ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಎಂಬುದು ಒಂದು ಕಠೋರ ವಾಸ್ತವ...

Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಜಾತಿ ಎಂಬುದು ಒಂದು ವಾಸ್ತವ; ಅಥವಾ ಕಠೋರ ವಾಸ್ತವ. ನಮ್ಮ ಸಂವಿಧಾನದಲ್ಲಿ ಜಾತ್ಯತೀತ ಮೌಲ್ಯಗಳಿಗೆ ಎಷ್ಟೇ ಒತ್ತು ನೀಡಿದ್ದರೂ ಜಾತಿ ವ್ಯವಸ್ಥೆಯನ್ನು ನಿವಾರಿಸುವುದು ಕಷ್ಟ. ಏಕೆಂದರೆ ಜಾತಿ ಎಂಬುದು ಒಂದು ಅಸ್ಮಿತೆ. ನಾವು ಅದನ್ನು ಬಿಡಬೇಕು ಎಂದರೂ ಅದು ನಮ್ಮನ್ನು ಬಿಡುವುದಿಲ್ಲ. ಅದು ನಮ್ಮ ಹೆಸರಿನಲ್ಲಿ, ಅಡ್ಡಹೆಸರಿನಲ್ಲಿ, ಆಹಾರದಲ್ಲಿ, ಉಡುಪಿನಲ್ಲಿ ಮತ್ತು ಆಚಾರ–ವಿಚಾರಗಳಲ್ಲಿ ಹಾಸು ಹೊಕ್ಕಾಗಿ ಬೆಸೆದು ಹೋಗಿರುತ್ತದೆ. ಸ್ಥೂಲ ಅರ್ಥದಲ್ಲಿ ನಮ್ಮ ನಮ್ಮ ಜಾತಿಗಳು ನಮ್ಮ ನಮ್ಮ ರಾಜಕೀಯ ಒಲವು ನಿಲುವುಗಳನ್ನೂ ಸಂಕೇತಿಸುತ್ತಿರಬಹುದು. ಅಥವಾ ವಿವಿಧ ರಾಜಕೀಯ ಪಕ್ಷಗಳು ಬೇರೆ ಬೇರೆ ಜಾತಿಗಳ ಜನರನ್ನು ತಮ್ಮ ಕಡೆಗೆ ಸೆಳೆದುಕೊಳ್ಳಲು ಕಸರತ್ತು ಮಾಡುತ್ತಿರಬಹುದು. ರಾಜಕೀಯ ಪಕ್ಷಗಳು ಇದನ್ನು ನಿರಂತರವಾಗಿ ಮಾಡುತ್ತವೆಯೇ ಹೊರತು ಚುನಾವಣೆ ಸಂದರ್ಭದಲ್ಲಿ ಮಾತ್ರ  ಮಾಡುವುದಿಲ್ಲ. ‘ಚುನಾವಣೆಯಲ್ಲಿ ಜಾತಿ ಮತಗಳ ಆಧಾರದ ಮೇಲೆ ಮತ ಕೇಳಬಾರದು, ಕೇಳಿದ್ದು ಸಾಬೀತಾದರೆ ಅಂಥವರ ಚುನಾವಣೆಯನ್ನು ರದ್ದು ಮಾಡಬಹುದು’ ಎಂದು ಸುಪ್ರೀಂ ಕೊರ್ಟಿನ ಸಂವಿಧಾನ ಪೀಠ ಈ ತಿಂಗಳ ಆರಂಭದಲ್ಲಿ ಕೊಟ್ಟ  ತೀರ್ಪು ಮಹತ್ವದ್ದಾಗಿರಬಹುದು. ಆದರೆ ಅದು ತನ್ನ ಉದ್ದೇಶದಲ್ಲಿ ಸಫಲವಾಗುತ್ತದೆಯೇ ಎಂಬುದು ದೊಡ್ಡ  ಪ್ರಶ್ನೆ. ರಾಜಕೀಯ ಪಕ್ಷಗಳ ನೇತಾರರು ರಂಗೋಲಿ ಕೆಳಗೆ ನುಸುಳುವಂಥ ಚಾಣಾಕ್ಷರು. ಅವರು ಚುನಾವಣೆಯಲ್ಲಿ ಮತ ಕೇಳುವಾಗ ತಮ್ಮ ಜಾತಿ ಯಾವುದು ಎಂದು ಹೇಳಬೇಕಾಗಿರುವುದಿಲ್ಲ. ಅವರ ಜಾತಿ ಯಾವುದು ಎಂದು ಚುನಾವಣೆಯಲ್ಲಿ ಟಿಕೆಟ್‌ ಕೊಡುವ ಸಂದರ್ಭದಲ್ಲಿಯೇ ತೀರ್ಮಾನವಾಗಿರುತ್ತದೆ ಮತ್ತು ಅದು ಬಹುಪಾಲು ಆಯಾ ಮತಕ್ಷೇತ್ರದ ಆಯಾ ಜಾತಿಗಳ ಸಂಖ್ಯೆಗೆ ಅನುಗುಣವಾಗಿರುತ್ತದೆ!

ಯಾವ ಪಕ್ಷವೂ ಈಗ ಕಣ್ಣು ಮುಚ್ಚಿಕೊಂಡು ಒಂದು ಜಾತಿಯ ಅಭ್ಯರ್ಥಿಗೆ ಟಿಕೆಟ್‌ ಕೊಡುವುದಿಲ್ಲ. ಒಂದು ರಾಜ್ಯದಲ್ಲಿ ಇರುವ ಪ್ರಮುಖ ಜಾತಿಗಳು ಎಷ್ಟು, ಅವುಗಳ ಜನಸಂಖ್ಯೆ ಎಷ್ಟು, ಯಾವ ಜಾತಿ ಯಾವ ಪ್ರದೇಶದಲ್ಲಿ ಪ್ರಬಲವಾಗಿದೆ ಮತ್ತು ಯಾವ ಕ್ಷೇತ್ರದಲ್ಲಿ ಯಾವ ಜಾತಿಯ ಅಭ್ಯರ್ಥಿಗೆ ಟಿಕೆಟ್‌ ಕೊಟ್ಟರೆ ಗೆಲುವು ಸಾಧ್ಯ ಹಾಗೂ ಸುತ್ತಮುತ್ತಲಿನ ಕ್ಷೇತ್ರಗಳ ಮೇಲೆ ಅದರಿಂದ ಆಗುವ ಪರಿಣಾಮವೇನು ಎಂದು ಲೆಕ್ಕ ಹಾಕಿಯೇ ಟಿಕೆಟ್‌ ವಿತರಣೆಯಾಗುತ್ತದೆ. ಉದಾಹರಣೆಗೆ ಸಿದ್ದರಾಮಯ್ಯ ಅವರು ವರುಣಾ ಅಥವಾ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತ ಇದ್ದರೆ ಆ ಕ್ಷೇತ್ರದ ಸುತ್ತಲಿನ ಯಾವ ಯಾವ ಕ್ಷೇತ್ರಗಳಲ್ಲಿ ಯಾವ ಯಾವ ಜಾತಿಗೆ ಟಿಕೆಟ್‌  ಕೊಡಬೇಕು ಎಂದೂ ಲೆಕ್ಕ ಹಾಕುತ್ತಾರೆ. ಅದರಿಂದ ಸಿದ್ದರಾಮಯ್ಯ ಅವರಿಗೆ ಏನು ಲಾಭ ಮತ್ತು ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದ ಉಳಿದವರಿಗೆ ಏನು ಲಾಭ ಎಂದೂ ಲೆಕ್ಕ ಹಾಕುತ್ತಾರೆ.

ಇದು ಬರೀ ಟಿಕೆಟ್‌ ಹಂಚುವಾಗ ಮಾತ್ರ ಇರುವ ಲೆಕ್ಕಾಚಾರವಲ್ಲ. ನಿರ್ದಿಷ್ಟ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಂಪುಟ ರಚನೆ ವೇಳೆಯಲ್ಲಿಯೂ ಜಾತಿಗಳ ಲೆಕ್ಕ ನಡೆಯುತ್ತದೆ. ಯಾವ  ಜಾತಿಯ ಶಾಸಕರು ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾಗಿ ಬಂದಿದ್ದಾರೆ, ಅವರಿಗೆ ಎಷ್ಟು ಪ್ರಾತಿನಿಧ್ಯ ಕೊಡಬೇಕು, ಚುನಾವಣೆಯಲ್ಲಿ ಯಾವ ಜಾತಿಯ ಜನರು ಪಕ್ಷದ ಬೆಂಬಲಕ್ಕೆ ನಿಂತರು ಅವರಿಗೆ ಎಷ್ಟು ಪ್ರಾತಿನಿಧ್ಯ ಕೊಡಬೇಕು ಎಂಬುದೆಲ್ಲ ಸಂಪುಟ ರಚನೆಯಲ್ಲಿ ಪರಿಗಣನೆಯಾಗುವ ಸಂಗತಿಗಳು. ಸಿದ್ದರಾಮಯ್ಯನವರು ಜೆ.ಡಿ (ಎಸ್‌) ಬಿಟ್ಟು ಹೊರಬರುವುದಕ್ಕಿಂತ ಮುಂಚೆ ಅಹಿಂದ ರಾಜಕಾರಣದ ಪಟ್ಟು ಹಾಕಿದರು. ಈಗಲೂ ಅವರು ತಾವು ಅಹಿಂದ ವರ್ಗಗಳ ಹಿತರಕ್ಷಕರು ಎಂಬ ನಿಲುವನ್ನೇ ಮತ್ತೆ ಮತ್ತೆ ವ್ಯಕ್ತಪಡಿಸುತ್ತಾರೆ. ಅಂದರೆ ಅವರ ಸಂಪುಟದಲ್ಲಿ ಲಿಂಗಾಯತರಿಗೆ, ಒಕ್ಕಲಿಗರಿಗೆ ಹೆಚ್ಚಿನ ಆದ್ಯತೆ ಇರುವುದಿಲ್ಲ ಅಥವಾ  ಇರಬೇಕಾಗಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಹಾಗಿದ್ದರೂ ಒಬ್ಬ ಒಕ್ಕಲಿಗ ಮಂತ್ರಿಯನ್ನು ಸಂಪುಟದಿಂದ ವಜಾ ಮಾಡಿದರೆ ಇನ್ನೊಬ್ಬ ಒಕ್ಕಲಿಗನಿಗೆ  ಸಂಪುಟದಲ್ಲಿ ಸ್ಥಾನ ಕೊಡಬೇಕಾದ ಅನಿವಾರ್ಯತೆ ಅಥವಾ ಅಗತ್ಯವನ್ನು ಅವರು ಮನಗಂಡಿರುತ್ತಾರೆ. ವಿವಿಧ ಜಾತಿಗಳ ನಡುವೆ ಈ ಸಮತೋಲವನ್ನು ಎಲ್ಲ ರಾಜಕೀಯ ಪಕ್ಷಗಳು ಕಾಯ್ದುಕೊಳ್ಳಲೇಬೇಕು ಹಾಗೂ ಆ ಮೂಲಕ ಆಯಾ ಜಾತಿಗಳನ್ನು ಓಲೈಸಲು ಪ್ರಯತ್ನಿಸುತ್ತಲೇ ಇರಬೇಕು. ಅದು ಈಗಿನ ರಾಜಕಾರಣದ ವಾಸ್ತವ.

ಕಾಂಗ್ರೆಸ್‌ ಪಕ್ಷ ಅಹಿಂದ ವರ್ಗಗಳ ರಕ್ಷಕ ಎಂದು ಪ್ರತಿಪಾದಿಸುವಾಗ ಬಿಜೆಪಿ ಮತ್ತು ಜೆ.ಡಿ (ಎಸ್‌)ಗಳು ಉಳಿದ ‘ಅವಕಾಶ’  (space) ಬಳಸಿಕೊಳ್ಳಲು ಪ್ರಯತ್ನ ಮಾಡುತ್ತವೆ. ಬಿಜೆಪಿ ಮುಖ್ಯವಾಗಿ ಲಿಂಗಾಯತರ ಪಕ್ಷ. ಜೆ.ಡಿ (ಎಸ್‌) ಪ್ರಧಾನವಾಗಿ ಒಕ್ಕಲಿಗರ ಪಕ್ಷ. ಬರೀ ಲಿಂಗಾಯತರನ್ನು ನೆಚ್ಚಿಕೊಂಡು ಅಧಿಕಾರಕ್ಕೆ ಬರಲು ಆಗುವುದಿಲ್ಲ ಎಂದು ಬಿಜೆಪಿಗೆ ಗೊತ್ತಿರುವ ಹಾಗೆಯೇ ಬರೀ ಒಕ್ಕಲಿಗರನ್ನು ನೆಚ್ಚಿಕೊಂಡರೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ ಎಂದು ಜೆ.ಡಿ (ಎಸ್‌)ಗೂ ಗೊತ್ತಿರುತ್ತದೆ. ಜೆ.ಡಿ (ಎಸ್‌) ಮುಸಲ್ಮಾನರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೊರಡುವುದು ತನ್ನ ಮತ ಬುನಾದಿಯನ್ನು ವಿಸ್ತರಿಸಬೇಕು ಎಂಬ ಹಂಬಲದಿಂದ. ಮುಖ್ಯವಾಗಿ ಲಿಂಗಾಯತರಿಗೆ ಅಗ್ರಮಣೆ ಹಾಕುವ ಬಿಜೆಪಿ ಅಲ್ಲಿಲ್ಲಿ ಒಕ್ಕಲಿಗರಿಗೆ, ಸ್ಪೃಶ್ಯ ದಲಿತರಿಗೆ, ದಲಿತರಲ್ಲಿಯೇ ಎಡಗೈಯವರಿಗೆ ಪ್ರಾತಿನಿಧ್ಯ ಕೊಟ್ಟರೂ  ಮುಸಲ್ಮಾನರಿಗೆ ಮತ್ತು ಕ್ರೈಸ್ತರಿಗೆ ಟಿಕೆಟ್‌ ಕೊಡದೇ ಇರಲು ಏನು ಕಾರಣ ಎಂದರೆ  ಪರೋಕ್ಷವಾಗಿ ತನ್ನ ಮತ ಬುನಾದಿಯನ್ನು ಭದ್ರ ಮಾಡಿಕೊಳ್ಳುವುದೇ ಆಗಿರುತ್ತದೆ. ಅಂದರೆ ರಾಜಕೀಯ ಪಕ್ಷಗಳ ನಡೆಗಳು ಯಾವ ದೃಷ್ಟಿಯಿಂದ ನೋಡಿದರೂ ಜಾತಿ ಲೆಕ್ಕಾಚಾರದಲ್ಲಿಯೇ ಮುಳುಗಿರುತ್ತವೆ ಎಂಬುದಕ್ಕೆ ಇದು ಒಂದು ನಿದರ್ಶನ.  2012ರ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಒಬ್ಬ ಮುಸಲ್ಮಾನನಿಗೂ ಟಿಕೆಟ್‌ ಕೊಟ್ಟಿರಲಿಲ್ಲ ಎಂಬುದನ್ನು ಇದೇ ಹಿನ್ನೆಲೆಯಲ್ಲಿ ಇಲ್ಲಿ ಉಲ್ಲೇಖಿಸಬಹುದು. ಆ ಮೂಲಕ ಬಿಜೆಪಿ  ತನ್ನ ಮತಬ್ಯಾಂಕ್‌ ಅನ್ನು ಭದ್ರ ಮಾಡಿಕೊಂಡಿತು.

1969ರ ಕಾಂಗ್ರೆಸ್‌ ವಿಭಜನೆ ನಂತರ ಇಂದಿರಾ ಗಾಂಧಿಯವರು ಯಾವಾಗಲೂ ದಲಿತರು ಮತ್ತು ಆದಿವಾಸಿ (ಬುಡಕಟ್ಟು)ಗಳನ್ನು ಉದ್ದೇಶಿಸಿಯೇ ಮಾತನಾಡುತ್ತಿದ್ದರು. ಈ ಸಮುದಾಯಗಳು ತಮ್ಮನ್ನು ಗೆಲುವಿನ ದಡ ಸೇರಿಸುವಷ್ಟು ಸಂಖ್ಯಾದೃಷ್ಟಿಯಿಂದ ಪ್ರಬಲ ಎಂದು ಅವರಿಗೆ ಗೊತ್ತಿತ್ತು. ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿದ ಕಾಂಶಿರಾಂ ಇದೇ ಲೆಕ್ಕವನ್ನೇ ಮುಂದುವರಿಸಿದರು. ಅವರದು ಮುಖ್ಯವಾಗಿ ದಲಿತರ ಪಕ್ಷ. ದೇಶದ ಜನಸಂಖ್ಯೆಯಲ್ಲಿ ಅವರೇ ‘ಬಹುಜನರು’ ಎಂದು ಅವರಿಗೆ ಗೊತ್ತಿತ್ತು. ಅವರನ್ನು ಕೇಂದ್ರವಾಗಿ ಇಟ್ಟುಕೊಂಡು ಒಂದು ರಾಜಕೀಯ ಪಕ್ಷವನ್ನು ಸ್ಥಾಪಿಸಿ ಅದನ್ನು ಅಧಿಕಾರದ ಗದ್ದುಗೆ ವರೆಗೆ ತೆಗೆದುಕೊಂಡ ಹೋದ ಕಾಂಶಿರಾಂ, ಜಾತಿ ಧ್ರುವೀಕರಣದ ನಾಯಕತ್ವಕ್ಕೆ  ಬಹುದೊಡ್ಡ ನಿದರ್ಶನ. ಅವರ ಉತ್ತರಾಧಿಕಾರಿಯಾಗಿರುವ ಮಾಯಾವತಿ ಈ ಹಿಂದೆ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬರುವಾಗ ಬರೀ ದಲಿತರನ್ನು ನೆಚ್ಚಿಕೊಂಡರೆ  ಸಾಲದು ಎಂದು ಬ್ರಾಹ್ಮಣರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಹಾಗೆ ನೋಡಿದರೆ ಎರಡು ವಿರುದ್ಧ ಹಿತಾಸಕ್ತ ಜಾತಿಗಳು ಇವು. ಅಧಿಕಾರದ ಆಮಿಷವೊಡ್ಡಿ ಎರಡನ್ನೂ ಅವರು ತಮ್ಮ ತೆಕ್ಕೆಯಲ್ಲಿ ತೆಗೆದುಕೊಂಡಿದ್ದರು. ಅಲ್ಲಿ ಅಧಿಕಾರ ಹಿಡಿಯಲು ಮತ್ತೆ ಜಾತಿ ಲೆಕ್ಕಾಚಾರವೇ ಕೆಲಸ ಮಾಡಿತ್ತು. ಈಗ ಘೋಷಣೆಯಾಗಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ 90 ಸೀಟುಗಳಲ್ಲಿ ಮುಸಲ್ಮಾನರಿಗೆ ಟಿಕೆಟ್‌ ಕೊಡುವುದಾಗಿ ಘೋಷಿಸಿರುವ ಮಾಯಾವತಿ ಮತ್ತೊಂದು ಜಾತಿ ಸಮೀಕರಣದ ದಾಳ ಎಸೆದಿದ್ದಾರೆ. ಉತ್ತರ ಪ್ರದೇಶದಲ್ಲಿ ಈಗ ಆಡಳಿತ ಮಾಡುತ್ತಿರುವ ಮುಲಾಯಂಸಿಂಗ್‌ ಯಾದವ್‌ ಅವರ ಸಮಾಜವಾದಿ ಪಕ್ಷದ ಮುಖ್ಯ ಮತಬುನಾದಿ ಮುಸಲ್ಮಾನರು.

ಈಚೆಗೆ ನಡೆದ ಬಿಹಾರ್‌ ಚುನಾವಣೆಯಲ್ಲಿ ನಿತೀಶ್‌ಕುಮಾರ್‌ ಮತ್ತು ಲಾಲುಪ್ರಸಾದ್‌ ಸೇರಿಕೊಂಡು ಮಹಾಘಟಬಂಧನ ರಚಿಸಿಕೊಂಡರು. ಅದು ಆ ರಾಜ್ಯದ ಭೂಮಿಹಾರ್‌, ಯಾದವ್‌, ಮುಸ್ಲಿಂ ಮತ್ತು ಬ್ರಾಹ್ಮಣ ಪಕ್ಷಗಳ ನಾಯಕರ ಒಕ್ಕೂಟವಾಗಿತ್ತು. ಅದು ನಿತೀಶ್‌ ಮತ್ತು ಲಾಲು ಜೋಡಿಯ ಗೆಲುವಿನ ಜಾತಿಸೂತ್ರವಾಗಿತ್ತು.

ಕರ್ನಾಟಕದಲ್ಲಿ 1980ರ ದಶಕದ ಆರಂಭದಲ್ಲಿ ಮೊದಲ ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಬರಲು ಅನೇಕ ಕಾರಣಗಳ ಜೊತೆಗೆ ಮುಖ್ಯವಾಗಿ ಲಿಂಗಾಯತರು ಹಾಗೂ ಒಕ್ಕಲಿಗರು ಕೈ ಜೋಡಿಸಿದ್ದು ಕೂಡ ಕಾರಣವಾಯಿತು. ಕುರುಬ ಸಮುದಾಯವೂ ಆಗ ಜೊತೆಗೇ ಇತ್ತು. ರಾಮಕೃಷ್ಣ ಹೆಗಡೆಯವರು ಸ್ವತಃ ಬ್ರಾಹ್ಮಣರಾಗಿದ್ದರೂ ಲಿಂಗಾಯತರ ಪ್ರಶ್ನಾತೀತ ನಾಯಕರಾಗಿದ್ದರು. ಅವರು ಒಂದು ಸಾರಿ ಅಧಿಕಾರ ಬಿಡಲು ನಿರ್ಧರಿಸಿದಾಗ ಅವರ ಎರಡೂ ಬದಿಯಲ್ಲಿ ನಿಂತು ಅವರ ಚಪ್ಪಲಿಗಳನ್ನು ಕಸಿದುಕೊಂಡು, ರಾಜೀನಾಮೆ ಕೊಡಲು ಹೋಗುವುದನ್ನು ತಡೆದ ಇಬ್ಬರು ನಾಯಕರು (ಅದರಲ್ಲಿ ಒಬ್ಬರು ನಾಯಕಿ ಎಂದು ನೆನಪು!) ಲಿಂಗಾಯತರು.

ಲಿಂಗಾಯತ ಸಮುದಾಯದಲ್ಲಿಯೇ ಹುಟ್ಟಿದ ಎಸ್‌.ಆರ್‌.ಬೊಮ್ಮಾಯಿ ಮತ್ತು ಜೆ.ಎಚ್‌.ಪಟೇಲರು ಮುಖ್ಯಮಂತ್ರಿ ಪದವಿ ತಲುಪಿದರೂ ಹೆಗಡೆಯವರ ಹಾಗೆ ಅವರು ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರು ಎಂದು ಯಾವಾಗಲೂ ಅನಿಸಿಕೊಳ್ಳಲಿಲ್ಲ.  ದೇವೇಗೌಡರು ಹಾಗೂ ಹೆಗಡೆಯವರು ಜೊತೆಯಾಗಿ ಇದ್ದರೆ ಅದು ಅಧಿಕಾರಕ್ಕೆ ಬರುವ ಒಂದು ತಂಡ ಎಂದು ಮತ್ತೆ 1994ರಲ್ಲಿ ಸಾಬೀತು ಆಯಿತು. 1999ರಲ್ಲಿ ಇದು ಒಡೆದು ಹೋದ ನಂತರ ಜನತಾದಳಕ್ಕೆ ಸ್ವತಂತ್ರ ಅಧಿಕಾರ ಮರೀಚಿಕೆಯಾಗಿದೆ. ಕುಮಾರಸ್ವಾಮಿಯವರು ಏನೇ ಹೇಳಿದರೂ ಮುಂದೆ ಕೂಡ ಅದು ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಕಷ್ಟ. ಅಂದರೆ, ಆ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವಷ್ಟು ಜಾತಿ ಅಥವಾ ಜಾತಿಗಳ ಬೆಂಬಲ ಅದಕ್ಕೆ  ಇಲ್ಲ ಎಂದೇ ಅರ್ಥ.

ಇವೆಲ್ಲ ವಿವಿಧ ಪಕ್ಷಗಳು ತಮ್ಮ ಗೆಲುವಿಗಾಗಿ ಜಾತಿಗಳನ್ನು ಆಶ್ರಯಿಸುವ, ಆಶ್ರಯಿಸಿದ ನಿದರ್ಶನಗಳು. ಇನ್ನೂ ಇಂಥ ಅನೇಕ ಉದಾಹರಣೆಗಳನ್ನು ಕೊಡಬಹುದು. ಪಂಜಾಬಿನಲ್ಲಿ ಜಾಟರನ್ನು ಆಶ್ರಯಿಸುವ ಅಕಾಲಿದಳ, ಪಶ್ಚಿಮ ಬಂಗಾಲದಲ್ಲಿ ಮುಸಲ್ಮಾನರನ್ನು ಓಲೈಸುವ ಮಮತಾ ಇತ್ಯಾದಿ. ಆದರೆ, ದಕ್ಷಿಣದ ತಮಿಳುನಾಡಿನಲ್ಲಿ ಅದು ಡಿಎಂಕೆ ಇರಬಹುದು ಎಐಎಡಿಎಂಕೆ ಇರಬಹುದು. ಎರಡೂ ಪಕ್ಷಗಳು ಬ್ರಾಹ್ಮಣ ವಿರೋಧವನ್ನೇ ಮುಖ್ಯ ಭಿತ್ತಿಯಾಗಿ ಇಟ್ಟುಕೊಂಡು ರಚನೆಯಾದುವು. ದ್ರಾವಿಡ ಚಳವಳಿಯ ನೇತಾರರಾದ ಪೆರಿಯಾರ್‌ ಅವರು ಮತ್ತು ಅವರ ಹಿಂಬಾಲಕರು ಬ್ರಾಹ್ಮಣರನ್ನು ಅವಮಾನಿಸುತ್ತಿದ್ದರು. ಅದು ಅವರ ರಾಜಕೀಯ ಸಿದ್ಧಾಂತದ ಪ್ರಣಾಳಿಕೆಯಾಗಿತ್ತು, ಒಂದು ರೀತಿಯ ‘ಹೇಳಿಕೆ’ಯಾಗಿತ್ತು.

ದೇಶದ ರಾಜಕೀಯ ನಾಯಕತ್ವವನ್ನು ರೂಪಿಸುವಲ್ಲಿ ಜಾತಿ ಬಹಳ ದೊಡ್ಡ ಪಾತ್ರವನ್ನು ವಹಿಸಿದೆ. ದೇವರಾಜ ಅರಸು ಅವರು ಕಾಂಗ್ರೆಸ್‌ ವಿಭಜನೆ ನಂತರ 1970ರ ದಶಕದಲ್ಲಿ ಜಾತಿ ಸಂಘರ್ಷದ ಕುಲುಮೆಯಲ್ಲಿ ಹುಟ್ಟಿಕೊಂಡ ಬಹುದೊಡ್ಡ  ನಾಯಕ. ಅವರು ಹಿಂದುಳಿದ ವರ್ಗಗಳ ಅಸ್ಮಿತೆಯನ್ನು ಗುರುತಿಸಿದರು ಮತ್ತು ಅನೇಕ ವರ್ಷಗಳ ಕಾಲ ಕಡೆಗಣಿತವಾಗಿದ್ದ ಈ ಸಮುದಾಯಗಳಿಗೆ ನ್ಯಾಯ ಒದಗಿಸಲು ಶ್ರಮಿಸಿದರು. ದೂರದ ಬಿಹಾರದಲ್ಲಿ ಕೆಲವು ಕಾಲ ಮುಖ್ಯಮಂತ್ರಿಯಾಗಿದ್ದ ಕರ್ಪೂರಿ ಠಾಕೂರ್‌ ಈ ಮಾದರಿಯನ್ನು ಅನುಸರಿಸಿದರು. ಲಾಲು ಪ್ರಸಾದ್‌, ಮುಲಾಯಂ ಅವರೆಲ್ಲ ನಂತರ ಇದೇ ಸೂತ್ರವನ್ನು ಆಶ್ರಯಿಸಿ ಬೆಳೆದ ನಾಯಕರು. ಅರಸು ಅವರು ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರ ಗದ್ದುಗೆಯಲ್ಲಿ ಬಹುಕಾಲ ಉಳಿಸಿದರೆ, ಕರ್ಪೂರಿ ಠಾಕೂರ್‌, ಲಾಲು, ಮುಲಾಯಂ ಅವರು ಅದೇ ಸಿದ್ಧಾಂತದ ಮೊರೆ  ಹೊಕ್ಕು ಕಾಂಗ್ರೆಸ್ ಪಕ್ಷದ ಕೈಯಲ್ಲಿದ್ದ ಅಧಿಕಾರವನ್ನು ಕಸಿದುಕೊಂಡರು. ಅಧಿಕಾರವಿಲ್ಲದೆ ಈಗ ಕಾಂಗ್ರೆಸ್‌ ಪಕ್ಷ ದೇಶದ ಬಹುಪಾಲು ರಾಜ್ಯಗಳಲ್ಲಿ ಅನಾಥವಾಗಿದ್ದರೆ ಅದಕ್ಕೆ ಮುಖ್ಯವಾಗಿ ಬೇರೆ ಬೇರೆ ಜಾತಿಗಳು ಬೇರೆ ಬೇರೆ ಪಕ್ಷಗಳನ್ನು ಬೆಂಬಲಿಸುತ್ತಿರುವುದು ಕಾರಣ.

ಒಂದು ಸಾರಿ ಒಂದು ಅಥವಾ ಕೆಲವು ಜಾತಿಗಳ ಬೆಂಬಲ ಪಡೆದ ಒಂದು ಪಕ್ಷ ಆ ಬೆಂಬಲವನ್ನು ಇನ್ನಷ್ಟು ದೃಢಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತದೆಯೇ ಹೊರತು ಅದನ್ನು ಸಡಿಲ ಮಾಡಲು ಅಲ್ಲ. ಇದು ಬರೀ ಚುನಾವಣೆಯಲ್ಲಿ ಟಿಕೆಟ್‌ ಕೊಡುವುದಕ್ಕೆ ಮಾತ್ರ ನಿಲ್ಲುವುದಿಲ್ಲ. ಅಧಿಕಾರಕ್ಕೆ ಬಂದರೆ ತನ್ನ ಬೆಂಬಲಕ್ಕೆ ನಿಂತ ಜಾತಿಗಳಿಗೆ ಮಂತ್ರಿ ಮಂಡಲದಲ್ಲಿ ಪ್ರಾತಿನಿಧ್ಯ ಕೊಡುವುದಕ್ಕೆ, ನಿಗಮ ಮಂಡಳಿಗಳ ನೇಮಕದಲ್ಲಿ, ಕೊನೆಗೆ ಅಕಾಡೆಮಿಗಳಂಥ ಸ್ವಾಯತ್ತ ಸಂಸ್ಥೆಗಳಿಗೆ ನೇಮಕ ಮಾಡುವಾಗಲೂ ಈ  ಜಾತಿಗಳಿಗೇ ಹೆಚ್ಚಿನ ಮಾನ್ಯತೆ ಸಿಗುತ್ತದೆ. ಜೆ.ಎಚ್‌.ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಲಿಂಗಾಯತರು ಬಹಳ ದೊಡ್ಡ ಸಂಖ್ಯೆಯಲ್ಲಿ ಸಚಿವರಾಗಿದ್ದರು. ಸಮಾಜವಾದಿ ಸಿದ್ಧಾಂತದ ಮೂಲಕ ರಾಜಕೀಯಕ್ಕೆ ಬಂದಿದ್ದ ಪಟೇಲರು, ‘ಮತ್ತೆ ಲಿಂಗಾಯತರೇನು ಅಮೆರಿಕದಲ್ಲಿ ಮಂತ್ರಿಗಳು ಆಗಲು ಸಾಧ್ಯವೇ’ ಎಂದು ಅದನ್ನು ಸಮರ್ಥಿಸಿಕೊಂಡಿದ್ದರು!

ಇದು ಬರೀ ಅಧಿಕಾರ ಹಂಚಿಕೊಳ್ಳುವುದಕ್ಕೆ ಮಾತ್ರ ನಿಲ್ಲುವುದಿಲ್ಲ. ಮೊನ್ನೆ ಈಶ್ವರಪ್ಪನವರು ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಠಾಧೀಶರಿಗೆ ₹ ಹತ್ತು ಸಾವಿರ ಕೋಟಿ ಅನುದಾನ ಹಂಚುವುದಾಗಿ ಘೋಷಣೆ ಮಾಡಿದ್ದಾರೆ. ಅವರ ಪಕ್ಷವೇ ಅಧಿಕಾರದಲ್ಲಿ ಇದ್ದಾಗ ಆರಂಭವಾದ ಪರಂಪರೆ ಇದು. ಆಗ ವಿರೋಧ ಪಕ್ಷದಲ್ಲಿ ಇದ್ದ ಕಾಂಗ್ರೆಸ್‌ ಪಕ್ಷ ಅದನ್ನು ವಿರೋಧಿಸಿತ್ತು. ಆದರೆ, ತಾನು ಅಧಿಕಾರಕ್ಕೆ ಬಂದಾಗ ಮಠಗಳಿಗೆ ಅನುದಾನ ಕೊಡುವುದನ್ನು ಕೈ ಬಿಡಲಿಲ್ಲ. ಅಂದರೆ ವಿವಿಧ ಜಾತಿಗಳನ್ನು ಓಲೈಸಲು ಅದು ಒಂದು ಮಾರ್ಗ ಎಂದು ಬಿಜೆಪಿ ತೋರಿಸಿ ಕೊಟ್ಟುದನ್ನು ಕಾಂಗ್ರೆಸ್‌ ಕೂಡ ಅನುಸರಿಸುತ್ತಿದೆ. ಬೇರೆ ಬೇರೆ ರಾಜಕೀಯ ಪಕ್ಷಗಳು ಏನೇ ಸಿದ್ಧಾಂತ ಹೇಳಿದರೂ ಮೂಲತಃ ಜಾತಿಮೂಲ ರಾಜಕಾರಣದ ಮೇಲೇ ಕಣ್ಣು ಇಟ್ಟಿರುತ್ತವೆ ಎಂಬುದನ್ನೇ ಇದು ಸಾರಿ ಹೇಳುತ್ತದೆ.

ಬಹುಶಃ ಇದೇ ಕಾರಣಕ್ಕಾಗಿ ಎಂ.ಎನ್‌.ಶ್ರೀನಿವಾಸ್‌ ಮತ್ತು ಡಿ.ಆರ್‌.ಗಾಡ್ಗೀಳ್‌ ಅವರಂಥ ಸಮಾಜ ಶಾಸ್ತ್ರಜ್ಞರು ಜಾತಿ ಆಧಾರಿತ    ರಾಜಕೀಯ, ಉತ್ತಮ ಆಡಳಿತದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಪ್ರತಿಪಾದಿಸಿರಬಹುದು. ಆದರೆ, ನಾವು ಎಷ್ಟು ದೂರ ನಡೆದು ಬಂದಿದ್ದೇವೆ ಎಂದರೆ ನಮ್ಮ ನರನಾಡಿಗಳಲ್ಲಿ ಈಗ ರಕ್ತದ ಬದಲು ಜಾತಿಯೇ ಹರಿದಾಡುತ್ತಿದೆ. ರಾಜಕಾರಣಿಗಳಿಗೆ ಇದು ಬಹಳ ಚೆನ್ನಾಗಿ ಗೊತ್ತಿದೆ. ಒಂದು ವೇಳೆ ಹಾಗೆ ಹರಿಯದಿದ್ದರೂ ಹರಿಯುವಂತೆ ಅವರು ಮಾಡುತ್ತಾರೆ! ಹಾಗಿರುವಾಗ ಅವರು ಚುನಾವಣೆಯಲ್ಲಿ ಮಾತ್ರ ಏಕೆ ಜಾತಿ ಮತಗಳ ಮಾತು ಆಡುತ್ತಾರೆ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT