ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಡ್ಡೀ ದೋಸ್ತು ಕಣೋ ಕುಚುಕು

ಅಕ್ಷರ ಗಾತ್ರ

ಕುಚುಕು, ಕುಚುಕು, ಕುಚುಕು... ನಾವು ಚೆಡ್ಡೀ ದೋಸ್ತು ಕಣೋ ಕುಚುಕು... ಎಂದು ಸಂತೋಷಾತಿರೇಕದಿಂದ ಹಾಡುತ್ತಾ ಮಾರಸ್ವಾಮಿಗಳು ಮೈಮರೆತಿದ್ದರು.

`ಸಾರ್, ಮೊದಲೇ ಒಂದು ಸಾರಿ ಚೆಡ್ಡಿಗಳ ಸಹವಾಸ ಮಾಡಿ, ವಚನಭ್ರಷ್ಟ ಎಂಬ ಬಿರುದು ತಕೊಂಡು, ಮೂರಾಬಟ್ಟೆ ಆಗೋಗಿಬಿಟ್ರಿ. ಈಗ ಮತ್ತೆ ಚೆಡ್ಡೀ ದೋಸ್ತು ಕುಚುಕು ಎಂದು ಆಲಿಂಗನ ಮಾಡಿಕೊಂಡಿದ್ದೀರಿ. ಇದೇನ್ಸಾ ನಿಮ್ಮ ಸಂಬಂಧ, ನಾಯಿ ಹಸಿದಿತ್ತು, ಊಟ ಹಳಸಿತ್ತು ಎನ್ನುವಂತಾಗಿದೆಯಲ್ಲಾ' ಎಂದು ಪೆಕರ ಯಾವುದೇ ಎಗ್ಗಿಲ್ಲದೆ ಮಾರಸ್ವಾಮಿಗಳನ್ನು ಪ್ರಶ್ನಿಸಿದ.

`ನೋಡಿ ಸ್ವಾಮಿ ಇಂಥ ಪ್ರಶ್ನೆ ಕೇಳಿದ್ರೆ ನನಗೆ ರೇಗುತ್ತೆ. ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ. ಯಾರೂ ಮಿತ್ರರಲ್ಲ. ಆದರೆ ಪತ್ರಕರ್ತರು ಸದಾ ಶತ್ರುಗಳು. ನಾವೆಲ್ಲಿ ಮೈತ್ರಿ ಮಾಡಿಕೊಂಡಿದ್ದೀವಿ? ಅದೆಲ್ಲಾ ನಿಮ್ಮ ಸೃಷ್ಟಿ. ಮಂಡ್ಯ, ರಾಮನಗರದಲ್ಲಿ ಬಿಜೆಪಿಯವರು ಕ್ಯಾಂಡಿಟೇಟ್ ಹಾಕಿಲ್ಲ. ಅವರ ಬಳಿ ಅಭ್ಯರ್ಥಿಗಳಿಲ್ಲ. ಕೆಜೆಪಿಯವರಿಗೂ ಕ್ಯಾಂಡಿಡೇಟ್ ಇಲ್ಲ. ನಾನೇನ್ ಮಾಡೋದು ಹೇಳಿ? ಹೋಗಲಿ ನಾವಿಬ್ಬರೂ ಒಂದಾದರೆ ಕಾಂಗ್ರೆಸ್ಸಿಗರು ಏಕೆ ಸ್ವಾಮಿ ಆಕಾಶ-ಭೂಮಿ ಒಂದಾಗೋ ಹಾಗೆ ವದರ್ತಾ ಇದಾರೆ ಅರ್ಥ ಆಗ್ತಾಇಲ್ಲ' ಎಂದು ಮಾರಸ್ವಾಮಿಗಳು ಏನೂ ತಿಳಿಯದವರಂತೆ ಹೇಳಿ ಸುಮ್ಮನಾದರು.

`ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದ ಭ್ರಷ್ಟಾಚಾರ ಹಗರಣಗಳನ್ನು ಜನರ ಮುಂದೆ ಹೇಳಿ, ಚುನಾವಣೆ ಸಮಯದಲ್ಲಿ ವೋಟು ಕೇಳಿದಿರಿ. ಈಗ ಅವರನ್ನೇ ಜೊತೆಯಲ್ಲಿಟ್ಟುಕೊಂಡು ಅದೇ ಜನರ ಬಳಿ ಹೋಗಿ ವೋಟು ಕೇಳ್ತಾ ಇದೀರಿ. ಕಾಂಗ್ರೆಸ್‌ನವರು ಹೊಟ್ಟೆ ಹುಣ್ಣಾಗುವಂತೆ ನಗಾಡ್ತಾ ಇದಾರಲ್ಲಾ ಸಾರ್' ಎಂದು ಪೆಕರ ಪ್ರಶ್ನಿಸಿಯೇ ಬಿಟ್ಟ.

`ಸ್ವಲ್ಪ ಗಮನಿಸಿ ಪೆಕರ ಅವರೇ, ಮಂಡ್ಯ, ರಾಮನಗರದಲ್ಲಿ ಜನ ಕಾಂಗ್ರೆಸ್‌ನವರನ್ನು ನೋಡಿ ನಗ್ತಾ ಇದಾರೆ. ರಾಮನಗರದಲ್ಲಿ ಆಜನ್ಮಶತ್ರು ತೇಜಸ್ವಿನಿ ಮನೆ ಮುಂದೆ ನಿಂತು ಅಂಗಲಾಚುತ್ತಿರುವ ಡಿಕು ಶಿಮಾರ ಅವರ ಫಜೀತಿ ನೋಡಿದ್ರಾ? ಸಚಿವನಾಗುವ ಆತುರಾಣಂ ನ ಲಜ್ಜಾ, ನ ಭಯಂ ಅನ್ನೊವಂತಾಗಿದೆ. ಯೋಗೇಶ್ವರ್‌ಗೆ ಟಿಕೆಟ್ ತಪ್ಪಿಸಿ, ಕಾಂಗ್ರೆಸ್ ಬಿಡುವಂತೆ ಮಾಡಿ, ಬಿಜೆಪಿ ಸರ್ಕಾರದಲ್ಲಿ ಸಚಿವನಾಗಲೂ ಬಿಡದೆ ಸೇಡು ತೀರಿಸಿಕೊಂಡಿದ್ದ ನಮ್ಮ ಶಿಮಾರ, ಈಗ ಅವರ ಕಾಲಿಡಿಯುತ್ತಿದ್ದಾರೆ. ಮಂಡ್ಯದಲ್ಲಿ ನಾನೊಲ್ಲೆ, ನಾನೊಲ್ಲೆ ಎಂದ್ರೂ ಬಿಡದೆ ಪಾಪ ಆ ನಟಿಯನ್ನು ಗೋಳು ಹುಯ್ದುಕೊಳ್ಳುತ್ತಿದ್ದಾರೆ. ಅಯ್ಯನವರ ದೈನೇಸಿ ಸ್ಥಿತಿ ನೋಡಿ ಜನ ನಗ್ತಾ ಇದ್ದಾರೆ ಕಂಡ್ರಿ. ಸ್ವಲ್ಪ ಆಕಡೆನೂ ದೇಖೋ...' ಎಂದು ಮಾರಸ್ವಾಮಿಗಳು ಚುನಾವಣಾ ವಿಶ್ಲೇಷಣೆ ಆರಂಭಿಸಿದರು.

`ನಿಮ್ದೇನು ಕಮ್ಮೀನಾ ಸಾರ್. ಕೋಮುವಾದಿಗಳ ಜೊತೆ ಸ್ನೇಹ ಮಾಡ್ಬೇಡ ಎಂದು ದೊಡ್ಡಗೌಡರು ಹೇಳ್ತಾನೇ ಇದಾರೆ. ನೀವು ದೋಸ್ತಿ ಮಾಡ್ತಾನೇ ಇದೀರಿ. ನಿಮಗೆ ಆಶೀರ್ವಾದ ಮಾಡ್ತಾನೇ ಇದಾರೆ. ಅವರೂ ಯೋಗೇಶ್ವರ ಅವರಿಗೆ ರಹಸ್ಯವಾಗಿ ಫೋನ್ ಮಾಡಿ ಬಾಡೂಟಕ್ಕೆ ಆಹ್ವಾನಿಸಿದರಂತೆ. ಮುಂದೆ ಥರ್ಡ್‌ಫ್ರಂಟ್ ಗ್ಯಾರಂಟಿ. ನಾನೇ ಪಿಎಮ್ಮಾಗೋದೂ ಗ್ಯಾರಂಟಿ. ಕೇರಳ ಜ್ಯೋತಿಷಿ ಮಾತು ನಿಜವಾಗೋದು ಗ್ಯಾರಂಟಿ ಎಂದು ದೊಡ್ಡಗೌಡರು ಗ್ಯಾರಂಟಿಯ ಮೇಲೆ ಗ್ಯಾರಂಟಿ ಕೊಡ್ತಾ ಇದಾರಂತಲ್ಲ. ಹೀಗಾದ್ರೆ ಮೋದಿ ಗತಿ ಏನು? ದೋಸ್ತಿ ಗತಿ ಏನು? ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಯಾರು ಯಾರ ಕೈ ಹಿಡಿತೀರೋ ಏನೂ ಗೊತ್ತಾಗದೆ, ತಲೆ ಕೆಟ್ಟು ಗೊಬ್ಬರ ಆಗಿ ಕೂತಿದೆಯಲ್ಲಾ ಸಾರ್' ಎಂದು ಪೆಕರ ಪೇಚಾಡಿದ.

`ಸಾರ್, ಇನ್ನೊಂದ್ ಕೊಶ್ಚನ್. ಬೇಜಾರ್ ಮಾಡಿಕೋಬೇಡಿ. ನಿಮಗಿಂತ ನಿಮ್ಮ ಶ್ರೀಮತಿಯವರೇ ರಿಚ್ಚು. ಅನಿತಕ್ಕನ ಆಸ್ತಿ ಮೂರೇ ತಿಂಗಳಲ್ಲಿ 5 ಕೋಟಿ ಹೆಚ್ಚಳವಾಗಿದೆಯಲ್ಲಾ ಹೇಗೆ ಸಾರ್? ಅಭ್ಯರ್ಥಿಗಳು ಗೆದ್ದ ಮೇಲೆ ದುಡ್ಡು ಡಬಲ್ ಮಾಡೋದನ್ನು ನೋಡಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಸೋತವರೂ ದುಡ್ಡು ಮಾಡೋದನ್ನು ಈಗ್ಲೇ ನೋಡ್ತಾ ಇರೋದು' ಪೆಕರ ಅಳುಕಿಲ್ಲದೆ ಮನಸ್ಸಿನಲ್ಲಿದ್ದುದನ್ನು ಯಾವುದೇ ಫಿಲ್ಟರ್ ಇಲ್ಲದೆ ಹೇಳಿಬಿಟ್ಟ.

(ಚುನಾವಣೆ ಸಮಯವಲ್ಲದೆ ಬೇರೆ ಯಾವುದೇ ಸಮಯದಲ್ಲಿ ಯಾರಾದರೂ ಈ ರೀತಿ ಪ್ರಶ್ನೆ ಕೇಳಿದ್ದರೆ, ಅವರ ಮೂವತ್ತೆರಡು ಹಲ್ಲುಗಳೂ ಉದುರಿ ಹೋಗುತ್ತಿದ್ದವು.)

ಬಾರ್ನ್ ಪೊಲಿಟೀಷಿಯನ್ ಆದ ಮಾರಸ್ವಾಮಿಗಳಿಗೆ ಕೋಪ ಬರಲೇ ಇಲ್ಲ. ಅಥವಾ ಕೋಪ ಬಂದರೂ ಅದನ್ನು ತೋರಿಸಿ ಕೊಳ್ಳಲಿಲ್ಲ. `ನಿಮಗೆ ಕಾಮಾಲೆಕಣ್ಣು ಕಂಡ್ರಿ. ಬರೀ ನಮ್ಮದನ್ನೇ ನೋಡ್ತೀರಿ. ಆ ಕಡೆ ಸ್ವಲ್ಪ ನೋಡಿ. ಕಳಂಕಿತರಿಗೆ ಟಿಕೆಟ್ ಕೊಡಲ್ಲ ಅಂತ ಅಯ್ಯ ಅವರು ಭಾಷಣ ಮಾಡಿದ್ದೇ ಮಾಡಿದ್ದು. ಅನಿತಕ್ಕನ ಎದುರಾಳಿಯ ಮೇಲೆ 17 ಕೇಸುಗಳಿವೆ. ಎರಡು ಕ್ರ್ರಿಮಿನಲ್ ಕೇಸುಗಳಿವೆ. ಹೊಡೆದಾಟದ ಒಂದು ಕೇಸ್ ಇದೆ. ಗ್ರಾನೈಟ್, ಭೂವ್ಯವಹಾರದಲ್ಲೇ 30 ಕೋಟಿ ಇದೆ. ಅಂತಹವರ ವಿರುದ್ದ  ನಾವು ಹೋರಾಡ ಬೇಕಲ್ಲಾ ಸ್ವಾಮಿ. ಗೊತ್ತಾಯ್ತ' ಎಂದು ಮಾರಸ್ವಾಮಿಗಳು ಸಾವಧಾನದಿಂದಲೇ ಉತ್ತರಿಸಿದರು.

ಇತ್ತ ಮಂಡ್ಯದ ಜನ ರಮ್ಯಾ, ವ್ಹಾಟೆಸೂಪರ್‌ಯಾ ಎಂದು ಖುಷಿಯಿಂದ ಸಂಭ್ರಮಿಸುತ್ತಿದ್ದಾಗಲೇ `ಬಿಲ್‌ಖುಲ್ ನಾನು ಸ್ಪರ್ಧಿಸಲ್ಲ' ಎಂದು ಸ್ಟಾರ್ ಹೋಟೆಲ್‌ನಲ್ಲಿ ಕದ ಹಾಕಿಕೊಂಡು ಕುಳಿತುಕೊಂಡರಂತೆ. ಗಾಬರಿ ಬಿದ್ದ ಕಾಂಗ್ರೆಸ್ ಪಟಾಲಂ ಶತಾಯಗತಾಯ ಹೆಣಗಾಡಿ, ಮನವೊಲಿಸಿದ ನಂತರ, `ಮಂಡ್ಯದಲ್ಲಿ ಮನೆ ಮಾಡಲ್ಲ' ಎಂದು ಕಣಿ ಆರಂಭಿಸಿದರಂತೆ. ನಿತ್ಯ ರಮ್ಯಾ ದರ್ಶನಕ್ಕೆ ಹಪಹಪಿಸುತ್ತಿದ್ದ ಮತದಾರ ಬಾಂಧವರು ಎಂಥಾ ಭಾಗ್ಯ ಮಿಸ್ ಆಯ್ತು ಎಂದು ಕಣ್ಣೀರಾಕುತ್ತಾ ಹಂಬರೀಷಣ್ಣ ಅವರ ಮನೆ ಮುಂದೆ ನಿಂತು ಅಹವಾಲು ಹೇಳಿಕೊಂಡರಂತೆ. `ಅದಕ್ಯಾಕೆ ತಲೆಕೆಡಿಸಿಕೊಂಡೀರಿ, ಮನೆ ಸೆಟ್ ಒಂದು ಹಾಕ್ಸಿಬಿಡೋಣ ಬುಡ್ಲಾ' ಎಂದು ಹಂಬರೀಷಣ್ಣ ಥೇಟ್ ಸಿನಿಮಾ ಶೈಲಿಯಲ್ಲಿ ಹೇಳಿ ಸಮಾಧಾನಿಸಿ ಕಳುಹಿಸಿದರಂತೆ.

ಇದೇ ಸಮಯದಲ್ಲಿ ಶ್ರೀರಂಗಪಟ್ಟಣದಲ್ಲಿ ಮಾಜಿ ಶಾಸಕರೊಬ್ಬರು, ನಟಿಯ ಜಾತಿ ಯಾವುದು? ಕುಲ ಯಾವುದು? ಫಾದರ್ ಯಾರು? ಎಂದು ಅಮಲು ಹತ್ತಿದವರಂತೆ ಮಾತನಾಡಿ ಬಾಂಬ್ ಸಿಡಿಸಿದರು.

`ಏನ್ಸಾರ್ ಇದು ತಪ್ಪಲ್ವ? ನಿಮ್ಮ ಪಾರ್ಟಿಯವರು ನಾಲಿಗೆ ಬಿಗಿ ಹಿಡಿದು ಮಾತಾಡೋದ್ ಒಳ್ಳೆಯದಲ್ವೆ? ಪಕ್ಕದಲ್ಲೇ ಕುಳಿತಿದ್ರಿ ನೀವಾದ್ರೂ ಹೇಳಬಾರ್ದೆ' ಎಂದು ಪೆಕರ, ಮಾರಸ್ವಾಮಿಗಳ ಪಕ್ಕದಲ್ಲೇ ಆಸೀನರಾಗಿದ್ದ ರಾಯಸ್ವಾಮಿಗಳನ್ನು ಪ್ರಶ್ನಿಸಿದ.
ರಾಯಸ್ವಾಮಿಗಳಿಗೆ ರೇಗಿತು. `ಇದೇನ್ರಿ ಹಿಂಗ್ ಕೇಳ್ತೀರಾ. ವಾಟ್ ಈಸ್ ಯುವರ್ ಫಾದರ್ ನೇಮ್ ಅಂತ ಕೇಳೋದೇ ತಪ್ಪಾ? ಕಾಂಗಿಗಳು ಹೀಗೆಲ್ಲಾ ಮಾತನಾಡಿದ್ರೆ ಸುಮ್ಮನಿರ್ತೀರಿ, ನಾವ್ ಕೇಳಿದ್ರೆ ತಪ್ಪು ಅಂತೀರಾ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್, ಮೀನಾಕ್ಷಿಗೆ ಹಂಡ್ರೆಡ್ ಪರ್ಸೆಂಟ್ ಸೆಕ್ಸಿ ಲೇಡಿ ಅಂತ ಕರೀಲಿಲ್ವೇನ್ರಿ?'

ರಾಯಸ್ವಾಮಿಗಳು ಪೆಕರನನ್ನೇ ಪ್ರಶ್ನಿಸಿದರು.

`ಅದಕ್ಕೆ ಅಲ್ವೆ ಜನ ಅವರಿಗೆ ಉಗಿದು ಉಪ್ಪಿನಕಾಯಿ ಹಾಕಿದ್ದು' ಎಂದು ಪೆಕರ ಹೇಳಿದ.

`ಬರಾಕ್ ಒಬಾಮ ಕಮಲಾ ಹ್ಯಾರಿಸ್ ಅವರಿಗೆ ರೂಪವತಿ ಅನ್ನಲಿಲ್ಲವೇ? ಶಿಂಧೆ ಏನ್ಮಹಾ? ಗುಡ್ಡಿಗೆ ವಯಸ್ಸಾಯ್ತು ಎಂದು ಹೇಳಿ ಜಯಾಬಚ್ಚನ್ ಕಡೆ ನೋಡಲಿಲ್ವೆ?  ಶರದ್ ಯಾದವ್ ವರದಿಗಾರ್ತಿಯೊಬ್ಬಳಿಗೆ  ಬ್ಯೂಟಿಫುಲ್ ಅಂತ ಹಲುಬಲಿಲ್ಲವೇ?' ರಾಯಸ್ವಾಮಿಗಳು ಪಟ್ಟಿಯನ್ನು ಮುಂದಿಟ್ಟರು.

(ಪೆಕರನಿಗೆ ಬಹುಕಾಲದಿಂದ ಒಂದು ಆಸೆ. ಯಾರಾದರೂ ನನ್ನನ್ನು ಸುಂದರ ಎಂದು ಹೇಳಬಾರದೆ ಎಂದು ಮನಸ್ಸಿನಲ್ಲೇ ಕೊರಗುತ್ತಿದ್ದ. ಸಂಯುಕ್ತ ಜನತಾದಳದ ಅಧ್ಯಕ್ಷ ವರದಿಗಾರ್ತಿಯೊಬ್ಬಳಿಗೆ ಇಡೀ ರಾಷ್ಟ್ರವೇ ಸುಂದರ, ನೀನೂ ತುಂಬಾ ಸುಂದರಿ ಎಂದು ಹೇಳಿದ್ದ ಸುದ್ದಿ ಕೇಳಿ, ನೇರವಾಗಿ ಯಾದವರ ಮನೆಯತ್ತ ನಡೆದ. ವರದಿಗಾರ್ತಿ ಕೇಳಿದ ಪ್ರಶ್ನೆಯನ್ನೇ ಇವನು ರಿಪೀಟ್ ಮಾಡಿದ. ಕ್ಯಾ ಸುಂದರ್, ಬಂದರ್, ಬಾಹರ್ ಜಾವ್ ಎಂದು ಯಾದವರು ಅಬ್ಬರಿಸಿ ಉಡಾಫೆ ಮಾಡಿದರು. ಸುಂದರನ ಕನಸು ಕಂಡಿದ್ದ ಪೆಕರ ಎರಡು ದಿನ ಡಲ್ಲಾಗಿದ್ದ.)

ಅಷ್ಟರಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಅನಿತಕ್ಕನ ಚಿತ್ತ ಸಂಘಪರಿವಾರದ ಸಹಿತ ಅಲ್ಲಿಗೆ ಆಗಮಿಸಿತು. 49 ಲಕ್ಷ ರೂಪಾಯಿ ಮೌಲ್ಯದ ಒಡವೆಯ ಒಡತಿ ಪ್ರಚಾರಕ್ಕೆ ಬಂದರೆ ಆ ಕಳೆಯೇ ಬೇರೆ ಅಲ್ಲವೇ?

ಸ್ವಲ್ಪ ಮುದ್ದೆ ಸಮಾರಾಧನೆ ಮಾಡಿಕೊಂಡು ಹೋಗಿ ಎಂದರೂ ಕೇಳದೆ, ಪೆಕರ ಜಾಗ ಖಾಲಿ ಮಾಡಿದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT