ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರತಿನಿಧಿಗಳ ‘ಪ್ರತಿಭಾ ಪ್ರದರ್ಶನ’ ಹೀಗಿರಬೇಕೆ?

Last Updated 30 ಜನವರಿ 2017, 19:30 IST
ಅಕ್ಷರ ಗಾತ್ರ

ರಾಜಭವನಗಳು ಎಂಬ ಅನಗತ್ಯ ಅರಮನೆಗಳಲ್ಲಿ ವಿರಾಜಮಾನರಾಗಿರುವ ರಾಜ್ಯಪಾಲರಲ್ಲಿ ಕೆಲವರು ಇತ್ತೀಚೆಗೆ ಏನೇನು ಮಾಡುತ್ತಿದ್ದಾರೆ ಎಂಬುದೆಲ್ಲ ದೇಶದಾದ್ಯಂತ ಚರ್ಚೆಗೆ ಒಳಪಡುತ್ತಿದ್ದು, ಅವರ ವಿರುದ್ಧ ಕಟುಟೀಕೆಗಳ ಪ್ರವಾಹವೇ ಹರಿಯುತ್ತಿದೆ. ಬ್ರಿಟಿಷ್ ಆಡಳಿತದ ಪಳೆಯುಳಿಕೆಯಾದ ರಾಜ್ಯಪಾಲ ಹುದ್ದೆಯನ್ನು ರದ್ದು ಮಾಡಬೇಕೆಂಬ ಆಗ್ರಹವೂ ಹೆಚ್ಚುತ್ತಿದೆ.

ಆದರೆ ಪ್ರತಿಯೊಂದು ರಾಜ್ಯದಲ್ಲೂ ರಾಜಕೀಯ ಆಪತ್ತಿಗೊಬ್ಬ ನೆಂಟ ಇರಲಿ, ಬೇಡವಾದ ಹಿರಿಯ ರಾಜಕಾರಣಿಗಳನ್ನು ದೂರವಿಟ್ಟು ಬಾಯಿ ಮುಚ್ಚಿಸಲು ಒಂದು ನಿವೃತ್ತಿ ಕೇಂದ್ರವಿರಲಿ, ಚಲಾವಣೆ ಕಳೆದುಕೊಂಡ ಪಕ್ಷಕ್ಕೆ ಬೇಕಾದ ವಯೋವೃದ್ಧರಿಗೆ ಒಂದು ಪುನರ್ವಸತಿ ವೃದ್ಧಾಶ್ರಮ ಇರಲಿ- ಮುಂತಾದ ಕಾರಣಗಳಿಂದ ರಾಜ್ಯಪಾಲ ಹುದ್ದೆಯನ್ನು ಎಲ್ಲ ರಾಜಕೀಯ ಪಕ್ಷಗಳೂ ಸಂರಕ್ಷಿಸಿಕೊಂಡು ಬಂದಿವೆ.

ಆದ್ದರಿಂದ ರಾಜ್ಯದ ಜನ ಕೊಡುವ ತೆರಿಗೆಯಲ್ಲಿ ಕೋಟಿಗಟ್ಟಲೆ ಹಣ ಸುಮ್ಮನೆ ಖರ್ಚಾಗುತ್ತಿದ್ದರೂ ಈ ವ್ಯವಸ್ಥೆ ಆರಾಮವಾಗಿ ಮುಂದುವರೆಯುತ್ತಿದೆ. ಅನೇಕ ರಾಜ್ಯಪಾಲರು ರಾಜಕಾರಣಿಗಳಂತೆಯೇ ತಮ್ಮ ಅವಧಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹಣ ಮಾಡುತ್ತಾರೆ. ಜನರ ತಿರಸ್ಕಾರ, ಮಾಧ್ಯಮಗಳ ಟೀಕೆ, ಸುಪ್ರೀಂ ಕೋರ್ಟ್ ಛೀಮಾರಿ, ರಾಷ್ಟ್ರಪತಿಗಳಿಂದ ವಜಾ ಇವ್ಯಾವುದೂ ‘ಚುನಾವಣೆಯ ಭಯ’ ಇಲ್ಲದ ಈ ಕೆಲವು ಭ್ರಷ್ಟ, ನಡತೆಗೆಟ್ಟ ರಾಜ್ಯಪಾಲರನ್ನು ಹೆದರಿಸುವುದಿಲ್ಲ.

ಆದರೆ ಚುನಾವಣೆಯ ಭಯ ಇರಬೇಕಾದ, ಜನರಿಂದ ಆಯ್ಕೆಯಾಗುವ ಸಂಸದರು ಮತ್ತು ಶಾಸಕರ ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಗಾಂಭೀರ್ಯದಿಂದ ಕೂಡಿದ ಸಾರ್ವಜನಿಕ ನಡವಳಿಕೆ ಎಲ್ಲ ಕಾಲದ ರಾಜಕಾರಣದ ಆದರ್ಶವಾಗಿ ಉಳಿದಿರುವುದೇನೋ ಹೌದು. ಆ ಆದರ್ಶವೆಲ್ಲ ‘ಕನಸಿನ ಮಾತು’ ಎಂದು ಒಮ್ಮೆಗೇ ಕೈಚೆಲ್ಲದಿರಿ ಎಂದು ಹೇಳುವಂತೆ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅಂಥವರ ಅಪರೂಪದ ಉದಾಹರಣೆ ಇದ್ದೇ ಇದೆ.

ನಮ್ಮ ದೇಶದ ಸಂಸದರು ಮತ್ತು ಶಾಸಕರಲ್ಲಿ ಭ್ರಷ್ಟಾಚಾರದಿಂದ ದೂರವಿರುವವರನ್ನು ಹುಡುಕುವುದು ಸಾವಿಲ್ಲದವರ ಮನೆಯಲ್ಲಿ ಸಾಸಿವೆ ಹುಡುಕುವ ಕೆಲಸವೇ ಆಗಿಬಿಡಬಹುದು. ಆದರೆ ಅವರಲ್ಲಿ ಕೆಲವರಿಗೆ ಮತದಾರರ ಮುಂದೆ ತಮ್ಮ ಹುದ್ದೆಯ ಮಾನಮರ್ಯಾದೆಯನ್ನು ಕಾಪಾಡಿಕೊಳ್ಳಬೇಕೆಂಬ ತೋರಿಕೆಯ ವಿವೇಚನೆಯೂ ಇಲ್ಲವಲ್ಲ ಎನ್ನುವುದೇ ಕಳವಳದ ಸಂಗತಿ.

ಹೀಗೆ ಹೇಳುವಾಗ ಅತೀ ಭ್ರಷ್ಟ ಧೂರ್ತ ರಾಜಕಾರಣಿಯೊಬ್ಬ ಅತೀ ವಿನಯವಂತನಾಗಿ ಇರಬಹುದಾದ ಭೀಕರ ವಿಪರ್ಯಾಸ ನಮ್ಮ ಕಣ್ಣಮುಂದೆ ಕುಣಿಯುತ್ತದೆ. ಅತ್ಯಂತ ಜನದ್ರೋಹಿ ರಾಜಕಾರಣಿಯೊಬ್ಬ ಅತ್ಯಂತ ಜನಪ್ರಿಯ ನಾಯಕನಾಗಿ ಮೆರೆಯುವ ಭಯಂಕರ ವಿರೋಧಾಭಾಸ ನಮ್ಮನ್ನು ಅಣಕಿಸುತ್ತದೆ. ಇದರ ಅರಿವಿದ್ದೂ ರಾಜಕಾರಣಿಗಳು ಭ್ರಷ್ಟಾಚಾರದಿಂದ ದೂರವಿರುವುದಕ್ಕೇ ಎಂದಿಗೂ ಪರಮ ಪ್ರಾಶಸ್ತ್ಯ ಇರಬೇಕು- ಆ ದೂರದ ಆದರ್ಶವನ್ನು ಮರೆಯದೆ ನಮ್ಮ ಸುತ್ತಮುತ್ತಲೂ ಹತ್ತಿರದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆಯೂ ಜನರು ಆತಂಕ ಪಡಬೇಕಾಗಿದೆ.

ರಾಜಕಾರಣಿಗಳ ನಡವಳಿಕೆಯ ಸಣ್ಣಪುಟ್ಟ ತಪ್ಪು ಪಟ್ಟಿ ಮಾಡುವುದರಿಂದ ಭ್ರಷ್ಟಾಚಾರದಂಥ ದೊಡ್ಡ ಅಪರಾಧವನ್ನು ಪಕ್ಕಕ್ಕೆ ಸರಿಸಿದಂತಾಗುತ್ತದೆ ಎಂದು ಭಾವಿಸಬೇಕಿಲ್ಲ.

ರಾಜಕಾರಣಿಗಳ ಭ್ರಷ್ಟಾಚಾರ ಮತ್ತು ದುರಾಚಾರ ಇವೆರಡೂ ಬಯಲಿಗೆ ಬರುವ ಸುವರ್ಣ ಸಂದರ್ಭವೆಂದರೆ ಚುನಾವಣೆ. ಸಂಸತ್ತಿನಿಂದ ಹಿಡಿದು ಪಂಚಾಯ್ತಿಯವರೆಗೆ ನಡೆಯುವ ಯಾವುದೇ ಚುನಾವಣೆ ಅವುಗಳ ಕುರುಡು ಕುಣಿತಕ್ಕೆ ಅವಕಾಶ ಒದಗಿಸುತ್ತದೆ. ಪ್ರಚಾರ ಸಭೆಗಳಲ್ಲಿ ಲಂಗುಲಗಾಮಿಲ್ಲದ, ಎಗ್ಗುಸಿಗ್ಗಿಲ್ಲದ ಮಾತು ನಿಜವಾಗಿ ಅವರೇನೆಂಬುದನ್ನು ತೋರಿಸುತ್ತದೆ.

ಪ್ರತಿಯೊಂದು ಚುನಾವಣಾ ಪ್ರಚಾರವೂ ಸಾರ್ವಜನಿಕ ನಡವಳಿಕೆಯ ಪ್ರತಿಯೊಂದು ನಿಯಮವನ್ನೂ ಮೀರುತ್ತದೆ ಎಂದಷ್ಟೇ ಹೇಳಿದರೆ ಸಾಕು. ರಾಜಕಾರಣಿಗಳ ಇಂಥ ನಡವಳಿಕೆಗೆ ಹಳ್ಳಿಯಿಂದ ದಿಲ್ಲಿಯವರೆಗೆ ಯಾವ ಚುನಾವಣೆಯೂ ಹೊರತಲ್ಲ, ಅಷ್ಟೇಕೆ ಜಗತ್ತಿನ ಯಾವ ದೇಶದ ಚುನಾವಣೆಯೂ ಹೊರತಲ್ಲ. ವಿಚಾರಗಳು, ವಾದಗಳ ಬದಲಿಗೆ ವ್ಯಕ್ತಿಗಳನ್ನೇ ಗುರಿಯಾಗಿಟ್ಟುಕೊಂಡು ನಡೆಸುವ ದಾಳಿಗಳು ರಾಜಕಾರಣದಲ್ಲಿ ಸರ್ವೇಸಾಮಾನ್ಯ.

ಚುನಾವಣೆ ಮುಗಿದ ಮೇಲೆ ಗೆದ್ದವರು ಬೆಳೆಸಿಕೊಳ್ಳುವ ವಿಲಕ್ಷಣ ಹಮ್ಮುಬಿಮ್ಮು, ವಿಚಿತ್ರ ದುರಹಂಕಾರ ನಮ್ಮ ಪ್ರಜಾಪ್ರಭುತ್ವದ ದುರವಸ್ಥೆಯ ಮುಖ್ಯ ಕಾರಣಗಳಲ್ಲಿ ಒಂದಾಗುತ್ತದೆ. ರಾಜಕಾರಣಿಗಳು ಗೆದ್ದು ಬಂದ ಪಕ್ಷಕ್ಕೆ ಚುನಾವಣೆಯಲ್ಲಿ ದೊರಕುವ ಸ್ಥಾನಗಳ ಸಂಖ್ಯೆಯೇ ಅವರ ನಡವಳಿಕೆಯ ರೀತಿನೀತಿಯನ್ನೂ ನಿರ್ಧರಿಸುವುದುಂಟು. ಆಡಳಿತ ಪಕ್ಷವಾದರೆ ‘ನಮ್ಮ ಸರ್ಕಾರ’ ಎಂಬ ಅಹಂಕಾರ, ವಿರೋಧ ಪಕ್ಷವಾದರೆ ‘ನಿಮ್ಮ ಸರ್ಕಾರ’ ಎಂಬ ತಿರಸ್ಕಾರ, ಸಾರ್ವಜನಿಕವಾಗಿ ಪ್ರತಿಯೊಂದು ಹಂತದಲ್ಲೂ ವ್ಯಕ್ತವಾಗುತ್ತದೆ. ಇದಕ್ಕೆ ಬಲಿಯಾಗುವುದು ಜನರ ಹಿತ ಎಂಬ ಕನಿಷ್ಠ ಭಾವನೆಯೂ ಅಲ್ಲಿ ಇರುವುದಿಲ್ಲ.

ಸಂಸತ್ತು, ವಿಧಾನಮಂಡಲ ಅಧಿವೇಶನಗಳಲ್ಲಿ ಜನಪ್ರತಿನಿಧಿಗಳು ಹೇಗೆಲ್ಲಾ ನಡೆದುಕೊಳ್ಳುತ್ತಾರೆ ಎನ್ನುವುದಕ್ಕೆ ಪ್ರತಿ ರಾಜಕೀಯ ಪಕ್ಷದಿಂದಲೂ ಹೇರಳ ಉದಾಹರಣೆಗಳು ದೊರಕುತ್ತಿವೆ. ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಅವರ ನಿಲುವು ವಿರೋಧ ಪಕ್ಷವಿದ್ದಾಗ ಒಂದು ಬಗೆ, ಆಡಳಿತ ಪಕ್ಷವಿದ್ದಾಗ ಇನ್ನೊಂದು ಬಗೆ- ಹೀಗಿರುವುದಕ್ಕೆ ರಾಜಕಾರಣದಲ್ಲಿ ನೂರೆಂಟು ಉದಾಹರಣೆಗಳನ್ನು ಹೆಕ್ಕಬಹುದು.

ಜನಪ್ರತಿನಿಧಿಗಳು ಯಾವುದಾದರೂ ವಿಚಾರವನ್ನು ವಿರೋಧಿಸುವ ಸಲುವಾಗಿಯೇ ಸಂಸತ್ತು, ವಿಧಾನಸಭೆ, ವಿಧಾನ ಪರಿಷತ್ತಿನ ಬಾವಿಗೆ ಬಂದು ಕೂರುತ್ತಾರೆಂದರೆ ಬಹುತೇಕ ಸಂದರ್ಭಗಳಲ್ಲಿ ಅದರ ಹಿನ್ನೆಲೆಯಲ್ಲಿ ಜನರಿಗೆ ಒಳ್ಳೆಯದು ಮಾಡಬಹುದಾದ ಎಷ್ಟೋ ವಿಚಾರಗಳನ್ನು ಬಾವಿಗೆ ಬಿಸಾಕಿರುತ್ತಾರೆ ಎಂದೇ ಅರ್ಥ.

ಸಂಸತ್ತು, ವಿಧಾನಮಂಡಲದ ಅಧಿವೇಶನಗಳ ಕಲಾಪದಲ್ಲಿ ಶ್ರದ್ಧೆಯಿಂದ ಭಾಗವಹಿಸುವುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯಗಳಲ್ಲಿ ಒಂದೆನ್ನುವುದನ್ನು ಹೇಳಬೇಕಿಲ್ಲ. ಆದರೆ ಅದಕ್ಕೇ ಚಕ್ಕರ್ ಹೊಡೆಯುವ ಸಂಸದರು, ಶಾಸಕರು ತಮ್ಮ ಕರ್ತವ್ಯಲೋಪದ ನಡವಳಿಕೆಯಿಂದ ಜನರಿಗೆ ಏನನ್ನು ಸೂಚಿಸುತ್ತಿದ್ದೇವೆನ್ನುವ ಕನಿಷ್ಠ ಜವಾಬ್ದಾರಿಯನ್ನೂ ಹೊಂದಿರುವುದಿಲ್ಲ ಅಥವಾ ಜನರಿಗೆ ತಾವು ಏನೂ ಜವಾಬ್ದಾರರಲ್ಲ, ಉತ್ತರ ಹೇಳಬೇಕಿಲ್ಲ ಎನ್ನುವುದನ್ನು ಮಾತ್ರ ಸೂಚಿಸುತ್ತಿದ್ದಾರೆ.

ಸಂಸತ್ತು, ವಿಧಾನಮಂಡಲ ಕಲಾಪಗಳಲ್ಲಿ ಭಾಗವಹಿಸಿದರೂ ಅದರಲ್ಲಿ ಕೆಲವರು ನಿದ್ರೆ, ಮೊಬೈಲ್ ವೀಕ್ಷಣೆ ಇತ್ಯಾದಿಗಳಲ್ಲಿ ಮುಳುಗಿರುವುದನ್ನು, ಆ ಬೇಜವಾಬ್ದಾರಿಯಲ್ಲಿ ಜನಹಿತದ ಅನೇಕ ಅಂಶಗಳು ಮುಳುಗುವುದನ್ನು ಸುದೀರ್ಘವಾಗಿ ವಿವರಿಸಬೇಕಿಲ್ಲ. 

ವಿರೋಧ ಪಕ್ಷ ಎಂದರೆ ಸರ್ಕಾರದ ಪ್ರತಿಯೊಂದು ನೀತಿನಿರ್ಧಾರವನ್ನೂ ವಿರೋಧಿಸುವ ಪಕ್ಷ ಎಂಬ ವ್ಯಾಖ್ಯಾನ ಹುಟ್ಟಿ ಬಹಳ ಕಾಲವೇ ಆಗಿದೆ. ಹಾಗೇನಾದರೂ ವಿರೋಧಿಸದೆ ಸುಮ್ಮನೆ ಕುಳಿತಿದ್ದರೆ ಏನೋ ಒಳ ಒಪ್ಪಂದದ ವಾಸನೆ ಹೊಡೆಯುತ್ತಿದೆ ಎಂದು ಸಂಶಯ ಹುಟ್ಟುವುದು ನಮ್ಮ ಕಾಲದ ಪ್ರಜಾಪ್ರಭುತ್ವದ ದುರಂತಗಳಲ್ಲಿ ಒಂದಾಗಿದೆ. ವಿರೋಧಕ್ಕಾಗಿ ವಿರೋಧ ಎನ್ನುವುದನ್ನು ಬಿಟ್ಟು ನಿಜವಾದ ಸಮಸ್ಯೆಗಳನ್ನು ಕಲಾಪದಲ್ಲಿ ಚರ್ಚೆಗೆ ಒಳಪಡಿಸುವ ತವಕ ಯಾವ ಪಕ್ಷದಲ್ಲೂ ಹುಟ್ಟುತ್ತಿಲ್ಲ.

ಇತ್ತೀಚಿನ ದಿನಗಳಲ್ಲಿ ಸಂಸತ್ತಿನಲ್ಲಿ ಮತ್ತು ಬಹುತೇಕ ರಾಜ್ಯಗಳ ವಿಧಾನಮಂಡಲಗಳಲ್ಲಿ ಕಲಾಪ ಎನ್ನುವುದು ನಿಜವಾಗಿ ಎಲ್ಲಿ ನಡೆಯುತ್ತಿದೆ?  ಸಂಸದರು, ಶಾಸಕರ ಭತ್ಯೆ ಏರಿಕೆ ವಿಚಾರವೊಂದನ್ನು ಬಿಟ್ಟು- ಜನರಿಗೆ ಒಳ್ಳೆಯದು ಮಾಡುವ ಬಹುಪಾಲು ವಿಚಾರಗಳಲ್ಲಿ ಸದನದ ಸಹಮತ ಎನ್ನುವುದು ಎಲ್ಲಿ ಕಾಣುತ್ತಿದೆ? ‘ಸದನದಲ್ಲಿ ಕದನ’ ಎನ್ನುವ ಶೀರ್ಷಿಕೆಯೇ ಕಲಾಪದ ಎಲ್ಲ ದಿನಗಳಿಗೆ ಅನ್ವಯಿಸುತ್ತಿದೆ.

ಅಲ್ಲದೆ ಕಲಾಪವೇ ನಡೆಯದೆ ಇಡೀ ಅಧಿವೇಶನವೇ ವ್ಯರ್ಥ, ನಿರರ್ಥಕವಾಗುವ ಸಂದರ್ಭಗಳೇ ಹೆಚ್ಚಾಗುತ್ತಿವೆ. ಎಲ್ಲಕ್ಕಿಂತ ಮುಖ್ಯವಾಗಿ,  ಸದನದಲ್ಲಿ ಕಲಾಪ ನಡೆಯಬಾರದು ಎನ್ನುವುದು ವಿರೋಧ ಪಕ್ಷದ ನೀತಿ ಮಾತ್ರವಲ್ಲ, ಆಡಳಿತ ಪಕ್ಷದ ಯುಕ್ತಿಯೂ ಆಗುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಮಾರಕವಾಗಿದೆ.

ಸಂಸತ್ತು ಮತ್ತು ಶಾಸನಸಭೆಗಳಲ್ಲಿ ಸ್ವಂತ ನಿಷ್ಕಾಳಜಿ ಮತ್ತು ಪಕ್ಷದ ನೀತಿಯ ಕಾರಣದಿಂದ ನಿಷ್ಕ್ರಿಯರಾಗುವ ಜನಪ್ರತಿನಿಧಿಗಳು ಅವುಗಳಿಂದಾಚೆ ನಡೆಸುವ ಆಟಆವುಟಗಳನ್ನು ಹೇಳುತ್ತ ಹೊರಟರೆ ಕೊನೆಯೇ ಇಲ್ಲ. ಅವುಗಳನ್ನು ನೋಡಿದರೆ, ನಮ್ಮ ದೇಶದಲ್ಲಿ ಪ್ರಭುತ್ವ ಅಳಿದು ಪ್ರಜಾಪ್ರಭುತ್ವ ಬಂದಿದೆ ಎಂದು ಯಾರು ತಾನೇ ಹೇಳುತ್ತಾರೆ? ತಮ್ಮ ರಾಜ್ಯದಲ್ಲಿ, ಜಿಲ್ಲೆಯಲ್ಲಿ, ಮತಕ್ಷೇತ್ರದಲ್ಲಿ, ಬಡಾವಣೆಯಲ್ಲಿ ರಾಜರಂತೆ ಮೆರೆಯುವ ಅವರು ಸಾರ್ವಜನಿಕ ವಿಮಾನನಿಲ್ದಾಣ, ರೈಲು ನಿಲ್ದಾಣ, ಬಸ್‌ನಿಲ್ದಾಣಗಳೂ ತಮ್ಮ ಸ್ವಂತ ಜಹಗೀರು ಎಂದು ಭಾವಿಸುತ್ತಾರೆ.

ಸಾರ್ವಜನಿಕವಾಗಿ ಎಲ್ಲರೆದುರಿಗೆ ರಾಜಕಾರಣಿಗಳಿಗೆ ತಲೆ ಬಾಚುವ ಅಥವಾ ಬೂಟಿನ ಲೇಸು ಕಟ್ಟುವ ಅಧಿಕಾರಿಗಳು, ಅನುಯಾಯಿಗಳು ಇದ್ದಮೇಲೆ ಹೇಳುವುದೇನಿದೆ? ಸಜ್ಜನಿಕೆ, ಸಂಭಾವಿತ ನಡವಳಿಕೆ ಇವೆಲ್ಲ ರಾಜಕಾರಣಿಗಳಿಗೆ ಇರಬೇಕಿಲ್ಲ ಎಂದು ಅವರೂ ಅವರ ಕುಟುಂಬಿಕರೂ ಹಿಂಬಾಲಕರೂ ತೀರ್ಮಾನಿಸಿ ಎಷ್ಟೋ ಕಾಲವಾಗಿದೆ.

ಸರ್ಕಾರದ ವ್ಯವಸ್ಥೆಯ ಮುಖ್ಯ ಭಾಗವಾಗಿರುವ ಅಧಿಕಾರಿ ವರ್ಗದ ಮೇಲೆ ಆವಾಜ್ ಹಾಕುವುದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಬಹುತೇಕ ರಾಜಕಾರಣಿಗಳು ಭಾವಿಸುತ್ತಾರೆ. ಸಭೆಗಳಲ್ಲಿ ಮುಖ್ಯಮಂತ್ರಿ, ಸಚಿವರು, ಶಾಸಕರು ಹೀನಾಮಾನ ಬೈದರೆ ಸುಮ್ಮನೆ ಕುಳಿತು ಕೇಳಿಸಿಕೊಳ್ಳುವುದನ್ನು ಬಿಟ್ಟರೆ ಅವರಿಗೆ ಬೇರೆ ದಾರಿ ಇಲ್ಲ. ಏಕೆಂದರೆ ರಾಜಕಾರಣಿಗಳ ನಂತರ ಅಥವಾ ಅವರಷ್ಟೇ ಪ್ರಮಾಣದಲ್ಲಿ ಭ್ರಷ್ಟಾಚಾರದ ಪಾಲುದಾರರಾದವರಿಗೆ ಅವರಿಗೆ ಎದುರಾಡುವ ಹಕ್ಕು ಇರುವುದಿಲ್ಲ.

‘ಸರಿಯಾಗಿ ಕೆಲಸ ಮಾಡಿ’ ಎಂದು ಸಭೆಯಲ್ಲಿ ಗುಡುಗುವ ರಾಜಕಾರಣಿಯೇ ತನ್ನ ಪಾಲನ್ನು ಮಡುಗದ ಅಧಿಕಾರಿಗೆ ಏನು ಮಾಡುತ್ತಾನೆ ಎನ್ನುವುದು ಎಲ್ಲರಿಗೂ ಗೊತ್ತು. ಇರುವ ಕೆಲವೇ ಕೆಲವು ಪ್ರಾಮಾಣಿಕ, ನಿಷ್ಠಾವಂತ ಅಧಿಕಾರಿಗಳು ಮಾತ್ರ ವರ್ಷದಲ್ಲಿ ಮೂರು ವರ್ಗಾವಣೆಗಳಿಗೂ ಹೆದರುವುದಿಲ್ಲ. ತಮ್ಮ ಕ್ಷೇತ್ರಕ್ಕೆ ಹಣ ಕೊಡುತ್ತಿಲ್ಲ ಎಂದು ಸಭೆಯಲ್ಲಿ ದಾಂದಲೆ ಮಾಡುವ ಅನೇಕ ವಿರೋಧ ಪಕ್ಷದ ಶಾಸಕರ ಕೂಗಾಟ ಹಾರಾಟಗಳು ಇನ್ನುಳಿದ ಅಗತ್ಯ ಸಂದರ್ಭಗಳಲ್ಲಿ ತಲೆಮರೆಸಿಕೊಳ್ಳುವುದು ಜನರಿಗೆ ತಿಳಿದೇ ಇರುತ್ತದೆ.

ಸಂಸತ್ತು, ವಿಧಾನಮಂಡಲ, ಸದನ ಸಮಿತಿಗಳು, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮಮಟ್ಟದ ಅಧಿಕೃತ ಸಭೆಗಳು ಎಲ್ಲ ಕಡೆ ಜನಪ್ರತಿನಿಧಿಗಳ ಅತಿರೇಕದ ವರ್ತನೆಗಳಿಗೆ ಅಧಿಕೃತ ಉದಾಹರಣೆಗಳು ಹೆಚ್ಚುತ್ತಿರುವುದು ನಮ್ಮ ರಾಜಕೀಯ ವ್ಯವಸ್ಥೆಯ ಅನಾರೋಗ್ಯವನ್ನು ಸಾರಿ ಹೇಳುತ್ತಿದೆ. ಜೊತೆಗೆ ಅವುಗಳಿಂದಾಚೆಗೆ ಆಸ್ಪತ್ರೆಗಳು, ಹೋಟೆಲ್‌ಗಳಂಥ ಸಾರ್ವಜನಿಕ ಸ್ಥಳಗಳಲ್ಲಿ ಅವರ ಅಹಂಕಾರದ ವರ್ತನೆ ಸಾಮಾನ್ಯ ಜನರ ಬದುಕಿನ ನೆಮ್ಮದಿಯನ್ನು ಕದಡುತ್ತಿದೆ.

ಇತ್ತೀಚೆಗೆ ಸಂಸದ ಅನಂತಕುಮಾರ ಹೆಗಡೆ ಆಸ್ಪತ್ರೆಗೆ ನುಗ್ಗಿ ವೈದ್ಯರ ಮೇಲೆ ನಡೆಸಿದ ಹಲ್ಲೆಯನ್ನು ಜನರೂ ವೈದ್ಯಕೀಯ ಸಂಘಟನೆಗಳೂ ತೀವ್ರ ಆತಂಕದಿಂದ ಪರಿಶೀಲಿಸಬೇಕು. ಇಂಥ ಅನಾರೋಗ್ಯಕರ ನಡವಳಿಕೆ ಯಾವ ಮಾನಸಿಕ ಒತ್ತಡದ ಸಮಯದಲ್ಲೂ ಕ್ಷಮೆಗೆ ಅರ್ಹವಲ್ಲ.

ಫೇಸ್‌ಬುಕ್‌ನಲ್ಲಿ ಹಾಕಿದ ಒಂದು ಹೇಳಿಕೆಗೆ ಕೆರಳಿ ವಿರೋಧಿಯ ಮನೆಗೆ ನುಗ್ಗಿ ಅವರ ಕಾಲು ಮುರಿದ ಶಾಸಕ ರಾಜು ಕಾಗೆ ಅವರ ಪುತ್ರಿ, ಸಹೋದರ ಹಾಗೂ ಹಿಂಬಾಲಕರ ಪ್ರತಾಪ ಸಾರ್ವಜನಿಕ ನಡವಳಿಕೆಯ ಎಲ್ಲ ರೀತಿನೀತಿಗಳನ್ನು ಹರಾಜು ಹಾಕಿರುವ ದುಷ್ಟ ಪ್ರಸಂಗ. ಈ ‘ಕಾಗೆ ಹಿಕ್ಕೆ’ಯ ಸಂಕಷ್ಟ ನಿವಾರಿಸುವುದು ಹೇಗೆ?

ವಿರೋಧವನ್ನು ಎದುರಿಸುವ ಬಗೆಯನ್ನು ರಾಜಕಾರಣಿಯೊಬ್ಬ ಕಲಿಯದಿದ್ದರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಇಂಥ ಇನ್ನೂ ಹಲವು ನಿದರ್ಶನಗಳು ಕಾಣುತ್ತವೆ. ಇಂದಿನ ದಿನಗಳಲ್ಲಿ ಆಸ್ಪತ್ರೆಗಳು, ರಸ್ತೆಗಳು, ಅಂಗಡಿಗಳು, ಹೋಟೆಲ್‌ಗಳು ಮುಂತಾದುವಕ್ಕೆ ಮಾತ್ರವಲ್ಲ, ಆಕಾಶಕ್ಕೂ ಸಿ.ಸಿ. ಟಿ.ವಿ. ಕಣ್ಣು ಇರುತ್ತದೆ, ಅದರಲ್ಲಿ ಎಲ್ಲವೂ ದಾಖಲಾಗುತ್ತದೆ ಎನ್ನುವ ರಹಸ್ಯಸತ್ಯ ಕಳ್ಳಕಾಕರಿಗೆ ಮಾತ್ರ ಗೊತ್ತಿರುವುದಿಲ್ಲ ಅಂದುಕೊಂಡಿದ್ದೆವು!

‘ನನ್ನ ನೇತೃತ್ವದ ವಿದ್ಯಾಸಂಸ್ಥೆ ಹತ್ತಾರು ಶಾಲೆ ಕಾಲೇಜುಗಳನ್ನು ನಡೆಸುತ್ತಿದೆ. ಅವೆಲ್ಲವನ್ನೂ ಸರ್ಕಾರದ ಅನುದಾನದ ಪಟ್ಟಿಗೆ ಸೇರಿಸಬೇಕು’ ಎಂದು ಇತ್ತೀಚೆಗೆ ಕೂಗಾಡಿದ ಜನಪ್ರತಿನಿಧಿಯೊಬ್ಬರು ಅದಕ್ಕೆ ಸಂಬಂಧಿಸಿದ ಉನ್ನತ ಅಧಿಕಾರಿಯನ್ನು ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಾ ವಿಪರೀತ ಬೆದರಿಸಿದ ಘಟನೆಯೂ ಸುದ್ದಿಯಾಗಿದೆ.

ಇದು ಶಾಸಕರ ರಾಜಕೀಯ ವಿದ್ಯಾರ್ಹತೆಯನ್ನು ಖಚಿತವಾಗಿ ಹೇಳುತ್ತದೆ. ಅಲ್ಲದೆ, ನಮ್ಮ ಬಹುಪಾಲು ಶಿಕ್ಷಣ ಸಂಸ್ಥೆಗಳು ಯಾರ ಕೈಯಲ್ಲಿವೆ, ಸರ್ಕಾರಿ ಶಾಲೆಗಳು ಯಾಕೆ ಸಾಯುತ್ತಿವೆ, ಕನ್ನಡ ಮಾಧ್ಯಮ ಏಕೆ ಜಾರಿಯಾಗುತ್ತಿಲ್ಲ ಮುಂತಾದ ವಿಷಯಗಳಲ್ಲೂ ಹಲವು ಪಾಠಗಳನ್ನು ಹೇಳುತ್ತಿದೆ.
‘ನಾವು ಜನರ ಸೇವೆ ಮಾಡಲು ರಾಜಕಾರಣಕ್ಕೆ ಬಂದಿದ್ದೇವೆ’ ಎಂದು ಹೇಳುವುದನ್ನು ರಾಜಕಾರಣಿಗಳು ಇನ್ನಾದರೂ ಬಿಡಬೇಕಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT