ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ನಂತರ ಕಾಂಗ್ರೆಸ್‌ ಬದಲಾದೀತೇ?

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಕೊನೆ­ಗೊಂಡ ಬಳಿಕ ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್‌ ಮತ್ತೆ ಹಿಂದಿನಂತೆಯೇ ತಲೆ ಎತ್ತಿ ನಿಂತೀತೇ? ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಡೆ­ಯು­ತ್ತಿರುವ ಚುನಾವಣಾ ಪ್ರಚಾರವನ್ನು ಕಂಡಾಗ ಪಕ್ಷ ತಳೆದ ಧೋರಣೆ ಮತ್ತು ಅದು ಅನು­ಸರಿಸುತ್ತಿರುವ ಪ್ರಚಾರ ವಿಧಾನದಲ್ಲಿ ಭಿನ್ನತೆ ಇರುವುದು ಕಾಣಿಸುತ್ತದೆ.

ಯುಪಿಎ ದಾಳಿ  ಗಾಂಧಿ ಕುಟುಂಬದ ನೇತೃತ್ವ­ದಲ್ಲಿ ನಡೆದರೆ, ಎನ್‌ಡಿಎ ಗಮನ ನರೇಂದ್ರ ಮೋದಿ ಅವರ ವರ್ಚಸ್ಸಿನ ಪ್ರಭಾವದತ್ತಲೇ ಕೇಂದ್ರೀಕೃತಗೊಂಡಿದೆ.  ಕಳೆದ ಹತ್ತು ವರ್ಷ-­ಗ­ಳಿಂದ ಪಕ್ಷವು ಅಧಿಕಾರದಲ್ಲಿ ಇರಲಿಲ್ಲ, ಹೀಗಾಗಿ ಬಿಜೆಪಿ­ಯಲ್ಲಿ ದೊಡ್ಡದಾಗಿ ಜನಸಮು­ದಾಯ­ವನ್ನು ಸೆಳೆಯುವಂತಹ ನಾಯಕನ ಕೊರತೆ ಎದು­ರಾಗಿತ್ತು ಎಂಬುದನ್ನು ಬಿಜೆಪಿ ಮೊದಲಿ­ನಿಂದಲೂ  ಹೇಳುತ್ತಲೇ ಬಂದಿತ್ತು.
ಆದರೆ, ಕಳೆದ ಹತ್ತು ವರ್ಷ­ಗಳಿಂದಲೂ ಪ್ರಮುಖ ಸ್ಥಾನಗಳಲ್ಲಿ ಇದ್ದ ಇತರ ನಾಯಕ­ರನ್ನು ದೊಡ್ಡದಾಗಿ ಬಿಂಬಿಸುವಲ್ಲಿ ವಿಫಲ­ವಾ­ದುದು ಎನ್‌ಡಿಎದ  ನಿರಾಶಾದಾಯಕ ಪರಿಸ್ಥಿತಿ ಎಂದೇ ಹೇಳಬೇಕು.

ನಾಯಕತ್ವ ವಿಚಾರವೇ ಕಾಂಗ್ರೆಸ್‌ನ ದೊಡ್ಡ ತಪ್ಪೂ ಹೌದು. ಕಾಂಗ್ರೆಸ್‌ನ ಅನಧಿಕೃತ ಪ್ರಧಾನಿ ಅಭ್ಯರ್ಥಿ ರಾಹುಲ್‌ ಗಾಂಧಿ (ಕಾಂಗ್ರೆಸ್‌ ಉಪಾ­ಧ್ಯಕ್ಷ ಸ್ಥಾನ ಹೊರತುಪಡಿಸಿ) ಅಥವಾ ಅವರ ಸಹೋದರಿ ಪ್ರಿಯಾಂಕಾ ವಾಧ್ರಾ ಇದುವರೆಗೆ ಯಾವುದೇ ಹೊಣೆಗಾ­ರಿಕೆಯ ಸ್ಥಾನ ಅಲಂಕರಿ­ಸಿಲ್ಲ. ಇದರಿಂದಾಗಿಯೇ ಸೋನಿಯಾ ಗಾಂಧಿ ಅವರೊಬ್ಬರಷ್ಟೇ ಸೋಲುತ್ತಿರುವ ರಣರಂಗ­ದಲ್ಲಿ  ಏಕಾಂಗಿಯಾಗಿ ಹೋರಾ­ಡುತ್ತಿರುವಂತೆ ಕಾಣಿಸುತ್ತಿದೆ.

ನಾನು ಇಲ್ಲಿ ‘ಸೋಲುತ್ತಿರುವ ರಣರಂಗ’ ಎಂಬ ಪದ ಬಳಸುವುದಕ್ಕೆ ಕಾರಣ ಇದೆ. ಸೋನಿಯಾ ಅವರ ಭಾಷಣಗಳ ಸಾರ ಕಂಡಾಗ ಅಲ್ಲಿ ಹತಾಶ ಭಾವನೆ ಕಾಣಿಸುತ್ತಿದೆ. ಕಾಂಗ್ರೆಸ್‌­ನಲ್ಲಿನ ಹತಾಶ ಭಾವನೆ ಎಷ್ಟು ತೀವ್ರವಾಗಿದೆ  ಎಂದರೆ, ಅದನ್ನು ‘ಬ್ರಿಟಿಷ್ ರಾಜ್‌’ಗೆ ಹೋಲಿಸುವಷ್ಟರ ಮಟ್ಟಿಗೆ ಇದೆ.

ಕಾಂಗ್ರೆಸ್‌ ಪಕ್ಷದ ನಕಾರಾತ್ಮಕ ಮತ್ತು ಸೂಕ್ಷ್ಮತೆಯನ್ನು ಕಳೆದುಕೊಂಡಂತಹ ಪ್ರಚಾರವು ಪಕ್ಷದ ಪ್ರೌಢ ಚಿಂತನೆಯನ್ನೇ ಪ್ರಶ್ನಿಸುವಂತೆ ಮಾಡು­ತ್ತದೆ. ಕಾಲಕಾಲಕ್ಕೆ ಚುನಾವಣೆ ನಡೆ­ಯು­ವುದು ಯಾವುದೇ ಪ್ರಜಾಪ್ರಭುತ್ವದ ಬೆನ್ನೆಲುಬು. ವಿರೋಧ ಪಕ್ಷಗಳನ್ನು ನಿಯ­ಮಿತ­ವಾಗಿ ಟೀಕಿಸು­ವುದು ಮತ್ತು ಅವರ ವಿರುದ್ಧ ವಾಗ್ದಾಳಿ ನಡೆಸುವುದು ಸಾಮಾನ್ಯವಾಗಿ ನಡೆದು­ಕೊಂಡು ಬಂದಿರುವ ರೂಢಿ.

ಪ್ರಸ್ತುತ ವಿಚಾರಗಳಿಗೆ ಸಂಬಂಧವೇ ಇಲ್ಲದ ವಿಷಯಗಳನ್ನು ಎತ್ತಿಕೊಂಡು ವಾಗ್ದಾಳಿ ನಡೆ­ಸು­ವುದು ಸೂಕ್ತವಲ್ಲ. ಭಾರತವು ಕಳೆದ ಹಲವಾರು ಶತಮಾನಗಳಿಂದ ಹಲವಾರು ಬಿಕ್ಕಟ್ಟುಗಳನ್ನು ಎದುರಿಸಿ ನಿಂತಿದೆ. ಅತ್ಯಂತ ಹಳೆಯ ಪಕ್ಷದ ನಾಯಕರು ಇತಿಹಾಸದ ನೆನಪುಗಳನ್ನು ಪುನರ್‌ಮನನ ಮಾಡಿಕೊಳ್ಳಲೇಬೇಕು.

‘ಭಾರತಕ್ಕೆ ಸ್ವಾತಂತ್ರ್ಯ ನೀಡಿದರೆ ದೇಶವು ಹಲವು ಚೂರುಗಳಾಗಿ ಒಡೆದು ದೇಶದಲ್ಲಿ ಅರಾಜಕತೆ ನೆಲೆಸಬಹುದು’ ಎಂದು  ಬ್ರಿಟನ್ನಿನ ಚಾಣಾಕ್ಷ ನೇತಾರ ಎಂದೇ ಬಣ್ಣಿಸಲಾದ ವಿನ್‌­ಸ್ಟನ್‌ ಚರ್ಚಿಲ್‌ ಎಚ್ಚರಿಸಿದ್ದರು. ಅವರ ಮಾತು ಸಂಪೂರ್ಣ ಸುಳ್ಳು ಎಂಬುದನ್ನು ಇತಿ­ಹಾಸ ಸಾಬೀತು ಮಾಡಿದೆ. ಭಾರತ ಇಂದಿಗೂ ಒಂದು ದೇಶವಾಗಿ ಮತ್ತು ಒಂದು ಮಹಾನ್‌ ಪ್ರಜಾ­ಪ್ರಭುತ್ವ ವ್ಯವಸ್ಥೆಯಾಗಿ ಮುಂದುವರಿದಿದೆ. ಇಲ್ಲಿ ಕಾಂಗ್ರೆಸ್‌ ಮತ್ತು ಅದರ ನಾಯಕರಿಗೆ ಹಲವಾರು ಪಾಠಗಳಿವೆ.

ಕಾಂಗ್ರೆಸ್‌, ಅದರ ಮಿತ್ರ ಪಕ್ಷಗಳು ಸತತ ಎರಡು ಅವಧಿಗೆ ಅಧಿಕಾರ ನಡೆಸಿದವು. ಸಹ­ಜ­ವಾಗಿಯೇ ಆಡಳಿತ ವಿರೋಧಿ ಅಲೆ, ನಿಷ್ಕ್ರಿಯತೆ, ಉದಾಸೀನ ಧೋರಣೆಯಂತಹ ಆರೋಪ­ಗ­ಳಿಂದ ‘ಯುಪಿಎ ಮೈತ್ರಿ­ಕೂಟ–2’ ಜರ್ಜರಿತ­ವಾಗಿದೆ. ಈ ಒಕ್ಕೂಟ ಸೋಲುವ ಹಾದಿ­ಯಲ್ಲಿದೆ ಎಂದು ಹೇಳುತ್ತಿರುವುದೂ ಇದೇ ಕಾರಣಕ್ಕೆ.

ನನ್ನ ಮನಸ್ಸನ್ನು ಈಗಲೂ ಕಾಡುತ್ತಿರುವ ಸಂಗತಿ ಏನೆಂದರೆ ಈ ಅತ್ಯಂತ ಹಳೆಯ ರಾಜಕೀಯ ಪಕ್ಷದಲ್ಲಿ ಭಟ್ಟಂಗಿತನದ ಮಟ್ಟ ಇನ್ನೂ ಕಡಿಮೆ­ಯಾ­ಗಿಲ್ಲದಿರುವುದು. ಇದರಿಂದಾ­ಗಿಯೇ ಈ ಪಕ್ಷದಲ್ಲಿ ಇದುವರೆಗೆ ಯಾವುದೇ ವಿಶ್ವಾಸಾರ್ಹ  ನಾಯಕನನ್ನು ಬಿಂಬಿಸು­ವುದು ಸಾಧ್ಯವಾಗಿಲ್ಲ.

ಪಕ್ಷದ ವಿರುದ್ಧ ಮೂಡುವ ಅಭಿಪ್ರಾ­ಯ­ಗಳನ್ನು ದಮನಗೊಳಿಸುವ ನಿಟ್ಟಿನಲ್ಲಿ ನಕಲಿ ಬುದ್ಧಿಜೀವಿಗಳ ಗುಂಪು ಪಕ್ಷವನ್ನು ತನ್ನ ಕೈವಶ ಮಾಡಿ­ಕೊಂಡಿದೆಯೇ? ಎಂಬ ವಿಚಾ­ರವೂ ನನ್ನಲ್ಲಿ ಮೂಡುತ್ತದೆ. ಹತ್ತು ವರ್ಷಗಳಿಂದ ಪ್ರಧಾನಿ ಸ್ಥಾನದಲ್ಲಿದ್ದ ಮನಮೋಹನ್‌ ಸಿಂಗ್‌ ಅವರನ್ನು ಸಂಪೂರ್ಣವಾಗಿ ಕಡೆಗಣಿಸ­ಲಾಗಿದೆ.

ವಂಶಾಡಳಿತದ ಜತೆಗೆ ಪ್ರಧಾನಿ ಸ್ಥಾನದ ಅಧಿಕಾರ ಸಮೀಕರಣ ಹಾಗೂ  ಪ್ರಧಾನಿ ಸಿಂಗ್‌ ಅವರ ಅಧಿಕಾರ ಅವಧಿಯಲ್ಲಿನ ಸಾಧನೆಗಳು ಹಲವಾರು ಪ್ರಶ್ನೆಗಳನ್ನು ಎತ್ತುವಂತೆ ಮಾಡಿವೆ. ಸಂಜಯ್‌ ಬಾರು ಅವರ ಹೊಸ ಪುಸ್ತಕ ‘ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಮತ್ತು ಅದರಲ್ಲಿ ಉಲ್ಲೇಖಿಸಿದ ಸಂಗತಿಗಳಿಗೆ ಹಲವಾರು ರಾಜಕೀಯ ಬಣ್ಣಗಳೂ ಸೇರಿಕೊಂಡಿವೆ.

ಸಂಜಯ ಬಾರು ಅವರು ‘ಯುಪಿಎ –1’ರ ಅವಧಿಯಲ್ಲಿ ಪ್ರಧಾನಿ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದವರು. ಮೊದಲ ಅವಧಿ­ಯಲ್ಲಿ ಪ್ರಧಾನಿ ಅವರು ಪರಮಾಣು ಒಪ್ಪಂದ­ದಂತಹ ವಿದೇಶಾಂಗ ನೀತಿ ಸಹಿತ ಹಲವು ವಿಚಾರಗಳಲ್ಲಿ ತಮ್ಮ ಛಾಪನ್ನು ಒತ್ತಿ ಉತ್ತಮ ಆಡಳಿತವನ್ನೇ ನೀಡಿದ್ದರು. ಯುಪಿಎ ಎರಡನೇ ಅವಧಿಗೆ ಅಧಿಕಾರಕ್ಕೆ ಬರುವುದಕ್ಕೆ ಕಾರಣವೂ ಅವರೇ ಎಂದೂ ಹೇಳಬೇಕಾಗುತ್ತದೆ.
ಎರಡನೇ ಅವಧಿಯಲ್ಲಿ ಸೋನಿಯಾ ಗಾಂಧಿ ಅವ­ರೊಂದಿಗೆ ಮಾಡಿಕೊಂಡ ರಾಜಿಗಳು ಹಾಗೂ ತಮ್ಮ ಸಹೋದ್ಯೋಗಿಗಳ ನಿಯಂತ್ರಣ ಕಳೆದು­ಕೊಂಡಿದ್ದರಿಂದಲೇ ಅವರ ಘನತೆ ವ್ಯವಸ್ಥಿ­ತವಾಗಿ ಕುಸಿಯುತ್ತ ಹೋಯಿತು. ಇದ­ರಿಂದಾಗಿ ಅವರು ನಿಶ್ಶಬ್ದವಾಗಿ ನಿರ್ಗಮಿಸುವ ಪ್ರಮೇ­ಯವೂ ಒದಗಿ­ಬರುವ ಲಕ್ಷಣಗಳು  ಕಾಣಿಸಿವೆ.

ನಾಯಕನೊಬ್ಬನನ್ನು ಅಧಿಕವಾಗಿ ಬಿಂಬಿಸಿದರೆ ತೊಡಕಾಗಬಹುದು ಎಂಬ ಭಯವೇ ಪಕ್ಷದಲ್ಲಿ ಯಾವೊಬ್ಬ ವಿಶ್ವಾಸಾರ್ಹ ನಾಯಕನೂ ಮಿಂಚದಂತೆ ಮಾಡಿಬಿಟ್ಟಿರಬೇಕು ಎಂದೆನಿಸು­ತ್ತದೆ. ಈ ಅಪಾಯಕಾರಿ ವಿದ್ಯಮಾನ ಕಾಂಗ್ರೆಸ್‌ ಪಕ್ಷವನ್ನೇ ಅಂತಿಮವಾಗಿ ಕೆಳಗೆ ತಳ್ಳಬಹುದು ಮತ್ತು ಪಕ್ಷದ ಅವನತಿಯ ಆರಂಭಕ್ಕೆ ಸಾಕ್ಷಿ­ಯಾಗುವಂತೆ ಮಾಡಬಹುದು.

ಬಿಜೆಪಿ ಬಹಳ ಸಕಾರಾತ್ಮಕ ಧೋರಣೆಯತ್ತ ತನ್ನ ಗಮನ ನೆಟ್ಟಿದೆ. ಅದರ ಕಾರ್ಯತಂತ್ರ ಫಲ ನೀಡುವ ಲಕ್ಷಣಗಳೂ ಕಾಣಿಸುತ್ತವೆ. ಪಕ್ಷದ ನಾಯಕರ ರಾಜಕೀಯ ಭಾಷಣಗಳನ್ನು ಅತ್ಯಂತ ಜಾಗರೂಕತೆಯಿಂದ ಸಿದ್ಧಪಡಿಸ­ಲಾಗಿರುತ್ತದೆ. ಬಡತನ, ಅಭಿವೃದ್ಧಿ, ನಿರುದ್ಯೋಗ, ಪ್ರಗತಿ, ಭ್ರಷ್ಟಾಚಾರ, ಆಡಳಿತದಂತಹ ವಿಚಾರಗಳೇ ಪಕ್ಷದ ಪ್ರಮುಖ ಭಾಷಣದ ವಿಚಾರಗಳಾಗಿವೆ.

ಅಪರೂಪಕ್ಕೆ ಎಂಬಂತೆ, ಸೋನಿಯಾ  ಕುಟುಂಬ ಮತ್ತು ಅದರ ಸುತ್ತ ನೆರೆದಿರುವ ಭಟ್ಟಂಗಿ­ಗಳ ಕೂಟವನ್ನು ಚುಚ್ಚುವ ಪರಿಪಾಠ­ವನ್ನೂ   ಅಳವಡಿಸಿ­ಕೊಳ್ಳಲಾಗಿದೆ. ಪಕ್ಷದ ಪ್ರಧಾನಿ ಅಭ್ಯರ್ಥಿ ತಳಮಟ್ಟದಿಂದ ಮೇಲೆ ಬಂದ­ವರು ಮತ್ತು ಪಕ್ಷದಲ್ಲಿ ತಮ್ಮ ಸಾಧನೆಯನ್ನು ಒರೆಗೆ ಹಚ್ಚಿದವರು. ಅವರ ಚುನಾವಣಾ ಭಾಷಣಗಳು ಸುಧಾರಿತ, ಎಲ್ಲರಿಗೂ ತಟ್ಟು­ವಂತಹ, ತಾತ್ವಿಕವಾ­ದವುಗಳು ಹಾಗೂ ಹೆಚ್ಚು ಭಾವನಾತ್ಮಕ ಅಲ್ಲದವು. ಅವರು ತಮ್ಮ ಭಾಷಣಗಳಲ್ಲಿ ಅತ್ಯಂತ ಮೇಲ್ಮಟ್ಟದ ಪ್ರೌಢ­ತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಚುನಾವಣೆಯ ನಂತರ ಕಾಂಗ್ರೆಸ್‌ ಪಕ್ಷಕ್ಕೆ ಆತ್ಮಾವಲೋಕನ ಮಾಡಿಕೊಳ್ಳು­ವುದಕ್ಕೆ ಬಹಳ ಸಮಯ ದೊರಕಲಿದೆ. ಆ ಪಕ್ಷದಲ್ಲಿ ಹಲವಾರು ಬುದ್ಧಿವಂತ ವ್ಯಕ್ತಿಗಳಿದ್ದಾರೆ, ಆದರೆ, ಅವರು ಎದ್ದು ನಿಲ್ಲುತ್ತಾರೆಯೇ ಮತ್ತು ಅವರ ಮಾತಿಗೆ ಬೆಲೆ ದೊರಕುತ್ತದೆಯೇ? ಎನ್ನುವುದನ್ನು ಕಾದು ನೋಡಬೇಕು.

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಸಾಧನೆ ಸ್ವಾತಂತ್ರ್ಯಾ­ನಂತರದ ಅತ್ಯಂತ ಕೆಟ್ಟ ಸಾಧನೆ­ಯಾಗುವ ನಿರೀಕ್ಷೆ ಇದೆ. ಅದು ಪಕ್ಷದ ಬುನಾದಿಯನ್ನೇ ಅಲುಗಾಡಿಸುವ ಸಾಧ್ಯತೆಯೂ ಇದೆ. ವಂಶಾಡಳಿತಕ್ಕೆ ಜೋತು ಬಿದ್ದಿರುವ ಸೋನಿಯಾ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಪಕ್ಷವು ಈ ಸಂಗತಿಯನ್ನು ಇನ್ನಾ­ದರೂ ಪರಿಗಣಿಸಿ ಬದಲಾವಣೆಗೆ ನಾಂದಿ ಹಾಡಬಹುದೇ?

ನಿಮ್ಮ ಅನಿಸಕೆ ತಿಳಿಸಿ: editpagefeedback@prajavani.co

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT