ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತೀಕರಣದಿಂದ ಕಿರಿದಾಗುತ್ತಿರುವ ‘ಅವಳ’ ಜಗತ್ತು

Last Updated 28 ಮಾರ್ಚ್ 2016, 19:58 IST
ಅಕ್ಷರ ಗಾತ್ರ

ಜಗತ್ತಿನ ವಿಭಿನ್ನ ಸಾಮ್ರಾಜ್ಯಗಳು ಅಥವಾ ಸಂಸ್ಕೃತಿಗಳ ಪ್ರಾಚೀನ ಇತಿಹಾಸವನ್ನು ಮಹಿಳೆಯ ದೃಷ್ಟಿಯಿಂದ ಅಧ್ಯಯನ ಮಾಡಹೊರಟರೆ ಅವು ಬಹುಪಾಲು ತಾತ್ವಿಕ ಮತ್ತು ಆರ್ಥಿಕ ವಿರೋಧಾಭಾಸಗಳ ಕಂತೆಗಳಂತೆ ಇರುವುದನ್ನು ಗುರುತಿಸಬಹುದು.

ಜಾಗತೀಕರಣ ಎಂಬ ಮಹಾಮಾಯೆ ಆವರಿಸಿಬಿಟ್ಟಿರುವ ಈ ಕಳೆದ ಕಾಲು ಶತಮಾನದ ಆಧುನಿಕ ಇತಿಹಾಸವನ್ನು  ಅಧ್ಯಯನ ಮಾಡಹೊರಟರೆ, ಈ ವಿರೋಧಾಭಾಸಗಳೇ ಜಾಗತೀಕರಣಗೊಳ್ಳುತ್ತಿರುವ ಸತ್ಯ ನಮಗೆ ಎದುರಾಗುತ್ತದೆ.

ಅಭಿವೃದ್ಧಿ ಎಂಬ ಸಾಮಾಜಿಕ ಆಶಯವು ಜಾಗತೀಕರಣ ಎಂಬ ಆರ್ಥಿಕ ಆಶಯವಾಗಿ ಬದಲಾಗಿ ಬಹಳ ಕಾಲವಾಗಿದೆ. ಜಾಗತೀಕರಣದ ಬಿರುಗಾಳಿಯಲ್ಲಿ ಸುಸ್ಥಿರ ಅಭಿವೃದ್ಧಿ ಎಂಬ ಪರಿಕಲ್ಪನೆ ಆರುವ ದೀಪದಂತೆ ಹೊಯ್ದಾಡುತ್ತಿದೆ.

ಯಾವುದೇ ದೇಶದಲ್ಲಿ ಹೊಸ ಆರ್ಥಿಕ ಬೆಳವಣಿಗೆ ಆದಾಗಲೂ ‘ಕೈಬೆರಳೆಣಿಕೆಯಷ್ಟು ಗೆದ್ದವರು- ಕೋಟಿಗಟ್ಟಲೆ ಸೋತವರು’ ಇದ್ದೇ ಇರುವುದನ್ನು ಚರಿತ್ರೆ ದಾಖಲಿಸಿದೆ.

ಆದರೆ ಈಗ ಇಡೀ ಜಗತ್ತೇ ಹೊಸ ಆರ್ಥಿಕ ಬೆಳವಣಿಗೆಯನ್ನು ಅಪ್ಪಿಕೊಂಡಿರುವಾಗ, ಗೆದ್ದವರು- ಸೋತವರ ಪ್ರಮಾಣವೂ ಜಗದಗಲ ಹರಡಿಕೊಂಡಿದೆ. ಜಾಗತೀಕರಣವು ದೇಶಗಳ ನಡುವೆ ಇದ್ದ ಗೆರೆಗಳನ್ನು ಅಳಿಸಿಹಾಕಿದೆ ಎಂದು ಹೇಳುತ್ತಾರೆ; ಆದರೆ ಅದು ಎಲ್ಲ ಕಡೆ ಶ್ರೀಮಂತರು ಮತ್ತು ಬಡವರ ನಡುವೆ ಇದ್ದ ಗೆರೆಗಳನ್ನು ಗೋಡೆಗಳಾಗಿ ಬೆಳೆಸಿದೆ ಎಂಬುದನ್ನು ಹೇಳದೆ ಸುಮ್ಮನಿರಲು ಸಾಧ್ಯವೇ?

ಸರ್ಕಾರಗಳು ಮೊದಲಿನಿಂದಲೂ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಿವೆ. ಆದರೆ ಈಗ ಅಭಿವೃದ್ಧಿ ಮಂತ್ರವನ್ನು ಬಾಯಲ್ಲಿ ಜಪಿಸುತ್ತಾ ಜಾಗತೀಕರಣದ ಯಜ್ಞಕ್ಕೆ ಹವಿಸ್ಸು ಸುರಿಯುತ್ತಿವೆ. ಜಾಗತೀಕರಣದಿಂದ ಯಾರಿಗೆ ಏನು ಲಾಭವಾಯಿತು ಎಂಬುದರ ಲೆಕ್ಕ ತೆಗೆಯಲು ಇದು ಸಕಾಲ. ಅಭಿವೃದ್ಧಿ ಅಥವಾ ಜಾಗತೀಕರಣದಿಂದ ಉದ್ಧಾರ (?)

ಎಂದು ಏನಾದರೂ ಕರೆಯಲಿ, ಅದರ ಪರಿಣಾಮಗಳನ್ನು ತಿಳಿಯಲು ಸರ್ವೇಸಾಮಾನ್ಯವಾದ ಒಂದೇ ಅಳತೆಗೋಲನ್ನು ಬಳಸುವುದು ಸಾಧ್ಯವಿಲ್ಲ. ಸಮಾಜದಲ್ಲಿ ವಿವಿಧ ಗುಂಪುಗಳ ಮೇಲೆ ಅದರ ಪರಿಣಾಮವನ್ನು ಪ್ರತ್ಯೇಕವಾಗಿಯೇ ಗಮನಿಸಬೇಕು.

ಭಾರತೀಯ ಸಮಾಜದ ವಿಚಾರದಲ್ಲಂತೂ ಜಾಗತೀಕರಣ ಕುರಿತ ಸಮಕಾಲೀನ ಚರ್ಚೆ, ಸಂಕಥನ ಇವೆಲ್ಲ ತಳಸಮುದಾಯಗಳನ್ನು ಎಷ್ಟರಮಟ್ಟಿಗೆ ಒಳಗೊಂಡಿದೆ ಎಂಬ ನೆಲೆಯಲ್ಲೇ ನಡೆಯಬೇಕು; ಹಾಗೆಯೇ ‘ಹೆಣ್ಣಿನ ಹಾಜರಿ’ಯ ನೆಲೆಯಲ್ಲಿಯೂ ನಡೆಯಬೇಕೆನ್ನುವುದು ಅನಿವಾರ್ಯ.

ಆ ನೆಲೆಯಿಂದ ನೋಡಿದರೆ, ಜಾಗತಿಕ ಉದಾರೀಕರಣದ ಫಲವಾದ ನವ ಆರ್ಥಿಕತೆ ತಂದು ಸುರಿದ ಯೋಜನೆಗಳು ಲಕ್ಷಾಂತರ, ಉದ್ಯಮಗಳು ಕೋಟ್ಯಂತರ, ಅವಕಾಶಗಳು ನಿರಂತರ- ಆದರೆ ಎಲ್ಲೂ ಸರಿಯಾಗಿ ‘ಅವಳ’ ಪತ್ತೆ ಇಲ್ಲ! ಉದಾರೀಕರಣ ಹೆಣ್ಣಿನ ವಿಚಾರಕ್ಕೆ ಉದಾರವಾಗಿ ನಡೆದುಕೊಳ್ಳದಿರುವುದೇ ಆಧುನಿಕ ಆರ್ಥಿಕ ಚರಿತ್ರೆಯ ಮುಖ್ಯ ಲಕ್ಷಣ. ಆದ್ದರಿಂದಲೋ ಏನೋ ‘ಜಾಗತೀಕರಣ ಎನ್ನುವುದು ಒಬ್ಬ ಪುರುಷ’ ಎಂದು ಕೆಲವರು ವಿವರಿಸುವುದುಂಟು.

ಮೇಲ್ನೋಟಕ್ಕೆ ಜಾಗತೀಕರಣ ಎಲ್ಲರಿಗೂ ಅಪಾರ ಅವಕಾಶಗಳನ್ನು ಒದಗಿಸಿ ಉದ್ಧಾರ ಮಾಡುತ್ತಿದೆ ಎಂದು ಭಾಸವಾಗುತ್ತದೆ. ಅದನ್ನೇ ನಂಬುತ್ತ ಅಥವಾ ನಂಬಿಸುತ್ತ ‘ಮಹಿಳೆಯರ ವಿಮೋಚನೆ ಆಗಿಬಿಟ್ಟಿದೆ, ನೀವೀಗ ಎಲ್ಲ ಕಡೆ ಕಾಣಿಸುತ್ತಿದ್ದೀರ. ನಿಮಗೆ ಸಿಗುವುದೆಲ್ಲ ಸಿಕ್ಕಾಗಿದೆ. ನೀವು ಹೊಸದಾಗಿ ಇನ್ನೇನನ್ನೂ ಕೇಳಕೂಡದು’ ಎಂದು ಕೊಡುವ- ನೀಡುವ ದಾತರು ಮಹಿಳೆಯರ ಬಾಯಿಮುಚ್ಚಿಸುವುದೂ ಹೆಚ್ಚಾಗಿದೆ.

ಹಿಂದೆ ಸಾಮ್ರಾಜ್ಯಶಾಹಿಯನ್ನು ಒಂದು ಸಹಕಾರಿ ಉದ್ಯಮ ಎಂದು ಕರೆಯಲಾಗಿತ್ತು. ಅದರ ಹಾಗೆ ಅಥವಾ ಅದಕ್ಕಿಂತ ಹೆಚ್ಚಾಗಿ, ಜಾಗತೀಕರಣ ಕೂಡ ಅಧಿಕಾರ ಉಳ್ಳವರ ಮತ್ತು ಸಂಪತ್ತು ಉಳ್ಳವರ ನಡುವಿನ ಒಂದು ಸಹಕಾರಿ ಉದ್ಯಮ. ಜಾಗತೀಕರಣದಿಂದ ಜಗತ್ತೇ ಒಂದು ಬೃಹತ್ ಮಾರುಕಟ್ಟೆ- ಇದರಲ್ಲಿ ಹೆಣ್ಣಿನ ಪಾಲು, ಕಳೆದುಹೋದ ಸರಕು.

ಜಾಗತೀಕರಣವನ್ನು ತಡೆಯಲು ಅಥವಾ ಅದನ್ನು ಹಿಂದಕ್ಕೆ ತಿರುಗಿಸಲು ಸಾಧ್ಯವೇ ಇಲ್ಲ; ಅದರ ಪರವಾಗಿ ಅಥವಾ ಅದರ ವಿರೋಧವಾಗಿ ಮಾತನಾಡಿ ಅದರ ಪರಿಣಾಮ ಕಡಿಮೆ ಮಾಡಲೂ ಸಾಧ್ಯವಿಲ್ಲ ಎನ್ನುವುದೂ ಎಲ್ಲರಿಗೆ ಗೊತ್ತು. ಈಗ ಯಾವುದೋ ಒಂದು ಉದ್ಯಮದ ಬಿಡಿಬಿಡಿ ಕೆಲಸಗಳಿಗೆ ದುಡಿಯುವ ಜನ ಎಲ್ಲ ದೇಶಗಳಲ್ಲೂ ಇರುವುದರಿಂದ, ದುಡಿಮೆಯ ದೃಷ್ಟಿಯಿಂದ ಗಡಿಗಳಿಲ್ಲದ ಜಗತ್ತು ರೂಪಗೊಂಡು ‘ಗಡಿಗಳಿಲ್ಲದ ದುಡಿವ ಜನತೆ’ ಉದ್ಭವಿಸಿದ್ದಾರೆ. 

ಹಿಂದೆ ಕೇವಲ ಕೆಲವು ದೊಡ್ಡ ಕಂಪೆನಿಗಳು ಇದ್ದವು, ಈಗ ಹಲವಾರು ಕಾರ್ಪೊರೇಟ್ ಸಾಮ್ರಾಜ್ಯಗಳು ಇವೆ. ಈಗ ಎಲ್ಲವೂ ಅತಿಯಾಗಿರುವಂತೆ, ಅಸಮಾನತೆಯೂ ಅತಿಯಾಗಿದೆ, ಇದನ್ನು ಯಾರ್ಯಾರು ಹಂಚಿಕೊಂಡಿದ್ದಾರೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.  ಅಭಿವೃದ್ಧಿಯ ದೇಸೀ ಪರಿಕಲ್ಪನೆಗಳು ಮರೆಯಾಗಿ, ಪಾಶ್ಚಾತ್ಯ ದೇಶಗಳ ಆಧುನೀಕರಣದ ಅನುಕರಣೆಯೇ ಜಾಗತೀಕರಣ ಎಂಬ ವ್ಯಾಖ್ಯಾನವನ್ನು ನಮ್ಮ ದೇಶವೂ ಒಪ್ಪಿಕೊಂಡಿದೆ.

ಮುಕ್ತ ಮಾರುಕಟ್ಟೆ, ಮುಕ್ತ ವ್ಯಾಪಾರ, ಉತ್ಪಾದನೆಯ ಬೃಹತ್ ಪ್ರಮಾಣ, ಕೆಲವರಿಗೆ ಮಾತ್ರ ದಕ್ಕುವ ಬಂಡವಾಳದ ಮುಕ್ತ ಹರಿವು, ಕೆಲವರಿಗೆ ಮಾತ್ರ ಸಿಗುವ ಮುಕ್ತ ರಿಯಾಯಿತಿ, ವಿನಾಯಿತಿ - ಇವೆಲ್ಲದರಲ್ಲಿ ಸಾಮಾನ್ಯ ಜನರಿಗೆ ಏನು ಸಿಗುತ್ತದೆ ಎನ್ನುವುದರ ಬಗ್ಗೆ ಸರ್ಕಾರವಂತೂ ಚಕಾರ ಎತ್ತುವುದಿಲ್ಲ. ಜಾಗತೀಕರಣದ ಪರಿಣಾಮವಾಗಿ, ನಮ್ಮ ಮುತ್ತೈದೆಯ  ಹಣೆಯ ಮೇಲಿನ ಕುಂಕುಮವೂ ನೆರೆಯ ದೇಶದ ಉದ್ಯಮ ವಲಯದ  ಸರಕಾಗಿ ಮನೆಗೆ ಬರುತ್ತದೆ. ನಮ್ಮ ಮನೆಯ ತೊಟ್ಟಿಲಿನಲ್ಲಿ ಮಲಗುವ ಮುದ್ದು ಮಗು, ಜಾಗತಿಕ ಮಟ್ಟದ ಹತ್ತಾರು ಬೃಹತ್ ಉದ್ಯಮಗಳ ಮಹಾಗ್ರಾಹಕನಾಗಿ ಬೆಳೆಯುತ್ತದೆ.

ಸಣ್ಣಪುಟ್ಟ ಕಸುಬುಗಳಲ್ಲಿ ಬದುಕು ಕಟ್ಟಿಕೊಳ್ಳುವುದು ನಮ್ಮ ದೇಶದ ಯುವಜನರಿಗೆ ಹೊಸದೇನೂ ಅಲ್ಲ. ಆದರೆ ಈಗ ‘ಸಣ್ಣ ಸ್ವಂತ ಉದ್ಯಮ ಶುರುಮಾಡಿ’ ಎಂಬ ಹೊಸಮಂತ್ರ ಕೇಳುತ್ತಿದೆ. ಏಕೆಂದರೆ, ಜಾಗತೀಕರಣದ ಮಹಾಯಜ್ಞಕ್ಕೆ ಎಷ್ಟು ಶತಕೋಟಿ ಅದೃಶ್ಯ ಸೇವಾಕರ್ತರಿದ್ದರೂ ಸಾಲದು. ನಮ್ಮ ನೆಲಮೂಲದ ಕೋಟ್ಯಂತರ ಗುಡಿಕೈಗಾರಿಕೆಗಳನ್ನು ಜಾಗತೀಕರಣ ನಾಶಮಾಡಿದೆ. ಆದರೆ ದೇಶಾನುದೇಶಗಳಲ್ಲಿ ಪೂರಕವಾಗಿರುವ ಕೋಟ್ಯಂತರ ಘಟಕಗಳು ಹೊಸದಾಗಿ ಆರಂಭವಾಗಿವೆ. ಇವುಗಳ ಪರಸ್ಪರ ಅವಲಂಬನೆಯೇ ಜಾಗತೀಕರಣದ ದಿವ್ಯಮಂತ್ರ.

ಈ ದಿವ್ಯಮಂತ್ರದಿಂದಾಗಿ ನೋಡನೋಡುತ್ತ ಉದ್ಭವಗೊಂಡ ಲಕ್ಷಾಂತರ ಉದ್ಯಮಗಳು, ಹೆಚ್ಚಿದ ಸಾವಿರಾರು ಬಗೆಯ  ಉದ್ಯೋಗಾವಕಾಶಗಳು, ಹಣ ಸಂಪಾದನೆಗೆ ತೆರೆದ ಹಲವು ದಾರಿಗಳು, ಅದರಿಂದ ಹೆಚ್ಚಿದ ಆತ್ಮವಿಶ್ವಾಸ, ತಕ್ಕಮಟ್ಟಿಗೆ ಸಿಕ್ಕ ಸ್ವಾತಂತ್ರ್ಯ, ಬೇಕಾದುದನ್ನು ಕೊಳ್ಳಲು ಒದಗಿದ ಚೂರುಪಾರು ಧೈರ್ಯ ಇವೆಲ್ಲವನ್ನೂ ಕಳೆದ ಕಾಲು ಶತಮಾನದಲ್ಲಿ ನಮ್ಮ ದೇಶದ ಹೆಣ್ಣುಮಕ್ಕಳು ಇದೆಮೊದಲೆಂಬಂತೆ ಅನುಭವಿಸುತ್ತಿದ್ದಾರೆ.

ಇದನ್ನು ‘ಅಭಿವೃದ್ಧಿ’ ಅಥವಾ ‘ಸಮಾನತೆ’ ಎಂದು ಕರೆದುಬಿಡಲು ಎಲ್ಲರಿಗೂ ತುದಿನಾಲಿಗೆಯ ತವಕವಿದೆ. ಇನ್ನು ಆರೇಳು ಬ್ಯಾಂಕ್‌ಗಳಲ್ಲಿ ಅತ್ಯುಚ್ಚ ಸ್ಥಾನಗಳಲ್ಲಿರುವ ‘ಮಹಾಲಕ್ಷ್ಮಿ’ಯರು, ಸಾವಿರಾರು ಐಟಿ ಕಂಪೆನಿಗಳಲ್ಲಿ ಕೆಲಸ ಮಾಡುವ ಯುವತಿಯರು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರು, ಅತ್ಯಾಧುನಿಕತೆಯನ್ನು ಆವಾಹಿಸಿಕೊಂಡಿರುವ ‘ಮಾಡ್’ ಮಹಿಳೆಯರು- ಇತ್ಯಾದಿ ಆಯ್ದ ಕೆಲವರನ್ನು ಮಿರಮಿರ ಮಿಂಚಲೆಂದು ಜಾಗತೀಕರಣದ ಷೋಕೇಸ್‌ನಲ್ಲಿ ಕೂರಿಸಲಾಗಿದೆ. ಹಾಗಾದರೆ ಜಾಗತೀಕರಣದಿಂದ ಭಾರತೀಯ ಮಹಿಳೆಗೆ ಏನೂ ಲಾಭವಾಗಿಲ್ಲವೇ?

ಜಾಗತೀಕರಣಕ್ಕೆ ಹೆಣ್ಣೂ ಒಂದು ಉಪಕರಣ. ತಮಗೆ ಒದಗಿದ ಹೊಸ ಅವಕಾಶಗಳ ನೆಲೆಯಲ್ಲಿ  ಹೆಣ್ಣುಮಕ್ಕಳು ಅದನ್ನು ತ್ರಿಕರಣಪೂರ್ವಕವಾಗಿ ಒಪ್ಪಿಕೊಳ್ಳುವುದು ಅನಿವಾರ್ಯ. ಜಾಗತೀಕರಣ ಕೋಟ್ಯಂತರ ಹೆಣ್ಣುಮಕ್ಕಳಿಗೆ ಹೊಸ ಉದ್ಯಮಗಳಲ್ಲಿ ಕೆಲಸ ಕೊಟ್ಟಿದೆ ನಿಜ, ಆದರೆ ಕೋಟ್ಯಂತರ ರೈತ ಕುಟುಂಬಗಳ, ಕುಲಕಸುಬು ಮಾಡುತ್ತಿದ್ದ ಕುಟುಂಬಗಳ ಹೆಣ್ಣುಮಕ್ಕಳ ಅವಕಾಶ ಕಸಿದಿದೆ.

ಅವರ ಆದಾಯ ಕಡಿಮೆ ಮಾಡಿ ಬಡತನ ಹೆಚ್ಚಿಸಿ ಅವರು ಗುಳೇ ಹೋಗುವಂತೆ ಮಾಡಿದೆ, ಅಪರಿಚಿತ ದಾರಿಗಳಿಗೆ ದೂಡಿದೆ. ಉದ್ಯಮಗಳಲ್ಲಿ ದುಡಿಯುತ್ತಿರುವ ಈ ಹೊಸ ಮಹಿಳಾ ಕಾರ್ಮಿಕರ ತಲೆಯಲ್ಲಿ ಪ್ರಶ್ನೆ ಏಳುವಂತಿಲ್ಲ, ಪ್ರಜ್ಞೆ ಬೆಳೆಯುವಂತಿಲ್ಲ. ಕೆಲಸದ ಸ್ಥಳಕ್ಕೆ ಅಗತ್ಯವಾದ ದೃಷ್ಟಿಕೋನ ರೂಢಿಸಿಕೊಳ್ಳದಿದ್ದರೆ ಅವರಿಗೆ ಉಳಿಗಾಲವಿಲ್ಲ.

ಉದ್ಯಮ ವಲಯದ ಉನ್ನತ ಮಟ್ಟಗಳಲ್ಲಿ ಅಲ್ಪಸ್ವಲ್ಪ ಮಟ್ಟಿಗೆ ಅಧಿಕಾರ ಹಂಚಿಕೆ ಕಾಣುತ್ತಿದ್ದರೂ ತಳಮಟ್ಟದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳ ಕಥೆಯೇ ಬೇರೆ.

ಬೇಕಾದರೆ ಗಾರ್ಮೆಂಟ್ ಉದ್ಯಮದಲ್ಲಿ ದುಡಿಯುವ ಹೆಣ್ಣುಮಕ್ಕಳ ಬದುಕೆಂಬ ಹರಿದ ಹಚ್ಚಡ ನೋಡಿ. ಇದುವರೆಗೆ ಎಷ್ಟು ಮನೆಗೆಲಸ ಮಾಡಿದರೂ ಅವರು ‘ದುಡಿಯುವ ಮಹಿಳೆಯರು’ ಎಂದು ಕರೆಸಿಕೊಳ್ಳಲಾಗಿರಲಿಲ್ಲ. ಸದ್ಯ, ಈಗ ಹಳ್ಳಿಹಳ್ಳಿಯ ಹೆಣ್ಣುಮಕ್ಕಳಿಗೂ ಗಾರ್ಮೆಂಟ್ ಉದ್ಯಮ ಕರೆದು ಕೆಲಸ ಕೊಟ್ಟಿರುವುದರಿಂದ ಅಸಂಘಟಿತ ಮಹಿಳಾ ಕಾರ್ಮಿಕ ವಲಯ ದೇಶೋವಿಶಾಲವಾಗಿ ಬೆಳೆಯುತ್ತಿದೆ. ನಮ್ಮ ಹಳ್ಳಿಯ ಹೆಣ್ಣುಮಕ್ಕಳು ಫ್ರಾನ್ಸ್, ಜರ್ಮನಿ ಮುಂತಾದ ದೇಶಗಳ ಹೆಣ್ಣುಮಕ್ಕಳಿಗೆ ಜೀನ್ಸ್ ಹೊಲೆದು ಇಸ್ತ್ರಿ ಮಾಡುತ್ತಾರೆಂದರೆ ಅದಕ್ಕಿಂತ ಪ್ರಗತಿ ಇನ್ನೇನು ಬೇಕು ಎಂದು ಕೆಲವರು ಅಂದುಕೊಳ್ಳಬಹುದು. ನಿಜಕ್ಕೂ ವಸ್ತ್ರೋದ್ಯಮಕ್ಕೆ ವಿಶ್ವವೇ ಒಂದು ಕುಟುಂಬ.

ಆದರೆ ಸರಿಯಾದ ಶಿಕ್ಷಣ ಇಲ್ಲದ, ತರಬೇತಿ ಇಲ್ಲದ ಹೆಣ್ಣುಮಕ್ಕಳು ದುಡಿಯಲು ತೊಡಗಿದರೂ ತಮ್ಮ ಹೆಚ್ಚುತ್ತಿರುವ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಜಾಗತೀಕರಣ ಎಂಬ ಅದ್ಭುತ ಪರಿಕಲ್ಪನೆ, ಹಳ್ಳಿಯ ಹೆಣ್ಣುಮಕ್ಕಳಿಗೆ ಶಾಲೆಗಳನ್ನು ಕಟ್ಟಿಸಿಕೊಡುತ್ತದೆಯೇ? ಅವರ ಮನೆಗಳಿಗೆ ಶೌಚಾಲಯ? ಹೋಗಲಿ, ಹಳ್ಳಿಯ ಬಡಹೆಣ್ಣುಮಕ್ಕಳು ಹೆರಲು ಒಂದು ಆಸ್ಪತ್ರೆ? ಏನೋ ನಮ್ಮ ಸರ್ಕಾರಗಳು ಹಳ್ಳಿಗಳಲ್ಲೂ ಅಲ್ಲೊಂದು ಇಲ್ಲೊಂದು ಶಾಲೆ, ಕಾಲೇಜು, ಆಸ್ಪತ್ರೆ ಕಟ್ಟಿಸುತ್ತಿದ್ದವು. ಈಗ ಶಿಕ್ಷಣ, ಆರೋಗ್ಯ ಮುಂತಾದ ವಲಯಗಳಲ್ಲಿ ಸಾರ್ವಜನಿಕ ಸೇವೆಗಳೆಲ್ಲ ಒಂದೊಂದಾಗಿ ಸಾಯುತ್ತಿವೆ. ಎಲ್ಲ ಕ್ಷೇತ್ರಗಳಲ್ಲೂ ವಿದೇಶಿ ನೇರ ಹಣಕಾಸು ಹೂಡಿಕೆಗೆ ಅವಕಾಶ ಕೊಡುವುದು ಕಡ್ಡಾಯ. ಖಾಸಗೀಕರಣ ಎನ್ನುವುದು ಜಾಗತೀಕರಣದ ಇನ್ನೊಂದು ಮುಖ.

ಜಾಗತೀಕರಣ ಆರ್ಥಿಕ ಅಸಮಾನತೆ ಹೆಚ್ಚಿಸುತ್ತಿದ್ದಂತೆ, ಸಾಮಾಜಿಕ ಅಸಮಾನತೆ ತನಗೆ ತಾನೇ ಹೆಚ್ಚುತ್ತದೆ. ಅದಕ್ಕೆ ವಿಶೇಷ ಪ್ರಯತ್ನ ಬೇಕಾಗಿಲ್ಲ. ಹಳ್ಳಿಗಳನ್ನು ಹಲವು ಬಗೆಯಲ್ಲಿ ಮುಟ್ಟಿರುವ ಜಾಗತೀಕರಣ, ದಲಿತರ ಮೇಲೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಗಮನಿಸುವುದಿಲ್ಲ. ಲಿಂಗ ಅಸಮಾನತೆಯ ಅಬ್ಬರಕ್ಕೂ ತನಗೂ ಸಂಬಂಧವಿಲ್ಲ ಎಂಬಂತಿರುತ್ತದೆ.

ಹಳ್ಳಿ ಇರಲಿ, ದಿಲ್ಲಿ ಇರಲಿ, ನಮ್ಮ ಸಮಾಜದ ಯಾವ ಸಮಸ್ಯೆಗೆ ಜಾಗತೀಕರಣ ಉತ್ತರದಾಯಿ ಆಗುತ್ತದೆ? ಬದಲಿಗೆ ಜಾಗತೀಕರಣದ ಪರಿಣಾಮಗಳು ತಂದಿರುವ ಹೊಸ ಜಾತಿಭೇದ, ಹೊಸ ಲಿಂಗಭೇದಗಳನ್ನು ದಾಟುವುದು ಮನುಸ್ಮೃತಿಯ ನಿಯಮಗಳನ್ನು ಮೀರುವುದಕ್ಕಿಂತ ಕಷ್ಟ ಎನ್ನುವುದನ್ನು ಸಮಾಜಶಾಸ್ತ್ರಜ್ಞರು ಗುರುತಿಸುತ್ತಿದ್ದಾರೆ. ಜಾಗತೀಕರಣದಿಂದ ಪ್ರಗತಿ ಕುರಿತ ಪರ್ಯಾಯ ಚಿಂತನೆ ಸಾಧ್ಯವೇ ಇಲ್ಲ, ಬದಲಿಗೆ ಅದನ್ನು ಬೆನ್ನಟ್ಟುವುದೇ ಮೂಲಮಂತ್ರ.

ಜಾಗತೀಕರಣದ ಪರಿಣಾಮ ಪುರಾಣ ಇಷ್ಟಕ್ಕೆ ಮುಗಿಯುವುದಿಲ್ಲ. ದೇಶಗಳ ಗಡಿಗಳು ಮರೆಯಾಗಿ ಇಡೀ ಜಗತ್ತೇ ಒಂದು ಉದ್ಯಮ ವಲಯ ಆಗುತ್ತಿದ್ದರೂ ಒಂದು ವಿಚಾರ ಮಾತ್ರ ವಿಶಾಲಗೊಳ್ಳದೆ ದಿನದಿನಕ್ಕೆ ಸಂಕುಚಿತವಾಗುತ್ತಿದೆ. ಚರಿತ್ರೆಯಲ್ಲಿ ಶತಮಾನಗಳುದ್ದಕ್ಕೂ ಭಾರತದ ಮೇಲೆ ವಿದೇಶಗಳ, ವಿದೇಶೀ ಧರ್ಮಗಳ ದಾಳಿ ನಡೆದಿದೆ. ಅದರ ಬಗ್ಗೆ ಆಕ್ರೋಶಗೊಳ್ಳುವ ಅನೇಕರು ಈ ಜಾಗತೀಕರಣವನ್ನು ಮಾತ್ರ ತೆರೆದ ತೋಳುಗಳಿಂದ ಸ್ವಾಗತಿಸುತ್ತಿದ್ದಾರೆ.

ಜಾಗತೀಕರಣ ನಮ್ಮ ದೇಶವನ್ನು ಎಷ್ಟು ಬೇಕಾದರೂ ಆವರಿಸಿಕೊಳ್ಳಲಿ, ಆದರೆ ನಮ್ಮ ಸಂಸ್ಕೃತಿಯ ಮೇಲೆ ಅದರ ನೆರಳು ಕೂಡ ಬೀಳಬಾರದು ಎಂದು ಅವರು ಅದರ ಸಂರಕ್ಷಣೆಗೆ ಜಾಗತೀಕರಣ ಕೊಟ್ಟ ಪರಿಕರಗಳನ್ನೇ ಬಳಸುತ್ತಿದ್ದಾರೆ. ಮೇಕ್ ಇನ್ ಇಂಡಿಯಾ ಎಷ್ಟಾದರೂ ಬೆಳೆಯಲಿ, ಈ ಮೇಡ್ ಇನ್ ಇಂಡಿಯಾ ಸಂಸ್ಕೃತಿ ಮಾತ್ರ ಹಾಗೇ ಇರಬೇಕು, ನಮ್ಮ ಸಂಸ್ಕೃತಿಯ ಬಹುರೂಪವನ್ನು ಅಳಿಸಿ ಅದನ್ನೂ ಜಾಗತೀಕರಣದಂತೆ ಏಕರೂಪಕ್ಕೆ ತರಬೇಕು ಎಂದು ಬಯಸುವ ವಿರೋಧಾಭಾಸ ಇಲ್ಲಿದೆ.  

ಜಾಗತೀಕರಣದ ಪರಿಣಾಮಗಳು ಸಮಾಜದ ಎಲ್ಲರ ಮೇಲೂ ಒಂದೇ ಬಗೆಯಲ್ಲಿ ಇರುತ್ತವಲ್ಲವೇ, ಹೆಣ್ಣಿಗೆ ಬೇರೆ ರೀತಿ ಇರುತ್ತವೆಯೇ ಎಂಬ ವಾದವೂ ಉಂಟು. ಆದರೆ ಬಡತನದ ಚಹರೆಗಳು ಒಂದೇ ಬಗೆಯಲ್ಲಿ ಇದ್ದರೂ ಸೂಕ್ಷ್ಮವಾಗಿ ಗಮನಿಸಿದರೆ ಹೆಣ್ಣಿನ ಚಹರೆ ಇನ್ನೂ ಕೊಂಚ ಬಡವಾಗಿರುವುದು ಗೋಚರಿಸುತ್ತದೆ. ಏಕೆಂದರೆ ಜಗತ್ತಿಗೆ ಇರುವಂತೆ, ಬಡತನಕ್ಕೆ ಇರುವಂತೆ, ಜಾಗತೀಕರಣಕ್ಕೂ ಲಿಂಗಭೇದವುಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT