ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಮನ ಬೆಸೆದ ಕಥನ ಕಲೆ

Last Updated 23 ಮೇ 2013, 19:59 IST
ಅಕ್ಷರ ಗಾತ್ರ

ಭಾರತೀಯ ಚಿತ್ರರಂಗದ ತಳಹದಿಯೇ ಕಥೆ. ಕಥೆ ಹೇಳುವ, ಕೇಳುವ ಕಲೆ ಜನಪದ ಮೂಲದಿಂದ ಬಂದದ್ದೇ ಆಗಿರುವುದರಿಂದ, ಅಂತಹ ಒಂದು ಪರಂಪರೆ ಈ ನೆಲದ ಗುಣವೇ ಆಗಿ, ಸಿನಿಮಾ ಮೂಲಕವೂ ಪ್ರವಹಿಸುತ್ತಿದೆ. ಮೂಕಿ ಚಿತ್ರಗಳಲ್ಲಿ ಸಂಭಾಷಣೆ ಇಲ್ಲದಿದ್ದರೂ ಅವು ಜನರನ್ನು ತಲುಪುವಲ್ಲಿ ಯಶಸ್ವಿಯಾದವು. ಮೂಕಿ ಚಿತ್ರ ಕೂಡ ಚಿತ್ರಕಥೆಯ ಮೂಲಕವೇ ತೆರೆಯ ಮೇಲೆ ತೆರೆದುಕೊಳ್ಳುತ್ತದಲ್ಲದೆ, ಕಾದಂಬರಿ ಆಧಾರಿತವೂ ಆಗಿರುತ್ತಿದ್ದುದು ಸಿನಿಮಾ ಆರಂಭದ ದಿನಗಳಿಂದಲೇ ಬೆಳೆಸಿಕೊಂಡು ಬಂದ ಸೃಜನಾತ್ಮಕ ನೆಲೆಯನ್ನು ಹೇಳುತ್ತದೆ.

ಭಾರತೀಯ ಚಿತ್ರರಂಗದ ಮತ್ತೊಂದು ವೈಶಿಷ್ಟ್ಯವೆಂದರೆ, ಜನತೆಯ ಆಶೋತ್ತರಗಳಿಗೆ ಸ್ಪಂದಿಸಿದ್ದು. ಕಾಲಮಾನದ ಸಾಮಾಜಿಕ ಸ್ಥಿತಿಗತಿಗಳನ್ನು ಚಿತ್ರಿಸುವ, ಪ್ರಶ್ನಿಸುವ ಮೂಲಕ ಕುದಿಯುತ್ತಿದ್ದ ಮೌನ ದನಿಗಳಿಗೆ ಚಿತ್ರರಂಗ ವೇದಿಕೆ ಕಲ್ಪಿಸಿದ್ದರಿಂದಲೇ ಜನ ಮನಗಳನ್ನು ಬೆಸೆಯುವ ಮಾಧ್ಯಮವಾಗಿ ಸಿನಿಮಾ ಬೆಳೆಯಲು ಆರಂಭಿಸಿತು. ಸಾಂಸ್ಕೃತಿಕ ಪುನರುಜ್ಜೀವನವಾಗಿ ಬೆಳೆದ ಸಿನಿಮಾದ ಬೆಳವಣಿಗೆಯೊಂದಿಗೇ ಹೆಜ್ಜೆ ಹಾಕುತ್ತಾ ಬೆಳೆದ ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟ ಕೂಡ ಜನಮುಖಿಯಾಗಿ, ಸಮಾಜ ಸುಧಾರಣೆಗೆ ಪೂರಕವಾಗಿ ವೈಚಾರಿಕ ಮಗ್ಗಲುಗಳನ್ನು ಬಿಂಬಿಸುತ್ತಾ ಬಂದವು.

ಹೀಗಾಗಿಯೇ ಆರಂಭಿಕ ಚಿತ್ರಗಳು ಸಂತರ ಜೀವನ ಚರಿತ್ರೆಯನ್ನು ಹೇಳುತ್ತಿವೆ ಎಂದು ಭಾಸವಾದರೂ ಅವು ಸುಧಾರಣಾವಾದಿಯ ಆದರ್ಶವನ್ನು ಒಳಗೊಂಡಿರುವ ಒಳನೋಟವನ್ನು ಗಮನಿಸಬಹುದಿತ್ತು. ತ್ಯಾಗಜೀವಿಗಳಾಗಿ, ಬುದ್ಧಿಜೀವಿಗಳಾಗಿ ಹಿಂಬಾಲಕರಿಗೆ ಸತ್ಕಾರ್ಯಗಳ ಬಗ್ಗೆ ತಿಳಿಹೇಳುವ ವ್ಯಕ್ತಿತ್ವವನ್ನು ಅಲ್ಲಿ ಗಮನಿಸಬಹುದಿತ್ತು. ಇಡೀ ದೇಶದಲ್ಲಿ ಬ್ರಿಟಿಷ್ ಪ್ರಭುತ್ವದ ವಿರೋಧಿ ಅಲೆ ದಟ್ಟವಾಗುತ್ತಿದ್ದ ಸಮಯದಲ್ಲಿ ಪೌರಾಣಿಕ ಕತೆಗಳೂ ಕೂಡ ಬ್ರಿಟೀಷರ ವಿರುದ್ಧ ಹೋರಾಟದ ಸಾಂಕೇತಿಕ ಪ್ರತಿಭಟನಾ ನೀತಿಯನ್ನು ಜನತೆಗೆ ರವಾನಿಸುತ್ತಿದ್ದವು.

ಕಂಸನ ವಿರುದ್ಧ ಕೃಷ್ಣ ಹೋರಾಟ ಮಾಡಿದರೆ, ಬ್ರಿಟೀಷ್ ಪ್ರಭುತ್ವದ ವಿರುದ್ಧ ಜನರಲ್ಲಿ ದೇಶಭಕ್ತಿ ಉದ್ದೀಪಿಸುವ ಅಂಶವಾಗಿ ಅದು ಪ್ರತಿಫಲಿತವಾಗುತ್ತಿತ್ತು. ಇವೆಲ್ಲವೂ ಒಳಗೊಂಡ ಭಾರತೀಯ ಸಿನಿಮಾದ ಸಾಂಸ್ಕೃತಿಕ ಮತ್ತು ಕಲಾತ್ಮಕ ಮೌಲ್ಯವನ್ನು ಹೆಚ್ಚಿಸಿದ ಕೀರ್ತಿ ಬಂಗಾಳಿ ಚಿತ್ರರಂಗಕ್ಕೆ ಸಲ್ಲುತ್ತದೆ. 30ರ ದಶಕದಲ್ಲೇ ದೇಬಕಿ ಬೋಸ್ ನಿರ್ಮಿಸಿದ `ಸೀತ' ಅತ್ಯುತ್ತಮ ಪೌರಾಣಿಕ ಚಿತ್ರ ಮಾತ್ರವಲ್ಲ ಭಾರತೀಯ ಚಿತ್ರರಂಗದ ತಾಂತ್ರಿಕ ಹಾಗೂ ಕಲಾತ್ಮಕ ಸಾಮರ್ಥ್ಯವನ್ನು ದೃಢಪಡಿಸಿದ ಚಿತ್ರವೆನಿಸಿತು.

ಸಮಕಾಲೀನ ಸಮಸ್ಯೆಗಳ ಬಗ್ಗೆ ಖ್ಯಾತ ಕಾದಂಬರಿಕಾರರು, ಬರಹಗಾರರು ಬರೆದ ಕಾದಂಬರಿಗಳು, ಕತೆಗಳು ತೆರೆಯ ಮೇಲೆ ಬರಲಾರಂಭಿಸಿದವು. ರವೀಂದ್ರನಾಥ ಟ್ಯಾಗೋರ್, ಶರತ್‌ಚಂದ್ರ ಚಟರ್ಜಿ, ಬಂಕಿಮಚಂದ್ರ, ಖ್ಯಾಜಿ ನೂರುಲ್ ಇಸ್ಲಾಂ ಮೊದಲಾದವರು ಚಿತ್ರರಂಗದಲ್ಲಿ ತೊಡಗಿಸಿಕೊಂಡರು. ಶರತ್‌ಚಂದ್ರರ `ಜೀನಾ ಪಹೋನ', `ದೇವದಾಸ್', `ಮಂಜಿಲ್', `ಗೃಹದಾನ', `ವಾರಿ ದೀದಿ', `ಕಾಶೀನಾಥ್', `ಚೋಟಾಬಾಬು' ಮೊದಲಾದ ಕೃತಿಗಳು ತೆರೆಯ ಮೇಲೆ ಯಶಸ್ಸಾದವು. ಪಿ.ಸಿ. ಬರೂವ ಅಂದಿನ ಸಮಾಜದ ಸ್ಥಿತಿಗತಿಗಳನ್ನು ನಿರೂಪಿಸುವಲ್ಲಿ ತೋರಿದ ಜಾಣ್ಮೆ, ಮನುಷ್ಯ ಸ್ವಭಾವದ ವಿಭಿನ್ನ, ದ್ವಿಮುಖ ವ್ಯಕ್ತಿತ್ವದ ಅನಾವರಣ ಮಾಡಿದ್ದು ಹೊಸತನವೆನಿಸಿತ್ತು.

ಪಶ್ಚಿಮ ಬಂಗಾಳದಲ್ಲಿ ಸಾಹಿತಿಗಳ ಕೃತಿಗಳೆಲ್ಲಾ ಸಿನಿಮಾ ಆಗಿ ವೈಶಿಷ್ಟ್ಯತೆ ಮೆರೆದಂತೆ, ಮರಾಠಿಯಲ್ಲಿ ವಿ.ಎಸ್.ಖಾಂಡೇಕರ್, ಮಾಮ ವರ್ನೇಕರ್ ಮತ್ತು ಪಿ.ಕೆ.ಅತ್ರೆ ಅವರ ಕೃತಿಗಳು ಸಿನಿಮಾವಾಗಿ ಮೂಡಿಬರಲಾರಂಭಿಸಿದವು. ಗುಜರಾತಿನ ಕಾಣಿಕೆಯೂ ಸಾಮಾನ್ಯದ್ದಲ್ಲ. ಕೆ.ಎಂ. ಮುನ್ಶಿ ಪ್ರೇಮ್‌ಚಂದ್ ಮತ್ತು ರಮಣಲಾಲ್ ದೇಸಾಯಿ ಅವರ ಹೆಸರು ಮುನ್ನೆಲೆಗೆ ಬಂತು. ಮಹಾರಾಷ್ಟ್ರದಲ್ಲಿ ವಿ. ಶಾಂತಾರಾಂ ವಾಸ್ತವಿಕವಾದಿ. ಪ್ರಗತಿಪರ ಕತೆಗಳನ್ನು ಚಿತ್ರಿಸಲಾರಂಭಿಸಿದರು. `ದುನಿಯಾ ನಾ ಮಾನೆ', `ಆದ್ಮಿ', `ಡಾಕ್ಟರ್ ಕೊಟ್ನೀಸ್‌ಕಿ ಅಮರ್ ಕಹಾನಿ', `ದೋ ಆಂಖೆ ಬಾರಾ ಹಾಥ್' ಗಮನ ಸೆಳೆದವು. ರಾಜ್‌ಕಪೂರ್ ಅವರ `ಆಗ್', `ಬರ್‌ಸಾತ್', `ಆವಾರ', `ಶ್ರೀ-420', `ಜಾಗ್ತೆರಹೊ' ಮೊದಲಾದ ಚಿತ್ರಗಳೆಲ್ಲಾ ಆರಂಭಕಾಲದಲ್ಲಿ ಗಟ್ಟಿಕಥಾವಸ್ತುಗಳ ಮೂಲಕ ಭಾರತೀಯ ಚಿತ್ರರಂಗಕ್ಕೆ ಭದ್ರ ಬುನಾದಿಯನ್ನು ನಿರ್ಮಿಸಿವೆ.

1936ರಲ್ಲಿ ಅಂದರೆ ವಾಕ್ಚಿತ್ರ ಶಕೆ ಆರಂಭವಾದ ನಾಲ್ಕನೇ ವರ್ಷದಲ್ಲಿ ತೆರೆಕಂಡ `ಅಚ್ಯುತ ಕನ್ಯಾ' ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಮೈಲಿಗಲ್ಲು. ಹಿಮಾಂಶುರಾಯ್ ಕತೆ ಬರೆದು ನಿರ್ಮಿಸಿದ ಈ ಚಿತ್ರವನ್ನು ಫ್ರಾಂನ್ಸ್ ಓಸ್ವನ್ ನಿರ್ದೇಶಿಸಿದ್ದಾರೆ. ದೇವಿಕಾರಾಣಿ, ಅಶೋಕ್ ಕುಮಾರ್ ನಾಯಕ - ನಾಯಕಿಯರು. ಬಾಂಬೆ ಟಾಕೀಸಿನ ಕಾಣಿಕೆ ಇದು. ರೈಲ್ವೆ ಪಾಯಿಂಟ್ಸ್‌ಮನ್ ಆಗಿರುವ ಅಸ್ಪೃಶ್ಯನೊಬ್ಬನ ಪುತ್ರಿ ಕಸ್ತೂರಿಯನ್ನು ಆ ಗ್ರಾಮದ ಬ್ರಾಹ್ಮಣ ಸಮುದಾಯದ ನಾಯಕನ ಪುತ್ರ ಪ್ರತಾಪ್ ಪ್ರೀತಿಸುತ್ತಾನೆ. ಯುವತಿಯ ತಂದೆ ಹಾಗೂ ಯುವಕನ ತಂದೆ ಗೆಳೆಯರೇ ಆಗಿರುತ್ತಾರೆ. ಅಸ್ಪೃಶ್ಯ ಯುವತಿಯೊಡನೆ ಬ್ರಾಹ್ಮಣ ಯುವಕನ ಪ್ರೀತಿಯನ್ನು ಸಮಾಜ ಒಪ್ಪುವುದಿಲ್ಲ.

ಹರಿಜನ ಯುವತಿಯ ಮನೆಯಲ್ಲಿ ಪ್ರತಾಪ್ ಊಟ ಮಾಡಿದ ಸುದ್ದಿ ವ್ಯಾಪಿಸಿ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗುತ್ತದೆ. ಈ ನಡುವೆ ಆ ಗ್ರಾಮದ ವೈದ್ಯನೊಬ್ಬ ನೀಡಿದ ಔಷಧಿಯ ಅಡ್ಡ ಪರಿಣಾಮದಿಂದ ಹರಿಜನ ಯುವತಿಯ ತಂದೆ ತೀವ್ರ ಅಸ್ವಸ್ಥನಾದಾಗ, ಯುವಕನ ತಂದೆ ಅವನನ್ನು ತನ್ನ ಮನೆಗೆ ಕರೆತಂದು ಆರೈಕೆ ಮಾಡುತ್ತಾನೆ. ಸಂಪ್ರದಾಯವಾದಿ ಗ್ರಾಮಸ್ಥರು ಮತ್ತಷ್ಟು ಕೆರಳಿ, `ನಮ್ಮ ಜಾತಿಯನ್ನೇ ನೀನು ನಾಶ ಮಾಡುತ್ತಿದ್ದೀಯಾ' ಎಂದು ನಿಂದಿಸುತ್ತಾರೆ. ಅಸ್ಪೃಶ್ಯ ವ್ಯಕ್ತಿಯನ್ನು ಮನೆಯಿಂದ ಹೊರದೂಡಲು ಪ್ರತಾಪ್‌ನ ತಂದೆ ಒಪ್ಪುವುದಿಲ್ಲ.

`ಅಸ್ಪೃಶ್ಯರು ಮಾನವರಲ್ಲವೇ?' ಎಂದು ಪ್ರಶ್ನಿಸುತ್ತಾನೆ. ಜನ ಅವನ ಅಂಗಡಿಯನ್ನು ಲೂಟಿ ಮಾಡಿ ಹಿಂಸಾಚಾರ ಆರಂಭಿಸುತ್ತಾರೆ. 142 ನಿಮಿಷಗಳ ಈ ಚಿತ್ರ ಸಂಪೂರ್ಣವಾಗಿ ಎರಡು ವರ್ಗಗಳ ನಡುವಿನ ಸಂಘರ್ಷವನ್ನು ವಿವಿಧ ಕೋನಗಳಲ್ಲಿ ವಿಶ್ಲೇಷಿಸುತ್ತಾ ಹೋಗುತ್ತದೆ. ಅಸ್ಪೃಶ್ಯ ಯುವತಿಯ ಬಲಿದಾನದೊಂದಿಗೆ ಕತೆ ದುರಂತ ಅಂತ್ಯ ಕಾಣುತ್ತದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಿಳೆಯರ ಸ್ಥಾನಮಾನದ ಬಗ್ಗೆ, ಜಾತಿ ಸಂಘರ್ಷದ ಬಗ್ಗೆ, ಆರ್ಥಿಕ ಅಸಮತೋಲನದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದ್ದಂತಹ ದಿನಗಳಲ್ಲಿ `ಅಚ್ಯುತ ಕನ್ಯಾ' ಸಾಮಾಜಿಕ ನ್ಯಾಯ ಮತ್ತು ಅಸಮಾನತೆಯ ಬಗ್ಗೆ ಮಾತನಾಡಿತು.

1937ರಲ್ಲಿ ತೆರೆಕಂಡ `ದುನಿಯಾ ನಾ ಮಾನೆ' ವಿ. ಶಾಂತಾರಾಂ ನಿರ್ದೇಶನದ ಸ್ಮರಣೀಯ ಚಿತ್ರ. ಮರಾಠಿಯಲ್ಲಿ ಈ ಚಿತ್ರ `ಕುಂಕು'ವಾಗಿತ್ತು. ಹಣೆಗೆ ಕುಂಕುಮ ಇಟ್ಟುಕೊಳ್ಳುವುದು ಭಾರತೀಯ ನಾರಿಯ ಗುಣ. ಆದರೆ ಇದು ವಿಧವೆಯರಿಗೆ ಅಲ್ಲ. ವಿಧವೆಯರು ಹಣೆಗೆ ಕುಂಕುಮವಿಟ್ಟುಕೊಂಡರೆ `ದುನಿಯಾ ನಾ ಮಾನೆ' (ಪ್ರಪಂಚ ಅದನ್ನು ಒಪ್ಪದು).

ಇಂತಹ ಒಂದು ಕ್ರಾಂತಿಕಾರಿ ವಸ್ತುವನ್ನಿಟ್ಟುಕೊಂಡು ವಿ. ಶಾಂತಾರಾಂ, ವಿಧವಾ ವಿವಾಹ, ಬಾಲ್ಯ ವಿವಾಹದಂತಹ ಸಮಸ್ಯೆಯನ್ನು ಚರ್ಚಿಸಿದ್ದಾರೆ. ಅಂದಿನ ದಿನದಲ್ಲಿ ಸಾಮಾಜಿಕವಾಗಿ ಆಘಾತಕ್ಕೆ ಒಳಗಾಗುವಂತಹ ಕತೆ ಇದು. ಮುದುಕನೊಬ್ಬನ ಜೊತೆ ಸಣ್ಣ ಬಾಲಕಿಯ ಮದುವೆ ನಡೆದುಹೋಗುತ್ತದೆ. ತನಗಾದ ಅನ್ಯಾಯದ ವಿರುದ್ಧ ಬಾಲಕಿ ಸಿಡಿದೇಳುತ್ತಾಳೆ. 1930ರ ದಶಕದಲ್ಲಿ ಸಮಾಜದಲ್ಲಿ ಸಹಜವೇ ಆಗಿದ್ದ ವಾಸ್ತವ ಸ್ಥಿತಿ. ಮದುವೆ ಎಂಬುದು ಪವಿತ್ರ ಬಂಧ. ಕೈ ಹಿಡಿದವನೇ ಕಡೆಯವರೆಗೂ ಎನ್ನುವ ನಂಬಿಕೆಯೇ ಗಟ್ಟಿಯಾಗಿದ್ದ ದಿನಗಳವು.

ಸಿನಿಮಾ ಅದನ್ನು ಹೇಳುತ್ತಾ, ಮಹಿಳೆಯರ ತಾಕಲಾಟಗಳನ್ನು ಚರ್ಚಿಸುತ್ತದೆ. ಇಲ್ಲೊಬ್ಬ ಮುದುಕ. ವಿಧುರ. ಮದುವೆ ವಯಸ್ಸಿನ ಮಕ್ಕಳೂ ಇರುತ್ತಾರೆ. ಬಾಲಕಿಯೊಂದಿಗೆ ಮದುವೆಯಾಗುತ್ತಾನೆ. ತನಗಾದ ಅನ್ಯಾಯದ ಬಗ್ಗೆ ಬಾಲಕಿ ಅಸಮಾಧಾನಗೊಂಡಿರುವುದರಿಂದ ಸಂಸಾರ ದಾರಿ ತಪ್ಪುತ್ತದೆ. ಸ್ವಯಂ ವಿಮರ್ಶೆ ಮಾಡಿಕೊಳ್ಳುವ ವೃದ್ಧ, ಅವಳ ಹಣೆಯ ಮೇಲಿರುವ ಕುಂಕುಮವನ್ನು ಅಳಿಸಿ, ನೀನೀಗ ವಿಧವೆ, ನೀನು ಮತ್ತೊಂದು ವಿವಾಹವಾಗಲು ಅಭ್ಯಂತರವಿಲ್ಲ ಹೋಗು ಎನ್ನುತ್ತಾನೆ. ಆದರೆ ಯುವತಿ ಅದನ್ನು ಒಪ್ಪುವುದಿಲ್ಲ. `ಸಮಾಜ ಇದನ್ನು ಒಪ್ಪುವುದಿಲ್ಲ. ಗಂಡ ಜೀವಂತ ಇರುವಾಗ ನಾನು ಹೇಗೆ ವಿಧವೆ ಆಗಲು ಸಾಧ್ಯ' ಎಂದವಳು ಪ್ರಶ್ನಿಸುತ್ತಾಳೆ.

ನಾನು ಸಾಯುವುದೇ ಇದಕ್ಕೆ ಪರಿಹಾರ ಎಂದು ತೀರ್ಮಾನಿಸಿದ ವೃದ್ಧ, ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. `ಯುವತಿ ಮರು ಮದುವೆ ಮಾಡಿಕೊಳ್ಳಲೇಬೇಕು' ಎಂಬ ಒತ್ತಾಯದ ಪತ್ರ ಬರೆದಿಟ್ಟು ಸತ್ತಿರುತ್ತಾನೆ. ವಿಧವಾ ವಿವಾಹ ಕೂಡ ಆ ದಶಕದಲ್ಲಿ ಕ್ರಾಂತಿಕಾರಿ ಹೆಜ್ಜೆಯೇ ಆಗಿತ್ತು. ಯುವತಿ ಸಂದಿಗ್ಧಕ್ಕೆ ಸಿಲುಕುತ್ತಾಳೆ. ಅಂತ್ಯದಲ್ಲಿ ಹಿನ್ನೆಲೆಗಾಯನ `ನಿನ್ನ ಹೃದಯ ಪರಿಶುದ್ಧವಾಗಿರಬೇಕಾದರೆ, ಯಾರಿಗೇಕೆ ಹೆದರಬೇಕು? ಹೆದರಿಕೆಯಿಲ್ಲದೆ ಮುನ್ನುಗ್ಗು. ಭವಿಷ್ಯ ರೂಪಿಸಿಕೋ' ಎಂಬ ಹಾಡು ನಾಯಕಿಯ ಚಿಂತನಾದೃಶ್ಯದ ಮೇಲೆ ಕೇಳಿಬರುತ್ತದೆ.

ಚಿಂತನೆಗೆ ಒಳಪಡಿಸುವ ಇಂತಹ ಚಿತ್ರಗಳು ಆರಂಭದ ದಿನಗಳಲ್ಲಿ ಪ್ರೇಕ್ಷಕರನ್ನು ರೂಪಿಸಿದವು. ಅದಕ್ಕೆ ಪ್ರತಿಕ್ರಿಯಿಸುತ್ತಲೇ ಪ್ರೇಕ್ಷಕರು ಸಿನಿಮಾ ರಂಗವನ್ನು ಬೆಳೆಸಿದರು. ಪ್ರಭಾತ್ ಸಂಸ್ಥೆ ಹಾಗೂ ವಿ. ಶಾಂತಾರಾಂ ಭಾರತೀಯ ಚಿತ್ರರಂಗದಲ್ಲಿ ಮರೆಯಲಾಗದ ಪುಟಗಳನ್ನು ಬೆಳೆಸಿದ್ದು ಹೀಗೆ.

ಇಂತಹ ಬುನಾದಿಯ ಮೇಲೆ ಭಾರತೀಯ ಸಿನಿಮಾ ರಂಗದಲ್ಲಿ ಸಾಮಾಜಿಕ ಚಿತ್ರಗಳ ಚಳವಳಿಯೇ ಆರಂಭವಾಗಿರುವುದು ಇತಿಹಾಸದುದ್ದಕ್ಕೂ ಕಾಣಬರುತ್ತದೆ. ಬಿಮಲ್‌ರಾಯ್ ಅವರ `ದೋ ಬಿಗಾ ಜಮೀನ್' (1953) ಕೂಡ ಆರಂಭದ ದಶಕದ ಸ್ಮರಣಿಯ ಚಿತ್ರ. ಗ್ರಾಮೀಣ ಬಡತನವನ್ನು, ರೈತರ ಶೋಷಣೆಯನ್ನು ದಟ್ಟವಾಗಿ ಚಿತ್ರಿಸುವ ಮೂಲಕ ಗ್ರಾಮೀಣ ಭಾರತದತ್ತ ಚಿತ್ರ ವಾಸ್ತವಿಕ ನೆಲೆಗಟ್ಟಿನ ಚಿತ್ರಣ ಕೊಡುತ್ತದೆ. ಬರದಿಂದ ತತ್ತರಿಸಿ ಬೆಳೆ ಕೈ ಕೊಟ್ಟಾಗ ರೈತ ಶಂಭು ತನ್ನಲ್ಲಿದ್ದ ಎರಡು ಎಕರೆ ಜಮೀನನ್ನು ಜಮೀನ್ದಾರನ ಬಳಿ ಒತ್ತೆ ಇಡುತ್ತಾನೆ. ಮಳೆ ಬಂದು ಪರಿಸ್ಥಿತಿ ಸುಧಾರಣೆ ಆದ ನಂತರ ಮತ್ತೆ ಆ ಜಮೀನು ವಾಪಸು ಪಡೆಯುವ ರೈತನ ಹಂಬಲ ಈಡೇರುವುದಿಲ್ಲ.

ಜಮೀನ್ದಾರ ಆ ಸ್ಥಳವನ್ನು ದೊಡ್ಡ ಕಾರ್ಖಾನೆ ನಿರ್ಮಿಸುವುದಕ್ಕೆ ನೀಡಿರುತ್ತಾನೆ. ಆದರೆ ತನ್ನ ನೆಲ ಬಿಟ್ಟುಕೊಡಲು ತಯಾರಿಲ್ಲದ ರೈತ ಕಾನೂನು ಹೋರಾಟ ಆರಂಭಿಸುತ್ತಾನೆ. ತಾನು ಪಡೆದದ್ದಕ್ಕಿಂತ ಹೆಚ್ಚಾಗಿರುವ ಸಾಲದ ಮೊತ್ತವನ್ನು ಗಡುವಿನೊಳಗೆ ತೀರಿಸಲು ನಗರಕ್ಕೆ (ಕೋಲ್ಕತ್ತಾ)ಕ್ಕೆ ಬಂದು ಸೇರಿ, ಬದುಕಿನ ನಾನಾ ಮುಖಗಳನ್ನು, ಜನರ ಹಲವಾರು ಮುಖವಾಡಗಳನ್ನು ಕಾಣುತ್ತಾನೆ.

ಕೊನೆಯ ಹಂತದಲ್ಲಿ ಇಡೀ ರೈತ ಕುಟುಂಬ ಹಳ್ಳಿಗೆ ಹಿಂತಿರುಗಿದಾಗ ಅವನ ನೆಲದಲ್ಲಿ ದೊಡ್ಡ ಕಾರ್ಖಾನೆಯೊಂದು ತಲೆ ಎತ್ತಿರುತ್ತದೆ. ಇಂದಿಗೂ ನಡೆಯುತ್ತಿರುವ ಇಂತಹ ಹೋರಾಟದ ಒಂದು ಮಗ್ಗುಲನ್ನು ವಿಮಲ್‌ರಾಯ್ ವಾಸ್ತವಿಕ ನೆಲೆಗಟ್ಟಿನಲ್ಲಿ ಚಿತ್ರಿಸಿದ್ದರು. ಚಿತ್ರರಂಗ ಇಂತಹ ಎಳೆಗಳ ಮೂಲಕವೇ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾರತೀಯ ಚಿತ್ರರಂಗದ ಸತ್ವವನ್ನು ಪ್ರತಿಪಾದಿಸುತ್ತಾ ಬಂದಿತು. ಆನಂತರ ಸತ್ಯಜಿತ್‌ರಾಯ್ ಅದಕ್ಕೆ ಹೊಸ ಆಯಾಮವನ್ನೇ ಒದಗಿಸಿದರು.

ಹಿಂದಿ ಮರಾಠಿ ಹಾಗೂ ಬಂಗಾಳಿ ಚಿತ್ರರಂಗದಲ್ಲಿ ಆದಂತಹ ಇಂತಹ ಪ್ರಯೋಗಗಳು ರಾಷ್ಟ್ರೀಯತೆ, ನಮ್ಮ ಭಾಷೆ, ನಮ್ಮ ನೆಲೆಯನ್ನು ಪ್ರತಿಫಲಿಸುತ್ತಾ ಮನೋಭೂಮಿಕೆಯೊಂದನ್ನು ರೂಪಿಸಿತು. ಈ ಮೌಲ್ಯಗಳನ್ನು ಎತ್ತಿಕೊಂಡ ಪ್ರಾದೇಶಿಕ ಭಾಷಾ ಚಿತ್ರಗಳು ಹದಿನೆಂಟು ಭಾಷೆಗಳಲ್ಲಿ ವಿಚಾರ ಧಾರೆಯನ್ನು ಪ್ರವಹಿಸಲಾರಂಭಿಸಿದವು. ಹಿಂದಿ, ಬಂಗಾಳಿ ಹಾಗೂ ಮರಾಠಿ ಭಾಷೆಯಲ್ಲಿ ಆದಂತಹ ಕ್ರಾಂತಿಕಾರಿ ಪ್ರಯೋಗ, ದಕ್ಷಿಣ ಭಾರತದಲ್ಲಿ ಮತ್ತೂ ಪ್ರಖರವಾಗಿ ಬೆಳಗಲಾರಂಭಿಸಿದ್ದು ಭಾರತೀಯ ಚಿತ್ರರಂಗಕ್ಕೆ ಮತ್ತಷ್ಟು ಬಲ ತುಂಬಿತು. ಅಂತಹ ಮಹತ್ವದ ಹೆಜ್ಜೆ ಗುರುತುಗಳನ್ನು ಮುಂದಿನ ವಾರ ಓದೋಣ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT