ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ, ದ್ವಿಪತ್ನಿತ್ವ ಮತ್ತು ಸಾಮಾಜಿಕ ಸತ್ಯಗಳು

Last Updated 29 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಚುನಾವಣೆಗಳು ಬಂತೆಂದರೆ ಅಭ್ಯರ್ಥಿಗಳ ಅರ್ಹತೆ ಮತ್ತು ಅನರ್ಹತೆಗಳ ಬಗ್ಗೆ ಚರ್ಚೆಗಳು, ದೂರುಗಳು, ಆರೋಪಗಳು ಹಾಗೂ ಪ್ರತ್ಯಾರೋಪಗಳು ಆರಂಭವಾಗುತ್ತವೆ. ಸಾಮಾನ್ಯವಾಗಿ ಈ ಆಕ್ಷೇಪಣೆಗಳು ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಚುನಾವಣಾ ಅಕ್ರಮಗಳು, ಅಸಮ ಪ್ರಮಾಣದ ಸಂಪತ್‌ಗಳಿಕೆ ಮುಂತಾದವಕ್ಕೆ ಸಂಬಂಧಿಸಿದ್ದಾಗಿರುತ್ತವೆ.

ಆದರೆ ಮುಂದಿನ ವಾರ ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಗಳಿಗೆ ಸ್ಪರ್ಧಿಸಲು ನಾಮಪತ್ರಗಳನ್ನು ಸಲ್ಲಿಸಿರುವ ಅಭ್ಯರ್ಥಿಗಳಿಬ್ಬರು ತಾವು ನೀಡಿರುವ ಪ್ರಮಾಣ ಪತ್ರದಲ್ಲಿ ತಮಗೆ ಇಬ್ಬರು ಪತ್ನಿಯರಿದ್ದಾರೆ ಎಂದು ಘೋಷಿಸಿಕೊಂಡಿರುವುದು ಅರ್ಹತೆ, ಅನರ್ಹತೆಗಳ ಮತ್ತೊಂದು ಮುಖವನ್ನು ಚರ್ಚೆಗೆ ತೆರೆದಿಟ್ಟಿದೆ.

ದ್ವಿಪತ್ನಿತ್ವದ ಕಾರಣದಿಂದಾಗಿ ಈ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುವುದಿಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮುಖ್ಯ ಚುನಾವಣಾಧಿಕಾರಿಗಳು, ಓರ್ವ ಅಭ್ಯರ್ಥಿ ತನಗೆ ಇಬ್ಬರು ಪತ್ನಿಯರಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿಯೇ ಆತನ ನಾಮಪತ್ರವನ್ನು ತಿರಸ್ಕರಿಸಲಾಗುವುದಿಲ್ಲ ಎಂದಿದ್ದಾರೆ. ಚುನಾವಣಾ ಆಯೋಗದ ವ್ಯಾಪ್ತಿಗೆ ಈ ವಿಷಯ ಬರುವುದಿಲ್ಲ, ಆದರೆ ಭಾರತೀಯ ದಂಡ ಸಂಹಿತೆಯ ನಿಯಮಗಳ ಪ್ರಕಾರ, ಅವರ ಮೇಲೆ ದೂರು ದಾಖಲಾದರೆ ತಾವು ಕ್ರಮವನ್ನು ಕೈಗೊಳ್ಳಬಹುದು ಎಂಬ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಹಿಂದೂ ವಿವಾಹ ಕಾಯಿದೆ (1955) ಮತ್ತು ಭಾರತೀಯ ದಂಡ ಸಂಹಿತೆಯ 494 ವಿಧಿಯ ಅನ್ವಯ ಪತಿ ಅಥವಾ ಪತ್ನಿ ಜೀವಂತವಾಗಿರುವಾಗ ಮತ್ತೊಂದು ಮದುವೆಗೆ ಅವಕಾಶವಿಲ್ಲ. ದ್ವಿಪತ್ನಿತ್ವ ಕಾನೂನು ಬಾಹಿರ ಹಾಗೂ ಶಿಕ್ಷಾರ್ಹವಾದಂಥ ಕೃತ್ಯ. ಹಿಂದೂ ವಿವಾಹ ಕಾಯಿದೆಯ ವಿಧಿ 5ರ (ಭಾಗ-ಐ) ಜೀವಂತ ಪತಿ ಅಥವಾ ಪತ್ನಿ ಇರುವ ವ್ಯಕ್ತಿಗೆ ಮರು ವಿವಾಹ ಮಾಡಿಕೊಳ್ಳಲು ಅನುಮತಿಯಿಲ್ಲ ಎಂದಿದ್ದರೆ, ಇದೇ ವಿಧಿಯ (ಭಾಗ-ಐಐ) ಹಾಗೇನಾದರೂ ವಿವಾಹವಾಗಿದ್ದಲ್ಲಿ, ಅಂಥ ಸಂಬಂಧ ಅನೂರ್ಜಿತ ಎಂದು ಸ್ಪಷ್ಟ ಪಡಿಸಿದೆ.

ಭಾರತೀಯ ದಂಡ ಸಂಹಿತೆಯ 494 ಮತ್ತು 495 ವಿಧಿಗಳ ಪ್ರಕಾರ ನ್ಯಾಯಾಲಯ ಅಥವಾ ಪೊಲಿಸ್ ಠಾಣೆಯಲ್ಲಿ ಪತಿ ಅಥವಾ ಪತ್ನಿ ಜೀವಂತವಾಗಿರುವಾಗ ಮತ್ತೊಂದು ವಿವಾಹ ನಡೆದರೆ, ದ್ವಿಪತ್ನಿತ್ವದಿಂದ ಭಾದಿತ ವ್ಯಕ್ತಿ, ಅಥವಾ ಆಕೆಯ ತಂದೆ ದೂರು ದಾಖಲಿಸಬಹುದು. ದ್ವಿಪತ್ನಿತ್ವಕ್ಕೆ 7 ವರ್ಷಗಳ ಸೆರೆಮನೆವಾಸ, ದಂಡ ಅಥವಾ ಎರಡನ್ನೂ ಶಿಕ್ಷೆಯ ರೂಪದಲ್ಲಿ ವಿಧಿಸಬಹುದು ಎಂದು ಕೂಡ ಭಾರತೀಯ ದಂಡ ಸಂಹಿತೆ ಸೂಚಿಸಿದೆ.

ದ್ವಿಪತ್ನಿತ್ವವನ್ನು ಕಾನೂನು ಬಾಹಿರ ಕೃತ್ಯ ಎಂದು ಕಾಯಿದೆ- ಕಾನೂನುಗಳು ಸ್ಪಷ್ಟವಾಗಿಯೇ ತಿಳಿಸಿದ್ದರೂ ಚುನಾವಣಾ ಅರ್ಹತೆಗೂ ದ್ವಿಪತ್ನಿತ್ವಕ್ಕೂ ನೇರ ಸಂಬಂಧವನ್ನು ಚುನಾವಣಾ ಆಯೋಗದ ನಿಯಮಗಳು ಗುರುತಿಸಿಲ್ಲವಾದ್ದರಿಂದ ಪ್ರಾಯಶಃ ಅಭ್ಯರ್ಥಿಗಳನ್ನು ಈ ಕಾರಣದಿಂದಾಗಿ ಚುನಾವಣಾ ಕಣದಿಂದ ದೂರವಿಡಲು ಸಾಧ್ಯವಿಲ್ಲವೆಂದು ಸಂಬಂಧಿಸಿದ ಅಧಿಕಾರಿಗಳು ಹೇಳಿರಬಹುದೇನೋ? ಆದರೆ ದೇಶದಲ್ಲಿ ಜಾರಿಯಾಗಿರುವ ಒಂದು ಕಾನೂನಿನ ರೀತ್ಯ ಯಾರ ಮೇಲಾದರೂ ಕ್ರಮ ಕೈಗೊಳ್ಳಬೇಕಾದರೆ, ಅದು ಯಾರಿಂದಲಾದರೂ ದೂರು ದಾಖಲಾದರೆ ಮಾತ್ರ ಸಾಧ್ಯವೇ ಅಥವಾ ಕಾನೂನಿನ ವಿರುದ್ಧ ನಡೆದಿರುವ ಕೃತ್ಯದ ವಿರುದ್ಧ, ಲಭ್ಯವಿರುವ ದಾಖಲೆಗಳನ್ನಾಧರಿಸಿ ಕ್ರಮವನ್ನು ಜರುಗಿಸಲಾಗುವುದಿಲ್ಲವೇ ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಚುನಾವಣಾ ಆಯೋಗದ ವ್ಯಾಪ್ತಿಗೆ ದ್ವಿಪತ್ನಿತ್ವದ ವಿಷಯ ಬಾರದಿರಬಹುದು. ಆದರೆ, ಅನೇಕ ಹಾಲಿ ಹಾಗೂ ಭಾವಿ ರಾಜಕೀಯ ನಾಯಕರು ಬಹುಕಾಲದಿಂದ ದ್ವಿಪತ್ನಿತ್ವದ ಅಥವಾ ಆರೋಪಗಳನ್ನು ಎದುರಿಸುತ್ತಿರುವುದು ಯಾರಿಗೂ ತಿಳಿಯದ ವಿಷಯವೇನಲ್ಲ. ಹಾಗೆಯೇ ದ್ವಿಪತ್ನಿತ್ವ, ಬಹು ಪತ್ನಿತ್ವದ ಆರೋಪಕ್ಕೆ ಒಳಗಾಗಿರುವ ಹಾಗೂ ವಿವಾಹೇತರ ಸಂಬಂಧಗಳನ್ನು ಹೊಂದಿರುವಂಥ ವ್ಯಕ್ತಿಗಳನ್ನು ರಾಜಕೀಯ ನಾಯಕತ್ವದ ಸ್ಥಾನಗಳಿಂದ ವಜಾ ಮಾಡಬೇಕೇ ಎಂಬ ಚರ್ಚೆಯೂ ಇಂದು ನಿನ್ನೆಯದಲ್ಲ. ವಿಷಯ ಎಷ್ಟು ಚರ್ಚೆಗೆ ಒಳಪಟ್ಟರೂ, ಇಂಥ ಅನೇಕ ಪ್ರಕರಣಗಳು ವರದಿಯಾಗಿದ್ದರೂ ಇದೊಂದೇ ಕಾರಣಕ್ಕಾಗಿ ಅಧಿಕಾರವನ್ನು ಕಳೆದು ಕೊಂಡಿರುವವರ ಸಂಖ್ಯೆ ತೀರಾ ಗೌಣ ಅಥವಾ ಹೆಚ್ಚು ಕಡಿಮೆ ಇಲ್ಲವೆಂದೇ ಹೇಳಬಹುದು.

ದ್ವಿಪತ್ನಿತ್ವದ ಆರೋಪವನ್ನೆದುರಿಸುತ್ತಿರುವವಂಥ ವ್ಯಕ್ತಿಗಳು ಕೇವಲ ರಾಜಕೀಯ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಜವಾಬ್ದಾರಿಯುತ ಸಾರ್ವಜನಿಕ ಸ್ಥಾನಗಳಲ್ಲಿರುವಂಥ ಅನೇಕ ವ್ಯಕ್ತಿಗಳೂ ಕಾನೂನಿಗೆ ಸವಾಲನ್ನೆಸೆಯುವಂಥ ರೀತಿಯಲ್ಲಿ ಮೊದಲನೆಯ ಹೆಂಡತಿ ಬದುಕಿರುವಾಗಲೇ, ಎರಡನೆಯ ಮದುವೆ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲೂ ಇಬ್ಬರು ಪತ್ನಿಯರೊಡನೆ ಕಾಣಿಸಿಕೊಂಡಿರುವಂತಹುದು ಅಥವಾ ಒಂದೇ ಮನೆಯಲ್ಲಿ ವಾಸಿಸುತ್ತಿರುವಂತಹುದು- ಈ ಹಿಂದೆಯೂ ನಡೆದಿದೆ, ಈಗಲೂ ನಡೆಯುತ್ತಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾನು ಎರಡನೆಯ ಮದುವೆ ಮಾಡಿಕೊಂಡಿರುವುದಕ್ಕೆ ಪತ್ನಿ ಸಮ್ಮತಿಯಿದೆ, ಆಕೆಯೇ ಮುಂದೆ ನಿಂತು ಈ ವಿವಾಹ ನೆರವೇರಿಸಿದಳು ಎಂದು ಬೇರೆ ಹೇಳಿಕೊಳ್ಳುತ್ತಾರೆ. ಎರಡನೇ ಮದುವೆಗೆ ನೀಡುವ ಅತ್ಯಂತ ಸಾಮಾನ್ಯ ಕಾರಣಗಳೆಂದರೆ ಮೊದಲನೆಯ ಪತ್ನಿಯ ಸಂತಾನರಹಿತತೆ, ಅನಾರೋಗ್ಯ ಅಥವಾ ಆಕೆಯ ಮಾನಸಿಕ ಅಸ್ವಸ್ಥ ಸ್ಥಿತಿ. ಇಂಥ ಕಾರಣಗಳನ್ನು ಮುಂದಿಟ್ಟು, ದ್ವಿಪತ್ನಿತ್ವ ಸಮರ್ಥಿಸಿಕೊಳ್ಳುವ ಪುರುಷರನ್ನು ಈ ಸಮಾಜ ಸಹಿಸಿಕೊಳ್ಳುತ್ತದೆ ಅಥವಾ ಅದು ಗಂಡಸಿನ ಹಕ್ಕು ಎಂಬಂತೆ ಕೂಡ ಅನೇಕ ಸಂದರ್ಭಗಳಲ್ಲಿ ನಡೆದುಕೊಳ್ಳುತ್ತದೆ.

ಕಾನೂನೇನೋ ದ್ವಿಪತ್ನಿತ್ವದಿಂದ ಭಾದಿತಳಾದ ಪತ್ನಿ ದೂರು ದಾಖಲಿಸಬಹುದು ಎಂದು ಸೂಚಿಸಿದೆ. ವೈವಾಹಿಕ ಸಂಬಂಧಗಳಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯಲ್ಲಿರುವ ಅಥವಾ ಸ್ವಇಚ್ಛೆಯಿಂದಲೇ ವಿಚ್ಛೇದನಕ್ಕೆ ಸಮ್ಮತಿಸುವ ವಿವಾಹಿತ ಮಹಿಳೆಯರನ್ನು ಹೊರತು ಪಡಿಸಿದರೆ, ತಾನು ಬದುಕಿರುವಾಗಲೇ ಪತಿ ಮತ್ತೋರ್ವ ಮಹಿಳೆಯನ್ನು ವಿವಾಹವಾಗುವುದಕ್ಕೆ ಮೊದಲ ಪತ್ನಿಯಿಂದ ವಿರೋಧ ವ್ಯಕ್ತವಾಗುವುದು ಸಹಜವೇ.

ಅನೇಕ ಸಂದರ್ಭಗಳಲ್ಲಿ ತನಗೆ ಈಗಾಗಲೇ ವಿವಾಹವಾಗಿರುವಂಥ ಸಂಗತಿ ಮುಚ್ಚಿಟ್ಟು ಮತ್ತೊಂದು ಹೆಣ್ಣಿಗೂ ಮೋಸ ಮಾಡಿರುವಂಥ ಪುರುಷರೂ ಇದ್ದಾರೆ. ಹಾಗೆ ನೋಡಿದರೆ ದ್ವಿಪತ್ನಿತ್ವದ ಸಂದರ್ಭದಲ್ಲಿ ಇಬ್ಬರು ಪತ್ನಿಯರೂ ಭಾದಿತ ವ್ಯಕ್ತಿ ಸ್ಥಾನದಲ್ಲಿರಬಹುದು. ಆದರೆ ದೂರು ದಾಖಲಿಸುವ ಅಥವಾ ವಿರೋಧ ವ್ಯಕ್ತಪಡಿಸುವ ಸ್ಥಿತಿಯಲ್ಲಿ ಎಷ್ಟು ಜನ ಮಹಿಳೆಯರು ಇದ್ದಾರೆ ಎನ್ನುವುದು ಮುಖ್ಯವಾಗಿ ಗಮನಿಸಬೇಕಾದ ಅಂಶ.

ಜೀವನ ನಿರ್ವಹಣೆಗಾಗಿ ಪತಿಯನ್ನೇ ಅವಲಂಬಿಸಿದ್ದು, ಸ್ವತಂತ್ರವಾಗಿ ಬದುಕಲು ಪರ್ಯಾಯ ಮಾರ್ಗಗಳೇ ಇಲ್ಲದಂಥ ಸ್ತ್ರೀಯರನೇಕರು ದ್ವಿಪತ್ನಿತ್ವ ಸಹಿಸಿಕೊಂಡು ಬಂದಿರುವ, ಇಂದಿಗೂ ಸಹಿಸಿಕೊಂಡು ಬರುತ್ತಿರುವಂಥ ಅನೇಕ ನಿದರ್ಶನಗಳು ನಮ್ಮ ಮುಂದಿವೆ. ಇದನ್ನು ಆ ಸ್ತ್ರೀಯ ದೊಡ್ಡ ಗುಣವೆಂದೋ ಪತಿಭಕ್ತಿಯೆಂದೋ, ಸಹನಾಶಕ್ತಿ ಪ್ರತೀಕವೆಂದೋ ವೈಭವೀಕರಿಸುವಂಥವರೂ ಇದ್ದಾರೆ.

ಒಂದೇ ಸೂರಿನಡಿ ಇಬ್ಬರು ಪತ್ನಿಯರೂ ವಾಸವಾಗಿರುವಂಥ ಸನ್ನಿವೇಶವನ್ನು ಒಂದು `ಆದರ್ಶ ಸ್ಥಿತಿ'ಯೆಂಬಂತೆ ಬಿಂಬಿಸಿ ಇಬ್ಬರೂ ಎಷ್ಟು ಹೊಂದಾಣಿಕೆಯಿಂದಿದ್ದಾರೆ ಎಂದು ಹೊಗಳುವುದರಿಂದ ಹಿಡಿದು, ಎರಡನೇ ಹೆಂಡತಿಯೂ ಓರ್ವ ಮಹಿಳೆ ತಾನೇ, ಮದುವೆ ಆದ ಮೇಲೆ ಇನ್ನೇನು ಮಾಡೋಕೆ ಆಗುತ್ತೆ ಎನ್ನುವವರೆಗೆ ದ್ವಿಪತ್ನಿತ್ವಕ್ಕೆ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ.

ಕೌಟುಂಬಿಕ ವಿಘಟನೆ, ವೈವಾಹಿಕ ಹಿಂಸೆ, ವಿಚ್ಛೇದನ, ಆಸ್ತಿ ಹಂಚಿಕೆ, ಉತ್ತರದಾಯಿತ್ವ ಮುಂತಾದ ವಿಚಾರಗಳಲ್ಲಿ ಮಹಿಳೆಯರಿಗೆ ನ್ಯಾಯ ಒದಗಿಸಲೆಂದೇ ಅಸ್ತಿತ್ವಕ್ಕೆ ಬಂದಿರುವ ಕುಟುಂಬ ನ್ಯಾಯಾಲಯಗಳು ಮತ್ತು ಮಹಿಳಾ ಪೊಲೀಸ್ ಠಾಣೆಗಳು ಅನೇಕ ಸಂದರ್ಭಗಳಲ್ಲಿ ತಳೆಯುವ ಪುರುಷಪ್ರಧಾನ ನಿಲುವುಗಳು ದ್ವಿಪತ್ನಿತ್ವವನ್ನು ಪ್ರಶ್ನಿಸುವುದಕ್ಕಿಂತ ಅದನ್ನು ನಿರ್ವಹಿಸುವುದು ಹೇಗೆ ಎನ್ನುವ ಬಗ್ಗೆಯೇ ಮಹಿಳೆಯರಿಗೆ  ಬುದ್ಧಿವಾದ  ಹೇಳ ಹೊರಡುತ್ತವೆ.

ವಿವಾಹ ಎನ್ನುವ ಸಂಸ್ಥೆಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕೆನ್ನುವ ಸಿದ್ಧಾಂತಕ್ಕೆ ಬದ್ಧವಾಗಿರುವ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಪತ್ನಿಯ ಹಕ್ಕಿಗಿಂತ ಮನೆತನದ ಮರ್ಯಾದೆಗೇ ಮಹತ್ವ. ಸ್ವತಃ ಸ್ತ್ರೀ ಸಂವೇದನೆಗಳಿಲ್ಲದ ಅಧಿಕಾರಿಗಳು, ಆರಕ್ಷಕರು ಅಥವಾ ನ್ಯಾಯವಾದಿಗಳು ಇಂತಹ ನಿಲುವುಗಳನ್ನು ತಳೆಯುವುದರಲ್ಲಿ ಆಶ್ಚರ್ಯವೇನಿದೆ?

ಪುರುಷ ಪರಮಾಧಿಕಾರವನ್ನೂ ಸ್ತ್ರೀ ಪರಾಧೀನತೆಯನ್ನೂ ಎತ್ತಿ ಹಿಡಿಯುವ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಆಯ್ಕೆ ಸ್ವಾತಂತ್ರ್ಯವಿರುವುದೇ ಪುರುಷರಿಗೆ. ತನಗೆ ಎಷ್ಟೇ ಅವಮಾನವಾಗಲಿ, ಹಿಂಸೆಯಾಗಲಿ ಹೆಣ್ಣಾದವಳು ಪತಿಯ ನಿರ್ಧಾರಗಳಿಗೆ ಬದ್ಧಳಾಗಬೇಕು. ಆಕೆಗೆ ಪ್ರಶ್ನೆಯ ಹಕ್ಕಿಲ್ಲ ಅಥವಾ ಪ್ರಶ್ನೆಮಾಡಿದರೂ ಅದಕ್ಕೆ ದೊರೆಯಬಹುದಾದ ಸ್ಪಂದನ ಅಥವಾ ಪ್ರತಿಕ್ರಿಯೆ ಸಕಾರಾತ್ಮಕವಾಗಿರಬೇಕಿಲ್ಲ.

ಹೆಣ್ಣೇನಾದರೂ ವಿವಾಹ ಸಂಬಂಧದಿಂದ ಹೊರಬರುವ ಅಥವಾ ಮರು ವಿವಾಹ ಮಾಡಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದರೆ ಈ ಇಡೀ ವಿಷಯವನ್ನು ನೈತಿಕ ನೆಲೆಗಟ್ಟಿನಲ್ಲಿ ವಿಶ್ಲೇಷಣೆಗೆ ಒಳಪಡಿಸಿ, ಆಕೆಯನ್ನೇ ದೋಷಿಯೆಂಬಂತೆ ನಡೆಸಿಕೊಳ್ಳಲಾಗುತ್ತದೆ.

ರಾಜಕೀಯದಿಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣಿನಲ್ಲಿರಬೇಕಾದ  `ಗುಣ'ಗಳ ಬಗೆಗಿನ ಚರ್ಚೆ ನಡೆಯುವುದು ಲಿಂಗ ವ್ಯವಸ್ಥೆಯ ಸ್ಥಿರಮಾದರಿಗಳ ಚೌಕಟ್ಟಿನಲ್ಲಿ. ಹೆಣ್ಣು ಯಾವ ಸ್ಥಾನದಲ್ಲಾದರೂ ಇರಲಿ, ಮೊದಲು ಆಕೆ ಮಗಳಾಗಿ ಮಡದಿಯಾಗಿ, ಮಾತೆಯಾಗಿ ತನ್ನ ಕರ್ತವ್ಯವನ್ನು ಪಾಲಿಸಬೇಕು. ಮೊದಲನೆಯ ಪತ್ನಿಗಾಗಲಿ, ಎರಡನೆಯ ಪತ್ನಿಗಾಗಲಿ ಆಕೆಗೆ ತನ್ನ ಬದುಕನ್ನು ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಬಹುತೇಕ ಸಂದರ್ಭಗಳಲ್ಲಿ ಇರುವುದಿಲ್ಲ. ದ್ವಿಪತ್ನಿತ್ವದ ವಿಚಾರ ಬಂದಾಗ ಅದನ್ನು ಕಾನೂನಿನ ದೃಷ್ಟಿಕೋನದಿಂದ ಪರಿಶೀಲಿಸುವುದು ಎಷ್ಟು ಮುಖ್ಯವೋ ಹೆಣ್ಣಿನ ದೃಷ್ಟಿಯಿಂದ ವಿಮರ್ಶೆಗೆ ಒಳಪಡಿಸುವುದು ಕೂಡ ಅಷ್ಟೇ ಮುಖ್ಯ.

ಹಿಂದೂ ವಿವಾಹ ಕಾಯಿದೆ ಏಕ ಪತ್ನಿತ್ವ/ಏಕಪತಿತ್ವವನ್ನು ಮಾತ್ರ ಮಾನ್ಯ ಮಾಡಿದ್ದರೂ ವಾಸ್ತವದಲ್ಲಿ ಏಕ ಸಂಗಾತಿ ವಿವಾಹ ಹೆಚ್ಚು ಕಡಿಮೆ ಅನ್ವಯಿಸುವುದು ಮಹಿಳೆಯರಿಗೇ ಹೊರತು ಪುರುಷರಿಗಲ್ಲ. ವೈವಾಹಿಕ ಸಂಬಂಧ ಉಳಿಸಿಕೊಳ್ಳುವ ಗುರುತರ ಜವಾಬ್ದಾರಿಯಿರುವುದು ಸ್ತ್ರೀಯ ಆದ್ಯ ಕರ್ತವ್ಯವಾದ್ದರಿಂದ, ಆಕೆ ವೈವಾಹಿಕ ಬದುಕಿನಲ್ಲಿ ಪತಿಯಿಂದುಂಟಾಗುವ ದೌರ್ಜನ್ಯ ಸಹಿಸಿಕೊಳ್ಳಬೇಕು ಎಂದು ನಂಬಿರುವ ವ್ಯವಸ್ಥೆಯಲ್ಲಿ ವಿವಾಹ ಎನ್ನುವ ಸಂಸ್ಥೆಯಲ್ಲಿ ಬಿರುಕುಗಳು ಕಂಡು ಬಂದಾಗ ಅನುಮಾನದ ಸುಳಿಯಲ್ಲಿ ಮೊದಲು ಸಿಲುಕುವವಳೇ ಹೆಣ್ಣು. ಪುರುಷನ ದೌರ್ಬಲ್ಯಗಳನ್ನು ಹಿಂದೆ ಸರಿಸಿ, ಸ್ತ್ರೀ ಬದುಕಿನತ್ತ ಬೆರಳು ತೋರಿಸುವ ಈ ಸಮಾಜದಲ್ಲಿ ಗಂಡಸಾದವನು ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದು ಎಂಬ ಧೋರಣೆಯಿರುವುದರಿಂದಲೇ ದ್ವಿಪತ್ನಿತ್ವದಂಥ ಪದ್ಧತಿಗಳು ರಾಜಾರೋಷವಾಗಿ ಮೆರೆಯುತ್ತಿರುವುದು.

ವಿವಾಹದಂಥ ಸಂಸ್ಥೆಗೆ ಅತಿ ಪ್ರಾಶಸ್ತ್ಯ ನೀಡುವ ಈ ಸಮಾಜ, ಪುರುಷರ ವಿಚಾರಕ್ಕೆ ಬಂದಾಗ ದ್ವಿಪತ್ನಿತ್ವವನ್ನಷ್ಟೇ ಅಲ್ಲ, ವಿವಾಹೇತರ ಸಂಬಂಧಗಳನ್ನೂ ಸಹಿಸಿಕೊಂಡು ಬರುತ್ತಿರುವುದು ಹೊಸತೇನಲ್ಲ. ಜಾಗತೀಕರಣ ತಂದ ಬದಲಾವಣೆಗಳು ಸಾಮಾಜಿಕ ನಿಯಂತ್ರಣಾ ವ್ಯವಸ್ಥೆಯನ್ನು ಛಿದ್ರಗೊಳಿಸಿರುವುದರಿಂದ, ಸಾಂಪ್ರದಾಯಿಕ ಕೌಟುಂಬಿಕ ಮೌಲ್ಯಗಳೆಲ್ಲ ನಶಿಸಿ ಹೋಗುತ್ತಿವೆ ಎಂದು ಕೂಗಿಕೊರಗುತ್ತಿರುವವರು ಇದೇ ವಿವಾಹ ಎನ್ನುವ ಸಂಸ್ಥೆಯಲ್ಲಿ ಶತಮಾನಗಳಿಂದ ಇರುವ ಬಿರುಕುಗಳನ್ನು ಸಂಪೂರ್ಣವಾಗಿ ಅಲಕ್ಷಿಸಿರುವಂತಿದೆ.

ಇಂದಿಗೂ ಊಳಿಗಮಾನ್ಯ ವ್ಯವಸ್ಥೆಯಲ್ಲಿ ವಂಶಾಭಿವೃದ್ಧಿಗೆ, ಹಾಗೂ ಆಸ್ತಿ ಉತ್ತರಾಧಿಕಾರಕ್ಕೆ ಅವಶ್ಯವಾದ ಸಂತಾನೋತ್ಪತ್ತಿಯ ಜವಾಬ್ದಾರಿ ಹೊರಲು ಸ್ವಜಾತಿ-ಸ್ವವರ್ಗದ ಹೆಣ್ಣನ್ನು ವರಿಸಿ, ಮನೆಯಲ್ಲಿಟ್ಟುಕೊಂಡು, ಆಕೆ ಬದುಕನ್ನೂ ನಶ್ವರಗೊಳಿಸಿ ಜೀವನ ನಿರ್ವಹಣೆಗಾಗಿ ತಮ್ಮನ್ನಾಶ್ರಯಿಸಿರುವ ಕಾರ್ಮಿಕ ವರ್ಗದ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯಗಳನ್ನೆಸಗುತ್ತಾ ಬಂದಿರುವ ಮಂದಿ ನಮ್ಮಲ್ಲಿಲ್ಲವೇ? ಇವರಲ್ಲನೇಕರು ದೇಶದ ವಿವಿಧ ಭಾಗಗಳಲ್ಲಿ ಧನ ಬಲದಿಂದ ರಾಜಕೀಯ ಪ್ರವೇಶ ಮಾಡಿದ್ದಾರೆ.

ಇಂಥವರಲ್ಲಿ ಕೆಲವರು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮಂತ್ರಿಗಳೂ ಆಗಿದ್ದಾರೆ. ದುರಂತವೆಂದರೆ ಮಹಿಳೆಯರ ಹಕ್ಕು ರಕ್ಷಣೆಗಾಗಿ ರೂಪಿತವಾಗಿರುವ ಕಾನೂನುಗಳ ರಚನೆಯ ಪ್ರಕ್ರಿಯೆಯಲ್ಲೂ ಇವರು ಭಾಗಿಗಳಾಗಿದ್ದಾರೆ. ಇಂಥ ಅನೇಕ ಆಘಾತಕಾರಿ ಸಂಗತಿಗಳು ಸಾರ್ವಜನಿಕವಾಗಿ ಬಹಿರಂಗವಾಗಿದ್ದರೂ ಮತದಾರರು ನಿರ್ಲಕ್ಷ್ಯ ಧೋರಣೆ ತಳೆದಿರುವುದು ಈ ಸಾಮಾಜಿಕ ವ್ಯವಸ್ಥೆಯ ದ್ವಂದ್ವ ನಿಲುವುಗಳಿಗೆ ಸಾಕ್ಷಿಯಾಗಿದೆ.

ವಿವಾಹ ಎನ್ನುವ ಸಂಸ್ಥೆಯೊಳಗೆ ಏರ್ಪಡುವ ಎಲ್ಲ ಸಂಬಂಧಗಳೂ ಖಾಯಂ ಸ್ವರೂಪದ್ದಾಗಿರಬೇಕೆಂದು ಹೇಳಲು ಸಾಧ್ಯವೇ ಇಲ್ಲ. ನಾನಾ ಕಾರಣಗಳಿಗೆ ಈ ಸಂಬಂಧದೊಳಗೆ ಏರುಪೇರುಗಳು ಉಂಟಾದಾಗ ಅಸಹನೀಯ ಸಾಂಗತ್ಯಕ್ಕಿಂತ ಬೇರ್ಪಡೆಯಾಗುವುದೇ ಸೂಕ್ತ ಎನ್ನುವುದರಲ್ಲಿ ಸಂದೇಹವೇ ಇಲ್ಲ. ವಿವಾಹ ಇಬ್ಬರು ಸಂಗಾತಿಗಳ ಪಾಲಿಗೂ ಸಂಕೋಲೆಯಾಗಬಾರದು ಎನ್ನುವುದು ನಿಜ.

ಆದರೆ ಅನೇಕ ಪ್ರಕರಣಗಳಲ್ಲಿ ಅದು ಅಸಮಾನ ಸಂಬಂಧಗಳನ್ನು ಪೋಷಿಸುವ ಹಾಗೂ ಪುರುಷ ದೌರ್ಜನ್ಯ ಸಹಿಸಿಕೊಂಡು ಬದುಕಬೇಕಾದ ಸ್ಥಿತಿಗೆ ಹೆಣ್ಣನ್ನು ತಳ್ಳುವ ಒಂದು ಸಾಧನವಾಗಿದೆ. ವಿವಾಹವನ್ನು ಕಾನೂನಿನ ವ್ಯಾಪ್ತಿಗೆ ತಂದ ಮೇಲೆ ಅದರ ಉಲ್ಲಂಘನೆಯಾದಾಗ ವ್ಯಕ್ತಿ ಯಾರೇ ಆಗಿರಲಿ ಅವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂಥ ಮನಸ್ಸು ಸಂಬಂಧಿಸಿದವರಿಗೆ ಇರಬೇಕು. ಹಾಗಾದಾಗ ಸಮಾಜಕ್ಕೆ ಒಂದು ಸ್ಪಷ್ಟ ಸಂದೇಶ ಮುಟ್ಟುತ್ತದೆ. ಆದರೆ ಈಗ ಆಗಿರುವುದೇನೆಂದರೆ ಕಾನೂನು ಪಾಡಿಗೆ ಕಾನೂನು, ಅದನ್ನು ಅಲಕ್ಷಿಸಲು, ತಿರುಚಲು ಸಾಧ್ಯವಿದೆ ಎಂಬ ಸಂದೇಶ ಜನರಿಗೆ ತಲುಪುತ್ತಿದೆ.

-ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT