ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೋರ ಗುರುಗಳು

Last Updated 6 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಗುರುಗಳನ್ನು ವಿದ್ಯಾರ್ಥಿಗಳು ದೇವರಂತೆ ನಂಬುತ್ತಾರೆ. ಒಳ್ಳೆಯ ಮನಸ್ಸಿನಿಂದ ಗೌರವಿಸುತ್ತಾರೆ. ತಮ್ಮ ಮೇಷ್ಟ್ರುಗಳನ್ನು ಕಂಡ ತಕ್ಷಣ ಅವರು ಮಾಡುವ ನಮಸ್ಕಾರದಲ್ಲಿ ವಿನಯ, ಭಯ, ಭಕ್ತಿಗಳು ತುಂಬಿರುತ್ತವೆ. ಬೆನ್ನ ಹಿಂದೆ ತಮಾಷೆಗಾಗಿ ಆಡಿಕೊಂಡು ನಕ್ಕರೂ ಅದರೊಳಗೂ ಗುರುವಿನ ಬಗ್ಗೆ ಪ್ರೀತಿ ಅಡಗಿರುತ್ತದೆ. ನಮ್ಮನ್ನು ನೋಡಿದ ತಕ್ಷಣವೇ ಅವರ ದೇಹದ ಇಡೀ ಭಾಷೆಯೇ ಬದಲಾಗುತ್ತದೆ.

ಚಕ್ಕರ್ ಹೊಡೆದು ಅಂಡಲೆಯುವ ವಿದ್ಯಾರ್ಥಿಗಳು ತಲೆ ಮರೆಸಿಕೊಂಡು ನಿಲ್ಲುತ್ತಾರೆ. ಕದ್ದು ಸಿಗರೇಟು ಸೇದುವ ಹುಡುಗರು ಮುಖ ಮುಚ್ಚಿಕೊಂಡು ಓಡಿಹೋಗುತ್ತಾರೆ. ಪ್ರೇಮಿಯ ಜೊತೆ ಅಲೆದಾಡುವ ಹುಡುಗಿ ಅಕಸ್ಮಾತ್ ನಮ್ಮನ್ನು ಕಂಡು ಬಿಟ್ಟರೆ ಅಯ್ಯೋ ಸಿಕ್ಕಿಬಿದ್ದೆನಲ್ಲ ಎಂದು ಪರದಾಡುತ್ತಾಳೆ.‌

ಮೇಷ್ಟ್ರು ಅಂತ ಅನ್ನಿಸಿಕೊಂಡವರು ಎಲ್ಲೇ ಸಿಕ್ಕಲಿ ಮಕ್ಕಳು ಓಡಿ ಬಂದು ಅಭಿಮಾನದಿಂದ ಮಾತಾಡಿಸುತ್ತಾರೆ.  ಕಾಲೇಜು ಬಿಡುವಾಗ ಆಟೋಗ್ರಾಫ್ ಪಡೆಯುತ್ತಾರೆ; ಕಣ್ಣೀರು ಹಾಕುತ್ತಾರೆ. ಬಸ್ಸಿನಲ್ಲಿ ಸಿಕ್ಕರೆ ಎದ್ದು ನಿಂತು ಸೀಟು ಬಿಟ್ಟು ಕೊಡುತ್ತಾರೆ. ಮದುವೆ ಫಿಕ್ಸ್ ಆದರೆ ಮೊದಲ ಲಗ್ನ ಪತ್ರಿಕೆ ತಂದು ನಮ್ಮ ಕೈಗೆ ಕೊಟ್ಟು  ಬೇಡಬೇಡವೆಂದರೂ ಕಾಲಿಗೆ ಬಿದ್ದು ಆಶೀರ್ವಾದ ಬೇಡುತ್ತಾರೆ. ಮುಂದೊಂದು ದಿನ ಅವರವರ ಸಂಗಾತಿಗಳ ಕರೆತಂದು ಪರಿಚಯ ಮಾಡಿಸುತ್ತಾರೆ. ಎಲ್ಲೆಲ್ಲೋ ಸಿಗುತ್ತಾರೆ.

ನಕ್ಕು ನಲಿದು ನಮ್ಮ ವಿಚಾರಿಸಿ ಹಿಂದಿನ ದಿನಗಳ ಮೆಲುಕು ಹಾಕುತ್ತಾರೆ. ಮೇಷ್ಟ್ರುಗಳಾದ ನಾವು ಹೊಡೆದಿದ್ದು, ಬೈದಿದ್ದು, ಗದರಿಸಿದ್ದು, ಎಲ್ಲವನ್ನೂ  ಸಂತೋಷದಿಂದ ಸ್ಮರಿಸುತ್ತಾರೆ. ಇವತ್ತು ನಾವು ಈ ಸ್ಥಿತಿಯಲ್ಲಿರಲು ನೀವು ಕಾರಣ ಸಾರ್ ಎಂದು ಗೌರವದಿಂದ ಹೇಳಿಕೊಳ್ಳುತ್ತಾರೆ. ಇಷ್ಟೆಲ್ಲಾ ಮರ್ಯಾದೆ, ಗೌರವ ಪಡೆಯುವ ಹುದ್ದೆ ಪ್ರಾಯಶಃ ಮೇಷ್ಟ್ರುಗಿರಿನೇ ಇರಬೇಕು. ಗುರುಗಳ, ವಿದ್ಯಾರ್ಥಿಗಳ ನಡುವಿನ ಸಂಬಂಧ ಒಂದು ಪವಿತ್ರ ಮೈತ್ರಿ. ಅದೊಂದು ನಂಬಿಕೆ. ತನ್ನ ಹೆತ್ತವರನ್ನು ಬಿಟ್ಟರೆ ವಿದ್ಯಾರ್ಥಿಗಳು ಹೆಚ್ಚು ಗೌರವ ಕೊಡುವುದು ಗುರುವಿಗೇ. ಗುರುವಿನ ಅರ್ಹತೆ ಮೀರಿದ ಪ್ರೀತಿ ಆದರಗಳು ಶಿಷ್ಯರಿಂದ ಸಿಗುತ್ತವೆ. ವಿದ್ಯಾರ್ಥಿಗಳು ತೋರುವ ಈ ಗೌರವಕ್ಕೆ ನಿಜಕ್ಕೂ ನಾವು ಅರ್ಹರೇ ಎಂದು ಎಷ್ಟೋ ಸಲ ಪ್ರಶ್ನಿಸಿಕೊಂಡಿದ್ದೇನೆ.

ಮುಗ್ಧವಾಗಿ, ಗೌರವದಿಂದ ನೀನೇ ಗುರುವೆಂದು ನಂಬಿ ಬರುವ ಮಕ್ಕಳ ಮೇಲೆ ಅತ್ಯಾಚಾರ ಮಾಡಲೆತ್ನಿಸುವ  ವ್ಯಕ್ತಿ ಖಂಡಿತ ಗುರುವಾಗಿರಲು ಸಾಧ್ಯವೇ ಇಲ್ಲ. ಅವನೊಬ್ಬ ಮಾನಸಿಕ ರೋಗಿ. ತನ್ನ ಘನತೆಯ ಅರಿವು, ಗುರುವಿನ ಪಾವಿತ್ರ್ಯತೆ ಅರಿಯದ  ನೀಚನಾತ. ಎಷ್ಟೋ ಪ್ರಕರಣಗಳನ್ನು ಮಕ್ಕಳು ಪೋಷಕರಿಗೆ ತಿಳಿಸದೆ ಅವು ಶಾಶ್ವತವಾಗಿ ಮುಚ್ಚಿ ಹೋಗುತ್ತವೆ. ವಿಷಯ ತಿಳಿದ ನಂತರವೂ ಎಷ್ಟೋ ಪಾಲಕರು ಮರ್ಯಾದೆಗೆ ಅಂಜಿ ತಾವೇ ಮುಂದೆ ನಿಂತು ವಿಷಯಗಳನ್ನು ಮರೆಮಾಚುತ್ತಾರೆ.

ನಿಜ ಸಂಗತಿ ಎಂದರೆ ಇನ್ನೂ ಶಾಲಾ ಕಾಲೇಜುಗಳಲ್ಲಿ ಇಂಥ ದುಷ್ಟ ಮನಸ್ಸಿನ ಲೈಂಗಿಕ ರೋಗಿಗಳು ಗುರುಗಳಾಗಿ ಇರುವುದು. ತಮ್ಮ ನೀಚತನದ ಕೃತ್ಯಗಳನ್ನು ಆಪ್ತ ವಲಯದಲ್ಲಿ ಹಂಚಿಕೊಂಡು ಸಂಭ್ರಮಿಸುವವರೂ ಇದ್ದಾರೆ. ಅಲ್ಲಲ್ಲಿ ಬೆರಳೆಣಿಕೆಯಷ್ಟಿರುವ ಇವರಿಂದ ಇಡೀ ಗುರುಕುಲವೇ ಇಂದು ತಲೆ ತಗ್ಗಿಸಬೇಕಾಗಿದೆ. ನಾವು ಓದುವ ಕಾಲಕ್ಕೂ ಇಂತಹ ಒಬ್ಬ ದುಷ್ಟ ಗುರುವಿದ್ದ. ಪಾಠದಲ್ಲಿ ಮಾತ್ರ ಆತ ಪಂಡಿತನೇ ಸರಿ. ಪೋಲಿ ಜೋಕುಗಳನ್ನು ಹೇಳಿ ಹುಡುಗರಿಗೆ ಖುಷಿಯನ್ನೂ, ಹೆಣ್ಣು ಮಕ್ಕಳಿಗೆ ಮುಜುಗರವನ್ನೂ ಉಂಟು ಮಾಡುವುದರಲ್ಲೂ ಆತ ಎತ್ತಿದ ಕೈ.

ಪಾಠಕ್ಕಿಂತ ವಿಶೇಷವಾಗಿ ಕೆಲವು ಮಕ್ಕಳ ವೈಯಕ್ತಿಕ ವಿವರಗಳನ್ನು ಕಲೆ ಹಾಕುವುದರಲ್ಲೇ ಆತನಿಗೆ ಹೆಚ್ಚಿನ ಆಸಕ್ತಿ. ತನ್ನ ಮಾತು ಮೀರಿದವರ ಮೇಲೆ ಚಾಡಿ ಹೇಳುವುದು, ಗೂಬೆ ಕೂರಿಸುವುದು, ವಿನಾಕಾರಣ ಆರೋಪಗಳನ್ನು ಹುಟ್ಟು ಹಾಕುವುದರಲ್ಲಿ ಆತ ಎಕ್ಸ್‌ಪರ್ಟ್ ಅಂತನ್ನಿಸಿದ್ದ. ತಮ್ಮ ವೈಯಕ್ತಿಕ ವಿಷಯಗಳನ್ನು ಅಕಸ್ಮಾತ್ ಆತನಲ್ಲಿ ಹೇಳಿಕೊಂಡರೆ ಅವರ ಕಥೆ ಮುಗಿದಂತೆಯೇ. ಅದನ್ನು ದುರ್ಬಳಕೆ ಮಾಡಿಕೊಳ್ಳುವ ಪರಿಯೂ ಆತನಿಗೆ ಕರಗತವಾಗಿತ್ತು. ಚೋರ, ಕಪಟ, ಕುತಂತ್ರ, ಎಲ್ಲಾ ವಿದ್ಯೆಗಳನ್ನು ಕಲಿತ ನಂತರವೇ ಆತ ಈ ಭೂಮಿಯ ಮೇಲೆ ಅವತರಿಸಿದಂತಿತ್ತು.

ಮಾತಿನಲ್ಲಿ ಆತ ಕಲೆಗಾರ. ನಗುವಿನಲ್ಲಿ ಮೋಡಿಗಾರ. ಸುಳ್ಳು ಹುಟ್ಟು ಹಾಕುವುದರಲ್ಲಿ ನಿಷ್ಣಾತ. ಸದಾ ಬೇರೆಯವರಿಗೆ ತಂದಿಡುವುದರಲ್ಲೇ ಬಿಝಿಯಾಗಿರುತ್ತಿದ್ದ ಆತ ನುಣುಚಿಕೊಳ್ಳುವುದರಲ್ಲಿ ನಿಸ್ಸೀಮ. ಹೇಳಿದ್ದನ್ನೇ ಇಲ್ಲ ಎಂದು ಮಾತಿನ ಮೂಲಕ ಸಾಧಿಸಬಲ್ಲ ಮಾತುಗಾರ. ಹೆಣ್ಣು ಮಕ್ಕಳ ದೌರ್ಬಲ್ಯ ಅರಿತು ಅವರನ್ನು ವಶೀಕರಣ ಮಾಡಿಕೊಳ್ಳಬಲ್ಲ. ಆತ ಅಂತಹ ದುಷ್ಟನೆಂದು ಗೊತ್ತಿದ್ದರೂ ಅವನೆಂದರೆ ಸಾಯುವ, ಆತನಿಗಾಗಿ  ಹಂಬಲಿಸುವ ವಿದ್ಯಾರ್ಥಿನಿಯರೂ ಇರುತ್ತಿದ್ದುದು ದುರಾದೃಷ್ಟವೇ ಸರಿ.

ಒಂದು ಸಲ ಕಾಲೇಜಿನಲ್ಲಿ ಹೀಗಾಯಿತು.  ನಾವು ಓದುತ್ತಿದ್ದ ತರಗತಿಯಲ್ಲಿ ತುಂಬಾ ಚಂದವಾಗಿ ಹಾಡುವ ಸಹಪಾಠಿಯೊಬ್ಬಳಿದ್ದಳು. ಅವಳು ನೋಡಲು ಕೂಡ ಅಷ್ಟೇ ಚೆಲುವೆ. ಅವಳ ಬಗ್ಗೆ ಕನಸು ಕಾಣುತ್ತಿದ್ದವರೇ ನಮ್ಮ ಕಾಲೇಜಿನಲ್ಲಿ ನೂರಾರು ಹುಡುಗರಿದ್ದರು. ದಿನಾ ಅವಳ ಬಗ್ಗೆ ಮಾತಾಡುವ, ಅವಳ ಹಿಂದೆಯೇ ಹೋಗಿ ಅವಳಿಗೆ ಗೊತ್ತಾಗದಂತೆ ಮನೆ ತನಕ ಡ್ರಾಪ್ ಕೊಟ್ಟು ಬರುವ ಅನೇಕ ಗೆಳೆಯರಿದ್ದರು. 

ಆ ಚೆಲುವೆ ಒಮ್ಮೆ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗೆ ಆಯ್ಕೆಯಾದಳು. ಅವಳು ಹಾಡಿದ ಭಾವಗೀತೆಗೆ ಮೊದಲ ಬಹುಮಾನ ಸಿಕ್ಕಿತ್ತು. ಜಾನಪದ ಗೀತೆ, ಚಿತ್ರಗೀತೆಯಲ್ಲೂ ಅವಳೇ ಫಸ್ಟ್ ಬಂದಳು. ಆಯೋಜಕರು ಅವಳಿಗೆ ಪಾರಿತೋಷಕ ನೀಡಿದರು. ಮಕ್ಕಳಿಗೆ ಸ್ಪರ್ಧೆಗಳಲ್ಲಿ ಏನೇ ಬಹುಮಾನ ಬಂದರೂ ಮೊದಲು ಅದನ್ನು ತಮ್ಮ ಗುರುಗಳಿಗೆ ತಂದು ತೋರಿಸಬೇಕೆಂದು ಹವಣಿಸುತ್ತಾರೆ. ಅದರಂತೆ ಆಕೆಯೂ ಕಾಲೇಜಿಗೆ ತನ್ನ ಪಾರಿತೋಷಕ ಹಿಡಿದುಕೊಂಡು ಸಂಭ್ರಮದಿಂದ ಓಡೋಡಿ ಬಂದಳು.

ಅದು ದೊಡ್ಡ  ಕಾಲೇಜಿನ ದೊಡ್ಡ  ಸ್ಟಾಫ್‌ರೂಂ. ಎಲ್ಲಾ ಉಪನ್ಯಾಸಕರೂ ಕೂತಿದ್ದರು. ಆಕೆ ಓಡಿ ಬಂದು, ಸಾರ್ ನನಗೆ ಮೊದಲು ಬಹುಮಾನ ಬಂದಿದೆ ಸಾರ್ ಎಂದು ಸಡಗರದಿಂದ ಹೇಳಿಕೊಂಡಳು. ಎಲ್ಲರೂ ಆಕೆಯನ್ನು ಅಭಿನಂದಿಸಿ ಸಂತೋಷಪಟ್ಟರು.
ಅಲ್ಲೇ ಇದ್ದ ನಮ್ಮ ಕುಹಕದ ದುಷ್ಟ ಗುರುವಿಗೆ ಆ ಚೆಲುವೆಯ ಮೇಲೆ  ಮೊದಲಿನಿಂದಲೂ ಅದೇನು ಮುನಿಸು  ಇತ್ತೋ ಕಾಣೆವು. ಆಗ ಆತ ಆಡಿದ ಒಂದೇ ಒಂದು ಮಾತಿನಿಂದ ಅವಳ ಸಂಭ್ರಮವೇ ಸಿಡಿದುಹೋಯಿತು. ಆತ  ಅವರು ನಿನ್ನ ಶಾರೀರವನ್ನು ಮೆಚ್ಚಿ ಪ್ರೈಜ್‌ಕೊಟ್ಟಿದ್ದೋ; ಇಲ್ಲ ನಿನ್ನ ಶರೀರವನ್ನು ಮೆಚ್ಚಿ  ಪ್ರೈಜ್‌ ಕೊಟ್ಟಿದ್ದೋ ಎಂದು ವ್ಯಂಗ್ಯವಾಗಿ ಕೇಳಿಬಿಟ್ಟ.

ಈ ಮಾತನ್ನು ಜೋಕಿನಂತೆ ಸ್ವೀಕರಿಸಿದ  ಅಲ್ಲಿದ್ದ ಗುರುವೃಂದದ ಅನೇಕರು ಘೊಳ್ಳಂತ ನಕ್ಕುಬಿಟ್ಟರು. ಎಲ್ಲರೂ ಒಮ್ಮೆಗೇ ಹೀಗೆ ನಕ್ಕಿದ್ದು ನೋಡಿ ಆಕೆಯ ಮನಸ್ಸು ಆಘಾತಗೊಂಡಿತು. ಅವಳು ಅವಮಾನದಿಂದ ತತ್ತರಿಸಿ ಅಲ್ಲಿಂದ ಓಡಿಹೋದಳು. ಈ ಘಟನೆಯ ನಂತರ ಆಕೆ ಹಾಡುವುದನ್ನು, ನಗುವುದನ್ನೂ ನಿಲ್ಲಿಸಿದಳು. ಅವಳ ಮೇಲೆ ಕಣ್ಣು ಹಾಕಿದ್ದ ನಮ್ಮ ರಾವಣ ಗುರು ಆಕೆ ಒಲಿಯಲಿಲ್ಲ ಎಂಬ ಕಾರಣದಿಂದ ಹೀಗೆ ತೇಜೋವಧೆ ಮಾಡಿದ್ದಂತೆ ಎಂದು ಎಲ್ಲರೂ ನಂತರ ಮಾತಾಡಿಕೊಂಡರು. ಆತನ ಒಂದೇ ಮಾತಿನಿಂದ ಒಬ್ಬಾಕೆಯ ಪ್ರತಿಭೆ ಕಮರಿದಂತಾಯಿತು.

ತನ್ನ ಲೈಂಗಿಕ ಸಖ್ಯಕ್ಕೆ ಆತ ಯಾವೆಲ್ಲಾ ವಿದ್ಯಾರ್ಥಿಯರನ್ನು ಹೇಗೆಲ್ಲಾ ಬಳಸಿಕೊಂಡ ಎಂಬುದನ್ನು ವಿದ್ಯಾರ್ಥಿಗಳು ಪರಸ್ಪರ ಗುಟ್ಟಾಗಿ ಮಾತಾಡಿಕೊಂಡು ನಾಲಗೆ ಸವೆಸಿಕೊಳ್ಳುತ್ತಿದ್ದರು. ಅಪ್ಪಿತಪ್ಪಿಯೂ ಆತನ ತಂಟೆಗೆ ಯಾರೂ ಹೋಗುತ್ತಿರಲಿಲ್ಲ. ಅವನ ಹಿಂದೆ ರೌಡಿಗಳಿದ್ದಾರೆ, ಪ್ರಭಾವಿ ಜನರಿದ್ದಾರೆ, ಆತ ಹಣವಂತನೆಂಬ ಗುಲ್ಲು ಕಾಲೇಜಿನ ತುಂಬಾ ಹಬ್ಬಿತ್ತು. ಹೀಗಾಗಿ ಅವನು ಅಘೋಷಿತ ಡಾನ್‌ನಂತಿದ್ದ.

ಹೆಣ್ಣು ಮಕ್ಕಳು ಮಾನ ಮರ್ಯಾದೆಗೆ ಅಂಜುತ್ತಾರೆ. ಹೀಗಾಗಿ, ತಾನು ಕೊಡುವ ಕಿರುಕುಳಗಳನ್ನು ಯಾರಲ್ಲಿಯೂ ಹೇಳಿಕೊಳ್ಳುವುದಿಲ್ಲ ಎನ್ನುವುದೇ ಆತನಿಗಿದ್ದ ಭಂಡ ಧೈರ್ಯವಾಗಿತ್ತು. ಅಮಾಯಕ ಬಡ ಹೆಣ್ಣುಮಕ್ಕಳನ್ನೇ ಆತ ಟಾರ್ಗೆಟ್ ಮಾಡುತ್ತಿದ್ದ. ಅವರ ಅಸಹಾಯಕತೆಯನ್ನು ಸಂಪೂರ್ಣ ದುರುಪಯೋಗ ಮಾಡಿಕೊಳ್ಳುತ್ತಿದ್ದ.  ಆತನಿಂದ ದೌರ್ಜನ್ಯಕ್ಕೆ ಒಳಗಾದವರು ಎಲ್ಲೂ ತುಟಿಕ್ ಪಿಟಿಕ್ ಎನ್ನುತ್ತಿರಲಿಲ್ಲ.  ಇದೇ ಅವನ ಮುಖ್ಯ ಬಂಡವಾಳವಾಗಿತ್ತು.

ಹಾಗೇನಾದರೂ ಬಾಯಿ ತೆರೆಯಲು ಯತ್ನಿಸಿದರೆ ಆತ ಅವರ ಬಗ್ಗೆ ಕಟ್ಟು ಕಥೆಗಳನ್ನು, ಅಶ್ಲೀಲ ಸಂಗತಿಗಳನ್ನು ಹರಿಬಿಡುತ್ತಿದ್ದ. ಇವನ ಈ ಪುಂಡಾಟಕ್ಕೆ ಹೆದರಿ ಹೋಗಿದ್ದ ಕಾಲೇಜಿನ ಯಾವ ಸಿಬ್ಬಂದಿಗಳೂ ಯಾವತ್ತೂ, ಬಾಯಿ ಬಿಚ್ಚುತ್ತಿರಲಿಲ್ಲ. ಎಲ್ಲರ ವೈಯಕ್ತಿಕ ದೌರ್ಬಲ್ಯಗಳನ್ನು ತಿಳಿದುಕೊಂಡಿರುತ್ತಿದ್ದ ಈತನ ವಿಷಯದಲ್ಲಿ ಯಾರೂ ಕೆಮ್ಮುತ್ತಿರಲಿಲ್ಲ. ಕೆಮ್ಮಬೇಕಾಗಿದ್ದ ಹಲವರೂ ಆತನ ಸಾಲ ಮತ್ತು ಬಡ್ಡಿಯ ಸುಳಿಗೆ ಸಿಕ್ಕು ನರಳಾಡುತ್ತಿದ್ದರು.

ಹೀಗೆ ಇಡೀ ವ್ಯವಸ್ಥೆಯನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದ ಆತನಿಂದ ಅವಮಾನಗೊಂಡ, ಮಾನ ಕಳೆದುಕೊಂಡ ಅನೇಕ ಹೆಣ್ಣು ಮಕ್ಕಳ ಜೊತೆ ಕೆಲ ಮೇಷ್ಟ್ರುಗಳೂ ಇದ್ದರು. ಮಾನ ಹೋದ ಕಾರಣಕ್ಕೆ ತಮ್ಮ ಅಮೂಲ್ಯ ಓದನ್ನು ನಿಲ್ಲಿಸಿದ ಮಕ್ಕಳೂ ಇದ್ದರು. ಆದರೆ ವಿಚಿತ್ರ ನೋಡಿ, ಅವರು ತುಂಬಾ ಒಳ್ಳೆಯ ಗುರುಗಳು, ಅವರ ಪೋಲಿ ಜೋಕ್ಸ್ ಅಂದ್ರೆ ನಮಗಿಷ್ಟ ಎಂದು ಈತನನ್ನು ಹಾಡಿ ಹೊಗಳುವ ವಿದ್ಯಾರ್ಥಿಗಳೂ ಕೆಲವರಿದ್ದರು. ಅವರನ್ನು ನಾವು ಚಮಚಗಳು ಎಂದು ಕರೆಯುತ್ತಿದ್ದೆವು.

ಹುಡುಕಿದರೆ ಇಂಥ ಅಮೋಘ ಗುರುಗಳು ಬಹಳಷ್ಟು ಜನ ಸಿಗುತ್ತಾರೆ. ಅವರು ನಾನಾ ರೂಪದಲ್ಲಿದ್ದಾರೆ. ಅವರ ಕಿರುಕುಳಗಳೂ ನಾನಾ ಬಗೆಯಲ್ಲಿವೆ. ಅವರ ವರಸೆಗಳೂ ವಿಚಿತ್ರ ರೀತಿಯಲ್ಲಿವೆ. ಇಂಥವರಿಂದ ವಿದ್ಯಾರ್ಥಿಗಳ ಬದುಕನ್ನು ರಕ್ಷಿಸುವ ರೀತಿ ಹೇಗೆಂದು ನಿರ್ಧರಿಸುವ ಕಾಲ ಈಗ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT