣೆಯಲ್ಲಿ ಉತ್ತರಗಳನ್ನು ಹುಡುಕಿದವರೇ ಹೆಚ್ಚು.

ಅದೇನೇ ಇದ್ದರೂ ಜನರ ವಿಭಿನ್ನ ಯೋಚನೆ ಅಥವಾ ಒಲವು ಈ ಚುನಾವಣೆ ವೇಳೆ ಎದ್ದು ಕಂಡಿದೆ. ಅವುಗಳಲ್ಲಿ ಒಂದು ಸಕಾರಾತ್ಮಕವಾಗಿ­ರು­ವಂತಹದ್ದು, ಇನ್ನೊಂದು ನಕಾರಾತ್ಮಕ­ವಾಗಿರು­ವಂತಹದ್ದು ಗಮನ ಸೆಳೆಯುತ್ತದೆ.

ಸಕಾ­ರಾತ್ಮಕವಾಗಿರುವಂತಹದ್ದೇನೆಂದರೆ ಹಿಂದೆಂದೂ ಕಂಡು ಕೇಳರಿಯದ ಮಟ್ಟಿಗೆ ದೊಡ್ಡ ಸಂಖ್ಯೆ­ಯಲ್ಲಿ ಜನ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದ್ದಾರೆ.  ಇದು ಶೇಕಡ ಎಪ್ಪತ್ತೈದನ್ನೂ ಮೀರಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲ­ಧಾತು­ವೇ ಆದ ಚುನಾವಣಾ ಪ್ರಕ್ರಿಯೆ ಬಗ್ಗೆ ಜನ ಹೆಚ್ಚು ನಂಬಿಕೆ ಹೊಂದಿದ್ದಾರೆನ್ನುವುದು ಇದ­ರಿಂದ ಗೊತ್ತಾಗುತ್ತದೆ.

ಸ್ಪರ್ಧೆಗಿಳಿದಿದ್ದ ಮಂದಿ, ಸಾರ್ವಜನಿಕರೇ ಅಸಹ್ಯ ಪಟ್ಟುಕೊಳ್ಳುವ ಮಟ್ಟಿಗೆ ಪರಸ್ಪರ ಕಿತ್ತಾಡಿಕೊಂಡಿರುವುದು ಆರೋಗ್ಯಕರ ಪ್ರಜಾಸತ್ತೆಯ ದೃಷ್ಟಿಯಿಂದ ನೋಡಿದಾಗ ನಕಾರಾತ್ಮಕ ಸಂಗತಿಯಾಗಿದೆ. ಚುನಾವಣೆ­ಯಲ್ಲಿ ತೋಳೇರಿಸಿ ನಿಂತ ಪಕ್ಷವೇ ಆಗಲಿ, ವ್ಯಕ್ತಿಯೇ ಆಗಲಿ ಹಲವು ಕಡೆ ಸೊಂಟದ ಕೆಳಗಿನ ಭಾಷೆಗಳನ್ನು ಬಳಸಿ ಆರೋಪ ಪ್ರತ್ಯಾರೋಪ­ಗಳಲ್ಲಿ ತೊಡಗಿದ್ದು ಒಳ್ಳೆಯ ಬೆಳವಣಿಗೆ­ಯಂತೂ ಅಲ್ಲವೇ ಅಲ್ಲ.

ಹಿಂದೆ ಒಂದು ಕಾಲವಿತ್ತು. ರಾಜಕೀಯ ನಾಯ­ಕರು ಜವಾಬ್ದಾರಿಯುತವಾದ ಹೇಳಿಕೆ ನೀಡುತ್ತಿದ್ದರು. ಯಾವತ್ತೂ ಅವರ ಮಾತು ಅಶ್ಲೀಲದತ್ತ ಹೊರಳುತ್ತಿರಲಿಲ್ಲ. ದಶಕಗಳ ಹಿಂದೆ ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರು ಇಂದಿರಾ ಗಾಂಧಿ ಅವರ ಮೇಲೆ ನಿರಂತರ ಟೀಕಾಸ್ತ್ರ ಬಿಡುತ್ತಿದ್ದರು.

ಆದರೆ, ‘ಮೌನದ ಗೊಂಬೆ’ ಎಂದಿದ್ದೇ ವೈಯಕ್ತಿಕ ನೆಲೆಯಲ್ಲಿ ಅವರು ಬಳಸಿದ ಕಟುವಾದ ಪದವಾಗಿತ್ತು. ಆ ಟೀಕೆಯಲ್ಲಿ ದುರುದ್ದೇಶ ಅಥವಾ  ಪೀಡನಾ ಮನೋಭಾವ ಇರಲೇ ಇಲ್ಲ. ಎಲ್ಲವೂ ಒಂದು ಸಜ್ಜನ ನಡವಳಿಕೆಯ ಚೌಕಟ್ಟಿನೊಳಗೆ ಇರುತ್ತಿತ್ತು. ಆದರೆ ಇವತ್ತು ಏನು ಮಾತನಾಡಬೇಕು, ಮಾತನಾಡಬಾರದು ಎಂಬ ಕುರಿತಾದ ನೈತಿಕ ಹೊಣೆಗಾರಿಕೆಯೇ ಕಾಣೆಯಾದಂತಿದೆ. ಯಾರು ಏನನ್ನು ಬೇಕಿದ್ದರೂ ಮಾತನಾಡಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಮೊನ್ನೆ ನಡೆದ ಚುನಾವಣೆಯನ್ನು ಎಲ್ಲರೂ ಸೆಮಿಫೈನಲ್ ಹಣಾಹಣಿ ಎಂದೇ ಪರಿಗಣಿಸಿ­ದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕ­ಸಭಾ  ಚುನಾವಣೆ ಅಥವಾ ಫೈನಲ್ ಪೈಪೋಟಿ ಯಾವ ಮಟ್ಟಿಗಿರಬಹುದೆಂದು ನಾನೀಗ ಕಲ್ಪಿಸಿಕೊಳ್ಳುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರೆಲ್ಲಾ ಒಗ್ಗೂಡಿ ಸಂವಾದ ನಡೆಸಿ ತಾವೇ ಒಂದು ನಡವಳಿಕೆಯ ನೀತಿ ಸಂಹಿತೆಯನ್ನು ಒಪ್ಪಿಕೊಳ್ಳುವುದು ಒಳ್ಳೆ­ಯದು. ಇದರಿಂದ ಅಭ್ಯರ್ಥಿಗಳು ಹಾದಿ ಬೀದಿ­ಯಲ್ಲಿ ಪಡ್ಡೆ ಹುಡುಗರಂತೆ ಬಾಯಿಗೆ ಬಂದಿದ್ದನ್ನು ಮಾತನಾಡುತ್ತಾ ಕಿತ್ತಾಡುವುದು ನಿಲ್ಲಬಹುದೇನೋ.

ನನಗನ್ನಿಸುವ ಮಟ್ಟಿಗೆ ಚುನಾವಣಾ ಆಯೋಗ ಬಹಳಷ್ಟು ವಿಷಯಗಳಿಗೆ ಸಂಬಂಧಿಸಿ­ದಂತೆ ಇನ್ನಿಲ್ಲದಷ್ಟು ಮೃದು ಧೋರಣೆ ತಳೆದಿದೆ.  ಅಭ್ಯರ್ಥಿಯೊಬ್ಬರು ತಪ್ಪು ಮಾಡಿದ್ದಾರೆ ಎಂದು ಕಂಡುಬಂದರೆ ಚುನಾವಣಾ ಆಯೋಗ ಅಂತಹವರಿಗೆ ಎಚ್ಚರಿಕೆ ನೀಡಿದ್ದನ್ನು ಮತ್ತು ಸ್ಪಷ್ಟೀಕರಣ ಕೇಳಿದ್ದನ್ನು ನಾನು ಕಂಡಿದ್ದೇನೆ. ಆದರೆ ಅದಕ್ಕೂ ಹೆಚ್ಚಿನ ಯಾವುದೇ ಕ್ರಮ ಕೈಗೊಂಡಿದ್ದನ್ನಂತೂ ನಾನು ಕಂಡಿಲ್ಲ. ಈ ಸ್ಥಿತಿಯ ಸುಧಾರಣೆ ಸಾಧ್ಯವೇ ಎಂದು ಯೋಚಿಸಬೇಕಾದ ಅಗತ್ಯವಿದೆ.

ಇಂತಹ ವಾತಾವರಣದಲ್ಲಿ ನಮ್ಮ ಸಮಾಜ ನಕಾರಾತ್ಮಕ ನೆಲೆಯಲ್ಲಿ ಒಡೆದು ಹೋಗುವ ಅಥವಾ ಸಮಾಜ ಸ್ವಾಸ್ಥ್ಯ ಕೆಡುವುದರ ಬಗ್ಗೆ ನನಗೆ ಆತಂಕವಿದೆ. ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಹಿಂದೂ ಎಂಬ ‘ನಾಮಪಟ್ಟಿ’ಯನ್ನು ನೇರವಾಗಿ ಬಳಸದೇ ಇರಬಹುದು. ಆದರೆ ಅವರ ಎಲ್ಲಾ ಭಾಷಣ­ಗಳಲ್ಲಿಯೂ ಹಿಂದೂ ರಾಷ್ಟ್ರೀಯವಾದದ ಸೆಲೆ ಕಂಡುಬರುತ್ತದೆ. ಈ ದೇಶದ ವ್ಯವಸ್ಥೆಯ ಮೂಲದ್ರವ್ಯವೇ ಆಗಿರುವ ಜನಾಭಿಪ್ರಾಯ­ವನ್ನೂ ಕಡೆಗಣ್ಣಿನಿಂದ ನೋಡುತ್ತಿರುವುದು ಎದ್ದು ಕಾಣುತ್ತಿದೆ. ಭಾರತೀಯ ಜನತಾ ಪಕ್ಷದ ಮೇಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಹೇರಿರುವ ಈ ‘ಅಭ್ಯರ್ಥಿ’ ಅದೇ ರೀತಿ ಇರಬೇಕು ಎಂದು ‘ಮೇಲಿನವರು’ ಬಯಸುತ್ತಾರೆ ಎಂಬು­ದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ.

ಆದರೆ ಬಿಜೆಪಿ ಒಳಗೇ ಒಂದಷ್ಟು ಸುಧಾರಣಾವಾದಿ­ಗಳೆಂದು ಕರೆಸಿಕೊಳ್ಳುವ ಸುಷ್ಮಾ ಸ್ವರಾಜ್ ಅಥವಾ ಅರುಣ್ ಜೇಟ್ಲಿ ಮೌನವಾಗಿದ್ದಾರೆ. ವೇದಿಕೆಗಳಲ್ಲಿ ಅವರೆಲ್ಲಾ ಆಕಾಶ ನೋಡುತ್ತಾ ಸುಮ್ಮನಿದ್ದು ಬಿಡುತ್ತಾರೆ. ಪಕ್ಷದೊಳಗಿನ ಹಿರಿಯ­ರಾದ ಎಲ್.ಕೆ.ಅಡ್ವಾಣಿ ಅವರಂತೂ ಮೋದಿಯವರ ಉಗ್ರ ಕೋಮುವಾದದ ಬಗ್ಗೆ ಕಿಡಿಕಿಡಿಯಾಗಿದ್ದು, ತಮ್ಮ ಅಸಹನೆ ವ್ಯಕ್ತಪಡಿಸಿ­ದ್ದಾರೆ. ಮೋದಿ ಅವರ ಬಹಳಷ್ಟು ಚಟುವಟಿಕೆ­ಗಳಿಂದ ಅಡ್ವಾಣಿಯವರು ದೂರ ಉಳಿದಿದ್ದಾರೆ.

ಬಿಜೆಪಿಯೊಳಗಿನ ಇನ್ನೊಂದು ಬೆಳವಣಿಗೆ ಕೂಡಾ ಗಮನ ಸೆಳೆಯುವಂತಹದ್ದೇ ಹೌದು. ಈ ಪಕ್ಷ ಚುನಾವಣಾ ರಾಜಕಾರಣದಲ್ಲಿ ತನ್ನ ಬಲವನ್ನು ಹಿಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ತನ್ನ ಮುಸ್ಲಿಮ್ ವಿರೋಧಿ ನಿಲುವಿನಿಂದಲೂ ಸ್ವಲ್ಪಮಟ್ಟಿಗೆ ದೂರವಿರಲು ನಿರ್ಧರಿಸಿದಂತಿದೆ. ಆದರೆ  ಗುಜರಾತ್‌ನಲ್ಲಿ ದಶಕದ ಹಿಂದೆ ಅಲ್ಪಸಂಖ್ಯಾತರ ವಿರುದ್ಧ ನಡೆದ ಗಲಭೆಯಲ್ಲಿ ಪಾಲ್ಗೊಂಡಿದ್ದರೆನ್ನಲಾದ ಬಿಜೆಪಿಯ ಇಬ್ಬರು ಶಾಸಕರನ್ನು ಆಗ್ರಾದಲ್ಲಿ ಈಚೆಗೆ ಸನ್ಮಾನಿಸ­ಲಾಯಿತು. ಅದು ಆ ಪಕ್ಷದ ಮತಬ್ಯಾಂಕಿನ ಮೇಲೆ ಪ್ರತಿಕೂಲ ಪರಿಣಾಮ ಮಾಡದಿರದು ಎಂಬ ಮಾತೂ ಕೇಳಿಬರುತ್ತಿದೆ. ಸರಿಯಾದ ಸಾಕ್ಷ್ಯ­ಗಳಿಲ್ಲದ ಕಾರಣ ಆ ಇಬ್ಬರನ್ನು ನ್ಯಾಯಾ­ಲಯ ಆರೋಪ ಮುಕ್ತರನ್ನಾಗಿಸಿದೆ.  ಸಾರ್ವ­ಜನಿಕ ವಲಯದಲ್ಲಿ ಈ ಬಗ್ಗೆಯೂ ಈಗ ಚರ್ಚೆ ನಡೆದಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದಂತೆಯೇ  ಮುಂಬರುವ ಲೋಕ­ಸಭಾ ಚುನಾವಣೆಯ ಫಲಿತಾಂಶವೂ ಇರುತ್ತದೆ ಎಂದೆನ್ನಬೇಕಾಗಿಲ್ಲ. ಅದೇನೇ ಇದ್ದರೂ, ಪ್ರಸಕ್ತ ಕೇಂದ್ರ­­ದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರ­ದ ಅದಕ್ಷತೆ ಬಗ್ಗೆ ಜನ ರೋಸಿ ಹೋಗಿ­ದ್ದಾರೆ. ಈ ಸರ್ಕಾರದ ಜತೆಗೆ ಸಂಬಂಧ­ವಿರುವವರು ನಡೆಸಿರುವ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹಗರಣಗಳ ವಿವರಗಳನ್ನು ನೋಡಿ ಜನ ಬೇಸತ್ತು ಹೋಗಿದ್ದಾರೆ. ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್ ವಿರುದ್ಧದ ನಕಾರಾತ್ಮಕ ಮತಗಳಿಂದ ಬಿಜೆಪಿಗೆ ಲಾಭವಾಗುತ್ತದೆ. ಆದರೆ ದೇಶದಾದ್ಯಂತ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಅಷ್ಟೇ ಪ್ರಬಲವಾದ ಇನ್ನೊಂದು ಪಕ್ಷ ಇಲ್ಲದಿರುವುದು ಮತ­ದಾರರಲ್ಲಿ ನಿರಾಸೆ ಮೂಡಿಸಿಲ್ಲ ಎನ್ನುವಂತಿಲ್ಲ.

ಆದರೆ ಈಚಿನ ಚುನಾವಣೆಗಳಲ್ಲಿ ಹಣದ ಪ್ರಭಾವ ಇನ್ನಿಲ್ಲದಂತೆ ಏರುತ್ತಿರುವುದು ತೀರಾ ಆತಂಕಕಾರಿ ಸಂಗತಿಯೇ ಆಗಿದೆ.  ಹಿಂದೆ ಇಂತಹ ಪರಿಸ್ಥಿತಿ ಇರಲಿಲ್ಲ ಎಂದೇನೂ ಅಲ್ಲ. ಆದರೆ ಹಿಂದಿನ ಎಲ್ಲಾ ದಾಖಲೆಗಳನ್ನು ಈ ಸಲದ ಚುನಾವಣೆಗಳು ಮುರಿದಂತೆ ಕಾಣುತ್ತಿವೆ. ಆ ಮಟ್ಟಿಗಿನ ಹಣ ಹರಿದಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಇಂತಹದ್ದೊಂದು ಬೆಳವಣಿಗೆ ಒಳ್ಳೆಯದಂತೂ ಅಲ್ಲ.

ಐದು ರಾಜ್ಯಗಳಲ್ಲಿ ಒಟ್ಟು ೬,೪೫೪ ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿ­ದ್ದರು. ಮಧ್ಯಪ್ರದೇಶ ಒಂದರಲ್ಲಿಯೇ ೩೨೧ ಸ್ಥಾನಗಳಿಗೆ ೨,೫೮೬ ಮಂದಿ ಪೈಪೋಟಿಗೆ ಇಳಿದಿ­ದ್ದರು. ರಾಜಸ್ತಾನದಲ್ಲಿರುವ ೨೦೦ ಸ್ಥಾನಗಳಿಗೆ ೨,೦೮೭ ಮಂದಿ ಸ್ಪರ್ಧಿಸಿದ್ದರು. ಛತ್ತೀಸಗಡದಲ್ಲಿ ೯೧ ಸ್ಥಾನಗಳಿಗೆ ೮೪೩ ಮಂದಿ ಸ್ಪರ್ಧಿಸಿದ್ದರು. ಮಿಜೋರಾಂನಲ್ಲಿ ೪೦ ಸ್ಥಾನಗಳಿಗೆ ೧೪೨ ಮಂದಿ ಕಣದಲ್ಲಿದ್ದರು.  ದೆಹಲಿಯ ೭೦ ಸ್ಥಾನಗಳಿಗೆ ೭೯೬ ಮಂದಿ ಪೈಪೋಟಿಗಿಳಿದಿದ್ದರು. ಸಾವಿರಾರು ಕೋಟಿ ರೂಪಾಯಿ ಖರ್ಚಾಗಿದೆ.

ವಿವಿಧ ಅಧ್ಯಯನ ಸಂಸ್ಥೆಗಳು ನಡೆಸಿರುವ ವರದಿ­ಗಳನ್ನು ಗಮನಿಸಿದಾಗ ಲೋಕಸಭಾ ಸ್ಥಾನಕ್ಕೆ ಸ್ಪರ್ಧೆಗಿಳಿಯುವ ಅಭ್ಯರ್ಥಿಯೊಬ್ಬ ಏನಿಲ್ಲ­ವೆಂದರೂ  ಹತ್ತು ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಒಂದು ಲೋಕ­ಸಭಾ ಕ್ಷೇತ್ರವೆಂದರೆ ಅದು  ಏಳೆಂಟು ವಿಧಾನ­ಸಭಾ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಒಂದು ಲೆಕ್ಕಾಚಾರದ ಪ್ರಕಾರ ಒಂದು ವಿಧಾನಸಭಾ ಕ್ಷೇತ್ರದ ಖರ್ಚು ೧.೨೫ ಕೋಟಿ ರೂಪಾಯಿ ಎನ್ನಬಹುದು. ಆದರೆ ವಿಧಾನಸಭಾ ಚುನಾವಣೆ ವೇಳೆ ಅದೇ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು ಎರಡು ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಈಚಿನ ಚುನಾವಣೆಯಲ್ಲಿ ಎಲ್ಲಾ ಅಭ್ಯರ್ಥಿಗಳು ಒಟ್ಟು ೧೩,೯೦೮ ಕೋಟಿ ರೂಪಾಯಿ ಖರ್ಚು ಮಾಡಿರಬಹುದು ಅನ್ನಿಸುತ್ತದೆ.

ಬಿಜೆಪಿಯು ನರೇಂದ್ರ ಮೋದಿ ಅವರನ್ನು ಪ್ರಧಾನ­ಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸುತ್ತಿದೆ. ಅವರ ಖರ್ಚುವೆಚ್ಚವನ್ನೆಲ್ಲಾ ಇದೀಗ ಕಾರ್ಪೊ­ರೇಟ್ ವಲಯವೇ ಭರಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಈ ತೆರನಾದ ಹಣದ ಮೂಲದ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ­ವಂತೂ ಇದ್ದಂತಿಲ್ಲ. ಕಳೆದ ವರ್ಷ ಅಹಮದಾ­ಬಾದ್‌­ನಲ್ಲಿ ದೇಶದ ಬೃಹತ್ ಉದ್ದಿಮೆ ವಲಯದ ಪ್ರಮುಖರ ಸಭೆ ನಡೆದಿತ್ತು. ಮೋದಿ ಅವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿ­ದರೆ ತಮ್ಮ ಉದ್ದಿಮೆಗೆ ಅಪಾರ ನೆರವು ಸಿಗುವ ಭರವಸೆಯಿಂದ  ಅವರಿಗೆ ಸಂಪೂರ್ಣ ಬೆಂಬಲ ನೀಡಲು ಆ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಆದರೆ ನಂತರದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಮೇಲೆ ಅವರು ತಮ್ಮ ನಿರ್ಧಾರವನ್ನು ಪುನರ್‌ಪರಿಶೀಲಿಸಬಹುದಿತ್ತು ಎಂದೆನಿಸುತ್ತದೆ. ಮೋದಿಯವರು ಹಿಂದೊಮ್ಮೆ ತಾವು ಭೇಟಿ ಮಾಡಿದ್ದ ಹುಡುಗಿಯೊಬ್ಬಳ ಚಲನ­ವಲನ ಮೇಲೆ ಕಣ್ಗಾವಲು ಇಡಲು ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಿದ್ದ ಸಂಗತಿ­ಯಂತೂ ಬಲು ಗಂಭೀರವಾಗಿರುವಂತಹದ್ದು. ಜವಾಬ್ದಾರಿಯುತ ಸ್ಥಾನದಲ್ಲಿರುವವರ ಇಂತಹ ನಡವಳಿಕೆ ಬಗ್ಗೆ ನ್ಯಾಯಾಂಗ ತನಿಖೆಯ ಅಗತ್ಯ­ವಂತೂ ಇದ್ದೇ ಇತ್ತು. ಇಂತಹ ಸಂಗತಿಗಳೂ ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ವಿರೋಧಿ­ಗಳಿಗೆ ವಸ್ತುವಾದರೆ ಅಚ್ಚರಿ ಏನಿಲ್ಲ. ಆದರೆ ಚುನಾವಣೆಯ ಮೇಲೆ ಆ ಸಂಗತಿ ದೊಡ್ಡ ಪರಿಣಾಮವನ್ನೇನೂ ಮಾಡುವಂತಹದ್ದಲ್ಲ ಬಿಡಿ.

ಮುಕ್ತ ಮತ್ತು ಸ್ವತಂತ್ರ ಚುನಾವಣಾ ಪ್ರಕ್ರಿಯೆ ನಡೆಯುವ ನಿಟ್ಟಿನಲ್ಲಿ ಚುನಾವಣಾ ಸುಧಾರಣೆ­ಯಂತೂ ಅಗತ್ಯವಿದೆ. ಹಿಂದೆ ಅನೇಕ ಸಮಿತಿಗಳು ಚುನಾವಣೆ ಪ್ರಕ್ರಿಯೆಗೆ ಸುಧಾರಣೆ ತರುವ ಬಗ್ಗೆ ವರದಿಗಳನ್ನು ನೀಡಿದ್ದವು. ಹೋರಾಟಗಾರ ಜಯಪ್ರಕಾಶ್ ನಾರಾಯಣ್ ಅವರು ಬಲು ಹಿಂದೆಯೇ ಸುಧಾರಣೆಗೆ ಅಗತ್ಯವಾದ ಹಲವು ಶಿಫಾರಸುಗಳನ್ನು ಮಾಡಿದ್ದು ನನಗಿನ್ನೂ ನೆನಪಿದೆ.

ಆದರೆ ಅವರ ಕನಸಿನ ಕೂಸಾಗಿದ್ದ ಜನತಾ ಪಕ್ಷವೇ ಅಧಿಕಾರಕ್ಕೆ ಬಂದರೂ ಅವರ ಯಾವುದೇ ಶಿಫಾರಸುಗಳು ಅನುಷ್ಠಾನಕ್ಕೆ ಬರಲಿಲ್ಲ. ಏಕೆಂದರೆ ಆಗ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಅವರು ಇದಕ್ಕೆ ಸಂಬಂಧಿಸಿದಂತೆ ತಮ್ಮದೇ ಆದ ವಿಭಿನ್ನ ವಿಚಾರಧಾರೆ ಹೊಂದಿದ್ದರು. ಅವರು ನಾವು ಕಂಡ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಪ್ರಧಾನಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಚುನಾವಣೆಗಳಲ್ಲಿ ಹಣದ ಪ್ರಭಾವವನ್ನು ಕಡಿಮೆ ಮಾಡುವುದಕ್ಕೆ ಅವರಿಂದ ಸಾಧ್ಯವಾಗಲಿಲ್ಲ. ಹೀಗಾಗಿ, ಮುಕ್ತ ಮತ್ತು ಪಾರದರ್ಶಕ ಚುನಾವಣೆ ಪ್ರಕ್ರಿಯೆ ನಡೆಯಲು ಇವತ್ತಿಗೂ ಅಡ್ಡಿ ಇದ್ದೇ ಇದೆ. ಪ್ರಸಕ್ತ ಈ ದಿಸೆಯಲ್ಲಿ ಸುಧಾರಣೆ ಆಗಲೇಬೇಕಿದೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT